ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜ್ಯೋತಿ ಗಾಂವ್ಕರ್
ಇತ್ತೀಚಿನ ಬರಹಗಳು: ಜ್ಯೋತಿ ಗಾಂವ್ಕರ್ (ಎಲ್ಲವನ್ನು ಓದಿ)

ಹಳೆಯ ಕ್ಯಾಲೆಂಡರ್ ನಿಧಾನ ಮಗ್ಗಲು ಬದಲಿಸಿದೆ.
ಹೊಸ ವರ್ಷವೊಂದು ಆಕಳಿಸುತ್ತ ಕಣ್ಬಿಟ್ಟು ಹೊಸ ಬೆಳಗನ್ನು ನೋಡುತ್ತದೆ. ಹೊಸ ವರ್ಷದ ಮೆಸೇಜ್‌ಗಳು ಎಗ್ಗು ಸಿಗ್ಗಿಲ್ಲದೇ ಎಲ್ಲರ ಮೊಬೈಲ್ ಲ್ಲಿ ಬಂದು ಜಮೆಯಾಗುತ್ತಿವೆ.
ಹ್ಯಾಪಿ ನ್ಯೂ ಇಯರ್!

ಹೊಸ ವರ್ಷದ ಸ್ವಾಗತಕ್ಕೆಂದು ರಾತ್ರಿ ಹನ್ನೆರಡರಿಂದ ಬೆಳಗಿನ ಜಾವದವರೆಗೂ ಬಾರು, ಪಬ್ಬುಗಳಲ್ಲಿ ಪಾರ್ಟಿ ಹಾಲ್‌ಗಳಲ್ಲಿ ಕುಡಿದು ಕುಣಿದು ಬಂದು, ಮನೆಗೆ ಬಂದು ಕುಸಿದು ಮಲಗಿದವರಿಗೆಲ್ಲ, ಜನವರಿ ಒಂದರ ಹೊಸ ಸೂರ್ಯ ನೆತ್ತಿಯ ಮೇಲೆ ಬಂದಿರುವದರ ಅರಿವೇ ಇಲ್ಲದೆ, ಹೊಸ ವರ್ಷದ ಮೊದಲ ದಿನ ಯಾವತ್ತಿಗಿಂತಲೂ ಸಪ್ಪೆಯಾಗಿ ಕಳೆದೇ ಹೋಗುತ್ತೆ . ಹೊಸ ವರ್ಷವೆನ್ನುವದು ಒಂದೆರಡು ದಿನ, ವಾರ ಕಳೆಯುವ ಹೊತ್ತಿಗೆ ಮತ್ತೆ ಹಳತಾಗಿ ಕೂತುಬಿಡುತ್ತೆ. ಎಲ್ಲಾದರೂ ದಿನಾಂಕದ ಜೊತೆ ವರ್ಷವನ್ನೂ ಬರೆಯುವ ಸಂದರ್ಭದಲ್ಲಿ ಮಾತ್ರ ಸ್ವಲ್ಪ ದಿನ ಅಭ್ಯಾಸಬಲದಿಂದ ತಪ್ಪಾಗಿ ಹಳೆಯ ವರ್ಷವನ್ನೇ ಬರೆದು .”.ಓಹ್ ಇಯರ್ ಚೇಂಜ್ ಆಗಿದೆ ಅಲ್ವಾ” ಅಂತ ತಿದ್ದುಪಡಿ ಮಾಡುವ ವಿಷಯಕ್ಕೆ ಮಾತ್ರ ನಾವು ಹಳೆಯ ವರ್ಷವನ್ನು ಸ್ವಲ್ಪ ದಿನ ಮಿಸ್ ಮಾಡ್ಕೊತೀವಿ.

ಹೌದು ಈ “ಹೊಸತು” ಎನ್ನುವ ಸಂಭ್ರಮವೇ ಹಾಗೆ ..
ಹೊಸ ವಸ್ತುಗಳು , ಹೊಸ ಮನೆ , ಹೊಸಾ ಸಂಬಂಧಗಳು , ಹೊಸ ಹೊಸ ಸ್ನೇಹ , ಹೊಸಾ ಡ್ರೆಸ್ಸು , ಹೊಸಾ ಟೀಚರು, ಹೊಸ ಆಫೀಸ್ , ಹೊಸ ಗೆಳತಿ, ಹೊಸ ಉದ್ಯೋಗ, ಆಹಾ …ಹೊಸದರಲ್ಲಿ ಅದೇನು ಹೊಸತನ, ಅದೆಷ್ಟು ಕುತೂಹಲ, ಅದೆಷ್ಟು ಆತುರ, ಕಾತರ..! ಅಷ್ಟೇ ಬೇಗ ಎಲ್ಲವೂ ಹಳತಾಗಿ ಮತ್ತೆ ಹೊಸತನದತ್ತ ತುಡಿಯುವ ಹುಚ್ಚು ಮನಸ್ಸು …! ಮೂರು ತಿಂಗಳ ಹಿಂದೆ ಮೂರು ಸಾವಿರ ಕೊಟ್ಟು ತಂದ ಹೊಸಾ ಡ್ರೆಸ್ಸು ಒಮ್ಮೆ ಹಾಕಿ ತೆಗೆಯುವ ಹೊತ್ತಿಗೆ ಮಗಳು ಹಳತಾಯ್ತು ಅನ್ನುತ್ತಾಳೆ. ಆರು ತಿಂಗಳ ಹಿಂದೆ ತಂದ ಮೊಬೈಲ್ ಈಗ ಓಲ್ಡ್ ವರ್ಷನ್ ಆಯ್ತು ಅಂತ ಮಗ ಗೊಣಗುತ್ತಾನೆ. ಅರೇ ಅಷ್ಟು ಬೇಗ ಹಳತಾಗಿದ್ದು ಹೆಂಗೆ ..? ಅಂತ ಯೋಚಿಸಿದರೆ ಎಷ್ಟೋ ಸಲ ಉತ್ತರವಿರಲ್ಲ ಅಲ್ವಾ ? ಹಳತಾಗಿದ್ದು ಡ್ರೆಸ್ ಅಲ್ಲ ಮೊಬೈಲ್ ಅಲ್ಲ ..ನಮ್ಮ ಮನಸ್ಥಿತಿ ಅಷ್ಟೇ. ಬದಲಾಗುತ್ತಿರುವ ನಾಗರಿಕತೆಯ ನಡುವೆ ಯೋಚನೆಗಳು, ಮನಸ್ಸುಗಳು , ಭಾವನೆಗಳೂ ಬದಲಾಗುತ್ತಿವೆ . ನಿರಂತರವಾಗಿ ಹೊಸತನಕ್ಕೆ ತುಡಿಯುವ ಮನುಷ್ಯನ ಮನಸ್ಸನ್ನು ನೋಡಿಯೇ ಈಗಿನ ಆಧುನಿಕ ಕಂಪನಿಗಳು ದಿನಕ್ಕೊಂದು ಹೊಸಾ ಟ್ರೆಂಡ್ ಹೊಸಾ ವರ್ಷನ್ ಬಿಡುಗಡೆ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೇನೋ ಅನ್ಸುತ್ತೆ . ಮೊದಲೆಲ್ಲ ಹರಿದ ಚಪ್ಪಲಿ, ಮುರಿದ ಛತ್ರಿಯನ್ನೆಲ್ಲ ಪೇಟೆಗೆ ಒಯ್ದು ರಿಪೇರಿ ಮಾಡಿಸಿಕೊಂಡು ಬರುತ್ತಿದ್ದೆವು. ಹೊಲಿಗೆ ಬಿಟ್ಟೋದ ಲಂಗಕ್ಕೆ ಸೂಜಿಯಿಂದ ಅಮ್ಮ ಕೈಹೊಲಿಗೆ ಹಾಕಿ ಕೊಡುತ್ತಿದ್ದಳು. ಬಟನ್ ಕಿತ್ತೋದ ಫ್ರಾಕಿಗೆ ಪಿನ್ನು ಸಿಕ್ಕಿಸ್ಕೊಂಡು ಶಾಲೆಗೆ ಹೋಗುತ್ತಿದ್ದೆವು. ಹಳೆಯ ಕಾಟನ್ ಸೀರೆಯನ್ನೇ ಅದೆಷ್ಟು ವರ್ಷ ಹೊಸದರಂತೇ ಮದುವೆಗೆಲ್ಲ ಉಡುತ್ತಿದ್ದಳು ಅಮ್ಮ ..ಒಮ್ಮೆ ತೊಳೆದು ಕೆಂಡದ ಇಸ್ತ್ರಿ ಪೆಟ್ಟಿಗೆಯಲ್ಲಿ ನೀಟ್ ಆಗಿ ಇಸ್ತ್ರಿ ಮಾಡುತ್ತಿದ್ದಂತೇ ಅಪ್ಪನ ಹಳೆಯ ಶರ್ಟು ಇನ್ನಷ್ಟು ಹೊಸತಾಗಿ ನಳನಳಿಸುತ್ತಿತ್ತು .ಎಲ್ಲ ವಸ್ತುವನ್ನೂ ರಿಪೇರಿ ಮಾಡಿಸಿಕೊಂಡು ಪೂರ್ತಿ ಹಳತಾಗುವವರೆಗೂ ಉಪಯೋಗಿಸುತ್ತಿದ್ದ ಆ ದಿನಗಳಲ್ಲಿ ವಸ್ತುವಿನ ಜೊತೆಗೂ ಕೂಡಾ ನಮಗೆ ಒಂದು ರೀತಿಯ ಬಾಂಧವ್ಯವಿರುತ್ತಿತ್ತು …ಆದರೆ ಈಗ ವಸ್ತುವಿನ ಜೊತೆಗೊಂದೇ ಅಲ್ಲ, ವ್ಯಕ್ತಿಗಳ ಜೊತೆಗಿನ ಬಾಂಧವ್ಯವೂ ಅಷ್ಟೇ ಬೇಗ ಹಳತಾಗಿ ಹೊಸತನ ಕಳೆದುಕೊಳ್ಳುತ್ತಿರುವದು ವಿಪರ್ಯಾಸ ! ಚೆಂದದ ಹಳೆಯದ್ಯಾವುದೂ ಈಗ ಮೊದಲಿನಂತೇ ಇಲ್ಲ ಅನ್ನುವದು ಒಮ್ಮೆ ನಾವೇ ನಡೆದು ಬಂದ ದಾರಿಯನ್ನೊಮ್ಮೆ ಹಿಂತಿರುಗಿ ನೋಡಿದರೆ ಅರಿವಾದೀತು . ನಮ್ಮ ಬಾಲ್ಯದ ಜೊತೆಗೆ ಮಕ್ಕಳ ಬಾಲ್ಯವೂ ಮುಗಿದೇ ಹೋಯ್ತಲ್ವಾ ?

ಮುರಿದ ಬಳಪಕ್ಕೆ , ಹರಿದ ಹಾಳೆಗೆ ಬಿಕ್ಕುತ್ತಿದ್ದ ನಾವು, ಮನಸ್ಸು ಮುರಿದವರ ನೆನೆದು ನಕ್ಕುಬಿಡುವಷ್ಟು ಪ್ರಬುದ್ಧರು ಈಗ ..ಕ್ಯಾಲೆಂಡರ್ ನಂತೇ ಬದುಕು ,ಭಾವನೆ, ಮತ್ತು ಬವಣೆಗಳೂ ಬದಲಾಗುತ್ತಲೇ ಇದೆ . ಜೋಡಣೆ, ಪರಿವರ್ತನೆ, ವಿಂಗಡಣೆ, ವಿಶ್ಲೇಷಣೆ ನಿರಂತರ ನಡೆಯುತ್ತಲೇ ಇದೆ. ಚಿಕ್ಕದಿರುವದೆಲ್ಲ ದೊಡ್ಡದಾಗಿ ದೊಡ್ಡದಿರುವದು ಮರೆತೇ ಹೋಗಿ, ಹೊಸದು ಬಂದು ಹಳತಾಗಿ .. ಹಳೆಯದೆನ್ನುವದು ಹಳಸೇ ಹೋಗಿ ಕಾಲಚಕ್ರದ ತಿರುಗುವಿಕೆಯಲ್ಲಿ ಬದಲಾಗುತ್ತಿದ್ದೇವೆ ನಾವುಗಳೂ .. ಹಳೆಯ ನೋವೊಂದೇ ಅಲ್ಲ ನಲಿವುಗಳೂ ಬದಲಾಗುತ್ತಿದೆ . ಈ ಬದುಕೆನ್ನುವ ಹೊಸತನದ ಅರಸುವಿಕೆಗೆ ಬದಲಾವಣೆ ಎನ್ನುವದು ಸಲೀಸಾಗಿ ಒಗ್ಗಿಬಿಡುತ್ತದೆ. ಹಳೆಯದರ ಬಗ್ಗೆ ಅದೇನೋ ಹಳಸಿಕೆಯ ಭಾವ . ಹೊಸ ವಸ್ತು ಬೇಕು, ಹೊಸ ಸ್ನೇಹ ಬೇಕು, ಹೊಸ ಸಂಬಂಧ ಬೇಕು. ಹೊಸ ಹೊಗಳಿಕೆಗಳು ಬೇಕು , ಹೊಸದಾದ ಯೋಜನೆ ಯೋಚನೆ ..ಹೊಸ ವರ್ಷ , ವರ್ಷನ್ನು ಎಲ್ಲವೂ ಬೇಕು …ಎಲ್ಲರೂ ಹೊಸದಾಗಿ ಬದಲಾಗಬೇಕು ದಿನದಿನವೂ ಅಪ್ಡೇಟ್ ಆಗಿ ಎಲ್ಲರಿಗಿಂತ ಮುಂದೆ ಇರ್ಬೇಕು … ಆದರೆ ಅದೆಷ್ಟೋ ವರ್ಷಗಳಿಂದ ತಾನೇ ಸಾಕಿಕೊಂಡು ಬಂದ ತನ್ನದೇ ಕೆಟ್ಟ ಚಾಳಿಗಳು, ಚಟಗಳು, ತಪ್ಪುಗಳು, ಬಲಹೀನತೆಗಳು , ಮಾತ್ರ ಮನುಷ್ಯನಿಗೆ ಹಳೆಯದೇ ಬೇಕು ….”ಹೊಸ ವರ್ಷದಿಂದ ಹೆಂಗೆ ಬದಲಾಗುತ್ತೇನೆ ನೋಡು” ಎನ್ನುತ್ತ ತನ್ನದೇ ಹಳೆಯ ಬಲಹೀನತೆಗಳನ್ನು, ತಪ್ಪುಗಳನ್ನು ಮೆಟ್ಟಿ ನಿಲ್ಲಲು ಶಪಥ ಗೈಯುವ ನಾವುಗಳು ಹೊಸ ವರ್ಷ ಬಂದು ಎರಡೇ ದಿನದಲ್ಲಿ ಮತ್ತದೇ ಹಳೆಯ ಹಳವಂಡದ ಬದುಕಿಗೆ ಪಕ್ಕಾಗಿಬಿಡುತ್ತೇವೆ…ಅಲ್ವಾ ? “ಬದಲಾಗುವದು ಕ್ಯಾಲೆಂಡರ್ ಅಷ್ಟೇ ಬಿಡು …ಬದುಕಲ್ಲ ” ಎನ್ನುವ ಒಣ ವೇದಾಂತದ ಮಾತಿನೊಂದಿಗೆ ಮತ್ತದೇ ಹಳೆಯ ಚಾಳಿಗಳ ಜೊತೆಗೇ ಬದುಕು ಸವೆಸಿಬಿಡುತ್ತೇವೆ ..ಹಳೆಯ ಕೆಟ್ಟತನಗಳು, ಬಲಹೀನತೆಗಳು ಮಾತ್ರ ಹೊಸ ವರ್ಷ ಬಂದರೂ ಬದಲಾಗುವದೇ ಇಲ್ಲ ಆದರೆ ಒಮ್ಮೊಮ್ಮೆ ಹಳೆಯ ಒಳ್ಳೆಯದನ್ನೆಲ್ಲ ಮರೆತು ಹೊಸ ವರ್ಷದ ಹೊಸತನಕ್ಕೆ ಸಲೀಸಾಗಿ ಒಗ್ಗಿಬಿಡುತ್ತೇವೆ.

ಹಳೆಯ ಒಳ್ಳೆಯದನ್ನು ,ಖುಷಿಯನ್ನು ಹೊಸ ವರ್ಷಕ್ಕೂ ಉಳಿಸಿಕೊಳ್ಳೋಣ , ಹಳೆಯ ಕೆಟ್ಟದ್ದೆಲ್ಲ ಸುಟ್ಟು ಹಾಕಿ ಹೊಸ ವರ್ಷವನ್ನು ಹೊಸದಾಗಿ ಸ್ವಾಗತಿಸೋಣ ..
ನಗಿಸಲು ಸಾಧ್ಯವಾಗದಿದ್ದರೂ ಸರಿ ನೋವಿಗೆ ಕಾರಣವಾಗದಿರೋಣ …

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು