- ತಿರುಮಲೇಶ್ ಅವರ ಬರಹದ ಕುರಿತು - ನವೆಂಬರ್ 22, 2020
- ಸಂಸ್ಕ್ರುತಕ್ಕೆ ಹಿಂದಿದ್ದ ಹಿರಿಮೆ ಇಂದಿಲ್ಲ - ನವೆಂಬರ್ 18, 2020
ಹಿಂದಿನ ಕಾಲದಲ್ಲಿ ಬಾರತದಲ್ಲೆಲ್ಲ ಮುಕ್ಯವಾಗಿ ಸಂಸ್ಕ್ರುತವೇ ತಿಳಿವಿನ ಒಯ್ಯುಗೆ (ಮಾದ್ಯಮ)ಯಾಗಿ ಬಳಕೆಯಾಗುತ್ತಿತ್ತು; ಬೇರೆ ಬೇರೆ ನುಡಿಗಳನ್ನಾಡುತ್ತಿದ್ದ ತಿಳಿವಿಗರು ತಾವು ಕಂಡುಕೊಂಡಿದ್ದ ಹೊಸ ಹೊಸ ತಿಳಿವುಗಳನ್ನು ಬೇರೆ ತಿಳಿವಿಗರಿಗೆ ತಿಳಿಸುವುದಕ್ಕಾಗಿ ಸಂಸ್ಕ್ರುತ ಬರಹವನ್ನೇ ಬಳಸುತ್ತಿದ್ದರು. ಹಾಗಾಗಿ, ಆ ಸಮಯದಲ್ಲಿ ಸಂಸ್ಕ್ರುತವನ್ನು ಕಲಿಯುವುದು ತಿಳಿವಿಗರೆನ್ನಿಸಿಕೊಳ್ಳಲು ಮತ್ತು ಸಮಾಜದಲ್ಲಿ ಮುಂದೆ ಬರಲು ತುಂಬಾ ಅವಶ್ಯವಾಗಿತ್ತು.
ಆದರೆ, ಇವತ್ತು ಸಂಸ್ಕ್ರುತ ಆ ರೀತಿ ಹೊಸ ಹೊಸ ತಿಳಿವುಗಳ ಒಯ್ಯುಗೆ ಯಾಗಿ ಉಳಿದಿಲ್ಲ; ಹಿಂದಿ, ಮರಾಟಿ, ಬಂಗ್ಲಾ, ಕನ್ನಡ, ತೆಲುಗು ಮೊದಲಾದ ಇವತ್ತಿನ ನುಡಿಗಳೇ ಆ ಜಾಗವನ್ನು ಆಕ್ರಮಿಸಿಕೊಂಡಿವೆ. ಹಾಗಾಗಿ, ಇವತ್ತು ತಾವು ಕಂಡುಕೊಂಡಿರುವ ಹೊಸ ತಿಳಿವುಗಳನ್ನು ಸಂಸ್ಕ್ರುತದಲ್ಲಿ ಬರೆಯುವವರು ಯಾರೂ ಇಲ್ಲ.
ಈ ಕಾರಣಕ್ಕಾಗಿ, ಇವತ್ತು ತಿಳಿವಿಗರೆನ್ನಿಸಿಕೊಳ್ಳಲು ಸಂಸ್ಕ್ರುತವನ್ನು ಕಲಿತೇ ತೀರಬೇಕೆಂಬ ಒತ್ತಾಸೆಯಿಲ್ಲ; ಹಿಂದಿನ ಕಾಲದವರು ಕೂಡಿಟ್ಟಿದ್ದ ತಿಳಿವುಗಳನ್ನು ಪಡೆಯಬೇಕೆಂದಿರುವವರು ಮಾತ್ರ ಇವತ್ತು ಆ ಬರಹವನ್ನು ಕಲಿಯಬೇಕಾಗು ತ್ತದೆ; ಆದರೆ, ಅಂತಹ ತಿಳಿವುಗಳಲ್ಲೂ ಹಲವನ್ನು ಕನ್ನಡ, ಮರಾಟಿ ಮೊದ ಲಾದ ಇವತ್ತಿನ ಬರಹಗಳಲ್ಲೂ ಕೂಡಿಡಲಾಗುತ್ತಿದೆಯಾದ ಕಾರಣ, ಅವುಗಳ ಮೂಲಕವೂ ಆ ತಿಳಿವುಗಳನ್ನು ಪಡೆಯಲು ಬರುತ್ತದೆ.
ಹೀಗಿದ್ದರೂ, ಹಿಂದಿದ್ದ ಸಂಸ್ಕ್ರುತದ ಹಿರಿಮೆಯನ್ನು ಇವತ್ತಿಗೂ ಉಳಿಸಿಕೊಳ್ಳ ಬೇಕೆಂಬ ತುಡಿತ ಕೆಲವರಲ್ಲಿದೆ, ಮತ್ತು ಇದಕ್ಕಾಗಿ ಅವರು ಬೇರೆ ಹಲವಾರು ವಿಶಯಗಳನ್ನು ಕಲ್ಪಿಸಿಕೊಂಡು ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಸಂಸ್ಕ್ರುತ ದೇವರ ನುಡಿ, ಎಲ್ಲಾ ನುಡಿಗಳಿಗೂ ಅದು ತಾಯಿನುಡಿ, ಅದನ್ನು ಕಲಿತಲ್ಲಿ ಬೇರೆ ನುಡಿಗಳನ್ನು ಕಲಿಯುವ ಕೆಲಸ ಸುಲಬವಾಗುತ್ತದೆ, ಅದರ ಪದಗಳನ್ನು ಸರಿಯಾಗಿ ಉಲಿಯಲು ಮತ್ತು ಬರೆಯಲು ಬಾರದಿದ್ದರೆ ಅದು ಒಬ್ಬ ವ್ಯಕ್ತಿಯ ಕೀಳ್ತನವನ್ನು ಮತ್ತು ಅರಿಯಮೆಯನ್ನು ಸೂಚಿಸುತ್ತದೆ ಎಂಬಂತಹ ಹಲವು ತಪ್ಪು ಅನಿಸಿಕೆಗಳನ್ನು ಅವರು ಜನರಲ್ಲಿ ಬಿತ್ತುತ್ತಿದ್ದಾರೆ.
ಇದರಿಂದಾಗಿ, ಕನ್ನಡ ಬರಹದಲ್ಲಿ ಸಂಸ್ಕ್ರುತ ಎರವಲುಗಳನ್ನು ಬರೆಯುವಾಗ ಅವನ್ನು ಓದುವ ಹಾಗೆ ಬರೆದರೆ ಸಾಕು, ಸಂಸ್ಕ್ರುತದಲ್ಲಿರುವ ಹಾಗೆ ಬರೆಯ ಬೇಕಾಗಿಲ್ಲ ಎಂಬ ನನ್ನ ಮಾತು ಕೆಲವು ಮಂದಿ ಕನ್ನಡಿಗರಿಗೆ ಒಪ್ಪಿಗೆಯಾಗುವು ದಿಲ್ಲ. ಸಂಸ್ಕ್ರುತ ಪದಗಳನ್ನು ಆ ರೀತಿ ಮಾರ್ಪಡಿಸುವುದೆಂದರೆ ಎಂತಹದೋ ಒಂದು ದೊಡ್ಡ ತಪ್ಪನ್ನು (ಇಲ್ಲವೇ ಪಾಪವನ್ನು) ಎಸಗುವಂತೆ ಎಂಬುದಾಗಿ ಅವರಿಗೆ ಅನಿಸುತ್ತದೆ.
ಇಂತಹದೊಂದು ಅನಿಸಿಕೆ ಕನ್ನಡಿಗರಲ್ಲಿ ಎಶ್ಟು ಜೋರಾಗಿ ನೆಲೆನಿಂತಿದೆ ಯೆಂಬುದಕ್ಕೆ ಒಂದು ಎತ್ತುಗೆಯನ್ನು ಕೊಡಬಹುದು: ಸಾಮಾನ್ಯವಾಗಿ ಕೂಡು ಬಲೆ(ಇಂಟರ್ನೆಟ್)ಯಲ್ಲಿ ಬರೆಯುವವರು ಬರಹದ ಹಲವು ಕಟ್ಟಲೆಗಳನ್ನು ಮುರಿಯುತ್ತಿರುತ್ತಾರೆ;
ಇಂಗ್ಲಿಶ್ನಲ್ಲಿ ಬರೆಯುವವರು ಅದರ ಪದಗಳ ಸ್ಪೆಲ್ಲಿಂಗ್ನಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡುತ್ತಿರುವುದು ಇದಕ್ಕೊಂದು ಎತ್ತುಗೆ. ಇಂತಹ ಮಾರ್ಪಾಡುಗಳೆಲ್ಲ ಬರಹವನ್ನು ಮಾತಿಗೆ ಹತ್ತಿರ ತರುತ್ತಿದ್ದು, ಇದನ್ನು ಬರಹದ ಮೇಲೆ ಮಾತಿನ ಸವಾರಿ ಎಂಬುದಾಗಿ ಮೇಲೆ ಅಯ್ದನೇ ಪಸುಗೆಯಲ್ಲಿ ಕರೆಯಲಾಗಿದೆ.
ಆದರೆ, ಕನ್ನಡದ ಬ್ಲಾಗುಗಳಲ್ಲಿ ಬರೆಯುವವರಲ್ಲಿ ಹೆಚ್ಚಿನವರೂ ಕನ್ನಡದ ಸ್ಪೆಲ್ಲಿಂಗ್ ಕಟ್ಟಲೆಗಳನ್ನು, ಅದರಲ್ಲೂ ಋ, ಷ, ಮತ್ತು ಮಹಾಪ್ರಾಣಗಳ ಬಳಕೆಯನ್ನು ಬಿಟ್ಟುಕೊಡಲು ಹೋಗುವುದಿಲ್ಲ. ಇವನ್ನು ಬರೆಯುವಲ್ಲಿ ಹಲವು ತಪ್ಪುಗಳನ್ನು ಮಾಡಬಹುದು; ಆದರೆ, ಸಂಸ್ಕ್ರುತ ಎರವಲು ಪದಗಳನ್ನು ಓದು ವಂತೆಯೇ ಬರೆಯಲು ಹೋಗುವವರು ತುಂಬಾ ಅಪರೂಪ.
ಸಂಸ್ಕ್ರುತ ಎರವಲುಗಳ ಕುರಿತಾಗಿ ಜನರಲ್ಲಿರುವ ಈ ತಪ್ಪು ಅನಿಸಿಕೆಯನ್ನು ಹೋಗಲಾಡಿಸುವುದಕ್ಕಾಗಿ ನಿಜಕ್ಕೂ ಸಂಸ್ಕ್ರುತ ಬರಹದಲ್ಲಿ ಅಂತಹ ಅದ್ಬುತ ವಾದುದೇನೂ ಇಲ್ಲ ಎಂಬುದನ್ನು ತೋರಿಸಿಕೊಡಬೇಕಾಗಿದೆ; ಎಂದರೆ, ಬೇರೆಲ್ಲಾ ಬರಹಗಳ ಹಾಗೆ ಅದೂ ಒಂದು ಬರಹ ಮಾತ್ರ, ನಮ್ಮ ದೇಶದಲ್ಲಿ ಅದು ಕೆಲವು ಶತಮಾನಗಳಶ್ಟು ಸಮಯ ತಿಳಿವಿನ ಒಯ್ಯುಗೆಯಾಗಿ ಬಳಕೆಯಲ್ಲಿ ಉಳಿಯಲು ಕಾರಣಗಳು ಬೇರೆಯೇ ಇವೆ, ಆ ಬರಹದ ಪರಿಚೆಗಳು ಯಾವುವೂ ಇದಕ್ಕೆ ಕಾರಣವಲ್ಲ ಎಂಬುದನ್ನು ತೋರಿಸಿಕೊಡಬೇಕಾಗಿದೆ.
ಇವತ್ತು ಇಡೀ ಜಗತ್ತಿನಲ್ಲಿ ತಿಳಿವಿನ ಒಯ್ಯುಗೆಯಾಗಿ ಇಂಗ್ಲಿಶ್ ಬರಹ ಬಳಕೆಗೆ ಬಂದಿದೆ; ಆದರೆ, ಇದಕ್ಕೂ ಆ ಬರಹದ ಪರಿಚೆಗಳು ಯಾವುವೂ ಕಾರಣವಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು; ನಿಜಕ್ಕೂ ಸ್ಪೆಲ್ಲಿಂಗ್ನ ಮಟ್ಟಿಗೆ ಅದು ತುಂಬಾ ತೊಡಕು ತೊಡಕಾದ ಬರಹ; ಹಾಗಿದ್ದರೂ ಅದು ಇವತ್ತು ಜಗತ್ತಿನ ಬರಹವಾಗಿದೆ.
ಹೀಗಾಗಿರುವುದಕ್ಕೆ ಇಂಗ್ಲಿಶ್ ಬರಹವನ್ನು ಬಳಸುತ್ತಿದ್ದವರು ಜಗತ್ತಿನ ಹಲವು ದೇಶಗಳನ್ನು ತಮ್ಮ ಆಳ್ವಿಕೆಗೊಳಪಡಿಸಿದುದು, ಮತ್ತು ತಿಳಿವಿನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಹಾಗೂ ಕೂಡುಬಲೆಯಲ್ಲಿ ಅವು ಸಂಗ್ರಹಗೊಳ್ಳು ವಂತೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದುದು ಮುಕ್ಯವಾದ ಕಾರಣವಿರಬೇಕು.
ತುಂಬಾ ತೊಡಕು ತೊಡಕಾಗಿರುವ ಚಯ್ನೀಸ್ ಬರಹವೂ ಜಪಾನ್, ಕೊರಿಯಾ, ವಿಯಟ್ನಾಮ್ ಮೊದಲಾದ ಹಲವು ನಾಡುಗಳಲ್ಲಿ ಇಂತಹದೊಂದು ತಿಳಿವಿನ ಒಯ್ಯುಗೆಯಾಗಿ ಬಳಕೆಯಲ್ಲಿತ್ತು.
ಹಾಗಾಗಿ, ಯಾವುದೇ ಒಂದು ನುಡಿಯ ಬರಹವೂ ಬೇರೆ ಬೇರೆ ಕಾರಣ ಗಳಿಂದಾಗಿ ಹಲವು ನುಡಿಗಳನ್ನು ಬಳಸುವ ಜನರಿಗೆ ತಿಳಿವಿನ ಒಯ್ಯುಗೆಯಾಗಿ ಬಳಕೆಗೆ ಬರಲು ಸಾದ್ಯವಿದೆ; ಹಾಗಾದುದಕ್ಕಾಗಿ ಆ ಬರಹವನ್ನೇ ಒಂದು ಅದ್ಬುತವಾದ ಬರಹವೆಂಬುದಾಗಿ ಕೊಂಡಾಡುವ ಅವಶ್ಯಕತೆಯಿಲ್ಲ, ಮತ್ತು ಅದರ ಪದಗಳನ್ನು ಇನ್ನೊಂದು ನುಡಿಯ ಬರಹದಲ್ಲಿ ಎರವಲಾಗಿ ಪಡೆದು ಬಳಸುವಾಗ ಅವುಗಳಲ್ಲಿ ಮಾರ್ಪಾಡುಗಳನ್ನು ನಡೆಸುವುದು ಒಂದು ದೊಡ್ಡ ಅಪರಾದ ಎಂಬುದಾಗಿ ತಿಳಿಯಬೇಕಾಗಿಲ್ಲ.
ಸಂಸ್ಕ್ರುತ ಒಂದು ಬಾಶೆಯಲ್ಲ, ಬರಹ ಮಾತ್ರ
ಸಂಸ್ಕ್ರುತವನ್ನು ಸಾಮಾನ್ಯವಾಗಿ ಒಂದು ಬಾಶೆ’ ಎಂಬುದಾಗಿ ಕರೆಯುವುದು ವಾಡಿಕೆ.ಆದರೆ, ಬಾಶೆಯೆಂದು ಕರೆಸಿಕೊಳ್ಳಲು ಎಂತಹ ಪರಿಚೆಗಳೆಲ್ಲ ಬೇಕಾಗುತ್ತವೆಯೋ ಅವುಗಳಲ್ಲಿ ಹೆಚ್ಚಿನವೂ ಸಂಸ್ಕ್ರುತದಲ್ಲಿಲ್ಲ.ಹಾಗಾಗಿ,ಅದನ್ನು ಒಂದು ಬಾಶೆಯೆಂದು ಕರೆಯುವ ಬದಲು,ಬರಹವೆಂದು ಕರೆದರೇನೇ ಸರಿಯಾಗಬಲ್ಲುದು.ಸಂಸ್ಕ್ರುತ ಎಂಬ ಪದವನ್ನು ಕ್ರುತಮಾಡಿದುದು’ಎಂಬ ಪದಕ್ಕೆ ಸಮ್ ಚನ್ನಾಗಿ’ಎಂಬ ಮುನ್ನೊಟ್ಟನ್ನು ಸೇರಿಸಿ ಉಂಟುಮಾಡಲಾಗಿದೆ;ಎಂದರೆ,ಅದಕ್ಕೆ
ಚನ್ನಾಗಿ ಕಟ್ಟಿದ’ ಇಲ್ಲವೇ ಚನ್ನಾಗಿ ಮಾಡಿದ’ಎಂಬ ಹುರುಳಿದೆ.ಒಂದು ಬರಹವನ್ನು ಚನ್ನಾಗಿ ಕಟ್ಟಬಹುದು,ಇಲ್ಲವೇ ಚನ್ನಾಗಿ ಮಾಡಬಹುದು; ಆದರೆ,ಒಂದು ಮಾತನ್ನು ಇಲ್ಲವೇ ನುಡಿಯನ್ನು ಆ ರೀತಿ ಚನ್ನಾಗಿ ಕಟ್ಟಲು ಇಲ್ಲವೇ ಮಾಡಲು ಬರುವುದಿಲ್ಲ.ಅದು ಸ್ವಾಬಾವಿಕವಾಗಿ,ಚಿಕ್ಕ ಮಕ್ಕಳ ಬೆಳವಣಿಗೆಯ ಅಂಗವಾಗಿ ಹೊರಹೊಮ್ಮುವಂತಹದು,ಮತ್ತು ಕಾಲದಿಂದ ಕಾಲಕ್ಕೆ,ತಲೆಮಾರಿನಿಂದ ತಲೆಮಾರಿಗೆ ತಾನಾಗಿಯೇ ಬದಲಾಗುತ್ತಾ ಹೋಗುವಂತಹದು.ಸಂಸ್ಕ್ರುತವನ್ನು ಒಮ್ಮೆ ಚನ್ನಾಗಿ ಮಾಡಿದ ಮೇಲೆ,ಅದು ಇವತ್ತಿನ ವರೆಗೂ ಬದಲಾಗದೆ ಹಾಗೆಯೇ ಉಳಿದಿದೆ. ಹಾಗಾಗಿ,ಅದು ಆಮೇಲೆ ಒಂದು ಬರಹವಾಗಿ ಮಾತ್ರ ಇದ್ದಿರಲು ಸಾದ್ಯ.ಮಾತು ಇಲ್ಲವೇ ಬಾಶೆಯಾಗಿದ್ದಲ್ಲಿ ಅದು ಆ ರೀತಿ ಬದಲಾಗದೆ ಉಳಿದಿರಲಾರದು.ವೇದಕಾಲದ ನುಡಿ ಈ ರೀತಿ ಬದಲಾಗದೆ ಉಳಿದಿರಲಿಲ್ಲ;ಅದು ಕಾವ್ಯಗಳ ಕಾಲದ ಸಂಸ್ಕ್ರುತವಾಗಿ ಬದಲಾಗಿದೆ;ಆದರೆ,ಆಮೇಲೆ ಸಂಸ್ಕ್ರುತಕ್ಕೆ ಪಾಣಿನಿಯ ವ್ಯಾಕರಣದ ಕಟ್ಟು ಬಂದಿದ್ದು,ಆ ಕಟ್ಟನ್ನು ಕಳಚಿ ಬರಹವನ್ನು ಸರಿಪಡಿಸುವ ಆಸಕ್ತಿಯನ್ನು ಸಂಸ್ಕ್ರುತದ ಬರಹಗಾರರು ತೋರಿಸಲೇ ಇಲ್ಲ. ಕಾವ್ಯಗಳ ಕಾಲದಲ್ಲಿ ತಯಾರಾಗಿರುವ ಸಂಸ್ಕ್ರುತದ ಬರಹಗಳೆಲ್ಲವೂ ಪಾಣಿನಿಯ ವ್ಯಾಕರಣ ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಿಕೊಂಡು ಬಂದಿವೆ.ಇದರಿಂದಾಗಿ,ಕಳೆದ ಎರಡು ಸಾವಿರ ವರ್ಶಗಳಿಂದಲೂ ಅದು ಬದಲಾಗದೆ ಉಳಿದಿದೆ ಮಾತ್ರವಲ್ಲ, ಹೆಚ್ಚು ಹೆಚ್ಚು ಕ್ರುತಕವಾಗುತ್ತಾ ಹೋಗಿದೆ.ಸಂಸ್ಕ್ರುತ ಈ ರೀತಿ ಒಂದು ತೀರ ಕ್ರುತಕವಾದ
ಬರಹ’ ಮಾತ್ರವಾಗಿ ಉಳಿದಿದೆಯಾದರೆ, ಪ್ರಾಕ್ರುತ (ಇದಕ್ಕೆ ಸ್ವಾಬಾವಿಕವಾದುದು’ಎಂಬ ಹುರುಳಿದ್ದು,ಇದನ್ನು
ಪ್ರಕ್ರುತಿ’ ಎಂಬ ಪದದಿಂದ ಪಡೆಯಲಾಗಿದೆ) ತನ್ನನ್ನು ಬದಲಾವಣೆಗಳಿಗೆ ತೆರೆದುಕೊಂಡಿದೆ; ನಿಜಕ್ಕೂ ಪ್ರಾಕ್ರುತ ಎಂಬುದು ಸಂಸ್ಕ್ರುತದ ಹಾಗೆ ಒಂದೇ ಬಗೆಯ ಬರಹವಲ್ಲ; ಅದರಲ್ಲಿ ಹಲವು ಬಗೆಗಳಿವೆ; ಇವು ಆಮೇಲೆಯೂ ಬದಲಾಗುತ್ತಾ ಹೋಗಿ ಇವತ್ತಿನ ಹಿಂದಿ, ಪಂಜಾಬಿ, ಬಂಗಾಲಿ, ಮರಾಟಿ, ಗುಜರಾತಿ ಮೊದಲಾದ ನುಡಿಗಳಾಗಿವೆ, ಮತ್ತು ಆ ಮೂಲಕ ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡಿವೆ.
ಮಾತು ಮತ್ತು ಬರಹಗಳ ನಡುವಿನ ವ್ಯತ್ಯಾಸವೇನೆಂಬುದನ್ನು, ಮತ್ತು ಬಾಶೆ ಇಲ್ಲವೇ ನುಡಿ ಎಂಬುದು ಮುಕ್ಯವಾಗಿ ಮಾತಲ್ಲದೆ ಬರಹವಲ್ಲ ಎಂಬು ದನ್ನು ಎರಡನೇ ಪಸುಗೆಯಲ್ಲಿ ವಿವರಿಸಲಾಗಿದೆ.‘ಮಾತು ಎಂದೆನ್ನಿಸಿಕೊಳ್ಳಲು ಬೇಕಾಗುವಂತಹ ಜೀವಂತಿಕೆ ಸಂಸ್ಕ್ರುತಕ್ಕಿಲ್ಲವಾದ ಕಾರಣ, ಅದನ್ನೊಂದು ಬರಹವೆಂದು ಕರೆಯಬೇಕಲ್ಲದೆ, ಬಾಶೆ ಇಲ್ಲವೇ ನುಡಿ ಎಂದು ಕರೆಯುವುದು ಸರಿಯಲ್ಲ.
(ಕ) ಅಳಿದ ಮತ್ತು ಅಳಿಯುತ್ತಿರುವ ನುಡಿಗಳು
ಇಂಗ್ಲಿಶ್ನಲ್ಲಿ ನುಡಿಗಳನ್ನು ಜೀವಂತ (Living) ನುಡಿಗಳು ಮತ್ತು ಸತ್ತ (Dead) ನುಡಿಗಳು ಎಂಬುದಾಗಿ, ಮತ್ತು ಉಳಿದ ಮತ್ತು ಅಳಿದ (Extinct) ನುಡಿಗಳು ಎಂಬುದಾಗಿ ಎರಡು ಬಗೆಯಲ್ಲಿ ಗುಂಪಿಸಲಾಗುತ್ತದೆ.
ಅಮೆರಿಕಾದ ಮೂಲನಿವಾಸಿಗಳ ನುಡಿಗಳಲ್ಲಿ ಹಲವನ್ನು ಇವತ್ತು ಕೆಲವೇ ಕೆಲವು ಮಂದಿ ಮುದುಕರು ಮಾತ್ರ ಬಳಸುತ್ತಿದ್ದಾರೆ; ಮಕ್ಕಳು ಅವುಗಳ ಬದಲು ಇಂಗ್ಲಿಶ್ ನುಡಿಯನ್ನು ಬಳಸುತ್ತಿದ್ದಾರೆ. ಹಾಗಾಗಿ, ಮುಂದಿನ ತಲೆ ಮಾರುಗಳಲ್ಲಿ ಅವು ಯಾವ ಮಕ್ಕಳ ಬಾಯಿಯಲ್ಲೂ ಅವರ ಬೆಳವಣಿಗೆಯ ಅಂಗವಾಗಿ ಮೂಡಿ ಬರಲಾರವು. ಇಂತಹ ನುಡಿಗಳನ್ನು ಅಳಿಯುತ್ತಿರುವ ನುಡಿಗಳೆಂದು ಕರೆಯಲಾಗುತ್ತದೆ.
ಅಮೆರಿಕಾ(ಯು.ಎಸ್.ಎ)ದಲ್ಲಿದ್ದ ಸುಮಾರು 175 ಮೂಲನಿವಾಸಿಗಳ ನುಡಿಗಳಲ್ಲಿ ಹೆಚ್ಚಿನವೂ ಈಗಾಗಲೇ ಅಳಿದುಹೋಗಿವೆ; 55 ನುಡಿಗಳನ್ನು ಮುದುಕರು ಮಾತ್ರ ಬಳಸುತ್ತಿದ್ದು, ಅವನ್ನು ಅಳಿಯುತ್ತಿರುವ ನುಡಿಗಳೆಂದು ಹೇಳಬಹುದು; 20ಕ್ಕಿಂತಲೂ ಕಡಿಮೆ ನುಡಿಗಳು ಮಾತ್ರ ಇನ್ನು ಕೆಲವು ಸಮಯ ಉಳಿಯಬಲ್ಲವುಗಳು ಎನ್ನಲು ಬರುತ್ತದೆ; ಯಾಕೆಂದರೆ, ಇವತ್ತು ಅವನ್ನು ಕೆಲವು ಸಾವಿರ ಜನರು ಬಳಸುತ್ತಿದ್ದಾರೆ.
ಅಳಿದುಹೋಗಿರುವ ನುಡಿಗಳಲ್ಲಿ ಹೆಚ್ಚಿನವುಗಳ ಕುರಿತಾಗಿಯೂ ನಮಗೆ ನುಡಿಗಳ ಹೆಸರುಗಳು ಮಾತ್ರ ತಿಳಿದಿದೆಯಲ್ಲದೆ, ಬೇರೇನೂ ತಿಳಿದಿಲ್ಲ. ದಕ್ಶಿಣ ಅಮೆರಿಕಾದ ಹಲವು ನಾಡುಗಳಲ್ಲಿ, ಮತ್ತು ಕೆನಡಾ, ಮೆಕ್ಸಿಕೋ, ಆಸ್ಟ್ರೇಲಿಯಾ, ನ್ಯೂಜಿಲೇಂಡ್ ಮೊದಲಾದ ನಾಡುಗಳಲ್ಲೂ ಇಂತಹ ನೂರಾರು ಮೂಲ ನಿವಾಸಿಗಳ ನುಡಿಗಳು ಅಳಿದುಹೋಗಿವೆ, ಇಲ್ಲವೇ ಅಳಿದುಹೋಗುತ್ತಿವೆ.
(ಚ) ಸತ್ತ ನುಡಿಗಳು
ಇಂತಹ ಅಳಿಯುತ್ತಿರುವ ಇಲ್ಲವೇ ಅಳಿದುಹೋಗಿರುವ ನುಡಿಗಳಿಗಿಂತ ಲ್ಯಾಟಿನ್, ಹೀಬ್ರೂ, ಕೆಲ್ಟಿಕ್, ಕೋರ್ನಿಶ್, ಸಂಸ್ಕ್ರುತ ಮೊದಲಾದ ನುಡಿಗಳು ಕೆಲವು ವಿಶಯಗಳಲ್ಲಿ ಬೇರಾಗಿವೆ; ಎತ್ತುಗೆಗಾಗಿ, ಲ್ಯಾಟಿನ್ ನುಡಿಯನ್ನು ಇವತ್ತು ಯಾವ ಸಮಾಜದಲ್ಲೂ ಮಕ್ಕಳು ತಮ್ಮ ತಾಯ್ನುಡಿಯಾಗಿ ಪಡೆಯುವುದಿಲ್ಲ.
ಹಾಗಿದ್ದರೂ ಅದನ್ನು ಒಂದು ಅಳಿದುಹೋಗಿರುವ ನುಡಿಯೆಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಸಾಕಶ್ಟು ಮಂದಿ ಇವತ್ತಿಗೂ ಅದನ್ನು ಮಾತಿನಲ್ಲಿ ಬಳಸುತ್ತಿದ್ದಾರೆ; ಕೆತೋಲಿಕ್ ಚರ್ಚಿನ ಮತ್ತು ವೆಟಿಕನ್ ಪಟ್ಟಣದ ಆಡಳಿತ ನುಡಿಯಾಗಿ ಅದು ಇವತ್ತಿಗೂ ಬಳಕೆಯಲ್ಲಿದೆ. ಇದಲ್ಲದೆ, ಅದರಲ್ಲಿ ಇವತ್ತಿಗೂ ಹಲವಾರು ಬಗೆಯ ಬರಹಗಳನ್ನು ಬರೆದು ಅಚ್ಚುಹಾಕಿಸಲಾಗುತ್ತಿದೆ. ಹಲವು ಮಂದಿ ಇವತ್ತಿಗೂ ಅದನ್ನು ಗವ್ರವದಿಂದ ಕಾಣುತ್ತಿದ್ದಾರೆ.
ಅಂತಹ ನುಡಿಗಳನ್ನು ಅಳಿದ ನುಡಿಗಳೆಂದು ಕರೆಯುವ ಬದಲು, ಸತ್ತ (ಎಂದರೆ, ಜೀವಂತವಲ್ಲದ) ನುಡಿಗಳೆಂದು ಕರೆಯಲಾಗುತ್ತದೆ. ಅವು ಮಾತು ಮತ್ತು ಬರಹಗಳಲ್ಲಿ ಬಳಕೆಯಲ್ಲಿದ್ದರೂ ಜೀವಂತವಾಗಿಲ್ಲ.
ಒಂದು ನುಡಿ ಜೀವಂತವಾಗಿರಬೇಕಾದರೆ, ಅದನ್ನು ಒಂದು ಸಮಾಜದ ಮಕ್ಕಳು ಸ್ವಾಬಾವಿಕವಾಗಿ, ಮತ್ತು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುತ್ತಿರಬೇಕು. ಮಕ್ಕಳು ಆ ರೀತಿ ಪಡೆಯದಿರುವ ನುಡಿಗಳನ್ನು ಸತ್ತ ನುಡಿಗಳೆಂದು ಕರೆಯಲಾಗುತ್ತದೆ. ಎತ್ತುಗೆಗಾಗಿ, ಲ್ಯಾಟಿನ್ ನುಡಿಯನ್ನು ಇವತ್ತು ಯಾವ ಸಮಾಜದ ಮಕ್ಕಳೂ ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುವುದಿಲ್ಲ; ಅವನ್ನು ಬಳಸುತ್ತಿರುವ ಎಲ್ಲಾ ಜನರೂ ಮೊದಲಿಗೆ ಇಟಾಲಿಯನ್, ¥sóÉ್ರಂಚ್, ಇಂಗ್ಲಿಶ್ ಮೊದಲಾದ ಬೇರೆ ನುಡಿಗಳನ್ನು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆದು, ಆಮೇಲೆ ಲ್ಯಾಟಿನ್ ನುಡಿಯನ್ನು ಶಾಲೆಗಳಲ್ಲಿ ಕಲಿಯತೊಡಗುತ್ತಾರೆ.
ಸತ್ತ ನುಡಿಗೂ ಅಳಿದ ನುಡಿಗೂ ನಡುವಿರುವ ಮುಕ್ಯವಾದ ವ್ಯತ್ಯಾಸ ವೆಂದರೆ, ಸತ್ತ ನುಡಿ ಇವತ್ತಿಗೂ ಬರಹದ ರೂಪದಲ್ಲಿಬಳಕೆಯಾಗುತ್ತಿರುತ್ತದೆ; ಆ ನುಡಿಯ ನ್ನಾಡುತ್ತಿದ್ದ ಜನರ ಸಂಸ್ಕ್ರುತಿ, ತಿಳಿವು, ನೀತಿ ಮೊದಲಾದವುಗಳನ್ನು ಅದರಲ್ಲಿ ಉಳಿಸಿಕೊಳ್ಳಲಾಗಿರುತ್ತದೆ; ಬರಹವನ್ನು ಬಳಸಲು ತೊಡಗುವ ಮೊದಲು ಆ ನುಡಿಯಲ್ಲಿ ಬಳಕೆಯಲ್ಲಿದ್ದ, ಮತ್ತು ನೆನಪಿಲ್ಲಿ ಉಳಿಸಿಕೊಳ್ಳಬಲ್ಲು ವಾಗಿದ್ದ ಮಂತ್ರ, ಶ್ಲೋಕ, ಹಾಡು, ಗಾದೆಗಳು ಮೊದಲಾದವುಗಳನ್ನು ಇವತ್ತಿಗೂ ಆ ರೂಪದಲ್ಲೇನೇ ಉಳಿಸಿಕೊಳ್ಳಲಾಗುತ್ತದೆ. ಈ ಕಾರಣಕ್ಕಾಗಿ ಅದು ಇವತ್ತು ಆ ಸಮಾಜದಲ್ಲಿ ಮಕ್ಕಳ ಬೆಳವಣಿಗೆಯ ಅಂಗವಾಗಿ ಉಳಿಯ ದಿದ್ದರೂ ಕಲಿಕೆಯ ಅಂಗವಾಗಿ ಉಳಿದಿರುತ್ತದೆ.
(ಟ) ಬರಹದ ನುಡಿ
ಇಂತಹ ನುಡಿಗಳನ್ನು ಬಳಸುವವರಿಗೆ ತಾವು ಗವ್ರವಿಸುವ ಮತ್ತು ಪೂಜಿಸುವ ನುಡಿಯನ್ನು `ಸತ್ತ ನುಡಿ’ ಎಂಬುದಾಗಿ ಕರೆಯುವುದು ಮನಸ್ಸಿಗೆ ಬೇಸರ ವನ್ನುಂಟುಮಾಡುತ್ತದೆ. ಹಾಗಾಗಿ, ಅವರು ತಮ್ಮ ನುಡಿ ಸತ್ತಿಲ್ಲ ಎಂಬುದನ್ನು ತೋರಿಸಿಕೊಡುವುದಕ್ಕಾಗಿ ಹಲವಾರು ವಾದಗಳನ್ನು ಮುಂದಿಡಲು ತೊಡಗು ತ್ತಾರೆ. ಆದರೆ, ಇಂತಹ ವಾದಗಳಲ್ಲೊಂದೂ ಅದು ಮೇಲೆ ವಿವರಿಸಿದ ಹುರುಳಿನಲ್ಲಿ ಸತ್ತ ನುಡಿ ಎಂಬುದನ್ನು ಅಲ್ಲಗಳೆಯಲಾರದು. ಯಾಕೆಂದರೆ, ಅವರು ಕೊಡಬಲ್ಲ ವಾದಗಳಲ್ಲಿ ಒಂದನ್ನೂ ಅದೊಂದು ಸತ್ತ ನುಡಿ ಮಾತ್ರ, ಜೀವಂತ ನುಡಿಯಲ್ಲ ಎಂದು ಹೇಳುವವರು ಅಲ್ಲಗಳೆಯಬೇಕಾಗಿಲ್ಲ.
ಹಾಗಾಗಿ, ಕೊನೆಯಿಲ್ಲದ ಇಂತಹ ವಾದಗಳನ್ನು ಇಲ್ಲವಾಗಿಸಲು, ಈ ರೀತಿಯ ನುಡಿಗಳನ್ನು ಸತ್ತ ನುಡಿಗಳೆಂದು ಕರೆಯುವ ಬದಲು, ಬರಹದ ನುಡಿ, ಎಂದರೆ ಬರಹರೂಪದಲ್ಲಿ ಮಾತ್ರವೇ ಉಳಿದುಕೊಂಡಿರುವ ನುಡಿ, ಇಲ್ಲವೇ ಬರೇ ಬರಹ ಎಂಬುದಾಗಿ ಕರೆಯುವುದೇ ಒಳ್ಳೆಯದೆಂದು ತೋರುತ್ತದೆ. ಇದಕ್ಕೆ ಬದಲಾಗಿ, ಕನ್ನಡವೇ ಮೊದಲಾದ ನುಡಿಗಳನ್ನು ಮಾತಿನ ನುಡಿ ಎಂದರೆ, ಮುಕ್ಯವಾಗಿ ಮಾತಿನ ರೂಪದಲ್ಲಿ ಬಳಕೆಯಾಗುವ ನುಡಿ ಇಲ್ಲವೇ ಬರೇ ನುಡಿ ಇಲ್ಲವೇ ಬಾಶೆ ಎಂಬುದಾಗಿ ಕರೆಯಬಹುದು.
ಮಾತಿನ ನುಡಿ ಬರಹರೂಪದಲ್ಲೂ ಬಳಕೆಯಲ್ಲಿರಬಹುದು; ಆದರೆ, ಈ ಬರಹಗಳು ಕಾಲದಿಂದ ಕಾಲಕ್ಕೆ ಜನರ ಮಾತನ್ನನುಸರಿಸಿ ಬದಲಾಗುತ್ತಾ ಬರುತ್ತಿರುತ್ತವೆ; ಎತ್ತುಗೆಗಾಗಿ, ಕನ್ನಡ ಬರಹ ಹಳೆಗನ್ನಡವಿದ್ದುದು ನಡುಗನ್ನಡ ವಾಗಿ ಇವತ್ತು ಹೊಸಗನ್ನಡವಾಗಿದೆ. ಇದಕ್ಕೆ ಬದಲಾಗಿ, ಬರಹದ ನುಡಿ ಮಾತಿನ ಸಂಪರ್ಕವನ್ನು ಪೂರ್ತಿ ಕಳೆದುಕೊಂಡು ಸಾವಿರಾರು ವರ್ಶಗಳಶ್ಟು ಕಾಲವೂ ಬದಲಾಗದೆ ಉಳಿದಿರುತ್ತದೆ.
(ತ) ಬರಹದ ನುಡಿಯ ಕ್ರುತಕತೆ
ಪಾಣಿನಿಯ ವ್ಯಾಕರಣದ ಕಟ್ಟಿನಿಂದಾಗಿ ಸಂಸ್ಕ್ರುತ ಮಾತಿನಿಂದ ದೂರ ಉಳಿದಿದೆ, ಮತ್ತು ಇದರಿಂದಾಗಿ, ಕಳೆದ ಎರಡೂವರೆ ಸಾವಿರ ವರ್ಶಗಳಲ್ಲಿ ಅದು ಆಡುನುಡಿ ಗಳನ್ನನುಸರಿಸಿ ಬದಲಾಗಿಲ್ಲ, ಮತ್ತು ಸ್ವಾಬಾವಿಕವಾಗಿರುವ ನುಡಿಗಳಲ್ಲಿ ಮತ್ತು ಅವುಗಳ ಬರಹಗಳಲ್ಲಿ ಕಾಣಿಸುವ ಕೆಲವು ಮುಕ್ಯವಾದ ಪರಿಚೆಗಳನ್ನು ಅದು ಕಳೆದುಕೊಂಡಿದೆ; ಇದರಿಂದಾಗಿ ಹಲವು ಬಗೆಯ ಹೆಚ್ಚಿನ ಕ್ರುತಕತೆಗಳನ್ನು ಅದು ತನ್ನದಾಗಿಸಿಕೊಂಡಿದೆ.
ಎತ್ತುಗೆಗಾಗಿ, ಸ್ವಾಬಾವಿಕವಾಗಿರುವ ನುಡಿಗಳಲ್ಲಿ ಮತ್ತು ಬರಹಗಳಲ್ಲಿ ಪದಕಂತೆಗೂ ಜೋಡುಪದಕ್ಕೂ ನಡುವೆ ವ್ಯತ್ಯಾಸವಿರುತ್ತದೆ. ಈ ವ್ಯತ್ಯಾಸ ಎಂತಹದು ಎಂಬುದನ್ನು ಕನ್ನಡದ ಜೋಡುಪದಗಳನ್ನು ಪರಿಶೀಲಿಸುವ ಮೂಲಕ ತಿಳಿದುಕೊಳ್ಳಬಹುದು:
ಕನ್ನಡದಲ್ಲಿ ಬಳಕೆಯಾಗುವ ಜೋಡುಪದಗಳಿಗೆಲ್ಲ ತಯಾರಿಕೆ ಮತ್ತು ಬಳಕೆ ಎರಡು ಹಂತಗಳಿವೆ: ಅವನ್ನು ಯಾರಾದರೂ ತಯಾರಿಸಿದೊಡನೆಯೇ ಅವು ಕನ್ನಡದ ಪದಗಳೆಂದೆನಿಸುವುದಿಲ್ಲ; ತಯಾರಿಸಿದ ಈ ಪದಗಳನ್ನು ಹಲವು ಮಂದಿ ತಮ್ಮ ಮಾತಿನಲ್ಲಿ ಮತ್ತು ಬರಹಗಳಲ್ಲಿ ಬಳಸತೊಡಗಿದಾಗ ಮಾತ್ರ ಅವು ಕನ್ನಡದ ಪದಗಳೆಂದೆನಿಸುತ್ತವೆ.
ಎತ್ತುಗೆಗಾಗಿ, ಎರಡು ಹೆಸರುಪದಗಳನ್ನು ಒಟ್ಟಿಗೆ ಸೇರಿಸಿ ತಯಾರಿಸಿರುವ ಬಯಲಾಟ, ನೆಲಗಡಲೆ, ಜೇನುಹುಳ, ತಾಯಿಮನೆ ಮೊದಲಾದ ಜೋಡುಪದಗಳನ್ನು ಗಮನಿಸಬಹುದು; ಬಯಲಿನ ಆಟ, ನೆಲದ ಕಡಲೆ, ಜೇನಿನ ಹುಳ, ತಾಯಿಯ ಮನೆ ಮೊದಲಾದ ಪದಕಂತೆಗಳಲ್ಲಿ ಮೊದಲನೆಯ ಪದದ ಕೊನೆಯಲ್ಲಿ ಬಂದಿರುವ ಪತ್ತುಗೆ ಒಟ್ಟನ್ನು ತೆಗೆದು ಹಾಕಿ ಈ ಜೋಡುಪದಗಳನ್ನು ಉಂಟುಮಾಡಲಾಗಿದೆ.
ಕನ್ನಡದಲ್ಲಿ ಬಳಸಬಲ್ಲ ಇಂತಹ ಹಲವು ಬಗೆಯ ಪದಕಂತೆಗಳನ್ನು ಈ ರೀತಿ ಅವುಗಳ ಮೊದಲನೆಯ ಪದದ ಕೊನೆಯಲ್ಲಿ ಬರುವ ಪತ್ತುಗೆ ಒಟ್ಟನ್ನು ತೆಗೆದು ಹಾಕಿ ಜೋಡುಪದಗಳನ್ನು ಉಂಟುಮಾಡಲು ಬರುತ್ತದೆ; ಆದರೆ, ಇವೆಲ್ಲವನ್ನೂ ಕನ್ನಡದ ಜೋಡುಪದಗಳೆಂದು ಕರೆಯಲು ಬರುವುದಿಲ್ಲ. ಯಾಕೆಂದರೆ ಹಾಗೆ ಉಂಟುಮಾಡಿದ ಮೇಲೆ, ಅವು ಒಂದು ನಿಶ್ಚಿತವಾದ ಹುರುಳಿನಲ್ಲಿ ಬಳಕೆಗೆ ಬಂದ ಮೇಲೆ ಮಾತ್ರ ಅವನ್ನು ಕನ್ನಡ ನುಡಿಯ ಜೋಡುಪದಗಳೆಂದು ತಿಳಿಯಲು ಸಾದ್ಯವಾಗುತ್ತದೆ.
ಎತ್ತುಗೆಗಾಗಿ, ಬಯಲಿನ ಓಟ, ನೆಲದ ಬಣ್ಣ, ಮರದ ಹುಳ, ತಾಯಿಯ ಸೀರೆ ಎಂಬಂತಹ ಪದಕಂತೆಗಳ ಮೊದಲನೆಯ ಪದದ ಕೊನೆಯಲ್ಲಿ ಬಂದಿರುವ ಪತ್ತುಗೆ ಒಟ್ಟನ್ನು ತೆಗೆದು ಹಾಕಿ, ಬಯಲೋಟ, ನೆಲಬಣ್ಣ, ಮರಹುಳ, ತಾಯಿಸೀರೆ ಎಂಬಂತಹ ಜೋಡುಪದಗಳನ್ನು ಉಂಟುಮಾಡ ಬಲ್ಲೆವು. ಆದರೆ, ಇವು ಕನ್ನಡ ನುಡಿಯ ಜೋಡುಪದಗಳಲ್ಲ. ಯಾಕೆಂದರೆ, ಬಯಲಾಟ, ನೆಲಗಡಲೆ, ಜೇನುಹುಳ, ತಾಯಿಮನೆ ಎಂಬಂತಹ ಪದಗಳ ಹಾಗೆ ಅವು ಒಂದು ನಿಶ್ಚಿತವಾದ ಹುರುಳಿನಲ್ಲಿ ಬಳಕೆಗೆ ಬಂದಿಲ್ಲ. ಹಾಗೆ ಬಳಕೆಗೆ ಬಂದಾಗ ಮಾತ್ರ ನಾವು ಅವನ್ನು ಕನ್ನಡದ ಜೋಡುಪದಗಳೆಂದು ಕರೆಯಬಲ್ಲೆವು.
ಸಂಸ್ಕ್ರುತದಲ್ಲಿ ಕಾಣಿಸುವ ಜೋಡುಪದ(ಸಮಾಸ)ಗಳ ಬಳಕೆ ಇದಕ್ಕಿಂತ ತೀರ ಬೇರಾಗಿದೆ: ಅದರಲ್ಲಿ ಯಾವುದೇ ಎರಡು ಹೆಸರು(ನಾಮ)ಪದಗಳನ್ನು ಬೇಕಿದ್ದರೂ ಒಟ್ಟುಸೇರಿಸಿ ಜೋಡುಪದಗಳನ್ನು ಉಂಟುಮಾಡಲು ಬರುತ್ತದೆ; ಇದಲ್ಲದೆ, ಹಾಗೆ ಉಂಟುಮಾಡಿದೊಡನೆ ಅವು ಸಂಸ್ಕ್ರುತದ ಪದಗಳಾಗಿ ಬಿಡುತ್ತವೆ. ಎಂದರೆ, ಮೇಲೆ ವಿವರಿಸಿದಂತಹ ತಯಾರಿಕೆ ಮತ್ತು ಬಳಕೆ ಎಂಬ ಎರಡು ಹಂತಗಳ ನಡುವಿನ ವ್ಯತ್ಯಾಸ ಸಂಸ್ಕ್ರುತದಲ್ಲಿ ಇಲ್ಲವಾಗಿದೆ. ಇದು ಸಂಸ್ಕ್ರುತ ಬರಹ ಇವತ್ತು ತೀರಾ ಕ್ರುತಕವಾಗಿ ಕಾಣಿಸಲು ಒಂದು ಮುಕ್ಯ ಕಾರಣವಾಗಿದೆ.
ಸಂಸ್ಕ್ರುತದಲ್ಲಿ ಸಮಾಸ ಎಂಬುದು ಎರಡು (ಇಲ್ಲವೇ ಹೆಚ್ಚು) ಹೆಸರು ಪದಗಳನ್ನು ಒಟ್ಟುಸೇರಿಸಿ ಅಡಕವಾಗಿರುವಂತಹ ಒಂದು ನುಡಿತವನ್ನಾಗಿ ಮಾಡುವ ವ್ಯಾಕರಣ ವಿದಾನವಾಗಿ ಬದಲಾಗಿದೆ. ಹಾಗೆ ಒಟ್ಟು ಸೇರಿಸುವಾಗ ಪಾಣಿನಿಯ ವ್ಯಾಕರಣದ ಕಟ್ಟಲೆಗಳನ್ನು ತಪ್ಪದೆ ಅನುಸರಿಸಿದರೆ ಸಾಕು; ಕನ್ನಡದ ಹಾಗೆ, ಆ ರೀತಿ ಉಂಟುಮಾಡಿದ ನುಡಿತ ಒಂದು ನಿಶ್ಚಿತವಾದ ಹುರುಳಿನಲ್ಲಿ ಬಳಕೆಗೆ ಬರಬೇಕೆಂಬ ನಿರ್ಬಂದ ಸಂಸ್ಕ್ರುತದಲ್ಲಿಲ್ಲ.
ಸಂಸ್ಕ್ರುತದ ಕೆಲವು ಜೋಡುಪದಗಳು, ಕನ್ನಡದ ಜೋಡುಪದಗಳ ಹಾಗೆ, ಅವುಗಳದೇ ಆದ ವಿಶಿಶ್ಟವಾದ ಹುರುಳುಗಳಲ್ಲಿ ಬಳಕೆಗೆ ಬಂದಿವೆಯೇನೋ ನಿಜ; ಆದರೆ, ಅಂತಹ ಹುರುಳುಗಳಲ್ಲಿ ಮಾತ್ರವಲ್ಲದೆ ಅವನ್ನು ಉಂಟುಮಾಡುವಲ್ಲಿ ಬಳಕೆಯಾದ ಪದಕಂತೆಗಳ ಹುರುಳಿನಲ್ಲೂ ಅವನ್ನು ಬಳಸಲು ಬರುತ್ತದೆ. ಎತ್ತುಗೆಗಾಗಿ, ಕ್ರುಶ್ಣಸರ್ಪ ಎಂಬ ಪದಕ್ಕೆ ಒಂದು ಜಾತಿಯ ಹಾವು ಎಂಬ ವಿಶಿಶ್ಟವಾದ ಹುರುಳಿದೆ; ಆದರೆ, ಈ ಪದವನ್ನು ಕಪ್ಪು ಹಾವು ಎಂಬ ಹುರುಳಿನಲ್ಲಿ, ಎಂದರೆ ಯಾವುದೇ ಒಂದು ಕಪ್ಪು ಬಣ್ಣದ ಹಾವನ್ನು ಗುರುತಿಸುವುದಕ್ಕಾಗಿಯೂ ಬಳಸಲು ಬರುತ್ತದೆ.
ಕನ್ನಡದಲ್ಲಿ ಇದು ಸಾದ್ಯವಾಗದು: ಬಯಲಾಟ ಎಂಬುದು ಒಂದು ವಿಶಿಶ್ಟವಾದ ಆಟವನ್ನು (ಯಕ್ಶಗಾನವನ್ನು) ಹೆಸರಿಸುತ್ತದಲ್ಲದೆ, ಬಯಲಿನಲ್ಲಿ ನಡೆಸುವ ಎಲ್ಲಾ ಬಗೆಯ ಆಟಗಳನ್ನೂ ಅದು ಹೆಸರಿಸುವುದಿಲ್ಲ; ಜೇನುಹುಳ ಎಂಬುದು ಹೂವಿನ ಪರಾಗವನ್ನು ಸಂಗ್ರಹಿಸಿ ಅದರಿಂದ ಜೇನನ್ನು ಉಂಟು ಮಾಡುವ ಒಂದು ಜಾತಿಯ ಹುಳವನ್ನು ಗುರುತಿಸುತ್ತದಲ್ಲದೆ, ಜೇನಿಗೆ ಸಂಬಂದಿಸಿದ ಎಲ್ಲಾ ಬಗೆಯ ಹುಳಗಳನ್ನೂ ಗುರುತಿಸುವುದಿಲ್ಲ.
ಸಂಸ್ಕ್ರುತದ ಈ ಕ್ರುತಕತೆಗೆ ಅದರೊಂದಿಗಿದ್ದ ಮಾತಿನ ಕೊಂಡಿ ತಪ್ಪಿ ಹೋಗಿರುವುದೇ ಮುಕ್ಯ ಕಾರಣ. ಅದರ ಬರಹದಲ್ಲಿ ಹೇಗೆ ಬರೆದರೆ ಸರಿ ಮತ್ತು ಹೇಗೆ ಬರೆದರೆ ತಪ್ಪು ಎಂಬುದನ್ನು ತೀರ್ಮಾನಿಸಲು ಪಾಣಿನಿಯ ವ್ಯಾಕರಣ ನಿಯಮಗಳನ್ನು ಮಾತ್ರ ಬಳಸಲಾಗುತ್ತಿದೆ; ಅದಕ್ಕೆ ಕನ್ನಡದ ಹಾಗೆ ಮಾತಿನ ಬಳಕೆಯ ಮನ್ನಣೆ ಬೇಕಾಗುವುದಿಲ್ಲ. ಈ ಕಾರಣಕ್ಕಾಗಿ, ಬಾಣಬಟ್ಟ ನಂತಹ ಬರಹಗಾರರಿಗೆ ತುಂಬಾ ಉದ್ದುದ್ದವಾದ ಜೋಡುಪದಗಳನ್ನು ಉಂಟುಮಾಡಿ ಬಳಸಲು ಸಾದ್ಯವಾಗಿದೆ: ಸುಮಾರು ಇಪ್ಪತ್ತು-ಮೂವತ್ತು ಪದಗಳನ್ನು ಜೋಡಿಸಿ ಮಾಡಿರುವ ಈ ಜೋಡುಪದಗಳಿಗೆ ತಯಾರಿಕೆಗಿಂತ ಬೇರಾಗಿರುವ ಬಳಕೆ ಎಂಬ ಹಂತವಿರಲು ಸಾದ್ಯವೇ ಇಲ್ಲ.
ಸಂಸ್ಕ್ರುತದಲ್ಲಿ ಇಂತಹ ಬೇರೆಯೂ ಹಲವು ಬಗೆಯ ಕ್ರುತಕತೆಗಳು ಸೇರಿಕೊಂಡಿವೆ. ಈ ಕಾರಣಕ್ಕಾಗಿಯೇ ಕನ್ನಡದ ವಿದ್ವಾಂಸರಿಗೆ ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡಬೇಕಾದಾಗ, ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸುವ ಬದಲು ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸುವುದು ಹೆಚ್ಚು ಸುಲಬವೆಂದು ತೋರುತ್ತಿರಬಹುದು.
(ಪ) ಬೇರೆ ಕೆಲವು ತಪ್ಪು ಅನಿಸಿಕೆಗಳು
ಸಂಸ್ಕ್ರುತದ ಕುರಿತಾಗಿ ಬೇರೆಯೂ ಹಲವು ಬಗೆಯ ತಪ್ಪು ಅನಿಸಿಕೆಗಳು ಕೆಲವರಲ್ಲಿದ್ದು, ಇವನ್ನೂ ಸಂಸ್ಕ್ರುತಕ್ಕಿಲ್ಲದ ಹಿರಿಮೆಯನ್ನು ಅದಕ್ಕೆ ಕೊಡಿಸುವು ದಕ್ಕಾಗಿ ಬಳಸಲಾಗುತ್ತಿದೆ. ಎತ್ತುಗೆಗಾಗಿ, ಜಗತ್ತಿನ ಎಲ್ಲಾ ನುಡಿಗಳಿಗೂ ಸಂಸ್ಕ್ರುತ ತಾಯಿಯ ಸ್ತಾನದಲ್ಲಿದೆಯೆಂದು ಹೇಳಲಾಗುತ್ತದೆ. ಆದರೆ, ಹೀಗೆ ಹೇಳುವವರು ಎರಡು ನುಡಿಗಳ ಇಲ್ಲವೇ ಬರಹಗಳ ನಡುವೆ ಒಂದು ಇನ್ನೊಂದರ ತಾಯಿ ಎಂದು ಹೇಳಬೇಕಿದ್ದಲ್ಲಿ ಎಂತಹ ಹೋಲಿಕೆ ಅವುಗಳ ನಡುವಿರಬೇಕು ಎಂಬುದನ್ನು ಸ್ಪಶ್ಟಪಡಿಸಿದ ಹಾಗೆ ಕಾಣುವುದಿಲ್ಲ.
ಜಗತ್ತಿನಲ್ಲಿ ಸುಮಾರು ಮೂರು ಸಾವಿರ ನುಡಿಗಳಿವೆಯೆಂದು ಹೇಳಲಾಗುತ್ತದೆ; ಇವುಗಳಲ್ಲಿ ಕೆಲವೇ ಕೆಲವು ನುಡಿಗಳ ಕುರಿತಾಗಿ ಮಾತ್ರ ಅವುಗಳ ಸ್ವರೂಪ ಎಂತಹದು ಎಂಬ ವಿಶಯದಲ್ಲಿ ಆಳವಾದ ಸಂಶೋದನೆಯನ್ನು ನಡೆಸಲಾಗಿದೆ. ಉಳಿದ ನುಡಿಗಳ ಕುರಿತಾಗಿ ನಮಗಿರುವ ತಿಳಿವು ಬೇರೆ ಬೇರೆ ಬಗೆಯದು: ಕೆಲವಕ್ಕೆ ಚುಟುಕಾದ ಸೊಲ್ಲರಿಮೆ ಮತ್ತು ಪದನೆರಕೆ(ಪದಕೋಶ) ಗಳನ್ನು ರಚಿಸಲಾಗಿದೆ; ಆದರೆ, ಬೇರೆ ಕೆಲವು ನುಡಿಗಳ ಕುರಿತಾಗಿ ಅವುಗಳ ಹೆಸರು ಮಾತ್ರ ಗೊತ್ತಿದೆಯಲ್ಲದೆ ಬೇರೇನೂ ತಿಳಿದಿಲ್ಲ. ಹೀಗಿರುವಾಗ, ಇವಕ್ಕೆಲ್ಲ ಸಂಸ್ಕ್ರುತ (ಇಲ್ಲವೇ ಬೇರೊಂದು ನುಡಿ) ತಾಯಿಯ ಸ್ತಾನದಲ್ಲಿದೆ ಎಂದು ಹೇಳಿದರೆ, ಅದಕ್ಕೆ ಯಾವ ಬೆಲೆಯೂ ಇಲ್ಲ.
ಸಂಸ್ಕ್ರುತಕ್ಕೆ ಪಾಣಿನಿ ರಚಿಸಿದ ಒಂದು ಉತ್ತಮವಾದ ಸೊಲ್ಲರಿಮೆಯಿದೆ; ಆದರೆ, ಇದು ಬರಹದ ಹಿರಿಮೆಯನ್ನೇನೂ ತಿಳಿಸುವುದಿಲ್ಲ. ಯಾಕೆಂದರೆ, ಬೇರೆ ಬರಹಗಳ ಕುರಿತಾಗಿಯೂ ಅಂತಹ, ಇಲ್ಲವೇ ಅದಕ್ಕಿಂತಲೂ ಉತ್ತಮ ವಾದ ಸೊಲ್ಲರಿಮೆಯನ್ನು ರಚಿಸಲು ಸಾದ್ಯವಿದೆ.
ಮಾತಿನ ನುಡಿಯನ್ನಾಗಿ ಮಾರ್ಪಡಿಸುವುದು
ಸಂಸ್ಕ್ರುತದಂತಹ ಒಂದು ಸತ್ತ ನುಡಿಯನ್ನು ಇಲ್ಲವೇ ಬರಹದ ನುಡಿಯನ್ನು ಜೀವಂತ ನುಡಿಯಾಗಿ ಇಲ್ಲವೇ ಮಾತಿನ ನುಡಿಯಾಗಿ ಮಾರ್ಪಡಿಸಲು ಬರುತ್ತದೆಯೇ? ಹಾಗೆ ಮಾಡಲು ಸಾದ್ಯ ಎಂಬುದಕ್ಕೆ ಒಂದು ಎತ್ತುಗೆಯಿದೆ (ಇದನ್ನು ಕೆಳಗೆ ವಿವರಿಸಲಾಗಿದೆ).
ಆದರೆ, ಹಾಗಾಗಬೇಕಿದ್ದಲ್ಲಿ, ಆ ಬರಹದ ನುಡಿಯನ್ನು ಒಂದು ಸಮಾಜದ ಮಕ್ಕಳು ತಮ್ಮ ಬೆಳವಣಿಗೆಯ ಅಂಗವಾಗಿ, ಎಂದರೆ ತಮ್ಮ ತಾಯ್ನುಡಿಯಾಗಿ ಪಡೆಯುವಂತಾಗಬೇಕು, ಮತ್ತು ಇದಕ್ಕಾಗಿ, ಆ ಮಕ್ಕಳ ಮನೆಗಳಲ್ಲಿ ಮತ್ತು ನೆರೆಕರೆಯ ಮನೆಗಳಲ್ಲಿ ಅವರಿಗಿಂತ ದೊಡ್ಡವರು ಅವರೊಂದಿಗೆ ಆ ನುಡಿ ಯಲ್ಲೇ ಮಾತನಾಡುತ್ತಿರಬೇಕು. ಅಂತಹ ಪರಿಸರ ಒದಗಿದಲ್ಲಿ ಮಾತ್ರ, ಮಕ್ಕಳು ತಾವಾಗಿಯೇ ಆ ನುಡಿಯನ್ನು ತಮ್ಮ ತಾಯ್ನುಡಿಯಾಗಿ ಪಡೆಯಬಲ್ಲರು, ಮತ್ತು ಆ ಬರಹದ ನುಡಿ ಜೀವಂತಿಕೆಯನ್ನು ಪಡೆಯುವ ಹಾಗೆ ಮಾಡಬಲ್ಲರು.
ಯಾವುದೇ ಒಂದು ನುಡಿಯೂ ಜೀವಂತವಾದ ಮಾತಿನ ನುಡಿಯಾಗಿ ಉಳಿಯಬೇಕಿದ್ದರೆ, ಅದನ್ನು ಬಳಸುತ್ತಿರುವ ಸಮಾಜದಲ್ಲಿ ಮಕ್ಕಳು ಆ ನುಡಿ ಯನ್ನು ತಮ್ಮ ತಾಯ್ನುಡಿಯಾಗಿ ಪಡೆಯುತ್ತಿರಬೇಕೆಂದು ಹೇಳಲು ಒಂದು ಮುಕ್ಯವಾದ ಕಾರಣವಿದೆ: ಮಕ್ಕಳು ಆ ರೀತಿ ಒಂದು ನುಡಿಯನ್ನು ತಮ್ಮ ತಾಯ್ನುಡಿಯಾಗಿ, ಎಂದರೆ ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುತ್ತಿರು ವಾಗ, ಒಂದೊಂದು ಬಾರಿಯೂ ಅದರ ಸೊಲ್ಲರಿಮೆಯನ್ನು ಹೊಸದಾಗಿ ಮತ್ತು ಅವರ ತಿಳಿವಿಗೆ ಬಾರದಂತೆ ಅವರ ಮಿದುಳುಗಳಲ್ಲಿ ಕಟ್ಟಲಾಗುತ್ತದೆ. ಸೊಲ್ಲರಿಮೆಯನ್ನು ಈ ರೀತಿ ಬಾರಿ ಬಾರಿಗೂ ಹೊಸದಾಗಿ ಕಟ್ಟಬೇಕಾಗುತ್ತದೆ ಎಂಬುದೇ ನುಡಿಗೆ ಜೀವಂತಿಕೆಯನ್ನು ತಂದುಕೊಡುತ್ತದೆ.
ಮೇಲೆ ಎರಡು ಮತ್ತು ಮೂರನೇ ಪಸುಗೆಗಳಲ್ಲಿ ವಿವರಿಸಿದ ಹಾಗೆ, ತಾಯ್ನುಡಿಯನ್ನು ಮಕ್ಕಳಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ; ಅವರು ತಾವಾಗಿಯೇ ಅದನ್ನು ಕಲಿತುಕೊಳ್ಳುತ್ತಾರೆ. ಮೊದಲಿಗೆ ಉಲಿಗಳನ್ನು, ಮತ್ತು ಆಮೇಲೆ ಪದಗಳನ್ನು ನುಡಿಯಲು ಅವರು ಕಲಿಯುತ್ತಾರೆ; ಆಮೇಲೆ ಎರಡು ಪದಗಳ ಚಿಕ್ಕ ಚಿಕ್ಕ ಸೊಲ್ಲುಗಳನ್ನು ನುಡಿಯಲು ಕಲಿಯುತ್ತಾರೆ; ಮತ್ತು ಕೊನೆಗೆ ದೊಡ್ಡವರು ನುಡಿಯುವಂತಹ ಸೊಲ್ಲುಗಳನ್ನು ನುಡಿಯಲು ಕಲಿಯು ತ್ತಾರೆ. ಈ ಕಲಿಕೆಗೆ ಬೇಕಾಗುವ ಸೊಲ್ಲರಿಮೆಯ ಕಟ್ಟಲೆಗಳು ತಾವಾಗಿಯೇ ಅವರ ಮಿದುಳಿನಲ್ಲಿ (ಅವರ ತಿಳಿವಿಗೆ ಬಾರದ ರೂಪದಲ್ಲಿ) ನೆಲೆಗೊಳ್ಳುತ್ತಿರುತ್ತವೆ.
ಒಂದೊಂದು ಮಗುವಿನ ಮಿದುಳಿನಲ್ಲೂ ಈ ರೀತಿ ಅದರ ತಾಯ್ನುಡಿಯ ಸೊಲ್ಲರಿಮೆ ಹೊಸದಾಗಿ ನೆಲೆಗೊಳ್ಳುತ್ತಿರುತ್ತದೆ ಎಂಬುದನ್ನು ಸೂಚಿಸುವ ಸಂಗತಿಗಳು ಹಲವಿವೆ. ಎತ್ತುಗೆಗಾಗಿ, ನುಡಿಗಳು ಕಾಲದಿಂದ ಕಾಲಕ್ಕೆ ಮಾರ್ಪಡು ತ್ತಿರುತ್ತವೆ. ಹಳೆಗನ್ನಡವಿದ್ದದ್ದು ನಡುಗನ್ನಡವಾಗಿ ಇವತ್ತು ಹೊಸಗನ್ನಡವಾಗಿ ಮಾರ್ಪಟ್ಟಿದೆ. ಈ ರೀತಿ ನುಡಿಗಳು ಕಾಲದಿಂದ ಕಾಲಕ್ಕೆ ಮಾರ್ಪಡಲು ಒಂದೊಂದು ಮಗುವಿನ ಮಿದುಳಿನಲ್ಲೂ ಅದರ ತಾಯ್ನುಡಿಯ ಸೊಲ್ಲರಿಮೆ ಹೊಸದಾಗಿ ನೆಲೆಗೊಳ್ಳುತ್ತಿರಬೇಕಾಗುತ್ತದೆ ಎಂಬುದೇ ಮುಕ್ಯ ಕಾರಣ.
ಮಗುವಿನ ಮಿದುಳಿನಲ್ಲಿ ಈ ರೀತಿ ಅದರ ತಾಯ್ನುಡಿಗೆ ಬೇಕಾಗುವ ಸೊಲ್ಲರಿಮೆಯ ನಿಯಮಗಳು ಹೊಸದಾಗಿ ನೆಲೆಗೊಳ್ಳುತ್ತಿರುವಾಗ, ಅವುಗಳಲ್ಲಿ ಕೆಲವು ಬದಲಾವಣೆಗಳೂ ನಡೆದು ಹೋಗುತ್ತವೆ; ಈ ಬದಲಾವಣೆಗಳು ಆ ಮಗುವಿನ ಇಲ್ಲವೇ ದೊಡ್ಡವರ ಹತೋಟಿಯಲ್ಲಿರುವುದಿಲ್ಲ; ಯಾಕೆಂದರೆ, ಅವು ಮಗುವಿನ ಇಲ್ಲವೇ ದೊಡ್ಡವರ ಗಮನಕ್ಕೆ ಬಾರದ ಹಾಗೆ ನಡೆಯುತ್ತವೆ.
ಇದಲ್ಲದೆ, ಅವುಗಳಲ್ಲಿ ಕೆಲವು ಮಾರ್ಪಾಡುಗಳು ನಡೆದಿವೆಯೆಂಬುದು ದೊಡ್ಡವರ ಗಮನಕ್ಕೆ ಬಂದರೂ, ಅವುಗಳ ಕುರಿತಾಗಿ ಅವರಿಗೆ ಏನನ್ನೂ ಮಾಡಲು ಬರುವುದಿಲ್ಲ. ಇಂತಹ ಬದಲಾವಣೆಗಳೇ ಒಟ್ಟುಸೇರುತ್ತಾ ಹೋಗಿ, ಆ ನುಡಿ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗಲು ಕಾರಣವಾಗುತ್ತವೆ. ಹಳೆಗನ್ನಡದ ಪಕಾರ ಹಕಾರವಾದುದು, ¾-¿ಗಳು ರ-ಳಗಳಾದುದು, ಹಕಾರ ಆಮೇಲೆ ಕೆಲವು ಒಳನುಡಿಗಳಲ್ಲಿ ಬಿದ್ದುಹೋದುದು ಮೊದಲಾದ ಹಲವು ಬಗೆಯ ಮಾರ್ಪಾಡುಗಳು ಕನ್ನಡದಲ್ಲಿ ನಡೆದಿರುವುದಕ್ಕೆ ಈ ರೀತಿ ಅದರ ಸೊಲ್ಲರಿಮೆಯನ್ನು ಒಂದೊಂದು ಮಗುವೂ ಹೊಸದಾಗಿ ತನ್ನ ಮಿದುಳಿನಲ್ಲಿ ತನ್ನ ಅರಿವಿಗೆ ಬಾರದ ಹಾಗೆ ನೆಲೆಗೊಳಿಸಬೇಕಾಗುತ್ತದೆಯೆಂಬುದೇ ಕಾರಣ.
(ಕ) ಬೆರಕೆ ನುಡಿಗಳು ಸ್ವಾಬಾವಿಕ ನುಡಿಗಳಾಗುವುದು
ಬೆರಕೆ ನುಡಿಗಳನ್ನು ದೊಡ್ಡವರು ಉಂಟುಮಾಡುವ, ಮತ್ತು ಅವರಿಂದ ಮಕ್ಕಳು ಪಡೆಯುವ ಬಗೆಯೂ ಮೇಲಿನ ವಾದವನ್ನು ಬೆಂಬಲಿಸುತ್ತದೆ:
ಬೇರೆ ಬೇರೆ ನುಡಿಗಳನ್ನಾಡುವ ಜನರು ಒಟ್ಟಿಗೆ ಒಂದೇ ಕಡೆಯಲ್ಲಿ ವಾಸಿಸ ಬೇಕಾದಾಗ, ಅವರ ನಡುವೆ ಮಾತುಕತೆ ನಡೆಯಲು ಬೆರಕೆನುಡಿಯೊಂದು ಬಳಕೆಗೆ ಬರುತ್ತದೆ. ಈ ನುಡಿಗೆ ಒಂದು ಚನ್ನಾಗಿರುವ ಸೊಲ್ಲರಿಮೆಯೇ ಇರುವುದಿಲ್ಲ; ಹಲವು ನುಡಿಗಳ ಪದಗಳು ಮತ್ತು ಸೊಲ್ಲರಿಮೆಯ ನಿಯಮಗಳು ಇದರಲ್ಲಿ ಅಡ್ಡಾದಿಡ್ಡಿ ಬೆರಕೆಯಾಗಿರುತ್ತವೆ.
ಆದರೆ, ದೊಡ್ಡವರು ಉಂಟುಮಾಡಿರುವ ಇಂತಹ ಒಂದು ಬೆರಕೆ ನುಡಿ ಯನ್ನು ತಮ್ಮ ತಾಯ್ನುಡಿಯಾಗಿ ಪಡೆಯುವ ಅವರ ಮಕ್ಕಳಲ್ಲಿ ಅದು ಒಂದು ಸ್ವಾಬಾವಿಕ ನುಡಿಯಾಗಿ ಹೊರಹೊಮ್ಮುತ್ತದೆ. ಎತ್ತುಗೆಗಾಗಿ, ಅಮೆರಿಕದ ಹವಾಯಿ ದ್ವೀಪಗಳಲ್ಲಿ ಜಪಾನ್, ಚೀನಾ, ಕೊರಿಯಾ, ಪೆÇೀರ್ಚುಗಲ್, ಫಿûಲಿಪಯ್ನ್ಸ್, ಪ್ಯುರ್ಟರಿಕೋ ಮೊದಲಾದ ಹಲವಾರು ದೇಶಗಳಿಂದ ವಲಸೆ ಬಂದಿದ್ದ ಜನರು ಒಟ್ಟಿಗೆ ವಾಸಿಸಬೇಕಾಗಿತ್ತು. ಅವರು ತಮ್ಮ ತಮ್ಮೊಳಗೆ ಮಾತನಾಡಿಕೊಳ್ಳಲು ಈ ಹಲವು ನುಡಿಗಳ ಪದಗಳನ್ನು ಬಳಸಿ ಉಂಟು ಮಾಡಿರುವ ಒಂದು ರೀತಿಯ ಬೆರಕೆನುಡಿಯನ್ನು ಬಳಸಲು ತೊಡಗಿದ್ದರು. ಈ ಬೆರಕೆನುಡಿಗೆ ಬೇರೆ ಸ್ವಾಬಾವಿಕ ನುಡಿಗಳ ಹಾಗೆ ಒಂದು ಸಂಪೂರ್ಣವಾದ ಸೊಲ್ಲರಿಮೆಯೆಂಬುದೇ ಇರಲಿಲ್ಲ.
ಸ್ವಾಬಾವಿಕ ನುಡಿಗಳಿಗೆ ಹೋಲಿಸಿದರೆ, ಅದರಲ್ಲಿ ಬಳಕೆಯಾಗುತ್ತಿದ್ದ ಪದಗಳ ಎಣಿಕೆ ತುಂಬಾ ಕಡಿಮೆಯಾಗಿತ್ತು; ಅದರ ಸೊಲ್ಲುಗಳ ರಚನೆ ಯಲ್ಲಾಗಲಿ, ಇಲ್ಲವೇ ಸೊಲ್ಲುಗಳಲ್ಲಿ ಬಳಕೆಯಾಗುವ ಪದಗಳ ರಚನೆಯ ಲ್ಲಾಗಲಿ ಹೆಚ್ಚು ನಿಯಮಗಳಿರಲಿಲ್ಲ. ಸೊಲ್ಲುಗಳಲ್ಲಿ ಪದಗಳನ್ನು ಬಳಸುವಲ್ಲೂ ಒಂದು ಕ್ರಮವಿರಲಿಲ್ಲ.
ಇಂತಹ ಬೆರಕೆನುಡಿ ಒಂದು ಸ್ವಾಬಾವಿಕ ನುಡಿಯಾಗಿ ಮಾರ್ಪಡಲು ಒಂದೇ ಒಂದು ತಲೆಮಾರು ಮಾತ್ರ ಬೇಕಾಗಿತ್ತು. ಹವಾಯಿ ದ್ವೀಪದಲ್ಲಿ ನೆಲೆಸಿದ್ದ ಈ ಜನರ ಮಕ್ಕಳು ಚಿಕ್ಕಂದಿನಲ್ಲಿ ಈ ಬೆರಕೆನುಡಿಯನ್ನು ಮಾತ್ರವೇ ಕೇಳುತ್ತಿರ ಬೇಕಾಗಿತ್ತು. ಆದರೆ, ಆ ರೀತಿ ಕೇಳುತ್ತಾ ಅದನ್ನು ತಮ್ಮ ಮೊದಲ ನುಡಿಯಾಗಿ, ಮತ್ತು ಬೆಳವಣಿಗೆಯ ಅಂಗವಾಗಿ ಪಡೆಯುತ್ತಿರುವಾಗ, ಅವರ ಬಾಯಿಯಲ್ಲಿ ಅದೊಂದು ಸ್ವಾಬಾವಿಕ ನುಡಿಯಾಗಿ ಮಾರ್ಪಟ್ಟಿತ್ತು.
ಹವಾಯಿಯಲ್ಲಿ ನಡೆದ ಈ ಮಾರ್ಪಾಡು ದೊಡ್ಡವರು ಮಾತು ಕಲಿಯುವು ದಕ್ಕೂ ಚಿಕ್ಕವರು ಮಾತು ಪಡೆಯುವುದಕ್ಕೂ ನಡುವಿರುವ ವ್ಯತ್ಯಾಸವನ್ನು ಬಹಳ ಚನ್ನಾಗಿ ತೋರಿಸಿಕೊಡುತ್ತದೆ. ತಮ್ಮ ನಡುವಿನ ಸಂಪರ್ಕಸಾದನವಾಗಿ ದೊಡ್ಡವರು ಒಂದು ಬೆರಕೆನುಡಿಯನ್ನು ಮಾತ್ರವೇ ತಯಾರಿಸಿಕೊಳ್ಳಬಲ್ಲರು. ಅದನ್ನೊಂದು ಸ್ವಾಬಾವಿಕ ನುಡಿಯಾಗಿ ಮಾರ್ಪಡಿಸಿಕೊಳ್ಳುವ ಅಳವು ಅವರ ಲ್ಲಿಲ್ಲ.
ಆದರೆ, ಇಂತಹ ಬೆರಕೆನುಡಿಯನ್ನು ಕೇಳುತ್ತಾ ಬೆಳೆಯುತ್ತಿರುವ ಚಿಕ್ಕ ಮಕ್ಕಳಿಗೆ ಅದನ್ನೊಂದು ಸ್ವಾಬಾವಿಕ ನುಡಿಯಾಗಿ, ಎಂದರೆ ಸಂಪೂರ್ಣವಾದ ಸೊಲ್ಲರಿಮೆಯಿರುವ ಮತ್ತು ಸಾಕಶ್ಟು ಪದಸಂಗ್ರಹವಿರುವ ನುಡಿಯಾಗಿ ಮಾರ್ಪಡಿಸುವ ಅಳವು (ಮಾತು ಪಡೆಯುವ ಸಾದನ) ಹುಟ್ಟಿನಿಂದಲೇ ಬಂದಿರುತ್ತದೆ. ಈ ಅಳವಿನ ಸಹಾಯದಿಂದ ಹವಾಯಿಯ ಮಕ್ಕಳು ತಾವು ಕೇಳಿದ ಬೆರಕೆನುಡಿಯನ್ನು ಅಂತಹ ಒಂದು ಸ್ವಾಬಾವಿಕ ನುಡಿಯಾಗಿ ಮಾರ್ಪಡಿಸಿ ಕೊಂಡಿದ್ದರು.
ಬೇರೆಯೂ ಹಲವು ಕಡೆಗಳಲ್ಲಿ ಇಂತಹ ಬೆರೆಕೆ ನುಡಿಗಳು ಸ್ವಾಬಾವಿಕ ನುಡಿಗಳಾಗಿ ಮಾರ್ಪಟ್ಟಿವೆ. ಎತ್ತುಗೆಗಾಗಿ, ಹಯ್ತಿಯಲ್ಲಿ ¥sóï್ರಂಚ್, ಅರೇಬಿಕ್, ಸ್ಪೇನಿಶ್, ಇಂಗ್ಲಿಶ್, ಮತ್ತು ಕೆಲವು ಆಫಿû್ರಕನ್ ನುಡಿಗಳ ಪದಗಳನ್ನು ಬಳಸಿ ಉಂಟುಮಾಡಿದ ಬೆರಕೆನುಡಿಯನ್ನು ಮಕ್ಕಳು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆದಾಗ, ಅದೊಂದು ಸ್ವಾಬಾವಿಕ ನುಡಿಯಾಗಿ ಮಾರ್ಪಟ್ಟಿತ್ತು; ಇವತ್ತು ಅದು ಅಲ್ಲಿನ ಆಡಳಿತ ನುಡಿಗಳಲ್ಲೊಂದಾಗಿದೆ.
ಮಕ್ಕಳು ತಮ್ಮ ತಾಯ್ನುಡಿಯನ್ನು ಕಲಿತುಕೊಳ್ಳುವಲ್ಲಿ ತೋರಿಸುವ ಈ ಅಳವೇ ನುಡಿಯ ಜೀವಂತಿಕೆಗೆ ಆದಾರವಾಗಿದೆ; ಆ ಆದಾರ ತಪ್ಪಿಹೋದಾಗ, ನುಡಿ ಸತ್ತು ಹೋಗುತ್ತದೆ, ಇಲ್ಲವೇ ಅಳಿದುಹೋಗುತ್ತದೆ. ಹಾಗಾಗಿ, ಸತ್ತು ಹೋಗಿರುವ, ಎಂದರೆ ಬರಹದಲ್ಲಿ ಮಾತ್ರವೇ ಉಳಿದಿರುವ, ಮತ್ತು ಮಾತಿನಲ್ಲಿ ಬಳಕೆಯಲ್ಲಿದ್ದರೂ ಮಕ್ಕಳ ತಾಯ್ನುಡಿಯಾಗಿ ಬಳಕೆಯಲ್ಲಿಲ್ಲದ ನುಡಿಯೊಂದನ್ನು ಜೀವಂತವಾಗುವಂತೆ ಮಾಡಬೇಕಿದ್ದಲ್ಲಿ, ಅದು ಒಂದು ಸಮಾಜದಲ್ಲಿರುವ ಚಿಕ್ಕ ಮಕ್ಕಳ ತಾಯ್ನುಡಿಯಾಗುವಂತೆ ಮಾಡುವುದೊಂದೇ ನಮಗಿರುವ ದಾರಿ.
(ಚ) ಹೀಬ್ರೂ ಬರಹ ಮಾತಿನ ನುಡಿಯಾದುದು
ಇಸ್ರೇಲ್ನಲ್ಲಿ ಸುಮಾರು ಒಂದೂವರೆ ಸಾವಿರ ವರ್ಶಗಳಶ್ಟು ಹಿಂದೆ ಬಳಕೆ ಯಲ್ಲಿದ್ದ ಹೀಬ್ರೂ ನುಡಿಯನ್ನು ಈ ರೀತಿ ಜೀವಂತ ನುಡಿಯಾಗಿ ಮಾರ್ಪಡಿಸ ಲಾಗಿದೆ. ಈ ಹೀಬ್ರೂ ನುಡಿ ನಾಲ್ಕನೇ ಶತಮಾನದ ವರೆಗೆ ಮಾತ್ರ ಜನರ ತಾಯ್ನುಡಿಯಾಗಿ ಬಳಕೆಯಲ್ಲಿತ್ತು; ಆಮೇಲೆ ಅದು ಬರಹದಲ್ಲಿ ಮತ್ತು ಮತಕ್ಕೆ ಸಂಬಂದಿಸಿದ ಕೆಲಸಗಳಲ್ಲಿ ಮಾತ್ರ ಬಳಕೆಯಲ್ಲುಳಿದಿತ್ತು, ಎಂದರೆ ಒಂದು ಸತ್ತ ನುಡಿಯಾಗಿತ್ತು.
ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಅದನ್ನು ಜೀವಂತಗೊಳಿಸುವ ಪ್ರಯತ್ನ ಮೊದಲಾಯಿತು. ಈ ಪ್ರಯತ್ನ ಎರಡು ದಾರಿಗಳಲ್ಲಿ ಮುಂದು ವರಿಯಿತು:
ಮತಕ್ಕೆ ಸಂಬಂದಿಸಿದ ಕೆಲಸಗಳಲ್ಲಿ ಮಾತ್ರವಲ್ಲದೆ, ಬೇರೆ ಕೆಲಸಗಳಲ್ಲೂ ಅದನ್ನು ಬರಹದ ನುಡಿಯಾಗಿ ಬಳಸಲು ತೊಡಗಿದುದು ಇವುಗಳಲ್ಲೊಂದು; ಈ ಕೆಲಸವನ್ನು ಮುಕ್ಯವಾಗಿ ಯುರೋಪಿನ ನಗರಗಳಲ್ಲಿ ನಡೆಸಲಾಯಿತು.
ಅದನ್ನು ಮಾತಿನಲ್ಲೂ ಬಳಸಲು ತೊಡಗಿದುದು ಇನ್ನೊಂದು; ಈ ಕೆಲಸ ವನ್ನು ಮುಕ್ಯವಾಗಿ ಪೇಲಸ್ಟಯ್ನ್ನ ವಲಸೆಗಾರರು ಕಯ್ಗೆತ್ತಿಕೊಂಡರು. ಹೀಗೆ ಎರಡು ಬೇರೆ ಬೇರೆ ಕಡೆಗಳಲ್ಲಿ ನಡೆಸಿದ ಈ ಎರಡು ಕೆಲಸಗಳಲ್ಲಿ ಎರಡು ಬೇರೆ ಬೇರೆ ಬಗೆಯ ಹೀಬ್ರೂಗಳು ಬಳಕೆಗೊಂಡುವು. ಹಾಗಾಗಿ, ಇವತ್ತಿಗೂ ಇಸ್ರೇಲ್ನಲ್ಲಿ ಬರಹದ ಹೀಬ್ರೂ ಮತ್ತು ಮಾತಿನ ಹೀಬ್ರೂಗಳ ನಡುವೆ ಹಲವು ವ್ಯತ್ಯಾಸಗಳಿವೆ.
ಆದರೆ, ನಿಜಕ್ಕೂ ಈ ಎರಡು ಬಗೆಯ ಕೆಲಸಗಳನ್ನು ನಡೆಸುವಲ್ಲೂ ಹೀಬ್ರೂ ನುಡಿಯನ್ನು ಒಂದೂವರೆ ಸಾವಿರ ವರ್ಶಗಳಶ್ಟು ಹಿಂದಿದ್ದ ಹಾಗೆಯೇ ಬಳಸದೆ, ಅದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ, ಅದು ಇವತ್ತಿನ ಜನಜೀವನಕ್ಕೆ ಹೊಂದಿಕೆಯಾಗುವಂತೆ ಮಾಡಲಾಗಿದೆ.
ಹಳೆ ಹೀಬ್ರೂ ನುಡಿ, ಅರೇಬಿಕ್ ನುಡಿಯ ಹಾಗೆ, ಸೆಮೆಟಿಕ್ ನುಡಿ ಕುಟುಂಬಕ್ಕೆ ಸೇರಿದ ನುಡಿ; ಆದರೆ, ಇಸ್ರೇಲ್ನಲ್ಲಿ ಇವತ್ತು ಬಳಕೆಗೆ ಬಂದಿರುವ ಹೊಸ ಹೀಬ್ರೂ ನುಡಿ ಬಹಳ ಮಟ್ಟಿಗೆ ಒಂದು ಇಂಡೋ-ಯುರೋಪಿಯನ್ ನುಡಿಯ ಹಾಗಿದೆ; ಉಚ್ಚಾರಣೆ, ಸೊಲ್ಲರಿಮೆ ಮತ್ತು ಪದನೆರಕೆಗಳಲ್ಲಿ ಅದು ಜರ್ಮನ್, ರಶ್ಯನ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳನ್ನು ಹೋಲುತ್ತದೆ.
ಜೀವಂತವಾಗಿರುವ ನುಡಿ ತಲೆಮಾರಿನಿಂದ ತಲೆಮಾರಿಗೆ ಬದಲಾಗುತ್ತಾ ಹೋಗುತ್ತದೆ; ಸತ್ತ ನುಡಿಯೊಂದನ್ನು ಮಾತಿನಲ್ಲಿ ಬಳಸತೊಡಗಿ ಜೀವಂತವಾಗುವಂತೆ ಮಾಡಹೊರಟರೆ, ಮತ್ತು ಅದು ಮಿಲಿಯಗಟ್ಟಳೆ ಮಕ್ಕಳ ಬೆಳವಣಿಗೆಯ ಅಂಗವಾಗುವ ಹಾಗೆ (ಎಂದರೆ ತಾಯ್ನುಡಿಯಾಗುವ ಹಾಗೆ) ಮಾಡಿದರೆ, ಅದೂ ಕೂಡ ಸಮಯದಿಂದ ಸಮಯಕ್ಕೆ ಬದಲಾಗುತ್ತಾ ಹೋಗದಿರದು.
ಹೊಸ ಹೀಬ್ರೂ ಈಗಾಗಲೇ ಹಳೆ ಹೀಬ್ರೂವಿಗಿಂತ ಸಾಕಶ್ಟು ಬದಲಾಗಿದೆ; ಅವೆರಡೂ ಬೇರೆ ಬೇರೆ ನುಡಿಗಳೆಂದು ಹೇಳಬಹುದಾದಶ್ಟು ಬದಲಾಗಿದೆ; ಸುಮಾರು ಅಯ್ದು ಮಿಲಿಯ ಜನರು ಅದನ್ನು ಇವತ್ತು ತಮ್ಮ ತಾಯ್ನುಡಿಯಾಗಿ ಬಳಸುತ್ತಿರುವ ಕಾರಣ, ಅದು ಇನ್ನಶ್ಟು ಬದಲಾಗುತ್ತಾ ಹೋಗದಿರದು.
ಹೀಬ್ರುವಿನ ಹಾಗೆ ಬೇರೆಯೂ ಕೆಲವು ಹೆಚ್ಚು ಕಡಿಮೆ ಬರಹದಲ್ಲಿ ಮಾತ್ರವೇ ಉಳಿದಿರುವ ನುಡಿಗಳನ್ನು ಮಾತಿನ ನುಡಿಗಳಾಗಿ ಮಾರ್ಪಡಿಸಲು, ಮತ್ತು ಅವಕ್ಕೆ ಜೀವ ತುಂಬಲು ಪ್ರಯತ್ನಿಸಲಾಗುತ್ತಿದೆ. ಎತ್ತುಗೆಗಾಗಿ, ಇಂಗ್ಲೆಂಡಿನ ತೆಂಕು-ಪಡುವ ತುದಿಯಲ್ಲಿರುವ ಕೋರ್ನ್ವಾಲ್ನ ಜನರು ಹದಿನೆಂಟನೇ ಶತಮಾನಕ್ಕೆ ಮೊದಲು ತಮ್ಮ ಪಂಗಡದ ನುಡಿಯಾಗಿದ್ದ, ಮತ್ತು ಈಗ ಬರಹದಲ್ಲಿ ಮಾತ್ರ ಉಳಿದಿರುವ ಕೋರ್ನಿಶ್ ನುಡಿಯನ್ನು ಜೀವಂತಗೊಳಿಸುವ ಪ್ರಯತ್ನ ದಲ್ಲಿದ್ದಾರೆ.
ಇಪ್ಪತ್ತನೇ ಶತಮಾನದ ಸುರುವಿಗೆ ತೊಡಗಿದ ಈ ಪ್ರಯತ್ನದಿಂದಾಗಿ, ಇವತ್ತು ನೂರಾರು ಮಂದಿ ಕೋರ್ನಿಶ್ನಲ್ಲಿ ಮಾತನಾಡಲು ಕಲಿತಿದ್ದಾರೆ. ಇದರಿಂದಾಗಿ, ಅದನ್ನು ಬ್ರಿಟನ್ನಿನ ಅಲ್ಪಸಂಕ್ಯಾತರ ಆಡಳಿತ ನುಡಿಯೆಂಬುದಾಗಿ ಪರಿಗಣಿಸಲು ಅಲ್ಲಿನ ಸರಕಾರವೂ ಒಪ್ಪಿಗೆ ನೀಡಿದೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಬರಿಯ ಮುನ್ನೂರು ಮಂದಿ ಮಾತ್ರ ಕೋರ್ನಿಶ್ನಲ್ಲಿ ಚನ್ನಾಗಿ ಮಾತನಾಡಬಲ್ಲವರಾಗಿದ್ದರು; ಅವರ ಎಣಿಕೆ ಇವತ್ತು ಎರಡು ಸಾವಿರಕ್ಕಿಂತಲೂ ಹೆಚ್ಚಾಗಿದೆ. ಆದರೆ, ಈ ಪ್ರಯತ್ನ ಎಲ್ಲಿಗೆ ಮುಟ್ಟುತ್ತದೆ ಎಂದು ಹೇಳುವುದು ಸದ್ಯಕಂತೂ ಕಶ್ಟವೇ.
ಇಸ್ರೇಲ್ನಲ್ಲಿ ಹೀಬ್ರೂ ನುಡಿಯನ್ನು ಬಿಟ್ಟರೆ ಎಲ್ಲರಿಗೂ ಒಪ್ಪಿಗೆಯಾಗಬಲ್ಲ ಬೇರೆ ಯಾವ ನುಡಿಯೂ ಇರಲಿಲ್ಲ; ಯಾಕೆಂದರೆ, ಬೇರೆ ಬೇರೆ ನಾಡುಗಳಿಂದ ಅಲ್ಲಿಗೆ ವಲಸೆ ಬಂದ ಜನರು ಬೇರೆ ಬೇರೆ (ಜರ್ಮನ್, ರಶ್ಯನ್, ಸ್ಪಾನಿಶ್, ಇಂಗ್ಲಿಶ್ ಮೊದಲಾದ) ನುಡಿಗಳನ್ನು ಅರಿತಿದ್ದರಲ್ಲದೆ, ಅವರೆಲ್ಲರಿಗೂ ತಿಳಿಯುವಂತಹ ಒಂದು ನುಡಿಯಿರಲಿಲ್ಲ. ಇದಲ್ಲದೆ, ಹೀಬ್ರೂ ನುಡಿಗೆ ಯೆಹೂದಿ ಮತದ ಬೆಂಬಲವಿತ್ತು. ಹಾಗಾಗಿ, ಅದು ಎಲ್ಲರಿಗೂ ಒಪ್ಪಿಗೆಯಾಗಿ, ನಾಡಿನ ನುಡಿಯಾಯಿತು.
ಈ ರೀತಿ ಸಮಾಜ, ಹಣಕಾಸು ಮತ್ತು ಆಡಳಿತಗಳಿಗೆ ಸಂಬಂದಿಸಿದ ವಿಶಯಗಳ ನೆರವಿದ್ದಲ್ಲಿ ಮಾತ್ರ, ಒಂದು ಸತ್ತ ನುಡಿ’ಎಲ್ಲಾ ಜನರ ತಾಯ್ನುಡಿ ಯಾಗಿ ಬಳಕೆಗೆ ಬರಲು, ಮತ್ತು ಆ ಮೂಲಕ ಜೀವಂತಿಕೆಯನ್ನು ಪಡೆಯಲು ಸಾದ್ಯವಾದೀತೆಂದು ತೋರುತ್ತದೆ. ಆದರೆ, ಜನರ ಒಲವಿನ ಬೆಂಬಲ ದೊರೆತರೆ, ಇಂತಹದೊಂದು ಪ್ರಯತ್ನ ಎಂತಹ ತಡೆಗಳನ್ನೂ ಇದಿರಿಸಿ ಮುಂದು ವರಿಯಬಲ್ಲುದೆಂದೂ ತೋರುತ್ತದೆ.
ಸಂಸ್ಕ್ರುತ ಜೀವಂತ ನುಡಿಯಾಗಬಲ್ಲುದೇ?
ಮೇಲಿನ ವಿಶಯವನ್ನು ಗಮನದಲ್ಲಿರಿಸಿಕೊಂಡು ಸಂಸ್ಕ್ರುತವನ್ನು ಪರಿಶೀಲಿಸಿದೆ ವಾದರೆ, ನಿಜಕ್ಕೂ ಅದು ಒಂದು ಬರಹದ ನುಡಿಯಲ್ಲದೆ ಜೀವಂತವಾಗಿರುವ ಮಾತಿನ ನುಡಿಯಲ್ಲ ಎಂಬುದು ಸ್ಪಶ್ಟವಾಗುತ್ತದೆ. ಹಲವು ಮಂದಿ ಮಕ್ಕಳಿಗೆ ಅದನ್ನು ಕಲಿಸಲಾಗುತ್ತಿದೆಯಾದರೂ, ಹಾಗೆ ಕಲಿಯುವವರು ಅದನ್ನು ತಮ್ಮ ಎರಡನೆಯ ನುಡಿಯಾಗಿ ಕಲಿಯುತ್ತಾರಲ್ಲದೆ, ಮೊದಲನೆಯ ನುಡಿಯಾಗಿ (ತಾಯ್ನುಡಿಯಾಗಿ) ಕಲಿಯುವುದಿಲ್ಲ. ಈ ಕಾರಣಕ್ಕಾಗಿ, ಅದು ಕಳೆದ ಎರಡು ಸಾವಿರ ವರ್ಶಗಳಲ್ಲಿ ಸ್ವಲ್ಪವೂ ಬದಲಾಗದೆ ಉಳಿದಿದೆ.
ಮೇಲೆ ವಿವರಿಸಿದ ಹಾಗೆ, ಅದೊಂದು ಜೀವಂತ ನುಡಿಯಾಗಿ ಹೊರ ಹೊಮ್ಮಬೇಕಾದರೆ, ಸಾವಿರಾರು ಮಕ್ಕಳು ಅದನ್ನು ತಮ್ಮ ತಾಯ್ನುಡಿಯಾಗಿ ಮತ್ತು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುವ ಹಾಗಾಗಬೇಕು; ಅದರ ಸೊಲ್ಲರಿಮೆಯನ್ನು ಅವರು ದೊಡ್ಡವರಿಂದ ಕಲಿಯುವ ಬದಲು, ತಾವೇ ತಮ್ಮ ಅರಿವಿಗೆ ಬಾರದ ಹಾಗೆ ತಮ್ಮ ಮಿದುಳಿನಲ್ಲಿ ಕಟ್ಟಿಕೊಳ್ಳುವ ಹಾಗಾಗ ಬೇಕು; ಮತ್ತು ಹೀಗೆ ಮಾಡುವ ಮೂಲಕ, ಅವರು ಬಳಸುವ ಪದಗಳು ಮತ್ತು ಸೊಲ್ಲುಗಳು ಪಾಣಿನಿಯ ಸೊಲ್ಲರಿಮೆಯ ಕಟ್ಟಿನಿಂದ ಹೊರಬರಲು ಸಾದ್ಯವಾಗುವಂತಾಗಬೇಕು.
ಸದ್ಯಕ್ಕೆ ಪಾಣಿನಿಯ ಕಟ್ಟಲೆಗಳನ್ನು ಮುರಿಯುವ ಸ್ವಾತಂತ್ರ್ಯ ಮಹಾಕವಿಗಳಿಗೆ ಮಾತ್ರ ಇದೆಯಲ್ಲದೆ, ಸಾಮಾನ್ಯ ಜನರಿಗೆ ಇಲ್ಲವೇ ಚಿಕ್ಕ ಮಕ್ಕಳಿಗೆ ಇಲ್ಲ. ಮಕ್ಕಳಿಗೆ ಅದನ್ನು ಶಾಲೆಗಳಲ್ಲಿ ಇಲ್ಲವೇ ಗುರುಕುಲಗಳಲ್ಲಿ ಕಲಿಸಿಕೊಡಬೇಕಾಗು ತ್ತದೆ; ಅವರು ಅದನ್ನು ತಾವೇ ಕಲಿತುಕೊಳ್ಳುವ ಹಾಗಿಲ್ಲ. ಹಾಗಾಗಿ, ಅದು ಬರಹದ ನುಡಿಯಾಗಿಯೇ ಇರಬಲ್ಲುದಲ್ಲದೆ, ಜೀವಂತವಾಗಿರುವ ಮಾತಿನ ನುಡಿಯಾಗಲಾರದು.
(ಕ) ಸಂಸ್ಕ್ರುತ ಜೀವಂತವೆನ್ನಲು ಕೊಡುವ ಆದಾರಗಳು
ಸಂಸ್ಕ್ರುತ ನಿಜಕ್ಕೂ ಸತ್ತಿಲ್ಲ, ಜೀವಂತವಾಗಿದೆ ಎಂಬ ವಾದಕ್ಕೆ ಆದಾರವಾಗಿ ಕೆಲವರು ಹಲವು ವಿಶಯಗಳನ್ನು ನಮ್ಮ ಮುಂದಿರಿಸುತ್ತಾರೆ:
(1) ಬಾರತದ ಎಲ್ಲಾ ನುಡಿಗಳ ಬರಹಗಳಿಗೂ ಸಂಸ್ಕ್ರುತದ ಬರಹಗಳು (ಕಾವ್ಯ, ನಾಟಕ, ಪುರಾಣ ಮೊದಲಾದವುಗಳು) ಆದಾರವಾಗಿವೆ; ಬಾರತ ದಲ್ಲಶ್ಟೇ ಅಲ್ಲ, ಬೇರೆ ನೆರೆಕರೆಯ ನುಡಿಗಳ ಬರಹಗಳ ಮೇಲೂ ಅವು ಪ್ರಬಾವ ಬೀರಿವೆ.
(2) ಬಾರತದ ಹೆಚ್ಚಿನ ನುಡಿಗಳ ಮೇಲೂ ಸಂಸ್ಕುತ ತನ್ನ ಪ್ರಬಾವ ಬೀರಿದೆ; ಅವೆಲ್ಲವೂ ಸಂಸ್ಕ್ರುತದಿಂದ ತುಂಬಾ ಪದಗಳನ್ನು ಎರವಲು ಪಡೆದಿವೆ. (ನಿಜಕ್ಕೂ ಸಂಸ್ಕ್ರುತ ಈ ರೀತಿ ಪ್ರಬಾವ ಬೀರಿರುವುದು ಈ ನುಡಿಗಳ ಬರಹದ ಮೇಲಲ್ಲದೆ, ನುಡಿಗಳ (ಎಂದರೆ ಮಾತಿನ) ಮೇಲಲ್ಲ.)
(3) ಇವತ್ತಿಗೂ ಸಂಸ್ಕ್ರುತದಲ್ಲಿ ಚನ್ನಾಗಿ ಮಾತನಾಡಬಲ್ಲ, ಮತ್ತು ಅದರಲ್ಲಿ ಹೇಳಿದುದನ್ನು ತಿಳಿಯಬಲ್ಲ ಸಾವಿರಾರು ಜನರು ಬಾರತ ಮೂಲೆ ಮೂಲೆ ಗಳಲ್ಲಿದ್ದಾರೆ, ಮತ್ತು ಹೊರ ದೇಶಗಳಲ್ಲೂ ಇದ್ದಾರೆ.
(4) ಬಾರತದ ಸಂಸ್ಕ್ರುತಿ, ಮತ್ತು ಅದಕ್ಕೆ ಸಂಬಂದಿಸಿದ ಪುರಾಣಗಳು, ಶಾಸ್ತ್ರಗಳು, ನೀತಿಕತೆಗಳು ಮೊದಲಾದುವೆಲ್ಲ ಸಂಸ್ಕ್ರುತದ ಬರಹಗಳಲ್ಲಿವೆ. (ಇದೂ ಪೂರ್ತಿ ಸರಿಯಲ್ಲ; ಯಾಕೆಂದರೆ, ಬೇರೆ ನುಡಿಗಳ ಬರಹಗಳಲ್ಲಿ, ಮತ್ತು ಬರಹಕ್ಕಿಳಿಸದ ನುಡಿಗಳಲ್ಲಿಯೂ ಬಾರತದ ಸಂಸ್ಕ್ರುತಿಯ ಅಂಶಗಳಿವೆ, ಮತ್ತು ಇವುಗಳಲ್ಲಿ ಹಲವು ಸಂಸ್ಕ್ರುತ ಬರಹಗಳಲ್ಲಿಲ್ಲ.)
(5) ಅದನ್ನು ಬಾರತದ ರಾಶ್ಟ್ರೀಯ ನುಡಿಗಳಲ್ಲಿ ಒಂದೆಂಬುದಾಗಿ ಪರಿಗಣಿಸಲಾಗಿದೆ, ಮತ್ತು ಉತ್ತರಕಂಡದಲ್ಲಿ ಅದನ್ನು ಎರಡನೆಯ ಆಡಳಿತ ನುಡಿಯೆಂಬುದಾಗಿ ಪರಿಗಣಿಸಲಾಗಿದೆ.
(6) ತಮಿಳು ನಾಡಿನ ಸರಕಾರ ಸಂಸ್ಕ್ರುತವನ್ನು `ಸತ್ತ ನುಡಿ’ ಎಂಬುದಾಗಿ ಹೇಳಿರುವುದು ತಪ್ಪು, ಅದು ಅಜ್ನಾನದಿಂದ ಕೊಟ್ಟಿರುವ ಹೇಳಿಕೆ ಎಂಬುದಾಗಿ 1998 ಜನವರಿಯಲ್ಲಿ ಚನ್ನಯ್ಯ ಉಚ್ಚ ನ್ಯಾಯಾಲಯ ತೀರ್ಪಿತ್ತಿದೆ.
(ಚ) ನಿಜಕ್ಕೂ ಇದು ಜೀವಂತಿಕೆಯಲ್ಲ
ಆದರೆ, ಈ ಎಲ್ಲಾ ವಿಶಯಗಳೂ ಅದು, ಮೇಲೆ ವಿವರಿಸಿದ ಹಾಗೆ, ಅಳಿದ ನುಡಿಯಲ್ಲ, ಸತ್ತ (ಇಲ್ಲವೇ ಬರಹದ) ನುಡಿ ಎಂಬುದನ್ನು ಬೆಂಬಲಿಸಬಹುದಲ್ಲದೆ, ಅದು ಜೀವಂತವಾಗಿರುವ ನುಡಿ ಎಂಬುದನ್ನು ಬೆಂಬಲಿಸಲಾರದು.
ಯಾಕೆಂದರೆ, ಮೇಲೆ ವಿವರಿಸಿದ ಹಾಗೆ, ಜೀವಂತವಾಗಿರುವ ಯಾವ ನುಡಿಯೂ ಎರಡು ಸಾವಿರ ವರ್ಶ ಬದಲಾಗದೆ ಉಳಿಯುವುದಿಲ್ಲ. ಸಂಸ್ಕ್ರುತ ಆ ರೀತಿ ಬದಲಾಗದೆ ಉಳಿದಿರುವುದಕ್ಕೆ ಅದು ತನ್ನ ಜೀವಂತಿಕೆಯನ್ನು ಕಳೆದು ಕೊಂಡಿರುವುದೇ ಕಾರಣ. ಅದನ್ನು ಮಾತಿನಲ್ಲಿ ಬಳಸಲಿ, ಇಲ್ಲವೇ ಬರಹದಲ್ಲಿ ಬಳಸಲಿ, ಪಾಣಿನಿಯ ವ್ಯಾಕರಣ ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸು ತ್ತಿರಲೇ ಬೇಕಾಗುತ್ತದೆ.
ಮುಂದೆಯೂ ಅದು ಈ ರೀತಿ ಬದಲಾಗದೆಯೇ ಉಳಿಯಬೇಕಾಗುತ್ತದೆ; ಯಾಕೆಂದರೆ, ಮಾತಿನ ಬಳಕೆಯ ಮೂಲಕ ಅದು ಬದಲಾದರೆ, ಮತ್ತು ಪಾಣಿನಿಯ ವ್ಯಾಕರಣ ನಿಯಮಗಳನ್ನು ಬಿಟ್ಟುಕೊಟ್ಟರೆ, ಪ್ರಾಕ್ರುತ ನುಡಿಗಳು ಇವತ್ತಿನ ಹಿಂದಿ, ಮರಾಟಿ, ಬಂಗಾಲಿ ಮೊದಲಾದ ನುಡಿಗಳಾಗಿ ಬದಲಾದ ಹಾಗೆ, ಸಂಸ್ಕ್ರುತವೂ ಸಂಸ್ಕ್ರುತವಾಗಿ ಉಳಿಯದೆ ಬೇರೆಯೇ ಒಂದು ನುಡಿ ಯಾದೀತು.
ತಿರುಳು
ಹಿಂದಿನ ಕಾಲದಲ್ಲಿ ತಿಳಿವಿನ ಒಯ್ಯುಗೆಯಾಗಿ ಬಾರತದಲ್ಲೆಲ್ಲ ಸಂಸ್ಕ್ರುತವನ್ನೇ ಮುಕ್ಯವಾಗಿ ಬಳಸಲಾಗುತ್ತಿತ್ತು; ಹಾಗಾಗಿ, ತಿಳಿವನ್ನು ಪಡೆಯಬೇಕೆಂದಿರುವವರೆಲ್ಲ ಸಂಸ್ಕ್ರುತವನ್ನು ಕಲಿಯಬೇಕಾಗುತ್ತಿತ್ತು. ಅದರ ಪದಗಳನ್ನು ಕನ್ನಡದಂತಹ ಬೇರೆ ನುಡಿಗಳಲ್ಲಿ ಬಳಸುವಾಗಲೂ ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಬೇಕೆಂಬ ಬಯಕೆ ಹಲವರಲ್ಲಿ ಉಂಟಾಗಿದ್ದುದಕ್ಕೆ ಅದಕ್ಕಿದ್ದ ಈ ಹಿರಿಮೆಯೇ ಮುಕ್ಯ ಕಾರಣ.
ಆದರೆ, ಇವತ್ತು ಸಂಸ್ಕ್ರುತಕ್ಕೆ ಅಂತಹ ಹಿರಿಮೆಯಿಲ್ಲ; ಯಾಕೆಂದರೆ, ಅದು ಇವತ್ತು ತಿಳಿವಿನ ಒಯ್ಯುಗೆಯಾಗಿ ಉಳಿದಿಲ್ಲ; ಹೊಸ ಹೊಸ ತಿಳಿವುಗಳನ್ನು ಯಾರೂ ಅದರಲ್ಲಿ ಕೂಡಿಡುವುದಿಲ್ಲ, ಮತ್ತು ಅದರಲ್ಲಿದ್ದ ಹಳೆ ತಿಳಿವುಗಳಲ್ಲಿ ಹೆಚ್ಚಿನವೂ ಕನ್ನಡವೇ ಮೊದಲಾದ ಇವತ್ತಿನ ನುಡಿಗಳಲ್ಲಿ ಸಿಗುತ್ತವೆ.
ಹೀಗಿದ್ದರೂ, ಅದರ ಹಿಂದಿನ ಹಿರಿಮೆಯನ್ನು ಇವತ್ತಿಗೂ ಉಳಿಸಿಕೊಳ್ಳ ಬೇಕೆಂಬ ತುಡಿತವಿರುವ ಕೆಲವರು ಅದೊಂದು ಅದ್ಬುತವಾದ ಬರಹ, ಎಣ್ಣುಕ ಗಳಲ್ಲಿ ಬಳಕೆಯಾಗಲು ತಕ್ಕುದಾದುದು, ತುಂಬಾ ವಯ್ಜ್ನಾನಿಕವಾಗಿ ಅದನ್ನು ರಚಿಸಲಾಗಿದೆ, ಜಗತ್ತಿನ ಎಲ್ಲಾ ನುಡಿಗಳಿಗೂ ಅದು ತಾಯಿಯಂತಿದೆ ಎಂಬಂತಹ ಹಲವು ತಪ್ಪು ಅನಿಸಿಕೆಗಳನ್ನು ಜನರಲ್ಲಿ ಮೂಡಿಸಿ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ತಪ್ಪು ಅನಿಸಿಕೆಗಳನ್ನು ಇವತ್ತು ನೀಗಬೇಕಾಗಿದೆ.
ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿ ಇರುವ ಹಾಗೆಯೇ ಬರೆಯಬೇಕು ಎಂಬ ಕಟ್ಟಲೆಯೂ ಈ ತಪ್ಪು ಅನಿಸಿಕೆಯಿಂದ ಮೂಡಿಬಂದಿದೆ.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ