- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
“ಸಾವಿಗೆ ನಾ ಹೆದರುವುದಿಲ್ಲ
ದ.ರಾ.ಬೇಂದ್ರೆ
ಯಾಕಂದರ ನಾ ಇರೋತನಕ
ಅದು ಬರೋದಿಲ್ಲ, ಅದು
ಬಂದಾಗ ನಾ ಇರೋದಿಲ್ಲ”
ಮನುಷ್ಯನ ಬದುಕು ಆರಂಭವಾಗುವುದೇ ಸಾವಿನ ನೆರಳಿನಲ್ಲಿ. ಹುಟ್ಟಿದ ಕ್ಷಣದಿಂದ ನಾವು ಒಂದೊಂದೇ ಒಂದೊಂದೇ ಗಳಿಗೆ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ. ನಾವು ನಮ್ಮ ಅಷ್ಟೂ ವರ್ಷಗಳಲ್ಲಿ ಯಾವುದರ ಹಿಂದೆ ಓಡುತ್ತೇವೆಯೋ ಅವೆಲ್ಲವೂ ಕೊನೆಗೆ ಮುಟ್ಟುವುದು ಒಂದನ್ನೇ. ಈ ನೆಲದಿಂದ ಹುಟ್ಟಿ ಇದೇ ನೆಲಕ್ಕೆ ಉದುರುವ ಪ್ರಕ್ರಿಯೆಯಲ್ಲಿ ಎಷ್ಟು ಬದುಕುತ್ತೇವೆ ಅನ್ನುವುದು ಅಳೆದುಕೊಳ್ಳಬೇಕಾದ ಸಂಗತಿ. ಬದುಕಿಗಾಗಿ ನಡೆಯುವ ಹೋರಾಟಗಳ ಕತೆ ಒಂದು ಥರ, ಸಿಕ್ಕ ಬದುಕನ್ನೇ ಬದುಕುವುದು ಇನ್ನೊಂದು ಥರ, ಹೀಗೆ ಹೋರಾಡುವುದೇ ಸಿಕ್ಕ ಬದುಕಾಗುವುದು ಮತ್ತೊಂದು ಥರ. ಅದೆಷ್ಟೋ ಮನಸ್ತಾಪಗಳು, ಸಂಬಂಧಗಳ ನಡುವಿನ ಬಿರುಕುಗಳು, ಅದೇನೇನೋ ಮಾಡಿಬಿಡಬೇಕೆನ್ನುವ ಕನಸುಗಳು, ಆ ಜಾಗ ನೋಡಬೇಕು, ಅವರ ಜೊತೆ ಆ ಮುಂಜಾನೆ ಅ ಬೆಟ್ಟದ ತುದಿಯಲ್ಲಿ ಕೈ ಕೈ ಹಿಡಿದು ನಿಲ್ಲಬೇಕು, ಇಂಥದ್ದೇ ಕನ್ನಡಿಯಲ್ಲಿ ಕನ್ನಡಕ ಹಾಕಿಕೊಂಡ ಮುಖ ನೋಡಿಕೊಂಡು, ಕೂದಲಿಗೆ ಕಪ್ಪು ಹಚ್ಚಬೇಕು, ಸುಕ್ಕುಗಳನ್ನು ಮುಟ್ಟಿ ಮುಟ್ಟಿ ಆದ ವಯಸ್ಸಿನ ಲೆಕ್ಕ ಹಾಕಬೇಕು, ಒಂದೇ ಒಂದು ರಾತ್ರಿ ಅಗಾಧ ಬಯಲಿನಲ್ಲಿ ಮೈ ಹರವಿ ಆಕಾಶದ ಚುಕ್ಕಿಗಳನ್ನು ನೋಡುತ್ತಾ ರಾತ್ರಿ ಕಳೆಯಬೇಕು, ಪ್ರತಿದಿನ ಅವಳು ಚಹಾ ಮಾಡುವಾಗ ಅವಳೆದುರಲ್ಲಿ ಕೂತು ಹರಟೆ ಹೊಡೆಯಬೇಕು ಇತ್ಯಾದಿ ಇತ್ಯಾದಿ ಸಹಸ್ರ ಬಯಕೆಗಳು ಮನುಷ್ಯನಿಗೆ.
ನೆನಪುಗಳನ್ನು ಶೇಖರಿಸುವುದಕ್ಕೆ ಸಾವಿರ ಸಾವಿರ ನೆಪಗಳು. ಬದುಕುವ ಅಷ್ಟೂ ಕ್ಷಣವೂ ನೆನಪುಗಳನ್ನು ಪೇರಿಸುವುದಷ್ಟೇ ನಮ್ಮ ಉದ್ದೇಶವಾ? ಅದೊಂದು ಕುತೂಹಲಕಾರಿ ಪ್ರಶ್ನೆಯಾಗಬಹುದು. ಯಾವತ್ತೋ ಒಂದಿನ ಈ ಎಲ್ಲಾ ನೆನಪುಗಳು ಥಟ್ ಅಂತ ಇತರರಿಗೆ ವರ್ಗಾವಣೆಯಾಗುತ್ತವೆ, ಹಾಗೂ ನಮ್ಮ ನೆನಪಿನ ಶೇಖರಣೆಯ ಕೆಲಸ ನಿಲ್ಲುತ್ತದೆ. ಸಾವಿನ ಸಮ್ಮುಖದಲ್ಲಿ ಇಂಥದ್ದೇ ಒಂದು ಬದುಕನ್ನು ಹುಡುಕುವ ಪ್ರಯತ್ನದ ಕತೆಯೇ ಅಕಿರ ಕುರೋಸಾವಾ ಅವರ ‘ಇಕಿರು’.
“ಅವನು ಸಮಯವನ್ನು ವ್ಯರ್ಥ ಮಾಡುತ್ತಿದ್ದಾನೆ, ಯಾವತ್ತೂ ಅದನ್ನು ನಿಜವಾಗಿ ಬದುಕಿಲ್ಲ, ನಮ್ಮ ಕತೆಯ ನಾಯಕನನ್ನು ಹೀಗೆ ಪರಿಚಯಿಸುವುದು ನೀರಸವೇ”, ಸಿನೆಮಾ ತನ್ನೊಳಗೆ ನಮ್ಮನ್ನು ಕರೆದು ಕೂರಿಸುವುದು ಹೀಗೆ ಈ ಮಾತುಗಳಿಂದ. ನಗರದ ಸಾರ್ವಜನಿಕ ವ್ಯವಹಾರಗಳ ವಿಭಾಗದ ಮುಖ್ಯಸ್ಥನೊಬ್ಬ ಪ್ರತಿ ದಿನ ಗುಪ್ಪೆಯಾಗಿರುವ ಒಂದಷ್ಟು ಕಡತಗಳಿಗೆ ಮುದ್ರೆ ಒತ್ತುವುದನ್ನು ಬಿಟ್ಟರೆ ಮತ್ತೇನೂ ಮಾಡುತ್ತಿರಲಿಲ್ಲ. ಯಾರೇ ಏನೇ ಕೇಳಿಕೊಂಡು ಬಂದರೂ ಅದನ್ನು ತಾನು ಪರಿಗಣಿಸದೇ ಅವರನ್ನು ಇನ್ನ್ಯಾರ ಬಳಿಗೋ ಕಳುಹಿಸುವುದು ಸಹಜ ನಡೆವಳಿಕೆ ಅವನದ್ದು. ಇವತ್ತಿಗೂ ನಮ್ಮಲ್ಲಿನ ಬಹುತೇಕ ಸರ್ಕಾರಿ ಸಂಸ್ಥೆಗಳ ಕತೆ ಇದೇ ಅಲ್ಲವಾ? ನಮಗೆ ಯಾವುದಾದರೂ ಸರ್ಕಾರಿ ಸಂಸ್ಥೆಯಿಂದ ಏನೋ ಒಂದು ಕೆಲಸ ಆಗಬೇಕು ಅಂತಾದ್ರೆ ಅವರು ಹೇಳುವ ಕಾಗದ ಪತ್ರಗಳಿಗಾಗಿ ಇಲಾಖೆಯಿಂದ ಇಲಾಖೆಗೆ ಅಲೆದು ಅಲೆದು, ಕೊನೆಕೊನೆಗೆ ಆ ಕೆಲಸ ಮಾಡುವ ಚೈತನ್ಯವೇ ಇಲ್ಲವಾಗಿರುತ್ತದೆ. ಸುಮಾರು ೬೮-೬೯ ವರ್ಷಗಳ ಹಿಂದೆ ಮಾಡಿದ ಈ ಸಿನೆಮಾದಲ್ಲೂ ಅದೇ ಕತೆಯಿದೆ; ಅಂದರೆ ಇಷ್ಟು ವರ್ಷಗಳಲ್ಲಿ ಏನೂ ಬದಲಾಗೇ ಇಲ್ಲವಾ? ಸಿನೆಮಾದಲ್ಲಿರುವುದು ಜಪಾನಿನ ನಗರದ ಸರ್ಕಾರಿ ಸಂಸ್ಥೆಗಳ ಕತೆಯಾದರೂ ನಮಗೆ ಇವತ್ತೂ ಅದು ಅನ್ವಯಿಸುವಷ್ಟರ ಮಟ್ಟಿಗೆ ಪ್ರಸ್ತುತವಾಗುತ್ತದೆ. ಸಿನೆಮಾದಲ್ಲಿ ಒಂದು ಕಡೆ ಈ ಕತೆಯ ನಾಯಕ ಒಂದು ಮಾತನ್ನು ಹೇಳ್ತಾನೆ. ” ಇಷ್ಟೂ ವರ್ಷಗಳ ಕಾಲ ನಾನು ನನ್ನ ಕೆಲಸದಲ್ಲಿ ಸಿಕ್ಕಾಪಟ್ಟೆ ತೊಡಗಿಕೊಂಡಿದ್ದೆ, ಆದರೆ ಏನು ಕೆಲಸ ಮಾಡಿದೆ ಅಂತ ನೆನಪಾಗ್ತಾನೇ ಇಲ್ಲ “. ನಾವು ಜಗತ್ತನ್ನು ನೋಡುವುದು ನಮ್ಮ ಕಣ್ಣುಗಳಿಂದಲೇ ಹೊರತೂ ಇತರರ ಕಣ್ಣುಗಳಿಂದ ಅಲ್ಲ, ಅಲ್ವಾ?
ಒಂದು ವೇಳೆ ನಮ್ಮ ಸಾವು ಇಂಥ ದಿನ ಇಷ್ಟು ಗಂಟೆಗೆ ಆಗುತ್ತದೆ ಅಂತ ನಮಗೆ ಮೊದಲೇ ತಿಳಿದರೆ, ನಾವೇನು ಮಾಡುತ್ತೇವೆ ಅನ್ನುವುದನ್ನು ಆಲೋಚಿಸಿದರೆ ಈ ಸಿನೆಮಾ ಇನ್ನಷ್ಟು ಆಪ್ತವಾಗುತ್ತದೆ. ಸಾವನ್ನು ತನ್ನ ಎದುರಲ್ಲಿಟ್ಟುಕೊಂಡ ವ್ಯಕ್ತಿ ಅದಕ್ಕೆ ಹೇಗೆಲ್ಲಾ ಪ್ರತಿಕ್ರಿಯಿಸಬಹುದು? ತನ್ನ ಬದುಕಿಗೆ ಮುಖ್ಯವಾದ ಕೆಲಸಗಳನ್ನು ಮಾತ್ರವೇ ಆಯ್ದುಕೊಂಡು ಅದನ್ನು ಬೇಗ ಬೇಗ ಮಾಡಿ ಮುಗಿಸುವತ್ತ ಗಮನಹರಿಸಬಹುದು, ಅಥವಾ ಎಲ್ಲವೂ ಮುಗಿಯಿತು ಅಂತ ಎಲ್ಲವನ್ನೂ ಎಲ್ಲದಕ್ಕಿಂತ ಮೊದಲೇ ಮುಗಿಸಬಹುದು, ಅಲ್ಲ ಬರೀ ಕೊರಗಬಹುದು! ಕೆಲವೊಮ್ಮೆ ನಮ್ಮ ದುರದೃಷ್ಟಗಳೇ ಸತ್ಯಗಳನ್ನು ತೆರೆದಿಡುತ್ತವೆ ಅನ್ನುವುದು ಸುಳ್ಳಲ್ಲ. ಬದುಕುವುದಕ್ಕೆ ಹೆಚ್ಚಿನ ಸಮಯವಿಲ್ಲ ಅಂತ ಗೊತ್ತಾದಾಗಲೇ ಅಲ್ವಾ ಬದುಕುವ ತೀವ್ರತೆ ಜಾಸ್ತಿಯಾಗುವುದು. ಕೆಲವೊಮ್ಮೆ ಸೂರ್ಯೋದಯ ಸೂರ್ಯಾಸ್ತಗಳನ್ನು ನೋಡದೆಯೇ ಎಷ್ಟೋ ತಿಂಗಳುಗಳು ಕಳೆದುಹೋಗುತ್ತವೆ. ಮೋಡಗಳಿಂದ ಮೋಡಗಳಿಗೆ ಹಾರುವ ಹಕ್ಕಿಯನ್ನು ಯಾವತ್ತು ನಾವು ಕೊನೆಯ ಬಾರಿ ನೋಡಿದ್ದು? ಇನ್ನೇನು ಮಳೆ ಬರುತ್ತದೆ ಅನ್ನುವುದಕ್ಕೆ ಮುಂಚೆ ಯಾವಾಗ ಕೊನೆಯ ಬಾರಿ ಗಾಳಿಪಟ ಹಾರಿಸಿದ್ದು? ಅಲ್ಲೆಲ್ಲೋ ಮೂಲೆಯಲ್ಲಿ ಕಾಳು ಹೊತ್ತುಕೊಂಡು ಹೋಗುವ ಇರುವೆ ಸಾಲುಗಳನ್ನು ಯಾವಾಗ ಕೊನೆಯ ಬಾರಿ ಕೂತು ಗಮನಿಸಿದ್ದು? ಅದೆಲ್ಲಾ ಬಿಡಿ, ನಮ್ಮ ನಮ್ಮ ಸಂಗಾತಿಯ ಜೊತೆ, ಸ್ನೇಹಿತರ ಜೊತೆ ಅವರಿಷ್ಟದ, ನಮ್ಮಿಷ್ಟದ ಸಂಗತಿಗಳ ಕುರಿತು ಕೊನೆಯ ಬಾರಿ ಯಾವತ್ತು ಮಾತಾಡಿದ್ದು? ನಿಜವಾಗಿ ಹೇಳಬೇಕೆಂದರೆ, ಮನುಷ್ಯನ ಬದುಕಿನಲ್ಲಿ ಬಳಲುವಿಕೆಯಲ್ಲೂ ಉದಾತ್ತತೆಯಿದೆ.
ಸಿನೆಮಾಕ್ಕೆ ಒಂದು ಭಾಷೆಯಿರುತ್ತದೆ. ನಿರ್ದೇಶಕ ಅದನ್ನು ಅರಿಯದೇ ಇದ್ದರೆ ಸಿನೆಮಾ ಆಗುತ್ತದೋ ಬಿಡುತ್ತದೋ ಅನ್ನುವುದಕ್ಕಿಂತ ಅದು ಉಳಿದುಕೊಳ್ಳುವುದು ಅನುಮಾನವೇ. ನಿರ್ದೇಶಕ ಹೇಗೆ ಸಿನೆಮಾದ ಭಾಷೆಯಲ್ಲಿ ಮಾತನಾಡುತ್ತಾನೋ ಪ್ರೇಕ್ಷಕನೂ ಆ ಭಾಷೆಯನ್ನು ಅರಿತವನಾಗಿರಬೇಕು. ಇಲ್ಲದಿದ್ದಲ್ಲಿ ಸಿನೆಮಾ ಇನ್ನೊಂದು ‘ಸಮಯ ದೂಡುವ ನೆಪ’ವಾಗುತ್ತದೆಯೇ ಹೊರತೂ, ಅದಕ್ಕಿಂತ ಹೆಚ್ಚಿಗೆ ಇನ್ನೇನನ್ನೂ ಕೊಡುವುದಕ್ಕೆ ಸಮರ್ಥವಾಗುವುದಿಲ್ಲ. ಸೂಕ್ಷ್ಮ ಪ್ರಜ್ಞೆ ಸಿನೆಮಾದ ಅತೀ ಮಹತ್ವದ ಅಂಗ. ಅಕಿರ ಕುರೋಸಾವಾ ಅವರಂಥವರು ಜಗತ್ತಿನ ಶ್ರೇಷ್ಠ ನಿರ್ದೇಶಕರಾಗುವುದು ಇದೇ ಕಾರಣಕ್ಕೆ. ಈ ಸಿನೆಮಾ ಗಾಢವಾಗಿ ನಮ್ಮನ್ನು ಆವರಿಸಿಕೊಳ್ಳುವುದೂ ಇದೇ ಕಾರಣಕ್ಕೆ; ಸಿನೆಮಾದ ಸಣ್ಣ ಸಣ್ಣ ಸಂಗತಿಗಳ ಕಾರಣಕ್ಕೆ. ಈ ಸಿನೆಮಾದ ಕೆಲವು ದೃಶ್ಯಗಳನ್ನು ಉಲ್ಲೇಖಿಸಲೇಬೇಕು. ಅವುಗಳಲ್ಲಿ ಮೊದಲನೆಯದು, ಅಪ್ಪ ತನ್ನ ರೋಗದ ಕುರಿತಾಗಿ ಮಗನ ಹತ್ತಿರ ಹೇಳಬೇಕೆಂದು ಮಗನ ಕೋಣೆಗೆ ಹೋಗಬೇಕೆಂದುಕೊಳ್ಳುವಷ್ಟರಲ್ಲಿ ಮಗನ ಕೋಣೆಯ ದೀಪ ಆರುತ್ತದೆ, ಅಪ್ಪ ಹಿಂದಿರುಗುತ್ತಾನೆ. ಇನ್ನೊಂದು ದೃಶ್ಯದಲ್ಲಿ, ತನಗೆ ಉಳಿದಿರುವ ಸಮಯದಲ್ಲಿ ತಾನೇನು ಮಾಡಬೇಕು ಅನ್ನುವುದನ್ನು ಕಂಡುಕೊಳ್ಳುವ ಕಥಾನಾಯಕ ಮೆಟ್ಟಿಲಿಳಿದು ಹೋಗುವಾಗ ಒಂದಷ್ಟು ಜನ ಮೇಲಿಂದ ‘ಹ್ಯಾಪೀ ಬರ್ತ್ ಡೇ’ ಅಂತ ಹಾಡುತ್ತಿರುತ್ತಾರೆ. ಮತ್ತೊಂದು ದೃಶ್ಯದಲ್ಲಿ, ಮಗನ ಮುಖ ಪುಟ್ಟ ಚೌಕಟ್ಟಿನಲ್ಲಷ್ಟೇ ಮೊದಲು ಕಂಡು, ಅವನು ತನ್ನಪ್ಪನ ಕುರಿತಾದ ತನ್ನ ಕಿರಿದಾದ ನಂಬಿಕೆಗಳ ಚೌಕಟ್ಟಿನಿಂದ ಹೊರಬರುತ್ತಿದ್ದಾನೆ ಅನ್ನುವುದನ್ನು ತೋರಿಸುವುದಕ್ಕಂತಲೇ ಕ್ಯಾಮೆರಾ ನಿಧಾನಕ್ಕೆ ಹಿಂದೆ ಸರಿಯುತ್ತಾ ಸರಿಯುತ್ತಾ ಇರುವಾಗಲೇ ಮಗ ಆ ಚೌಕಟ್ಟಿನಿಂದ ಆಚೆ ಬರುತ್ತಾನೆ. ಇದು ಸಿನೆಮಾದ ಭಾಷೆ ಹಾಗೂ ಸಾರ್ವಕಾಲಿಕತೆಯ ಗುಣ. ಇನ್ನೊಂದು ದೃಶ್ಯ ಸಿನೆಮಾದ ಕೊನೆಯ ಭಾಗದಲ್ಲಿದೆ, ಅದಕ್ಕಿರುವ ತಾಕತ್ತೇ ಬೇರೆ! ಇನ್ನೂ ಒಂದು ವಿಶಿಷ್ಟ ಸಂಗತಿಯೆಂದರೆ ಕಥಾನಾಯಕನ ಜೀವನದ ಕೊನೆಯ ಗಳಿಗೆಗಳನ್ನು ನೇರವಾಗಿ ತೋರಿಸುವುದಿಲ್ಲ, ಅವುಗಳನ್ನು ಅವನ ಸಾವಿನ ನಂತರದ ಕೂಟದಲ್ಲಿ ನೆರೆದಿರುವವರ ನೆನಪುಗಳಿಂದ ಕಟ್ಟಿಕೊಡುತ್ತಾರೆ. ಯಾರೋ ಸತ್ತಾಗ ಅವರ ಬಗ್ಗೆ ನಾಲ್ಕು ಒಳ್ಳೆಯ ಮಾತಾಡಬೇಕು ಅನ್ನುವುದು ವಾಡಿಕೆ. ಆದರೆ, ಇಲ್ಲಿ ಮಾತುಕತೆ ಶುರುವಾಗುವುದು ಹಾಗಲ್ಲವೇ ಅಲ್ಲ!
ಎಲ್ಲಾ ಕಾಲದಲ್ಲೂ, ಎಲ್ಲಾ ಜನಾಂಗದಲ್ಲೂ, ಎಲ್ಲಾ ಸಮುದಾಯದಲ್ಲೂ ಬದುಕು ಇಷ್ಟೇ ಇಷ್ಟು ಸಣ್ಣ ಅವಕಾಶ, ಮತ್ತೆ ಮರಳಲಾರದ ಅವಕಾಶ ಅನ್ನುವ ಮಾತು ಇದ್ದೇ ಇರುತ್ತದೆ. ಆದರೆ, ನಮಗೆ ಇತರರ ಬದುಕಿನಲ್ಲೇ ಆಸಕ್ತಿ. ನಾವು ನಮ್ಮ ಬದುಕನ್ನು ಬದುಕುವುದಕ್ಕೆ ‘ಮುಂದಿನ ನಿಮಿಷವೇ ಸಾವು ಬರಬಹುದು’ ಅನ್ನುವ ಒಂದು ಸಣ್ಣ ಯೋಚನೆ ಬಂದರೆ ಸಾಕಲ್ಲವಾ? ನೆನಪಿರಲಿ, ಈ ಜಗತ್ತು ಎಲ್ಲಾ ಗಾಯಗಳನ್ನೂ ಮಾಯಿಸುವ, ಎಲ್ಲಾ ನೆನಪುಗಳನ್ನೂ ಒರೆಸುವ, ಎಲ್ಲವನ್ನೂ ಮರೆಸುವ ಮಾಯಾವಿ ಅಥವಾ ಚಿಕಿತ್ಸಕ…
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್