- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಕಾರಟಗಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನುಡಿಗಳು
೭-೩-೨೦೨೧ ರವಿವಾರ
ಕರ್ನಾಟಕ ಪಬ್ಲಿಕ್ ಶಾಲೆ ಆವರಣ ನವಲಿ ರಸ್ತೆ ಕಾರಟಗಿ.
ಪ್ರೊ.ಸಿದ್ದು ಯಾಪಲಪರವಿ ಕಾರಟಗಿ
ತಾಲೂಕು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರಟಗಿ ಜಿ.ಕೊಪ್ಪಳ
ಆತ್ಮೀಯ ಕನ್ನಡದ ಮನಸುಗಳಿಗೆ ನಮಸ್ಕಾರಗಳು,
ಸಾವಿರದ ಶರಣು ಶರಣಾರ್ಥಿಗಳು
ಕಾರಟಗಿ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನ ಮಹಾ ದಾಸೋಹಿ ಶರಣಬಸವೇಶ್ವರರ ವೇದಿಕೆಯ ಮೇಲೆ ಜರುಗುತ್ತಿರುವುದು ಅತ್ಯಂತ ಅಭಿಮಾನದ ಸಂಗತಿಯಾಗಿದೆ.
ವೇದಿಕೆ ಮೇಲೆ ಆಸೀನರಾಗಿರುವ ಪೂಜ್ಯರುಗಳೆ, ಗಣ್ಯರೆ, ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕರಾದ ಶ್ರೀ ಬಸವರಾಜ ಧಡೆಸೂಗೂರ ಅವರೇ, ಸಂಸದರಾದ ಶ್ರೀ ಸಂಗಣ್ಣ ಕರಡಿ ಅವರೇ, ಗಂಗಾವತಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರೇ, ಸಿಂಧನೂರು ಶಾಸಕರಾದ ಶ್ರೀ ವೆಂಕಟರಾವ್ ನಾಡಗೌಡ ಅವರೇ, ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ರಾಜಶೇಖರ ಅಂಗಡಿ ಅವರೇ, ತಾಲೂಕಾ ಅಧ್ಯಕ್ಷರಾದ ಚನ್ನಬಸಪ್ಪ ವಕ್ಕಳದ ಅವರೇ, ಶೇಖರಗೌಡ ಮಾಲಿಪಾಟೀಲ ಅವರೇ, ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳೆ ಮತ್ತು ತಾಲೂಕಿನ ಎಲ್ಲಾ ಅಧಿಕಾರಿಗಳೇ, ಪರಿಷತ್ತಿನ ಎಲ್ಲಾ ಪದಾಧಿಕಾರಿಗಳೆ, ವಿವಿಧ ಸಮಿತಿಗಳ ಪದಾಧಿಕಾರಿಗಳೇ, ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಕನ್ನಡದ ಮನಸುಗಳಿಗೆ ಶುಭ ಮುಂಜಾನೆ ಶರಣುಗಳು.
ಕಾರಟಗಿಯ ಅಕ್ಕಿ ಹೊರ ದೇಶ ವಿದೇಶಿಗರ ತಟ್ಟೆಯಲಿ ಅನ್ನವಾಗುವ ಸೌಭಾಗ್ಯ ಹೊಂದಿದೆ.
ತುಂಬಾ ಅನಿರೀಕ್ಷಿತವಾಗಿ ಕಾರಟಗಿ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸುದೈವವೇ ಸರಿ.
ಗದುಗಿನ ಡಾ.ಬಿ.ಎಫ್.ದಂಡಿನ ಅವರು ಸ್ಥಾಪಿಸಿದ ಕನಕದಾಸ ಶಿಕ್ಷಣ ಸಮಿತಿಯ ಇಂಗ್ಲಿಷ್ ಪ್ರಾಧ್ಯಾಪಕನಾಗಿ, ತಿಮ್ಮಾಪೂರ ಕಾಲೇಜಿನ ಪ್ರಾಚಾರ್ಯನಾಗಿ, ಕನ್ನಡದ ಬರಹಗಾರನಾಗಿ ಹಾಗೂ ಜೀವನಶೈಲಿ ತರಬೇತುದಾರನಾಗಿ ಮೂರು ದಶಕಗಳ ಪಯಣದಲಿ ನನಗೆ ದೊರಕಿರುವ ಮೊಟ್ಟಮೊದಲ ಗೌರವ ಇದಾಗಿದೆ.
ಹುಟ್ಟಿದ ಊರಲ್ಲಿ ಈ ಸನ್ಮಾನ ಲಭಿಸಿರುವುದು ನನ್ನ ಸೌಭಾಗ್ಯವೆಂದೇ ಭಾವಿಸುತ್ತೇನೆ. ಪಾಲಕರು, ಕಲಿಸಿದ ಶಿಕ್ಷಕರು ಹಾಗೂ ಜಗದ್ಗುರು ಡಾ.ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಕೃಪೆಯಿಂದ ಅಂದುಕೊಂಡಿದ್ದನ್ನು ಪಡೆದುಕೊಳ್ಳುತ್ತ ಸಾಗಿದ್ದೇನೆ.
ರಾಯಚೂರು ಜಿಲ್ಲೆಯಿಂದ ವಿಭಜಿತವಾದಾಗ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಉಳಿದುಕೊಂಡ ಕಾರಟಗಿ ಈಗ ಸ್ವತಂತ್ರ ತಾಲೂಕಾಗಿ ಘೋಷಣೆಯಾಗಿದೆ.
ಕಾರಟಗಿ ತಾಲೂಕು ಆಗಬೇಕು ಎಂಬುದು ಇಂದಿನ ಕನಸಲ್ಲ ಸರಿ ಸುಮಾರು ಐದು ದಶಕಗಳ ಹಿಂದೆ ಚಳ್ಳೂರಿನ ತಿಮ್ಮನಗೌಡರು ಈ ಕುರಿತು ಹೋರಾಟ ಆರಂಭಿಸಿ ದಾಖಲೆಯಾಗಿ ಪುಸ್ತಕವೊಂದನ್ನು ಸಾಕ್ಷಿಯಾಗಿಸಿದ್ದಾರೆ. ನಂತರ ನಡೆದ ಹೋರಾಟಗಳ ಪ್ರತಿಫಲವಾಗಿ ಎಲ್ಲರ ಕನಸು ನನಸಾಗಿದೆ.
ಕಾರಟಗಿ ವ್ಯಾಪಾರೋದ್ಯಮದಲ್ಲಿ ಹಿಂದಿನಿಂದಲೂ ಹೆಸರುವಾಸಿಯಾಗಿದೆ.
ತುಂಗಭದ್ರಾ ನದಿಯ ಪವಿತ್ರ ಜೀವಜಲ ನಮ್ಮೂರ ಜನತೆಯ ಜೀವನಾಡಿ. ಈ ಸುಂದರ ಐತಿಹಾಸಿಕ ಸಂದರ್ಭದಲ್ಲಿ ಎಪ್ಪತ್ತರ ದಶಕದ ಕಾರಟಗಿಯ ಸ್ಥಿತಿಯನ್ನು ನೆನಪಿಸಿಕೊಳ್ಳ ಬಯಸುತ್ತೇನೆ.
ಆಗ ಕಾರಟಗಿ ಪುಟ್ಟ ಗ್ರಾಮ. ಆದರೆ ಯಾವುದೇ ರೀತಿಯ ಗ್ರಾಮೀಣ ಸಂಸ್ಕೃತಿಯ ದೇಸಿಯ ಸೊಗಡು ಇರಲಿಲ್ಲ. ಅದಕ್ಕೆ ಕಾರಣ ಏಕ ಪದ್ದತಿಯ ಕೃಷಿ ವ್ಯವಸ್ಥೆ. ನೆಲ್ಲು, ಹತ್ತಿ ಬಿಟ್ಟರೆ ಇತರ ಬೆಳೆ ಅಷ್ಟಕ್ಕಷ್ಟೇ. ಆ ಕಾರಣದಿಂದಾಗಿ ಊರು ಪಟ್ಟಣದಂತೆ ಕಾಣುತ್ತಿತ್ತು.
ದಟ್ಟ ವ್ಯಾಪಾರದ ವಾತಾವರಣ, ಹಣ ಹೊಂದಿದ ಶ್ರೀಮಂತರು ಮತ್ತು ದುಡಿಯುವ ಶ್ರಮಿಕರು ಮಾತ್ರ.
ಶೈಕ್ಷಣಿಕ ಪರಿಕಲ್ಪನೆ ವಿರಳ, ಕೇವಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮಾತ್ರ ಇದ್ದ ದಿನಗಳವು.
ನಾವು ಕಲಿತ ಶಾಲೆಗೆ ಕಟ್ಟಡ ಇರಲಿಲ್ಲ, ಗುಡಿಸಲಿನಲ್ಲಿ ಶಿಕ್ಷಣ ಪಡೆದರೂ ನಮ್ಮ ಗೆಳೆಯರು ಖುಷಿಯಿಂದ ಕಾಲ ಕಳೆಯಲು ಅಂದಿನ ಶಿಕ್ಷಕರೇ ಕಾರಣ.
ಅವರು ತುಂಬಾ ಆಸಕ್ತಿ ಮತ್ತು ಪ್ರೀತಿಯಿಂದ ಕಲಿಸುವುದನ್ನು ಎಂದಿಗೂ ಮರೆಯಲಾಗುವುದಿಲ್ಲ. ಊರ ಹೊರಗೆ ಹರಿಯುತ್ತಿದ್ದ ಕಾಲುವೆ ನಮ್ಮ ಜೀವ ಚೈತನ್ಯ.
ಕಾಲುವೆಯಲ್ಲಿ ಎಲ್ಲರೂ ಈಜಾಡುತ್ತ ಸಂಭ್ರಮಿಸುತ್ತಿದ್ದ ದಿನಗಳು ಇನ್ನೂ ಹಚ್ಚ ಹಸಿರು.
ಕುಟುಂಬದ ಹಿನ್ನೆಲೆ
ನಮ್ಮ ಮನೆತನದ ತಾತ ಅಮರಣ್ಣ ಯಾಪಲಪರವಿ ಅವರದು ಉದಾರ ವ್ಯಕ್ತಿತ್ವ, ಅವರ ಕಿರಾಣಿ ಅಂಗಡಿ ಆ ಕಾಲದ ಬಿಗ್ ಬಜಾರ್, ಅನೇಕ ಯುವಕರಿಗೆ ವೃತ್ತಿ ಬದುಕು ಕಟ್ಟಿಕೊಳ್ಳುವ ಗರಡಿ ಮನೆ.
ಅದೇ ಪರಿಸರದಲ್ಲಿ ನಮ್ಮ ತಂದೆ ಬಸವರಾಜಪ್ಪ ತಾಯಿ ಪಾರಮ್ಮ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡರು.
ಅವರಂತೆ ನಾನು ಒಳ್ಳೆಯ ವ್ಯಾಪಾರಿ ಆಗಲಿ ಎಂಬುದು ಅವರ ಕನಸಾಗಿತ್ತು.
ಏಕೆಂದರೆ ನಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಉದ್ಯಮದಲ್ಲಿ ಹೆಸರು ಮಾಡಲು ಆರಂಭಿಸಿದ್ದರು.
ಆದರೆ ವಿಧಿಯಾಟ ಬೇರೆ ಇತ್ತು. ನನಗೆ ವ್ಯಾಪಾರ ಮಾಡಲು ಆಸಕ್ತಿ ಹುಟ್ಟಲಿಲ್ಲ ತಾತ ಅಮರಣ್ಣನವರ ನಿಧನದ ನಂತರ ವ್ಯಾಪಾರ ಕ್ಷೀಣಿಸಿದ್ದು ನಂಬಲಸಾಧ್ಯವಾಯಿತು.
ಅತ್ತ ಕಡೆ ಶಿಕ್ಷಣವೂ ಅಷ್ಟಕ್ಕಷ್ಟೇ, ಇಂತಹ ಗೊಂದಲದ ಮನಸ್ಥಿತಿಯಲ್ಲಿ ನಮ್ಮ ಊರಿನ ಶರಣಬಸವೇಶ್ವರ ಜಾತ್ರೆಗೆ ತೋಂಟದಾರ್ಯ ಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಆಗಮಿಸಿ ನಮ್ಮ ಊರಿನ ವಿಶೇಷತೆಯನ್ನು ವರ್ಣಿಸುತ್ತ ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಖಾರವಾಗಿ ಟೀಕಿಸಿ ಎಚ್ಚರಿಸಿದರು.
ಅದು ನನ್ನ ಒಳಗಿರುವ ಸಾಕ್ಷಿ ಪ್ರಜ್ಞೆಯನ್ನು ಎಚ್ಚರಿಸಿ ಓದಲು ಪ್ರೇರೇಪಿಸಿತು.
ಇಂದು ನಾನು ಈ ಮಟ್ಟಕ್ಕೆ ಏರಿ ತಮ್ಮ ಗೌರವ ಆದರಗಳಿಗೆ ಪಾತ್ರವಾಗಲು ಪೂಜ್ಯರ ಮಾರ್ಗದರ್ಶನ ಮತ್ತು ನಮ್ಮ ಹಿರಿಯರ ಆಶೀರ್ವಾದವೇ ಕಾರಣ.
ನಾನು ಇಂಗ್ಲಿಷ್ ಪ್ರಾಧ್ಯಾಪಕನಾದದ್ದು, ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದು ಎಲ್ಲವೂ ಅನಿರೀಕ್ಷಿತ.
ಬಾಲ್ಯದಲ್ಲಿ ಸಾಹಿತ್ಯದ ಪರಿಸರ ನನಗೆ ದಕ್ಕಲಿಲ್ಲವಾದರೂ ನನ್ನ ಬರಹಕ್ಕೆ ನನ್ನ ಬಾಲ್ಯದ ದಟ್ಟ ಅನುಭವವೇ ಕಾರಣವಾದದ್ದು ಕೂಡ ಅಷ್ಟೇ ಸತ್ಯ.
ವ್ಯಾಪಾರ ವಹಿವಾಟು
ನಮ್ಮ ಹಿರಿಯರ ದುಡಿಮೆ ವ್ಯಾಪಾರಿ ಮನೋಭಾವ ಬಹುದೊಡ್ಡ ಆದರ್ಶ.
ಈ ಜಗತ್ತಿನ ರೈತರು, ವಿಜ್ಞಾನಿಗಳು ಮತ್ತು ವ್ಯಾಪಾರಿಗಳು ಇರದಿದ್ದರೆ ನಾವು ನೆಮ್ಮದಿಯಿಂದ ಬದುಕುವುದು ಕಷ್ಟ.
ಇಡೀ ಜಗತ್ತಿನ ಎಲ್ಲ ಲೀಲೆಗಳು ವ್ಯಾಪಾರದಿಂದ ನಡೆಯುತ್ತವೆ. ಈಗ ಅಷ್ಟೇ ಮಹತ್ವ ಶಿಕ್ಷಣಕ್ಕೆ ನೀಡುವ ಅಗತ್ಯ ಮತ್ತು ಅನಿವಾರ್ಯತೆ ಇದೆ.
ಅಂದು ಎಲ್ಲಾ ವ್ಯವಹಾರಗಳು ಕೇವಲ ವಿಶ್ವಾಸದ ಆಧಾರದ ಮೇಲೆ ನಡೆಯುತ್ತಿದ್ದವು. ಇಂದು ಬಾಯಿ ಮಾತಿನ ವಿಶ್ವಾಸ ಮಾಯವಾಗಿರುವಾಗ ಶಿಕ್ಷಣ ಮತ್ತು ವೃತ್ತಿಪರತೆ ಅನಿವಾರ್ಯ.
ಅಂತಹ ವೃತ್ತಿ ಪರತೆ ಕಾರಣದಿಂದ ಸುಮಾರು ನಲವತ್ತಕ್ಕೂ ಹೆಚ್ಚು ರೈಸ್ ಮಿಲ್ಲುಗಳು, ನೂರಾರು ದಲಾಲಿ ಅಂಗಡಿಗಳು ತಲೆ ಎತ್ತಿ ನಿಂತು ಊರು ಹೆಮ್ಮರವಾಗಿ ಬೆಳೆದು ನಿಂತಿದೆ.
ಊರು ಈಗ ಪಟ್ಟಣವಾಗಿದೆ. ಊರ ಹೊರಗೆ ಹರಿಯುತ್ತಿದ್ದ ಕಾಲುವೆ ಊರ ಒಳಗೆ ಸೇರಿಕೊಂಡಿದೆ.
ನಷ್ಟ ಲಾಭದ ಲೆಕ್ಕಾಚಾರದ ಮಧ್ಯೆ ನಮ್ಮ ರೈತರು ಮತ್ತು ವ್ಯಾಪಾರಿಗಳು ಒದ್ದಾಡುತ್ತ, ಹೋರಾಡುತ್ತ ಜೀವನ ನಡೆಸಿ ಇತರರ ಒಳಿತಿಗಾಗಿ ದುಡಿಯುವುದನ್ನು ನಾನು ಊರು ಬಿಟ್ಟು ಹೊರಗಿದ್ದರೂ ಗಮನಿಸುತ್ತಿದ್ದೇನೆ. ಅದಕ್ಕೆ ಕಾರಣ ನನಗೆ ನಮ್ಮೂರ ಬಗ್ಗೆ ಸದಾ ಅತ್ಯಂತ ಹೆಮ್ಮೆ, ಅಭಿಮಾನ.
ಈಗ ಊರ ತುಂಬಾ ಹತ್ತಾರು ಶಾಲೆಗಳು ತಲೆ ಎತ್ತಿ ನಿಂತು ಶೈಕ್ಷಣಿಕ ಜಾಗೃತಿಯನ್ನು ಉಂಟು ಮಾಡಿವೆ.
ಆದರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣ ಇನ್ನೂ ಸಮೃದ್ಧಗೊಳಿಸಬೇಕಾಗಿದೆ.
ಗುಣಮಟ್ಟದ ಶಿಕ್ಷಣಕ್ಕಾಗಿ ಬೇರೆ ಬೇರೆ ಊರುಗಳಿಗೆ ಮಕ್ಕಳು ವಲಸೆ ಹೋಗುವುದನ್ನು ತಡೆಯುವಷ್ಟು ಗುಣಮಟ್ಟದ ಶಾಲೆಗಳು ಹೆಚ್ಚಾಗಬೇಕು.
ನೆಲ-ಜಲ-ಭಾಷೆ-ಶಿಕ್ಷಣ
ನಮ್ಮ ಜಿಲ್ಲೆಯ ಹಿರಿಯ ಕವಿ ಸಿದ್ದಯ್ಯ ಪುರಾಣಿಕರು ನಮಗೆ ಆದರ್ಶಪ್ರಾಯರು.
ಅದೇ ಮಾರ್ಗದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿ ಹೆಚ್ಚಿಸುವಂತಹ ಕೆಲಸ ಆಗಬೇಕು. ಇಂತಹ ಸಮ್ಮೇಳನಗಳು ನಮ್ಮ ಯುವಕರಿಗೆ, ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕು.
ಆ ಹೊಣೆಗಾರಿಕೆ ಸಾಹಿತ್ಯ ಪರಿಷತ್ತಿನ ಮೇಲಿದೆ.
ಇತ್ತೀಚಿಗೆ ಈ ಭಾಗದ ಯುವಕರು ಬರೆಯಲಾರಂಭಿಸಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ವೇದಿಕೆ ಕಲ್ಪಿಸಬೇಕಾಗಿದೆ.
ನೆಲ, ಜಲ, ಭಾಷೆ ಮತ್ತು ಶಿಕ್ಷಣದ ಅರಿವಿಗೆ ಹೊಸ ಮಾರ್ಗಗಳ ಮೂಲಕ ಜಾಗೃತಿ ಮೂಡಿಸುವ ಅಗತ್ಯ ಹಿಂದಿಗಿಂತ ಈಗ ಹೆಚ್ಚಾಗಿದೆ. ಸಮ್ಮೇಳನ, ವಿಚಾರ ಸಂಕಿರಣ ಮತ್ತು ನಿರಂತರ ಚರ್ಚೆಗಳ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸಬೇಕು.
ಕಲ್ಯಾಣ ಕರ್ನಾಟಕ
ಐತಿಹಾಸಿಕವಾಗಿ ಕಲ್ಯಾಣ ಕರ್ನಾಟಕ ಜಗತ್ತಿನ ಬಹುದೊಡ್ಡ ಕ್ರಾಂತಿ ಕೇಂದ್ರ. ಬಸವಾದಿ ಶರಣರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಮೊಟ್ಟಮೊದಲ ಪಾರ್ಲಿಮೆಂಟ್.
ಜಾತ್ಯಾತೀತ ಪರಿಕಲ್ಪನೆಯಲ್ಲಿ ಸಾವಿರಾರು ಶರಣರಿಗೆ ‘ಅಕ್ಷರ-ಅರಿವು-ಅನ್ನ’ ದ ಮಹತ್ವ ತಿಳಿಸಲಾಯಿತು.
‘ಕಾಯಕ-ದಾಸೋಹ-ಸಂವಾದಗಳ’ ಮೂಲಕ ಹೊಸ ಸಾಮಾಜಿಕ ಕ್ರಾಂತಿಯಾಯಿತು.
ವಚನ ಸಾಹಿತ್ಯ ಮನುಷ್ಯನ ಬದುಕಿನ ಅರಿವನ್ನು ಹೆಚ್ಚಿಸುವುದಲ್ಲದೇ ಸಾಮರಸ್ಯದಿಂದ ಬಾಳುವ ಬಗೆಯನ್ನು ಕಲಿಸಿತು.
ವಚನಕಾರರು ಇಡೀ ಲೋಕದ ಮಾರ್ಗದರ್ಶಕರು.
ಆ ಬೌದ್ಧಿಕ ಗತ ವೈಭವದ ಕಲ್ಯಾಣ ಕರ್ನಾಟಕ ಹೈದ್ರಾಬಾದ್ ಕರ್ನಾಟಕವಾಗಿ ಅವಸಾನದ ಹಂತ ತಲುಪಲು ನಿಜಾಮರ ಆಡಳಿತ ಮತ್ತು ರಜಾಕಾರ ಹಾವಳಿ ಕಾರಣವಾಯಿತು.
ಜನರು ಭಯದ ವಾತಾವರಣದಲ್ಲಿ ಬದುಕಿದರು.
ಕಲ್ಯಾಣ ಕರ್ನಾಟಕದ ಶರಣರನ್ನು ದುರುಳರು ಹತ್ಯೆ ಮಾಡದಿದ್ದರೆ ನಮ್ಮ ಬದುಕಿನ ಬಗೆ ಭಿನ್ನವಾಗಿರುತ್ತಿತ್ತು.
ಒಂದು ಕಡೆ ವಿಜಯನಗರ ಸಾಮ್ರಾಜ್ಯದ ಗತ ವೈಭವ ಮತ್ತು ಕಲ್ಯಾಣ ಕರ್ನಾಟಕದ ಬೌದ್ಧಿಕ ವೈಭವವನ್ನು ನಾವು ಕಳೆದುಕೊಂಡು ಅನಾಥರಾದೆವು.
ಬ್ರಿಟಿಷ್ ಆಡಳಿತದ ಮೂಲಭೂತ ಸೌಕರ್ಯಗಳನ್ನು ನಮ್ಮ ನಿಜಾಮರ ಆಡಳಿತ ನೀಡದ ಕಾರಣದಿಂದಾಗಿ ನಮ್ಮ ಪ್ರದೇಶ ಹೆಚ್ಚು ಹಿಂದುಳಿಯಿತು.
ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ರಜಾಕಾರರ ಹಾವಳಿ ಉಲ್ಬಣಗೊಂಡು ಜನ ಕಂಗಾಲಾದದ್ದನ್ನು ನಮ್ಮ ಹಿರಿಯರು ಹೇಳುತ್ತಿದ್ದರು.
ಬಳ್ಳಾರಿ ಜಿಲ್ಲೆಗೆ ರಜಾಕಾರರ ಹಾವಳಿಯ ಬಿಸಿ ತಟ್ಟಲಿಲ್ಲ.
ನಮ್ಮ ಪ್ರದೇಶಗಳಲ್ಲಿ ದಟ್ಟವಾಗಿ ಹರಡಿದ ಗುಲಾಮಿ ಮನೋಧರ್ಮ ಇಂದಿಗೂ ನಮ್ಮನ್ನು ಬಾಧಿಸುತ್ತದೆ. ಅದರ ಪರಿಣಾಮವಾಗಿ ದೀನ ದಲಿತರ, ಬಡವರ ಮತ್ತು ಮಹಿಳೆಯರ ಧ್ವನಿ ಕುಗ್ಗಿ ಹೋಯಿತು.
ಆಧುನಿಕ ದಿನಗಳ ಸಂವಿಧಾನಿಕ ಅನುಕೂಲಗಳ ಮೂಲಕ ಮತ್ತೆ ಈಗ ಕಲ್ಯಾಣ ಕರ್ನಾಟಕ ಮರು ಹುಟ್ಟು ಪಡೆಯಬೇಕಾಗಿದೆ.
ದಾಸ್ಯ ವಿಮೋಚನೆ ನಮ್ಮ ಆದ್ಯತೆ ಆಗಬೇಕು.
ಮಾನವ ಸಂಪನ್ಮೂಲ ಸದ್ಬಳಕೆ
ಸರಕಾರದ ಅನುದಾನದಿಂದ ನಿರ್ಮಾಣವಾಗುವ ಭವ್ಯ ಕಟ್ಟಡಗಳು, ಸುಂದರ ರಸ್ತೆಗಳಿಂದ ಅಭಿವೃದ್ಧಿ ಆಗುವುದಿಲ್ಲ. ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕು.
ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಗುಳೆ ಹೋಗುವುದನ್ನು ತಡೆಯಬೇಕು.
ಅಭಿವೃದ್ಧಿ ಎಂದರೆ ಜನರ ಆರೋಗ್ಯ, ಶಿಕ್ಷಣ ಮತ್ತು ವರಮಾನ ಎಂದು ಅರ್ಥ ಶಾಸ್ತ್ರಜ್ಞರು ಹೇಳುವಂತೆ, ನಾವು ಈ ಮೂರು ಕ್ಷೇತ್ರಗಳಲ್ಲಿ ತೀವ್ರ ಬದಲಾವಣೆ ತರಬೇಕಾಗಿದೆ.
ಬಡವರ ಬಳಕೆಗಾಗಿ ಇರುವ ಸರಕಾರಿ ಸೇವೆಗಳು ಸಮರ್ಪಕವಾಗಿ ಜನರಿಗೆ ತಲುಪುವ ವ್ಯವಸ್ಥೆ ಇರಬೇಕು.
ಸುದೈವದಿಂದ ಕಾರಟಗಿ ಪ್ರದೇಶದಲ್ಲಿ ಜನ ಗುಳೆ ಹೋಗುವ ಕೆಟ್ಟ ವಾತಾವರಣ ಇಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೆ ಈ ವಾತಾವರಣ ಇಡೀ ಕಲ್ಯಾಣ ಕರ್ನಾಟಕವನ್ನು ವ್ಯಾಪಿಸಬೇಕು.
ನಮ್ಮ ನಾಡನ್ನು ಕಲ್ಯಾಣ ಕರ್ನಾಟಕವನ್ನಾಗಿ ಪರಿವರ್ತಿಸಲು ಈ ಭಾಗದ ರಾಜಕೀಯ ನಾಯಕರ ನೈತಿಕ ಶಕ್ತಿಯನ್ನು ಹೆಚ್ಚಿಸಲು ಬುದ್ಧಿ ಜೀವಿಗಳು, ಸಾಹಿತಿಗಳು, ಚಿಂತಕರು, ಮಾಧ್ಯಮ ಮಿತ್ರರು ತಮ್ಮ ಚಿಂತನೆಗಳ ಮೂಲಕ ಹೋರಾಟ ಆರಂಭಿಸಬೇಕು.
‘ಕಾವೇರಿ ವಿಷಯ ಬಂದಾಗ ಇರುವ ಹೋರಾಟ ತುಂಗಭದ್ರಾ ವಿಷಯ ಬಂದಾಗ ಏಕೆ ಇರುವುದಿಲ್ಲ?’ ಎಂಬುದನ್ನು ಗಂಭೀರವಾಗಿ ಆಲೋಚನೆ ಮಾಡಬೇಕು.
ಸಮಗ್ರ ಕರ್ನಾಟಕ
ಕರ್ನಾಟಕ ಎಂದರೆ ಕೇವಲ ಹಳೆ ಮೈಸೂರು ಪ್ರದೇಶ ಅಲ್ಲ ಸಮಗ್ರ ಕರ್ನಾಟಕ ಎಂಬ ಎಚ್ಚರಿಕೆಯ ಸಂದೇಶವನ್ನು ಮೇಲಿಂದ ಮೇಲೆ ಹೋರಾಟಗಳ ಮೂಲಕ ಇಡೀ ರಾಜ್ಯಕ್ಕೆ ರವಾನಿಸಬೇಕು.
ಇಡೀ ನಾಡಿನ ಜನರಿಗೆ ಅನ್ನ ಕೊಡುವ ನಮ್ಮ ರೈತರು ಸಂಕಷ್ಟ ಅನುಭವಿಸುವಂತಾಗಬಾರದು.
ಪದೇ ಪದೇ ನೀರಿಗಾಗಿ ಬಿಕ್ಕುವ ಪರಸ್ಥಿತಿ ನಿಲ್ಲಬೇಕು.
ಎರಡು ಬೆಳೆಗೆ ನೀರು ಕಡ್ಡಾಯವಾಗಿ ಲಭಿಸುವ ಯೋಜನೆ ಹುಡುಕಬೇಕು.
ನೂತನ ಜಲಾಶಯ ಯೋಜನೆಗಳಿಗೆ ಬೇಕಾಗುವ ಸಾವಿರಾರು ಕೋಟಿ ಹಣವನ್ನು ಬಿಡುಗಡೆ ಮಾಡಿಸುವ ತಾಕತ್ತನ್ನು ನಮ್ಮ ರಾಜಕೀಯ ನಾಯಕರು ಹೆಚ್ಚಿಸಿಕೊಳ್ಳಬೇಕು.
ವಿಧಾನ ಮಂಡಲದ ಅಧಿವೇಶನದಲ್ಲಿ ಈ ಕುರಿತು ನಡೆಯುವ ಚರ್ಚೆಯಲ್ಲಿ ಮೈ ಛಳಿ ಬಿಟ್ಟು ಮಾತನಾಡಬೇಕು.
ಅದಕ್ಕೆ ಬೇಕಾಗುವ ಮಾಹಿತಿಗಳನ್ನು ನಮ್ಮ ಭಾಗದ ಚಿಂತಕರು ಪೂರೈಸಬೇಕು.
ಕೇವಲ ರಾಜಕಾರಣಿಗಳನ್ನು ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ.
ನಮ್ಮ ಹಕ್ಕೊತ್ತಾಯ ಮತ್ತು ಹೋರಾಟಗಳ ಮೂಲಕ ರಾಜಕೀಯ ನಾಯಕರ ನೈತಿಕ ಬಲ ಹೆಚ್ಚಿಸಬೇಕು.
‘ನಮಗೆ ಯಾಕೆ ಬೇಕು?’ ಎಂಬ ಉದಾಸೀನದಿಂದಾಗಿ ನಮ್ಮ ಜನ ಪ್ರತಿನಿಧಿಗಳು ಅದೇ ಉದಾಸೀನತೆ ಬೆಳೆಸಿಕೊಂಡಿದ್ದಾರೆ.
ರಾಜಕಾರಣ ಎಂದರೆ ಬಹುದೊಡ್ಡ ಸದಾವಕಾಶ ಶಾಶ್ವತ ಉಳಿಯುವ ಕೆಲಸ ಮಾಡಿ ಇತಿಹಾಸ ದಾಖಲಿಸುವ ಸುವರ್ಣ ಸಂದರ್ಭ ಎಂಬುದನ್ನು ನಮ್ಮ ಜನ ಪ್ರತಿನಿಧಿಗಳು ಕೂಡ ಗ್ರಹಿಸಿಕೊಳ್ಳಬೇಕು. ರಾಜ್ಯ ರಾಜಕಾರಣದ ಮಲತಾಯಿ ಧೋರಣೆಯನ್ನು ಸಮರ್ಥವಾಗಿ ಎದುರಿಸಲು ಸಮ್ಮೇಳನದ ನಿರ್ಣಯಗಳು ಶಕ್ತಿ ತುಂಬಬೇಕು.
ಸಮಾನಾಂತರ ಜಲಾಶಯ
ಈಗ ತುಂಗಭದ್ರಾ ನದಿಯ ಹೂಳೆತ್ತುವುದು ಕಷ್ಟವೆನಿಸಿದ ಕಾರಣ ಪರ್ಯಾಯ ನೀರಾವರಿ ಸೌಲಭ್ಯಗಳನ್ನು ಕಲ್ಪಿಸುವ ಚಿಂತನೆ ನಡೆದಿರುವುದು ಸ್ವಾಗತಾರ್ಹ.
ನವಲಿ ಭಾಗದಲ್ಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕಾಗಿ ನೂರಾರು ಕೋಟಿ ಹಣದ ಅಗತ್ಯವಿದೆ. ತುಂಗಭದ್ರಾ ನದಿಯ ಒಳ ಹರಿವು ಹೆಚ್ಚಾದಾಗ ನೀರನ್ನು ಸಂಗ್ರಹಿಸಲು ನೂತನ ಜಲಾಶಯ ನಿರ್ಮಾಣ ಇಂದಿನ ಪರ್ಯಾಯ ಕ್ರಮವಾಗಿ ಹೊಸ ಭರವಸೆ ಹುಟ್ಟಿದೆ.
ಈ ಯೋಜನೆ ಬೇಗ ಜಾರಿಯಾಗಲು ದೊಡ್ಡ ಮೊತ್ತದ ಹಣ ಬೇಕಾಗುತ್ತದೆ.
ಆದರೆ ಕಲ್ಯಾಣ ಕರ್ನಾಟಕದ ನೀರಾವರಿ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿ ಶಾಶ್ವತ ಪರಿಹಾರ ಕಲ್ಪಿಸಬೇಕು.
ವಿಜಯಪುರ ಜಿಲ್ಲೆಯ ಮಾದರಿಯಲ್ಲಿ ನೀರು ಸಂಗ್ರಹ ಮಾಡಿ ಒಣ ಬೇಸಾಯ ಮತ್ತು ತೋಟಗಾರಿಕೆಗೆ ನೀರಾವರಿ ಸೌಕರ್ಯಗಳನ್ನು ಕಲ್ಪಿಸಬೇಕು.
ನಮ್ಮ ತುಂಗಭದ್ರಾ ನೀರು ಪೋಲಾಗುವುದನ್ನು ತಪ್ಪಿಸಬೇಕು.
ನೀರಿನ ಕಾನೂನು ಬಾಹಿರ ದುರ್ಬಳಕೆ ತಡೆಗಟ್ಟಲು ಸೂಕ್ತ ಕಾನೂನು ರೂಪಿಸಬೇಕು.
ಸರಕಾರ ಮತ್ತು ನಮ್ಮ ರಾಜಕೀಯ ನಾಯಕರು ಮನಸು ಮಾಡಿದರೆ ಯಾವುದು ಅಸಾಧ್ಯವಲ್ಲ.
ನಮ್ಮ ಭಾಗದ ಜನ ಸಂಪೂರ್ಣ ಕೃಷಿಯನ್ನು ಅವಲಂಬಿಸಿದ್ದಾರೆ. ನೀರಾವರಿ ಸಂಪರ್ಕದ ಕೊರತೆಯಿಂದ ಅಕ್ಕಿ ಮಿಲ್ಲುಗಳು ಮಾಲೀಕರು ಸಾಕಷ್ಟು ಸಂಕಷ್ಟ ಎದುರಿಸಿ ಮಿಲ್ಲುಗಳನ್ನು ಮುಚ್ಚುತ್ತಲಿದ್ದಾರೆ.
ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಒದ್ದಾಡುತ್ತಾರೆ.
ರೈತರ ಬೆಂಬಲ ಬೆಲೆಯನ್ನು ರೈತರು ಬೆಳೆ ಮಾರಾಟ ಮಾಡುವ ಮೊದಲೇ ನಿರ್ಧಾರ ಮಾಡಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು.
ರೈತರು ಸಹಕಾರ ಮಾದರಿಯಲ್ಲಿ ರೈತರ ಸಂಸ್ಥೆ ಪ್ರಾರಂಭಿಸಿ ಮಧ್ಯವರ್ತಿಗಳ ಶೋಷಣೆಯಿಂದ ಪಾರಾಗಲು ಕೃಷಿ ಇಲಾಖೆ ಮಾರ್ಗದರ್ಶನ ಮಾಡಬೇಕು.
ಸಾಲ ಮನ್ನಾ ಮತ್ತು ಇತರ ಜನಪರ ಯೋಜನೆಗಳ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕುವುದಿಲ್ಲ. ಅದರ ಬದಲಾಗಿ ರೈತರು ಸ್ವಾವಲಂಬನೆಯಿಂದ ಬದುಕು ರೂಪಿಸಿಕೊಳ್ಳುವ ಪರಿಹಾರಗಳನ್ನು ತಜ್ಞರು ಸೂಚಿಸಬೇಕು.
ಹೊಸ ಹೊಸ ಕಾಯ್ದೆಗಳನ್ನು ಜಾರಿ ಮಾಡುವಾಗ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳನ್ನು ಆಲಿಸಿ ನಿರ್ಣಯ ತೆಗೆದುಕೊಳ್ಳಬೇಕು.
ದಿಢೀರ್ ಎದುರಾಗುವ ಹೊಸ ಕಾನೂನಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ಶಿಕ್ಷಣವನ್ನು ಒದಗಿಸುವಂತಹ ತರಬೇತಿಯನ್ನು ನೀಡಬೇಕು.
ಪರಿಸರ ರಕ್ಷಣೆ
“ಕೆರೆಯಂ ಕಟ್ಟಿಸು,ಭಾವಿಯಂ ಸವೆಸು,ದೇವಗಾರಮಂ ಮಾಡಿಸ
ಜ್ವರೆಯೊಳ್ ಸಿಲ್ಕಿದನಾಥರಂ ಬಿಡಿಸು
ಮಿತ್ರರ್ಗಿಂಬುಕೆಯ್
ನಂಬಿದರ್ಗೆ ಒಟ್ಟಾಗಿರು ಶಿಷ್ಟರಂ ಪೊರೆ”
ಎಂಬ ಮಾತುಗಳ ಹೇಳಿ ತಾಯಿ ಮಗುವನ್ನು ಬೆಳೆಸುತ್ತಿದ್ದಳು. ಇಂದು ನಾವು ನಮ್ಮ ಜನನಾಯಕರಿಗೆ ಈ ಮಾತುಗಳನ್ನು ನೆನಪಿಸಬೇಕಾಗಿದೆ.
ಕಾರಟಗಿ ಎಂದರೆ ‘ಕೆರೆ ಕಟ್ಟೆ’, ‘ಕೆರೆ ಇಟ್ಟಿಗೆ’ ಎಂಬ ಪ್ರತೀತಿ ಇದೆ.
ಕಾರಟಗಿಯ ಅಂತರ್ಜಲ ಹೆಚ್ಚಿಸಲು ಊರಿನ ನಾಲ್ಕು ದಿಕ್ಕಿನಲ್ಲಿ ಕೆರೆಗಳನ್ನು ಕಟ್ಟಿಸಲೇಬೇಕು.
ಈ ಹಿನ್ನೆಲೆಯಲ್ಲಿ ದೊಡ್ಡ ಚಳುವಳಿ ಆರಂಭವಾಗಿ ನಮ್ಮ ರಾಜಕಾಣಿಗಳ ಕೈ ಬಲ ಪಡಿಸಬೇಕು.
ಈ ಹಿಂದೆ ಇದ್ದ ಐತಿಹಾಸಿಕ ಪುಷ್ಕರಣೆಯ ಜೀರ್ಣೋದ್ಧಾರ ಆಗಬೇಕು. ನಮ್ಮೂರ ಏಕೈಕ ಐತಿಹಾಸಿಕ ಕುರುಹು ಆಗಿರುವ ಹಳೆ ಭಾವಿಯ ಜೀವ ಜಲ ನಮ್ಮ ಅಭಿವೃದ್ಧಿಯ ಸಂಕೇತವಾಗಿ ಉಕ್ಕಿ ಹರಿಯಬೇಕು.
ಕೆರೆ ಬಸವಣ್ಣನ ಕೆರೆ ಮತ್ತೆ ಮೈದಾಳಬೇಕು.
ಊರ ಸುತ್ತಲೂ ಒಂದು ಲಕ್ಷ ಗಿಡಗಳ ನೆಟ್ಟು ಬೆಳೆಸುವ ಸಂಕಲ್ಪ ತೊಡಬೇಕು.
ಬಿಸಿಲಿನ ತಾಪದ ಗ್ಲೋಬಲ್ ವಾರ್ಮಿಂಗ್ ಹೆಚ್ಚಾಗಿ ಕಾರಟಗಿ ಹೊತ್ತಿ ಉರಿಯುವಂತೆ ಮಾಡಿದೆ. ಅದನ್ನು ಪರಿಸರ ಸಂರಕ್ಷಣೆ ಮೂಲಕ ನಿಯಂತ್ರಣ ಮಾಡಬಹುದು ಎಂಬ ಜಾಗೃತಿಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು.
ಊರ ಮುಂದೆ ಹರಿಯುವ ಕಾಲುವೆ ಮತ್ತು ನೂತನ ಕೆರೆಗಳ ಕಟ್ಟುವ ಮೂಲಕ ಅಂತರ್ಜಲದ ಮಟ್ಟ ಹೆಚ್ಚಿಸಬೇಕು.
ಸಂಘಟನೆಗಳು
ನಮ್ಮೂರ ಸಮಗ್ರ ಅಭಿವೃದ್ಧಿಗಾಗಿ ಸಂಗಮೇಶ್ವರ ಯುವಕ ಸಂಘ ಮತ್ತು ಜಾಗೃತ ಯುವಕ ಸಂಘಗಳನ್ನು ಆರಂಭಿಸಿದ್ದು ಅನೇಕ ಬೆಳವಣಿಗೆಗೆ ಕಾರಣವಾದವು. ಈಗ ಜಾತಿಗೊಂದು ಸಂಘಟನೆಗಳು ಹುಟ್ಟಿಕೊಂಡಿರುವುದು ಸಹಜ. ಆದರೆ ಎಲ್ಲ ಸಂಘಟನೆಗಳು ಊರಿನ ಅಭಿವೃದ್ಧಿ ವಿಷಯ ಬಂದಾಗ ಒಗ್ಗಟ್ಟಾಗಿ ಕೆಲಸ ಮಾಡಬೇಕು.
ಪಕ್ಷ, ಧರ್ಮ, ಜಾತಿ ಮತ್ತು ವರ್ಗಗಳ ಗಡಿದಾಟಿ ಸೇವಾ ಸಂಸ್ಥೆಗಳು ಮತ್ತು ಜಾತಿ ಸಂಘಟನೆಗಳು ಕೆಲಸ ಮಾಡಬೇಕು.
ಊರಿನಲ್ಲಿ ಅನೇಕ ಮಹಿಳಾ ಸಂಘಟನೆಗಳು ಮಹಿಳಾ ಸಬಲೀಕರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೊಸ ಬೆಳವಣಿಗೆ.
ಮಹಿಳಾ ಸಬಲೀಕರಣದ ಮಹತ್ವ ಮತ್ತು ಪರಿಣಾಮವನ್ನು ಹೆಚ್ಚು ಪ್ರಚಾರ ಪಡಿಸಿ ಹುಮ್ಮಸ್ಸು ಹೆಚ್ಚಿಸಬೇಕು.
ಹೊಸ ಚಿಗುರು ಹಳೆ ಬೇರು
ಊರಿನ ಸರಪಂಚರಂತೆ ಕಾರ್ಯ ನಿರ್ವಹಿಸಿ ಪಂಚ ಪಾಂಡವರು ಎನಿಸಿಕೊಂಡ ವೀರಭದ್ರಪ್ಪ ಚಿನಿವಾಲ, ಗಣಾಚಾರಿ ಅಮರಯ್ಯಸ್ವಾಮಿ, ಲಿಂಗಪ್ಪ ಸುಂಕದ, ಪಲ್ಲೇದ ಮಲ್ಕಾಜಪ್ಪ ಹಾಗೂ ಕೆ.ಸೂಗಪ್ಪ ಅವರು ಊರಿನ ಏಳ್ಗೆಗಾಗಿ ನಿರಂತರ ಪರಿಶ್ರಮಿಸಿದರು.
ಊರಿನ ವ್ಯಾಪಾರ, ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆಗೆ ಅವರೆಲ್ಲ ಸದಾ ಆಲೋಚನೆ ಮಾಡುತ್ತಿದ್ದರು.
ಈಗ ಹೊಸ ತಲೆಮಾರಿನ ಯುವಕರು ಅದೇ ಪರಂಪರೆಯನ್ನು ಮುಂದುವರೆಸಿಕೊಂಡು ಸಾಗಿರುವುದು ಅಭಿನಂದನೀಯ.
ಜಾತ್ಯಾತೀತ ಮನೋಭಾವ ಮತ್ತು ಸೌಹಾರ್ದ ಭಾವನೆ ಕಾರಟಗಿಯ ಹಿರಿಮೆ ಮತ್ತು ಹೆಗ್ಗಳಿಕೆ.
ಬಿ.ಜಿ.ಅರಳಿ ಅವರು ಮಂಡಲ ಪಂಚಾಯತಿ ಮೊದಲ ಅಧ್ಯಕ್ಷರಾಗಿ ಕಾರಟಗಿ ಅಭಿವೃದ್ಧಿಗಾಗಿ ಪ್ರಯತ್ನ ಮಾಡಿದರು.
ಈಗ ಅನೇಕ ಯುವಕರು ಊರ ಅಭಿವೃದ್ಧಿಗಾಗಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಶರಣ ಬಸವೇಶ್ವರ ಪುರಾಣ ಊರಿನ ಧಾರ್ಮಿಕ ಚಿತ್ರಣವನ್ನು ಬದಲಿಸಿತು.
ನಿರಂತರ ನಾಲ್ಕು ದಶಕಗಳ ಕಾಲ ಸಾಗಿದ ಶರಣಬಸವೇಶ್ವರ ಪುರಾಣದ ಪ್ರಭಾವದಿಂದಾಗಿ ಊರ ಆರಾಧ್ಯ ದೈವವಾಗಿದೆ.
ಇದರಿಂದಾಗಿ ಕಲಬುರಗಿ ಮತ್ತು ಕಾರಟಗಿ ಮಧ್ಯೆ ಅನ್ನ ಮತ್ತು ಜ್ಞಾನ ದಾಸೋಹಕೆ ಸೇತುವೆ ನಿರ್ಮಾಣವಾಗಿದೆ.
ಇಂತಹ ಕ್ರಿಯಾಶೀಲ ಕಾರ್ಯಗಳಿಗೆ ಸಿ.ಶಿವಪ್ಪನವರು ಹಾಗೂ ಗಿರಿಜಾಶಂಕರ ಪಾಟೀಲ ಅವರು ತಮ್ಮ ನಿರರ್ಗಳ ಮಾತುಗಳ ಮೂಲಕ ನಮಗೆಲ್ಲ ಆ ಕಾಲದಲ್ಲಿ ಪ್ರೇರಣೆಯಾಗಿದ್ದರು.
ಶೈಕ್ಷಣಿಕ ಬೆಳವಣಿಗೆ
ಶರಣಬಸವೇಶ್ವರ ಶಾಲೆ ಹಾಗೂ ತೋಂಟದಾರ್ಯ ಮಠದ ಶಿಕ್ಷಣ ಸಂಸ್ಥೆಗಳು ಊರಿನ ಶೈಕ್ಷಣಿಕ ದಿಕ್ಕನ್ನು ಬದಲಿಸಿದವು.
ತೋಂಟದಾರ್ಯ ಪೂಜ್ಯರನ್ನು ಕಾರಟಗಿ ಸಂಪರ್ಕ ಬೆಳೆಸಲು ನಮ್ಮ ತಂದೆ ಬಸವರಾಜಪ್ಪನವರು ಕಾರಣರಾದರು.
ಇಂದು ಊರಿನಲ್ಲಿ ಹತ್ತಾರು ಶಾಲೆಗಳು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಯತ್ನಿಸುತ್ತಿರುವುದು ಅಭಿನಂದನೀಯ.
ಶೈಕ್ಷಣಿಕ ಸುಧಾರಣೆಗಾಗಿ ಮತ್ತು ಪರಿಣಾಮಕಾರಿ ಕಾರ್ಯ ನಿರ್ವಹಿಸಲು ಬಿ.ಇ.ಓ. ಕಚೇರಿಯನ್ನು ಕಾರಟಗಿಗೆ ಸ್ಥಳಾಂತರಗೊಳ್ಳಬೇಕು.
ಸ್ವತಂತ್ರ ತಾಲೂಕಾದ ಮೇಲೆ ಎಲ್ಲಾ ಕಚೇರಿಗಳು
ಇಲ್ಲಿಯೇ ಕಾರ್ಯ ನಿರ್ವಹಿಸುವಂತೆ ಆಗಬೇಕು.
ತಾಲೂಕು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಹಳೆಯ ತಾಲೂಕಿನ ಸೌಲಭ್ಯಗಳು ಸ್ಥಳಾಂತರವಾಗಬೇಕು.
ಸರಕಾರಿ ಶಾಲೆಗಳ ಅಭಿವೃದ್ದಿಗಾಗಿ ಶಾಸಕರು ಮತ್ತು ಉದಾರ ಶ್ರೀಮಂತ ದಾನಿಗಳು ದತ್ತು ತೆಗೆದುಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಮಾಜದ ಎಲ್ಲ ವರ್ಗದ ಜನ ಸರಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ವಾತಾವರಣ ಉಂಟು ಮಾಡಬೇಕು. ಕುಡಿಯುವ ನೀರು, ಶೌಚಾಲಯ ಹಾಗೂ ಪ್ರಯೋಗಾಲಯಗಳನ್ನು ವಿವಿಧ ಯೋಜನೆಗಳ ಅಡಿಯಲ್ಲಿ ನಿರ್ಮಿಸಬಹುದು.
ಪ್ರತಿಶತ ಮೂವತ್ತರಷ್ಟು ಶಿಕ್ಷಕರ ಕೊರತೆ ತಾಲೂಕಿನಲ್ಲಿದೆ.
ಪ್ರಮುಖ ವಿಷಯಗಳಾದ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳ ಶಿಕ್ಷಕರ ಕೊರತೆಯಿಂದ ಪಾಲಕರು ಮಕ್ಕಳ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳ ಮೊರೆ ಹೋಗುತ್ತಾರೆ.
ಆದ್ದರಿಂದ ಸರಕಾರಿ ಶಿಕ್ಷಕರ ನೇಮಕಾತಿಗಾಗಿ ಸರಕಾರದ ಮೇಲೆ ಒತ್ತಡ ಹೇರಬೇಕು.
ಶಿಕ್ಷಕರೇ ಶಿಕ್ಷಣ ವ್ಯವಸ್ಥೆಯ ಬೇರುಗಳು, ಶಿಕ್ಷಕರಿಲ್ಲದ ಶಾಲೆ ತಾಯಿ ಇಲ್ಲದ ಮನೆಯಂತೆ.
ಇದ್ದ ಕೆಲವು ಶಿಕ್ಷಕರನ್ನು ಇತರ ಕೆಲಸಗಳಿಗೆ ನಿಯೋಜನೆ ಮಾಡುವುದು ಶೈಕ್ಷಣಿಕ ಹಿನ್ನಡೆಗೆ ಕಾರಣ. ಆದಷ್ಟು ಸರಕಾರಿ ಶಿಕ್ಷಕರನ್ನು ಕೇವಲ ಕಲಿಸುವಿಕೆಗಾಗಿ ಮಾತ್ರ ತೊಡಗಿಸಬೇಕು.
ಕನ್ನಡ ಮಾಧ್ಯಮದಲ್ಲಿ ಕಡ್ಡಾಯ ಶಿಕ್ಷಣ
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುವ ಮಹತ್ವವನ್ನು ಮನದಟ್ಟು ಮಾಡಬೇಕು.
ವೇದಿಕೆ ಮೇಲೆ ಕನ್ನಡದ ರಕ್ಷಣೆಯ ಮಾತಾಡಿ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುವ ಆಶಾಢಭೂತಿ ನಿಲುವನ್ನು ಕನ್ನಡ ಪರ ಹೋರಾಟಗಾರರು ನಿಲ್ಲಿಸಬೇಕು.
ಜಪಾನ್, ಚೈನಾ, ಜರ್ಮನಿ ಹಾಗೂ ರಷ್ಯಾ ದೇಶಗಳು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯದೇ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಅಪಾರ ಸಾಧನೆ ಮಾಡಿದ್ದು ನಮಗೆ ಆದರ್ಶಪ್ರಾಯವಾಗಬೇಕು.
ಪ್ರಾಥಮಿಕ ಶಿಕ್ಷಣ ಅಂದರೆ, ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಡ್ಡಾಯವಾಗಬೇಕು.
ಮಧ್ಯಮ ವರ್ಗದ ಪಾಲಕರು ಇಂಗ್ಲಿಷ್ ಮಾಧ್ಯಮ ಶಾಲೆಯ ವ್ಯಾಮೋಹದಿಂದ ಮುಕ್ತರಾಗಬೇಕು.
ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದ ಮಕ್ಕಳ ಗ್ರಹಿಕೆ ದುರ್ಬಲವಾಗುತ್ತದೆ ಎಂಬ ಮನೋವೈಜ್ಞಾನಿಕ ವಿಶ್ಲೇಷಣೆಯ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.
ಇಂಗ್ಲಿಷ್ ಭಾಷೆಯ ಕಲಿಕೆ ಅಗತ್ಯ. ಆದರೆ ಇಂಗ್ಲಿಷ್ ಮಾಧ್ಯಮವಾಗಿ ಅಲ್ಲ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಒಂದು ಭಾಷೆಯನ್ನಾಗಿ ಮಾತ್ರ ಕಲಿಸಬೇಕು.
ಕೇವಲ ಅರಿವು ಮೂಡಿಸುವುದರ ಮೂಲಕ ಮಾತೃ ಭಾಷಾ ಶಿಕ್ಷಣ ನೀತಿ ಜಾರಿಯಾಗಬಲ್ಲದು. ಕಾನೂನು ಮೂಲಕ ಅಲ್ಲ. ಎಲ್ಲಾ ಬೆಳವಣಿಗೆ ಮತ್ತು ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿಯ ಅನಿವಾರ್ಯ ಮತ್ತು ಅಗತ್ಯ.
ವೈದ್ಯಕೀಯ ಸೇವೆ
ವೈದ್ಯಕೀಯ ಸೇವೆಗಾಗಿ ಡಾ.ಎಸ್.ಬಿ.ಶೆಟ್ಟರ್, ಡಾ.ಎಂ.ಐ.ಮುದಗಲ್ಲ ಮೊದಲು ಕಾರಟಗಿ ಪ್ರವೇಶಿಸಿದ್ದು ಸ್ಮರಣೀಯ.
ಈಗ ಅನೇಕ ನುರಿತ ಸರಕಾರಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾಲೂಕಾ ಅಸ್ಪತ್ರೆ ಬೇಗ ಸ್ವತಂತ್ರವಾಗಿ ಕಾರ್ಯಾರಂಭ ಮಾಡಲಿ.
ಗಂಗಾವತಿ ತಾಲೂಕು ಆಸ್ಪತ್ರೆಯ ಮಾದರಿಯಲ್ಲಿ ನಿರ್ಮಿಸಿ ಬಡ ರೋಗಿಗಳ ಸೇವೆಗೆ ಬದ್ಧವಾಗಿರಲಿ.
ಜನ ಪ್ರತಿನಿಧಿಗಳು ಸರಕಾರಿ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಚಿಕಿತ್ಸೆ ಪಡೆಯಬೇಕು, ಸರಕಾರಿ ವಾಹನಗಳಲ್ಲಿ ಓಡಾಡಬೇಕು, ಸರಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸಬೇಕು ಅಂದಾಗ ಮಾತ್ರ ಸರಕಾರಿ ವ್ಯವಸ್ಥೆಯ ಸುಧಾರಣೆ ಸಾಧ್ಯ.
ಸರಕಾರಿ ನೌಕರಿ ಬಯಸುವ ನಾವು ಸರಕಾರಿ ವ್ಯವಸ್ಥೆಯಿಂದ ದೂರ ಸರಿಯುವ ದ್ವಂದ್ವ ವಿಷಾದನೀಯ.
ಜನಪದ ಕಲೆ
ಬಾಲ್ಯದಲ್ಲಿ ಜೀವಂತವಾಗಿದ್ದ ಬಯಲಾಟಗಳು, ಜಾನಪದ ಹಾಡುಗಳು ಮರು ಹುಟ್ಟು ಪಡೆಯಬೇಕಾಗಿದೆ.
ಜನಪದ ನಾಶವಾದರೆ ತಳ ಸಮುದಾಯದ ಸಂಸ್ಕೃತಿ ನಾಶವಾಗುತ್ತದೆ.
ಜನಪದ ಸಂಸ್ಕೃತಿಗೆ ಮರು ಜೀವ ನೀಡುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪರಿಷತ್ತು ಮಾಡಬೇಕು.
ತಾಲೂಕಿನ ಹಿರಿಯ ಜಾನಪದ ಕಲಾವಿದರನ್ನು ಗುರುತಿಸಿ ಅವರ ಪ್ರತಿಭೆಯನ್ನು ದಾಖಲಿಸಿ ಸಂರಕ್ಷಿಸಬೇಕು.
ಆಧುನೀಕರಣದ ಭರದಲ್ಲಿ ಬದುಕಿನ ಮೂಲ ದ್ರವ್ಯ ಜನಪದ ಸಂಸ್ಕೃತಿ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಬೇಕು.
ಸವಾಲುಗಳು ಮತ್ತು ಪರಿಹಾರಗಳು
*ತಾಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರಗಳಲ್ಲಿ ಸಾಹಿತ್ಯ ಭವನ ನಿರ್ಮಾಣವಾಗಬೇಕು.
*ಈ ಭಾಗದ ಯುವ ಪ್ರತಿಭೆಗಳನ್ನು ಗುರುತಿಸಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕಮ್ಮಟಗಳನ್ನು ಆಯೋಜಿಸಿ ಅವರು ಬರೆದ ಕೃತಿಗಳನ್ನು ಸಾಹಿತ್ಯ ಪರಿಷತ್ತು ದಾನಿಗಳ ಮೂಲಕ ಪ್ರಕಟಿಸಬೇಕು.
*ಈ ಭಾಗದ ಜನಪರ ಹೋರಾಟಗಳಲ್ಲಿ ಪರಿಷತ್ತು ಸಕ್ರಿಯವಾಗಿ ಭಾಗವಹಿಸಿ ಬೆಂಬಲ ಸೂಚಿಸಬೇಕು.
*ನೆಲ-ಜಲ-ಭಾಷೆಗೆ ಧಕ್ಕೆಯಾದರೆ ತಕ್ಷಣ ಪ್ರತಿಕ್ರಿಯೆ ನೀಡಬೇಕು. ಕನ್ನಡ ಮಾಧ್ಯಮ ಸರಕಾರಿ ಶಾಲೆಗಳ ಸಂರಕ್ಷಣೆಯ ನೈತಿಕ ಜವಾಬ್ದಾರಿ ನಿರ್ವಹಿಸಬೇಕು.
*ಪರಿಷತ್ತಿನ ಸದಸ್ಯರ ಸಂಖ್ಯೆ ಹೆಚ್ಚಿಸಿ ಕನ್ನಡದ ಅಭಿಮಾನ ಬೆಳೆಸಬೇಕು. ನಮ್ಮ ಭಾಗದಲ್ಲಿ ನೆಲೆಸಿರುವ ಇತರ ಭಾಷಿಕ ಸಹೋದರರನ್ನು ಒಗ್ಗೂಡಿಸಿಕೊಂಡು ಚಟುವಟಿಕೆಗಳ ಮೂಲಕ ಭಾಷಾ ಸಾಮರಸ್ಯ ಕಾಪಾಡಬೇಕು.
*ಕನ್ನಡದ ವಾತಾವರಣ ನಿರ್ಮಿಸಲು ಶಾಲಾ ಕಾಲೇಜುಗಳಲ್ಲಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳನ್ನು ಏರ್ಪಡಿಸಬೇಕು.
*ಡಿಜಿಟಲ್ ಮಾಧ್ಯಮದ ಪ್ರಭಾವದಿಂದಾಗಿ ಓದುವ, ಬರೆಯುವ ಹವ್ಯಾಸ ಕುಂಠಿತಗೊಂಡಿದೆ. ಆದ್ದರಿಂದ ಯುವಕರಿಗೆ ಪುಸ್ತಕ ಸಂಸ್ಕೃತಿಯನ್ನು ಹುಟ್ಟು ಹಾಕಬೇಕು.
*ಓದುವ,ಬರೆಯುವ ಹಾಗೂ ಬೆರೆಯುವ ಸಂಸ್ಕೃತಿ ನಮ್ಮದಾಗಬೇಕು. ಕನ್ನಡವೆಂದರೆ ಕುಣಿದಾಡುವ ಮನೋಧರ್ಮ ಬೆಳೆಸೋಣ.
*ಸಾಹಿತ್ಯ ಸಮ್ಮೇಳನಗಳು ಕನ್ನಡದ ಜಾತ್ರೆಯಾಗಿ, ಸಾಂಸ್ಕೃತಿಕ ಯಾತ್ರೆಯೂ ಆಗಬೇಕು.
*ಕನ್ನಡವೆಂದರೆ ಶರಣರ ಧ್ವನಿ, ರೈತರ ದನಿ,ಬಾಳಿನ ಗೊನಿ,ಮನದನ್ನೆಯ ಪಿಸುಮಾತುಗಳ ಹನಿ…
ಸದಾ ಕಾಲ ಚಿರ ಋಣಿ
ಕಳೆದ ವಾರದಿಂದ ಸರ್ವಾಧ್ಯಕ್ಷನಾದ ಸುದ್ದಿ ಹರಡಿದ ಮರುಕ್ಷಣ ಸಂಭ್ರಮಿಸಿದ ನನ್ನೂರ ಜನರ ಅಭಿಮಾನ ಅಜರಾಮರ.
ಊರಿಗೆ ತಲುಪಿದ ದಿನದಿಂದ ನಿತ್ಯ ಊರಿನ ಎಲ್ಲ ಸಂಘಟನೆಗಳ ಸನ್ಮಾನದಿಂದ ಮನಸು ಭಾರವಾಗಿದೆ.
ಊರ ಹೊರಗೆ ಕಾಯಕದ ಕಾರಣ ದೂರವಿದ್ದರೂ ಊರ ಸಂಪರ್ಕ ಇಟ್ಟುಕೊಂಡದ್ದು ಸಾರ್ಥಕ ಎನಿಸಿತು.
ಕಳೆದ ದಶಕದಿಂದ ಜಿಲ್ಲೆಯ ಯಾರೇ ಕರೆದರೂ ಪ್ರೀತಿಯಿಂದ ಓಡಿ ಬಂದು ಭಾಷಣ ಮಾಡಿ ಹೋಗುತ್ತಿದ್ದೆ.
ಬೇರುಗಳ ಬಂಧನದ ಬೆಲೆ ಸೂಕ್ಷ್ಮ ಮನಸಲಿ ಒಲವ ಸೆಲೆ ಉಕ್ಕಿ ಹರಿಸುತ್ತಿತ್ತು.
ನಮ್ಮ ಊರಿನವರು ಎಲ್ಲೇ ಕಾಣಲಿ ಗುರುತು ಹಿಡಿದು ಮಾತನಾಡಿಸುವ ನನ್ನ ಜಾಯಮಾನ ನನಗೆ ವರವಾಯಿತು.
‘ನಾವು ಎಷ್ಟೇ ಎತ್ತರಕೆ ಏರಿದರೂ ಕಾಲುಗಳು ನೆಲ ಬಿಡಬಾರದು’ ಎಂಬ ಮಾತು ಸತ್ಯ ಎನಿಸಿತು.
ಎಂಬತ್ತರ ಗಡಿ ದಾಟಿದ ಹಿರಿಯರು, ಹತ್ತರ ಹರೆಯದ ಮಕ್ಕಳು ಇದು ತಮಗೆ ಸಂದ ಗೌರವ ಎಂಬಂತೆ ಸಡಗರ ಪಟ್ಟ ಗಳಿಗೆಯ ಮರೆಯಲಾಗದು.
ಸುಮ್ಮನೆ ಯಾವುದಕ್ಕೂ ಪುಳಕಗೊಳ್ಳದ ನಾನು ನಮ್ಮ ಊರಿನ ಜನರ ಪ್ರೀತಿಗೆ ಪುಳಕವಲ್ಲ ಕರಗಿ ನೀರಾಗಿ ಹೋದೆ.
ಅನಗತ್ಯವಾಗಿ ಅನುಭವಿಸಿದ ಅವಮಾನ, ಅನುಮಾನ ಮರೆತು ಮುಂದೆ ಸಾಗುವಷ್ಟು ಜೀವಚೈತನ್ಯವನ್ನು ಮಾನ ಸಂಮಾನಗಳ ಮೂಲಕ ನೀವು ನೀಡಿದ್ದೀರಿ.
ಬಾಲ್ಯದ ಗೆಳೆಯರು ಊರ ತುಂಬಾ ಫೋಟೋಗಳ ರಾರಾಜಿಸಿದ್ದಾರೆ.
ನಿಮ್ಮ ಮುಡಿಗೆ ಹೂ ತರುವ ಹೊಣೆಗಾರಿಕೆ ಹೆಚ್ಚಸಿದ್ದೀರಿ.
ತಾಲೂಕು ಮಟ್ಟದ ಸಮ್ಮೇಳನದಲ್ಲಿ ಜಗದಗಲದ ಪ್ರೀತಿ ಘಮಲ ಸಿಂಚನ.
ಸಾಹಿತ್ಯ ಸಮ್ಮೇಳನದ ಪದಾಧಿಕಾರಿಗಳು,ವಿವಿಧ ರಾಜಕೀಯ ಪಕ್ಷದ ನಾಯಕರುಗಳು, ಸಮಾಜದ ಎಲ್ಲ ವರ್ಗಗಳ ಸೋದರ,ಸೋದರಿಯರು ನಿತ್ಯ ಮನೆಗೆ ಬಂದು ಹರಸಿದ ಕ್ಷಣಗಳು ಕೊಟ್ಟ ಸಂತೃಪ್ತಿ…
ಮಾಧ್ಯಮದ ಸ್ನೇಹಿತರು ಮತ್ತು ಚಿಂತಕರು ನಿತ್ಯ ಮಾತಿಗೆಳೆದು ಸಾಕ್ಷೀಕರಿಸಿದ್ದಾರೆ.
ಮುಂದೆ ಸಿಗುವ ಯಾವುದೇ ಪುರಸ್ಕಾರ, ಪ್ರಶಸ್ತಿಗಳು ಕಾರಟಗಿ ಜನರ ತೂಕಕ್ಕೆ ಸಮನಾಗಲು ಸಾಧ್ಯವೇ ಇಲ್ಲ.
ಸಾವಿರದ ಶರಣು
ಏರುವೆ ಹಾರುವೆ ಬಾನೆತ್ತರಕೆ
ಮತ್ತೆ ಮತ್ತೆ ಜಾರುವೆ ಊರ
ಒಲವ ಇಳಿಜಾರಿಗೆ
ಬಾಲ್ಯದ ಗೆಳೆಯರ ಸಮರಸದ
ಸವಿಗಾನದಲಿ ನಿಲ್ಲದ ನಿನಾದ
ಇಲ್ಲಿ ಬರೀ ಪ್ರೀತಿ ಪ್ರೇಮ
ಮಾನ ಸಂಮಾನ ಭಾವ
ಕಂಪನ
ಹಡಪದ ಮಹಾದೇವ
ಮರಾಠರ ಶರಣು
ಹಾಲುಮತದ ಮರಿಯಪ್ಪ
ಅಪ್ಪನ ಗೆಳೆಯ ಡಾಕ್ಟರ್
ಮದರ್ ಸಾಬ್
ಅಡುಗೆಯ ಗಂಗಮ್ಮ
ಅಕ್ಕನ ಬಳಗದ ಶರಣೆಯರು
ಸ್ತ್ರೀ ಎಂದರೆ ಸಾಕಾಗದ
ಹೆಣ್ಣುಮಕ್ಕಳ ತಾಯ್ತನದ
ಕರುಳ ಬಂಧನದಾಲಿಂಗನ
ಮೆರವಣಿಗೆಯ ವಾದ್ಯಗಳ
ಸದ್ದಲಿ ಬರೀ ಸಡಗರ ಸಂಭ್ರಮ
ಖುಷಿ ಖುಷಿಯೋ ಖುಷಿ
ಮರೆಯಲಾರೆ ಮತ್ತೆ ಎಂದೆಂದೂ
ಹೀಗೆ ಮೆರೆಯಲಾರೆ ತವರ ತೊಟ್ಟಿಲ
ಜೋಗುಳದ ಲಾಲಿ ಹಾಡನು
ನಾ ಮರೆಯಲಾರೆ…
ಇದೋ ನಿಮಗೆ ಶರಣು
ಸದಾ ಕಾಲ ಸಾವಿರದ ಶರಣು
ಸಾವಿರದ ಶರಣು ಶರಣಾರ್ಥಿ.
—ಸಿದ್ದು ಯಾಪಲಪರವಿ ಕಾರಟಗಿ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್