- ಹೆಣ್ಣು - ಆಗಸ್ಟ್ 3, 2020
ಮೂವತ್ತು ವರ್ಷ ಬೇಕಾಯ್ತೇ
ನಾನು ಹೆಣ್ಣಾಗಲು!
ಹುಟ್ಟಿ ಮೂವತ್ತಾದ ಮಾತಲ್ಲ
ಆಗ ಲಿಂಗ ಪತ್ತೆಮಾಡಿ ಹೆಣ್ಣೆಂದು
ಕರೆದು ಲಂಗ ಹಾಕಿ ಬೆಳೆಸಿದ ಕತೆ
ಬೇರೆ
ಹೆಣ್ಣು ಮೈ “ನೆರೆದೆ; ದೊಡ್ಡವಳಾದೆ”
ಎಂದರು.ಏನು ಹಾಗೆಂದರೆ?
ಮದುವೆ ಮಾಡಿದರು.
ಮಗುವಾಯ್ತು, ತಾಯಿಯಾದೆ.
ಹೆಣ್ಣಾದೆನೇ?
ಎಲ್ಲ ಅರಕೆಗಳನ್ನೂ
ಹಲ್ಲು ಕಚ್ಚಿ ಸಹಿಸಿ
ಹಾಡು ಹಸೆ ಕಸೂತಿ
ಎಂದೆಲ್ಲ ಕೋಟೆ ಕಟ್ಟಿ
ಸರೀಕರೆದುರು
ಮಹಾ’ಸುಖಿ’ಯಂತೆ ನಡೆದು
‘ಮನೆ ಮಾಡಿಕೊಂಡು’
ಹೊರಟಿದ್ದಾಗ
ಈಗ ಇವನು ಬಂದಿದ್ದಾನೆ
ಶುದ್ಧ ಗೊಲ್ಲ!
ಮೊದಲ ನೋಟದಲ್ಲೇ
ಸೆರೆ ಹಿಡಿದ
ಹಾಡು ಬರೆ, ಹಾಡು ಎಂದ
ಕೊಳಲು ನನ್ನ ನುಡಿಸಿದ
ವೀಣೆಯ ಮೀಟಿದ
ನಿಜ ಹೇಳಲೇ
ತುಟಿಗೆ ಈ ತೆರನ ದಾಹ
ತುಂಬಿ ಕೊಳ್ಳುವ ರೀತಿ
ಎರಡೂ ತಿಳಿದೇ ಇರಲಿಲ್ಲ!
ಕಲಿಸಿದ.
ಹೆಣ್ಣು ಹೆಣ್ಣಾಗುವುದು
ಗಂಡು ಮುಟ್ಟಿದಾಗ!
ಎಲ್ಲಿಂದ ಬಂದ ಇವ
ಕೆಣಕುವ ಕಣ್ಣಲ್ಲೇ
ಎದೆ ಕದ್ದ
ಅದುರುವ ತುಟಿಗೆ ತುಟಿ
ಒಪ್ಪಿಸಿ ಒಡಲು ತೆರೆದು
ತುಂಬಿ ತುಂತುಂಬಿ
ಸೆಳೆದು ಸುಲಿದು
ಮೊಗೆದು ಎರೆದು
ಅರಳಿ ಒಲಿದು
ನಾನೀಗ ಹೆಣ್ಣು !
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ