- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
‘ಸ್ತ್ರೀವಾದಿ ಚಿಂತನೆ’ ಎಂದಾಗ ಮೊದಲಿಗೆ ನಮಗೆ ನೆನಪಿಗೆ ಬರುವುದು ಸಿಮೊನ್ ದಿ ಬೊವ. ಬೋವಾರ ಜೀವನ ಪ್ರಿತಿಯೇ ಹಾಗೆ ಸದಾ ಹೆಣ್ಣು ಮನಸ್ಸಿನ ತುಡಿತಗಳಿಗಾಗಿ ಹೋರಾಡಿದವರು. ಈಕೆಯ ಪ್ರಸಿದ್ಧ ಕೃತಿ ‘ದಿ ಸೆಕೆಂಡ್ ಸೆಕ್ಸ್’ ಹೇಳುವಂತೆ ಸ್ತ್ರೀಯು ಮೂಲತಃ ರೂಪಿಸಲ್ಪಟ್ಟವಳು. ಹೆಣ್ಣು ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ “ಆಗುತ್ತಾಳೆ”ಯೇ ವಿನಃ ಯಾರೂ “ಹೆಣ್ಣಾಗಿ”ಯೇ ಹುಟ್ಟುವುದಿಲ್ಲ. ಎಂಬ ಮಾತು ಮಹಿಳಾಪರ ಚಿಂತಕರಿಗೆ ಮಾತನಾಡಲು ಗಟ್ಟಿ ನೆಲೆ ಒದಗಿಸಿಕೊಟ್ಟಿತೆಂದು ಹೇಳಬಹುದು. ಅಸ್ತಿತ್ವವಾದಿ , ಜಾಗತಿಕ ಮಟ್ಟದ ಪ್ರಖರ ಚಿಂತಕಿಯಾಗಿರುವ ಬೋವ ಮೂಲತಃ ಫ್ರೆಂಚ್ ಭಾಷೆಯವರು.
ಸಿಮೊನ್ ದಿ ಬೊವಾಳ ಚಿಂತನಾಕ್ರಮ ಕೇವಲ ಸ್ತ್ರೀಯರನ್ನೇ ಕುರಿತಾಗಿತ್ತು ಎಂದು ಹೇಳುವಂತಿಲ್ಲ. ಇದರ ಹೊರತಾಗಿ ಈಕೆ ಮಾನವತಾ ವಾದದ ಹಿನ್ನೆಲೆ ಹಾಗು ತತ್ವಶಾಸ್ತ್ರಕ್ಕೂ ತನ್ನ ಚಿಂತನೆಯ ಶಾಶ್ವತ ಲೇಪವನ್ನು ಹಚ್ಚಿದ್ದಾಳೆ ಎನ್ನಬಹುದು. ಕ್ರಿಯಾಶೀಲೆಯಾಗಿ ಸಂಪ್ರದಾಯಬಧ್ಧ ಯೂರೋಪಿನಲ್ಲಿ ತನ್ನದೇ ಅಸ್ತಿತ್ವ ಹೊಂದಲು ಸಾಕಷ್ಟು ಪ್ರಯಾಸವನ್ನು ಪಡಬೇಕಾಗುತ್ತದೆ. ಈಕೆ ಮಾತೃತ್ವ ವಿರೋಧಿ ಎಂದೂ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದರೂ ಕಡೆಗೂ ತನ್ನ ಆಂತಃಕರಣಕ್ಕೆ ಅನ್ನಿಸಿದ್ದನ್ನೆ ಮಾಡಿದವಳು.
ವಿಕ್ರಮ ವಿಸಾಜಿಯವರ ‘ಸಿಮೋನ್ ದಿ ಬೊವಾ ಅನುಭವ ಕಥನ’ ಕೃತಿಯ ಪುಟ ಸಂಖ್ಯೆ 13 ರಲ್ಲಿ ಬರುವ “ಆ ಕಾಲದಲ್ಲಿ ಶ್ರೀಮಂತ ವರ್ಗದ ಜನ ತಮ್ಮ ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಹೊರಗೆ ಕಳುಹಿಸುತ್ತಿದ್ದರು. ಆದರೆ ಉದ್ಯೋಗಕ್ಕಾಗಿ ಕಲಿಯುವುದು ಕೀಳುಮಟ್ಟದ್ದಾಗಿತ್ತು ಎಂಬ ಮಾತು ನಮ್ಮ ನೆಲೆಯಲ್ಲಿ ನೋಡಿದರೆ ಒಮ್ಮೆಗೆ ವಿಪರ್ಯಾಸ ಹಾಗು ವ್ಯವಸ್ಥೆಯ ವಿರುದ್ಧ ತಿರಸ್ಕಾರವೂ ಮೂಡಿ ಬರುತ್ತದೆ. ಬೊವಾರ ತಂದೆ ಕೂಡ ಮಹಿಳೆಯ ಮೂಲ ಸ್ಥಾನ ಮನೆಯೆಂದೇ ಭಾವಿಸಿದದವರು. ಸಿಮೋನ್ ದಿ ಬೋವಾಳ ತಂದೆ ತನ್ನ ಮಗಳನ್ನು ಒಳ್ಳೆಯ ವರನಿಗೆ ಕೊಟ್ಟು ಮದುವೆ ಮಾಡಬೇಕು ಎಂದಿರುತ್ತಾರೆ . ಆದರೆ ಆರ್ಥಿಕ ಸಂಕಷ್ಟ ಎದುರಾದಾಗ ಮಕ್ಕಳನ್ನು ಉದ್ಯೋಗಕ್ಕೆ ಕಳುಹಿಸಲು ಒಪ್ಪುತ್ತಾರೆ. ಇಲ್ಲಿ ತಂದೆಯೊಬ್ಬನ ತಹ ತಹ ಇದ್ದರೂ ಆ ಪರಿಸ್ಥಿತಿಯನ್ನು ಅನುಭವಿಸಿ ಸ್ತ್ರೀವಾದಕ್ಕೆ ಪರ್ಯಾಯ ಅನ್ನುವ ಹಾಗೆ ಬೊವಾ ನಿಂತಿರುವುದು ಹೆಗ್ಗಳಿಕೆಯೇ ಸರಿ. ಇದಕ್ಕೆ ಸಾರ್ತ್ರೆಯಂತಹ ಅಸ್ತಿತ್ವವಾದಿಯ ಒಡನಾಟವೂ ಕಾರಣವೆನ್ನಬಹುದು.
ಇದೇ ಕೃತಿಯಲ್ಲಿ ಬರುವ ಯಲ್ಲಿ ಬರುವ ಸಾರ್ತ್ರ ನ “ ಯಾರದೇ ಬಗ್ಗೆ ಕಟ್ಟುವ ಕಟ್ಟು ಕತೆಗಳು ಆ ವ್ಯಕ್ತಿಗೆ ನಾವು ಮಾಡುವ ಹಿಂಸೆಗೆ ಸಮಾನ” ಎಂಬ ಹೇಳಿಕೆ ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನ್ವಯ ಆಗುವಂಥದ್ದು. ಈ ಮಾತು ಬೊವಾರ ಆತ್ಮಕಥನದ ಅನುವಾದಿತ ಕೃತಿಯಲ್ಲಿ ಪರಿಣಾಮಕಾರಿಯಾಗಿ ಬಿಂಬಿತವಾಗಿದೆ.
ಬೊವಾ ಬರೆದ 1949 ರಲ್ಲಿ ಪ್ರಕಟವಾದ ‘ದಿ ಸೆಕೆಂಡ್ ಸೆಕ್ಸ್’ ಎಂಬ ಪುಸ್ತಕದಲ್ಲು ‘ಮಹಿಳೆ’ ಎಂದರೆ ಯಾರು ಎಂಬ ಬಗೆಗೆ ಜಿಜ್ಞಾಸೆ ಇರುವಂಥದ್ದು. ‘ ಮನುಷ್ಯ ಎಂದರೆ ಪುರುಷ ಮಹಿಳೆ ಅನ್ಯ ಎಂಬ ಹಿನ್ನೆಲೆಯಲ್ಲಿಯೇ ಪರುಷ ಗ್ರಹಿಸುತ್ತಾನೆ’ ಎಂಬ ಮಾತು ಅನೇಕ ಪ್ರಶ್ನೆಗಳು ಏಕಕಾಲಕ್ಕೆ ಹುಟ್ಟುವಂತೆ ಮಾಡುತ್ತವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮತದಾನದ ಹಕ್ಕಿಗೆ ಹೋರಾಟ ಮಾಡಿದ್ದು ಮೊದಲನೆಯ ಹಂತದ ಸ್ತ್ರೀವಾದವಾದರೆ ಎರಡನೆಯ ಹಂತದ ಹೋರಾಟಕ್ಕೆ ನಾಂದಿ ಹಾಡಿದ್ದು ‘ಸೆಕೆಂಡ್ ಸೆಕ್ಸ್’ ಎಂಬ ಕೃತಿ. ಇಲ್ಲಿಂದ ಮಹಿಳಾ ಹಕ್ಕುಗಳ ಪರಿಕಲ್ಪನೆ ಯನ್ನು ಉದ್ಯೋಗಸ್ಥಳದಲ್ಲಿ ಸಮಾನತೆ, ವಿವಾಹದ ಹಕ್ಕು ಲೈಂಗಿಕ ಸ್ವಾತಂತ್ರ್ಯ ಮೊದಲಾದ ಪರಿಕ್ರಮಗಳಲ್ಲಿ ವಿಸ್ತಾರಗೊಳಿಸಲು ಹೋರಾಟಗಾರರು ಶ್ರಮಿಸುತ್ತಾರೆ. 1966 ರಲ್ಲಿ ಸಿಮೊನ್ ದಿ ಬೋವಾ ನೀಡಿದ ಉಪನ್ಯಾಸಗಳು ಅಂದಿನ ಬುದ್ಧಿ ಜೀವಿಗಳಲ್ಲಿ ಹೊಸ ಸಂಚಲನವನ್ನೇ ಮೂಡಿಸುತ್ತದೆ. ಮಹಿಳೆಯರು ತಾವು ಹೊಂದಬೇಕಾದ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ ಕಾರಣಕ್ಕೆ ಬೊವಾ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ ರೂಪುಗೊಳ್ಳುತ್ತಾರೆ.
ಇದು ಸಿಮೊನ್ ದ ಬೊವಾಳ ಕೃತಿ ಆಕೆಯ ಅನಿಸಿಕೆ ಮಾತ್ರವಲ್ಲ. ಇಂದಿನ ದಿನಮಾನಗಳ ತಮ್ಮದೇ ಆಯ್ಕೆಯ ಗಂಡು -ಹೆಣ್ಣಿನ ಬದುಕಿನ ಆಯ್ಕೆಗೂ ಅನ್ವಯವಾಗುವಂಥದ್ದು. ಅಂದರೆ ನಿಜವಾದ ನೈತಿಕ ಹೊಣೆಗಾರಿಕೆಯನ್ನೂ ಇದು ನಿರೂಪಿಸುತ್ತದೆ. ಮಹಿಳಾ ಶೋಷಣೆ ಅಡಗಿರುವುದು ಆಕೆ ಪರುಷನಿಗಿಂತ ಭಿನ್ನ ಎಂಬ ಕಾರಣಕ್ಕಾಗಿ ಹಾಗು ಮಹಿಳೆ- ಪುರುಷರಿಗೆ ಭಿನ್ನ ಅಸ್ತಿತ್ವ ದೈಹಿಕ ರಚನೆ ಮತ್ತು ಅದಕ್ಕನುಸಾರವಾಗಿ ಪಡೆದಿರುವ ಪಾತ್ರಗಳು ಅಸಮಾನತೆಗೆ ಕಾರಣವಾಗಿದೆ ಎನ್ನುವುದು ಬೋವಾರವರ ಅನಿಸಿಕೆ.
‘ಮಹಿಳೆ’ ಎನ್ನುವುದು ಜೀವ ಶಾಸ್ತ್ರೀಯ ಘಟಕ ಅಷ್ಡೆ ಆದರೆ ಇತಿಹಾಸದುದ್ದಕ್ಕೂ ಹೆಣ್ಣು ತನಗರಿಯದ ಶೋಷಣೆಗೆ ಒಳಗಾಗಿದ್ದಾಳೆ. ಕಾನೂನುಗಳು ಸಾವಿರ ಬಾರಿ ಗಂಡು ಹೆಣ್ಣು ಸಮಾನ ಎಂದು ಉತ್ಕಂಠಿತವಾಗಿ ಹೇಳಿದರೂ ವಾಸ್ತವ ಬೇರೆಯದೆ ಕತೆಯನ್ನು ಹೇಳುತ್ತದೆ. ಇಲ್ಲಿ ಮಹಿಳೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ನಿತ್ಯ ಹೋರಾಟದ ಮೊರೆ ಹೋಗಲೇಬೇಕಿದೆ. ಬೊವಾ ಒಂದು ಹಂತದಲ್ಲಿ ಮಾರ್ಕ್ಸ್ ವಾದವನ್ನೂ ನಿರಾಕರಿಸಿ ವರ್ಗ ಮತ್ತು ವರ್ಣ ಭೇದಗಳಿಗಿಂತ ಲಿಂಗ ಭೇದವೇ ಮಿಗಿಲು ಎನ್ನುತ್ತಾರೆ. ‘ತಾನು’ ಮತ್ತು ‘ಪರ’ (ಪುರುಷ ಮತ್ತು ಮಹಿಳೆ) ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಲಿಂಗ ಭೇದ ಅವಿನಾಶಿ ಎಂಬ ತೀರ್ಮಾನಕ್ಕೆ ಬರುತ್ತಾರೆ. ಇಲ್ಲಿ ‘ಅನ್ಯ’ ಎಂದರೆ ಮಹಿಳೆ ಎನ್ನುವ ಸೀಮಿತ ಅರ್ಥವೂ ಇಲ್ಲ ಶೋಷಣೆಗೆ ಒಳಗಾದ ಶ್ರಮಿಕ ವರ್ಗ ಎಂದೂ ಆಗುತ್ತದೆ. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದರೂ ಕಿಂಚಿತ್ ಲಾಭವಿಲ್ಲ ಲಿಂಗಭೇದ ಮಹಿಳೆಯರ ಸಾಮಾಜಿಕವಾಗಿ ಕಟ್ಟುಪಾಡುಗಳಿಗೆ ಒಳಪಡಿಸಿದೆ ಎಂಬುದನ್ನು ತಮ್ಮ ಚಿಂತನೆಗಳಿಂದ ಹೊರ ಹಾಕುತ್ತಾರೆ. ಬೊವಾ ಪರುಷ ದ್ವೇಷಿಯಲ್ಲ ಮತ್ತು ಹೆಣ್ಣಿಗೆ ಗಂಡಿನ ಸಾಮೀಪ್ಯ ಇರಲೆಬೇಕೆಂದು ಬಯಸುವುದೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾಳೆ.
ಸಿಮೊನ್ ಪ್ರಕಾರ ಸ್ತ್ರೀವಾದವೆಂದರೆ ವರ್ಗ ಸಂಘರ್ಷದ ಹೊರಗಿರುವ ಮಹಿಳೆಯರ ಸಮಸ್ಯೆಗಳ ಕುರಿತು ಹೋರಾಡುವುದು. ಮುಖ್ಯವಾಗಿ ಸ್ತ್ರೀವಾದದಲ್ಲಿ ಮಹಿಳೆ ಮತ್ತು ಪುರುಷ ಇಬ್ಬರೂ ಇದ್ದಾರೆ ಎಂಬುದನ್ನು ಬಲವಾಗಿ ಹೇಳುತ್ತಾರೆ. ಇಬ್ಬರೂ ಜೊತೆಗೂಡಿ ಮಹಿಳೆಯರ ಬಿಡುಗಡೆಗಾಗಿ ದುಡಿಯಬೇಕಾಗಿದೆ. ವರ್ಗ ಸಂಘರ್ಷದ ಹೋರಾಟ ಮತ್ತು ಮಹಿಳೆಯರ ಸ್ಥಿತಿಗತಿಗಳಲ್ಲಿ ಹೊಸ ಬದಲಾವಣೆಗಳನ್ನು ಉಂಟುಮಾಡುವುದು ಸಮಾಜದ ಆದ್ಯತೆಯಾಗಬೇಕು. ಸಮತಾವಾದಿ ರಾಷ್ಟ್ರಗಳ ಸ್ತ್ರೀ ಮತ್ತು ಪುರುಷರಲ್ಲಿ ಈ ಸಮಾನತೆ ಇನ್ನೂ ಸಾಧ್ಯವಾಗಿಲ್ಲ ಹಾಗಾಗಿ ಮಹಿಳೆಯರು ತಮ್ಮ ಹಣೆಬರಹವನ್ನು ತಾವೇ ಬರೆದುಕೊಳ್ಳಬೇಕು ಎನ್ನುತ್ತಾರೆ. ಇವರ ಪ್ರಕಾರ ಜನ್ಮತಃ ಯಾರೂ ಸ್ತ್ರೀವಾದಿಗಳಲ್ಲ ಜೀವನದಲ್ಲಾಗುವ ಘಟನಾವಳಿಗಳು ಅವರನ್ನು ಸ್ತ್ರೀಪರ ಆಲೋಚನೆಗಳಲ್ಲಿ ಮಗ್ನವಾಗುವಂತೆ ಮಾಡುತ್ತವೆ ಎಂದಿರುವುದು ಚಿಂತನರಗೆ ಹಚ್ಚುವ ವಿಷಯ.
‘ಸಿಮೊನ್ ದ ಬೊವ ಮಾತು ಕಥನದ’ಲ್ಲಿ ನಿರೂಪಿತವಾಗಿರುವ ಬೋವಾ ವಿಕ್ರಮವಿಸಾಜಿಯವರ ಅನುವಾದಿತ ಕೃತಿ ಸಿಮೊನ್ ದ ಬೊವ ಮಾತು ಕಥನ . ಸಂದರ್ಶನ ಸಂಭಾಷಣೆಗಳ ಮೂಲಕ ಸಿಮೋನ್ ರ ವ್ಯಕ್ತಿತ್ವಬೌದ್ಧಿಕತೆ, ಚಿಂತನೆಗಳು ಅನಾವರಣಗೊಂಡಿವೆ.
‘ನಾನೇಕೆ’ ನಾಸ್ತಿಕಳು ಎಂಬ ಅಧ್ಯಾಯದಲ್ಲಿ ಪುಟ. ಸಂ. ರಲ್ಲಿ ‘ ನಾನು ದೇವರನ್ನು ನಂಬುವುದಿಲ್ಲ. ಆದರೆ ಕ್ರೈಸ್ತರ ಜೀವನ ಮೌಲ್ಯಗಳ ಹಿಂದಿರುವ ಸಾಮಾಜಿಕ, ಮನೋವೈಜ್ಞಾನಿಕ ಪ್ರಭಾವ, ಸ್ವರೂಪಗಳನ್ನು ಅಧ್ಯಯನ ಮಾಡಲು ಬಯಸಿದ್ದೆ. ಮಧ್ಯಮ ವರ್ಗದ ಕುಟುಂಬಗಳಲ್ಲಿ ಧಾರ್ಮಿಕ ಶ್ರದ್ಧೆಯನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಲಾಗುತ್ತದೆ. ಆದರೆ ಮಕ್ಕಳು ಕೇಳುವ ಪ್ರಶ್ನೆಗಳನ್ನು ನಿರ್ಲಕ್ಷಿಸಲಾಗುತ್ತದೆ. ಪ್ರಶ್ನೆಗಳನ್ನು ಕೇಳುವವರನ್ನು ದೂರವಿಡುವ, ಗುಂಪಿನಿಂದ ಹೊರಹಾಕುವ ಬೆದರಿಕೆಯನ್ನು ಒಡ್ಡಲಾಗುತ್ತದೆ ಎನ್ನುತ್ತಾ ತನ್ನ ಮನಸ್ಸಿನ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.
‘ನಾನೇಕೆ ಸ್ತ್ರೀವಾದಿ’ ಎಂಬ ಅಧ್ಯಾಯದಲ್ಲಿ (ಪುಟ ಸಂ,105)‘ ನಮ್ಮ ಜೀವನ ಬದಲಾವಣೆ ಇಂದೇ ಶುರುವಾಗಲಿ, ಭವಿಷ್ಯದ ಬದಲಾವಣೆಗಾಗಿ ನಮ್ಮ ಹೊರಾಟವಲ್ಲ’ ಇಂದು, ಈಗಲೇ ಕ್ರಿಯಾಶೀಲರಾಗಿರಿ ಎನ್ನುವ ಅಮೂಲ್ಯ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಪುಟ.ಸಂ. 100ರಲ್ಲಿ ತನ್ನ ಕೃತಿಯನ್ನು ತಾನೆ ಅವಲೋಕನ ಮಾಡಲು ಬಯಸಿದ್ದೆ ಎಂದು ಹೇಳುವಲ್ಲಿ ಸೆಕೆಂಡ್ ಸೆಕ್ಸ್ ಕೃತಿ ಕೇವಲ ಹೆಣ್ಣಿನ ಸಂಕಟ, ದುಃಖ, ಬೇಸರವನ್ನು ಮಾತ್ರ ಹೇಳುವ ಕೃತಿಯಲ್ಲ. ಅದು ಅವಳ ಆಳದ ಚೈತನ್ಯವನ್ನು ಹುಡುಕುವ ಕೃತಿಯೂ ಕೂಡ, ಅವಳ ಸಾಮಾಜಿಕ ರಾಜಕೀಯ ಚಲನೆಯನ್ನು ಅರಿಯುವ ಕೃತಿ. ಕೆಲವರು ಇದನ್ನು ಒಮ್ಮುಖವಾಗಿ ಓದಿದ್ದಾರೆಂದು ಬೇಸರ ವ್ಯಕ್ತಪಡಿಸುತ್ತಾರೆ. ಹಾಗೆ ‘ನಾನೊಬ್ಬ ಸ್ತ್ರೀವಾದಿ’ ಎಂಬ ಅಧ್ಯಾಯದಲ್ಲಿ ಆಲಿಸ್ರವರೊಡನೆ ಸಂಭಾಷಣೆ ನಡೆಸುವಾಗ ಸ್ತ್ರೀವಾದವೆಂದರೆ (ಪುಟ.ಸಂ 109)ನನ್ನ ದೃಷ್ಟಿಯಲ್ಲಿ ವರ್ಗ ಸಂಘರ್ಷದ ಹೊರಗಿರುವ ಮಹಿಳೆಯರ ಸಮಸ್ಯೆ ಗಳ ಕುರಿತು ಹೋರಾಡುವುದು ಇಂದಿಗೂ ನಾನು ಈ ದೃಷ್ಟಿಕೋನವನ್ನು ನಂಬುತ್ತೇನೆ.
ಸಿಮೊನ ದ ಬೊವಾರ ಚಿಂತನೆಗಳು ಮುಂದಿನ ಸಂಭಾಷಣೆಗಳಲ್ಲಿ ಇನ್ನೂ ಸ್ಪಷ್ಟವಾಗುತ್ತದೆ. ಅದೇನೆಂದರೆ (ಪುಟ. ಸಂ 113)“ ನನ್ನ ಪರಿಶ್ರಮದಿಂದಲೇ ನಾನು ಪುರುಷ ಜಗತ್ತನ್ನು ಪ್ರಭಾವಿಸಿದ್ದೆ. ಅನೇಕ ಮಹಿಳೆಯರು ಶಿಕ್ಷಣ, ಸಂಶೋಧನೆಯಲ್ಲಿ ಗಂಭೀರವಾಗಿ ತೊಡೆಗಿಕೊಳ್ಳುವ ಮೂಲಕವೇ ಪುರುಷ ಜಗತ್ತನ್ನು ಎದುರಿಸಬೇಕಾಗಿದೆ. ಅವರ ಅನುಕಂಪ ಬಯಸಿದಷ್ಟೂ ತಿರಸ್ಕಾರಕ್ಕೆ ಒಳಗಾಗುತ್ತೇವೆ. ನನಗೊಂದು ನಂಬಿಕೆ ಉಂಟಾಗಿತ್ತು. ಮಹಿಳೆಯೊಬ್ಬಳು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕಾದರೆ ಹೆಂಡತಿ ಅಥವಾ ತಾಯಿ ಆಗುವುದು ಅನಿವಾರ್ಯವಲ್ಲ. ಆಕೆ ತನ್ನ ವಿಶಿಷ್ಟವಾದ ಬೌದ್ಧಿಕ ಕ್ಷಮತೆಯನ್ನು ಕಂಡುಕೊಳ್ಳುವ ಮೂಲಕವೂ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬಹುದು ಈ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ. ತಮಗೆ ವಿಧಿಸಿಕೊಂಡಿರುವ ಸೀಮಾರೇಖೆಯನ್ನು ಬೌದ್ಧಿಕತೆಯತ್ತಲೂ ವಿಸ್ತರಿಸಿಕೊಳ್ಳಬೇಕು ಎಂಬ ಅವರ ಕರೆ ಇಂದಿಗೆ ಅತ್ಯಗತ್ಯವಾಗಿದೆ.
(ಪುಟ ಸಂ 118 ಮತ್ತು 119 )‘ ಸೆಕೆಂಡ್ ಸೆಕ್ಸ್’ ಎಂಬುದು ಹೆಣ್ಣೂ ಎರಡನೆ ದರ್ಜೆಯವರು ಎಂದಲ್ಲ ಬದಲಾಗಿ ಎರಡನೆ ಲಿಂಗದವರು, ನೀವು ಎರಡನೆ ಲಿಂಗದಲ್ಲಿ ಹುಟ್ಟಿದ ಬಳಿಕ ಅದರ ವರ್ತುಲದಿಂದ ಹೊರಬರಲು ಸಾಧ್ಯವಿಲ್ಲ. ಸೈದ್ಧಾಂತಿಕ ಚರ್ಚೆಗಳಲ್ಲಿ ಒಂದು ಸಿದ್ದಾಂತದಿಂದ ಇನ್ನೊಂದು ಸಿದ್ದಾಂತಕ್ಕೆ ಬದಲಾಗಬಹುದು. ಆದರೆ ಒಬ್ಬ ಮಹಿಳೆ ಒಬ್ಬ ಪುರುಷನಾಗಲು ಸಾಧ್ಯವಿಲ್ಲ. ಅದರ ಅಗತ್ಯವೂ ಇಲ್ಲ. ಮಹಿಳೆಯರು ಎರಡನೇ ಲಿಂಗ ಏಕೆಂದರೆ ಅವರೊಂದಿಗಿನ ಸಾಮಾಜಿಕ. ಆರ್ಥಿಕ, ರಾಜಕೀಯ ಚೌಕಟ್ಟು ಬೇರೆಯದೇ ಆಗಿರುತ್ತದೆ. ‘ ಸ್ತ್ರೀವಿಮೋಚ’ನೆ ಆಗದೆ ಯಾವ ಕ್ರಾಂತಿಯೂ ಸಾಧ್ಯವಿಲ್ಲ ಕ್ರಾಂತಿ ಸಂಭವಿಸದೆ ಸ್ತ್ರೀವಿಮೋಚನೆ ಸಾಧ್ಯವಿಲ್ಲ ಎಂಬ ನಿಲುವು ಬೋವಾರದ್ದು. ಸ್ವಾತಂತ್ರ್ಯದ ಕುರಿತು ಹೇಳುವಾಗ ಸ್ವತಂತ್ರಗೊಂಡ ಮಹಿಳೆ ಪುರುಷರಷ್ಟೇ ಸೃಜನಶೀಲರಾಗಿರಬಲ್ಲಳು…. ಸ್ತ್ರೀ ವಿಮೋಚನೆಯಿಂದ ಮಾನವೀಯ ಸಂಬಂಧಗಳು ಬಲಗೊಳ್ಳುವವು. ಸ್ತ್ರೀಯರನ್ನೂ ಪುರುಷರನ್ನೂ ಸಂಪೂರ್ಣ ಮನುಷ್ಯರನ್ನಾಗಿಸುವುದು ಈ ಕಾಲದ ವಾಸ್ತವತೆಯನ್ನು ತೆರೆದಿಡುತ್ತಾರೆ.
‘ಹೆಣ್ಣಾದರಷ್ಟೇ ಸಾಲದು’ ಎಂದು ಅವರ ಸಂಗಾತಿ ಸಾರ್ತ್ರೆ ತೀರಿಕೊಂಡ ನಂತರ ಆಡುವ ಮಾತುಗಳು ಅವರ ಪ್ರಬುದ್ಧತೆಯನ್ನು ಹೇಳುತ್ತವೆ. ಆಲಿಸ್ ಅವರು A Women at his side ಆಗಿಬಿಟ್ಟಿರಿ ಎಂದದ್ದಕ್ಕೆ (ಪುಟ, ಸಂ. 139) ಫ್ಯಾಂಟಸಿ ಲೋಕದಲ್ಲಿ ಅಲ್ಲ, ವಾಸ್ತವದಲ್ಲಿ ಬದುಕಲು ಬಯಸಿದ್ದೆ. ಸದಾ ಸಂತೋಷದಿಂದಿರಬೇಕು, ಜೀವನ ಸಾರ್ಥಕಗೊಳ್ಳಬೇಕು. ಈ ಸಾರ್ಥಕತೆ ನನ್ನ ಬರೆವಣಿಗೆಯಲ್ಲಿದೆ ಎಂಬುದದು ಖಚಿತವಾಗಿತ್ತು ಎಂದು ನೇರವಾಗಿ ಹೇಳೀಕೊಳ್ಳುತ್ತಾರೆ.
ಬೊವಾ ಬರೆದ ಪತ್ರಗಳ ಮೂಲಕ ಅವರ ವ್ಯಕ್ತಿತ್ವ
( ಪುಟ. ಸಂ 177 ಮತ್ತು 178)ಸೈಕಲ್ ಸವಾರಿ ಮತ್ತು ಓದು ಅವರ ಇಷ್ಟವಾಗಿತ್ತು ಎಂದು ಅವರ ಸಂಗಾತಿಗೆ ಬರೆದ ಪತ್ರಗಳಲ್ಲಿ ತಿಳಿಯುತ್ತದೆ. ಹಾಗೆ ಪತ್ರದಲ್ಲಿ ನಾನು ಹೆಗೆಲ್ ಅವರನ್ನು ಓದುತ್ತಿರುವೆ ಎನ್ನುತ್ತಲೇ. ನನಗಿಂತ ನೀವು ನನಗೆ ಹೆಚ್ಚು ಇಷ್ಟ ಎಂದು ಜೀವನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಎರಡನೆ ಮಹಾ ಯುದ್ಧ ನಡೆದ ಸಂದರ್ಭದಲ್ಲಿ ಪತ್ರ ಬರೆಯುವಾಗ ಯುದ್ಧ ಅಲ್ಲಿನ ಕುಟುಂಬಗಳನ್ನು ಒಡೆದು ಹಾಕಿತ್ತು. ಈ ಮಹಾ ವಲಸೆ ಕಂಡು ನಾನು ದುಃಖಿತಳಾದೆ ಎಂದು ಬರೆದುಕೊಳ್ಳುತ್ತಾರೆ.ವಿಷಣ್ಣರಾಗಿದ್ದ ಜನತೆಯನ್ನು ಕಂಡು “ಹಾನಿ ಏನಾದರೂ ಆಯಿತೆ?” ಎಂಬ ಭಾವ ಪ್ರತಿಯೊಬ್ಬರಲ್ಲೂ ಇದೆ ಎಂದು ಬೇಸರ ವ್ಯಕತಪಡಿಸುತ್ತಾರೆ. ನಿಮ್ಮ ಹತ್ತಿರ ಸ್ವಲ್ಪ ಹಣವನ್ನಾದರೂ ಉಳಿಸಿಕೊಳ್ಳಿ ಎನ್ನುತ್ತಾ ಮಿತವ್ಯಯದ ಬಗ್ಗೆಯೂ ಮಾತನಾಡುತ್ತಾರೆ.
ಗೆಳತಿ ಸೊರೊಕಿ ಮಾತಿನನ್ವಯ ಪ್ಯಾರಿಸ್ ಬಹುತೇಕ ಜನ ಇದ್ದಿಲು ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ಹಾಗೆ ಕಾಣುತ್ತಿದ್ದರಂತೆ . ಕಾವ್ಯೋತ್ಕಟ ನಗರ ಕಪ್ಪು ಹೊಗೆಯಿಂದ ಆವೃತವಾದ ಪ್ಯಾರಿಸ್ ನಗರದ ಕುರಿತು ವ್ಯಥೆ ಪಡುತ್ತಾರೆ. ಜೊತೆಗೆ ಅಮೆರಿಕಾದಲ್ಲಿ ಕಂಡ ವರ್ಣಬೇಧ ನೀತಿಯ ಕರಾಳತೆಯನ್ನು ಮಾನವೀಯ ನೆಲೆಯಲ್ಲಿ ಅವಲೋಕಿಸುತ್ತಾರೆ.
‘ವಿಮರ್ಶೆಗೆ ನಾವು ಅತೀತರಲ್ಲ’ ಅನ್ನುವ ಅಧ್ಯಾಯದಲ್ಲಿ ಅವರು ದತ್ತು ಮಗುವನ್ನು ತೆಗೆದುಕೊಂಡ ಬಗ್ಗೆ ಪ್ರಸ್ತಾಪ ಬಂದಾಗ ನಮಗೆ ಹಣಕಾಸಿನ ಉತ್ತರಾಧಿಕಾರಿ ಬೇಕಾಗಿರಲಿಲ್ಲ. ನಮಗೆ ಬೇಕಾಗಿದ್ದು ಬೌದ್ಧಿಕ ಉತ್ತರಾಧಿಕಾರಿ ಎನ್ನುತ್ತಾರೆ. ಇಂಥ ಮನಃಸ್ಥಿತಿ ವಿರಳಾತಿವಿರಳ.
ಕಾದಂಬರಿ ಮತ್ತು ರಂಗಭೂಮಿ, ಸಾಹಿತ್ಯ ಮತ್ತು ಆದಿಭೌತಿಕವಾದ ಇತ್ಯಾದಿಗಳ ಕುರಿತೂ ಇಲ್ಲಿ ವಿವೇಚನೆಯಿದೆ.’ ದಿ ಸೆಕೆಂಡ್ ಸೆಕ್ಸ್ ‘ಕೃತಿಯ ಮೊದಲ ಭಾಗದಲ್ಲಿ ಮಹಿಳೆಯರನ್ನು ಕುರಿತ ಜೀವ ವೈಜ್ಞಾನಿಕ , ಮನೋವಿಶ್ಲೇಷಣಾತ್ಮಕ ಮತ್ತು ಚಾರಿತ್ರಿಕ ದೃಷ್ಟಿ ಕೋನಗಳ ಚರ್ಚೆಯನ್ನು ಹೆಣ್ಣಿನ ಕುರಿತಾದ ಮಿಥಕಗಳನ್ನೂ ವಿಮರ್ಶೆ ಮಾಡಿ, ಎರಡನೆಯ ಭಾಗದಲ್ಲಿ ಆಧುನಿಕ ಜಗತ್ತಿನಲ್ಲಿ ಮಹಿಳೆಯರ ಬದುಕನ್ನು ಪರಿಶೀಲಿಸಿದೆ.
ಸಾಹಿತ್ಯದಲ್ಲಿ ಮಹಿಳೆಯರ ಪ್ರೇರಣೆ ಮತ್ತು ಪ್ರಭಾವಗಳನ್ನು ಅಥವಾ ಮಹಿಳಾ ಸಾಹಿತಿಗಳ ಸಂಚನೆಯನ್ನು ಗುರುತಿಸುವ ಪ್ರಧಾನ ಉದ್ದೇಶ ಇಲ್ಲವಾದರೂ ಮಹಿಳಾ ಪರಿಸ್ಥಿತಿಯ ಕುರಿತ ಅವರ ಚಿಂತನೆಗಳು ಸ್ತ್ರೀವಾದಿ ಸಾಹಿತ್ಯ ವಿಮರ್ಶಿಕಿಯರಿಗೆ ಹೊಸ ದಿಕ್ಕಿನ ಆಲೋಚನೆಗೆ ಚಿಂತನಾ ಸೋಪಾನವಾಯಿತೆನ್ನಬಹುದು. ಹೆಣ್ಣು ಮತ್ತು ಅವಳ ಸೃಜನಶೀಲತೆಯ ಪ್ರಾದುರ್ಭಾವವನ್ನು ಜಗತ್ತಿಗೆ ಮೊದಲಿಗೆ ಸಾಧಿಸಿದವರು ಸಿ ಮೊನ್ ದೊ ಬೋವಾ ಎಂದರೆ ಅತಿಶಯೋಕ್ತಿಯಲ್ಲ.
ಪರಾಮರ್ಶನ ಕೃತಿಗಳು
1 ಸ್ತ್ರೀವಾದಿ ಸಾಹಿತ್ಯ ವಿಮರ್ಶೆ:
ಸಂಪಾದಕರು: ತೇಜಸ್ವಿನಿ ನಿರಂಜನ, ಸೀಮಂತಿನಿ ನಿರಂಜನ
2 ಸಿಮೋನ್ ದ ಬೋವಾ ಅನುಭವ ಕಥನ: ವಿಕ್ರಮ ವಿಸಾಜಿ
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ