- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಮುತ್ತೈದೆಯರ ಶುಭ ಸಂಕೇತವೆಂದರೆ ಬಳೆಗಳು. ಅಧ್ಯಾತ್ಮ, ಅಲಂಕಾರ,ಆರೋಗ್ಯ ಹಾಗೂ ವೈಜ್ಞಾನಿಕ ಹಿನ್ನೆಲೆಯು ನಾವು ಬಳಸುವ ಬಳೆಗಳಿಗಿವೆ. “ಬಳೆ” ಎಂದರೆ ವೃತ್ತಾಕಾರದ ಒಂದು ವಸ್ತು. ಕೈಗಳಿಗೆ ಧರಿಸುವ ಆಭರಣ. ಬಳೆಗಳು ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಧರಿಸುತ್ತಾರೆ. ಘಳ ಘಳ ಸದ್ದು ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುವ ವಿಶಿಷ್ಟಗುಣ ಇದಕ್ಕಿದೆ. ಹೆಣ್ಣಿನ ಕೈಗೆ ಬಳೆಗಳು ಶೋಭೆ ತರುತ್ತವೆ. ಮೃದುವಾದ ಸುಕೋಮಲವಾದ ಕೋಮಲಾಂಗಿಯರು ಕೈತುಂಬಾ ಬಳೆತೊಟ್ಟು ಕೈ ಕುಲುಕಿದರೆ ಅದರ ನಾದವೇ ಬೇರೆ, ಸೊಬಗೇ ಬೇರೆ. ಬಳೆಗಳನ್ನು ಸನಾತನ ಧರ್ಮದಲ್ಲಿ ಲಕ್ಷ್ಮಿಯ ಸ್ವರೂಪವೆನ್ನುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಪಡೆದಿರುವ ಗಾಜಿನ ಬಳೆಗಳ ಕಾರುಬಾರು ಈಗ ಸಂಪೂರ್ಣ ಸ್ಥಗಿತವಾಗಿದೆ. ಹಿಂದೆ ಬಳೆ ತೊಡಿಸಿಕೊಳ್ಳುವುದೆಂದರೆ ಸಡಗರವೋ ಸಡಗರ! ಇವತ್ತಿನ ಹಾಗೆ ಹವಾನಿಯಂತ್ರಿತ ಅಂಗಡಿಗಳಿಗೆ ಹೋಗಿ ಕಾಗದದಲ್ಲಿ ಸುತ್ತಿಸಿಕೊಂಡು ಒಂದು ಸ್ಟ್ಯಾಂಡಿಗೋ.. ಡ್ರೆಸಿಂಗ್ ಟೇಬಲ್ಗೋ …ತೊಡಿಸುವುದಾಗಿರಲಿಲ್ಲ.
ಬಳೆಗಾರರೇ ಮನೆ-ಮನೆಗೆ ಬಂದು ಬಳೆ ತೊಡಿಸುತ್ತಿದ್ದರು. ಹೆಗಲ ಮೇಲೆ ಮಲ್ಹಾರವನ್ನು ಅಂದರೆ ಬಳೆಯ ಕುಚ್ಚುಗಳನ್ನು ಕಾಟನ್ ಬ್ಯಾಗನಲ್ಲಿ ಒಪ್ಪವಾಗಿ ಜೋಡಿಸಿ ತರುತ್ತಿದ್ದರು. ಬಳೆದಿಂಡುಗಳನ್ನು ಹಾಗೆ ಸುಕುಡಿದಾರದಲ್ಲಿ ಕಟ್ಟಿದ ತೋಡವನ್ನು ಒಂದೊಂದೇ ದಿಂಡುಗಳನ್ನು ತೆಗೆಯುತ್ತಿದ್ದರಂತೂ ಇನ್ನು ಚೆನ್ನಾಗಿರುವ ಬಳೆಗಳಿರಬಹುದು! ಇರಬಹುದು ಎಂಬ ಕುತೂಹಲ ನೆಟ್ಟಿರುತ್ತಿತ್ತು. (ಕುಚ್ಚುಗಳಲ್ಲಿ ಕನಿಷ್ಟ ೬ ಡಜನ್ಗಳಂತೆ ೧೦ ಬಿಡಿ ತೊಡಗಳು ಇದ್ದು ಇದನ್ನು ಹೆಗಲ ಮೇಲೆ ಹಾಕಿಕೊಳ್ಳುವುದು ಬ್ಯಾಗನಲ್ಲಿ ತೋಡ ಅಂದರೆ ೧೨ ಡಜನ್ ಬಳೆಗಳು, ದಿಂಡು ಅಂದರೆ ೧೨ ಡಜನ್ ಬಲೆಗಳು ಜೊತೆಗೆರಟ್ಟಿನ ಬಾಕ್ಸನಲ್ಲಿ ಮಕ್ಕಳಿಗೆ ಕರ್ಪೂರದ ಬಳೆಗಳನ್ನು ಸ್ಪ್ರಿಂಗ್ ಬಳೆಗಳನ್ನು ತರುತ್ತಿದ್ದರು ಇದೆಲ್ಲಾ ಸೇರಿದರೆ ಆಗುವುದು ಮಲ್ಹಾರ) ಒಂದರ್ಥದಲ್ಲಿ ಹೆಣ್ಣು ಮಕ್ಕಳಿಗೆ ತವರಿಗೆ ಸುದ್ದಿ ತಲುಪಿಸಲು ಇದ್ದ ಸಂದೇಶ ವಾಹಕರೇ ಬಳೆಗಾರರೆಂದು ಹೇಳಬಹುದು. ಅದಕ್ಕೆಂದೇ ಜಾನಪದ ತ್ರಿಪದಿಗಳಲ್ಲಿ “ಭಾಗ್ಯಾದ ಬಳೆಗಾರ ಹೋಗಿ ಬಾ ನನ ತವರೀಗೆ” ಎಂಬ ಸಾಲು ಉಲ್ಲೇಖವಾಗಿರುವುದು. ಬಳೆಯ ಮಲ್ಹಾರಕ್ಕೆ ಪೂಜೆ ಸಲ್ಲಿಸಿ ನಮಸ್ಕಾರ ಸಲ್ಲಿಸಿ ಬಳೆಗಾರರಿಂದಲೇ ಕೈಗೆ ಬಳೆ ತೊಡಿಸಿಕೊಳ್ಳುವುದು ಭಾವತ್ಮಕ ಸನ್ನಿವೇಶವಾಗಿರುತ್ತಿತ್ತು.ಆ ಬಳೆಗಾರರೋ ಎದುರು ಕುಳಿತ ಹೆಣ್ಣು ಮಗಳ ಕೈಗೆ ಹೊಂದುವಂತಹ (೨.೦,೨,೨.೪,೨.೬ ಹೀಗೆ ಎಡಗೈ ಹಾಗು ಬಲಗೈ ಆಳತೆ ಬೇರೆ ಇರುತ್ತದೆ,ತಣ್ಣೀರಿಗೆ ಕೈ ಹಾಕಿದನಂತರ ಕೈ ಒರಟಾದರೆ ಬಳೆ ವ್ಯರ್ಥವಾಗುತ್ತವೆ) ಅಳತೆಯ ಬಳೆಗಳನ್ನು ತೆಗೆದುಕೊಂಡು ಒಡೆದ ಬಳೆಗಳನ್ನು ಬಲಗೈಯಲ್ಲಿ ಫಲುಕಿಸಿ ಎಡಗೈ ಬೆರಳುಗಳಿಗೆ ಹಾಕಿಕೊಂಡು ಹೆಣ್ಣು ಮಕ್ಕಳಿಗೆ ಜೋಪಾನವಾಗಿ ಅವರ ಆಸೆಗೆ ತಕ್ಕಂತೆ ಅಂದರೆ ತುಂಬಾ ಬಿಗಿಯಾಗಿ,ಸಡಿಲವಾಗಿ,ಇಲ್ಲ ಎರಡು ಕಲರ್ ಬಳೆಗಳನ್ನು ಮಿಶ್ರ ಮಾಡಿ ತೊಡಿಸುತ್ತಿದ್ದರು. ನಂತರ ಹಳೆಯ ಬಳೆಗಳನ್ನು ಅಷ್ಟೇ ಜೋಪಾನವಾಗಿ ಒಡೆದು ತೆಗೆದು ಹೆಚ್ಚಿಗೆ ಎರಡು ಬಳೆ ಹಾಕಿದರಂತೂ ಹೆಣ್ಣು ಮಕ್ಕಳು ಬಳೆಗಾರರ ಕಾಲಿಗೆ ಸಂತೋಷದಿಂದ ನಮಸ್ಕಾರ ಮಾಡುತ್ತಿದ್ದರು. ಈಗ ಇದೆಲ್ಲಾ ಇದೆಯೇ? ಈಗ ಹೇಳಿದರೆ ಇದೆಲ್ಲಾ ಹಳೆ ಕತೆ ಎನ್ನುತ್ತಾರೆ. ಹಿಂದೆ ಬಳೆಗಾರರು ಕಾಲ್ನಡಿಗೆಯಲ್ಲಿಯೇ ವ್ಯಾಪಾರ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಬಳೆಗಳನ್ನು ಕಬ್ಬ್ಬಿಣದ ಸ್ಟ್ಯಾಂಡಿಗೆ ಹಾಕಿ ವ್ಯಾಪಾರ ಮಾಡಿದ ದಿನಗಳು ಮುಗಿದು ಈಗ ದ್ವಿಚಕ್ರವಾಹನಗಳಲ್ಲಿ ಬಳೆ ವ್ಯಾಪಾರವಾಗುತ್ತಿದೆ.
ಜಾತ್ರೆ ಸುಗ್ಗಿ ಹಬ್ಬಗಳಲ್ಲಿ ಬಳೆ ಹಾಕಿಸಿಕೊಳ್ಳುವುದೆಂದರೆ ಬಹಳ ವಿಶೇಷ. ಮೈಸೂರು ಮಲ್ಲಿಗೆ ಚಲನಚಿತ್ರದಲ್ಲಿ “ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹೆನು” ಎಂಬ ಗೀತೆಯಲ್ಲಿ ಹೆಣ್ಣೊಬ್ಬಳ ಬಯಕೆಯನ್ನೂ, ಮಾವನ ಮೇಲೆ ಮುನಿಸಿಕೊಂಡ ಹೋರಾಟಗಾರ ಪತಿಗೆ ಹೇಳುವ ಪರಿ ಭಾವನಾತ್ಮಕವಾಗಿದೆ. ಬಳೆಗೆ ಕಂಕಣ ಎಂದೂ ಕರೆಯುತ್ತಾರೆ. ಇವುಗಳನ್ನು ಹೆಣ್ಣು ಮಕ್ಕಳು ತೊಡುತ್ತಾರೆ ಎಂದಾದರೆ ಇದರಲ್ಲಿ ಪ್ಲೇನ್ ಬಳೆಗಳು , ಪಟ್ಟಿ ಬಳೆ, ಶಾಣೆಬಳೆ, ರೇಷ್ಮೆ ಬಳೆ, ಗಿಲಿಟ್ ಬಳೆಗಳು, ಬಾಕ್ಸ್ ಬಳೆಗಳು, ಹಂಪನಕಟ್ಟೆ ಬಳೆ ಎಂದೆಲ್ಲಾ ವಿಧಗಳಿವೆ. ಚಿನ್ನದ ಬಳೆಗಳಲ್ಲಿ ವಂಕಿ ಬಳೆ, ಕಡಗ, ಪಿಂಬಳೆ, ಲಾಕಿಬಳೆ, ಹರಳಿನ ಬಳೆ ಹವಳದ ಬಳೆ. ಮುತ್ತಿನ ಬಳೆ, ಕರಿಮಣಿ ಬಳೆ, ವಜ್ರದ ಬಳೆ, ನವರತ್ನದ ಬಳೆ, ಕೂರ್ಗಿ ಬಳೆ, ಬ್ರೇಸ್ಲೆಟ್, ಟೆಕ್ಸ್ಟ್ ಕಡಗ, ಪ್ಲಾಟಿನಂ, ವೈಟ್ ಗೋಲ್ಡ್ ಬಳೆಗಳನ್ನು ಕಾಣಬಹುದು. ಬಂಗಾರದ ಬಳೆಗಳಲ್ಲಿ ಬೆಂಗಾಲಿ ಹಾಗು ಆಂಟಿಕ್ ಡಿಸೈನ್ಗಳು ಚೆನ್ನಾಗಿರುತ್ತವೆ.ಗಂಡಸರೂ ಕೂಡ ತಿರುಪು ಇರುವ ಕಲಾತ್ಮಕ ಕೆಲಸವಿರುವ ಕಡಗಗಳನ್ನು, ಒಂಟಿಬಳೆಗಳನ್ನು ಹಾಕುತ್ತಾರೆ ಇವುಗಳನ್ನು ಕಪ್ಪಗಳೆಂದು ಕರೆಯುತ್ತಾರೆ. ಹೆಣ್ಮಕ್ಕಳು ಎರಡೂ ಕೈಗೆ ಬಳೆ ಹಾಕುವುದು ಅಪರೂಪ ಒಂದು ಕೈಗೆ ಬಳೆ ಇನ್ನೊಂದು ಕೈಗೆ ವಾಚ್ ಧರಿಸುವುದು ವಾಡಿಕೆ ಅದರಲ್ಲೂ ಈ ಮೊಬೈಲ್ ಬಂದು ಈಗಂತೂ ಬಳೆನೂ ಇಲ್ಲ! ವಾಚೂ ಇಲ್ಲ!.
ಶುಭ ಸಮಾರಂಭ ಅಂದರೆ ಒಸಗೆ, ಮದುವೆ, ಸೀಮಂತಗಳಲ್ಲಿ ಬಳೆಗೆ ಶ್ರೇಷ್ಠ ಸ್ಥಾನ. ಅದಕ್ಕೆ ಮದುವೆಯಲ್ಲಿ ‘ಬಳೆ ಶಾಸ್ತ್ರ’ ಎನ್ನುವುದು. ಬಾಗಿನ, ತಾಂಬೂಲ, ಅರಿಶಿಣ ಕುಂಕುಮ ನೀಡುವ ಸಂಧರ್ಭದಲ್ಲಿ ಬಳೆಗಳಿಗೆ ಮುಖ್ಯ ಆದ್ಯತೆ. ಅಂತಹ ಬಳೆಗಳನ್ನುಲೇಸ್, ಬಣ್ಣ ಬಣ್ಣದ ದಾರಗಳಿಂದ ಅಲಂಕರಿಸಿರುತ್ತಾರೆ. ಸಾವಿನ ಸಂದರ್ಭದಲ್ಲಿ ಅಂದರೆ ಗಂಡ ತೀರಿದ ಸಂದರ್ಭದಲ್ಲಿ ಬಳೆ ತೆಗೆಸುವುದು, ಆರಾಧನೆಯ ಸಂದರ್ಭದಲ್ಲಿ ಬಳೆ ನೋಡುವುದು ಇತ್ಯಾದಿ ಇತ್ಯಾದಿ ಕರೆಯುತ್ತಿದ್ದರು.ಆದರೆ ನಾವು ಪ್ರಜ್ಞಾವಂತರಾಗಿ ಆಲೋಚಿಸಿ ಬಳೆ ತೊಡಿಸಿ ಸಂತೋಷ ಪಡಬೇಕೇ ವಿನಃ ಬಳೆ ತೆಗೆಸಿ ವಿಕೃತಿ ಮೆರೆಯಬಾರದು. ಹೆಣ್ಣು ಮಕ್ಕಳು ಯಾವ ಯಾವ ರೀತಿಯ ಬಳೆಗಳನ್ನು ಹಾಕಿಕೊಂಡಿರುತ್ತಾರೋ ಅದರ ಮೇಲೆ ಅವರ ಅಭಿರುಚಿಯನ್ನು ನೋಡಬಹುದಾಗಿದೆ. ಬಳೆ ತೊಟ್ಟುಕಂಡವರ ಕೈಗಳನ್ನು ನೋಡುವ ಸಂಭ್ರಮವೇ ಬೇರೆ.ಅದಕ್ಕೆ “ಬಂಧಿ ಇಕ್ಕಿದೋಳ ಬಂಧಾನ ನೋಡು ಕಂಕಣ ಇಕ್ಕದೋಳ ಕೈ ನೋಡು “ ಎಂಬ ಗಾದೆಯನ್ನು ಹೇಳುತ್ತಿದ್ದರು. ಇಂದಿಗೂ ಹಿರಿಯರು, ಬಂಧುಗಳು ಹೆಣ್ಣು ಮಕ್ಕಳಿಗೆ ಬಳೆ ಹಾಕಿಸಿಕೋ ಎಂದು ಹಣ ನೀಡುವುದು ಇದೆ.
ನಾಜೂಕಿನ ಬದುಕಿನ ಈ ಕಾಲದಲ್ಲಿ ನಾಜೂಕಾದ ಗಾಜಿನ ಬಳೆಗಳನ್ನು ಸಂಭಾಳಿಸುವುದೇ ನಮ್ಮ ಹೆಣ್ಣು ಮಕ್ಕಳಿಗೆ ದೊಡ್ಡ ವಿಷಯ. ಚಿಕ್ಕ ಮಕ್ಕಳು ಬಳೆಗಳು ಒಡೆದು ಹೋಗಬಹುದೇನೋ ಎಂದು ಜೋಪಾನವಾಗಿ ಆಡುವುದು ಒಂದು ವೇಳೆ ಅವು ಒಡೆದರೆ ಬೇಸರಿಸುವುದು, ಹೆಂಗಸರು ಜಗಳಕ್ಕೆ ನಿಲ್ಲುವಾಗ ಬಳೆ ಸರಿಸಿಕೊಂಡು ಜಗಳಕ್ಕೆ ನಿಲ್ಲುವುದು ಇತ್ತು. ಇನ್ನು ಕೆಲವರು ಬಸ್ ಪ್ರಯಾಣದಲ್ಲಿ ನರುಕಿ ಹೋಗುತ್ತವೆಂದು, ಮಲಗಿದಾಗ ನರುಕುತ್ತವೆಂದು, ಬರೆಯಲು, ಬಿರುಸಾಗಿ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಬಳೆ ಊರಿ ಬರೀ ಕೈಯಲ್ಲಿ ಇದ್ದುಬಿಡುತ್ತಾರೆ. ಇನನು ಕೆಲವರು ಕೈ ತುಂಬಾ ಬಳೆ ಹಾಕಿಕೊಂಡರೆ ಎಲ್ಲಿ ಏನೆನ್ನತ್ತಾರೋ ಎಂದು ಹೆದರಿ ಸುಮ್ಮನಾಗುವುದಿದೆ. ಬಳೆ ತೊಟ್ಟುಕೊಂಡಮೇಲೆ ಕೈಗಳನ್ನು ಒಂದರ ಮೇಲೊಂದು ಕೈ ಇಟ್ಟು ,ಒಂದೇ ಕೈ ಕುಲುಕಿಸಿ, ಕೆಲವೊಮ್ಮೆ ಎರಡೂ ಕೈ ಚಾಚಿ ತನ್ನ ಬಳೆ ಹಾಗು ಕೈಗಳನ್ನು ನೋಡುತ್ತದ್ದರು. ಕೈ ತುಂಬಾ ಬಳೆ ಹಾಕಿಕೊಂಡು ಫೋಟೊ ತೆಗೆದಿರಿಸಿಕೊಳ್ಳುವುದು ಕೆಲವರಿಗೆ ಇಷ್ಟ.
ಮುತ್ತೈದೆಯರ ಸಮೃದ್ಧಿಯ ಸಂಕೇತ ಗಾಜಿನ ಬಳೆಗಳಿಂದ ನಿರ್ಮಾಣವಾಗುವ ನಾದಲಹರಿಗಳಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ ಸಂವೇದನೆಯ ಮೂಲಕ ಇಂದ್ರಿಯಗಳ ಶಾತ್ವಿಕತೆ ಹೆಚ್ಚಾಗುತ್ತದೆ. ಬಳೆ ಧರಿಸುವುದರಿಂದ ಸ್ತ್ರೀಯರಲ್ಲಿನ ಕ್ರೀಯಾಶಕ್ತಿಯ ಜಾಗ್ರತವಾಗಿ ದೇಹ ಶುದ್ಧಿಯಾಗುತ್ತದೆ. ಬಳೆಗಳ ಚಲನವಲನದಿಂದ ರಜೋಗುಣ ಸಂಪನ್ನವಾಗಿ ಕ್ರೀಯಾಶೀಲತೆ ಹೆಚ್ಚಾಗುತ್ತದೆ. ಬಳೆಗಳ ಲಹರಿಯಿಂದ ಜಾಗೃತವಾದ ಶಕ್ತಿ ತತ್ವದ ದಿಸೆಯಿಂದ ಸ್ತ್ರೀಯರ ಪ್ರಾಣಮಯ ಮತ್ತು ಮನೋಮಯ ಕೋಶಗಳು ಶುದ್ಧಿಯಾಗಲು ಸಹಾಯವಾಗುತ್ತದೆ. ಇಂತಹ ಕ್ರಿಯಾ ಶಕ್ತಿಯ ಲಹರಿಗಳು ದೇಹಕ್ಕೆ ಸ್ಪರ್ಶವಾಗುವುದರಿಂದ ಜೀವದ ಸೂರ್ಯನಾಡಿಯು ಕಾರ್ಯನಿರತವಾಗಿ ಶಕ್ತಿ ಲಹರಿಗಳು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತವೆ. ನಾದಲಹರಿ ಎಂದಾಗ ಕೆ.ಎಸ್.ನ.ರವರ ಅಕ್ಕಿ ಆರಿಸುವಾಗ ಗೀತೆಯಲ್ಲಿ “ಕಲ್ಲ ಹರಳನ್ನು ಹುಡುಕಿ ಎಲ್ಲಿಗೊ ಎಸೆವಾಗ ಝಲ್ಲೆನ್ನವ ಬಳೆಯ ಸದ್ದು” ಎಂದು ಬರೆಯುತ್ತಾರೆ. ಮತ್ತೊಬ್ಬ ಕವಿ “ನನ್ನವ್ವನ ಬಳೆಯ ಕಿಂಕಿಣಿಗೆ ಬೆಳಗಾಯ್ತು” ಎಂದು ಬರೆಯುತ್ತಾರೆ ಅಂದರೆ ಬಳೆಯ ಕಲರವವೇ ಬೇರೆ ಬಿಡಿ.
ಬಳೆಗಳನ್ನು ಕುಮಾರಿಯರ ಹಾಗು ಮುತ್ತೈದೆಯರ ಮಹತ್ವದ ಅಲಂಕಾರಿಕ ಆಭರಣ ಎನ್ನಬಹುದು. ಮಣ್ಣು, ಗಾಜು, ಲೋಹ, ಶಂಖ, ಅರಗು, ಆನೆಯ ದಂತ ಮುಂತಾದವುಗಳಿಂದ ಬಳೆಗಳನ್ನು ಮಾಡಿರುತ್ತಾರೆ. ಫ್ಯಾಷನ್ ಎಂಬಂತೆ ಮರದ ಬಳೆಗಳನ್ನು, ತೆಂಗಿನ ಚಿಪ್ಪಿನ ಬಳೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಗಾಜಿನ ಬಳೆಗಳು ಒಡೆದರೆ, ನಷ್ಟ ಎನ್ನದೆ ಬಳಸಿ ಬೇಜಾರಾದರೆ ಗೃಹಾಲಂಕಾರಕ್ಕೆ ಬಳಸಬಹುದು. ಆಧುನಿಕರು ಅದೇ ಹಳತಾದ ಬಳೆಗಳಿಗೆ ಲೇಸ್, ಉಲನ್, ರೇಷ್ಮೆದಾರ ಸುತ್ತಿ ಟಿಕಲ್ಸ್ ಮಿಂಚು ಇತ್ಯಾದಿ ಹಾಕಿ ಧಿರಿಸಿಗೆ ಹೊಂದುವ ಬಳೆಗಳನ್ನು ತಯಾರಿಸಿಕೊಳ್ಳುತ್ತಾರೆ. ಇನ್ನು ಕೆಲವರು ಆಧುನಿಕ ರಂಗೋಲಿ ವಿನ್ಯಾಸಕ್ಕೆ ಬಳಸುತ್ತಾರೆ. ಇನ್ನು ಕೆಲವರು ಹೊತ್ತು ಹೋಗುತ್ತಿಲ್ಲವೆಂದು ಅದೇ ಬಳೆ ಬಿಚ್ಚಿಕೊಂಡು ಆಟವಾಡುತ್ತಾರೆ.
“ಲೋಕೋ ಭಿನ್ನ ರುಚಿಃ”ಎಂಬಂತೆ ಭಾರತದಾದ್ಯಂತ ಒಂದೊಂದು ಪ್ರಾಂತ್ಯದವರು ಒಂದೊಂದು ರೀತಿಯ ಬಳೆಗಳನ್ನು ಹಾಕಿಕೊಳ್ಳುತ್ತಾರೆ. ದಕ್ಷಿಣ ಭಾರತದ ಸ್ತ್ರೀಯರು ಬಂಗಾರದ ಬಳೆಯ ನಡುವೆ ಗಾಜಿನ ಬಳೆಗಳನ್ನು ಧರಿಸಿದರೆ ಪಶ್ಚಿಮ ಬಂಗಾಲದಲ್ಲಿ ಮಹಿಳೆಯರು ಶಂಖದಿಂದ ಮಾಡಿದ ಬಳೆಗಳನ್ನು, ಹವಳದಿಂದ ಮಾಡಿದ ಬಳೆಗಳಿಗೆ ಗಾಜಿನ ಬಳೆಗಳನ್ನು ಸೇರಿಸಿ ಹಾಕುತ್ತಾರೆ. ಇವುಗಳ ಮೇಲೆ ಚಿನ್ನದ ಕುಸುರಿ ಕೆಲಸವೂ ಇರುತ್ತದೆ. ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಮದುವೆಯಾದ ಸ್ತ್ರೀಯರು ‘ಚೂಡಾ’ ಎಂದು ಕರೆಯುವ ಬಳೆಗಳನ್ನು, ಬಂಜಾರ ಮುಂತಾದ ಅಲೆಮಾರಿಗಳು ತೋಳಿನವರೆಗೂ ಬಳೆ ಹಾಕುತ್ತಾರೆ. ತೋಳು ಅಂದಾಗ ಮಂತ್ರವಾದಿಗಳು ದೈವೀ ಆರಾಧಕರು ಹಾಕುವ ತಾಮ್ರದ ಒಂಟಿ ಬಳೆಗಳು ನೆನಪಾಗುತ್ತವೆ.ಇರಲಿ ಪಂಜಾಬ್ ಪ್ರಾಂತ್ಯದ ಹೆಣ್ಣು ಮಕ್ಕಳು ಮದುವೆ ಸಂದರ್ಭದಲ್ಲಿ ದೊಡ್ಡ ದೊಡ್ಡ ಜುಮುಕಿಗಳಿರುವ ಬಳೆಗಳನ್ನು.ಎಲ್ಲಾ ಬೆರಳುಗಳನ್ನು ಉಂಗುರ ಹಾಗು ಸರಪಳಿಗಳಿಂದ ಸೇರಿಸಲ್ಪಟ್ಟ ಒಂದೇ ಬಳೆಯನ್ನು ಹಾಕುವುದಿದೆ.ಕೊಡಗಿನ ಮದುವಣಗಿತ್ತಿಯರು ಇಂತಹ ಬಳೆಗಳನ್ನು ಹಾಕಿರುತ್ತಾರೆ. ಗಾಜಿನ ಬಳೆಗಳನ್ನು ಕೊಡಗು ಹಾಗು ಮಂಗಳೂರು ಪ್ರಾಂತ್ಯದವರು ಕುಪ್ಪಿ ಬಳೆಗಳೆನ್ನುತ್ತಾರೆ. ಗಾಜಿನ ಬಳೆಗಳ ಬಣ್ಣಕ್ಕೆ ಬಂದಂತೆ ಬೇರೆ ಬೇರೆ ಬಣ್ಣದ ಬಳೆಗಳು ಬೇರೆ ಬೇರೆ ಪರಿಭಾಷೆಗಳ ಪ್ರತೀಕವಾಗುತ್ತವೆ. ಶ್ರೀಮಂತರು ಬಡವರೆನ್ನದೆ ತೊಡುವ ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು ಎಂದಾಗ ಕೆಂಪು, ಹಸಿರು, ಕಪ್ಪು ಬಳೆಗಳಿಗೆ ವಿಶೇಷ ಸ್ಥಾನ. ಕಪ್ಪು ಬಳೆಗಳನ್ನು ಮಕ್ಕಳಿಗೆ ದೃಷ್ಟಿ ತೆಗೆಯುವ ವಿಧಾನವಾದ ಚಿಟಿಕೆ ಹಾಕುವುದಕ್ಕೆ ಬಳಸುತ್ತಾರೆ.
ಹಸಿರು ಬಳೆಗಳು ಒಳ್ಳೆಯ ಅದೃಷ್ಟಕ್ಕಾಗಿ ಹಾಗು ಸಮೃದ್ಧಿಗಾಗಿ ಬಳಸುವುದಿದೆ. ಹಂಸಲೇಖ ರಚಿತ ಲತಾ ಹಂಸಲೇಖ ಹಾಡಿರುವ ಹಸಿರು ಗಾಜಿನ ಬಳೆಗಳು ಗೀತೆ ತುಂಬಾ ಪ್ರಸಿದ್ಧವಾದುದು. ಸ್ತ್ರೀಕುಲದ ಶುಭ ಸ್ವರ, ಕೈಗಳಿಗೆ ಶೃಂಗಾರ, ಕಾಮನ ಬಿಲ್ಲಿಗೆ ಇದರ ಸಾಟಿ ನಿಲ್ಲದು, ಋಷಿಗಳ ಸಂಯಮ ಇದರ ಮುಂದೆ ನಿಲ್ಲದು ಎಂದು ಎಷ್ಟು ಅರ್ಥಪೂರ್ಣವಾಗಿ ಬರೆದಿದ್ದಾರೆ ಅಲ್ಲವೇ !
ಕೆಂಪು ಬಳೆಗಳನ್ನು ದೇವಿ ಆರಾಧನೆಯ ಸಂಕೇತವಾಗಿ ಹಾಗು ಸಮೃದ್ಧಿಯ ಸಂಕೇತವಾಗಿ ಹಾಕುತ್ತಾರೆ. ಅರಿಶಿಣದ ಬಳೆಗಳನ್ನು ಸಂತೋಷಕ್ಕಾಗಿ,ಆತ್ಮವಿಶ್ವಾಸದ ಸಂಕೇತವಾಗಿ,ಬಿಳಿ ಬಣ್ಣದ ಬಳೆಗಳನ್ನು ಹೊಸ ಪ್ರಾರಂಭಕ್ಕಾಗಿ, ಕೇಸರಿ ಅಥವಾ ಕಿತ್ತಳೆ ಬಣ್ನದ ಬಳೆಗಳನ್ನು ಯಶಸ್ಸಿನ ಸಂಕೇತವಾಗಿ ಹಾಕಿಕೊಳ್ಳುತ್ತಾರೆ. ಪಂಚಲೋಹದ ಬಳೆಗಳನ್ನು ದೃಷ್ಟಿದೋಷ,ಆರೋಗ್ಯಕ್ಕೆ ತೊಡುತ್ತಾರೆ.
ಬೆಳ್ಳಿಯ ಬಳೆಗಳನ್ನು ದೇಹಕ್ಕೆ ತಂಪು, ಆರೋಗ್ಯಕ್ಕೂ ಒಳ್ಳೆಯದು ಎಂದೂ ಶಕ್ತಿ ಹಾಗು ಸಾಮರ್ಥ್ಯದ ದ್ಯೋತಕವೆಂದೂ ಧರಿಸುವುದಿದೆ. ಬಂಗಾರದ ಬಳೆಗಳನ್ನು ಕೊನೆಯಾಗದ ಸಂಪತ್ತು, ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿಗಾಗಿ ಹಾಕುತ್ತಾರೆ. ಹಿಂದೆ ಬಹಳ ಶ್ರೀಮಂತರು ತಮ್ಮ ಮಕ್ಕಳಿಗೆ ವಧುವನ್ನು ಅರಸಿ ಹೋದಾಗ ವಧು ಪಕ್ಕ ಆಯಿತು ಎಂದಾಗ ತಮ್ಮ ಕೈಯಲ್ಲಿದ್ದ ಬಂಗಾರದ ಬಳೆಗಳನ್ನು ತೊಡಿಸಿ ವಿವಾಹ ನಿಶ್ಚಯ ಮಾಡುತ್ತಿದ್ದರು. ಉತ್ತರ ಕರ್ನಾಟಕದಲ್ಲಿ ಮದುವಣಗಿತ್ತಿಯರು ಮದುವೆಗೆ ಹಸಿರು ಬಳೆಗಳನ್ನು, ಇನ್ನು ಕೆಲವರು ಕೆಂಪುಬಳೆಗಳನ್ನು,ದಕ್ಷಿಣ ಕರ್ನಾಟಕದಲ್ಲಿ ಕಪ್ಪು ಬಳೆಗಳನ್ನು ಧರಿಸುತ್ತಾರೆ. ಅಂದ ಹಾಗೆ ಮದುವಣಗಿತ್ತಿಯರು ತೊಡುವ ಬಳೆಗಳು ಅವರವರ ಸಂಪ್ರದಾಯಕ್ಕೆ ಬಿಟ್ಟಿದ್ದು. ಮದುವೆಯ ಸಂದರ್ಭದಲ್ಲಿ ತೊಟ್ಟ ಬಳೆಗಳನ್ನು ಒಂದು ವರ್ಷದವರೆಗೂ ಬಿಚ್ಚುವಂತಿಲ್ಲ ಎಂದಿದ್ದರೂ ಆಧುನಿಕರು ಸಂಜೆ ಹೊತ್ತಿಗೆ ಮದುವೆ ಬಳೆ ಕಳಚಿ ಮ್ಯಾಚಿಂಗ್ ಬಳೆಗಳನ್ನು ತೊಟ್ಟು ಆರತಕ್ಷತೆಗೆ ನಿಲ್ಲುತ್ತಾರೆ.
ಭಾರತದಲ್ಲಿ ಬಳೆಗಳ ತಯಾರಿ ಹಾಗು ಮಾರುಕಟ್ಟೆಗೆ ಹೆಸರಾಗಿರುವುದು ಫಿಸ್ರೋಜಾಬಾದ್. ಇದನ್ನು ವಿವಾಹ ನಗರಿ ಎಂದೂ ಕರೆಯುವುದಿದೆ. ಹೈದರಾಬಾದ್ನಲ್ಲೂ ಚೂಡಿ ಬಜಾರ್, ಲಾಡ್ ಬಜಾರ್ ಎಂಬ ಬಳೆಗಲ ಮಾರುಕಟ್ಟಗಳಿವೆ. ಎಷ್ಟೇ ಬಂಗಾರದ ಬಳೆಗಳಿದ್ದರೂ ಕೈಯಲ್ಲಿ ಗಾಜಿನ ಬಳೆ ಇದ್ದರೆ ಲಕ್ಷಣ. ಗಾಜಿನ ಬಳೆ ತರುವ ಮೆರುಗೇ ಬೇರೆ! ಸೋಲ ಶೃಂಗಾರ್ ಎನ್ನುವ ಹೆಣ್ಣು ಮಕ್ಕಳ ಹದಿನಾರು ಶೃಂಗಾರ ಸಾಮಾಗ್ರಿಗಳಲ್ಲಿ ಬಳೆಗೇ ಆದ್ಯತೆ. ದೇವೀ ಪೂಜಾ ಸಾಮಾಗ್ರಿಗಳಲ್ಲೂ ಬಳೆ ಬಿಚ್ಚೋಲೆಗೇ ಆದ್ಯತೆ. ಅಲ್ಲದೆ ಕೆಲವು ದೇವೀ ದೇವಸ್ಥಾನಗಳಲ್ಲಿ ಬಳೆಯೇ ಪ್ರಸಾದ ಉದಾಹರಣೆಗೆ ವೈಷ್ಣೋದೇವಿ,ಕರ್ನಾಟಕದಲ್ಲಿ ಗೊರವನಹಳ್ಳಿ ಇತ್ಯಾದಿ. ವರಮಹಾಲಕ್ಷ್ಮಿ ಹಬ್ಬ, ಗೌರಿ ಹಬ್ಬ, ದೀಪಾವಳಿಹಬ್ಬಗಳು ಜಾತ್ರೆಗಳು ಬಳೆಗಳ ಖರೀದಿಗೆ ಉತ್ತಮ ಸಮಯ ಆಯ್ಕೆಯ ದೃಷ್ಟಿಯಿಂದ. ಆದರೆ ಬರುಬರುತ್ತಾ ಒಳ್ಳೆಯ ಗಾಜಿನ ಬಳೆಗಳಿಗೂ ತತ್ವಾರ. ಗುಣಮಟ್ಟ ಹಾಗು ಆಯ್ಕೆ ಎರಡೂ ಕಡಿಮೆಯಾಗಿವೆ. ಮದುವೆಯಾದ ಸ್ತ್ರೀಯರು ಸಮೃದ್ಧಿಯ ಜೊತೆಗೆ ಗಂಡನ ದೀರ್ಘಾಯುಷ್ಯಕ್ಕೂ ಬಳೆಗಳನ್ನು ಧರಿಸುತ್ತಾರೆ. ಬಳೆಗಳ ವಿಚಾರದಲ್ಲಿ ಸಹೃದಯಿಗಳಾರು ಒಲವರ ಮಾಡುವುದಿಲ್ಲ ಶುದ್ಧ ಮನಸ್ಸಿನಿಂದ ಕೊಡುತ್ತಾರೆ, ಕೊಡಿಸುತ್ತಾರೆ. ಬಳೆಕೊಡಿಸುವುದೂ ಹೆಮ್ಮೆಯ ವಿಚಾರ ಅಲ್ವೇ! ಅಂದ ಹಾಗೆ ಗಾಜಿನ ಬಳೆ ತಯಾರು ಮಾಡುವವರ, ಮಾರುವವರ ಬದಕು ಬಂಗಾರವಾಗಿದೆ ಎನ್ನಬೇಡಿ ಆಧುನಿಕತೆ ಅವರ ಬದುಕನ್ನು ಕಸಿದಿದೆ. ಕಾರಣ ಗಾಜಿನ ಬಳೆಗಳ ಸ್ಥಾನವನ್ನು ಇತರ ಲೋಹದ ಬಳೆಗಳು ಕಸಿದಿವೆ.
ಆಧುನಿಕತೆ ಹೆಚ್ಚಾದಂತೆ ಗಾಜಿನ ಬಳೆಗಳು ಕಡಿಮೆಯಾಗಿ ಪ್ಲಾಸ್ಟಿಕ್,ಕಬ್ಬಿಣ,ವೈಟ್ಮೆಟಲ್, ರಬ್ಬರ್ ಬಳೆಗಳು ಅಲಂಕಾರಕ್ಕೆ ಬಂದಿವೆ ಆರೋಗ್ಯದ ದೃಷ್ಟಿಯಿಂದ ಇವುಗಳು ಅಷ್ಟು ಒಳ್ಳೆಯವಲ್ಲ. ಚರ್ಮಕಾಯಿಲೆ, ತುರಿಕೆ, ಅಲರ್ಜಿಗೆ ಕಾರಣವಾಗುತ್ತವೆ. ಶ್ರೀಗೋಲ್ಡ್ಕವರಿಂಗ್, ಗ್ಯಾರಂಟಿ ಗೋಲ್ಡ್, ಬ್ಲ್ಯಾಕ್ ಮೆಟಲ್, ವೈಟ್ಮೆಟಲ್, ಪ್ಲಾಸ್ಟಿಕ್ ಇಟಾಲಿಯನ್ ಬಳೆಗಳು ಹೊಸ ಜನಾಂಗದ ಇಷ್ಟವಾಗಿವೆ. ಫೈವ್ಸ್ಟಾರ್,ಚಾಂಧ್ರಾತ್,ಹೆಸರಿನ ಬಳೆಗಳು ಈಗ ಲಭ್ಯವಿವೆ.ಚಲನಚಿತ್ರಗಳು ಅತೀ ಹೆಸರಾದಾಗ ಅದರ ಪ್ರಭಾವಕ್ಕೆ ಒಳಗಾಗಿ ಅವವೇ ಹೆಸರಿನ ಬಳೆಗಳು, ಸೀರೆಗಳು, ರಿಬ್ಬನ್ಗಳು ಬರುವುದಿತು. ನಾನು ತುಂಬಾ ಚಿಕ್ಕವಳಿದ್ದಾಗ ನನ್ನ ಸೋದರತ್ತೆ ಹಾಗು ಚಿಕ್ಕಮ್ಮ ‘ಬಂಧನ’, ‘ಆಶಿಕಿ’, ‘ರಾಮಾಚಾರಿ’ ಹೆಸರಿನ ಬಳೆಗಳನ್ನು ಕೊಡಿಸಿದ್ದು, ಬಳೆ ಒಡೆದುಕೊಂಡು ಬೈಗುಳ ತಿಂದಿದ್ದೂ, ಎಷ್ಟು ಕೊಡಿಸಿದರೂ ಇನ್ನೂ ಬೇಕಿತ್ತು ಎಂಬ ಕೊರಗು ಅನುಭವಿಸಿದ ದಿನಗಳು ಈಗ ನೆನಪು ಅಷ್ಟೆ !
ಹಾಗೆ ಮಾತನಾಡುವಾಗ ಕೆಲವರು “ಬಳೆ ಹಾಕಿಸುತ್ತೇನೆ”ಎಂಬ ಮಾತನ್ನು ವ್ಯಂಗ್ಯವಾಗಿ ಅಂದರೆ ಬಂಧಿಸುತ್ತೇವೆ ಎಂಬ ಧಾಟಿಯಲ್ಲಿ ಹೇಳುವುದಿದೆ ಹಾಗೆ ಗಂಡಸರಿಗೆ “ಬಳೆ ತೊಟ್ಟುಕೋ” ಎಂದು ಅಪಮಾನ ಸೂಚಕವಾಗಿಯೂ ಹೇಳುವುದಿದೆ. ಅಂದರೆ “ಬಳೆ ಹೆಣ್ಮಕ್ಕಳ ಸ್ವತ್ತು” ಎಂದು. ಏನೇ ಆದರೂ ಬಳೆಗಳು ಮುತ್ತೈದೆತನದ ಸಂಕೇತ. ಹೆಣ್ಣಿನ ಮನದಾಸೆಯ ಎಲ್ಲಾ ಇಂಗಿತಗಳು ಬಳೆಯ ಮೂಲಕವೇ ಗೋಚರವಾಗುತ್ತವೆ. ಪೂರ್ಣ ಚಂದ್ರ ತೇಜಸ್ವಿಯವರು ‘ಕೃಷ್ಣೇಗೌಡನ ಆನೆ’ ಕತೆಯಲ್ಲಿ “ನಮ್ಮಕಡೆ ಕೆಮ್ಮು ಕಾಲಿಂಗ್ ಬೆಲ್ ಇದ್ದ ಹಾಗೆ ” ಎಂದಂತೆ “ನಮ್ಮ ಹೆಣ್ಣು ಮಕ್ಕಳ ಭಾವಾಭಿವ್ಯಕ್ತಿ ಈ ಬಳೆಗಳು.” ಬಳೆ ತೊಟ್ಟ ಕೈ ಯಾವಾಗಲೂ ಬಾಗುತ್ತವೆ ಅಂದರೆ ಮಮತೆಯ ಸಂಕೇತ,ಬಳೆಗಳು ಯಾವಾಗಲೂ ಬಳಕುತ್ತವೆ ಅಂದರೆ ಕ್ರಿಯಾಶೀಲತೆಯ ಸಂಕೇತ.
ಹೆಣ್ಣು ಮಕ್ಕಳ ಮೂಳೆಗಳ ರಚನೆ ಪುರುಷರಿಗಿಂತ ಮೃದುವಾಗಿರುತ್ತದೆ. ಮಣ್ಣು, ಬಂಗಾರ, ಹಾಗೂ ಬೆಳ್ಳಿಯಿಂದ ಮಾಡಿದ ಬಳೆಗಳು ಶಕ್ತಿ ಸಂಚಯನದ ಮೂಡಿಸಿ ದೇಹದ ದೈನಂದಿನ ಕ್ರಿಯೆಗೆ ಸಹಕರಿಸುತ್ತವೆ. ನಾಡಿ ಬಡಿತದ ಗತಿ ಸಾಮಾನ್ಯವಾಗಿಸುವ ಶಕ್ತಿ ಈ ಬಳೆಗಳಿಗಿದೆ. ಮಣಿಕಟ್ಟು ಹಾಗು ಬಳೆಗಳ ಓಡಾಟ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಬಳೆ ಕೇವಲ ಅಧ್ಯಾತ್ಮ, ಅಲಂಕಾರ ಅಲ್ಲ ವೈಜ್ಞಾನಿಕ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಅಲಂಕಾರ, ಆರೋಗ್ಯ ಬಳೆಗಳಿಂದ ಇದೆ ಎಂದ ಮೇಲೆ ಖಾಲಿ ಕೈ ಏಕೆ ಮನವೊಪ್ಪುವ ಬಳೆಗಳಿಂದ ಸಿಂಗಾರವಾಗೋಣ ಅಲ್ವೇ….!
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್