ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೊಸಾ ಬೂಟುಗಳು ಮತ್ತು ಕೊಳೆತ ಪಾದಗಳು

ಅನಂತ ಕುಣಿಗಲ್
ಇತ್ತೀಚಿನ ಬರಹಗಳು: ಅನಂತ ಕುಣಿಗಲ್ (ಎಲ್ಲವನ್ನು ಓದಿ)

ಅಬ್ಬಾ..!
ನನಗಂತು ಸಾಕಾಗಿ ಹೋಗಿದೆ
ನಿನ್ನನ್ನು ದಿನವೂ ಹೊತ್ತು ಹೊತ್ತು
ಊರ ಕೇರಿಯನೇರಿ
ಪೇಟೆಯ ಸಂತೆ ಬೀದಿಗಳನ್ನು ಸುತ್ತಿ
ಎಸಿ ಇರದ ಆಫೀಸಿನ ರೂಮಿನೊಳಗೂ
ಬಿಡುವಿಲ್ಲದೆ..
ರಾತ್ರಿಯ ತನಕ ಹೊತ್ತು ಹೊತ್ತು ಸುಸ್ತಾಗಿದೆ

ಮುಚ್ಚು ಬಾಯಿ.. ಸಾಕು..!
ನಿನ್ನನ್ನು ನನ್ನೊಳಗೆ ಇರಿಸಿಕೊಳ್ಳಲು
ನನಗೇನು ಬಹಳ ಇಷ್ಟವೆಂದುಕೊಂಡಿರುವೆಯಾ??
ಛೇ..
ಇನ್ನು ಎಷ್ಟು ದಿನ ಅಂತ ಈ ಶಿಕ್ಷೆ ನನಗೆ??
ಕೊಳೆತ ನಿನ್ನನ್ನು ಬಿಗಿ ಭದ್ರ ಮಾಡಿ
ವಾಸನೆಗೆ ಉಸಿರುಗಟ್ಟಿ
ಸಾಯುವ ಸ್ಥಿತಿಗೆ ಬಂದರೂ..
ನಿನ್ನನ್ನು ರಕ್ಷಿಸಿ-ರಕ್ಷಿಸಿ ಸಾಕಾಗಿದೆ ನನಗೆ..

ಅಯ್ಯೋ… ಸುಳ್ಳುಬುರುಕ ನೀನು
ಎಲ್ಲೋ ಬಾಕ್ಸಿನೊಳಗೆ ಅವಿತಿದ್ದ ನಿನಗೆ
ಇಡೀ ಜಗವನ್ನು ತೋರಿಸಿದ್ದೇ ತಪ್ಪು!!
ನಿನ್ನ ನಾಲಿಗೆ ಇತ್ತೀಚೆಗೆ ಉದ್ದವಾಗಿದೆ ನೋಡು
ಸ್ವತಂತ್ರನೆಂಬಂತೆ ವರ್ತಿಸಬೇಡ
ನನ್ನ ಹೊರತು ನಿನಗೆಲ್ಲಿಯ ಸ್ವತಂತ್ರ??
ಅದು ಅಸಾಧ್ಯ..

ಹ್ಹಾ… ಹ್ಹಾ…
ಎಲವೋ ಬಡವ
ಜೀವವಿಲ್ಲದೆ ಬಾಕ್ಸಿನೊಳಗಿದ್ದ ನನಗೆ
ಉಸಿರಾಡುವುದನ್ನು ಕಲಿಸಿ
ಮತ್ತೆ ಉಸಿರುಗಟ್ಟುವ ಹಾಗೆ ಮಾಡುತ್ತಿರುವ
ನಿನ್ನ ಬುದ್ಧಿಗಿಷ್ಟು… ನೀನು ನರರಾಕ್ಷಸ
ಇತರರ ಪ್ರಾಮುಖ್ಯತೆಯೇ ತಿಳಿದಿಲ್ಲ ನಿನಗೆ
ಹುಷಾರು..
ನಿನಗೆ ಸ್ವತಂತ್ರದ ಬಗ್ಗೆ ಮಾತಾಡುವ ಹಕ್ಕೇ ಇಲ್ಲ..
ಯಾಕೆಂದರೆ, ನೀನು ಸ್ವತಂತ್ರನೇ ಅಲ್ಲ!!

ಹೋಗ್ಲಿ ಬಿಡು..
ಹೇಳಿ ಹೊಡೆಸಿಕೊಂಡ ಹಾಗಾಗಿದೆ ನನ್ನ ಪರಿಸ್ಥಿತಿ
ಎಲ್ಲರೂ ಮೆಚ್ಚುವ ಹಾಗೆ ಮಾಡಿದೆನಲ್ಲಾ
ಅದರಿಂದೇನು ಪ್ರಯೋಜನ??
ನಿನಗೆ ಆತ್ಮ ಗೌರವವೆಂಬುದೇ ತಿಳಿದಿಲ್ಲ..

ನಿಲ್ಲಿಸು ನಿನ್ನ ಒಣಮಾತುಗಳನ್ನು
ತುಳಿಸಿಕೊಂಡು ಕತ್ತು ಹಿಸುಕಿಕೊಂಡ ಹಾಗಾಗಿದೆ
ನನ್ನ ಪಾಡು ನಿನಗೇಕಲ್ಲವೇ??
ನೀನು ಅಂದುಕೊಂಡಿದ್ದೇ ಸರಿ ಎಂಬ ಭ್ರಮೆ ನಿನಗೆ
ಸ್ವಲ್ಪವೂ ಗುಣಾತ್ಮಕ ಯೋಚನೆ ಇಲ್ಲ
ನಿನ್ನ ಮೈಯ್ಯ ಮೇಲಿನ ಮಚ್ಚೆಗಳನ್ನು ಮುಚ್ಚಿಕೊಳ್ಳಲು
ಕಲ್ಲು-ಮುಳ್ಳುಗಳಿಂದ ಕಾಪಾಡಿಕೊಳ್ಳಲು
ಬಿಸಿಲು-ಚಳಿಯಿಂದ ಬಚಾವಾಗಲು ಬಳಸಿಕೊಂಡು
ದಿನವೂ ಮೂಲೆಗೆ ಬಿಸಾಕುವಾಗ
ಕೃತಜ್ಞತೆಯೂ ಸಲ್ಲಿಸದ ನೀನು..
ನಿಜಕ್ಕೂ ನನಗೆ ಯಜಮಾನನೇ..
ಆದರೆ, ನನ್ನ ಸ್ವತಂತ್ರವನ್ನು ಕಿತ್ತುಕೊಳ್ಳುವಷ್ಟಲ್ಲ!!

“ತಪ್ಪಾಯಿತು ಕ್ಷಮೆಯಿರಲಿ”
ಇಬ್ಬರ ಸಂಧಾನದ ಕೊನೇ ಮಾತು..