- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
‘ರಾಷ್ಟ್ರಕವಿ’ ಎಂದೇ ಕರೆಸಿಕೊಂಡಿರುವ ಜಿ.ಎಸ್.ಎಸ್ ಇತಿಹಾಸಕಾರ, ತತ್ವಜ್ಞಾನಿ ಮತ್ತು ವಿಮರ್ಶಕ. ಕವಿ ಜಿ.ಎಸ್.ಎಸ್. ಕನ್ನಡಕಾವ್ಯ ಪರಂಪರೆ ಕಂಡ ಅಪರೂಪದ ಲವಲವಿಕೆಯ ಕವಿ. ಬದುಕಿನ ಪ್ರೀತಿಯನ್ನೇ ಹಾಡುಮಾಡಿ ಮಾನವತೆಯ ಕನಸನ್ನು ಮೆರೆದ ಮಹತ್ವದ ಕವಿ. “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ”, “ಎದೆತುಂಬಿ ಹಾಡಿದೆನು ಅಂದು ನಾನು” ಎಂದೇ ಸಹೃದಯರ ಮನಸ್ಸಿನಲ್ಲಿ ಇಂದಿಗೂ ಚಿರಸ್ಥಾಯಿಯಾಗಿರುವ ಕವಿ ಎಂದರೆ ಜಿ.ಎಸ್.ಎಸ್. ಗೋವಿಂದಪೈ ಹಾಗು ಕುವೆಂಪು ನಂತರದ ರಾಷ್ಟ್ರಕವಿ. ನವೋದಯ,ನವ್ಯ, ನವ್ಯೋತ್ತರ ಹೀಗೆ ಎಲ್ಲಾ ಕಾಲಘಟ್ಟದಲ್ಲಿಯೂ ಗೀತೆಗಳನ್ನು ರಚಿಸಿ ‘ಸಮನ್ವಯ ಕವಿ’ ಎಂದೇ ಭಾವಾಂತರಂಗದ ಗೀತೆಗಳ ಮೂಲಕ ನಮ್ಮ ನಡುವಿರುವ ಭಾವಜೀವಿ.
೧೯೨೬ ರ ಫೆಬ್ರವರಿ ೭ರಂದು ಗುಗ್ಗರಿ ಶಾಂತವೀರಪ್ಪ ಮತ್ತು ವೀರಮ್ಮನವರ ಸುಪುತ್ರರಾಗಿ ಜನಿಸುತ್ತಾರೆ. ಯುಗಪರಿವರ್ತನಾಶೀಲ ಚೈತನ್ಯರಾಗಿದ್ದ ಕುವೆಂಪು ಅವರ ಸಾಹಿತ್ಯ ಇವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮನುಷ್ಯ ಮತ್ತು ನಿಸರ್ಗಕ್ಕೆ ಇರುವ ಭಾವುಕ ಸಂಬಂಧ,ಮನುಷ್ಯನಿಂದ ನಿಸರ್ಗ ಶೋಷಣೆಗೆ ಒಳಗಾಗಿರುವುದು ನಿಸರ್ಗನಾಶದ ತಲ್ಲಣಗಳಲ್ಲಿ ಮನುಷ್ಯನ ತೊಳಲಾಟ, ಜಗತ್ತು ಮತು ಶೂನ್ಯದ ಭಾವನೆ ಇವೆಲ್ಲವನ್ನು ತಮ್ಮ ಕಾವ್ಯದಲ್ಲಿ ಅನನ್ಯವಾಗಿ ಪರಿಣಾಮಕಾರಿಯಾಗಿ“ಸಂಜೆ ಬಾನಿನಂಚಿನಲ್ಲಿ” ಎಂಬ ಕವಿತೆಯ ಮೂಲಕ ತಂದಿದ್ದಾರೆ. ಕವಿಯ ಕಾವ್ಯ ಪ್ರಜ್ಞೆಯು ನಿರ್ದಿಷ್ಟ ಸಂಜೆಯನ್ನು ವಿಶಿಷ್ಟವಾದ ರೂಪ ಲಕ್ಷಣವುಳ್ಳ ಪ್ರತೀಕವಾಗಿಸುವ ಮೂಲಕ ಸಂಧಿಸಿದ್ದಾರೆ. ಕವಿ ಸಾವಿರಾರು ಸಂಜೆಗಳಿಗಿಂತ ಭಿನ್ನವಾಗಿ “ಶಾಕುಂತಲ ಸಂಧ್ಯೇ” ಯನ್ನು ಓದುಗರ ಅನುಭೂತಿಗೆ ಬಿಟ್ಟಿದ್ದಾರೆ. ಭಾವರಮ್ಯತೆಯನ್ನು ಈ ಗೀತೆಯ ವಿಶೇಷತೆ. ನಿಸರ್ಗದ ಆಚರಣೆ ಮತ್ತು ಸಾಮಾಜಿಕ ಕಳಕಳಿ ಇವರ ಭಾವಗೀತೆಗಳ ವೈಶಿಷ್ಟ್ಯ. ಹಳ್ಳಿಯ ವಾತಾವರಣದಲ್ಲೇ ಬೆಳೆದ ಇವರಿಗೆ ನಿಸರ್ಗ ನಿರ್ಮಿತಿಕೂಡ ಜನ್ಮದತ್ತವಾಗಿದೆ. ಹಾಗಾಗಿ “ಕುವೆಂಪು ಮತ್ತು ಇವರನ್ನು ಗಾಳಿ-ಬೆಳಕು ಎಂದರೆ ತ.ಸು. ಶಾಮರಾಯರನ್ನು ಮತ್ತು ಇವರನ್ನು ನೀರು-ಗೊಬ್ಬರ” ಎನ್ನುತ್ತಾರೆ.
ಇವರ ಮೊದಲನೆ ಪದ್ಯ ‘ಅಡಗಿವೆಷ್ಟೋ ರತ್ನಗಳು’ ಹೈಸ್ಕೂಲಿನಲ್ಲಿ ಇದ್ದಾಗ ಬರೆದ ಈ ಕವಿತೆಯ ಮೇಲೆ ಥಾಮಸ್ ಗ್ರೇ ಎಂಬ ಪಾಶ್ಚಾತ್ಯ ಕವಿಗಳ ಪ್ರಭಾವವಿದೆ.
ಕಡಲ ಕತ್ತಲ ಗವಿಯಲ್ಲಿ
ಅಡಗಿಹವೆಷ್ಟೋ ರತ್ನಗಳು
ಘೋರಾರಣ್ಯದ ತರುಗಳು
ಅರಳಿವೆಯಾ ಕುಸುಮಗಳು
ಹೊಳೆಯುವ ರತ್ನವ ಧರಿಸುವರಾರು.
ತಮ್ಮ ಸಾಹಿತ್ಯದಲ್ಲಿ ಜನಸಾಮಾನ್ಯ ಮೌಲ್ಯಗಳು, ಸಾಂಸ್ಕೃತಿಯ ಸನ್ನಿವೇಶ ನಿರ್ಮಾಣ, ನಿರುದ್ವಿಗ್ನತೆ, ಜೀವನ ಪ್ರೀತಿ, ಹೆಣ್ಣನ್ನು ಕುರಿತ ಹಾಗೆ ಅಮೂರ್ತತೆ ಮತ್ತು ಮೂರ್ತತೆ ಈ ಮೊದಲಾದ ವಸ್ತುಗಳನ್ನು ವಸ್ತುವಾಗಿ ಬಳಸಿಕೊಂಡು ಸಹೃದಯರ ಮನಗೆದ್ದವರು.. ‘ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ಮಿಂದು ಆಟವಾಡಿದ ದಿವಸ ನೆನಪದದೆಯೇ’ ಎಂದು ಕೇಳುತ್ತ ಓದುಗರನ್ನು ಅವರ ಬಾಲ್ಯಕ್ಕೆ ಕರೆದೊಯ್ದು ಬುದ್ಧಿ ಮತ್ತು ದೇಹ ಬೆಳೆದಂತೆ ಕಳೆದುಕೊಳ್ಳುವ ಮುಗ್ಧತೆಯ ಬಗ್ಗೆ ಪ್ರಸ್ತಾಪಿಸುತ್ತಾರೆ.
೧೯೬೦ರಲ್ಲಿ “ಸೌಂದರ್ಯ ಸಮೀಕ್ಷೆ” ಎಂಬ ಪ್ರೌಢಪ್ರಬಂಧವನ್ನು ಕುವೆಂಪುರವರ ಮಾರ್ಗದರ್ಶನದಲ್ಲಿ ಬರೆಯುತ್ತಾರೆ. ಸೌಂದರ್ಯವನ್ನು ಆಳವಾಗಿ ಅಧ್ಯಯನ ಮಾಡಿ ಕಲೆಯ ಪ್ರಕಾರಗಳಲ್ಲಿ, ಮಹಾಕಾವ್ಯ ಸ್ವರೂಪದಲ್ಲಿ ಸೌಂದರ್ಯ ಹೇಗೆ ಭಿತ್ತರವಾಗಿದೆ ಎಂಬುದನ್ನು ಕುರಿತು ಮಾತನಾಡುತ್ತಾರೆ. ವೇದಗಳ ಕಾಲದಲ್ಲಿ, ಶಿಲ್ಪಗಳಲ್ಲಿ, ಜಾನಪದದಲ್ಲಿ ಇವತ್ತಿನ ಕವಿಗಳಲ್ಲಿ ಪಾಶ್ಚಾತ್ಯ ಕವಿಗಳ ದೃಷ್ಟಿಯಲ್ಲಿ ಸೌಂದರ್ಯ ಹಜೇಗೆ ಅಭಿವ್ಯಕ್ತಗೊಂಡಿದೆ ಎಂಬುದರ ಕುರಿತು ವಿಸ್ತಾರವಾಗಿ ಚರ್ಚಿಸಿದ್ದಾರೆ. ಇವರ ಕವನಗಳಲ್ಲಿ ಮುಖ್ಯವಾದ ವಿಷಯವೆಂದರೆ ಪ್ರಾಸ ಬದ್ಧತೆಯನ್ನು, ಲಯಬದ್ಧತೆಯನ್ನು ಬಿಟ್ಟು ಜನರ ಆಡುಭಾಷೆಯಲ್ಲಿ ಕವನ ತಂತಿ ಮೀಟುವುದರ ಜೊತೆಗೆ ಅನುಭವದಿಂದ ಆಧ್ಯಾತ್ಮವನ್ನು, ಕವನವನ್ನು ಸುಲಭವಾಗಿ ಭಾಗಿಸಿರುವುದು.
‘ಚಿಂತನ ಶೀಲತೆ’. ‘ಪ್ರಾಮಾಣಿಕತೆ’, ವಸ್ತುನಿಷ್ಟತೆಯನ್ನು ಇರಿಸಿಕೊಂಡು ಸಾಮಾಜಿಕ ಸಾಹಿತ್ಯಿಕ ಕಳಕಳಿಯಿಂದ ಜೀವನದತ್ತ ಹೊಸ ಸೌಖ್ಯದ ದೃಷ್ಟಿ ಏರ್ಪಡಿಸಿರುವರು. ಪಾಶ್ಚಿಮಾತ್ಯ, ಪೌರ್ವಾತ್ಯ, ಪ್ರಾಚೀನ.ಅರ್ವಾಚೀನ ಎಂಬ ಅತಿರೇಖಕ್ಕೆ ಹೋಗದೆ ಪೂರ್ವಗ್ರಹ ಪೀಡಿತವಲ್ಲದೆ ಸಾಹಿತ್ಯ ಸೃಷ್ಟಿಸಿದವರು. ದೀನದಲಿತರ, ಅನಾಥರ, ದುಖಿಃತರ ಜನರ ಸಂಕಷ್ಟಗಳನ್ನು “ಉಡುಗಣ ವೇಷ್ಟಿತ ಚಂದ್ರ ಸುಶೋಭಿತ ದಿವ್ಯಾಂಭರ ಸಂಚಾರಿ” ಎಂಬ ಕವಿತೆಯಲ್ಲಿ ನೋಡಬಹುದು. ಇಲ್ಲಿ ಅಮೂರ್ತವಾದ ಶಿವನ ಕಲ್ಪನೆ, ಶುಭ್ರ ಹಿಮಾಲಯದ ಬಗ್ಗೆಯೂ ಮಾತನಾಡುತ್ತಾರೆ.
‘ಜಡೆ’ ಕವಿತೆಯಲ್ಲಿ ಜಡೆಯ ಕುರಿತ ನಾನಾ ರೀತಿಯ ವರ್ಣನೆಯಿದೆ ಎಲ್ಲಿಯೂ ರಮ್ಯವಲ್ಲ, ಗಾನಗಳ ಕಾವ್ಯಗಳ ಶಿಲ್ಪಗಳ ಜಡೆಯ ಕಾವ್ಯವೆಲ್ಲಾ ಶಿಲ್ಪಿಗಳ ಜಯದಾಚೆ ತಿರುಗಿಸಿದರೆ ಮುಖ ಮಾತ್ರ ಇಂದಿಗೂ ಕಾಣಲಿಲ್ಲ ಎಂದು ಹೇಳುತ್ತಾರೆ. ಲೋಕದ ಶಕ್ತಿ, ಅವಳ ಶಕ್ತಿ ಚೈತನ್ಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದಾಗಿ ಹೇಳುತ್ತಾರೆ.
ಸರಳ ಅನುಭಾವ ಪ್ರಪಂಚದ ಯಾತ್ರಿಕರ ಅನುಭವ ಇಲ್ಲಿ ರಸಾನುಭೂತಿಯಾಗಿದೆ.ಇಲ್ಲಿ ನೆನಪಸಿಕೊಳ್ಳಬೆಕಾದ ಜೋಡಿ ಎಂದರೆ ಆಶ್ವಥ್ ಮತ್ತು ಜಿಎಸ್. ಎಸ್. ಒಬ್ಬ ಕವಿ ಇನ್ನೊಬ್ಬ ಗಾಯಕ . ಕವಿಯ ಕಾವ್ಯದ ಆತ್ಮಕ್ಕೆ ಗಾಯಕರ ಕೊರಳು ಎಂಥ ಮಾಂತ್ರಿಕತೆ ಅಲ್ಲವೇ? ಇಂಥ ಮಾಂತ್ರಿಕತೆಗೆ ಸಾಕ್ಷಿಯಾದದ್ದು ‘ದೀಪವಿರದ ದಾರಿಯಲ್ಲಿ’ ಮತ್ತು ‘ಕಾಣದ ಕಡಲಿಗೇ ಹಂಬಲಿಸಿದೇ ಮನ’ ಮುಂತಾದ ಕವಿತೆಗಳು. ಪುಟ್ಟಣ್ಣ ಕಣಗಾಲ್ರವರ ಪ್ರಖ್ಯಾತ ಚಲನಚಿತ್ರ ಮಾನಸ ಸರೋವರದಲ್ಲಿ ಇವರ ‘ಹಾಡು ಹಳೆಯದಾದರೇನು?’ , ‘ವೇದಾಂತಿ ಹೇಳಿದನು’ ಎಂಬ ಗೀತೆಗಳು ಅಳವಡಿಕೆಯಾಗಿವೆ.
ಸಾಮಾಜಿಕ ಕಳಕಳಿ
‘ಸಾಹಿತ್ಯ’ ಮತು ‘ಸಮಾಜ’ ಒಂದೇ ನಾಣ್ಯದ ಎರಡು ಮುಖಗಳೆಂದೂ ಸಾಮಾಜಿ ಸಾಮರಸ್ಯ ಪರಿವರ್ತನೆಯ ನಿಟ್ಟಿನಲ್ಲಿ ವಿಭಿನ್ನ ನೆಲೆಯಲ್ಲಿ ಮಾನವೀಯತೆಯನ್ನು “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ” ಎಂದು ಜಾತ್ಯಾತೀತತೆ ಮತ್ತು ದೈವತ್ವ, ಜೀವನ ದರ್ಶನ, ನಾಗರೀಕ ಜೀವನದ ಒಡನಾಟ, ಏಕಾಂಗಿತನ ಮುಂತಾದವುಗಳನ್ನು ಇಲ್ಲಿ ಹೇಳುತ್ತಾರೆ.
‘ಒಲವು ಚೆಲುವು’, ‘ದೇವಶಿಲ್ಪ’, ಇವುಗಳಲ್ಲಿ ಚೆಲುವಿನಾರಾಧನೆಗೆ ಪ್ರಾಶಸ್ತ್ಯ ನೀಡಿದರೆ ‘ಸಾಮಗಾನ’ ಕೃತಿಯಲ್ಲಿ ವೈಫಲ್ಯಗಳ ಕುರಿತು ಮಾತನಾಡುತ್ತ “ದೇಶದಾದ್ಯಂತ ಅಣೆಕಟ್ಟು ಕಟ್ಟಿ ನಾವು ಬೆಳೆದಿರುವುದಾರೂ ಏನು?” ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. “ಎಲ್ಲಿಗೆ ಇನ್ನೆಲ್ಲಿಗೆ, ಇಷ್ಟು ದಿವಸ ನಡೆದು ನಾವು ಬಂದು ನಿಂದುದೆಲ್ಲಿಗೆ?” ಎಂದು ನೈರಾಶ್ಯ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಬದುಕಿನಲ್ಲಿ ಆಶಾವಾದ, ಐಕ್ಯತೆ ಇರಬೇಕೆಂದು ‘ಒಂದೇ ಒಂದೇ ಈ ದೇಶದೊಳೆಲ್ಲಿದ್ದರೂ ಭಾರತ ನಮಗೊಂದೆ’ ಎಂಬ ಗೀತೆಯಲ್ಲಿ ಸಾಮಾಜಿಕರಿಗೆ ಐಕ್ಯತೆಯ ಬಹುಮುಖ್ಯ ಸಂದೇಶವನ್ನು ನೀಡಿದ್ದಾರೆ. ದೀಪದ ಹೆಜ್ಜೆಯಿಂದ ತೆರೆದದಾರಿಯವರೆಗಿನ ಕವನಗಳು ಕವಿ ತಲುಪಿದ ಪ್ರಬುದ್ಧ ನಿಲುವನ್ನು ಅರಿಯಲು ಓದುಗರಿಗೆ ಸಹಕಾರವಾಗುತ್ತವೆ. ಒಟ್ಟಾರೆಯಾಗಿ ಭಾವನಾವಾತಾವರಣದ ಮಾರ್ಧವತೆಯ ಕಾರಣ ಇವರ ಕೃತಿಗಳು ಗಮನಸೆಳೆದಿವೆ. ಕಾವ್ಯ ರಚನೆಯಲ್ಲಿ ಶಿಸ್ತು, ಶ್ರದ್ಧೆ, ಆದರ್ಶ ಇತರರಿಗೆ ಸ್ಫೂರ್ತಿ ಇವುಗಳನ್ನು ಇವರ ಕವಿತೆಗಳಲ್ಲಿ ಆಸ್ವಾದಿಸಬಹುದು. ‘ನೀನು ಮುಗಿಲು ನಾನು ನೆಲ ನಿನ್ನ ಒಲುವೆ ನನ್ನ ಬಲ’ ಸಾಲಿನಲ್ಲಿ ನಲ್ಲ, ನಲ್ಲೆ, ದೇವ ಮನುಷ್ಯ ಇವರಿಬ್ಬರ ಸಂಭಾ಼ಣೆಯನ್ನು ಕಾಣಬಹುದು.
ಸ್ತ್ರೀಯನ್ನು ಕುರಿತಂತೆ “ಆಕಾಶದ ನೀಲಿಯಲಿ”ಯಲ್ಲಿ ಎಂಬ ಕವಿತೆಯಲ್ಲಿ ತಾಯ್ತನದ ಆರಾಧನೆಯ ಪ್ರಧಾನ ಆಶಯವಿದೆ. “ಚಂದ್ರ ತಾರೆ ತೊಟ್ಟಿಲಲ್ಲಿ .. ಸ್ತ್ರೀ ಎಂದರೆ ಅಷ್ಟೆ ಸಾಕೆ?”ಎಂಬುದಾಗಿ ಪ್ರಶ್ನೆಯ ಮೂಲಕವೆ ಹೆಣ್ಣಿನ ಮಹತ್ತನ್ನು ಹೇಳುತ್ತಾರೆ. ಅಡಿಗರು ‘ಚಂಡಮದ್ದಳೆ’ಯಿಂದ ನವೋದಯದ ಕಡೆಗೆ ಹೊರಳಿದಂತೆ ಜಿ.ಎಸ್. ಎಸ್ ರವರು ‘ದೀಪದ ಹೆಜ್ಜೆ’ಯಿಂದ ಭಿನ್ನ ಮಾರ್ಗ ಅನುಸರಿಸಿರುವುದು. ಜೀವನ ಶ್ರದ್ಧೆ ಉಳಿಸಿಕೊಳ್ಳುವ ಕ್ರಮಕ್ಕೆ ಈ ಕವನಗಳು ಸಾಕ್ಷಿಯಾಗಿವೆ. ಹಿಂದಿನ ಭಾವನಾಮಯತೆಗೆ ಬದಲಾಗಿ ವಿಸ್ಮಯ, ಉತ್ಸುಕತೆಗಳು ಈ ನೆಲೆಯಲ್ಲಿ ಪ್ರಧಾನವಾಗಿ ಕಂಡುಬರುತ್ತವೆ.
‘ಗೋಡೆ’ ಕವನ ಸಂಕಲನವು ಕವಿಯ ಕಲ್ಪನೆ ವೈಯಕ್ತಿಕ ಲೋಕವೊಂದರ ನಿರ್ಮಾಣದಲ್ಲಿ ತೊಡಗಿದ್ದನ್ನು ಇಲ್ಲಿ ಕಾಣಬಹುದು. ಹೃದಯಗಳ ಸಂಬಂಧ ಕಡಿದುಬಿದ್ದು ವಿಷಮ ವಾತಾವರಣದಲ್ಲಿ ನಾವಿದ್ದೇವೆ ಎಂಬ ವಿಷಾದವನ್ನು ಕವಿತೆಯನ್ನು ಚಿತ್ರಿಸುವ ಸಂದರ್ಭದಲ್ಲಿ ಹೇಳಿದ್ದಾರೆ. ಶಿವರುದ್ರಪ್ಪನವರ ‘ಅನಾವರಣ’ ಆಧುನಿಕ ಯುಗದ ಅತ್ಯಂತ ಕ್ರೂರ ಸತ್ಯಗಳಲ್ಲಿ ಒಂದಾದ ಒಂಟಿತನವನ್ನು ವಸ್ತುವಾಗಿರಿಸಿಕೊಂಡು ರಚಿಸಿರುವ ಕಾವ್ಯವಾಗಿದೆ.
ಪ್ರಸ್ತುತ ಸಮಾಜದ ಆಗು ಹೋಗುಗಳ ಸಂದರ್ಭದಲ್ಲಿ ಇವರ ಕವಿತೆಗಳ ಸಾರಾಂಶವನ್ನು ಅನುಸಂಧಾನಿಸುವುದಾದರೆ ‘ಪ್ರತಿಭೆ ಮತ್ತು ಪಾಂಡಿತ್ಯ’ ಪ್ರತಿಭೆಯನ್ನು ಅಪೂರ್ವವಾದ ಶಕ್ತಿ ಎನ್ನುವುದಾದರೆ ಪಾಂಡಿತ್ಯವನ್ನು ಕಷ್ಟಪಟ್ಟು ಕಲಿತ ವಿದ್ಯೆ ಎನ್ನಬಹುದು. ಕಾರ್ಕೋಟಕ ಸರ್ಪದಿಂದ ಕಚ್ಚಿಸಿಕೊಂಡು ಕುರೂಪಿಯಾಗುವ ನಳನು ಬಾಹುಕ ಎಂಬ ಹೆಸರನ್ನಿಟ್ಟುಕೊಂಡು ಋತುಪರ್ಣರಾಜನಲ್ಲಿ ಸಾರಥಿಯ ಕೆಲಸಕ್ಕೆ ಸೇರುತ್ತಾನೆ. ದಮಯಂತಿಯ ಸ್ವಯಂವರಕ್ಕೆ ಹೊರಟಾಗ ಬಡಕಲು ಕುದುರೆಗಳನ್ನು ಹೂಡಿದ್ದ ರಥವನ್ನು ಆಕಾಶಮಾರ್ಗದಲ್ಲಿ ವೇಗವಾಗಿ ನಡೆಸುತ್ತಾನೆ. ಋತುಪರ್ಣರಾಜ ಬಾಹುಕನನ್ನು ಮೆಚ್ಚಿ ತನ್ನ ವಿದ್ಯೆಯನ್ನುತೋರಿಸಬೇಕೆಂದು ಮರದಲ್ಲಿರುವ ಎಲೆಗಳನ್ನು ಎಣಿಸಿ ತೋರಿಸುತ್ತಾನೆ. ನಿಶ್ಯಬ್ದವಾಗಿ ಕುದುರೆಗೆ ರಕ್ಕೆ ಮೂಡಿದಂತೆ ಚಲಿಸುವುದು ನಳನ ಪ್ರತಿಭೆಯ ಕೆಲಸ ಋತುಪರ್ಣನ ಕೆಲಸ ಪಾಂಡಿತ್ಯದ ಕೆಲಸ ಎಂದು ಅವೆರಡರ ವೆತ್ಯಾಸವನ್ನು ಕವಿತೆ ಅರ್ಥೈಸುತ್ತದೆ.
‘ಹೊಸಹುಟ್ಟು’ ಪ್ರಳಯಕಾಲದಲ್ಲಿ ಮಸುಕಾದ ಒಂದು ಮೀನು ದೊಡ್ಡದಾಗಿ ಬೆಳೆದು ಅವನ ದೋಣಿ ಮುಳುಗದಂತೆ ನೋಡಿಕೊಳ್ಳುತ್ತದೆ ಎಂಬುದು ಪುರಾಣದ ಕತೆ. ಆದೆ ವಸ್ತು ಈ ಕವಿತೆಯದ್ದು. ಈ ಕವಿತೆಯಲ್ಲಿ ಮನು ತಾನೂ ಕೂಡ ಕೆಟ್ಟ ವ್ಯವಸ್ಥೆಯ ಭಾಗವಾಗಿರುವುದರಿಂದ ತಾನೂ ಉಳಿಯಬಾರದೆಂದು ನಿರ್ಧರಿಸುತ್ತಾನೆ. ಇಲ್ಲಿ ಕವಿಗೆ ಈಗಿರುವ ಸಾಮಾಜಿ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಬೇಕೆಂಬ ಆಶಯವಿದೆ. “ ಕೊಂಬೆ-ರೆಂಬೆಗೆ ಪುಟಿದು ಹೊಸ ಹೂವು, ಚಿಗುರು” ಇಲ್ಲಿ ಓದುಗರ ಗಮನ ಸೆಳೆಯುವ ವಾಕ್ಯವಾಗಿದೆ.
‘ಅಸ್ತಮಾನ’ ಈ ಕವಿತೆಯ ಮೊದಲ ಆರು ಪದ್ಯಗಳು ಶ್ರೀ ಕೃಷ್ಣನ ಸಾವಿನ ಸಂದರ್ಭವನ್ನೇ ಚಿತ್ರಿಸುತ್ತವೆ. ಕೃಷ್ಣನ ಹೆಸರನ್ನು ಎಲ್ಲಿಯೂ ಹೇಳದಿದ್ದರೂ ಸುದರ್ಶನ ಚಕ್ರ, ಶೇಷತಲ್ಪ, ಪೀತಾಂಬರ, ಗರುಡ, ಕೊಳಲು, ನವಿಲುಗರಿ, ಕಪ್ಪುಮೈ, ಶ್ರೀಹರಿಪಾದ ಎನ್ನುವ ಪದಗಳು ಕೃಷ್ಣನನ್ನು ನಿರ್ದೇಶಿಸುತ್ತವೆ. ಅವತಾರಗಳು ಆಗುತ್ತಿರುತ್ತವೆ, ಸಂಪನ್ನವಾಗುತ್ತವೆ ಅದರೆ ಬದುಕು ನಿರಂತರ ಎನ್ನುವ ಸಂದರ್ಭವನ್ನು ದುಡಿಯುವ ರೈತನ ಚಿತ್ರ ಸೂಚಿಸುತ್ತದೆ.
‘ಮುಂಬೈ ಜಾತಕ’ ಜನಸಾಮಾನ್ಯರ ನಗರ ಜೀವನದ ಜಂಜಾಟವನ್ನು ಚಿತ್ರಿಸುವ ಕವನ. ನಗರ ಜೀವನದಲ್ಲಿ ಮಕ್ಕಳನ್ನು ಹುಟ್ಟಿನಿಂದಲೇ ಆವರಿಸುವ ಪರಕೀಯತೆಯನ್ನು ಪರಿಣಾಮಕಾರಿಯಾಗಿ ಹೇಳುತ್ತಾರೆ. ಅರ್ಜಿಯೊಂದನ್ನು ಭರ್ತಿ ಮಾಡುವ ಕ್ರಮದಲ್ಲಿ ಈ ಕವನ ರಚನೆಯಾಗಿರುವುದು ವಿಶೇಷ.ಹುಟ್ಟಿದ್ದು ಆಸ್ಪತ್ರೆಯಲ್ಲಿ ಎಂಬಲ್ಲಿ ಮನೆಯಲ್ಲಿ ಬಿಟ್ಟು ಬೇರೆಲ್ಲೋ ಇರುವ ಬೆರೆಲ್ಲೋ ಬೆಳೆಯವ ಪರಕೀಯತೆ, ಬಾಟ್ಲಿಯ ಹಾಲು ,ಗ್ರೈಫ್ ವಾಟರ್, ಸಿರಪ್ ಮುಂತಾವುಗಳು ಬದುಕಿನಲ್ಲಿ ತಾಜಾತನವನ್ನು ಕಳೆದುಕೊಂಡು ನಾಟಕೀಯತೆಗೆ ಒಗ್ಗಿಕೊಂಡಿರುವುದನ್ನು ಸಾಂದರ್ಭಿಕ ಅಭಿವ್ಯಕ್ತಿಯೊಂದಿಗೆ ಹೇಳುತ್ತಾರೆ.
‘ಭೀಮಾಲಾಪ’ ಎಂಬ ಕವಿತೆಯಲ್ಲಿ ನವ್ಯದ ವೈಚಾರಿಕತೆ ಪ್ರಧಾನವಾಗಿದೆ. ಪ್ರತಿಮಾವಿಧಾನದಲ್ಲಿ ರಚನೆಯಾಗಿರುವ ಈ ಕವಿತೆಯಲ್ಲಿ ಮಹಾಭಾರತದ ವಿರಾಟಪರ್ವದ ಪುರಾಣ ಪ್ರತಿಭೆ ಭೀಮ. ಈ ಪಾತ್ರದ ಆತ್ಮ ನಿರೀಕ್ಷಣೆ ಕವಿತೆಯ ರೂಪ ತಾಳಿದೆ. ಪ್ರಜ್ಞಾವಂತ ಮತ್ತು ಸತ್ವ ಪೂರ್ಣ ವ್ಯಕ್ತಿ ಅನುಭವಿಸುವ ವಿಫಲತೆ ಮತ್ತು ಅಸಹಾಯಕತೆಗಳೂ ಆಧುನಿಕ ಕಾಲದ ವಿಲಕ್ಷಣ ಸಂಗತಿಯಾದ ಬಗೆಯನ್ನು ಕವನ ಪ್ರತಿಪಾದಿಸುತ್ತದೆ. “ಏನೇನೊ ಸುರುಳಿ ಬಿಚ್ಚುತ್ತವೆ ಜೀವ ಹಿಂಡುತ್ತವೆ ಹೆಣವಾಗಿ ಮಲಗಿಸಿದ್ದೇವೆ ಮರದ ಕೊಂಬೆಯ ಮೇಲೆ ಎಂತೆಂಥವೋ ವಿಜೃಂಭಿಸಿ ಮೀಸೆ ತಿರುವುತ್ತವೆ, ಉರಿವ ಸೌದೆಗಳ ಜೊತೆಗೆ ಪಾತ್ರೆಗಳಲ್ಲಿ ಕೊತ ಕೊತ ಕುದಿದು ಕಾಯುತ್ತ ಇದ್ದೇನೆ” ಎಂಬ ಧ್ವನಿಪೂರ್ಣ ಮಾತು ಇಲ್ಲಿನ ವಿಶೇಷವಾಗಿದೆ.
‘ಮಬ್ಬಿನಿಂದ ಮಬ್ಬಿಗೆ’ ಕವಿತೆ ಒಂದು ದಿನದ ಸಾಂಕೇತಿಕತೆಯಲ್ಲಿ ಮನುಷ್ಯನ ಬಹುಪಾಲು ಎಲ್ಲಾ ಸ್ತರಗಳನ್ನು ಗುರುತಿಸುವ ಗಂಭೀರ ಪ್ರಯತ್ನವಾಗಿದೆ ಬೆಳಗಿನ ಆರು ಗಂಟೆಯ ಸೂರ್ಯೋದಯದಿಂದ ಅಂದರೆ ಹನ್ನೆರಡು ಗಂಟೆಗಳ ದಿನದ ಅವಧಿಯನ್ನು ಹುಟ್ಟು-ಬೆಳವಣಿಗೆ ಸಾವುನೆನ್ನುವ ಅರ್ಥದಲ್ಲಿ ಕವಿ ಗ್ರಹಿಸುತ್ತಾರೆ. ಕವಿತೆಯಲ್ಲಿ ಭಾವನೆಯ ಶಬ್ದಗಳ ಅರ್ಥಪೂರ್ಣವಾಗಿ ಪರಸ್ಪರ ಪೂರಕತೆಯ ಚಮತ್ಕಾರದಂತೆ ಸಾಗಿ ಒಂದು ಗಂಭೀರ ಚಿಂತನೆಯನ್ನು ಬಡಿದೆಬ್ಬಿಸುತ್ತದೆ.
‘ಬುದ್ಧಪೂರ್ಣಿಮೆಯ ದಿನ’, ‘ವ್ಯಕ್ತ ಮಧ್ಯ’ ಸಂಕಲನದಿಂದ ಆಯ್ದುಕೊಂಡಿರುವ ಈ ಕವಿತೆಯಲ್ಲಿ ವೈಜ್ಞಾನಿಕ ಪ್ರಗತಿಯ ಹೆಸರಿನಲ್ಲಿ ನಡೆಯುವ ಅಸ್ತ್ರಾಸ್ತ್ರ ಪ್ರಯೋಗ ಪರೀಕ್ಷೆಗಳ ಬಗೆಗೆ ವಿಡಂಬನೆಯಿದೆ. ಮಾನವಪರ ಧೋರಣೆ ಶಾಂತಿಗಳಿಗಾಗಿ ಕವಿತೆ ಮಿಡಿಯುತ್ತದೆ.
“ಮಹಾಸಂಗಮ” ಇದು ಬಾನುಲಿ ನಾಟಕ. ಇಲ್ಲಿ ಸಂಭಾಷಣೆ ಗೀತಾತ್ಮಕವಾಗಿ ಹರಿದು ಬಂದಿರುವುದು ವಿಶೇಷ. ಹನ್ನೆರಡನೆಯ ಶತಮಾನದ ಸಿದ್ಧರಾಮನನ್ನು ಕರಿತಂತೆ ಶಿವಯೋಗಿ ಸಿದ್ಧರಾಮ ಎಂಬ ವ್ಯಕ್ತಿಚಿತ್ರವನ್ನು ಬರೆದಿದ್ದಾರೆ. ‘ಗಂಗೆಯ ಶಿಖರಗಳಲಿ’, ‘ಇಂಗ್ಲೆಂಡಿನಲ್ಲಿ ಚಾತುರ್ಮಾಸ’, ‘ಮಾಸ್ಕೋದಲಿ ಕಳೆದ ೨೨ ದಿನ’, ‘ಅಮೇರಿಕದಲ್ಲಿ ಕನ್ನಡಿಗ’ ಮುಂತಾದ ಪ್ರವಾಸ ಸಾಹಿತ್ಯವನ್ನು ರಚಿಸಿದ್ದಾರೆ.
ಉಸ್ಮಾನಿಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಮೈಸೂರಿನಲ್ಲಿ ವಿಶ್ವಕೋಶ, ಶರಣ ಸಾಹಿತ್ಯ ಸಂಶೋಧನೆಗಳಾಗುತ್ತ ಇದ್ದ ಕಾಲದಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಮರ್ಶೆಯ ಗ್ರಂಥ ಸಂಪಾದನೆಯ ಕೇಂದ್ರವನ್ನಾಗಿ ಮಾಡಿದವರು. ವಿದ್ಯಾರ್ಥಿಗಳಿಗೆ, ಅಪಾರ ಸಂಖ್ಯೆಯ ಲೇಖಕರಿಗೆ, ಕಾವ್ಯ ಶಾಸ್ತ್ರಾಭ್ಯಾಸಿಗಳಿಗೆ ವಿಮರ್ಶಕರಾಗಿ “ಕನ್ನಡದ ಮೇಷ್ಟ್ರು” ಎಂಬ ಅನ್ವರ್ಥವನ್ನು ಪಡೆದುಕೊಂಡಿದ್ದಾರೆ. ಜಿ.ಎಸ್.ಎಸ್. ರವರು ನವೋದಯ ನವ್ಯ ನವ್ಯೋತ್ತರ ಎಂಬ ಮೂರೂ ಕಾವ್ಯಮಾರ್ಗಗಳಲ್ಲೂ ತಮ್ಮ ಅಸ್ತಿತ್ವವನ್ನು ಸಾಬೀತು ಮಾಡಿದ್ದಾರೆ. ಆಧುನಿಕ ಕನ್ನಡ ಕಾವ್ಯ ಇಡೀ ಚರಿತ್ರೆಯನ್ನು ಪ್ರತಿಫಲಿಸುವ ಕವನಗಳನ್ನು ರಚಿಸಿದ ಮಹತಿ ಇವರಿಗೆ ಸಲ್ಲುತ್ತದೆ. ಹಲವು ಗಿಡಗಳ ಹೂವನ್ನು ಬಿಡಿಸಿ ಒಂದು ಬುಟ್ಟಿಯಲ್ಲಿ ಒಟ್ಟಿಗೆ ಇಟ್ಟಂತೆ ನವೋದಯ ಮಾರ್ಗದಿಂದ ಕಾವ್ಯ ಜಗತ್ತಿಗೆ ಕಾಲಿಟ್ಟು ಯಾವೊಂದು ಮಾರ್ಗಕ್ಕೂ ಮುಡಿಪಾಗಿ ತಮ್ಮ ಅನುಭವ ಸ್ತರಗಳನ್ನು
ಬೆಳೆಸಿ ತಮ್ಮ ಕವಿಚೇತನದ ಸ್ಪಂದನಕ್ಕೆ ಕಾವ್ಯದಲ್ಲಿ ಅಭಿವ್ಯಕ್ತಿ ಕಂಡು ಕೊಂಡವರು ಕವಿ ಶಿವರುದ್ರಪ್ಪ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್