ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಾಷಿಂಗ್‌ಟನ್‌ ಮೆಮೋರಿಯಲ್‌ ಮುಂದೆ

ಕೆ ಸತ್ಯನಾರಾಯಣ
ಇತ್ತೀಚಿನ ಬರಹಗಳು: ಕೆ ಸತ್ಯನಾರಾಯಣ (ಎಲ್ಲವನ್ನು ಓದಿ)

ಎಷ್ಟು ತಿಳಿಹೇಳಿದರೂ ಮಕ್ಕಳು ನನ್ನ ಮಾತನ್ನು ಕೇಳುವುದಿಲ್ಲ.

ವಿದೇಶಿ ಪ್ರವಾಸ, ಹೊಸಬರ ಭೇಟಿ, ಹೊಸ ಪುಸ್ತಕಗಳ ಓದು, ಯಾವುದರಿಂದಲೂ ನಾನು ಏನನ್ನೂ ಪಡೆಯಲಾರೆ. ಅಷ್ಟು ವಯಸ್ಸಾಗಿದೆ, ನಾನು ಜಡವಾಗಿದ್ದೇನೆ ಎಂದು ಇದರರ್ಥವಲ್ಲ. ಯಾವುದೇ ದೃಶ್ಯ, ಅನುಭವ, ವಿಚಾರ, ಮನಸ್ಸಿನ ಒಳಗಡೆ ಇಳಿದು ಅಂತರಂಗವನ್ನು ತಲುಪಿ ಮಾಗಲು ಬೇಕಾದ ವ್ಯವಧಾನ, ವಯಸ್ಸು ಎರಡೂ ನನಗಿಲ್ಲ, ಆಸಕ್ತಿಯೂ ಇಲ್ಲ. ಮೊದಲ ತರಹ ಈಗ ಯಾವುದರಲ್ಲೂ ಕುತೂಹಲ, ಶ್ರದ್ಧೆ ಇಲ್ಲ. ಸುಮ್ಮನೆ ನನ್ನನ್ನು ಅಲ್ಲಿಗೆ ಬಾ, ಇಲ್ಲಿಗೆ ಬಾ ಅಂತ ಒತ್ತಾಯಿಸಬೇಡಿ.

ಮಕ್ಕಳು ಜಾಣರು. ನನ್ನದೆಲ್ಲ ಬಾಯಿತುದಿಯ ಕಾಟಾಚಾರದ ಮಾತು ಎಂಬಂತೆ ಅವರೂ ಬಾಯಿ ತುಂಬಾ ನಕ್ಕುಬಿಡುತ್ತಾರೆ. ಲಹರಿಯಲ್ಲಿದ್ದಾಗ, ನಿನಗೆ ಆಸಕ್ತಿ ಶ್ರದ್ಧೆಯಿಲ್ಲದಿದ್ದರೆ ಏನು, ದಿವ್ಯವಾದದ್ದು ಇದ್ದಕ್ಕಿದ್ದಂತೆ ಒಂದು ಕ್ಷಣದಲ್ಲಿ ಹೊಳೆದುಬಿಡಬಹುದಲ್ಲವೆ ಎಂದು ಕಿಚಾಯಿಸುತ್ತಾರೆ. ಪ್ರಯಾಣದ ದಿನ, ಪ್ರವಾಸದ ಕಾಲಾವಧಿ, ಯಾವ ರೀತಿಯ ಟಿಕೆಟ್‌ ಎಲ್ಲವನ್ನೂ ಅವರೇ ನಿಗದಿ ಮಾಡಿ ಕಳಿಸಿಬಿಡುತ್ತಾರೆ. ಎಷ್ಟನೇ ಸಲವೋ ಹೀಗಾಗುತ್ತಿರುವುದು.

ಹಾಗಾಗಿ ಈಗ ಫಿಲಡೆಲ್ಫಿಯಾದಲ್ಲಿ ಬಂದು ಕುಳಿತಿದ್ದೇನೆ. ವಾಷಿಂಗ್‌ಟನ್‌ ಮೆಮೋರಿಯಲ್‌ ಮುಂದೆ. ಮಗಳಿಗೆ ಮೂವತ್ತೇಳನೇ ಅವಿನ್ಯೂ ಪ್ಲೇನ್‌ ಸ್ಟ್ರೀಟ್‌ನಲ್ಲಿ ಎರಡು ಘಂಟೆ ಮೀಟಿಂಗ್‌ ಇದೆ. ಅಳಿಯ ನ್ಯೂಯಾರ್ಕ್‌ನಿಂದ ಬರುವುದು ಸಂಜೆಗೆ. ಮೊಮ್ಮಗ ಸ್ಕೂಲಿನಿಂದ ಬಂದರೂ ಈಜು, ಟೆನಿಸ್‌ ಅಂತ ಹೊರಟುಬಿಡುತ್ತಾನೆ. ಸುಮ್ಮನೆ ಕುಳಿತು ಮನೆಯಲ್ಲಿ ಏನು ಮಾಡುತ್ತಿ? ಮೆಮೋರಿಯಲ್‌ ಹತ್ತಿರ ಬಿಡ್ತೀನಿ. ಇಷ್ಟವಾದರೆ ಒಳಗಡೆ ಹೋಗು. ಇಲ್ಲವಾದರೆ, ಅಲ್ಲೇ ಮುಂದಿನ ವಿಶಾಲವಾದ ಪಾರ್ಕಿನಲ್ಲಿ ಓಡಾಡಿಕೊಂಡಿರು. ನಾನೇ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಲಂಚ್‌ ಬಾಕ್ಸ್‌, ನೀರಿನ ಬಾಟಲಿ, ಹಣ್ಣಿನ ರಸ, ಏನಾದರೂ ತೊಂದರೆ ಆದರೆ ಅಂಥ ವಿಲ್ಲಾ ವಿಳಾಸ ಇರುವ ವಿಸಿಟಿಂಗ್‌ ಕಾರ್ಡ್‌, ಸ್ಥಳೀಯ ಕ್ರೆಡಿಟ್‌ ಕಾರ್ಡ್‌ ಸಮೇತ ನನ್ನನ್ನು ಕಾರಿನಿಂದ ಇಳಿಸಿ ಹೋದಳು.

ಕಾರಿನಿಂದ ಮಗಳು ಇಳಿಸಿ ಹೋದ ತಕ್ಷಣ ಏನು ಮಾಡಬೇಕೆಂದು ನನಗೆ ಗೊತ್ತಾಗಲಿಲ್ಲ. ಚರಿತ್ರೆ, ಅದೂ ಇನ್ನೊಂದು ದೇಶದ್ದು. ಈಗಾಗಲೇ ಇದೆಲ್ಲ ಸ್ಥೂಲವಾಗಿ ತಿಳಿದಿದೆ. ಎಲ್ಲ ಮೆಮೋರಿಯಲ್‌ಗಳು, ಮ್ಯೂಸಿಯಂಗಳು ಒಂದೇ ರೀತಿ ಇರುತ್ತವೆ. ಯಾವುದೋ ಮಧ್ಯಕಾಲೀನ ಚರ್ಚ್‌ಗೆ ಹೋದ ಭಾವನೆಯನ್ನು ಹುಟ್ಟಿಸುತ್ತವೆ. ಅದನ್ನೆಲ್ಲ ಕಟ್ಟಿಕೊಂಡು ನಾನೇನು ಮಾಡಬೇಕು?

ಈವತ್ತು ವಾರದ ಮಧ್ಯದ ದಿವಸ. ಜನ ಕೂಡ ಬಂದಿಲ್ಲ. ಒಂದಿಬ್ಬರು ಎಲ್ಲೋ ದೂರದಲ್ಲಿ ಓಡಾಡುತ್ತಿದ್ದಾರೆ. ವಿಶಾಲವಾದ, ಸ್ಪಷ್ಟವಾದ ನೀಲಿ ಆಕಾಶ. ಮೋಡಗಳೇ ಇಲ್ಲ. ಬಿಸಿಲು ಕೂಡ ಹದವಾಗಿದೆ. ಮೆಮೋರಿಯಲ್‌ ಕಟ್ಟಡದ ಮುಂಭಾಗದ ಮೆಟ್ಟಿಲುಗಳೇ ನನ್ನನ್ನು ಆಕರ್ಷಿಸಿದವು. ನಾಲ್ಕು ಸಲ ಹತ್ತಿ ಇಳಿದೆ. ದೇಹ ಚುರುಕಾಯಿತು. ಕೆಳಗಿನ ಮೆಟ್ಟಿಲು ಸಾಲಿನ ಬಳಿ ಕುಳಿತುಕೊಂಡೆ.

ಜನ ವಿರಳವಾಗಿದ್ದರು ಎಂದೆನಲ್ಲ, ಎದುರುಗಡೆ ಪಾರ್ಕಿನ ಪ್ರವೇಶದ ಭಾಗದಲ್ಲಿದ್ದ ಹುಲ್ಲು ಹಾಸಿನ ಮೇಲೆ ದೇವದಾರು ಮರದ ಕೆಳಗಡೆ ಮಧ್ಯ ವಯಸ್ಸಿನ ಪ್ರಾರಂಭದಲ್ಲಿರಬಹುದಾದ ಒಬ್ಬ ನೀಳಕಾಯದ ಅಮೆರಿಕನ್‌ ಮಹಿಳೆ ಯೋಗದ ಮ್ಯಾಟ್‌ ಹಾಕಿಕೊಂಡು ಯೋಗಾಸನ ಮಾಡುತ್ತಿದ್ದಳು. ಸುತ್ತಲ ಪರಿವೆಯೇ ಇಲ್ಲ. ಅಷ್ಟೊಂದು ಏಕಾಗ್ರತೆ. ಮುಂದಿನ ಆಸನ ಯಾವುದು ಹಾಕಬಹುದು, ಈ ಆಸನದಲ್ಲಿ ಎಷ್ಟು ಹೊತ್ತು ದೇಹವನ್ನು ದಂಡಿಸಬಹುದು ಎಂದು ಲೆಕ್ಕ ಹಾಕುತ್ತಾ ಅವಳ ತೆಳುವಾದ ಸೊಂಟ, ಸಡಿಲವಾದ ಟೀ ಷರ್ಟ್‌, ಆಸನಗಳ ಮಧ್ಯೆ ಬಿಡುವ ಕಣ್ಣುಗಳು, ಉಸಿರು ತೆಗೆದುಕೊಳ್ಳುವಾಗ ಬಿಡುವಾಗ ಅಗಲವಾಗುವ ಮತ್ತೆ ಸಂಕುಚಿತವಾಗುವ ವಕ್ಷಸ್ಥಳ ಎಲ್ಲವನ್ನೂ ಗಮನಿಸುತ್ತಾ ನಿಂತೆ. ಉಗುರಿಗೆ ಹಾಕಿಕೊಂಡಿದ್ದ ನೀಲಿ ಬಣ್ಣ ಬಿಸಿಲಿಗೆ ಹೊಳೆಯುತ್ತಿತ್ತು. ಉಗುರುಗಳನ್ನು ಚೆನ್ನಾಗಿ ಪೋಷಿಸಿಕೊಂಡು ಉದ್ದವಾಗಿ ಬೆಳೆಸಿದ್ದಾಳೆ ಎನಿಸಿತು. ಅವಳ ಯೋಗಾಸನವನ್ನು ಗಮನಿಸುವ ನೆಪದಲ್ಲಿ ಅವಳ ದೇಹಸಿರಿಯನ್ನು ಮನಸ್ಸು ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತಿತ್ತು.

ಹತ್ತು-ಹದಿನೈದು ನಿಮಿಷಗಳಾಗಿರಬೇಕು. ಅವಳ ಗಂಡ, ಮಗು ಬಂದರು. ಮಗು ಸೈಕಲ್‌ ಹೊಡೆದುಕೊಂಡು ಬಂತು. ಆರೇಳು ವರ್ಷ ಇರಬೇಕು. ಆದರೆ ಈಗಲೇ ತಲೆಯೆಲ್ಲ ಬೋಳಾಗಿದೆ, ದಪ್ಪ ಗಾಜಿನ ಕನ್ನಡಕ ಬೇರೆ. ಗಂಡನದು, ಓ, ಭಾರತೀಯ ಮುಖ, ಮೈಕಟ್ಟು. ಈಗಾಗಲೇ ಹೊಟ್ಟೆ ಮುಂದೆ ಬಂದಿದೆ. ಒಂದೇ ಬಣ್ಣದ ಜರ್ಕಿನ್‌, ಪ್ಯಾಂಟ್‌ ಮತ್ತು ಬೂಟು. ಮನಸ್ಸಿನಲ್ಲಿ ಏನೋ ಯೋಚಿಸುತ್ತಿರಬೇಕು. ಮುಷ್ಠಿ ಕಟ್ಟುತ್ತಾ ಸಡಲಿಸುತ್ತಾ ವೇಗವಾಗಿ ಹೆಜ್ಜೆ ಹಾಕುತ್ತಾ ಬರುತ್ತಿದ್ದಾನೆ. ಎಲ್ಲೋ ನೋಡಿದಂತಿದೆ. ಇಲ್ಲ, ಭಾರತೀಯ ಮುಖಕಟ್ಟಾದ್ದರಿಂದ ಹಾಗೆನಿಸುತ್ತಿರಬೇಕು. ಮಗ ಸೈಕಲ್‌ನ ತಳ್ಳಿ ತಾಯಿಗೆ ತೆಕ್ಕೆ ಬಿದ್ದ. ಆಕೆ ಮಗುವಿನ ಕೆನ್ನೆ ತುಂಬಾ ಮುತ್ತು ಕೊಟ್ಟಳು. ಗಂಡ ಅವಳ ಹಣೆ, ಕಿವಿ ಮೇಲೆ ಬಿದ್ದಿದ್ದ ಆಕೆಯ ಕೂದಲನ್ನು ಹಿಂದಕ್ಕೆ ತಳ್ಳಿದ. ಕತ್ತಿನ ಭಾಗದಲ್ಲಿ ಸಣ್ಣದಾಗಿ ಮೂಡಿದ್ದ ಬೆವರ ಹನಿಗಳನ್ನು ಒರೆಸಿದ. ನಂತರ,

“ಕೆಲ್ಲಿ, ಈವತ್ತು ಸಂಜೆ ನ್ಯೂಯಾರ್ಕ್‌ಗೆ ಹೋಗುವುದಿದೆ, ಮರೆಯಬೇಡ” ಎಂದ. ಎಲ್ಲೋ ಕೇಳಿದ ಪರಿಚಿತ ಧ್ವನಿಯೆನಿಸಿತು.

ನಂತರ ಮನೆಗೆ ಹೋಗಬೇಕಾದ ದಾರಿಯಲ್ಲಿ ಸೂಪರ್‌ ಮಾರ್ಕೆಟ್‌ಗೆ ಹೋಗಬೇಕಾಗಿರುವುದು, ದಿನಸಿ ಖರೀದಿ ಎಲ್ಲವನ್ನೂ ವಿವರಿಸುತ್ತಾ ಹೋದ. ಮಗು ಈಗ ತಾಯಿಯ ಬೆನ್ನಿನ ಮೇಲೆ ಹತ್ತಿ ಸವಾರಿ ಮಾಡಿತು. ಗಂಡ Yoga Mat ಮಡಿಸಲು ಮುಂದೆ ಬಂದು ಬಗ್ಗಿದ. ಬರೇ ಧ್ವನಿ ಮಾತ್ರವಲ್ಲ, ನಡೆಯುತ್ತಿರುವ ರೀತಿ, ಬಗ್ಗುತ್ತಿರುವ ರೀತಿ ಎಲ್ಲವನ್ನೂ ನೋಡಿದ್ದೇನೆ, ಖಂಡಿತವಾಗಿ ನೋಡಿದ್ದೇನೆ ಎನಿಸಿತು. ಅರೆ, ಗುಡಿಬಂಡೆ ದಿವಾಕರ್‌ ಅಲ್ಲವೇ ಇವನು. ಕೇಸ್‌ಗಳೇ ಇಲ್ಲದೆ, ಇರುವ ಒಂದೆರಡು ಕೇಸ್‌ಗಳನ್ನು ಸರಿಯಾಗಿ ನಿಭಾಯಿಸಲಾರದೆ ತಾನೇ ಸುಪ್ರೀಂ ಕೋರ್ಟ್‌ ವಕೀಲ ಎಂದು ಪರದಾಡುತ್ತಿದ್ದವನಲ್ಲವೇ? ಎಷ್ಟು ವರ್ಷಗಳ ನಂತರ ನಾನು ಇವನನ್ನು ನೋಡ್ತಾ ಇದೀನಿ. ಯಾವಾಗ ಇವನಿಗೆ ಇಷ್ಟೊಂದು ಚೆನ್ನಾಗಿರುವ ಅಮೆರಿಕನ್‌ ಹೆಂಗಸಿನೊಡನೆ ಮದುವೆಯಾಯಿತು. ಮಗು ಬೇರೆ ಆಗಿದೆ. ವಕೀಲಿಕೆಯಲ್ಲಿ ಮುಂದೆ ಬರಲಾರದೆ, ಟಿಲಿವಿಷನ್‌ ವಾಹಿನಿಗಳಿಗೆ ಗಣ್ಯರನ್ನು ಸಂದರ್ಶನ ಮಾಡುತ್ತಾ ಮಾಡುತ್ತಾ ಪ್ರಸಿದ್ಧನಾದವನಲ್ಲವೇ? ಕೆಲ್ಲಿ ಈಗ ಪಾರ್ಕಿನ ಒಂದು ಬದಿಯಲ್ಲಿದ್ದ ಶೌಚಾಲಯಕ್ಕೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬಂದಳು. ಈಗ ಪೂರ್ತಿ ಪಂಜಾಬಿ ಡ್ರೆಸ್‌. ದುಪ್ಪಟವನ್ನು ಮಾತ್ರ ಕತ್ತಿನ ಸುತ್ತ ಮಫ್ಲರ್‌ ರೀತಿಯಲ್ಲಿ ಸಡಿಲವಾಗಿ ಕಟ್ಟಿಕೊಂಡಿದ್ದಳು.

ಮುಂದೆ ಹೋಗಿ ಮಾತನಾಡಿಸಿದೆ. ತಕ್ಷಣವೇ ಗುರುತು ಹಿಡಿದ. ನಾನು ಎಲ್ಲಿರುವುದು, ಏಕೆ ಬಂದಿರುವುದು, ನನ್ನ ಈಚಿನ ಹಾಸ್ಯ ಲೇಖನಗಳು ಯಾವುವು, ನಿವೃತ್ತಿಯ ನಂತರ ಏನು ಮಾಡುತ್ತಿರುವೆ, ಎಲ್ಲವನ್ನೂ ಒಂದೇ ಉಸಿರಿಗೆ ವಿಚಾರಿಸಿದ. ಈಗ ಧ್ವನಿಯಲ್ಲಿ ತುಂಬಾ ಆತ್ಮವಿಶ್ವಾಸವಿತ್ತು. ನಾನು ಕೇಳದೇ ಹೋದರೂ ತಾನೇ ಹೇಳಿಕೊಂಡ,

ಸರ್‌ ನನ್ನದು ಬಹು ದೀರ್ಘವಾದ ಪಯಣ. ಖಂಡಾಂತರ ಕೌಟುಂಬಿಕ ಪಯಣ. ಆದರೆ ದಿನದ ಕೊನೆಯಲ್ಲಿ ನಾನು ತುಂಬಾ ಸುಖವಾಗಿದ್ದೇನೆ. ಇದಕ್ಕೆಲ್ಲ ಕೆಲ್ಲಿ ಥಾಮಸ್‌ ಕಾರಣ ಎಂದು ಹೆಂಡತಿಯನ್ನು ಪರಿಚಯಿಸಿದ. ಕೆಲ್ಲಿ ನಮಸ್ತೆ ಮಾಡಿಯೂ ಮುಂದೆ ಬಂದು ಕೈ ಕುಲುಕಿದಳು. ನಂತರ ದಿವಾಕರನೇ ಉತ್ಸಾಹ ತೋರಿ, ಕರಾಚಿ ರೆಸ್ಟೋರೆಂಟಿನಲ್ಲಿ ಎರಡು ಮೂರು ಸಲ ಭೇಟಿ ಮಾಡಿದ. ಪ್ರತಿ ಸಲವೂ ಅವನೇ ಬಿಲ್‌ ಕೊಟ್ಟ. ನಾನು ಸಿಗುವುದನ್ನೇ ಕಾಯುತ್ತಿದ್ದನೇನೋ ಎನ್ನುವಂತೆ ತನ್ನ ದೀರ್ಘ ಖಂಡಾಂತರ ಪಯಣದ ಕತೆಯನ್ನು ಹೇಳಿಕೊಂಡ.

***

ಗುಡಿಬಂಡೆ ದಿವಾಕರ್‌, ನಾನು ಬೆಂಗಳೂರಿನಲ್ಲಿ ಮುಖ್ಯ ನ್ಯಾಯಾಧೀಶನಾಗಿದ್ದಾಗ ಪರಿಚಯವಾಗಿದ್ದವನು. ಎಲ್‌ಎಲ್‌ಬಿ ಉತ್ತಮ ದರ್ಜೆಯಲ್ಲಿ ಪಾಸು ಮಾಡಿಕೊಂಡಿದ್ದ. ಅರಳು ಹುರಿದಂತೆ ಮಾತನಾಡುವ ಸ್ವಭಾವವೂ ಇತ್ತು. ಸ್ವಲ್ಪ Academic ಧಾಟಿಯ ಮನುಷ್ಯ. ಚೆನ್ನಾಗಿ, ಪ್ರಾಮಾಣಿಕವಾಗಿ ವಾದ ಮಾಡುತ್ತಿದ್ದ. ತಂತ್ರಗಾರಿಕೆ ಗೊತ್ತಿರಲಿಲ್ಲ. ಸಣ್ಣ ಕೇಸೊಂದನ್ನು ವಾದ ಮಾಡುವಾಗ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸುವನು. ಕೇಸಿಗೆ ಮುಖ್ಯವಾದ ಸಂಗತಿ ಬಿಟ್ಟು ಪ್ರಾಸಂಗಿಕವಾದದ್ದನ್ನೇ ಹೇಳುವನು. ಕೋರ್ಟ್‌ ಸಿಬ್ಬಂದಿ, ವಿರೋಧಿ ವಕೀಲರು, ಇವರನ್ನೆಲ್ಲ ನಿರ್ವಹಿಸುವ ಕಲೆ ಕೂಡ ಗೊತ್ತಿರಲಿಲ್ಲ. ಸಹಜವಾಗಿಯೇ ಹೆಚ್ಚು ಕೇಸುಗಳು, ಕಕ್ಷಿದಾರರು ಅವನ ಕಡೆಗೆ ಬರುತ್ತಿರಲಿಲ್ಲ. ಪ್ರಾಕ್ಟೀಸ್‌ ಚೆನ್ನಾಗಿ ಕುದುರದೆ, ಬರ‍್ತಾ ಬರ‍್ತಾ ನಕಲಿಶ್ಯಾಮನ ತರಹ ಕಾಣಲಾರಂಭಿಸಿದ.

ದಿವಾಕರನಿಗೆ ದೂರದರ್ಶನದಲ್ಲಿ ಗೆಳೆಯನೊಬ್ಬನಿದ್ದ. ಬಾ, ಸಂದರ್ಶನ ಮಾಡುವ ವಿಭಾಗದಲ್ಲಿ ನಿನ್ನನ್ನು ನೂಕುತ್ತೇನೆ. ಫೀಸ್‌ ಕೊಡುವುದು ಮೂರು ತಿಂಗಳು ತಡವಾಗುತ್ತೆ. ಕಛೇರಿ ಸಿಬ್ಬಂದಿ ಕಡೆ ಸ್ವಲ್ಪ ಗಮನ ಕೊಡಬೇಕಾಗುತ್ತೆ. ಆದರೇನಂತೆ ಸಂದರ್ಶನ ಮಾಡ್ತಾ ಮಾಡ್ತಾ ಗಣ್ಯರೆಲ್ಲರ ಪರಿಚಯ ಆಗುತ್ತೆ. ಅವರ ಮೂಲಕ ಚೆನ್ನಾಗಿರುವ ಕೇಸುಗಳು ಸಿಕ್ಕಿ ಪ್ರಾಕ್ಟೀಸ್‌ ಚೆನ್ನಾಗಿ ಆಗಬಹುದು.

ದಿವಾಕರನ ಮಾತುಗಾರಿಕೆ ಆಕರ್ಷಣೀಯವಾಗಿತ್ತು. ಧ್ವನಿ ಚೆನ್ನಾಗಿತ್ತು. ಸ್ವಭಾವದಲ್ಲಿ ವಿನಯವಿತ್ತು. ಕನ್ನಡ ಪ್ರೇಮವೂ ಇತ್ತು. ಮಾಡುವ ಕೆಲಸದಲ್ಲಿ ಶ್ರದ್ಧೆ ಇತ್ತು.

ನ್ಯಾಯಾಧೀಶನಾಗಿ ನಾನು ಕನ್ನಡದಲ್ಲಿ ತೀರ್ಪುಗಳನ್ನು ಬರೆಯುತ್ತಿದ್ದರಿಂದ, ಕೋರ್ಟ್‌ ನಡಾವಳಿಯನ್ನೆಲ್ಲ ಕನ್ನಡದಲ್ಲಿ ನಡೆಸುತ್ತಿದ್ದರಿಂದ, ನನ್ನ ಹಾಸ್ಯ ಲೇಖನಗಳು ಕೂಡ ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಾ ಇದ್ದುದರಿಂದ ನನ್ನನ್ನು ಕೂಡ ದೂರದರ್ಶನಕ್ಕೆ ಸಂದರ್ಶಿಸಲು ದಿವಾಕರ್‌ ಇಷ್ಟಪಟ್ಟ. ನಾನು ಒಪ್ಪಿಕೊಂಡೆ. ಸಂದರ್ಶನ ಚೆನ್ನಾಗಿ ಮೂಡಿ ಬಂತು. ದಿವಾಕರ್‌ ಚೆನ್ನಾಗಿ ತಯಾರಿ ಮಾಡಿಕೊಂಡು ಬಂದಿದ್ದ. ಆಮೇಲೂ ಕೂಡ ನಾನು ಒಂದಿಷ್ಟು ಸಂದರ್ಶನಗಳನ್ನು ಗಮನಿಸಿದೆ. ಬಹುಪಾಲು ಸಂದರ್ಶನಗಳು ವೀಕ್ಷಕರ ಗಮನವನ್ನು ಸೆರೆ ಹಿಡಿಯುವಂತಿದ್ದವು. ದಿವಾಕರ ಕಳೆಗಟ್ಟಲು ಪ್ರಾರಂಭಿಸಿದ. ಆತ್ಮವಿಶ್ವಾಸ ಹೆಚ್ಚಾಗುತ್ತಿತ್ತು. ಎಷ್ಟರ ಮಟ್ಟಿಗೆಂದರೆ, ಸಂದರ್ಶಿಸುತ್ತಿರುವವರನ್ನು ಕೊಂಚ ತಮಾಷೆ ಮಾಡಿ ನಗಿಸುತ್ತಿದ್ದ. ಕಲಾವಿದರು, ವಿಜ್ಞಾನಿಗಳು, ಅಧಿಕಾರಿಗಳು, ಸಾಹಿತಿಗಳು, ವಿದೇಶಿ ಪ್ರವಾಸಿಗಳು ಎಲ್ಲರನ್ನೂ ಸಂದರ್ಶಿಸುತ್ತಾ ಸಂದರ್ಶಿಸುತ್ತಾ ಕೋರ್ಟ್‌ ಕಡೆ ಬರುವುದು ಕೂಡ ಕಡಿಮೆ ಆಯಿತು. ಇದೆಲ್ಲ ಎರಡೂವರೆ-ಮೂರು ದಶಕಗಳಷ್ಟು ಹಿಂದಿನ ಸಮಾಚಾರ. ಈಗ ಇಲ್ಲಿ ವಾಷಿಂಗ್‌ಟನ್‌ ಮೆಮೋರಿಯಲ್‌ ಮುಂದೆ ಮತ್ತೆ ಸಿಕ್ಕದೆ ಹೋಗಿದ್ದರೆ, ಅವನು ನೆನಪಿಗೆ ಬರುತ್ತಿರಲಿಲ್ಲ. ದಿವಾಕರನೇ ಹೇಳಿದ ಹಾಗೆ ಆತನ ಜೀವನ ಎಲ್ಲಿಂದಲೋ ಹೊರಟು ಎಲ್ಲಿಗೋ ತಲುಪಿ ಈಗ ನನಗೆ ಎದುರಾಗಿತ್ತು.

***

ಸಾರ್‌ ಬರ‍್ತಾ ಬರ‍್ತಾ ನನಗೆ ಜನರನ್ನು ಮಾತನಾಡಿಸುವುದು, ಸಂದರ್ಶನ ಮಾಡುವುದು, ಮಾಡಿದ ಸಂದರ್ಶನದ ಬಗ್ಗೆ ಮಾತನಾಡುವುದು, ಅದನ್ನೇ ಮತ್ತೆ ಮತ್ತೆ ವೀಡಿಯೋದಲ್ಲಿ ನೋಡುವುದು, ಇದೇ ಚೆನ್ನಾಗಿದೆ, ಇದರಲ್ಲೇ ಹೆಚ್ಚು ಸಂತೋಷ ಸಿಗುತ್ತೆ ಅಂತ ಅನಿಸಿತು. ಸಂದರ್ಶನ ಮಾಡಿದ ಕೆಲವು ಗಣ್ಯರಂತೂ ತುಂಬಾ ಪ್ರೀತಿಯಿಂದ, ಗೌರವದಿಂದ ನಡೆಸಿಕೊಂಡರು. ಕೆಲವರು ಒಳ್ಳೆಯ ಉಡುಗೊರೆಗಳನ್ನು ಕೂಡ ಕೊಟ್ಟರು. ಪ್ರಾಕ್ಟೀಸ್‌ಗಿಂತ ಇದರಲ್ಲೇ ಹಣ ನಿಧಾನವಾಗಿಯಾದರೂ ನಿಯಮಿತವಾಗಿ ಬರುತ್ತಿತ್ತು. ಈ ಕೆಲಸಕ್ಕೆ ಯಾವ ತರಬೇತಿಯೂ ಬೇಕಿಲ್ಲ. ಜನ ಏನನ್ನು ಹೇಳೋಕೆ, ತೋಡಿಕೊಳ್ಳೋಕೆ ಇಷ್ಟಪಡುತ್ತಾರೆ ಅಂತ ಮೊದಲು ತಿಳಿದುಕೊಳ್ಳಬೇಕು. ಅದಕ್ಕೆ ತಕ್ಕ ಹಾಗೆ ಪ್ರಶ್ನೆಗಳನ್ನು ರೂಪಿಸಿಕೊಂಡು, ಅವರೇ ಅವರಿಗೆ ಬೇಕಾದ ಉತ್ತರವನ್ನು ಅವರ ಶೈಲಿಯಲ್ಲೇ ಹೇಳುವ ಹಾಗೆ ನೋಡಿಕೊಳ್ಳಬೇಕು. ಸಾಹಿತಿಗಳಾಗಲಿ, ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ, ನಟರಾಗಲಿ, ವಿಜ್ಞಾನಿಗಳಾಗಲಿ ಯಾರೇ ಆದರೂ ಎಲ್ಲರೂ ಅವರ ಬಗ್ಗೆ ಅವರೇ ಮಾತಾಡಿಕೊಳ್ಳೋದನ್ನು ಇಷ್ಟಪಡುತ್ತಾರೆ. ವೈಯಕ್ತಿಕವಾದ ಸಂಗತಿಗಳನ್ನು ಹೇಳದೆ ಹೋದರೂ, ಅವರವರ ಅಭಿಪ್ರಾಯ ವಿಚಾರಗಳ ಬಗ್ಗೆ ಹೇಳಿಕೊಳ್ಳಲು ಉತ್ಸುಕರಾಗಿರುತ್ತಾರೆ. ನಾವು ಪ್ರಶ್ನೆಗಳನ್ನು ಕೇಳಬಾರದು. ಅವರು ಮಾತನಾಡುವುದಕ್ಕೆ ಒಂದು ನೆಪ ಆಗಬೇಕು ಅಷ್ಟೇ. ಇಂತಹವರೆಲ್ಲ ಯಾವುದೇ ಕ್ಷೇತ್ರಕ್ಕೆ ಸೇರಿರಲಿ, ಸ್ವಭಾವ ಒಂದೇ ಇರುತ್ತೆ. ಎಲ್ಲರಿಗೂ ಸ್ವಪ್ರಾಮುಖ್ಯತೆ ಇದ್ದೇ ಇರುತ್ತದೆ. ಹಾಗಾಗಿ, ಕ್ಷೇತ್ರಗಳು, ಪರಿಣತಿ ಬೇರೆ ಆದರೂ ಕೇಳಬಹುದಾದ ಪ್ರಶ್ನೆಗಳೆಲ್ಲ ಒಂದೇ ರೀತಿ ಇರುತ್ತವೆ. ಈವತ್ತು ರಾಜಕಾರಣಿ ಒಬ್ಬ ನೀಡಿದ ಉತ್ತರ, ನೋಟ ನಾಳೆ ಮತ್ತೊಬ್ಬ ಸಾಹಿತಿಯನ್ನು ಮಾತನಾಡಿಸುವಾಗ ಪ್ರಶ್ನೆ ಆಗಬಹುದು. ಮೊದಮೊದಲು ನನಗೂ ಭಯ ಆಗೋದು. ಹಾಗೆ ನೋಡಿದರೆ, ಪ್ರಸಿದ್ಧರನ್ನು ಸಂದರ್ಶಿಸುವುದೇ ಸುಲಭ. ಅವರ ಸ್ವಪ್ರೇಮದ ನಗ್ನನೆಲೆಗಳನ್ನು ಸೂಕ್ತವಾಗಿ ಮೀಟಬೇಕು ಅಷ್ಟೇ. ನನಗೇ ಆಶ್ಚರ್ಯವಾಗೋಕೆ ಶುರುವಾಯಿತು. ಎಷ್ಟೊಂದು ಕ್ಷೇತ್ರಗಳ ಬಗ್ಗೆ ನನಗೆ ಎಷ್ಟೊಂದು ಗೊತ್ತಿದೆ ಅಂತಾ. ಅದರ ಒಳಗಿನ ಗುಟ್ಟು ಬೇರೆ ಇತ್ತು ಸಾರ್‌.

ಒಂದು ಸಲ ಒಬ್ಬ Travel Agency ಚೇರಮನ್‌ರನ್ನು ಸಂದರ್ಶಿಸಿದೆ. ನನ್ನ ಭವಿಷ್ಯದ, ಅದೃಷ್ಟದ ಬಾಗಿಲು ತೆರೆಯಿತು. “ನ್ಯಾಯಾಧೀಶರು, ಕಮೀಷನರ್‌ಗಳು, ದೊಡ್ಡ ವ್ಯಾಪಾರಿಗಳು ಇವರೆಲ್ಲ ಪ್ರವಾಸಕ್ಕೆ ಹೋದಾಗ ಅವರೆಲ್ಲರ ಹತ್ತಿರ ಪ್ರವಾಸದುದ್ದಕ್ಕೂ ಆಪ್ತವಾಗಿ ಮಾತನಾಡೋಕೆ ಒಬ್ಬರು ಬೇಕಾಗುತ್ತೆ. ಗೈಡ್‌ ತರ ಅಲ್ಲ. ಅದಕ್ಕೆ ಬೇರೆಯವರು ಇರುತ್ತಾರೆ. ಗಣ್ಯರನ್ನು ಮಾತನಾಡಿಸುವುದು, ಅವರನ್ನು ಖುಷಿಯಿಂದ ಇಟ್ಟುಕೊಳ್ಳುವುದು ತುಂಬಾ ಸವಾಲಿನ ಕೆಲಸ. ನೀವು ಆ ಕೆಲಸ ಮಾಡಬಲ್ಲಿರಿ. Tour Network Coordinator ಅಂತ ಬನ್ನಿ, ನಮ್ಮ ಸಂಸ್ಥೆಗೆ ಸೇರಿಕೊಳ್ಳಿ. ನಿಮ್ಮ ಸಹೃದಯ ಮನೋಭಾವದಿಂದ ನಮ್ಮ ಸಂಸ್ಥೆಯ ಅಭಿವೃದ್ಧಿಗೆ ತುಂಬಾ ಉಪಯೋಗ ಆಗುತ್ತೆ” ಎಂದು ಕರೆದರು. ಆಹ್ವಾನದ ಜೊತೆಗೆ ಪ್ರಚೋದನೆಯೂ ಇತ್ತು. ಮೊದಮೊದಲು ಯಾತ್ರಾಸ್ಥಳಗಳಿಗೆ ಮಾತ್ರ ಕಳಿಸುತ್ತಿದ್ದರು. ನಂತರ ಸಿಂಗಪೂರ್‌, ಹಾಂಕಾಂಗ್‌, ಇಂಗ್ಲೆಂಡ್‌, ಅಮೆರಿಕಾಗಳಿಗೆ ಕಳಿಸಿದರು. ಹೈಕೋರ್ಟ್‌ ನ್ಯಾಯಾಧೀಶ ಜಸ್ಟಿನ್‌ ಸೆನ್‌ರು ನಿವೃತ್ತರಾದ ಮೇಲೆ Cruiseನಲ್ಲಿ ಮೂರು ತಿಂಗಳ ಪ್ರವಾಸ ಮಾಡಿದರಲ್ಲ, ಆ ಪ್ರವಾಸಕ್ಕೆ ನನ್ನನ್ನು ಆಪ್ತ ಸಲಹೆಗಾರ ಅಂತ ನೇಮಿಸಿದ್ದರು. ನಿಜವಾಗಲೂ ನನಗೆ ನನ್ನ ಬಗ್ಗೆ ಹೆಮ್ಮೆ ಎನಿಸಿತು. ನಮ್ಮ ಬಗ್ಗೆ ನಾವೇ ಹೆಮ್ಮೆ ಪಡುತ್ತಾ ಸಂತೋಷ ಪಡುತ್ತಾ ಕೆಲಸ ಮಾಡುವುದಾದರೆ ಅದಕ್ಕಿಂತ ಇನ್ನೇನು ಬೇಕು ಹೇಳಿ.

ಹೀಗೇ ಒಂದು ತಂಡದ ಜೊತೆ ಲಂಡನ್‌ಗೆ ಬಂದಿದ್ದಾಗ ಸೇತುವೆ ಬಳಿ ಇರುವ ಪಾರ್ಕಿನಲ್ಲಿ Ways of good family life ಅಂತಾ ಭಾಷಣ ನಡೆಯುತ್ತಿತ್ತು. ಚೆನ್ನಾಗಿಯೇ ಮಾತನಾಡುತ್ತಿದ್ದರು. ಆದರೆ ತುಂಬಾ ಜನರಲ್‌ ಆಗಿ ಮಾತನಾಡುತ್ತಿದ್ದರು. ಕೆಲ್ಲಿ ಅವರಿಗೆ Talking Assistant. ಸಭಿಕರು ಕೇಳಿದ ಪ್ರಶ್ನೆಗಳನ್ನು ಸಾಫ್ಟ್‌ಗೊಳಿಸಿ ಭಾಷಣಕಾರರಿಗೆ ಅನುಕೂಲವಾಗುವಂತೆ ಪ್ರಶ್ನೆಗಳನ್ನು ಮಾರ್ಪಾಡು ಮಾಡುತ್ತಿದ್ದಳು. ನಾನು ಕೂಡ ನಮ್ಮ ತಂಡದ ಪರವಾಗಿ ಪ್ರಶ್ನೆಗಳನ್ನು ಕೇಳಿದೆ. ಭಾರತೀಯ ವಿವಾಹ, ಕುಟುಂಬ ಪದ್ಧತಿ ಬಗ್ಗೆಯೆಲ್ಲ ಮನಮುಟ್ಟುವಂತೆ ವಿವರಿಸಿದೆ. ಎಲ್ಲರೂ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು. ಆವಾಗಲೇ ಕೆಲ್ಲಿಯ ಸಂಪರ್ಕ ಬಂದದ್ದು. ಲಂಡನ್‌ಗೆ ಬಂದಾಗಲೆಲ್ಲ ಭೇಟಿ ಮಾಡುತ್ತಿದ್ದೆ.

ನ್ಯಾಯಾಧೀಶರಾಗಿದ್ದ ನಿಮ್ಮ ಹತ್ತಿರ ಏನು ಮುಚ್ಚು ಮರೆ ಸಾರ್‌. ಕೆಲ್ಲಿ ನಾನೊಬ್ಬ ತುಂಬಾ ಓದಿದ ಮನುಷ್ಯ, ತಿಳುವಳಿಕೆ ಚೆನ್ನಾಗಿದೆ, ನಾನೊಬ್ಬ ಸಮಾಜಶಾಸ್ತ್ರಜ್ಞ, ಮಾನವಶಾಸ್ತ್ರಜ್ಞ ಅಂತೆಲ್ಲ ನಂಬಿಬಿಟ್ಟಿದ್ದಾಳೆ. ನಿಜ ಹೇಳ್ತೀನಿ ಸಾರ್‌, ನಾನು ಯಾವತ್ತೂ ಸುಳ್ಳು ಹೇಳೋಲ್ಲ. ನನಗೆ ಗೊತ್ತಿಲ್ಲದ ಸಂಗತೀನೂ ಹೇಳೋಲ್ಲ. ಇದುವರೆಗೆ ಎಷ್ಟೊಂದು ಪ್ರತಿಭಾವಂತರ ಹತ್ತಿರ ಮಾತಾಡಿದೀನಿ. ವಿಷಯ ತಿಳಕೊಂಡಿದೀನಿ. ಅದೆಲ್ಲಾನೂ ಸೇರಿಸಿ ಕೆಲವು ಮಾತುಗಳನ್ನು ಹೇಳ್ತೀನಿ ಅಷ್ಟೆ.

ಜೀವನ ನೇರವಾಗಿದೆ, ಸರಳವಾಗಿದೆ, ಅನಗತ್ಯವಾಗಿ ಸಂಕೀರ್ಣ ಮಾಡಿಕೊಳ್ಳಬೇಡಿ. ಜೀವನ ಸಂಕೀರ್ಣವಾಗೋಕ್ಕೆ ಕಾರಣ ಸಮಸ್ಯೆಯ ಸಂಕೀರ್ಣತೆಯಲ್ಲ, ನಮ್ಮ ನಮ್ಮ ಅಹಂಕಾರ. ಇದು ಗಂಡು-ಹೆಣ್ಣಿನ ಸಂಬಂಧಕ್ಕೂ ಅನ್ವಯಿಸುತ್ತದೆ. ದೇಶ-ದೇಶಗಳ ನಡುವಿನ ಸಂಬಂಧಕ್ಕೂ ಕೂಡ ಅನ್ವಯಿಸುತ್ತದೆ. ಇಷ್ಟೇ ಸಾರ್‌ ನಾನು ಹೇಳುವುದು.

ಅಷ್ಟೇ ಸಾರ್‌ ನನಗೆ ತಿಳಿದಿರೋದು, ನನಗೆ ನಂಬಿಕೆಯಿರೋದು. ಇದರ ಆಧಾರದ ಮೇಲೇ ಇಲ್ಲಿ Family Counsellor ಕೆಲಸ ಮಾಡ್ತಿದ್ದೀನಿ. ವಿಲ್ಲಾ ಕೊಂಡಿದ್ದೇನೆ. ವರ್ಷಕ್ಕೆರಡು ಸಲ ಭಾರತಕ್ಕೆ ಹೋಗಿಬರ‍್ತೀನಿ.

ಮದುವೆಗೆ ಒಪ್ಪಿಕೊಂಡು ಕೆಲ್ಲಿಗೆ ಮೋಸ ಮಾಡಿದೆನೇನೋ ಎನ್ನುವ ಭಾವನೆ ಬರುತ್ತೆ. ಆದರೆ ನನಗೆ ಜೀವನದಲ್ಲಿ ದುರುದ್ದೇಶವೇ ಇಲ್ಲದಿರೋದ್ರಿಂದ, ನನ್ನನ್ನು ಅವಳೇ ಮನಸಾರೆ ಒಪ್ಪಿ, ಪ್ರೀತಿಸಿರುವುದರಿಂದ ನನ್ನ ಪ್ರೀತಿಯಲ್ಲೂ ಕಿಂಚಿತ್ತೂ ಮೋಸವಿಲ್ಲದೆ ಇರುವುದರಿಂದ ನಮ್ಮ ಸಂಸಾರದಲ್ಲಿ ಏನೂ ತೊಡಕಿಲ್ಲ ಸಾರ್‌.

ನ್ಯಾಯಾಧೀಶರಾದ ನಿಮಗೊಂದು ವಿಷಯ ಹೇಳಲೇಬೇಕು ಸಾರ್‌. ಇಲ್ಲಿರುವ ಭಾರತೀಯರಿಗೆ ನನ್ನ ಕೆಲಸ, Counselling Centre, ಬುದ್ಧಿಮಾತು ಯಾವುದೂ ಇಷ್ಟವಾಗೋಲ್ಲ. ಯಾರು ಮಹಾ ಇವನು. ನಮಗೆ ಗೊತ್ತಿರೋದನ್ನೇ ಹೇಳ್ತಾನೆ ಅನ್ನುವ ಧೋರಣೆ. ಕಾನೂನು ಓದಿ, ಹತ್ತು ವರ್ಷ ಯಾವುದೇ ಪ್ರಾಕ್ಟೀಸ್‌ ಇಲ್ಲದೆ ಒದ್ದಾಡಿದೆ. ಕೊನೆಗೆ ಹೀಗೆಲ್ಲ ಆಯಿತು. ನಾನು ತುಂಬಾ ಅದೃಷ್ಟವಂತ. ಮೊದಮೊದಲು ನನ್ನ ಬಂಧುಗಳು ಕೂಡ ನನ್ನನ್ನು ಕೀಳಾಗಿ ನೋಡ್ತಿದ್ರು. ನಾನು ಯಾವುದೋ Tourist Agent, Standup comedian ಅನ್ನುವ ರೀತಿಯಲ್ಲಿ. ಇಲ್ಲಿಗೆ ಬಂದು ನಮ್ಮ ವಿಲ್ಲಾ ನೋಡಿದ ಮೇಲೆ, ನನ್ನ ಕೆಲ್ಲಿಯ ಅನುರೂಪದ ದಾಂಪತ್ಯ ನೋಡಿದ ಮೇಲೆ, ಒಂದು ಮಟ್ಟಕ್ಕೆ ನನ್ನನ್ನು ಒಪ್ಪಿಕೊಂಡಿದ್ದಾರೆ. ಒಂದು ಸಲ ಅಕ್ಕ ಸಮ್ಮೇಳನದಲ್ಲಿ ನನಗೆ ಸನ್ಮಾನ ಇತ್ತು. ಭಾಷಣ ಕೂಡ ಮಾಡಿದೆ. ಶಿವಪ್ರಸಾದ್‌ ಅಂಥ ಮೈಸೂರು ಕಡೆಯವರು ಒಬ್ಬರು Culture Minister ಬಂದಿದ್ದರು. ಯಾರು ನೀವು, ನಿಮ್ಮ ಹಿನ್ನೆಲೆ ಏನು ಅಂಥ ಎಲ್ಲ ವಿಚಾರಿಸಿ, ಕೊನೆಗೊಂದು ತಿರಸ್ಕಾರದ ನಗೆ ನಕ್ಕರು. ನೀವು ಸಿಕ್ಕಿದ್ರಲ್ಲ, ವಾಷಿಂಗ್‌ಟನ್‌ ಸ್ಮಾರಕದ ಬಳಿ, ಆತನೇ ಈ ದೇಶಕ್ಕೆ ಸ್ವಾತಂತ್ರ್ಯದ ದೀಕ್ಷೆ ಕೊಟ್ಟದ್ದು. ಸ್ವಾತಂತ್ರ್ಯ ಅಂದರೆ ದೇಶದ ಸ್ವಾತಂತ್ರ್ಯ ಮಾತ್ರ ಅಲ್ಲ, ನಾವೆಲ್ಲರೂ ನಮಗೆ ಬೇಕು ಬೇಕಾದ ರೀತಿಯಲ್ಲಿ ಬದುಕಿ, ಸಂತೋಷ ಕಂಡುಕೊಳ್ಳುವ ಸ್ವಾತಂತ್ರ್ಯ. ನೀವು ಏನೇ ಹೇಳಿ, ನಾನು ಇಲ್ಲಿಗೆ ಬಂದು ಆ ಸ್ವಾತಂತ್ರ್ಯವನ್ನು ಚೆನ್ನಾಗಿ ಅನುಭವಿಸಿದ್ದೀನಿ. ಅಮೆರಿಕ ಕೂಡ ನನ್ನನ್ನು ಒಪ್ಪಿದೆ. ನನ್ನ ಕೆಲಸ, ನನ್ನ ಪಾತ್ರ, ನನ್ನ ಗಣ್ಯತೆ ಇದೆಲ್ಲದಕ್ಕೂ ಕೆಲ್ಲಿಯೇ ಕಾರಣ.

ಕೊನೆಯ ಊಟದ ದಿವಸ ನಾವು ಪ್ರಸಿದ್ಧ Pen Book Houseಗೆ ಹೋಗೋಣವೆ ಎಂದು ಕೇಳಿದ. “Book House ಕೂಡ ಒಂದು ರೀತಿಯ Tourist Spot Sir. ಆದರೆ ಜೀವನದಲ್ಲಿ ನಿಜವಾಗಿಯೂ ಅಷ್ಟೊಂದು ಪುಸ್ತಕಗಳ ಅಗತ್ಯ ಇದೆಯಾ ಸಾರ್‌. ನಿಜವಾಗಲೂ ಜನ ಅಷ್ಟೊಂದು ಪುಸ್ತಕಗಳನ್ನು ಓದುತ್ತಾರಾ? ಅಲ್ಲಿಗೆ ಹೋದಾಗಲೆಲ್ಲ ನನಗೆ ಒಂದು ರೀತಿಯ ದಿಕ್ಕು ತಪ್ಪಿದ ಭಾವನೆ ಬರುತ್ತೆ.”

ನಾನು ಬುಕ್‌ ಹೌಸ್‌ ನೋಡಿ ಬರುವ ಹೊತ್ತಿಗೆ ದಿವಾಕರ್‌ ಸೇತುವೆ ಬಳಿ ಎರಡು ಸುತ್ತು ವಾಕಿಂಗ್‌ ಮಾಡಿ ಉತ್ಸಾಹದಿಂದ ನಿಂತಿದ್ದ.

ನೋಡಿ ಸಾರ್‌, ಎಂಟು ಹತ್ತು ವರ್ಷ ಕೋರ್ಟಿನಲ್ಲಿ ನಿಮ್ಮ ಎದುರಿಗೆ ವಾದ ಮಾಡೋಕೆ ನಿಂತಿದ್ದೀನಿ. ಒಂದು Simple Adjournment ಗೆ ಎಷ್ಟು ಕಷ್ಟ ಆಗುತ್ತಿತ್ತು. ಎಷ್ಟೇ ವರ್ಷಗಳಾದರೂ ಒಂದೇ ಒಂದು ಕೇಸ್‌ ಕೂಡ ಇತ್ಯರ್ಥವಾಗುತ್ತಿರಲಿಲ್ಲ. ವಿಚಿತ್ರ ನೋಡಿ. ಈಗ ಎರಡು ಮೂರು ಭೇಟಿಯಲ್ಲೇ ಎಷ್ಟೊಂದು ಮಾತನಾಡುವ ಅವಕಾಶ ಸಿಕ್ಕಿತು. ತಕ್ಷಣ ಏನು ಹೇಳಬೇಕೆಂದು ನನಗೆ ತಿಳಿಯಲಿಲ್ಲ. ದಿವಾಕರನ ವ್ಯಕ್ತಿತ್ವ, ವಿಚಾರ ಸರಣಿ, ಜೀವನದ, ಸಂತೋಷ ಎಲ್ಲವೂ ನನಗೆ ತುಂಬಾ ಇಷ್ಟವಾಗಿತ್ತು. ಅದನ್ನು ಹೇಳಲು ಸೂಕ್ತವಾದ ಪದಗಳು ತಕ್ಷಣ ಮೂಡಲಿಲ್ಲ. ದಿವಾಕರ್‌ಗೆ ಸಂತೋಷವಾಗಲೆಂದು ಒಂದು ಜಾಣ ಪ್ರಶ್ನೆಯನ್ನು ಕೇಳಿದೆ.

“ನೋಡಿ ದಿವಾಕರ್‌ ಅವರೇ, ಈ ಪ್ರವಾಸದ ಉಡುಗೊರೆಯೆಂದರೆ ನಿಜವಾಗಿಯೂ ನೀವೇ. ನಿಮ್ಮ Counselling, ನಿಮ್ಮ ವಿಚಾರ, ಬದುಕು ಇದೆಲ್ಲದರ ಕೇಂದ್ರ ಸೂತ್ರ, ಪ್ರೇರಣೆ ಏನೆಂದು ಹೇಳುತ್ತೀರಿ?”

ನನ್ನ ಪ್ರಶ್ನೆಯಿಂದ ದಿವಾಕರ್‌ ಅವಾಕ್ಕಾಗಲಿಲ್ಲ. ಇನ್ನೂ ನಿರರ್ಗಳವಾಗಿಯೇ ಮಾತನಾಡಿದ.

“ಸಾರ್‌ ನಮ್ಮ ತಾತ ಒಬ್ಬರು ಇದ್ದರು. ನೇರವಾದ ತಾತ ಅಲ್ಲ. ಚಿಕ್ಕತಾತ ಅಂತ ಇಟ್ಟಕೊಳ್ಳಿ. ಅವರಿಗೆ ಮೂರು ಮದುವೆ ಆಗಿತ್ತು. ಅಷ್ಟು ವಯಸ್ಸಾಗಿದ್ದರೂ ಹೆಂಡತಿ ಮಲಗುವ ಕೋಣೆಗೆ ಹೋಗುವುದು ತಡವಾದರೆ, ವಿಪರೀತ ಚಡಪಡಿಸೋರು. ನಾವೆಲ್ಲ ಹಜಾರದಲ್ಲಿ ದೊಡ್ಡ ಜಮಖಾನದ ಮೇಲೆ ಒಬ್ಬರ ಪಕ್ಕ ಒಬ್ಬರು ಮಲಗಿರ‍್ತಿದ್ವಿ. ಸರಸದ ಪಿಸುಮಾತುಗಳನ್ನು ಕೇಳಿಸಿಕೊಂಡೇ ನಮಗೆಲ್ಲ ಚೆನ್ನಾಗಿ ನಿದ್ದೆ ಹತ್ತುತ್ತಿತ್ತು. ಆವಾಗ ಮಾತುಗಳು ಅರ್ಥ ಆಗ್ತಾ ಇರಲಿಲ್ಲ. ಏನೋ ಒಂದು Feel Good ಭಾವನೆ. ಚಿಕ್ಕತಾತ ಯಾವುದೇ ಮದುವೆಗೆ ಹೋದರೂ ಒಂದು ಬುದ್ಧಿಮಾತು ಹೇಳ್ತಾ ಇದ್ರು:

“ಯಾವ ಮದುವೇನೂ ಶೇಕಡ ೫೧ಕ್ಕಿಂತ ಹೆಚ್ಚು ಯಶಸ್ವಿಯಾಗೋಲ್ಲ. ಎಲ್ಲ ಕಾಲದಲ್ಲೂ, ಎಲ್ಲ ಸಂಸ್ಕೃತಿಯಲ್ಲೂ ದಾಂಪತ್ಯ ಜೀವನದ Peak Performance ಅಷ್ಟೇ. ಮನುಷ್ಯನ ಜಾಣತನ ಎಲ್ಲಿದೆ ಅಂದರೆ, ಅದು ಯಾವತ್ತೂ ಶೇಕಡ ೪೯ಕ್ಕಿಂದ ಕಡಿಮೆ ಆಗದಂತೆ ನೋಡಿಕೊಳ್ಳೋದು.” ನೋಡಿ ಸಾರ್‌, ಇದು ನವಿರಾದ ವ್ಯತ್ಯಾಸ. ಈ ವ್ಯತ್ಯಾಸ ನಮ್ಮ ಚಿಕ್ಕತಾತ ಭಾವಿಸಿದ ಹಾಗೆ ದಾಂಪತ್ಯಕ್ಕೆ ಮಾತ್ರವಲ್ಲ ತುಂಬಾ ಚಿಕ್ಕ ಆದರೆ ಸೂಕ್ಷ್ಮವಾದ ಮಾತು, ಗೆಳೆತನಕ್ಕೆ, ಮನುಷ್ಯರ, ದೇಶಗಳ ಎಲ್ಲ ಸಂಬಂಧಕ್ಕೂ ಕೂಡ ಅನ್ವಯಿಸುತ್ತೆ ಹೌದಲ್ಲವಾ ಸಾರ್‌?

***

ನಾನು ಮಗಳೊಡನೆ ತಮಾಷೆ ಮಾಡುತ್ತಾ ಈ ಮಾತನ್ನು ಉಲ್ಲೇಖಿಸಿದೆ. ದಿವಾಕರ್‌ನ ಹಿನ್ನೆಲೆ, ಮನೋಧರ್ಮ, ಸಾಧನೆಯನ್ನು ಕೂಡ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಟ್ಟೆ.

ಭಾರತಕ್ಕೆ ಹೊರಡುವ ಹಿಂದಿನ ದಿನ ಊಟದ ಟೇಬಲ್‌ನಲ್ಲಿ ಮಗಳು ಅಳಿಯಂದಿರಿಗೆ ದಿವಾಕರನ ಶೇಕಡಾವಾರು ನೋಟವನ್ನೇ ಒಂದು ತಮಾಷೆಯ ಮಾತಾಗಿ ಹೇಳಿದಳು. ಅಳಿಯಂದಿರಿಗೆ ಖುಷಿಯಾಯಿತು. ಮುಕ್ತವಾಗಿ ನಗುವುದಕ್ಕೆ ಸಂಕೋಚವಾಯಿತೇನೋ, ಇದು ಮಗಳಿಗೂ ಗೊತ್ತಾಯಿತು. ಮಾತು ಬದಲಾಯಿಸಲು, ರೇಗಿಸುವ ಒಂದು ಪ್ರಶ್ನೆ ಕೇಳಿದಳು:

“ನೋಡಪ್ಪಾ, ಪ್ರತಿ ಸಲ ನಿನ್ನನ್ನು ಭಾರತದಿಂದ ಹೊರಡಿಸಬೇಕಾದರೆ, ಎಷ್ಟು ಹರಸಾಹಸ ಪಡಬೇಕು. ನೀನು ಎಷ್ಟೊಂದು ಗೊಣಗಾಡುವೆ. ವಿದೇಶ ಪ್ರವಾಸದಲ್ಲೂ ಒಮ್ಮೊಮ್ಮೆ ದಿವಾಕರ್‌ ಥ​ರದವರು ಸಿಗಬಹುದಲ್ಲವಾ?”

ನನ್ನನ್ನು ರೇಗಿಸಲು ಈ ಪ್ರಶ್ನೆ ಕೇಳಿದ್ದರೂ, ಮಗಳು ಅಳಿಯಂದಿರ ಮುಖದ ಪ್ರಫುಲ್ಲತೆಗೆ ದಿವಾಕರ್‌ ಹೇಳಿದ್ದ ಒಳನೋಟವೇ ಕಾರಣ ಎಂಬುದು ಬಾಯಿಬಿಟ್ಟು ಹೇಳದೆ ಕೂಡ ಗೊತ್ತಾಗುತ್ತಿತ್ತು.

–00–00–00–