ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೆಸರಿಲ್ಲದ ಕವಿತೆಗಳು

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

.
ನನ್ನ ಮತ್ತು
ದೈವತ್ವದ ನಡುವೆ
ಒಂದು ಬೆಕ್ಕು

ಅದೀಗ ಕಣ್ಣು ಮುಚ್ಚಿ
ಹಾಲು ಕುಡಿದಿದೆ
ಆಯ್ಕೆ ಎರಡೇ
ಹೊಡೆಯುವುದು
ಇಲ್ಲವೇ
ದೇವರಾಗುವುದು
*
‘ಹೊಡೆದು ದೇವರಾಗು’
ಎನ್ನುತ್ತೀರಿ ನೀವು

ಜಿಜ್ಞಾಸೆ ನಡೆದಿದೆ
ಬೆಕ್ಕು
ಹಾಲು ಕುಡಿದಿದೆ

೨.

ನಾನು ಸರಳ

ಪ್ರೀತಿಯನ್ನು ಪ್ರೀತಿಸುತ್ತ
ದ್ವೇಷವನ್ನು ದ್ವೇಷಿಸುತ್ತ

ಅವರು ಅಕಾರಣ

ಪ್ರೀತಿಯನ್ನು ದ್ವೇಷಿಸಿ
ದ್ವೇಷವನ್ನು ಪ್ರೀತಿಸಿ

ಗಣಿತದ ಪ್ರಮೇಯಗಳು
ಈಗ ದಿಕ್ಕು ತಪ್ಪಿವೆ

.
ಅವಳು ಆಕಾಶಕ್ಕೆ
ಒಲಿದವಳು ಅವನು ಮಣ್ಣಿಗೆ

ನಡುವೆ
ಬೆಂಕಿ ಗಾಳಿ ನೀರು

ಪಂಚಭೂತಗಳ
ಈ ಆಟದಲ್ಲಿ

ಒಲೆ ತಣ್ಣಗಿದೆ.