- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
“ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದೂ ವ್ಯರ್ಥ”
ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್ ಹಾಗೂ ಮಹಾನದಿ ನೈಲ್
ಒಂದು ಸಿನೆಮಾವೊಂದು ಸಿನೆಮಾ ಅಂತ ಆಗಬೇಕಾದರೆ ಏನೆಲ್ಲಾ ಇರಬೇಕು ಅಂತ ಯಾರಾದರೂ ಕೇಳಿದರೆ ವಿಮರ್ಶಕನ ದೃಷ್ಟಿಯಿಂದ ಏನೋ ಒಂದಷ್ಟು ಅಂಶಗಳನ್ನು ‘ಇದು ಇರಬೇಕು’ ಅಂತಲೋ, ‘ಇದು ಇರಬಾರದು’ ಅಂತಲೋ ಒಂದಷ್ಟು ಹೇಳಬಹುದು. ಆದರೆ, ಅಷ್ಟು ಮಾತ್ರವೇ ಸಿನೆಮಾ ಅನ್ನಬಹುದಾ? ಯಾವ ಕಲಾ ಪ್ರಕಾರ, ಅಭಿವ್ಯಕ್ತಿ ಮಾಧ್ಯಮವೇ ಆಗಿರಲಿ ಇದು ಹೀಗೇ ಇರಬೇಕು ಅನ್ನುವುದು ಬಹುಶಃ ಸಂಕುಚಿತ ನೋಟವಾಗಬಹುದು. ನಮಗೆ ಗೊತ್ತೇ ಇರದ ರೀತಿಯಲ್ಲಿ ಪ್ರಸ್ತುತವಾದರೆ ಅದು ನಮ್ಮ ಕಲಾ ವ್ಯಾಖ್ಯಾನದ ಪರಿಧಿಯಲ್ಲಿ ಬರದೇ ಹೋದರೆ, ಅದು ಅವರಿಗೆ ಮಾತ್ರ ದಕ್ಕಿದ ಮಾಧ್ಯಮವಾಗಿದ್ದಲ್ಲಿ ಅದನ್ನು ಕಲೆಯೇ ಅಲ್ಲ ಅನ್ನುವುದು ಅಷ್ಟು ಸಮಂಜಸವಲ್ಲವೇನೋ..
ಎಷ್ಟೋ ಸಿನೆಮಾಗಳನ್ನು ನೋಡುತ್ತೇವೆ; ಕೆಲವು ಸಿನೆಮಾಗಳಲ್ಲಿ ಕತೆ ಚೆನ್ನಾಗಿದೆ, ಇನ್ನು ಕೆಲವೊಂದರಲ್ಲಿ ಹಾಡು ಚೆನ್ನಾಗಿದೆ, ಛಾಯಾಗ್ರಹಣ ಚೆನ್ನಾಗಿದೆ, ಅಭಿನಯ ಚೆನ್ನಾಗಿದೆ, ಹಾಸ್ಯಮಯವಾಗಿದೆ, ಒಳ್ಳೆಯ ಮನರಂಜನೆ ಕೊಡುತ್ತದೆ ಇತ್ಯಾದಿ ಇತ್ಯಾದಿ ನಮ್ಮದೇ ಕಾರಣಗಳನ್ನು ಕೊಟ್ಟುಕೊಂಡು ಅದು ನಮಗೆ ಇಷ್ಟವಾಯಿತು ಅನ್ನುವ ತೀರ್ಮಾನಕ್ಕೆ ಬರುತ್ತೇವೆ. ಇನ್ನು ಕೆಲವೊಮ್ಮೆ ಇವೆಲ್ಲವುಗಳ ಆಚೆಗೂ ಹೊಸತನ ಇಲ್ಲದೇ ಅದೇ ಹಳಸಲು ವಿಷಯಗಳನ್ನು ಹೇಳಿದಾಗ ಅದನ್ನು ಸ್ವಲ್ಪವೂ ಇಷ್ಟಪಡದೇ ನಾವೇ ಸಿನೆಮಾ ಪಂಡಿತರೆಂಬಂತೆ ಅಂಥ ಸಿನೆಮಾವನ್ನು ತಿರಸ್ಕರಿಸುತ್ತೇವೆ. ಅದರ ಕುರಿತಾಗಿ ಋಣಾತ್ಮಕವಾಗಿ ಮಾತನಾಡುತ್ತೇವೆ. ಇವೆಲ್ಲವೂ ವ್ಯಕ್ತಿಗತ ಭಾವಗಳು. ಹಾಗಂತ ಸಿನೆಮಾ ಸಾರ್ವಜನಿಕವಾಗುವುದೇ ಇಲ್ಲವಾ ಅಂತ ಕೇಳಿದರೆ, ಇಲ್ಲ ಅದು ಪೂರ್ತಿ ವೈಯಕ್ತಿಕ ಅಂತಲೂ ಹೇಳಲಿಕ್ಕಾಗುವುದಿಲ್ಲ; ಸಿನೆಮಾ ಅಥವಾ ಇನ್ನ್ಯಾವುದೋ ಒಂದು ಕಲೆ ವೈಯಕ್ತಿಕತೆಯಿಂದ ಸಾಮಾಜಿಕತೆಯ ಕಡೆಗೆ ವಿಸ್ತಾರಗೊಳ್ಳುತ್ತಾ ಹೋಗಬಹುದು. ಆ ಎಲ್ಲಾ ಸಾಧ್ಯತೆಗಳೂ ಇರುತ್ತವೆ. ಹಲವು ಕತೆಗಾರರು, ಸಿನೆಮಾ ತಯಾರಕರು ಅಲ್ಲಲ್ಲಿ ಆಗಾಗ ಇಂಥ ಹಲವು ಸಾಧ್ಯತೆಗಳನ್ನು ಅನ್ವೇಷಿಸುತ್ತಲೇ ಇರುವುದು ಅರಿವಾಗುವುದು ಹಾಗೂ ಅದರಿಂದ ಒಂದು ಥರದ ಆತ್ಯಂತಿಕ ಸಮಾಧಾನವಾಗುವುದು ಇಂಥ ಸಿನೆಮಾಗಳನ್ನು ನೋಡಿದಾಗ; ಇವತ್ತಿನ ಸಿನೆಮಾ ಎಲಿಯಾ ಸುಲೈಮಾನ್ ನಿರ್ದೇಶನದ ‘ಇಟ್ ಮಸ್ಟ್ ಬಿ ಹೆವನ್’
ಭೌಗೋಳಿಕವಾಗಿ, ರಾಜಕೀಯವಾಗಿ ಒಂದು ಸಿನೆಮಾಕ್ಕೆ ಬೇರೆ ಬೇರೆ ಅರ್ಥಗಳು ಸಿಕ್ಕಬಹುದು. ಆದರೆ, ಒಂದು ಸಿನೆಮಾ ತಾನು ಸಿನೆಮಾ ಆಗಿ ಹೇಗೆ ನಮ್ಮ ಅನುಭವಕ್ಕೆ ಸಿಗುತ್ತದೆ ಅನ್ನುವುದು ಈ ಎಲ್ಲಾ ಆಮೇಲಿನ ಲೇಪಗಳಿಗಿಂತ ಮುಖ್ಯವಾದದ್ದು ಅಂತ ಅನಿಸುತ್ತದೆ. ತೊಗಲು ಒಂದೇ ಆದರೂ ಅದರೊಳಗಿನ ಗುಣ ಅವರವರ ಅನುಭವಕ್ಕೆ ಸಿಕ್ಕಿದ್ದು ! ಪ್ಯಾಲೆಸ್ತೇನಿಯಾದ ಜಂಜಡಗಳಿಂದ ಅಥವಾ ಅಲ್ಲಿನ ಸ್ಥಿತಿಗತಿಗಳಿಂದ ಹೊರ ಬಿದ್ದು ತನ್ನ ಸಿನೆಮಾಕ್ಕೆ ಬಂಡವಾಳ ಹಾಕುವವರನ್ನು ಹುಡುಕುತ್ತಾ ಹೋಗುವ ನಿರ್ದೇಶಕನ ಕತೆ ಈ ಸಿನೆಮಾ. ಇಲ್ಲಿ ಕತೆ ಇದೆಯಾ ಅಂತ ಕೇಳಿದರೆ, ಕತೆ ‘ಇಲ್ಲದಂತೆ’ ಇದೆ. ಒಂದು ಗಟ್ಟಿಯಾದ ಅಥವಾ ರೋಚಕ ತಿರುವುಗಳಿರುವ ಕತೆ ಅನ್ನುವಂಥದ್ದಿಲ್ಲ. ಹಗುರಾದ, ನಮ್ಮದೇ ನಿತ್ಯದ ಬದುಕಿನ ಹಲವು ಚಿತ್ರಣಗಳನ್ನು ಕಟ್ಟಿಕೊಡುವ ಸಹಜವಾದ ಕತೆಯಿದೆ. ಇವೆಲ್ಲವುಗಳ ಜೊತೆ ಮುಖ್ಯವಾಗಿ ಸಿನೆಮಾದ ಭಾಷೆಯಿದೆ!
ನಿರ್ದೇಶಕರೇ ಒಂದು ಸಂದರ್ಶನದಲ್ಲಿ ಹೇಳಿರುವಂತೆ, ಮೌಖಿಕ ಮಾತುಗಳು ತಿರುಚಲ್ಪಡಬಹುದು ಅಥವಾ ದುರುಪಯೋಗಕ್ಕೆ ಒಳಗಾಗಬಹುದು. ಆದರೆ, ಚಿತ್ರಣಗಳಿಂದ ವ್ಯಕ್ತವಾಗುವ ಮಾತುಗಳು ಅಥವಾ ಅಮೌಖಿಕತೆ ಹಲವು ಅರ್ಥಗಳಿಗೆ ದಾರಿ ತೋರಬಹುದು. ಕಲೆಯ ಉದ್ದೇಶವೂ ಇದೇ ಅಲ್ಲವಾ? ಈ ಸಿನೆಮಾದ ಮುಖ್ಯ ಪಾತ್ರಕ್ಕೆ ಒಂದು ವಿಶೇಷ ಗುಣವಿದೆ. ಅದು ಎಲ್ಲವನ್ನೂ ಹೇಗೆ ಇದೆಯೋ ಹಾಗೇ ನೋಡುತ್ತದೆ; ಆ ಪರಿಸರದಲ್ಲಿ ತನ್ನ ಪ್ರಭಾವವನ್ನು ಬೀರುವುದಿಲ್ಲ. ನಡೆಯುವ ಎಲ್ಲಾ ಘಟನೆಗಳಿಗೆ ಕೇವಲ ವೀಕ್ಷಕನಂತೆ ವರ್ತಿಸುತ್ತದೆ. ಸಾಕ್ಷ್ಯಚಿತ್ರ ತಯಾರಿಸುವವರು ಕೂಡಾ ಹೀಗೇ, ಆ ಪರಿಸರದಲ್ಲಿಯೇ ಇದ್ದರೂ, ತಮ್ಮ ಉಪಸ್ಥಿತಿಯನ್ನು ಅಲ್ಲಿನ ಪರಿಸ್ಥಿತಿಯಲ್ಲಿ ಬೆರೆಸುವುದಿಲ್ಲ. ಈ ಚಿತ್ರದುದ್ದಕ್ಕೂ ಕಾಣುವ ಸಂಗತಿ ಇದು. ಪ್ರತಿನಿತ್ಯ ಅದೆಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತ ನಡೆಯುತ್ತಿರುತ್ತವೆ; ಅವೆಲ್ಲವನ್ನೂ ನಾವು ಗಮನಿಸುತ್ತೇವಾ, ಅದರಲ್ಲೂ ಕೆಲವಷ್ಟು ಅಭ್ಯಾಸವಾಗಿ ಹೋಗಿರುತ್ತವೆ, ಅವು ನಮ್ಮ ಗ್ರಹಿಕೆಯ ಅಂಗಳಕ್ಕೆ ನೆರಳನ್ನೂ ಬಿಡುವುದಿಲ್ಲ.
‘ಇಲ್ಲಿಗಿಂತ ಅಲ್ಲಿ ಚೆನ್ನಾಗಿರಬಹುದು’ ಅನ್ನುವ ಒಂದು ಸಹಜ ಕುತೂಲದ ಪ್ರಯಾಣ ಈ ಸಿನೆಮಾ. ಹಾಗೆ ಪ್ಯಾಲೆಸ್ತೇನಿಯಾದ ಒಂದು ಜಾಗದಿಂದ ಹೊರಟು ಜಗತ್ತಿನ ಇನ್ನೊಂದಿಷ್ಟು ಬೇರೆ ಬೇರೆ ಭಾಗಗಳಲ್ಲಿ ಉಳಿದು, ಅಲ್ಲಿನ ಘಟನೆಗಳಿಗೆ ಸಾಕ್ಷಿಯಾಗುವ ಈ ಪ್ರಯಾಣ ತಿಳಿ ಹಾಸ್ಯ ಹಾಗೂ ಕಡಿಮೆ ಮಾತಿನದ್ದು. ನಮ್ಮ ಸುತ್ತಮುತ್ತಲಿನ ಅನೇಕ ಸಂಗತಿಗಳನ್ನು ಕೇವಲ ವೀಕ್ಷಕನಾಗಿ ಮಾತ್ರವೇ ನೋಡುವುದು ಸಾಮಾನ್ಯ ಸಂಗತಿಯಲ್ಲ; ಹೇಗಾದರೂ ಪ್ರತಿಕ್ರಿಯಿಸಬೇಕು, ಅದರೊಳಗೆ ಪ್ರವೇಶಿಸಬೇಕೆನ್ನುವುದು ಮನುಷ್ಯ ಸಹಜ ತುಡಿತ. ಕೆಲವೊಮ್ಮೆ ತಟಸ್ಥವಾಗಿಯೂ ಇರಬೇಕಾಗುತ್ತದೆ; ಭಾರತದ ಅಲಿಪ್ತ ನೀತಿಯ ಹಾಗೆ !
ಇನ್ನು ಮನುಷ್ಯ ಎಲ್ಲೇ ಹೋದರೂ, ತನ್ನ ಮೂಲ ಜಾಗದ ಸಾಮ್ಯತೆಗಳನ್ನೇ ಹುಡುಕುವ ಸಾಧ್ಯತೆಗಳೇ ಜಾಸ್ತಿ ಇವೆ. ನಾವು ಯಾವುದನ್ನು ಹೆಚ್ಚು ಗಮನಿಸಲು ಇಷ್ಟಪಡುತ್ತೇವೆಯೋ ಅದೇ ನಮಗೆ ಪದೇ ಪದೇ ದೃಷ್ಟಿಗೆ ಸಿಗಬಹುದು, ಅನುಭವಕ್ಕೆ ಒದಗಬಹುದು; ಒಳ್ಳೆಯದ್ದೇ ಇರಲಿ, ಕೆಟ್ಟದ್ದೇ ಇರಲಿ.. ನಮ್ಮ ಸ್ಥಿತಿ ಈಗ ಎಲ್ಲಿಗೆ ಬಂದಿದೆಯೆಂದರೆ, ವ್ಯವಧಾನ ಅನ್ನುವುದು ಬಿಸಿಲು ಕುದುರೆಯ ಹಾಗೆ. ಇನ್ನೇನು ಮಳೆ ಬರುತ್ತದೆ, ಮೋಡ ಕಟ್ಟಿದೆ, ಚಳಿ ಗಾಳಿ ಬೀಸುತ್ತಿದೆ, ಆಗ ವರಾಂಡದಲ್ಲಿ ಸುಮ್ಮನೆ ಹಾಡು ಕೇಳುತ್ತಾ ಕುಳಿತುಕೊಂಡು ಸುಖಿಸುವ ಕ್ಷಣ ಎಲ್ಲರಿಗೂ ದೊರಕುವುದಿಲ್ಲ, ಅಂಥ ಆಪ್ತ ಕ್ಷಣಗಳು ಈ ಸಿನೆಮಾದಲ್ಲಿವೆ. ಹಕ್ಕಿಯೊಂದು ಹೊರಗೆ ಹಾರುವಾಗ ಹೊರಗೆ ಆಕಾಶದಲ್ಲಿ ಕ್ಷಿಪಣಿಗಳ ಚಿತ್ತಾರ ಕಾಣುತ್ತದೆ, ರಸ್ತೆಗಳಲ್ಲಿ ಸೈನ್ಯದ ವಾಹನಗಳು ಚಲಿಸುವ ಸನ್ನಿವೇಶಗಳಿವೆ. ಮುಖ್ಯಪಾತ್ರದ ಗೆಳೆಯ ಈ ಪಾತ್ರವನ್ನು ಪರಿಚಯಿಸುತ್ತಾ, ಈತ ಸಿನೆಮಾ ತಯಾರಕ, ಇವನ ಚಿತ್ರಗಳು ಹಾಸ್ಯಭರಿತವಾಗಿರುತ್ತವೆ, ಈಗ ಮಾಡುತ್ತಿರುವ ಹೊಸ ಸಿನೆಮಾದ ವಿಷಯ, ‘ಮಧ್ಯಪೂರ್ವದಲ್ಲಿ ಶಾಂತಿ’ ಅಂತ ಅಂದಾಗ ಪರಿಚಯ ಕೇಳಿಸಿಕೊಂಡ ವ್ಯಕ್ತಿ ಥಟ್ಟನೆ ಹೇಳುವುದು, “ಇದೇ ಒಂದು ಹಾಸ್ಯ”
ಈ ಸಿನೆಮಾದಲ್ಲಿ ನೀರವತೆ, ಭೀಷಣತೆ ಎರಡನ್ನೂ ಹೇಳುವುದರ ಜೊತೆಗೆ ಪೇಲವವಾಗುತ್ತಿರುವ ನಾಗರಿಕ ಜವಾಬ್ದಾರಿಗಳನ್ನೂ ನೆನಪಿಸುವ ದೃಶ್ಯಗಳಿವೆ. ಉದಾಹರಣೆಗೆ, ಒಂದು ಜಾಗದಲ್ಲಿ ಎಲ್ಲರೂ ಅವರವರ ಕುರ್ಚಿಯನ್ನು ಹೊತ್ತುಕೊಂಡೇ ಓಡಾಡುತ್ತಾರೆ. ಒಂದು ಖಾಲಿ ಕುರ್ಚಿಯಿದ್ದಲ್ಲಿ ಅಜ್ಜಿಯೊಬ್ಬಳು ಬಂದು ಕೂರಬೇಕೆನ್ನುವಷ್ಟರಲ್ಲಿ ಒಬ್ಬ ಯುವಕ ಬಂದು ಕೂರುತ್ತಾನೆ. ಅಂದರೆ ಇಲ್ಲಿ ವಯಸ್ಸಾದವರಿಗೆ ಕುರ್ಚಿಯನ್ನು ಬಿಟ್ಟುಕೊಡುವುದಕ್ಕಿಂತ ತಾನು ಕೂರುವುದೇ ಮುಖ್ಯವಾಗುವುದು ನಾಗರಿಕ ಮೌಲ್ಯಗಳ ಕುಸಿತದ ಸೂಚಕವೇನೋ ಅನಿಸುತ್ತದೆ. ಇದು ಕೇವಲ ಒಂದೋ ಎರಡೋ ದೇಶಕ್ಕೆ ಸೀಮಿತವೇನಲ್ಲವಲ್ಲ; ಇದು ಜಾಗತಿಕ. ಎಲ್ಲಾ ಕಡೆಯಲ್ಲೂ ತನ್ನ ಅಸ್ತಿತ್ವವಿರಲಿ ಅಂತಲೇ ಅಲ್ಲವಾ ಇಷ್ಟೊಂದು ಯುದ್ಧಗಳು, ಗಡಿ, ಬಡಿದಾಟಗಳು.. ಎಲ್ಲೇ ಹೋದರೂ, ಕೊನೆಗೂ ನಮಗೆ ಉಳಿದ ಎಲ್ಲಾ ಜಾಗದ ನೆನಪುಗಳಿಗಿಂತ ನಮ್ಮ ನಮ್ಮ ಊರಿನ ನೆನಪು ಹೆಚ್ಚು ಆಪ್ತ, ಅದೇ ಹೆಚ್ಚು ನಮ್ಮ ಅಸ್ತಿತ್ವಕ್ಕೆ ಹತ್ತಿರ, ನಮ್ಮ ನಮ್ಮ ಊರಿನ ಹೆಸರು ಒಂದು ಸ್ವಲ್ಪವಾದರೂ ನಮ್ಮನ್ನು ವಿಚಲಿತರನ್ನಾಗಿ ಮಾಡದೇ ಇರುವುದಿಲ್ಲ ಅಲ್ವಾ ! ಅದಕ್ಕಾಗಿಯೇ ನಾವು ಮೊದಲಿನಿಂದಲೂ ಹೇಳುತ್ತಾ ಬಂದಿರುವುದು, “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸಿ”
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್