- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಒಬ್ಬ ಬರಹಗಾರ ಅದ್ಭುತವಾಗಿ ಬರೆಯುವಂತೆ ಅದ್ಭುತವಾಗಿ ಬದುಕಲಾರ.
ಪ್ರೊ.ಸಿದ್ದು ಯಾಪಲಪರವಿ
ಗುರು ಶಿಷ್ಯ ಪರಂಪರೆ ಇಂದು ಕ್ಷೀಣಗೊಂಡು ವ್ಯವಹಾರಿಕವಾಗಿದೆ.
ಅಧ್ಯಾತ್ಮ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗುರುಗಳ ಮಾರ್ಗದರ್ಶನ ಅನಿವಾರ್ಯ.
ಆದರೆ ಶಿಷ್ಯ ಬೆಳೆದಂತೆಲ್ಲ ಗುರುವಿನ ತ್ಯಾಗವನ್ನು ಮರೆತು ಬಿಡುತ್ತಾನೆ.
ಮರೆಯದೆ ಇರುವ ಶಿಷ್ಯರು ಉಂಟು.
ಸಂಗೀತ ಮತ್ತು ಅಧ್ಯಾತ್ಮ ರಂಗದಲ್ಲಿ ಗುರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾನೆ.
ಗುರುವನ್ನು ಎರಡು ಬಗೆಯಲ್ಲಿ ವಿಂಗಡಿಸಬಹುದು
- ಮೊದಲನೆಯದು ಗುರುವಿನ ವಿದ್ಯಾರ್ಹತೆ, ಕಲಿಸುವ ಸಾಮರ್ಥ್ಯ ಮತ್ತು ವೃತ್ತಿ ನೈಪುಣ್ಯತೆ,
- ಎರಡನೆಯದು ಗುರುವಿನ ವೈಯಕ್ತಿಕ ಬದುಕು ಮತ್ತು ಅಲ್ಲಿ ಅವನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಇರುವ ರೀತಿ ಭಿನ್ನವಾಗಿರುತ್ತದೆ.
ಪ್ರತಿಭೆಯಲ್ಲಿ ಅಸಾಮಾನ್ಯನಾಗಿದ್ದರೂ ವೈಯಕ್ತಿಕ ವ್ಯಕ್ತಿಯಾಗಿ ಸಾಮಾನ್ಯ ವ್ಯಕ್ತಿಯಂತೆ ದುರ್ಬಲನಾಗಿರಬಹುದು.
ಒಬ್ಬ ಶ್ರೇಷ್ಠ ಸಂಗೀತಗಾರ ಗಾನ ವಿದ್ಯೆಯಲ್ಲಿ ಅಪ್ರತಿಮನಾಗಿದ್ದರೂ ವೈಯಕ್ತಿಕವಾಗಿ ಅಸಹನೀಯ ದೌರ್ಬಲ್ಯಗಳನ್ನು ಹೊಂದಿರುತ್ತಾನೆ. ಆದ್ದರಿಂದ ಶಿಷ್ಯನಾದವನು ಕೇವಲ ಗುರು ಹೊಂದಿರುವ ಜ್ಞಾನವನ್ನು ಮಾತ್ರ ಸ್ವೀಕರಿಸಿ, ದೌರ್ಬಲ್ಯಗಳನ್ನು ಪ್ರಶ್ನಿಸಬಾರದು ಮತ್ತು ಪರಿಗಣಿಸಬಾರದು.
ಇದು ಕೇವಲ ಗುರುವಿಗೆ ಅನ್ವಯಿಸದೇ ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆ.
ಒಬ್ಬ ಶ್ರೇಷ್ಠ ವೈದ್ಯ ತನ್ನ ಚಿಕಿತ್ಸಾ ವಿಧಾನದಲ್ಲಿ ಅತ್ಯುತ್ತಮನಾಗಿ, ವೈಯಕ್ತಿಕ ಬದುಕಿನ ನಿರ್ವಹಣೆಯಲ್ಲಿ ಕನಿಷ್ಟನಂತೆ ನಡೆದುಕೊಂಡು ಮುಜುಗರ ಉಂಟು ಮಾಡುತ್ತಾನೆ.
ಆದರೆ ರೋಗಿ ಕೇವಲ ಚಿಕಿತ್ಸಾ ವಿಧಾನವನ್ನು ಮಾತ್ರ ಪರಿಗಣಿಸಬೇಕು.
ಒಬ್ಬ ಬರಹಗಾರ ಅದ್ಭುತವಾಗಿ ಬರೆಯುವಂತೆ ಅದ್ಭುತವಾಗಿ ಬದುಕಲಾರ.
ಉತ್ತಮ ಗುರುವಿಗೆ ಅಷ್ಟೇ ಉತ್ತಮ ಶಿಷ್ಯ ಸಿಗುವುದು ಸುಲಭವಲ್ಲ.
ಶಿಷ್ಯ ಗುರುವನ್ನು ಹುಡುಕುವಂತೆ,ಗುರು ಉತ್ತಮ ಶಿಷ್ಯನ ಹುಡುಕಾಟದಲ್ಲಿ ಇರುತ್ತಾನೆ.
ಲಕ್ಷಕ್ಕೊಬ್ಬ ಶ್ರೇಷ್ಠ ಗುರು-ಶಿಷ್ಯರು ಇತಿಹಾಸದ ಪುಟಗಳಲ್ಲಿ ದೊರಕುತ್ತಾರೆ.
ಕೃಷ್ಣ ಮತ್ತು ಅರ್ಜುನ, ಗೋವಿಂದ ಭಟ್ಟ ಮತ್ತು ಶರೀಫರು, ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು ಹೀಗೆ ಕೆಲವರನ್ನು ಮಾತ್ರ ಹೆಸರಿಸಬಹುದು.
ಉಳಿದ ಅನೇಕ ಗುರುಗಳು ಶಿಷ್ಯರಿಗೆ ಕೊಡಬೇಕಾದ ಸ್ವಾತಂತ್ರ್ಯ ಕೊನೆತನಕ ಕೊಡುವುದೇ ಇಲ್ಲ.
ಶ್ರೇಷ್ಠ ಅಧ್ಯಾತ್ಮ ಸಾಧಕರು, ಸಂತರು, ಮಠಾಧೀಶರು ಕೂಡ ಈ ಮಿತಿಗೆ ಹೊರತಾಗಿರುವುದಿಲ್ಲ.
ದೀಕ್ಷೆ ಪಡೆದ ಶಿಷ್ಯನ ಮೇಲೆ ಅನಿರೀಕ್ಷಿತವಾಗಿ ಅವಿಶ್ವಾಸ ತೋರಿಸಿ ದೂರ ಸರಿಸಿ ಬಿಡುತ್ತಾರೆ.
ಆಗ ಗುರು, ಶಿಷ್ಯನಿಗಿಂತ ಸಣ್ಣವನಾಗಿ ಬಿಡುತ್ತಾನೆ.
ಸಾಹಿತ್ಯ, ಸಂಗೀತ ಮತ್ತು ಅಧ್ಯಾತ್ಮ ಕ್ಷೇತ್ರಗಳಲ್ಲಿ ಅನೇಕ ಮಹನೀಯರ ಈ ದ್ವಂದ್ವ ನಿಲುವನ್ನು ಹತ್ತಿರದಿಂದ ಗಮನಿಸಿ ನೊಂದುಕೊಂಡಿದ್ದೇನೆ.
ಆದರೆ ಇತ್ತೀಚಿಗೆ ವ್ಯಕ್ತಿಯ ಮನಸ್ಥಿತಿಯನ್ನು ಆಳವಾಗಿ ಅಧ್ಯಯನ ಮಾಡಲು ಆರಂಭಿಸಿದ ಮೇಲೆ ಪ್ರತಿಯೊಬ್ಬ ವ್ಯಕ್ತಿ ಹೊಂದಿರುವ ವೈಯಕ್ತಿಕ ಮುಖ ಬಹುಪಾಲು ದುರ್ಬಲವಾಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ.
ಇದನ್ನು ನಾವು ದೊಡ್ಡವರ ಸಣ್ಣತನ ಎಂದು ವ್ಯಾಖ್ಯಾನಿಸಬಹುದು.
ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿ ನೊಂದುಕೊಳ್ಳುವ ಅಗತ್ಯವಿಲ್ಲ. ಹಾಗೆ ನೊಂದುಕೊಂಡರೆ, ಅದು ನಮ್ಮ ಮಿತಿಯಾಗಿ ನೋವನ್ನು ಅನುಭವಿಸುತ್ತೇವೆ.
ಪ್ರತಿಯೊಬ್ಬ ಪ್ರತಿಭಾ ಸಂಪನ್ನ ವ್ಯಕ್ತಿ ದೊಡ್ಡವನಾಗಿ ಬೆಳೆದು ಹೆಮ್ಮರವಾದ ಮೇಲೆ ಅರಿವಿಲ್ಲದೆ ಅಹಂಕಾರಿಯಾಗಿ ಬಿಡುತ್ತಾನೆ.
ಆಗ ಅತಿ ನೋವಾಗುವುದು ಅವನ ಶಿಷ್ಯರಿಗೆ ಮಾತ್ರ.
ಗುರುವಿನ ಬದಲಾವಣೆಗಳನ್ನು ಶಿಷ್ಯ ಸಹಿಸಲಾಗದೇ ಒದ್ದಾಡಿ ಬಿಡುತ್ತಾನೆ.
ಅನೇಕ ಗುರುಗಳ ತಾಕತ್ತು ವೈಯಕ್ತಿಕ ಬದುಕಿನ ಮಿತಿಯಿಂದಾಗಿ ಏರಬೇಕಾದ ಎತ್ತರಕ್ಕೆ ಏರುವುದಿಲ್ಲ.
ನದಿ ಮೂಲ, ಗುರು ಮೂಲ ಹುಡುಕಬಾರದು, ಅಷ್ಟೇ ಅಲ್ಲ ಗುರುವಿನ ಮಿತಿ ಮತ್ತು ದೌರ್ಬಲ್ಯಗಳನ್ನು ಸಹಿಸಿಕೊಂಡು ಅವನು ಕೊಡುವ ದೀಕ್ಷೆ ಪಡೆದುಕೊಂಡು ನಮ್ಮ ಮಾರ್ಗ ನಾವು ಕಂಡುಕೊಳ್ಳಬೇಕು.
ಗುರುವನ್ನು ಗೌರವಿಸಬೇಕು, ವ್ಯಕ್ತಿ ಪೂಜಕನಾಗಿ ಆರಾಧಿಸಬಾರದು. ‘ವ್ಯಕ್ತಿ ಪೂಜೆ’ ಒಂದಿಲ್ಲೊಂದು ದಿನ ನಮಗೆ ಭ್ರಮ ನಿರಸನ ಉಂಟು ಮಾಡುತ್ತದೆ.
ಇದು ಬದುಕಿನ ವಾಸ್ತವ.
ಪ್ರತಿಯೊಬ್ಬ ವ್ಯಕ್ತಿ ಬದುಕಿನಲ್ಲಿ ಎಲ್ಲರಿಂದಲೂ ಮುಕ್ತನಾಗುವ ಅನಿವಾರ್ಯತೆ ಇದೆ.
ಪಾಲಕರು, ಹೆಂಡತಿ, ಮಕ್ಕಳು, ಗೆಳೆಯರು,
ಗೆಳತಿಯರು ಮತ್ತು ಬದುಕು ಕಲಿಸಿದ ಗುರುವಿನಿಂದಲೂ ಮುಕ್ತನಾಗಬೇಕು.
ಮುಕ್ತನಾಗುವ ಪ್ರಸಂಗ ಬಂದಾಗ ದುಃಖ ಪಡದೆ ಬದುಕಿನ ನಿಜವಾದ ಮುಕ್ತಿ ಮಾರ್ಗವನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಗುರುವಿನ ಮಿತಿಯ ಕಾರಣವನ್ನು ಸ್ವೀಕರಿಸಬೇಕು.
‘ದೊರಕಿದಾ ಗುರು ದೊರಕಿದಾ’ ಎಂಬ ಭಾವನೆ ಅನಿರೀಕ್ಷಿತವಾಗಿ ಕೊನೆಗೊಳ್ಳಬಹುದು.
ಆದರೆ ದಕ್ಕಿದಷ್ಟು ಕಾಲ ಪ್ರತಿಯೊಂದು ಬಂಧನಗಳ ಸವಿಯನ್ನು ಸವಿಯಬೇಕು.
ಆ ಕಾಲ ಮುಗಿದ ನಂತರ ಸುಂದರವಾಗಿ ಕಳೆದ ಮಧುರ ನೆನಪುಗಳ ಮಳೆಯಲ್ಲಿ ಸಾಗುತ್ತ ತಂಪಿನ ಹಿತಾನುಭವ ಅನುಭವಿಸಬೇಕು.
ಮುಂದೆ ಇರುವ ‘ಗುರಿ’ ಹಿಂದೆ ಇರುವ ಗುರು ಮರೆಯಾದರೂ ಮುಂದೆ ಸಾಗಲು ಪ್ರೇರಕವಾಗಬೇಕು.
ಸಮಾಜದಲ್ಲಿರುವ ಸಾವಿರಾರು ಏಕಲವ್ಯರು ಎಚ್ಚರಿಕೆಯಿಂದ ಇರಬೇಕು. ನಾಜೂಕಾಗಿ ಹೆಜ್ಜೆ ಇಟ್ಟು ಮುಂದೆ ಸಾಗಬೇಕು.
ನಿಮಗೂ ಈ ಅನುಭವ ಆಗಿದ್ದರೆ ತಕ್ಷಣ ವ್ಯಕ್ತಿ ಪೂಜೆಯ ನಿಲ್ಲಿಸಿ,ಮನದ ಮೂಲೆಯಲ್ಲಿ ಗೌರವ ಕಾಪಿಟ್ಟುಕೊಂಡು ಮುಂದೆ ಸಾಗಿ ಬಿಡಿ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್