ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗರುಡ ಗಮನ ; ವೃಷಭ ವಾಹನ

ಅನಂತ ಕುಣಿಗಲ್
ಇತ್ತೀಚಿನ ಬರಹಗಳು: ಅನಂತ ಕುಣಿಗಲ್ (ಎಲ್ಲವನ್ನು ಓದಿ)

ಬೈಕ್ ಮಳೆಯಲ್ಲಿ ನೆನೆದು ಸ್ಟಾರ್ಟ್ ಆಗದ ಕಾರಣ, ಊರಿಂದ ನಗರದ ಕೆಲಸಕ್ಕಾಗಿ ಬಸ್ಟ್ಯಾಂಡಿನ್ಯಾಗ ನನ್ನ ಗೆಳೆಯ ಕಾದು ಕೂತಿದ್ನಂತೆ. ಬಸ್ ಬರಬೇಕಿದ್ದ ಸಮಯಕ್ಕೆ ಆ ದಾರಿಯಲ್ಲಿ ಒಂದು ಆರ್.ಎಕ್ಸ್ ಬೈಕ್ ಬರುವ ಸದ್ಧಾಯಿತಂತೆ. ನನ್ನ ಗೆಳೆಯ ಉತ್ಸಾಹಿತನಾಗಿ ಬಸ್ಟ್ಯಾಂಡಿನಿಂದ ಹೊರಬಂದು ಆರ್.ಎಕ್ಸ್ ಬೈಕಿನ ಮೇಲೆ ಕುಳಿತವನ ಕಾಲು ನೋಡಿದನಂತೆ. ಆತನ ಕಾಲುಗಳಲ್ಲಿ ಚಪ್ಪಲಿಯೂ ಇರಲಿಲ್ಲ ರಕ್ತವೂ ಇರಲಿಲ್ಲ. ಇಷ್ಟನ್ನು ನನ್ನೊಂದಿಗೆ ಹೇಳುತ್ತಾ ತನ್ನ ಬುದ್ಧಿಮತ್ತೆಯ ಬಗ್ಗೆ ತಾನೇ ಛೇಡಿಸಿಸಿಕೊಂಡು ನಗುತ್ತಿದ್ದ. ಈ ರಕ್ತದ ಚಪ್ಪಲಿಯ ಕಾಲುಗಳ ಬಗ್ಗೆ ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಹೆಮ್ಮೆಯ ಚಲನಚಿತ್ರ ‘ಗರುಡ ಗಮನ ವೃಷಭ ವಾಹನ’ ನೋಡಿದವರಿಗೆ ಅರ್ಥವಾಗಿರುತ್ತದೆ. ಒಬ್ಬ ನೋಡುಗನಿಗೆ ಒಂದು ಚಿತ್ರದಲ್ಲಿನ ಪಾತ್ರ ಬಳಸುವ ಬೈಕಿನ ಶಬ್ಧ ಬಂದಕೂಡಲೆ ಅದೇ ಪಾತ್ರ ಕಣ್ಮುಂದೆ ಬರುತ್ತದೆಂದರೆ, ಅಲ್ಲಿಗೆ ಆ ಚಿತ್ರ ಖಂಡಿತ ಗೆದ್ದಿದೆ ಎಂದರ್ಧ. ರಾಜ್.ಬಿ ಶೆಟ್ಟಿ ಎಂಬ ವರ್ಸಟೈಲ್ ನಟ ಅದ್ಭುತ ನಿರ್ದೇಶನದ ಜವಾಬ್ದಾರಿ ಹೊತ್ತು ನಿರ್ಮಿಸಿದ ಚಿತ್ರ ಇದಾಗಿದ್ದು, ರಿಷಬ್ ಶೆಟ್ಟಿ, ಗೋಪಾಲ್ ದೇಶಪಾಂಡೆ ಅವರಂತಹ ಮೇರು ತಾರಾಗಣ ಕೈಜೋಡಿಸಿದೆ. ಇಂಥಾ ಹಸಿ ಕಥೆಗಳನ್ನು ಕೇಳಿದ ತಕ್ಷಣ ದೂರ ಸರಿಯುವ ಕೆಲವು ನಿರ್ಮಾಪಕರ ಹೊರತುಪಡಿಸಿ, ಹಣ ಹೂಡಲು ಮುಂದಾದ ಲೈಟರ್ ಬುದ್ಧ ಹಾಗೂ ಕಾಫಿ ಗ್ಯಾಂಗ್ ಫ್ರೊಡಕ್ಷನ್ ಅವರ ಸಾಹಸವನ್ನು ಮೆಚ್ಚಲೇಬೇಕು.

ನಾನು ‘ಪರ್ಫೂಮ್’ ಎಂಬ ಚಲನಚಿತ್ರವನ್ನು ನೋಡುವಾಗ ಕ್ಷಣಕ್ಷಣಕ್ಕೂ ರೋಮಾಂಚನಕಾರಿಯಾಗಿ ಮುಂದಿನ ದೃಶ್ಯಗಳಲ್ಲಿ ಘಟಿಸುತ್ತಿದ್ದ ಘಟನೆಗಳ ಬಗ್ಗೆ ನಿರೀಕ್ಷೆಯಿಂದ ಕಾದಿರುತ್ತಿದ್ದೆ. ಆಥರದ ಒಂದು ವಿಶಿಷ್ಟ ಅನುಭವ ಕನ್ನಡ ಚಲನಚಿತ್ರವೊಂದರಲ್ಲಿ ಸಿಗುತ್ತದೆ ಎಂದರೆ ಅದು ನಮ್ಮ ಭಾಗ್ಯವೇ ಸರಿ. ಹಾಲಿವುಡ್ ಮಟ್ಟಕ್ಕೆ ಚಲನಚಿತ್ರಗಳನ್ನು ತಯಾರಿಸುವವರು ನಮ್ಮೊಡನೆಯೇ ಇದ್ದಾರೆ ಎಂದರೆ ನಿಜಕ್ಕೂ ಶ್ಲಾಘನೀಯ. ಇತ್ತೀಚೆಗೆ ಸುಮಾರು ಪ್ರೇಕ್ಷಕರು ಮಲಯಾಳಂನ ಕೆಲವು ಚಲನಚಿತ್ರಗಳನ್ನು ಸವಿದು ಕನ್ನಡಚಿತ್ರರಂಗದಲ್ಲಿ ಇಂತಹ ಚಿತ್ರಗಳು ಖಂಡಿತ ಬರುವುದಿಲ್ಲ ಹಾಗೂ ಆಥರದ ಚಿತ್ರಗಳನ್ನು ಮಾಡಿ ಸಕ್ಸಸ್ ಆಗುವ ಧೈರ್ಯ ಯಾರಿಗೂ ಇಲ್ಲ ಎಂಬ ನಿರ್ಧಾರಕ್ಕೆ ಬರುವಷ್ಟರಲ್ಲಿ ಗರುಡ ಗಮನದ ಟ್ರೇಲರ್ ಎಲ್ಲರ ಗಮನ ಸೆಳೆಯಿತು. ಇದೀಗ ಚಿತ್ರ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಾ ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತಿದೆ.

ಸುಂದರ ಹಾಗೂ ಸರಳ ಕಥಾಹಂದರ ಹೊಂದಿದ್ದ ಒಂದು ಮೊಟ್ಟೆಯ ಕಥೆಯಿಂದ ಶುರುವಾದ ರಾಜ್ ಬಿ ಶೆಟ್ಟಿಯವರ ಪಯಣ ಈಗ ಉಬ್ಬೇರಿಸಿ ನೋಡುವಂಥಾ ಚಿತ್ರಕಥೆಯ ಮೂಲಕ ಮತ್ತೊಮ್ಮೆ ನಾಯಕನಾಗಿ, ಖಳನಾಯಕನಾಗಿ ಗ್ರ್ಯಾಂಡ್ ಎಂಟ್ರಿ ಪಡೆದಿದ್ದಾರೆ. ಒಳ್ಳೆಯ ಚಿತ್ರಗಳನ್ನು ಪ್ರೇಕ್ಷಕರು ಕೈಬಿಡುವುದಿಲ್ಲ ಎಂಬ ಭರವಸೆ ಎಲ್ಲರಲ್ಲೂ ಮತ್ತೆ ಚಿಗುರುವಂತೆ ಗರುಡ ಗಮನ ವೃಷಭ ವಾಹನ ಎಲ್ಲರ ಮನಗಳನ್ನು ಹೊಕ್ಕುತ್ತಿದೆ. ಒಬ್ಬನದು ಗರುಡ ಪಕ್ಷಿಯಂತ ತೀಕ್ಷ್ಣವಾದ ಗಮನಿಸುವಿಕೆ, ಇನ್ನೊಬ್ಬನದು ವೃಷಭದಂತ ದಿಟ್ಟ ಹೆಜ್ಜೆ. ಒಬ್ಬರನ್ನೊಬ್ಬರು ಬಿಟ್ಟುಕೊಡಲಾರದೆ ಕೊನೆಗೆ ತಮಗೆ ತಾವೇ ಶತ್ರುಗಳಂತಾಗಿ ತಮ್ಮ ಅಳಿವನ್ನು ತಾವೇ ನಿಶ್ಚಯಿಸಿಕೊಳ್ಳತ್ತಾರೆ. ಇದು ಫ್ಯಾಮಿಲಿ ಕೂತುಕೊಂಡು ನೋಡುವಂತಹ ಚಿತ್ರ ಮಾತ್ರ ಅಲ್ಲ. ಆದರೆ ಖಂಡಿತ ಎಲ್ಲರೂ ನೋಡುವಂತಾ ಚಿತ್ರ. ವಿಭಿನ್ನ ಅನುಭವ ಹಾಗೂ ಮನರಂಜನೆ ಬಯಸುವವರು ಈ ಚಿತ್ರವನ್ನು ಮಿಸ್ ಮಾಡ್ಕೊಳ್ಳಬಾರದು. ನೋಡುಗರನ್ನು ಕೂತಿರುವ ಸೀಟಿನ ತುದಿಯವರೆಗೂ ತಂದು ಬೀಳಿಸುವ ತಾಕತ್ತು ಈ ಚಿತ್ರಕ್ಕಿದೆ. ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಹಣ ಎಲ್ಲರ ಕಿವಿಯಲ್ಲಿ ಸದಾ ಗುನುಗುತ್ತವೆ. ನಾಯಕಿಯೇ ಇಲ್ಲದೆ, ಯಾವ ದೊಡ್ಡ ಸೆಟ್ ಇಲ್ಲದೆ, ಪಾತ್ರಗಳಲ್ಲಿ ವಿಜೃಂಭಣೆ ಇಲ್ಲದೆ, ವಾಸ್ತವಿಕತೆಯನ್ನು ಹೇಳುವ ಎಲ್ಲಾ ದೃಶ್ಯಗಳು ನಮಗೆ ಹತ್ತಿರದಿಂದ ಕಾಣುತ್ತವೆ. ರಂಗಿತರಂಗ, ಗುಳ್ಟು, ತಿಥಿ, ರಾಜಕುಮಾರ, ಆಪರೇಷನ್ ಅಲಮೇಲಮ್ಮ, ಲೂಸಿಯಾ, ಬೆಲ್ ಬಾಟಂ ಕವಲುದಾರಿ, ಉಗ್ರಂ, ಉಪ್ಪಿ-2 ಚಿತ್ರಗಳಂಥ ಸರ್ವಕಾಲಿಕ ಚಿತ್ರಗಳ ಸಾಲಿಗೆ ಸೇರುವ ಈ ಚಿತ್ರ ಸಧ್ಯಕ್ಕೆ ಅಕ್ಕಪಕ್ಕದ ಚಲನಚಿತ್ರರಂಗದವರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಎಲ್ಲಾ ಭರವಸೆಗಳನ್ನು ಕೊಟ್ಟಿದೆ.

ನಿರ್ದೇಶಕನಾದವನು ಪ್ರತೀ ದೃಶ್ಯಕ್ಕೂ ಆಡಿಯನ್ಸ್ ಪಲ್ಸ್ ಅನ್ನು ಲೆಕ್ಕಹಾಕಿ ತಾಳೆ ನೋಡುವ ಕಲೆಯನ್ನು ಕಲಿತಿರಬೇಕು. ಆ ಕಲೆಯನ್ನು ರಾಜ್ ಬಿ ಶೆಟ್ಟಿ ಕರಗತಮಾಡಿಕೊಂಡಿದ್ದಾರೆ. ಸೈಕಾಲಜಿ ಹೇಳುವ ಕೆಲವು ದೃಶ್ಯಗಳಂತೂ ಸೂಕ್ಷ್ಮ ನೋಡುಗರನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಬಾಲ ನಟರೂ ಕೂಡ ಅಷ್ಟೇ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಗೆಳೆತನದ ಮಹತ್ವ ಸಾರುತ್ತಾ, ಬಾಲ್ಯದ ನೆನಪುಗಳೊಟ್ಟಿಗೆ, ತಮ್ಮ ತಮ್ಮಲ್ಲೇ ಭಾವೈಕ್ಯತೆ ಒಡೆದುಕೊಂಡು ತಾನು ತನ್ನ ಆತ್ಮಕ್ಕೆ ಇದಿರಾಗುವಂತೆ ತೊಡೆ ತಟ್ಟಿ ನಿಂತು ಕೊನೆಯಲ್ಲಿ ಕತ್ತಿ, ಚೂರಿ, ಗನ್ ಹಿಡಿದವರ ಕಥೆ ಇಷ್ಟೇ ಎಂದು ಹೇಳುವ ಮೂಲಕ ಪ್ರಬಲವಾದ ಕ್ಲೈಮ್ಯಾಕ್ಸ್ ಕಟ್ಟಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಒಂದು ಸದಭಿರುಚಿಯ ಚಿತ್ರದಲ್ಲಿರಬೇಕಾದ ಎಲ್ಲಾ ಅಂಶಗಳೂ ಇಲ್ಲಿವೆ. ಹೀರೋ ಲುಕ್ ಇಲ್ಲ, ಹೇರ್ ಸ್ಟೈಲ್ ಇಲ್ಲ, ಸಾಂಗು-ಫೈಟು ಏನೇನೂ ಇಲ್ಲ. ಆದ್ರೂ ಕೊಡುವ ಕಾಸಿಗೆ ತೆರೆಯ ಮೇಲೆ ಡಬಲ್ ಮನರಂಜನೆ ಬಡಿಸುತ್ತಾರೆ. ಹೋಗಿ ಒಮ್ಮೆ ಚಿತ್ರಮಂದಿರದಲ್ಲಿ ಚಿತ್ರ ನೋಡಿಕೊಂಡು ಬನ್ನಿ.