- ಬೇಂದ್ರೆಸಂಗೀತ: ಒಂದು ವಿಶ್ಲೇಷಣೆ - ಮಾರ್ಚ್ 18, 2024
- ದೂರ ತೀರದಿಂದ ಮುತ್ತುಗಳ ತಂದ ನಾವಿಕ - ಫೆಬ್ರುವರಿ 26, 2024
- ಐವತ್ತನೇ ಪುಸ್ತಕದ ಸಂಭ್ರಮದಲ್ಲಿ ಎನ್.ಎಸ್.ಎಸ್. - ಆಗಸ್ಟ್ 9, 2022
ಅಧಿಕಾರ ಕೇಂದ್ರದ ಹತ್ತಿರವಿದ್ದೂ ಸ್ಥಿತಪ್ರಜ್ಞರಾಗಿದ್ದರು.
1980ರಲ್ಲಿ ಆರ್.ಗುಂಡೂರಾಯರು ಸಂದಿಗ್ಧ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದರು. ಅವರಿಗೆ ಆಗ ಮಾಧ್ಯಮವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಪ್ರತಿಭಾವಂತರ ಅಗತ್ಯ ಕಾಣಿಸಿತು. ಗುಂಡೂರಾಯರು ತಮ್ಮ ಆಪ್ತ ವಲಯದಲ್ಲಿ ಚರ್ಚಿಸಿದಾಗ ಶೇಷಗಿರಿ ರಾಯರ ಹೆಸರು ಪ್ರಸ್ತಾಪಕ್ಕೆ ಬಂದಿತು. ಅವರ ಮಾಹಿತಿ ಸಂಗ್ರಹಣ ಶಕ್ತಿ, ಇಂಗ್ಲೀಷ್ ಮೇಲಿನ ಪ್ರಭುತ್ವ ಎರಡಕ್ಕಿಂತಲೂ ಮುಖ್ಯವಾಗಿ ವಿಶ್ವಾಸಾರ್ಹತೆ ಗುಂಡೂರಾಯರನ್ನು ಸೆಳೆಯಿತು. ಆದರೆ ಅಧ್ಯಾಪಕ ವೃತ್ತಿಯಲ್ಲಿದ್ದ ತೃಪ್ತಿ ಮತ್ತು ರಾಜಕೀಯದ ಕುರಿತು ನಿರಾಸಕ್ತಿ ಕಾರಣದಿಂದ ಶೇಷಗಿರಿ ರಾಯರು ಇದನ್ನು ಆರಂಭದಲ್ಲಿ ಒಪ್ಪಿಕೊಳ್ಳಲಿಲ್ಲ. ಆದರೆ ಮುಖ್ಯಮಂತ್ರಿಗಳೂ ಕೂಡ ತಮ್ಮ ಪಟ್ಟನ್ನು ಬಿಡಲಿಲ್ಲ. ಅವರ ವಿಶ್ವಾಸಕ್ಕೆ ಮಣಿದು ಶೇಷಗಿರಿರಾಯರು ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಹುದ್ದೆಯನ್ನು ಒಪ್ಪಿಕೊಂಡರು. ಪತ್ರಿಕೆಗಳಲ್ಲಿ ಪ್ರಕಟವಾಗುವ ರಾಜ್ಯ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದು, ಮುಖ್ಯಮಂತ್ರಿಗಳು ಭಾಗವಹಿಸಿ ಸಭೆ ಸಮಾರಂಭಗಳ ಅಗತ್ಯಕ್ಕೆ ತಕ್ಕಂತೆ ಕನ್ನಡ ಅಥವಾ ಇಂಗ್ಲೀಷ್ನಲ್ಲಿ ಅವರ ಭಾಷಣವನ್ನು ಸಿದ್ದಗೊಳಿಸಿಕೊಡುವುದು. ಮಾಧ್ಯಮಗಳ ಜೊತೆ ಮುಖ್ಯಮಂತ್ರಿಗಳ ಸಂವಹನಕ್ಕೆ ನೆರವಾಗುವುದು ಇವನ್ನೆಲ್ಲಾ ಅವರು ನಿಷ್ಟೆಯಿಂದ ಮಾಡಿದರು. ವಿದೇಶಿ ಗಣ್ಯರು ಭೇಟಿ ನೀಡಿದಾಗ ಮುಖ್ಯಮಂತ್ರಿಗಳಿಗೆ ನೆರವು ನೀಡುವ ಹೊಣೆಯನ್ನು ಅದ್ಭುತವಾಗಿ ನಿರ್ವಹಿಸಿದರು. ಗುಂಡೂರಾಯರು ಕಾರ್ಯದರ್ಶಿ ಬರೀ ನಂಬಿಕೆಯ ವ್ಯಕ್ತಿ ಆಗಿದ್ದರೆ ಸಾಲದು ಎಚ್ಚರಿಸುವ ಕೆಲಸವನ್ನೂ ಮಾಡಬೇಕು ಎಂದು ಹೇಳಿದ್ದರಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುವ ಸ್ವಾತಂತ್ರ್ಯವನ್ನು ಪಡೆದುಕೊಂಡರು. ಒಮ್ಮೆ ಆವೇಶದಲ್ಲಿ ಗುಂಡೂರಾಯರು ‘ಪತ್ರಕರ್ತರು ಅರಬ್ಬಿ ಸಮುದ್ರಕ್ಕೆ ಹಾರಿ ಕೊಳ್ಳಲಿ’ ಎಂಬ ವಿವಾದದ ಹೇಳಿಕೆಯನ್ನು ಕೊಟ್ಟರು. ಉತ್ಸಾಹಗೊಂಡ ಅವರ ಪಕ್ಷದ ಯುವದಳ ಒಂದು ಪತ್ರಿಕೆಯ ಕಚೇರಿಗೆ ಬೀಗಮುದ್ರೆಯನ್ನು ಕೂಡ ಹಾಕಿ ಬಿಟ್ಟಿತ್ತು. ಗುಂಡೂರಾಯರು ಪತ್ರಿಕಾ ಗೋಷ್ಟಿ ನಡೆಸಲು ಸಿದ್ದರಾದರು. ಆದರೆ ರಾಯರು ಅದನ್ನು ಒಪ್ಪಲಿಲ್ಲ. ಪರಿಸ್ಥಿತಿ ಪ್ರಕ್ಷುಬ್ದವಾಗಿರುವಾಗ ಮಾತನಾಡುವುದು ಇನ್ನಷ್ಟು ವಿವಾದವನ್ನು ಉಂಟು ಮಾಡಬಲ್ಲದು ಎನ್ನುವುದು ಅವರ ನಿಲುವು. ಗುಂಡೂರಾಯರು ಇದನ್ನು ಒಪ್ಪದಿದ್ದರೂ ಶೇಷಗಿರಿ ರಾಯರ ಮಾತಿಗೆ ಬೆಲೆ ಕೊಟ್ಟು ಪತ್ರಿಕಾ ಗೋಷ್ಟಿಯ ನಿರ್ಧಾರದಿಂದ ದೂರವಾದರು. ಕ್ರಮೇಣ ಪರಿಸ್ಥಿತಿ ತಾನಾಗಿಯೇ ತಿಳಿಯಾಯಿತು. ಇದರಿಂದ ಗುಂಡೂರಾಯರಿಗೆ ರಾಯರ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು.
ಕ್ಯಾಬೀನೇಟ್ ಮೀಟಿಂಗ್ಗಳಲ್ಲಿ ಭಾಗವಹಿಸಿ ವಿಷಯದ ಗೋಪ್ಯತೆ ಹೇಗಿರುತ್ತದೆ ಎನ್ನುವುದನ್ನೂ ಶೇಷಗಿರಿ ರಾಯರು ಇದೇ ಸಂದರ್ಭದಲ್ಲಿ ಅರಿತರು. ರಾಜಕೀಯ ಲಾಭಿಗಳ ನಿಕಟ ಪರಿಚಯವೂ ಆವರಿಗೆ ಆಯಿತು. ಜಾಹಿರಾತುದಾರರ ಒತ್ತಡದ ಅರಿವೂ ಆಯಿತು. ಒಂದೂವರೆ ವರ್ಷ ಈ ಹುದ್ದೆಯಲ್ಲಿ ಶೇಷಗಿರಿ ರಾಯರಿದ್ದರು. ಇದು ಹೊಸ ಅನುಭವ ನೀಡಿದ್ದರೂ ತಮಗೆ ಪ್ರಿಯವಾದ ಅಧ್ಯಾಪನ-ಅಧ್ಯಯನದಿಂದ ದೂರ ಉಳಿಯುವುದು ರಾಯರಿಗೆ ಕಷ್ಟ ಎನ್ನಿಸಿತು. ಒಮ್ಮೆ ಕಾರಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಹಿಂದಿರುಗುತ್ತಿದ್ದಾಗ ಈ ವಿಷಯವನ್ನು ಪ್ರಸ್ತಾಪಿಸಿದರು. ಗುಂಡೂ ರಾಯರು ‘ಏಕೆ ಬೇಸರವಾಗುವ ಘಟನೆ ಏನಾದರೂ ನಡೆಯಿತೆ?’ ಎಂದು ಕೇಳಿದರು. ಶೇಷಗಿರಿ ರಾಯರು ಬಹಳ ಸ್ಪಷ್ಟವಾಗಿ ‘ಇದು ನನ್ನ ಸ್ವಭಾವಕ್ಕೆ ಒಗ್ಗುವುದಲ್ಲ’ ಎಂದರು. ‘ಇನ್ನೇನು ಚುನಾವಣೆ ಬರುತ್ತದೆ ಅಲ್ಲಿಯವರೆಗೆ ಇದ್ದು ಬಿಡಿ’ ಎಂದು ಗುಂಡೂ ರಾಯರು ಒತ್ತಾಯಿಸಿದರು. ಆದರೆ ರಾಯರು ಒಪ್ಪಲಿಲ್ಲ. ‘ನೀವಾಗಲೇ ನಿರ್ಧರಿಸಿದ್ದರೆ ನಾನು ಅಡ್ಡಿ ಬರಲಾರೆ’ ಎಂದು ಮುಖ್ಯಮಂತ್ರಿಗಳು ಅವರ ರಾಜೀನಾಮೆಯನ್ನು ಅಂಗೀಕರಿಸಿದರು. ಅಧಿಕಾರ ಸಿಕ್ಕರೂ ಎಂದಿಗೂ ಶೇಷಗಿರಿ ರಾಯರು ಅದರ ವ್ಯಾಮೋಹಕ್ಕೆ ಒಳಗಾಗಲಿಲ್ಲ.
ಮತ್ತೊಮ್ಮೆ ಅಧಿಕಾರ ಶೇಷಗಿರಿ ರಾಯರ ಬಳಿಗೆ ಬಂದಿದ್ದು ವೀರಪ್ಪ ಮೊಯಲಿ ಅವರು ಮುಖ್ಯಮಂತ್ರಿಗಳಾಗಿದ್ದಾಗ. ಆಗ ಕನ್ನಡ ಪುಸ್ತಕ ಲೋಕಕ್ಕೆ ನಿರ್ದಿಷ್ಟ ರಕ್ಷಣೆ ನೀಡುವ ಒಂದು ಪ್ರಾಧಿಕಾರವನ್ನು ಸ್ಥಾಪಿಸಲು ತೀರ್ಮಾನಿಸಲಾಯಿತು. ಶೇಷಗಿರಿ ರಾಯರನ್ನು ಹೀಗೆ ಸ್ಥಾಪಿಸಲಾದ ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಲು ವಿನಂತಿಸಲಾಯಿತು. ಆಗ ಶೇಷಗಿರಿ ರಾಯರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ‘ಕಿರಿಯರ ಕರ್ನಾಟಕ’ ವಿಶ್ವಕೋಶವನ್ನು ಸಂಪಾದಿಸುತ್ತಿದ್ದರು. ಸರ್ಕಾರದ ಉದ್ದೇಶವನ್ನು ತಿಳಿದ ಕೂಡಲೇ ಆಗ ಉಪಕುಲಪತಿಗಳಾಗಿದ್ದ ಡಾ.ಚಂದ್ರಶೇಖರ ಕಂಬಾರರು ಇವರನ್ನು ಕೂಡಲೇ ಬಿಟ್ಟು ಕೊಟ್ಟರು.
ರವೀಂದ್ರ ಕಲಾಕ್ಷೇತ್ರದ ಚಿಕ್ಕ ಕೊಠಡಿಯಲ್ಲಿ ಪ್ರಾಧಿಕಾರದ ಕೆಲಸ ಆರಂಭವಾಯಿತು. ದಿನ ನಿತ್ಯದ ಕಾರ್ಯಕ್ಕೆ ಸಂಸ್ಕೃತಿ ಇಲಾಖೆಯನ್ನೇ ಅವಲಂಭಿಸಬೇಕು. ಇಂತಹ ಸ್ಥಿತಿಯಲ್ಲಿಯೂ ರಾಯರು ಉತ್ಸಾಹದಿಂದ ಕೆಲಸವನ್ನು ಆರಂಭಿಸಿಯೇ ಬಿಟ್ಟರು. ಕೆಲವು ಸಮಯದ ನಂತರ ಕಚೇರಿ ಸಿಬ್ಬಂದಿ ಮತ್ತು ರಿಜಿಸ್ಟ್ರಾರ್ ನೇಮಕವಾಯಿತು. ಮೊದಲ ಅಧ್ಯಕ್ಷರಿಗೆ ಪ್ರತಿಯೊಂದನ್ನೂ ಉತ್ತಿ ಬಿತ್ತಿ ತೆಗೆಯುವ ಹೊಣೆಗಾರಿಕೆ. ಜೊತೆಗೆ ಹಣಕಾಸಿನ ವಿಚಾರದಲ್ಲಿಯೂ ಹಲವು ಅಡಚಣೆಗಳು. ರಾಯರು ಇದನ್ನು ಲೆಕ್ಕಿಸದೆ ಉತ್ಸಾಹದಿಂದ ದುಡಿದರು.
ಮೊದಲಿದ್ದ ದೊಡ್ಡ ಜವಾಬ್ದಾರಿ ಸಗಟು ಖರೀದಿಯದು. ಶೇಷಗಿರಿ ರಾಯರು ಅಧಿಕಾರ ಸ್ವೀಕರಿಸಿದ ಕೂಡಲೇ ಮೊದಲು ಮಾಡಿದ ಕೆಲಸ ಎಂದರೆ ಪ್ರಕಾಶಕರ ಸಮಸ್ಯೆಗಳನ್ನು ಅಧ್ಯಯನ ಮಾಡಿದ್ದು. ಎಲ್ಲಾ ಯೋಜನೆಗಳ ಸಿಂಹಪಾಲು ದೊಡ್ಡ ಪ್ರಕಾಶಕರಿಗೇ ಹೋಗ್ತಾ ಇದ್ದಿದ್ದನ್ನು ಗಮನಿಸಿ ಎಲ್ಲರಿಗೂ ಸಮಪಾಲು ಸಿಕ್ಕುವಂತೆ ಸಗಟು ಖರೀದಿ ಯೋಜನೆಯನ್ನು ರೂಪಿಸಿದರು. ಯಾವುದೇ ಪುಸ್ತಕ ಆಯ್ಕೆ ಆಗದಿದ್ದರೆ ಅರ್ಜಿ ಫಾರಂನ ಕೊನೆಯಲ್ಲಿ ಏಕೆ ಆಯ್ಕೆ ಆಗಿಲ್ಲ ಎಂದು ತಿಳಿಸುವಂತೆ ಮಾಡುವ ನಿಬಂಧನೆ ಸೇರಿಸಿ ಇಡೀ ಪ್ರಕ್ರಿಯೆಯನ್ನು ಪಾರದರ್ಶಕವಾಗುವಂತೆ ಮಾಡಿದರು. ಪ್ರಾಧಿಕಾರ ಖರೀದಿಸಿದ ಪುಸ್ತಕಗಳಿಗೆ ನಿರ್ದಿಷ್ಟ ಅವಧಿಯೊಳಗೆ ಪ್ರಕಾಶಕರ ಮನೆ ಬಾಗಿಲಿಗೆ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಹಣ ತಲುಪಿಸುವ ಕಾರ್ಯವನ್ನು ರಾಯರು ಯೋಜಿಸಿದರು. ಶೇಷಗಿರಿ ರಾಯರು ಅಧಿಕಾರ ಸ್ವೀಕರಿಸಿದಾಗ ಎರಡು ವರ್ಷಗಳ ಪುಸ್ತಕಗಳನ್ನು ಖರೀದಿ ಮಾಡಬೇಕಿತ್ತು. ಅದಕ್ಕೆ ಕನಿಷ್ಟ ಒಂದು ಕೋಟಿ ರೂಪಾಯಿ ಬೇಕಿತ್ತು. ಆದರೆ ಬಜೆಟ್ ಅಲ್ಲಿ ನಿಗಧಿಯಾಗಿದ್ದು ಕೇವಲ ಐವತ್ತು ಲಕ್ಷ ರೂಪಾಯಿ. ಶೇಷಗಿರಿ ರಾಯರು ನಿರಾಶರಾಗದೆ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮನದಟ್ಟು ಮಾಡಿ ಹೆಚ್ಚಿನ ಅನುದಾನವನ್ನು ಪಡೆಯುವಲ್ಲಿ ಯಶಸ್ವಿಯಾದರು.
ಉದಯೋನ್ಮುಖ ಬರಹಗಾರರ ಚೊಚ್ಚಲ ಕೃತಿಗೆ ಸಹಾಯ ಧನ ನೀಡುವ ಯೋಜನೆ ಇವರ ಅವಧಿಯಲ್ಲಿಯೇ ರೂಪುಗೊಂಡಿತು. ಪುಸ್ತಕ ಖರೀದಿಸುವುದು ಮಾತ್ರವಲ್ಲ ಉತ್ತಮ ಪುಸ್ತಕಗಳನ್ನು ಪ್ರಕಟಿಸಲೂ ಕೂಡ ಇದೇ ಅವಧಿಯಲ್ಲಿ ಶೇಷಗಿರಿ ರಾಯರು ಕ್ರಮ ಕೈಗೊಂಡರು. ರಾಜ್ಯದ ಹಲವೆಡೆ ಕನ್ನಡ ಪುಸ್ತಕಗಳು ತಲುಪುತ್ತಿಲ್ಲ. ಎಲ್ಲವೂ ಬೆಂಗಳೂರು ಕೇಂದ್ರೀಕೃತವಾಗಿವೆ ಎಂಬ ಅಪಾದನೆ ಹಳೆಯದು. ಇದನ್ನು ಗಂಭೀರವಾಗಿ ಪರಿಗಣಿಸಿದ ಶೇಷಗಿರಿ ರಾಯರು ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟ ಮಳಿಗೆ ಸ್ಥಾಪಿಸಲು ಅರ್ಹ ಮತ್ತು ಪ್ರಾಮಾಣಿಕರಿಗೆ ನೆರವು ನೀಡುವ ಯೋಜನೆಯನ್ನು ರೂಪಿಸಿದರು. ಇದರ ಅನ್ವಯ ಆಸಕ್ತರಿಗೆ ಇಪ್ಪತ್ತು ಸಾವಿರ ರೂಪಾಯಿಗಳ ಕನ್ನಡ ಪುಸ್ತಕಗಳನ್ನು ಪ್ರಾಧಿಕಾರ ನೀಡುತ್ತಿತ್ತು. ಮೊದಲೆರಡು ವರ್ಷ ಅವರು ಮರುಪಾವತಿ ಮಾಡಬೇಕಿಲ್ಲ. ಮೂರನೇ ವರ್ಷದಿಂದ ಕಂತುಗಳಲ್ಲಿ ಹಣ ಹಿಂದಿರುಗಿಸಬೇಕು. ಒಟ್ಟು ಐದು ವರ್ಷದಲ್ಲಿ ಪುಸ್ತಕದ ಹಣವನ್ನು ತೀರಿಸಬೇಕು. ಈ ಯೋಜನೆ ಶಿವಮೊಗ್ಗ, ಶಿರಸಿ, ಮಂಡ್ಯ, ಮೈಸೂರು ಮೊದಲಾದ ಕಡೆ ಯಶಸ್ವಿ ಕಾರ್ಯಾರಂಭ ಮಾಡಿತು. ಮೈಸೂರಿನಲ್ಲಂತೂ ಆಗಿನ್ನೂ ಕಾಲೇಜ್ ಓದುತ್ತಿದ್ದ ಸ್ವಾಭಿಮಾನಿ ಯುವಕ ಈ ಸಾಹಸಕ್ಕೆ ಮುಂದಾದ. ಅವನಿಗೆ ಉತ್ತರದಾಯಿತ್ವ(ಶ್ಯೂರಿಟಿ) ಸಿಗುವುದೇ ಕಷ್ಟವಾಗಿತ್ತು. ಕೊನೆಗೆ ರಾಯರ ಕೋರಿಕೆ ಮೇರೆಗೆ ಅವರ ಹಳೆಯ ಸಹೋದ್ಯೋಗಿ ಜಿ.ಟಿ.ನಾರಾಯಣ ರಾಯರು ಉತ್ತರ ದಾಯಿ ಆದರು. ಈ ಹುಡುಗ ಸ್ವ ಸಾಮಥ್ರ್ಯ ಮತ್ತು ದಕ್ಷತೆಯಿಂದ ಒಂದು ವರ್ಷದೊಳಗೆ ಸಾಕಷ್ಟು ಏಳಿಗೆ ಕಂಡ. ತನ್ನದೇ ಆದ ಪ್ರಕಾಶನ ಸಂಸ್ಥೆಯನ್ನೂ ಕೂಡ ಕಟ್ಟಿದ. ಶೇಷಗಿರಿ ರಾಯರ ಈ ಪ್ರಯೋಗದ ಮೂಲಕ ಇಂತಹ ಹಲವಾರು ಪ್ರತಿಭಾವಂತರು ಬೆಳಕಿಗೆ ಬಂದು ತಮ್ಮ ಬದುಕನ್ನು ಪುಸ್ತಕದ ಮೂಲಕವೇ ಕಟ್ಟಿ ಕೊಂಡರು.
ಬೆಂಗಳೂರಿನಲ್ಲಿ ನಡೆದ ಪುಸ್ತಕ ಮೇಳ ಕೂಡ ರಾಯರ ಸಾಧನೆಗಳಲ್ಲಿ ಮುಖ್ಯವಾದದ್ದು. ಇಲ್ಲಿ ನೂರಕ್ಕೆ ನೂರರಷ್ಟು ಕನ್ನಡ ಪುಸ್ತಕಗಳೇ ಇರುವಂತೆ ಅವರು ನೋಡಿ ಕೊಂಡರು. ಒಂದು ಮಳಿಗೆ ಪ್ರಕಾಶಕರಿಗೆ ಉಚಿತ ಇನ್ನೊಂದು ಮಳಿಗೆಗೆ ನೂರು ರೂಪಾಯಿ ಬಾಡಿಗೆ ಎನ್ನುವ ನಿಯಮವನ್ನು ರೂಪಿಸಿದರು. ಹೊರಗಿನಿಂದ ಬಂದವರಿಗೆ ಐವತ್ತು ರೂಪಾಯಿಗಳ ಭತ್ಯಯನ್ನು ಕೂಡ ಪ್ರಾಧಿಕಾರ ನೀಡಿತು. ಇದಕ್ಕೆ ಉತ್ಸಾಹಕರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ 75 ಮಳಿಗೆಗೆ ಅವಕಾಶವಿದ್ದರೂ ಉತ್ಸಾಹದ ಪ್ರತಿಕ್ರಿಯೆ ಬಂದಿದ್ದರಿಂದ ಇದರ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಲಾಯಿತು. ನಿಗಧಿಯಂತೆ ಪುಸ್ತಕ ಮೇಲೆ ಹತ್ತು ದಿನ ನಡೆಯದೆ ಉರ್ದು ವಾರ್ತೆಗೆ ಸಂಬಂಧಿಸಿದ ಗಲಭೆಯಿಂದ ಒಂಬತ್ತೇ ದಿನಕ್ಕೆ ಕೊನೆಯಾಯಿತು. ಹೀಗಿದ್ದರೂ ಹತ್ತು ಲಕ್ಷ ರೂಪಾಯಿಗಳ ವಹಿವಾಟು ನಡೆದಿತ್ತು. ಅದಕ್ಕಿಂತ ಮುಖ್ಯವಾಗಿ ಮುಂದಿನ ಹಲವು ಪುಸ್ತಕ ಮೇಳಗಳಿಗೆ ನಾಂದಿ ಹಾಡಿತ್ತು. ಶೇಷಗಿರಿ ರಾಯರ ಅಧಿಕಾರಾವಧಿ ಒಂದೂವರೆ ವರ್ಷ ಪೂರೈಸಿದಾಗ ಚುನಾವಣೆ ನಡೆದು ಸರ್ಕಾರ ಬದಲಾಯಿತು. ಯಾರ ಸೂಚನೆಗೂ ಕಾಯದೆ ನೈತಿಕ ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿ ಸಂತೃಪ್ತಿಯೊಡನೆ ರಾಯರು ಹೊರ ಬಂದರು.
ಮಾನ್ಯ ಎಲ್ .ಎಸ್. ಶೇಷಗಿರಿ ರಾಯರ ಬದುಕು, ಬರಹದ ಸುತ್ತ ಅವರ ನಿಕಟವರ್ತಿಗಳಾಗಿದ್ದ ಶ್ರೀ ಎನ್. ಎಸ್. ಶ್ರೀಧರ ಮೂರ್ತಿ ಅವರು ಬರೆದ ಪುಸ್ತಕದಿಂದ ಆಯ್ದ ಬರಹ ಇದಾಗಿದ್ದು, ಪೂರ್ತಿ ಓದಿಗಾಗಿ ಈ ಸಂಗ್ರಹ ಯೋಗ್ಯ ಕೃತಿಯನ್ನು ತರಿಸಿಕೊಳ್ಳಬಹುದು.
ಲೇಖಕರ ಮಾತು
ಕೇಂದ್ರ ಸಾಹಿತ್ಯ ಅಕಾಡಮಿಯಿಂದ ‘ಭಾರತೀಯ ಸಾಹಿತ್ಯ ನಿರ್ಮಾಪಕರು’ ಮಾಲಿಕೆಯಲ್ಲಿ ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಅವರ ಕುರಿತ ನನ್ನ ಕೃತಿ ಇದೀಗ ಹೊರ ಬಂದಿದೆ. ವಿಶೇಷ ಎಂದರೆ ನಾನು ಶೇಷಗಿರಿ ರಾಯರ ಕುರಿತು ಬರೆಯುತ್ತಿರುವ ಮೂರನೆಯ ಪುಸ್ತಕ ಇದು. ಇದರ ಹಿಂದಿನ ಕಥೆ ಕೂಡ ರೋಚಕವಾಗಿದೆ.
ಅದು 2005ರ ಫೆಬ್ರವರಿ 6ನೇ ತಾರೀಖು. ನಾನು ಕಚೇರಿಯ ಕೆಲಸದಲ್ಲಿ ಮಗ್ನನಾಗಿದ್ದಾಗ ಆಗ ಭಾರತೀಯ ವಿದ್ಯಾ ಭವನದ ನಿರ್ದೇಶಕರಾಗಿದ್ದ ಡಾ.ಮತ್ತೂರು ಕೃಷ್ಣ ಮೂರ್ತಿಯವರು ಪೋನ್ ಮಾಡಿ ‘ಎಲ್.ಎಸ್.ಎಸ್ ಅವರ ಕುರಿತ ಪುಸ್ತಕ ಯಾವಾಗ ಸಿದ್ದವಾಗುತ್ತದೆ. ಫೆಬ್ರವರಿ 16ಕ್ಕೆ ಬಿಡುಗಡೆ’ ಎಂದರು. ನನಗೆ ಷಾಕ್, ಏಕೆಂದರೆ ಈ ಪುಸ್ತಕದ ವಿಷಯವೇ ನನಗೆ ಗೊತ್ತಿರಲಿಲ್ಲ. ‘ಯಾರು ಹೇಳಿದ್ದು’ ಎಂದಾಗ ಶೇಷಗಿರಿ ರಾಯರೇ ಹೇಳಿದರು ಎಂದರು. ಕೂಡಲೇ ಎಲ್.ಎಸ್.ಎಸ್ ಅವರಿಗೆ ಪೋನ್ ಮಾಡಿದೆ. ‘ನೋಡು ಫೆಬ್ರವರಿ 16ಕ್ಕೆ ನನ್ನ ಎಂಬತ್ತನೇ ವರ್ಷಕ್ಕೆ ಸನ್ಮಾನ ಮಾಡುತ್ತಾರಂತೆ. ರಾಜ್ಯಪಾಲ ಟಿ.ಎನ್.ಚತುರ್ವೇದಿಯವರನ್ನು ಬೇರೆ ಕರೆದಿದ್ದಾರೆ. ಬರೀ ಸನ್ಮಾನ ನನಗೆ ಇಷ್ಟ ಇಲ್ಲ. ಅದಕ್ಕೆ ನಿನ್ನ ಪುಸ್ತಕ ಬಿಡುಗಡೆ ಸೇರಿಸಿದೆ,’ ಎಂದು ಹೇಳಿ ‘ನೀನು ನನ್ನ ಎಲ್ಲಾ ಪುಸ್ತಕಗಳನ್ನು ಓದಿದ್ದಿ, ನಿನಗೆ ಬರೆಯಲು ಕಷ್ಟ ಆಗಲಾರದು’ ಎಂದೂ ಸೇರಿಸಿದರು. ಅವರ ವಿಶ್ವಾಸಕ್ಕೆ ಏನು ಹೇಳ ಬೇಕೋ ತಿಳಿಯಲಿಲ್ಲ… ಉಳಿದಿದ್ದು ಕೇವಲ ಹತ್ತು ದಿನ. ಇಲ್ಲ ಎನ್ನಲಾಗದೆ ಒಂದು ದಿನ ಬರವಣಿಗೆ, ಇನ್ನೊಂದು ದಿನ ತಿದ್ದುಪಡಿ ಮೂರನೇ ದಿನಕ್ಕೆ ಪ್ರೂಫ್, ನಾಲ್ಕನೇ ದಿನಕ್ಕೆ ಮುದ್ರಣ ಹೀಗೆ ಪುಸ್ತಕ ಸಿದ್ದವಾಯಿತು. ಅದ್ದೂರಿಯಾಗಿ ಬಿಡುಗಡೆ ಕೂಡ ಆಯಿತು. ಆದರೆ ನನಗೆ ಕಸಿವಿಸಿ. ಹೀಗೆ ತುರಾತುರಿಯಲ್ಲಿ ಪುಸ್ತಕ ಬರೆದಿದ್ದು ಸರಿ ಅಲ್ಲ ಎಂದು ಶೇಷಗಿರಿ ರಾಯರಿಗೆ ಹೇಳುತ್ತಲೇ ಇದ್ದೆ.
ಇದಾದ ಎರಡು ವರ್ಷಕ್ಕೆ ಅಂದರೆ 2007ರಲ್ಲಿ ಆಗ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಪ್ರೊ.ಚಂದ್ರಶೇಖರ ಪಾಟೀಲ ಅವರು ಪೋನ್ ಮಾಡಿದರು. ‘ಈ ಸಲ ಉಡುಪಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅದಕ್ಕೆ ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ, ನೀವು ಕನ್ನಡ ಸಾಹಿತ್ಯ ಪರಿಷತ್ಗೆ ಅವರ ಕುರಿತು ಒಂದು ಪುಸ್ತಕ ಬರೆದು ಕೊಡ ಬೇಕು. ಸಮ್ಮೇಳನದಲ್ಲಿಯೇ ಬಿಡುಗಡೆ.’ ಇದು ಸಂತೋಷ ಕೊಟ್ಟ ಪ್ರಸ್ತಾಪ.. ಆನಂದದಿಂದಲೇ ಎಲ್.ಎಸ್.ಎಸ್ ಅವರಿಗೆ ಪೋನ್ ಮಾಡಿದೆ, ಅವರು ‘ನಾನೇ ನಿನ್ನ ಹೆಸರನ್ನು ಸೂಚಿಸಿದ್ದು. ನಿನಗೆ ಹೇಗೂ ಸರಿಯಾಗಿ ಪುಸ್ತಕ ಬರೆಯಲು ಆಗಲಿಲ್ಲ ಎಂಬ ಕೊರಗು ಇತ್ತಲ್ಲ, ಈಗ ಸಮಗ್ರವಾಗಿ ಬರೆಯ ಬಹುದು’ ಎಂದರು ಅಷ್ಟೇ ಅಲ್ಲದೆ ‘ಇದನ್ನು ಪ್ರೊ.ಎಂ.ಎಚ್.ಕೃಷ್ಣಯ್ಯ ಅವರು ಬರೆಯ ಬೇಕು ಎಂದು ಪರಿಷತ್ತಿನವರು ತೀರ್ಮಾನ ಮಾಡಿದ್ದರು. ಆದರೆ ನಾನು ನೀನೇ ಬರೆಯ ಬೇಕು ಎಂದು ಹಠ ಹಿಡಿದೆ’ ಎಂದೂ ಹೇಳಿದರು. ಈಗ ಮಾತ್ರ ಕೊಂಚ ಮುಜುಗರ ಆಯಿತು. ಏಕೆಂದರೆ ಎಂ.ಎಚ್.ಕೆ ಅವರು ಶೇಷಗಿರಿ ರಾಯರಿಗೆ ಸಾಕಷ್ಟು ನಿಕಟರು. ಜೊತೆಗೆ ಬಹಳ ವರ್ಷಗಳಿಂದ ಅವರನ್ನು ಬಲ್ಲರು. ಅವರು ಬರೆಯುವುದು ಸೂಕ್ತವೂ ಆಗಿತ್ತು. ನಾನು ಪ್ರೊ.ಎಂ.ಎಚ್.ಕೆ ಅವರಿಗೆ ಪೋನ್ ಮಾಡಿ ‘ಸರ್ ಇದು ನನಗೆ ಗೊತ್ತಿಲ್ಲದೆ ಆಗಿದೆ, ನೀವೇ ಬರೆದು ಬಿಡಿ’ ಎಂದೆ. ಆದರೆ ಅವರು ಒಪ್ಪಲಿಲ್ಲ.’ ಎಲ್.ಎಸ್.ಎಸ್ ಅವರ ಆಯ್ಕೆ ಸೂಕ್ತವಾಗಿದೆ ನೀನೆ ಬರಿ’ ಎಂದು ಪ್ರೋತ್ಸಾಹ ನೀಡಿದರು. ಈ ಸಲ ಅಧ್ಯಯನಕ್ಕೆ ಸಾಕಷ್ಟು ಸಮಯ ಸಿಕ್ಕಿತು. ನನಗೆ ತೃಪ್ತಿ ಆಗುವಂತೆ ಪುಸ್ತಕ ರೂಪುಗೊಂಡಿತು. ಸಮ್ಮೇಳನದಲ್ಲಿ ಅದನ್ನು ಶೇಷಗಿರಿ ರಾಯರ ಸಮಕ್ಷಮದಲ್ಲಿ ಪ್ರೊ.ಎಂ.ಎಚ್.ಕೃಷ್ಣಯ್ಯನವರೇ ಬಿಡುಗಡೆ ಮಾಡಿದರು. ಇಬ್ಬರೂ ಹಿರಿಯರು ಸಾಕಷ್ಟು ಮುಜುಗರವಾಗುವಂತೆ ಸೇರಿದ್ದ ಲಕ್ಷಾಂತರ ಜನರ ಎದುರು ನನ್ನನ್ನು ಹೊಗಳಿದರು.
ಕಳೆದ ವರ್ಷ, ಮಿತ್ರರು ಮತ್ತು ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಾದೇಶಿಕ ಕಾರ್ಯದರ್ಶಿಗಳೂ ಆದ ಶ್ರೀ ಮಹಾಲಿಂಗೇಶ್ವರ ಭಟ್ ಅವರು ‘ನಮ್ಮ ಕೇಂದ್ರ ಸಾಹಿತ್ಯ ಅಕಾಡಮಿಯ ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆಗೆ ಶೇಷಗಿರಿ ರಾವ್ ಅವರ ಕುರಿತ ಪುಸ್ತಕವನ್ನು ಬರೆದು ಕೊಡುತ್ತೀರಾ’ ಎಂದು ಕೇಳಿದರು. ನನಗೆ ಒಂದು ರೀತಿಯಲ್ಲಿ ಗೊಂದಲ ಆಯಿತು ‘ಸರ್, ನಾನು ಈಗಾಗಲೇ ಅವರ ಕುರಿತು ಎರಡು ಪುಸ್ತಕಗಳನ್ನು ಬರೆದಿದ್ದೇನೆ, ಮತ್ತೆ ನಾನೇ ಬರೆಯುವುದು ಬೇಡ. ಬೇರೆಯವರ ಬಳಿ ಬರೆಸಿ’ ಎಂದು ಹೇಳಿದೆ. ಆದರೆ ಅವರು ಒಪ್ಪಲಿಲ್ಲ. ‘ಹಿಂದಿನ ಎರಡೂ ಪರಿಚಯಾತ್ಮಕ ಪುಸ್ತಕಗಳು, ಈಗ ವಿಮರ್ಶಾತ್ಮಕ ಪುಸ್ತಕ ಬರೆಯಿರಿ, ನಿಮ್ಮ ಪುಸ್ತಕ ಬಂದು ಆಗಲೇ ಹದಿನೈದು ವರ್ಷ ಆಗಿದೆ. ನಿಮ್ಮ ಚಿಂತನೆಗಳೂ ಕೂಡ ಈ ಕಾಲಾವಧಿಯಲ್ಲಿ ಬದಲಾಗಿರ ಬಹುದು’ ಎಂದರು. ಇದೂ ಕೂಡ ಸರಿ ಎನ್ನಿಸಿತು. ಬರೆಯಲು ಒಪ್ಪಿ ಕೊಂಡೆ. ಹಿಂದಿನ ಎರಡೂ ಪುಸ್ತಕಗಳನ್ನು ಬರೆದಾಗ ಎಲ್.ಎಸ್.ಎಸ್. ಇದ್ದರು. ನನ್ನ ಬಳಿ ಇಲ್ಲದ ಅವರ ಪುಸ್ತಕಗಳನ್ನು ಕೊಟ್ಟಿದ್ದರು, ಅದರ ಕುರಿತು ಬಂದ ವಿಮರ್ಶೆಗಳನ್ನು ಒದಗಿಸಿದ್ದರು. ಈ ಸಲ ಎಲ್.ಎಸ್.ಎಸ್.. ಇರಲಿಲ್ಲ. ನನಗೆ ಅವರ ಎಲ್ಲಾ ಕೃತಿಗಳನ್ನು ಇನ್ನೊಮ್ಮೆ ಅಧ್ಯಯನ ಮಾಡ ಬೇಕಿತ್ತು. ಬೇರೆ ದಾರಿ ಕಾಣದೆ ಎಲ್.ಎಸ್.ಎಸ್ ಅವರ ಮನೆ ಕದ ತಟ್ಟಿದೆ. ಅಷ್ಟೇ ಪ್ರೀತಿಯಿಂದ ಬರ ಮಾಡಿ ಕೊಂಡವರು ಎಲ್.ಎಸ್.ಎಸ್ ಅವರ ಮಡದಿ ಭಾರತಿ ಮೇಡಂ. ಅವರು ಎಲ್.ಎಸ್.ಎಸ್. ಅವರ ಕೃತಿಗಳ ಪಟ್ಟಿ ಸಿದ್ದಪಡಿಸಿ ಕೊಟ್ಟರು. ಈ ವೇಳೆಗೆ ಎಲ್.ಎಸ್.ಎಸ್ ಅವರ ವಿಮರ್ಶೆ ಮತ್ತು ಕಥೆಗಳು ಸಮಗ್ರ ಸಂಪುಟವಾಗಿ ಬಂದಿದ್ದವು. ಅವರ ಕೆಲವು ಅಪ್ರಕಟಿತ ಲೇಖನಗಳೂ ಪುಸ್ತಕ ರೂಪವನ್ನು ತಾಳಿದ್ದವು. ಭಾರತಿ ಮೇಡಂ ಎಲ್ಲಾ ಕೃತಿಗಳನ್ನು ನನಗೆ ಒದಗಿಸಿ ಕೊಟ್ಟರು. ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಪ್ರಕಟಿತವಾಗಿರುವ ಎಲ್.ಎಸ್.ಎಸ್ ಅವರು ಒಟ್ಟು ಕೃತಿಗಳ ಸಂಖ್ಯೆ 155, ಇದರ ಜೊತೆಗೆ ಅವರು ಸಂಪಾದಿಸಿದ್ದ ಕೃತಿಗಳು 800ಕ್ಕೂ ಹೆಚ್ಚು. ಇಷ್ಟೊಂದು ಅಗಾಧ ಸಾರಸ್ವತ ಭಂಡಾರವನ್ನು ಓದುವುದು ಮತ್ತು ಅದರ ಕುರಿತು ಟಿಪ್ಪಣಿ ಮಾಡಿ ಕೊಳ್ಳುವುದೇ ಒಂದು ದೊಡ್ಡ ಸಾಹಸವೇ ಆಗಿತ್ತು. ಈ ನಡುವೆ ಕರೋನಾದ ಎರಡನೆಯ ಅಲೆ ಬಂದಿದ್ದರಿಂದ ಒಂದು ಅನಿವಾರ್ಯ ಬಿಡುವು ಪ್ರಾಪ್ತವಾಯಿತು. ಅದು ಅಧ್ಯಯನಕ್ಕೆ ಅವಕಾಶ ನೀಡಿತು. ನಂತರ ನನ್ನ ಚಿಂತನೆಗಳು ಒಂದು ರೂಪ ಪಡೆಯಲು ಎಸ್.ಆರ್.ವಿಜಯಶಂಕರ್, ಕೆ.ಸತ್ಯನಾರಾಯಣ ಮತ್ತು ಡಾ.ಪಿ.ವಿ.ನಾರಾಯಣ್ ಅವರ ಜೊತೆಗೆ ನಡೆಸಿದ ಸಂಭಾಷಣೆಗಳು ನೆರವು ನೀಡಿದವು. ಗ್ರೀಕ್ ನಾಟಕಗಳು, ಇಂಗ್ಲೀಷ್ ಸಾಹಿತ್ಯ ಚರಿತ್ರೆ ಅದರಲ್ಲಿಯೂ ಷೇಕ್ಸಪಿಯರ್ ಮತ್ತು ಮಹಾಕಾವ್ಯಗಳು ಶೇಷಗಿರಿ ರಾವ್ ಅವರಿಗೆ ಪ್ರಿಯವಾದ ವಸ್ತುಗಳು. ಈ ವಿಷಯಗಳ ಕುರಿತು ಅವರು ಬರೆಯುತ್ತಲೇ ಹೋಗಿದ್ದಾರೆ. ಈ ಕುರಿತ ಅವರ ಚಿಂತನೆಗಳನ್ನು ಸರಿಯಾಗಿ ಅರ್ಥ ಮಾಡಿ ಕೊಳ್ಳಲು ಈ ಕ್ಷೇತ್ರದಲ್ಲಿ ಅಧ್ಯಯನ ಮಾಡಿರುವವರೊಬ್ಬರ ನೆರವು ಸಿಕ್ಕರೆ ಚೆನ್ನಾಗಿ ಇರುತ್ತದೆ ಎನ್ನಿಸಿತು. ಆಗ ನೆನಪಾಗಿದ್ದು ಆಂಗ್ಲ ಭಾಷಾ ಉಪನ್ಯಾಸಕಿ ಮತ್ತು ಈ ಕ್ಷೇತ್ರದ ಕುರಿತು ಸಾಕಷ್ಟು ಅಧ್ಯಯನ ಮತ್ತು ಬರವಣಿಗೆಯನ್ನು ಮಾಡಿರುವ ನಾಗರೇಖಾ ಗಾಂವಕರ ಅವರ ಹೆಸರು. ನಾನು ಕೇಳಿದ ಕೂಡಲೇ ಅವರು ಹಸ್ತಪ್ರತಿಯನ್ನು ಓದಿದ್ದು ಮಾತ್ರವಲ್ಲದೆ ಇದು ರೂಪುಗೊಳ್ಳಲು ಅಗತ್ಯವಾದ ಚರ್ಚೆಗಳ ಮೂಲಕ ನೆರವು ನೀಡಿದ್ದಾರೆ. .ಸಹಕಾರ ನೀಡಿದ ಇವರೆಲ್ಲರಿಗೂ ವಂದನೆಗಳು.
ಈಗ ಕೇಂದ್ರ ಸಾಹಿತ್ಯ ಅಕಾಡಮಿಯ ಮೂಲಕ ನನ್ನ ಕೃತಿ ಹೊರ ಬಂದಿದೆ. ನಿಮ್ಮ ಅಭಿಮತಕ್ಕೆ ಎಂದಿನಂತೆ ಕಾದಿದ್ದೇನೆ.. .
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಹಾಲಾಡಿಯಲ್ಲಿ ಹಾರುವ ಓತಿ