- ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ.. - ಆಗಸ್ಟ್ 23, 2024
- ನಮ್ಮೂರ ರಾಮ :ಹರವು ಶ್ರೀ ರಾಮ ಮಂದಿರ - ಜನವರಿ 20, 2024
- ಹೊಯ್ಸಳ ಕಾಲದ ಅಮೂಲ್ಯ ನಿಧಿ ಈ ದೇಗುಲ - ನವೆಂಬರ್ 11, 2023
ಟಿಪ್ಪಣಿ
[ಹೊಯ್ಸಳ ಶೈಲಿಯ ಅಪೂರ್ವ ಕಲಾಕೃತಿಗಳನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಲು ನೀವು ಬೇಲೂರು, ಹಳೆಬೀಡು ಸುತ್ತ ಮುತ್ತ ಭೇಟಿ ನೀಡಿದರೆ ಸಾಲದು 6500 ಕಿಮಿ ದೂರದ ಡೆನ್ಮಾರ್ಕಿನ ಕೋಪನ್ ಹೇಗನ್ ಗೂ ಹೋಗಬೇಕಾಗಬಹುದು ಎಂದರೆ ಅಚ್ಚರಿಯಾದೀತು.
ಹೌದು. ಕೋಪನ್ ಹೇಗನ್ ನ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಕೂಡ ನೀವು ಹೊಯ್ಸಳರ ಕಾಲದ ಅದ್ಭುತ ಕಲಾ ಪ್ರಸ್ತುತಿಗಳನ್ನು ಕಾಣಬಹುದು. ಹಾಸನ ಎಲ್ಲಿ ಕೋಪನ್ ಹೇಗನ್ ಎಲ್ಲಿ ಎನ್ನುವುದಕ್ಕೆ ಉತ್ತರ ಎಡ್ವರ್ಡ್ ಲೊವೆಂಥಾಲ್ ಎಂಬ ಒಬ್ಬ ಡಚ್ ಮೂಲದ ಕ್ರೈಸ್ತ ಪಾದ್ರಿ ಬ್ರಿಟಿಷರ ಕಾಲದಲ್ಲಿ ತಮಿಳುನಾಡಿನ ವೆಲ್ಲೂರಿನಲ್ಲಿದ್ದವನು.
ಮೊದಮೊದಲು ವೆಲ್ಲೂರಿನ ಸುತ್ತ ಮುತ್ತ ಶಿಲ್ಪಿ ಕಲಾಕೃತಿಗಳನ್ನು ಸಂಗ್ರಹಿಸುತ್ತಿದ್ದ ಲಾವೆಂಥಾಲ್ ಗೆ ಒಮ್ಮೆ ಪ್ರವಾಸಕ್ಕೆಂದು ಭೇಟಿ ಇತ್ತಾಗ ಮೈಸೂರು ರಾಜ್ಯದ ಕಲಾಕೃತಿಗಳ ಮೇಲೆ ದೃಷ್ಟಿ ಬಿತ್ತು. ಈ ಮನುಷ್ಯ ಅದೆಷ್ಟು ಶಿಲ್ಪಕಲಾ ಸಂಗ್ರಹಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಎಂದರೆ ಸಿಕ್ಕ ಸಿಕ್ಕ ದನಗಾಹಿಗಳ ಬಳಿ ಎಲ್ಲಾದ್ರೂ ಪಾಳು ಬಿದ್ದ ಗುಡಿಗಳು ಅವಶೇಷಗಳು ಇದ್ದಾವಾ ಎಂದು ಕೇಳುವ ರೂಢಿ ಇಟ್ಟುಕೊಂಡಿದ್ದ. ಎತ್ತಿನಗಾಡಿ ಕಟ್ಟಿಕೊಂಡು ಊರೂರು ಅಲೆಯುತ್ತಿದ್ದ. ಆಹಾ ಎಂಥ ಅದ್ಭುತ ಕಲೆ, ಇಂಥದ್ದು ಭಾರತದ ಯಾವ ಮೂಲೆಯಲ್ಲೂ ನೋಡಿಲ್ಲ. ಆದರೆ ಇಲ್ಲಿನ ಜನಕ್ಕೆ ಅದರ ಐತಿಹಾಸಿಕತೆ ಹಾಗೂ ಕಲೆಯ ಬಗ್ಗೆ ಮುತುವರ್ಜಿಯೇ ಇಲ್ಲದೇ ಪಾಳು ಬೀಳುತ್ತಿವೆ, ಹೇಗಾದರೂ ಅಲ್ಲಿ ಪೂಜೆಗಳು ಕೂಡ ನಡೆಯುತ್ತಿಲ್ಲವಲ್ಲ. ಹಾಗಾಗಿ ಇವೆಲ್ಲ ತನ್ನ ತಾಯ್ನಾಡು ಕೋಪನ್ ಹೇಗನ್ ನ ವಸ್ತು ಸಂಗ್ರಹಾಲಯವನ್ನು ಅಲಂಕರಿಸಿದರೇ ಚೆನ್ನ ಎಂಬುದನ್ನು ಬಲವಾಗಿ ನಂಬಿ ನಡೆದಿದ್ದ ಭೂಪ ಈ ಲೊವೆಂಥಾಲ್.
1894 ರಿಂದ 1900 ರ ಮಧ್ಯದಲ್ಲಿ ದಕ್ಷಿಣ ಭಾರತದ ಕಲಾಕೃತಿಗಳನ್ನು ಡೆನ್ಮಾರ್ಕ್ ಗೆ ಸಾಗಿಸುವಲ್ಲಿ ಲಾವೆಂಥಾಲ್ ಯಶಸ್ವಿಯಾದ. ಆದರೆ ಅದಕ್ಕಾಗಿ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಕಾನರಿಸ್ ಭಾಷೆ (ಕನ್ನಡ )ಯ ತೊಡಕು, ಸ್ಥಳೀಯರ ಪ್ರತಿರೋಧ, ಅಮಲದಾರರು, ಡಿಸ್ಟ್ರಿಕ್ಟ್ ಕಲ್ಲೆಕ್ಟರ್ ಅಷ್ಟೇ ಏಕೆ ಮೈಸೂರು ಮಹಾರಾಜರ ಅನುಮತಿ ಹೀಗೆ ಎಲ್ಲ ಹಂತಗಳನ್ನೂ ದಾಟಿ ಹಡಗಿನಲ್ಲಿ ಸಾಗಿಸಿದ್ದು ಆತನ ಇಚ್ಛಾ ಶಕ್ತಿಗೆ ಸಾಕ್ಷಿಯಾಗುತ್ತದೆ. ಒಮ್ಮೆ ಹಳೇಬೀಡಿನ ಒಬ್ಬ ಸ್ಥಳೀಯನ ಹಿತ್ತಲಿನಲ್ಲಿದ್ದ ಹೊಯ್ಸಳ ಕಾಲದ ಅಪೂರ್ವ ಶಿಲ್ಪಕ್ಕೆ ಲೊವೆಂಥಾಲ್ ಚೌಕಾಸಿ ಮಾಡಿ ಒಂದು ಜೊತೆ ಕನ್ನಡಕ ಹಾಗೂ ಎರಡು ರೂಪಾಯಿ ಕೊಟ್ಟು ಖರೀದಿಸಿದೆ ಎಂದು ಬರೆದುಕೊಂಡಿದ್ದಾನೆ.
ಹಾಗೆಯೇ ಇನ್ನೊಂದು ಘಟನೆಯಲ್ಲಿ ಲಾವೆಂಥಾಲ್ ಒಬ್ಬ ಭಾರತೀಯ ಡೆಪ್ಯುಟಿ ಕಮಿಷರ್ ತನ್ನ ನಿವಾಸದ ಗಾರ್ಡನ್ ನಲ್ಲಿ ನಿಲ್ಲಿಸಲಾಗಿರುವ ನಂದಿ , ಶಿವ ಹಾಗೂ ಒಬ್ಬ ನರ್ತಕಿಯ ಮೂರ್ತಿಗಳನ್ನು ತೋರಿಸುತ್ತಾನೆ. ಹಿಂದಿನ ಬ್ರಿಟಿಷ್ ಅಧಿಕಾರಿ ಇವನ್ನು ಅಲ್ಲಿ ತಂದಿರಿಸಿದ್ದಾಗಿಯೂ ಹಾಗೂ ಅವನ್ನು ಲೊವೆಂಥಾಲ್ ಬೇಕಾದರೆ ತೆಗೆದುಕೊಂಡು ಹೋಗಬಹುದೆಂದು ಅನುಮತಿ ಕೊಡುತ್ತಾನೆ. ಅದಾದ ಕೆಲವೇ ಸಮಯದಲ್ಲಿ ಆ ಬ್ರಾಹ್ಮಣ ಡೆಪ್ಯುಟಿ ಕಮಿಷನರ್ ತೀರಿಹೋಗುತ್ತಾನೆ. ಇದಕ್ಕೆ ಕಾರಣ ಆತ ಮೂರ್ತಿಗಳನ್ನು ವಿದೇಶಕ್ಕೆ ಸಾಗಿಸಲು ಆ ಪಾದ್ರಿಗೆ ಅವಕಾಶ ಕೊಟ್ಟ ಕಾರಣಕ್ಕಾಗಿಯೇ ಎಂದು ಹೇಳುತ್ತಾ ಸ್ಥಳೀಯರು ಈ ಬಗ್ಗೆ ಕ್ರುದ್ಧರಾಗುತ್ತಾರೆ. ಇವ್ಯಾವುದೂ ಲೊವೆಂಥಾಲ್ ನ ಪ್ರಯತ್ನವನ್ನು, ಕೆಲಸಗಳನ್ನೂ ತಗ್ಗಿಸುವುದಿಲ್ಲ. ಆಯ್ಕೆ ಮಾಡಿದ ಶಿಲ್ಪಗಳನ್ನು ಡೆನ್ಮಾರ್ಕ್ ಗೆ ಸಾಗಿಸಲು ಆತ ಮೈಸೂರು ಮಹಾರಾಜರ ಮಂತ್ರಿಗಳನ್ನೂ , ಬ್ರಿಟಿಷ್ ಅಧಿಕಾರಿಗಳನ್ನೂ ಸೇರಿದಂತೆ ಅನೇಕರ ಮನವೊಲಿಸುತ್ತಾನೆ ಇಲ್ಲವೇ ಕೆಲವರಿಗೆ ಹಣ ನೀಡುತ್ತಾನೆ.
ಒಮ್ಮೆ ಎರಡು ಟ್ರಿಪ್ ಸಾಗಾಣಿಕೆಯಲ್ಲಿ ಕೊರವಂಗಲ,ದುದ್ದ , ಹರಿಹರಗಳಿಂದ ಆರು ಹಾಗೂ ಬೇಲೂರಿನಿಂದ ನಾಲ್ಕು ಸೇರಿದಂತೆ ಒಟ್ಟೂ ಇಪ್ಪತ್ತನಾಲ್ಕು ಕಲಾಕೃತಿಗಳನ್ನು ಸಾಗಿಸುವಾಗ ಮೂವತ್ತೈದು ಬಂಡಿಗಳು , ಆರು ಜೋಡೆತ್ತುಗಳು, ನೂರು ಕೂಲಿಗಳನ್ನು ಉಪಯೋಗಿಸಿಕೊಳ್ಳುತ್ತಾನೆ ಎಂದರೆ ಆಗ ನಡೆದ ಶಿಲ್ಪವಲಸೆಗಳ ತೀವ್ರತೆ ಅರ್ಥವಾಗುತ್ತದೆ. ಮೂರ್ತಿಗಳನ್ನು ಕಟ್ಟಿ, ಬಂಡಿಯ ಮೇಲೆ ಏರಿಸುವಾಗ, ಬಡಿಯುವಾಗ ಅಲ್ಲಿನ ಬಂಡಿ ಚಾಲಕರು, ಕೂಲಿಗಳು ನಮ್ಮ ದೇವರುಗಳನ್ನು ಹಾಗೆಲ್ಲ ಮಾಡಿದರೆ ಅಪಚಾರ ಎಂದು ವಿರೋಧಿಸಿದರೂ ಅವರಿಗೆ ಸ್ವಲ್ಪ ಹೆಚ್ಚಿನ ಹಣ ಕೊಟ್ಟು ಸುಮ್ಮನಾಗಿಸಿದೆ ಎಂದೂ, ಹಾಗೆಲ್ಲ ಸಾಗಿಸುವಾಗ ಸ್ಥಳೀಯ ಜನತೆ ಗೋವಿಂದಾ ಗೋವಿಂದಾ ಎಂದು ಬಾಯಿ ಬಡಿದುಕೊಂಡು ರೋಧಿಸುತ್ತಿದ್ದರು ಎಂತಲೂ ಬರೆದುಕೊಂಡಿದ್ದಾನೆ.
ಲಾವೆಂಥಾಲ್ ಬಗ್ಗೆ ಈ ಹಿನ್ನೆಲೆಯ ಜೊತೆಗೆ , ಪ್ರಸ್ತುತ ಕಾಲದಲ್ಲಿ ಪ್ರಾಚೀನ ದೇವಾಲಯಗಳ ಪುನರುಜ್ಜೀಕರಣದ ವಿಷಯದಲ್ಲಿ ಸೇವಾ ಭಾವದೊಂದಿಗೆ ಕೆಲಸ ಮಾಡುತ್ತಿರುವ ನಟರಾಜ ಪಂಡಿತ ಅವರು ಹರಿಹರಪುರದ ಬಗ್ಗೆ ಈ ಕೆಳಗಿನಂತೆ ಬರೆಯುತ್ತಾರೆ.
ಹರಿಹರಪುರದ ಒಂದು ಅಪೂರ್ವ ಕಥಾನಕ
ಲೇ :ನಟರಾಜ್ ಪಂಡಿತ್
“ಹರಿಹರಪುರ “ಎಂಬ ಗ್ರಾಮವು ಅದರ ವೈಭವ ಪೂರ್ಣ “ಇತಿಹಾಸವೂ “. ಹಾಸನ ತಾಲೂಕು, ದುದ್ದ ಹೋಬಳಿ “ಹರಿಹರಪುರ “ಗ್ರಾಮವು ಬೆಂಗಳೂರು ಹಾಸನ ರಾಜ್ಯ ಹೆದ್ದಾರಿಯಲ್ಲಿ ಬರುವ ಇತಿಹಾಸ ಪ್ರಸಿದ್ಧವಾದ “ಶಾಂತಿ ಗ್ರಾಮ “(ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಪಟ್ಟದರಸಿ “ಶಾಂತಳಾ ದೇವಿಯ ಜೀವಿತಕ್ಕೆ ಸಂಬಂಧಿಸಿದ ಊರು”) ದಿಂದ “ಹೆರಗು “ಗ್ರಾಮದ ರಸ್ತೆಯಲ್ಲಿ 6 ಕಿ. ಮಿ. ದೂರದಲ್ಲಿದೆ. ಹರಿಹರಪುರ ಗ್ರಾಮದಲ್ಲಿ ಕರ್ನಾಟಕ ಶಾಸನ ಸಂಪುಟ -8. ಶಾಶನ ಸಂಖ್ಯೆ 156. ಮತ್ತು 1920ರ ಹಯವದನರಾವ ಗೆಜೆಟಿಯರ್ ನಲ್ಲಿ ಉಲ್ಲೇಖವಾಗಿರುವಂತೆ 13ನೇ ಶತಮಾನದ ಆದಿ ಭಾಗದಲ್ಲಿ ನಿರ್ಮಿತವಾಗಿ ರುವ ತ್ರಿಕೂಟ (ಮೂರು ಗರ್ಭ ಗುಡಿಗಳನ್ನು ಹೊಂದಿರುವ) “ಹರಿಹರೇಶ್ವರ” ದೇವಾಲಯವಿದೆ. ಅಂದಿನ ಸಮಾಜದಲ್ಲಿ ಕಾಡುತ್ತಿದ್ದ ಹರಿ ದೊಡ್ಡವನು. ಹರ ದೊಡ್ಡವನು,ಎಂಬ ಸಮಸ್ಯೆಗೆ ಉತ್ತರ ಎಂಬಂತೆ. ಹರಿ-ಹರರಲ್ಲಿ,ಸಮನ್ವಯ,ಅಭೇದವನ್ನು ಸಾರುವ ಅನೇಕ ದೇವಾಲಯಗಳನ್ನು, ಊರುಗಳನ್ನು ದೇವತಾ ವಿಗ್ರಹಗಳನ್ನು ಕಾಣಬಹುದು. ಅವುಗಳಲ್ಲಿ ಈ ಊರಿನ ದೇವಾಲಯವೂ ಒಂದು. ಆದರೆ ಈ ದೇವಾಲಯದ ಪರಿಸ್ಥಿತಿ ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ.
ಹೇಗೆಂದರೆ ಇಲ್ಲಿನ ವಿಗ್ರಹಗಳು 1900 ರ ಪೂರ್ವದಲ್ಲಿಯೇ, ಡೆನ್ಮಾರ್ಕ್ ದೇಶದ, ಕೋಪನ್ಹೇಗನ್ ನಗರದ ಅಂತರ ರಾಷ್ಟ್ರೀಯ”ವಸ್ತು ಸಂಗ್ರಹಾಲಯ: ಸಾಗಿಸಲ್ಪಟ್ಟಿವೆ. ಅಲ್ಲಿನ ವಿಶಾಲವಾದ ಹವಾನಿಯಂತ್ರಣ ಕೊಠಡಿಗಳಲ್ಲಿ, ಜಗ ಮಗಿಸುವ ಬೆಳಕಿನ ರೂಮ್ ನರ್ 8, 9ಮತ್ತು 10 ರಲ್ಲಿ ಅವು ಭದ್ರವಾಗಿವೆ.
ಇದರ ಹಿಂದಿನ ರೋಚಕ , ಇತಿಹಾಸ -1894 ರ ಸುಮಾರಿಗೆ ಎಡ್ವರ್ಡ್ ಲೋವೆಂಥಾಲ್ ಎಂಬ ಡೆನ್ಮಾರ್ಕ್ ದೇಶದ ಡಚ್ ಪಾದ್ರಿ ತಮಿಳುನಾಡಿನ ವೆಲ್ಲೂರುನವನು. ಶಿಲ್ಪ ಕಲೆ,ಇತಿಹಾಸದ ಆಸಕ್ತಿಯ ಹಿನ್ನೆಲೆಯಲ್ಲಿ ವೇಲಾಪುರಿ (ಇಂದಿನ ಬೇಲೂರು ಮತ್ತು ದ್ವಾರ ಸಮುದ್ರ ( ಹಳೇ ಬೀಡು) ದೇವಾಲಯಗಳನ್ನು ಸಂದರ್ಶಿಸುತ್ತಾನೆ. ಈ ದೇವಾಲಯಗಳ ಕಲಾ ವಿಸ್ಮಯ. ಪ್ರಪಂಚ ಅವನಿಗೆ ದಿಗ್ಧಮೆ ಮೂಡಿಸುತ್ತದೆ. “ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯೂ ” ಎಂಬ ಭಾವ ಮೂಡುತ್ತದೆ. ಅದೇ ಸಮಯದಲ್ಲಿ ಅವನ ಮನಸ್ಸು, ನಮ್ಮಲ್ಲಿ (ಐರೋಪ್ಯ ದೇಶಗಳಲ್ಲಿ, ಒಂದೊಂದು ಅಪೂರ್ವ ಕಲಾ ಕೃತಿ ಗಳನ್ನು, ಕೆತ್ತಿದವರನ್ನೇ ವೈಭವಿಕರಿಸುತ್ತಿವಲ್ಲಾ, ಇಲ್ಲಿ “ಕಲೆಯನ್ನೇ ಬಲೆಯಾಗಿ ನೇಯ್ದಿರುವ “ಈ ಅಮರ ಶಿಲ್ಪಿ ಗಳನ್ನು ಏನೆಂದು ಕರೆಯೋಣ. ಗುರುತಿಸೋಣ ಎಂಬ ಭಾವಮೂಡುತ್ತದೆ. ಅವನ ಕಲಾಪಯಣ ಮುಂದುವರೆಯುತ್ತದೆ. ನಂತರ ಲೋವನ್ಹಾಲ್ ಬೇಲೂರು ಸುತ್ತಲಿನ ಗ್ರಾಮಗಳಲ್ಲಿನ ದೇವಾಲಯಗಳನ್ನು ಸಂದರ್ಶಿಸುತ್ತಾ, ದೊಡ್ಡಗದ್ದವಳ್ಳಿ, ಮೊಸಳೆ ಹಿರೇಕಡಲೂರು (ಶಾಸನಗಳಲ್ಲಿ “ಅರುಂಧತಿಪುರ “ಎಂದು ಉಲ್ಲೇಖಿತವಾಗಿದೆ).
ಕೊರವಂಗಲ ದಶ್ಮಿ ಬುಚೆಶ್ವರ ದೇವಾಲಯ ಸಂದರ್ಶಿಸುತ್ತ ಹರಿಹರಪುರದ “ಹರಿಹರೇಶ್ವರ “ದೇವಾಲಯಕ್ಕೆ ಭೇಟಿ ನೀಡುತ್ತಾನೆ. ಆ ಸಮಯಕ್ಕಾಗಲೇ ಅನ್ಯಾನ್ಯ ಕಾರಣಗಳಿಂದ ಪೂಜಾ ವ್ಯವಸ್ಥೆ ಇರುವುದಿಲ್ಲ.
ಈ ಹಿನ್ನೆಲೆಯಲ್ಲಿ ಹರಿಹರೇಶ್ವರ, ಸರಸ್ವತಿ, ಮತ್ತು ಶ್ರೀ ರಂಗನಾಥ ವಿಗ್ರಹಗಳನ್ನು ತನ್ನ ತಾಯ್ನಾಡಾದ ಡೆನ್ಮಾರ್ಕ್ ಕೋಪನೇಗೇನ್ ಅಂತರ ರಾಷ್ಟ್ರೀಯ ವಸ್ತು ಸಂಗ್ರಹಾಲಯಕ್ಕೆ ಸಾಗಿಸಲು ಲಾವೆಂಥಾಲ್ ಗೆ ಇಂಬು ನೀಡಿರಬಹುದು. ಈ ದೇವಾಲಯವು ಹೊಯ್ಸಳ ವಾಸ್ತು, ಮೂರು ಗರ್ಭಗುಡಿ ಹೊಂದಿರುವ ಫಾಮ್ನನ ಶೈಲಿ (ಉತ್ತರ ಜುವಕ್ರಾವಿಡ ಶೈಲಿ )ದೊಡ್ಡಗದ್ದ ವಳ್ಳಿಯ (ಅಭಿನವ ಕೋಲಪುರ ಎಂದು ಪ್ರಸಿದ್ದಿ ಪಡೆದಿರುವ “ಶ್ರೀ ಲಕ್ಷ್ಮೀ ದೇವಾಲಯವನ್ನು ಹೋಲುತ್ತದೆ. ಈ ದೇವಾಲಯವೂ ಇದೇ ಅವಧಿಯಲ್ಲಿ ನಿರ್ಮಿತ ಆಗಿರಬಹುದು ಎಂದು ನಿರ್ಣಯಿಸಬಹುದಾಗಿದೆ. ಈ ದೇವಾಲಯಕ್ಕೆ ಕ್ರಿ.ಶ.1313 ರಲ್ಲಿ ನೀಡಿರುವ ದಾನ ಶಾಸನ ಲಭ್ಯವಿದೆ.
ದೇವಾಲಯದ ಗರ್ಭ ಗುಡಿಯಲ್ಲಿ ಹಿಂದೆ ಇದ್ದ (ಹಾಲಿ ಕೋಪನ್ ಹೇಗೇನ್ ಸೇರಿರುವ ) ಮೂರು ಮೂಲಮೂರ್ತಿಗಳಾದ ಹರಿ – ಹರೇಶ್ವರ, ಸರಸ್ವತಿದೇವಿ,ಶ್ರೀ ರಂಗನಾಥ ಸ್ವಾಮಿ ದೇವರುಗಳ ಪಡಿಯಚ್ಚು ಆಯಾ ವಿಗ್ರಹದ ಗರ್ಭಗುಡಿಯ ಪಾಣಿ ಪೀಠ ಮತ್ತು ಬಾಗಿಲು ವಾಡದಲ್ಲಿ ಕಾಣಬಹುದಾಗಿದೆ. ಈ ದೇವಾಲಯವು ಪೂರ್ವ ಅಭಿಮುಖವಾಗಿದ್ದು, ಮಧ್ಯದ ಗರ್ಭಗೃಹದಲ್ಲಿನ ವಿಗ್ರಹದಲ್ಲಿ ಬಲಭಾಗವು ಶಿವ ಸ್ವರೂಪ. ಹಸ್ತದಲ್ಲಿ ಶಿವನ ಅಯುಧ ಢಮರು ಪಾದದಲ್ಲಿ ನಂದಿ ವಾಹನ ಇದೆ. ಇದೇ ರೀತಿ ಎಡ ಭಾಗವು ವಿಷ್ಣು ಸ್ವರೂಪ. ಹಸ್ತದಲ್ಲಿ ಚಕ್ರದ ಕೆತ್ತನೆ. ಪಾದದಲ್ಲಿ, ಗರುಡ ವಾಹನ ನಿದ್ದಾನೆ. ಈ ದೇವಾಲಯದ ವಿಗ್ರಹಗಳು ಡೆನ್ಮಾರ್ಕ್ಷ ಕೋಪನ್ ಹೇಗೇನ್ ಅಂತರ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಸೇರಿವೆ.
1900 ರ ಸುಮಾರಿಗೆ ಈ ದೇವಾಲಯದ ಮೂಲಮೂರ್ತಿಗಳೇ ಅಲ್ಲದೇ ಹಿರೇಕಡಲೂರಿನ ಶ್ರೀ ರಂಗನಾಥನ ವಿಗ್ರಹವೂ ಸೇರಿದಂತೆ ಒಟ್ಟು 41 , 35 ಗಾಡಿಗಳಲ್ಲಿ 41 ವಿಗ್ರಹಗಳನ್ನು ಕೂಡಿಕೊಂಡು ಮತ್ತು 100 ನಿರ್ವಾಹಕರ ಸಹಾಯದಿಂದ ಅರಸಿಕೆರೆಯ ಮೂಲಕ ಮಂಗಳೂರು ಬಂದರಕ್ಕೆ 6500 ಕಿಮಿ ದೂರದ ಕೋಪೆನ್ ಹೇಗನ್ ಗೆ ಹಡಗಿನಲ್ಲಿ ಸಾಗಿಸಲಾಗಿತ್ತಂತೆ.
ಈ ಸಂಗ್ರಹಾಲಯಗಳಲ್ಲಿರುವ ನಮ್ಮ ಮೂರ್ತಿಗಳನ್ನು ಸ್ವದೇಶಕ್ಕೆ ಮರಳಿ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕೇಂದ್ರ ಸರ್ಕಾರವೂ ಈ ಪ್ರಯತ್ನಕ್ಕೆ ಸಕ್ರಿಯವಾಗಿ ಸ್ಪಂದಿಸುತ್ತಿದೆ.
ಈ ದಿಕ್ಕಿನಲ್ಲಿ, “ಇಂಡಿಯಾ ಪ್ರೈಡ್ ಪ್ರಾಜೆಕ್ಟ್ (ಐಪಿಪಿ)” ಯ ಪಾತ್ರ ಪ್ರಶಂಸನೀಯವಾಗಿದೆ. ಐಪಿಪಿ ಸಂಸ್ಥೆ , ಭಾರತದಿಂದ ಕದಿಯಲಾದ ಅನೇಕ ಪ್ರಾಚೀನ ವಿಗ್ರಹಗಳ ಬಗ್ಗೆ ಕೇಂದ್ರ ಸರ್ಕಾರದ ವಿದೇಶ ವ್ಯವಹಾರಗಳ ಇಲಾಖೆಗೆ ಸೂಕ್ತ ಮಾಹಿತಿ ಒದಗಿಸುತ್ತಿದೆ. ಈ ಕೆಲಸದಲ್ಲಿ ಐಪಿಪಿ ಕಾರ್ಯಕರ್ತರುಗಳಾದ ಅನ್ಮೋಲ್ ಸಕ್ಸೇನಾ ಮತ್ತು ವಿಜಯ ಕುಮಾರ್ ಅವರಿಗೆ ಅಭಿನಂದನೆಗಳು. ಅವರ ನಾಯಕತ್ವದಲ್ಲಿ ತಮಿಳುನಾಡಿನ ಅನೇಕ ದೇವತಾ ವಿಗ್ರಹಗಳು ಸ್ವದೇಶಕ್ಕೆ ಮರಳಿ ಬಂದಿವೆ. ಇದೇ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಕೂಡ ಐಪಿಪಿ ಘಟಕ ರಚಿಸಬೇಕು. ವಿದೇಶ ಸಂಗ್ರಹಾಲಯಗಳಿಂದ ಇಂಥ ವಿಗ್ರಹಗಳನ್ನು ತಿರುಗಿ ತರುವುದು ಗೌರವಾನ್ವಿತವಾದ ವಿಷಯವಾಗಿದೆ.
ಒಂದು ವೇಳೆ ಅವುಗಳನ್ನು ತರಲಾಗದಿದ್ದರೆ ಅವುಗಳ ಸಂರಕ್ಷಣೆ ಬಗ್ಗೆ ಮುತುವರ್ಜಿ ವಹಿಸುವಂತೆ ನೋಡಿಕೊಳ್ಳಬೇಕು. ಇವು ಭವಿಷ್ಯದ ತಲೆಮಾರುಗಳಲ್ಲಿ ಪ್ರಾಚೀನ ಪರಂಪರೆ, ಕಲೆ ಹಾಗೂ ಇತಿಹಾಸದ ಪರಿಜ್ಞಾನ ಮೂಡಿಸಲು ಅತ್ಯಂತ ಸಹಕಾರಿಯಾಗುತ್ತದೆ.
ಲೇಖಕರು : ನಟರಾಜ ಪಂಡಿತ
ಆಕರ : ಹೊಯ್ಸಳ ಸ್ಕ್ರಿಪ್ಚರ್ಸ್ by S S ಶೆಟ್ಟರ್
I’ve been following your blog for quite some time now, and I’m continually impressed by the quality of your content. Your ability to blend information with entertainment is truly commendable.