ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಿರುಮಲೇಶ್ ಅವರ ಬರಹದ ಕುರಿತು

ಡಾ. ಡಿ. ಎನ್. ಶಂಕರ ಬಟ್
ಇತ್ತೀಚಿನ ಬರಹಗಳು: ಡಾ. ಡಿ. ಎನ್. ಶಂಕರ ಬಟ್ (ಎಲ್ಲವನ್ನು ಓದಿ)

ಹಿರಿಯ ಭಾಷಾ ತಜ್ಞ ಡಾ.ಶಂಕರ ಬಟ್ ಅವರು ಹಿರಿಯ ಸಾಹಿತಿ, ಭಾಷಾ ವಿಜ್ಞಾನಿ ಡಾ.ಕೆ.ವಿ. ತಿರುಮಲೇಶ್ ಅವರ ಬರಹಕ್ಕೆ ಈ ಮೂಲಕ ತಮ್ಮ ಪ್ರತಿಕ್ರಿಯೆ, ಟಿಪ್ಪಣಿಯನ್ನು ನೀಡಬಯಸುತ್ತಿದ್ದು ಓದುಗರ ಅವಗಾಹನೆಗಾಗಿ ಪ್ರಕಟಿಸಲಾಗಿದೆ.

ತಿರುಮಲೇಶ್ ಅವರು ಕತೆಗಾರರು, ಕವಿಗಳು; ಅವರಿಗೆ ಒಂದು ವಾಕ್ಯದಿಂದ ಹಲವು ಪದಗಳನ್ನು ಪಡೆಯಲು ಬರುತ್ತದೆ; ಸರಿಯಾದ ಹೇಳಿಕೆಯನ್ನು ತಪ್ಪೆಂದು ಮತ್ತು ತಪ್ಪಾದುದನ್ನು ಸರಿಯೆಂದು ತೋರಿಸಿಕೊಡಲು ಬರುತ್ತದೆ. ಆದರೆ, ನಾನು ಬರಿಯ ವಯ್ಯಾಕರಣಿ. ನನಗೆ ಇಂತಹ ಕಲೆ ತಿಳಿದಿಲ್ಲ. ಇದ್ದುದನ್ನು ಇದ್ದಂತೆ ಹೇಳುವುದಶ್ಟೇ ನನಗೆ ಗೊತ್ತಿದೆ.
ಮೇಲಿನ ಬರಹದಲ್ಲಿ ತಿರುಮಲೇಶ್ ಅವರು ಉದ್ದಕ್ಕೂ ನಾನು ಹೊಸಬರಹದ ಕುರಿತಾಗಿ ಹೇಳಿರುವ ಮಾತುಗಳನ್ನು ತಿರುಚಿ ಇಲ್ಲವೇ ಕತ್ತರಿಸಿ, ಅವುಗಳಿಂದ ಬೇರೆಯೇ ಅರ್ತವನ್ನು ಪಡೆದಿದ್ದಾರೆ, ಮತ್ತು ಹೊಸಬರಹದ ಕುರಿತಾದ ನನ್ನ ಸಮರ್ತನೆಗಳಲ್ಲಿ ಒಂದೂ ಸರಿಯಲ್ಲವೆಂದು ತೋರಿಸಿಕೊಡುವಲ್ಲಿ ಗೆದ್ದಿದ್ದಾರೆಂದೇ ಹೇಳಬೇಕು. ನನ್ನ ಕುರಿತಾಗಿ ಅವರು ಹೇಳುವುದಕ್ಕೂ ನಿಜಕ್ಕೂ ನಾನು ನನ್ನ ಬರಹಗಳಲ್ಲಿ ಬರೆದಿರುವುದಕ್ಕೂ ನಡುವೆ ಎಶ್ಟೊಂದು ಬೇರ್ಮೆಗಳಿವೆ ಎಂಬುದನ್ನು ಅವೆರಡನ್ನೂ ಹೋಲಿಸಿ ನೋಡಿದವರೆಗೆ ಮಾತ್ರ ಗೊತ್ತಾದೀತು. ಅವರ ಬರಹವನ್ನಶ್ಟೇ ಓದಿದರೆ, ನಿಜಕ್ಕೂ ನಾನೊಬ್ಬ ಹುಚ್ಚ ಎಂಬ ಅನಿಸಿಕೆ ಬಾರದಿರದು.
ಅವರು ಹಲವು ಕಡೆ ನನ್ನ ಮಾತುಗಳನ್ನು ಎತ್ತಿ ಹೇಳಿದಂತೆ ತೋರಿಸುತ್ತಾರೆ; ಆದರೆ, ಅವನ್ನು ನನ್ನ ಯಾವ ಬರಹದಿಂದ ಎತ್ತಿದ್ದಾರೆ ಎಂಬುದನ್ನು ಎಲ್ಲೂ ಹೇಳುವುದಿಲ್ಲ. ಹಾಗಾಗಿ, ಅವರು ಎತ್ತಿಹೇಳುವಲ್ಲಿ ತಪ್ಪುಮಾಡಿದ್ದಾರೆ ಎಂದು ಎಲ್ಲೂ ಹೇಳಲು ಬರುವುದಿಲ್ಲ. ಕೆಲವು ಕಡೆ ನನ್ನ ಮನಸ್ಸಿನಲ್ಲಿ ಏನಿರಬಹುದು ಎಂಬುದನ್ನು ಅವರೇ ಊಹಿಸಿಯೂ ಬರೆಯುತ್ತಾರೆ, ಮತ್ತು ಅದು ತಪ್ಪು ಎಂದು ಸಾದಿಸಹೋಗುತ್ತಾರೆ. ಇಂತಹವಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಟ್ಟಿದ್ದೇನೆ:

(೧)

ಕೃಪೆ ಎಂಬ ಪದದ ಮೊದಲಿಗಿರುವ ಕೃ ಎಂಬುದನ್ನು ನಾನು ಕ್+ಅ+ಋ ಎಂಬುದಾಗಿ ಬಿಡಿಸಿದ್ದೇನೆಂದು ತಿರುಮಲೇಶ್ ಬರೆದಿದ್ದಾರೆ, ಮತ್ತು ಇದು ಅವರಿಗೆ ಆಶ್ಚರ್ಯವನ್ನೂ ಉಂಟುಮಾಡಿದೆಯಂತೆ. ಆದರೆ, ನಾನು ಯಾವ ಬರಹದಲ್ಲಿ ಹೀಗೆ ಮಾಡಿದ್ದೇನೆ ಎಂಬುದನ್ನು ಅವರು ಹೇಳಿಲ್ಲ. ಯಾರಾದರೂ ಹಾಗೆ ಬಿಡಿಸಿದ್ದರೆ ಅದು ನನಗೂ ಆಶ್ಚರ್ಯವನ್ನುಂಟುಮಾಡೀತು. ಕನ್ನಡ ಬರಹವನ್ನು ಸರಿಪಡಿಸೋಣ ಎಂಬ ಪುಸ್ತಕದಲ್ಲಿ ಕೃ ಎಂಬುದರಲ್ಲಿ ಕಕಾರ ಮತ್ತು ಋಕಾರಗಳಿವೆಯೆಂದು ಹೇಳಿದ್ದೇನೆ, ಮತ್ತು ಕನ್ನಡಿಗರ ಮಾತಿನಲ್ಲಿ ಅದು ಕಕಾರ ಮತ್ತು ರಕಾರದ ಬಳಿಕ ಉಕಾರವಿರುವ ಎರಡು ಉಲಿಕಂತೆಗಳಾಗಿ ಬರುತ್ತದೆ ಎಂಬುದನ್ನೂ ತಿಳಿಸಿದ್ದೇನೆ.
ಇಲ್ಲಿ ನನಗನ್ನಿಸುವುದೇನೆಂದರೆ, ಕೃ ಎಂಬುದರಲ್ಲಿ ಕಕಾರ ಮತ್ತು ಋಕಾರಗಳಿವೆ ಎಂದು ನಾನು ಹೇಳಿದುದನ್ನು ಕ್+ಅ+ಋಗಳಿವೆ ಎಂಬುದಾಗಿ ಅವರು ಅರ್ತಮಾಡಿಕೊಂಡು (ಎಂದರೆ, ಕಕಾರ ಎಂಬುದನ್ನು ಕ್+ಅ ಎಂಬುದಾಗಿ ಒಡೆದು) ಅದನ್ನೇ ನಾನೂ ಹೇಳಿದ್ದೇನೆಂದು ತಪ್ಪಾಗಿ ತಿಳಿದಿರಬೇಕು. ಆದರೆ, ಕನ್ನಡದಲ್ಲಿ ಕಾರ ಎಂಬುದನ್ನು ಸ್ವರಗಳಿಗೆ ನೇರವಾಗಿ ಸೇರಿಸಲಾಗುತ್ತದೆ, ಮತ್ತು ವ್ಯಂಜನಗಳಿಗೆ ಉಚ್ಚಾರಣೆಗಾಗಿ ಅಕಾರ ಸೇರಿಸಿ ಅದರ ಬಳಿಕ ಸೇರಿಸಲಾಗುತ್ತದೆ. ಹಾಗಾಗಿ, ಕಕಾರ ಎಂದರೆ, ಕ್ ಎಂಬ ವ್ಯಂಜನ ಎಂಬ ಅಶ್ಟೇ ಅರ್ತವಿದೆಯಲ್ಲದೆ ಕ್+ಅ ಎಂಬ ಅರ್ತವಿಲ್ಲ. ತಿರುಮಲೇಶ್ ಅವರು ಇಲ್ಲಿ ತಾವು ಮಾಡಿದ ತಪ್ಪನ್ನು ನನ್ನ ಮೇಲೆ ಹೊರಿಸಿದ್ದಾರೆ.
ಇದಲ್ಲದೆ, ಕೃಪೆ ಎಂಬುದನ್ನು ಕ್ರುಪೆ ಎಂದು ಉಚ್ಚರಿಸುವ ಬದಲು ಕೃಪೆ ಎಂಬುದಾಗಿ ಉಚ್ಚರಿಸುವುದು (ಋಕಾರವನ್ನು ಒಂದು ಸ್ವರವಾಗಿ ಉಚ್ಚರಿಸುವುದು) ಅಸಾದ್ಯ ಎಂದು ನಾನು ಹಟ ಹಿಡಿದಿದ್ದೇನೆಂದೂ ಅವರು ಬರೆದಿದ್ದಾರೆ; ಆದರೆ, ಈ ಮಾತಿಗೆ ಆದಾರವನ್ನೇನೂ ಕೊಟ್ಟಿಲ್ಲ. ಯಾವುದೇ ಒಂದು ನುಡಿಯಲ್ಲಿ ಬರುವ ಮತ್ತು ಹಲವು ಯಾವುದೇ ನುಡಿಯಲ್ಲೂ ಬಾರದಿರುವ (ಉಚ್ಚರಿಸಬಲ್ಲ) ಯಾವ ಉಲಿ(ದ್ವನಿ)ಯನ್ನು ಬೇಕಿದ್ದರೂ ಮಕ್ಕಳಿಗೆ ಇಲ್ಲವೇ ದೊಡ್ಡವರಿಗೆ ಕಲಿಸಲು ಬರುತ್ತದೆ; ಆದರೆ, ಕನ್ನಡಿಗರ ಉಚ್ಚಾರಣೆಯಲ್ಲಿಲ್ಲದ ಇಂತಹ ಉಲಿಗಳನ್ನು ಕಲಿಸುವ ಅವಶ್ಯಕತೆಯಿದೆಯೇ ಎಂಬುದೇ ಇಲ್ಲಿ ಏಳುವ ಪ್ರಶ್ನೆ.

(೨)

ಮಹಾಪ್ರಾಣ ವ್ಯಂಜನಗಳನ್ನು ಕನ್ನಡಿಗರಲ್ಲಿ ಹೆಚ್ಚಿನವರೂ (ಶಿಕ್ಶಕರು ಮತ್ತು ಸಂಸ್ಕ್ರುತ ವಿದ್ವಾಸರೂ ಕೂಡ) ಮಾತಿನಲ್ಲಿ ಬಳಸುವುದಿಲ್ಲ; ಹಾಗಾಗಿ, ಮಕ್ಕಳಿಗೆ ಅವನ್ನು ಕಲಿಸುವುದು ಕಶ್ಟ ಎಂದು ನಾನು ಬರೆದಿದ್ದೆ. ಅದರಲ್ಲಿ ಮೊದಲನೇ ಬಾಗವನ್ನು ಬಿಟ್ಟುಕೊಟ್ಟು ಎರಡನೆಯದನ್ನು ಮಾತ್ರ ನಾನು ಹೇಳಿದ್ದೇನೆಂದು ತಿಳಿಸಿ, ಅದು ತಪ್ಪು ಎಂದು ತಿರುಮಲೇಶ್ ಸಾದಿಸಹೊರಡುತ್ತಾರೆ. ಯಾವ ಬಗೆಯ ಉಲಿಯನ್ನು ಬೇಕಿದ್ದರೂ ಯಾರಿಗೂ ಕಲಿಸಲು ಬರುತ್ತದೆ ಎಂಬುದು ನನಗೂ ಗೊತ್ತಿದೆ; ಆದರೆ, ಇಲ್ಲಿ ನನಗೆ ಹೇಳಬೇಕಾಗಿರುವುದು ಅದಕ್ಕಿಂತ ತೀರ ಬೇರಾದ ವಿಶಯ.

(೩)

ಕನ್ನಡ ಬರಹಗಳಲ್ಲಿ ಬರುವ ಸಂಸ್ಕ್ರುತ ಪದಗಳನ್ನೆಲ್ಲ ತೆಗೆದು ಹಾಕಿ ಎಲ್ಲೆಡೆಯಲ್ಲೂ ಕನ್ನಡದವೇ ಆದ ಪದಗಳನ್ನು ಬಳಸುವುದು ನನ್ನ ಕಾರ್ಯಕ್ರಮ ಎಂದು ತಿರುಮಲೇಶ್ ಹೇಳುತ್ತಾರೆ. ಇದು ಅವರ ಅನಿಸಿಕೆಯಿರಬೇಕು. ಯಾಕೆಂದರೆ, ಇದಕ್ಕೂ ಅವರು ಆದಾರವನ್ನೇನೂ ಕೊಟ್ಟಿಲ್ಲ. ನಿಜಕ್ಕೂ ನಾನು ಹಲವೆಡೆಗಳಲ್ಲಿ ಬರೆದಿರುವ ಹಾಗೆ, ಬಳಕೆಗೆ ಬಂದಿರುವ ಸಂಸ್ಕ್ರುತದ ಇಲ್ಲವೇ ಬೇರೆ ನುಡಿಗಳ ಪದಗಳನ್ನು ತೆಗೆದುಹಾಕಬೇಕೆಂದು ನಾನು ಎಲ್ಲಿಯೂ ಹೇಳಿಲ್ಲ. ಕನ್ನಡ ಬರಹಗಳಲ್ಲಿ ನೂರಕ್ಕೆ ಅಯ್ವತ್ತಕ್ಕಿಂತಲೂ ಹೆಚ್ಚು ಸಂಸ್ಕ್ರುತ ಪದಗಳಿದ್ದರೆ ಅದು ಕನ್ನಡಿಗರಿಗೆ ತೀರಾ ಕ್ಲಿಶ್ಟವಾಗುತ್ತದೆ; ಅದನ್ನು ಆದಶ್ಟು ಕಡಿಮೆ ಮಾಡಿ; ಹೊಸ ಪದಗಳನ್ನು ಉಂಟುಮಾಡಬೇಕಾದಾಗ, ಆದಶ್ಟು ಕನ್ನಡದ ಪದಗಳನ್ನೇ ಉಂಟುಮಾಡಿ; ಮತ್ತು ಒಂದು ಪದವನ್ನು ಬೇರೆ ಬೇರೆ ಅರ್ತಗಳಲ್ಲಿ ಬಳಸಬೇಕಾದಾಗ ಕನ್ನಡ ಪದಗಳಿಗೆ ದಾರಿ ಮಾಡಿ; ಅಂತಹ ಕಡೆಗಳಲ್ಲೆಲ್ಲ ಇವತ್ತಿನ ಹಾಗೆ ಸಂಸ್ಕ್ರುತದಿಂದ ಎರವಲು ಪಡೆದರೆ ಕನ್ನಡದ ಪದಕೋಶ ಬೆಳೆಯುವುದೇ ಇಲ್ಲ ಎಂಬುದು ನನ್ನ ಅಬಿಪ್ರಾಯ.
ಗಂಬೀರವಾದ ಜ್ನಾನಕ್ಶೇತ್ರದಲ್ಲಿ ಕನ್ನಡದವೇ ಆದ ಪದಗಳನ್ನು ಬಳಸಿ ಬರೆಯಲು ಬರುವುದಿಲ್ಲ ಎಂಬ ಅವರ ಮಾತಿಗೆ ನಾನು 7 ಸಂಪುಟಗಳಲ್ಲಿ (ಸುಮಾರು 2200 ಪುಟಗಳಲ್ಲಿ) ಬರೆದಿರುವ ಕನ್ನಡ ಬರಹದ ಸೊಲ್ಲರಿಮೆ ಎಂಬ ಪುಸ್ತಕ ಉತ್ತರ ಕೊಡುತ್ತದೆ. ಅದರಲ್ಲಿ ಬರುವ ಹೆಚ್ಚಿನ ಪಾರಿಬಾಶಿಕ ಪದಗಳನ್ನೂ ನಾನು ಕನ್ನಡದಲ್ಲೇ ಕಟ್ಟಿದ್ದೇನೆ. ಹೀಗೆ ಮಾಡಿದುದರಿಂದಾಗಿ ಈ ಪುಸ್ತಕಗಳನ್ನು ಓದಿ ತಿಳಿದುಕೊಳ್ಳುವುದು ಸಂಸ್ಕ್ರುತ ಪಾರಿಬಾಶಿಕ ಪದಗಳನ್ನು ಬಳಸಿ ಬರೆದ ವ್ಯಾಕರಣಗಳಿಂದ ಹೆಚ್ಚು ಸುಲಬ ಎಂದು ಅವನ್ನು ಓದಿದವರು ಹೇಳಿದ್ದಾರೆ. ಬೇರೆ ಜ್ನಾನಕ್ಶೇತ್ರಗಳಲ್ಲೂ ಇದನ್ನು ಮನಸ್ಸಿದ್ದರೆ ಸಾದಿಸಲು ಬರುತ್ತದೆ.

(೪)

ಓದುವ ಹಾಗೆ ಬರೆಯಬೇಕು ಮತ್ತು ಬರೆಯುವ ಹಾಗೆ ಓದಬೇಕು ಎಂಬ ನನ್ನ ಮಾತಿನ ಹಿಂದೆ ನುಡಿ ಮತ್ತು ಬರಹಗಳ ನಡುವೆ ಅಭೇದವನ್ನು ಕಲ್ಪಿಸುವ ಆಶಯವಿದೆ ಎಂದು ತಿರುಮಲೇಶ್ ಹೇಳುತ್ತಾರೆ. ಆದರೆ, ನಾನು ನುಡಿಗೂ ಬರಹಕ್ಕೂ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇರುತ್ತವೆ, ಮತ್ತು ಇರಬೇಕಾಗುತ್ತದೆ ಎಂಬುದನ್ನು ಮಾತು ಮತ್ತು ಬರಹದ ನಡುವಿನ ಗೊಂದಲ ಎಂಬ ಪುಸ್ತಕದಲ್ಲಿ ವಿವರಿಸಿದ್ದೇನೆ.
ಇದಲ್ಲದೆ, ಇವತ್ತು ಉತ್ತರದ ಹುಬ್ಬಳ್ಳಿಯಿಂದ ಬರುವ ಸಂಯುಕ್ತ ಕರ್ನಾಟಕ, ದಕ್ಶಿಣದ ಬೆಂಗಳೂರಿನಿಂದ ಬರುವ ಪ್ರಜಾವಾಣಿ, ಮತ್ತು ಕರಾವಳಿಯ ಉಡುಪಿಯಿಂದ ಬರುವ ಉದಯವಾಣಿ ಪತ್ರಿಕೆಗಳಲ್ಲಿ ಹೆಚ್ಚುಕಡಿಮೆ ಒಂದೇ ಬಗೆಯ ಕನ್ನಡ ಬಳಕೆಯಾಗುತ್ತಿದೆ; ಶಾಲೆ-ಕಾಲೇಜುಗಳಲ್ಲಿ, ಪಟ್ಯಪುಸ್ತಕಗಳಲ್ಲಿ ಮತ್ತು ಬೇರೆ ಹಲವು ಬಗೆಯ ಬರಹಗಳಲ್ಲೂ ಇದೇ ಕನ್ನಡ ಬಳಕೆಯಾಗುತ್ತದೆ. ಹೆಚ್ಚು ಕಡಿಮೆ ಎಲ್ಲಾ ಕನ್ನಡಿಗರಿಗೂ ಸಮಾನವಾಗಿರುವ ಈ ಕನ್ನಡವನ್ನು ನಾನು ಎಲ್ಲರ ಕನ್ನಡ ಎಂದು ಕರೆದಿದ್ದೇನೆ. ಈ ಎಲ್ಲರ ಕನ್ನಡದ ಓದಿನಲ್ಲಿ ಬಳಕೆಯಾಗುವ ಉಲಿಗಳನ್ನಶ್ಟೇ ಬರಹದಲ್ಲಿ ಕಾಣಿಸಿದರೆ ಸಾಕು ಎಂದಿದ್ದೇನಲ್ಲದೆ, ಬೇಸಿಕ್ ಇಂಗ್ಲಿಶ್‍ನ ಹಾಗೆ ಸುಲಬವಾಗಿಸಿದ ಬೇಸಿಕ್ ಕನ್ನಡ ನುಡಿಯನ್ನು ಶಾಲೆಗಳಲ್ಲಿ ಕಲಿಸಬೇಕೆಂದೇನೂ ಹೇಳಿಲ್ಲ.