ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

“ಹಲೋ ಟೀಚರ್” ಬಗ್ಗೆ

ಲೇಖಕಿ ಅನುಸೂಯ ಯತೀಶ್ ಬಹಳ ಕಕ್ಕುಲತೆಯ ಹೆಣ್ಣು ಮಗಳು ಮತ್ತು ಬಹಳ ಜವಾಬ್ದಾರಿಯುತ ಶಿಕ್ಷಕಿ ಹಾಗೂ ಗೃಹಿಣಿ. ಅವರ ತಾಯಿಯಂತಹ ಅಂತಃಕರಣಕ್ಕೆ ಅವರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಮತ್ತು ಅವರು ಕಲಿಸುತ್ತಿರುವ ಶಾಲೆಯ ಮಕ್ಕಳು ಇಬ್ಬರೂ ಸಮಾನ ಹಕ್ಕುದಾರರು. ಶಿಕ್ಷಕಿ ಯಾರು, ತಾಯಿ ಯಾರು ಎಂದು ಗೆರೆ ಎಳೆಯಲಾಗದಷ್ಟು ಮಮತೆಯ ಜೀವ ಅವರದು. ಅವರು ಕಲಿಸುವ ಶಾಲೆಯ ಮಕ್ಕಳ ಜೊತೆಗಿನ ಒಡನಾಟವನ್ನು ಒಮ್ಮೊಮ್ಮೆ ನನ್ನಲ್ಲಿ ಹಂಚಿಕೊಳ್ಳುತ್ತಿದ್ದರು. ಅದನ್ನು ಕೇಳಿದ ನನಗೆ ಈ ಟೀಚರೊಳಗಿನ ತಾಯಿ ಜೀವದ ಪರಿಚಯವಾಗಿತ್ತು.
‘ಈ ಅನುಪಮವಾದ ಅನುಭವ ಶಾಲೆಯನ್ನು ಬರಿಯ ಮಾತಲ್ಲಿ ಮುಗಿಸಬೇಡಿ, ಸರಣಿಯ ರೂಪದಲ್ಲಿ ಬರೆಯಿರಿ’ ಎಂದು ಕುಮ್ಮಕ್ಕು ನೀಡಿದ್ದೆ. ಆಗ ನಮ್ಮ ‘ಕೆಂಡಸಂಪಿಗೆ’ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ನನಗೇ ಅಚ್ಚರಿಯಾಗುವಂತೆ ಬಹಳ ಮನೋಜ್ಞವಾಗಿ ಬರೆದೇ ಬಿಟ್ಟರು. ಇವರ ಈ ಬರಹ ನನಗೇನೂ ಆಶ್ಚರ್ಯ ಉಂಟು ಮಾಡಲಿಲ್ಲ. ಏಕೆಂದರೆ ಪಕ್ಕಾ ತಾಯಿ ಹೃದಯದ ಅನುಸೂಯರಂತಹ ಬರಹಗಾರ್ತಿಯೊಬ್ಬಳು ರೂಢಿಗತವಾದ ಸಿದ್ಧಮಾದರಿಯ ಅಕಾಡೆಮಿಕ್ ನಷೆಗಳನ್ನು ಕಿತ್ತು ಬಿಸಾಕಿ ಅಂತಃಕರಣದ ಅನುಭವ ಜನ್ಯವಾದ ಗದ್ಯವನ್ನು ಬರೆದರೆ ಅದು ಹೃದಯ ಸ್ಪರ್ಶಿಯೂ ಅಮೂಲ್ಯವೂ ಆಗಬಲ್ಲದೆಂದು ನನಗೆ ಗೊತ್ತಿತ್ತು. ಅನುಸೂಯ ಈ ನಂಬಿಕೆಯನ್ನು ಸುಳ್ಳು ಮಾಡಿಲ್ಲ. ಒಂದು ಲಕ್ಷಕ್ಕೆ ಎಷ್ಟು ಸೊನ್ನೆಗಳು ಎಂಬ ಊಹೆಯಿಲ್ಲದ ಬಾಲಕಿಯೊಬ್ಬಳು ಕಪ್ಪು ಹಲಗೆಯ ತುಂಬಾ ಸಾವಿರಗಟ್ಟಲೆ ಸೊನ್ನೆಗಳನ್ನು ತುಂಬುವುದರಿಂದ ಹಿಡಿದು ಮಂಜುನಾಥ ಎಂಬ ಹೂ ಹೃದಯದ ಬಾಲಕನ ಕಥಾನಕದವರೆಗಿನ ವಿವರಗಳು ಈ ಅನುಸೂಯ ಎಂಬ ಹೆಣ್ಣು ಮಗಳು ಮುಂದೊಂದು ದಿನ ಕನ್ನಡದ ಶಕ್ತ ಗದ್ಯಗಾರ್ತಿಯಾಗಬಲ್ಲಳು ಎಂಬುದನ್ನು ಸೂಚ್ಯವಾಗಿ ಹೇಳುತ್ತಿದೆ.
ಅನುಸೂಯ ಅವರಿಗೆ ಅಭಿನಂದನೆಗಳು.

ಅಬ್ದುಲ್ ರಶೀದ್
ಸಹಾಯಕ ನಿರ್ದೇಶಕರು
ಆಕಾಶವಾಣಿ ಕೇಂದ್ರ
ಮೈಸೂರು


ಅನುಭವ ಎನ್ನುವುದು ಜೀವನದ ಹೊಳ ಹರುವನ್ನು ತಿಳಿಯಾಗಿ ಬಿಚ್ಚಿಡುವ ಭಾವಯಾನ. ಈ ಪಯಣದಲ್ಲಿ ಯಶಸ್ವಿ ಹೆಜ್ಜೆಯನ್ನೀಡುತ್ತ ವಿದ್ಯಾರ್ಥಿ ಹಾಗೂ ಗುರುಗಳ ಭಾಂದವ್ಯ ಹೇಗೆ ಹೆಣೆಯಬಹುದು , ಪ್ರೀತಿ, ವಿಶ್ವಾಸ ಹಾಗೂ ಭವಿಷ್ಯದಲ್ಲಿ ಮುನ್ನುಗ್ಗುವ ಪ್ರವೃತ್ತಿ ಕೊಡುವ ಪ್ರೇರಣೆಯೇ ಈ “ಹಲೋ ಟೀಚರ್ ” ಪುಸ್ತಕದ ತಿರುಳು. ಪ್ರತಿಯೊಂದು ಘಟನೆಗಳು ಅದರೊಡನೆ ನಡೆಯುವ ಪರಿಣಾಮ ಮನಸ್ಸಿಗೆ ಮುದ ಕೊಡುವುದಲ್ಲದೆ ಮಧುರ ಸಂಬಂಧಗಳ ಜೋಡಣೆ ನವಿರಾಗಿ ಹೆಣೆದು ಭವಿಷ್ಯದ ಆದರ್ಶ ವಿದ್ಯಾರ್ಥಿಯಾಗಿ ಬೇರು ಹಸಿರಾಗಿ ಹೂವು, ಹಣ್ಣು ಕೊಡುವುದು ಶಥ ಸಿದ್ದ. ಈ ಎಲ್ಲಾ ಅಂಶಗಳಿಂದ “ಹಲೋ ಟೀಚರ್ ” ಎಲ್ಲರಿಗೂ ಹಲೋ ಹೇಳುತ್ತೆ. ಅಭಿನಂದನೆಗಳು ಅನುಸೂಯ ಯತೀಶ್ .

ಜಯಪ್ರಕಾಶ್ ಹಬ್ಬು


ನಿಜವಾಗಿಯೂ – ಹಲೋ ಟೀಚರ್ ಕೃತಿಯು ಆಪ್ತವಾದ ಶೈಲಿಯಲ್ಲಿ ಆದರ್ಶ ಶಿಕ್ಷಕಿಯ ಅನುಭವಗಳನ್ನು ಅನಾವರಣಗೊಳಿಸಿದೆ. ಪಾಸ್ ಬುಕ್ – ನೋಟ್ ಬುಕ್ – ಚೆಕ್ ಬುಕ್ ಗಳ ಮಧ್ಯೆ ಕಳೆದು ಹೋಗುತ್ತಿರುವ ಅನೇಕ ಶಿಕ್ಷಕರ ಮಧ್ಯೆ ಇಂಥಹ ಮಾತೃಹೃದಯದ ಶಿಕ್ಷಕಿ ಇರುವುದು ನಿಜಕ್ಕೂ ಸಂತಸದ – ಅಭಿಮಾನದ ಸಂಗತಿ. ಇಲಾಖೆಗೆ ಇಂಥವರೇ ಅಮೂಲ್ಯ ಆಸ್ತಿ. ಅವರ ಬರವಣಿಗೆ ಇನ್ನಷ್ಟು ಮುಂದುವರಿಯಲಿ ಅಭಿಮಾನದ ಅಭಿನಂದನೆಗಳು.

ರಮೇಶ ಹೆಗಡೆ ಕೆರೆಕೋಣ ಶಿಕ್ಷಕರು ತೆರಕನಹಳ್ಳಿ ಶಿರಸಿ (ಉ.ಕ ಜಿಲ್ಲೆ)


ಸಂತೋಷದ ವಿಷಯ,ಕನ್ನಡ ಸಾಹಿತ್ಯ ಕೃತಿಯೊಂದು ಈ ರೀತಿ ಜನಪ್ರಿಯತೆ ಪಡೆಯುವುದು ಅಪರೂಪ…

ಕಿರಣ್ ಬಾಳಗೋಳ


ಪ್ರಕಾಶನ : ಅವ್ವ ಪುಸ್ತಕಾಲಯ
ಪುಟಗಳು : 164
ಬೆಲೆ : 200