- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಯಾವತ್ತೂ ಜಗತ್ತಿನಲ್ಲಿ ಇರುವಿಕೆ ಮತ್ತು ಇಲ್ಲದಿರುವಿಕೆಗಳ ಕುರಿತಾಗಿನ ಅಭಿಪ್ರಾಯಗಳು ಪ್ರತಿ ಸ್ತರದಲ್ಲೂ ಇರುವಂಥದ್ದು. ಒಬ್ಬರು ‘ಇದೆ’ ಎಂದರೆ, ಇನ್ನೊಬ್ಬರು ‘ಇಲ್ಲ’ ಅನ್ನುತ್ತಾರೆ, ಇವುಗಳ ಜೊತೆ ಇನ್ನು ಕೆಲವರು ‘ಗೊತ್ತಿಲ್ಲ’ ಅನ್ನುತ್ತಾರೆ. ಈ ಮೂರನ್ನೇ ಆಸ್ತಿಕ ವಾದ, ನಾಸ್ತಿಕ ವಾದ ಹಾಗೂ ಅಜ್ಞೇಯತಾ ವಾದ ಎಂದು ಕರೆಯಲಾಗುತ್ತದೆ. ಈ ಮೂರೂ ವಾದಗಳು ದೇವರ ಅಸ್ತಿತ್ವದ ಕುರಿತಾಗಿನ ಭಿನ್ನ ಅಭಿಪ್ರಾಯಗಳು. ಆಸ್ತಿಕ ನಂಬಿಕೆಗಳನ್ನು ಅನುಸರಿಸುವವರು ಧರ್ಮದ ಚೌಕಟ್ಟಿನೊಳಗೆ ಬದುಕಲಾರಂಭಿಸಿದರು, ಅದರಲ್ಲಿನ ಪಾಪ ಪುಣ್ಯಗಳ ಲೆಕ್ಕಾಚಾರದಲ್ಲೂ ಪಾಲುದಾರರಾದರು. ಹಾಗೆಯೇ ಯಾವುದೋ ಒಂದು ಶಕ್ತಿಯ ಆರಾಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅವುಗಳೆಲ್ಲದರ ಫಲವೇನೋ ಎಂಬಂತೆ ಹಲವು ಕಲಾ ಪ್ರಕಾರಗಳು, ವಾಸ್ತುಶಿಲ್ಪಗಳು ಇತ್ಯಾದಿ ಇತ್ಯಾದಿಗಳು ವಿಕಸನಗೊಂಡವು. ಅದೇ ಥರ ನಾಸ್ತಿಕವಾದ, ಮಾನವ ಜನಾಂಗವನ್ನೇ ಮುಖ್ಯ ಕೇಂದ್ರವಾಗಿಟ್ಟುಕೊಂಡು ಅದರ ಕುರಿತಾಗಿ ಯೋಚಿಸತೊಡಗಿತು. ಒಂದು ವಾದ ಎಲ್ಲಾ ಭಾರವನ್ನೂ ಒಂದು ಅತ್ಯುಚ್ಚ ಶಕ್ತಿಯ ಮೇಲಿಟ್ಟು ತನ್ನ ದೈನಂದಿನ ಕಾರ್ಯಗಳನ್ನು ನಿರ್ವಹಿಸಿದರೆ, ಇನ್ನೊಂದು ತನ್ನೆಲ್ಲ ಆಗುಹೋಗುಗಳಿಗೆ ನಾನೇ ಕಾರಣ ಅನ್ನುತ್ತಾ ಮುಂದುವರಿಯಿತು. ಒಮ್ಮೊಮ್ಮೆ ಮನುಷ್ಯ ತನ್ನೆಲ್ಲವನ್ನೂ ಕಳೆದುಕೊಂಡು ಹತಾಶನಾದಾಗ ತನಗಿಂತ ಶಕ್ತಿಶಾಲಿ ಯಾರೋ ಒಬ್ಬನಿದ್ದಾನೆ, ಅವನು ಕಾಪಾಡುತ್ತಾನೆ ಅನ್ನುವ ನಂಬಿಕೆ ಅದೆಷ್ಟು ಚೈತನ್ಯ ತುಂಬಬಹುದೆನ್ನುವುದು ಆಸ್ತಿಕ ವಾದದ ಒಂದು ಮಹತ್ವದ ಗುಣ. ಅದೇನೇ ಬಂದರೂ ನನ್ನನ್ನು ನಾನೇ ಸುಧಾರಿಸಿಕೊಳ್ಳುತ್ತೇನೆ, ಸಂತೈಸಿಕೊಳ್ಳುತ್ತೇನೆ ಅನ್ನುವುದು ನಾಸ್ತಿಕವಾದದ ನಂಬಿಕೆ. ಒಂದು ನಂಬಿಕೆ, ಇನ್ನೊಂದು ನಂಬದೇ ಇರುವಿಕೆ ಅಥವಾ ಇನ್ನೊಂದರಲ್ಲಿ ನಂಬಿಕೆ! ಇವುಗಳ ನಡುವಿನ ಚರ್ಚೆಗಳು ತೀರಾ ಹಳತು ಅನ್ನುವಂತಿಲ್ಲ, ಆದರೆ ತೀರಾ ಹೊಸತೂ ಅಲ್ಲ. ಇಂಥದ್ದೇ ಎರಡು ನಂಬಿಕೆಗಳ ನಡುವಿನ ಸಂಘರ್ಷದ ಚಿತ್ರ ಶೊಕೋಲಾ ( ಫ್ರೆಂಚ್ ) ಅಥವಾ ಚಾಕೊಲೇಟ್.
“ಒಳ್ಳೆಯ ಮತ್ತು ಕೆಟ್ಟ ಸಮಯವಾಗಿರಲಿ, ಬರಗಾಲ ಅಥವಾ ಹಬ್ಬವಾಗಿರಲಿ ಅವರು ತಮ್ಮ ಸಂಪ್ರದಾಯಗಳಿಗೆ ಬದ್ಧರಾಗಿದ್ದರು, ಆದರೆ ಅದು ಚಳಿಗಾಲದ ಒಂದು ದಿನ ಆ ಕಪಟಿ ಉತ್ತರದ ಗಾಳಿ ಬೀಸುವವರೆಗೆ ಮಾತ್ರ” ಎನ್ನುತ್ತಲೇ ಈ ಸಿನೆಮಾದ ಮುಖ್ಯ ಅಂಗಣ ತೆರೆದುಕೊಳ್ಳುತ್ತದೆ. ಚರ್ಚಿನ ಮುಚ್ಚಿದ ಬಾಗಿಲುಗಳ ತೆರೆದು ಆ ಉತ್ತರದ ಗಾಳಿ ಹೊಕ್ಕುತ್ತದೆ. ಚಳಿಯಿಂದ ಮತ್ತು ಹಿಮಗಾಳಿಯಿಂದ ರಕ್ಷಣೆ ಪಡೆಯುವ ಸಲುವಾಗಿ ಕೆಂಪು ಬಣ್ಣದ ಬಟ್ಟೆ ಹೊದ್ದ ತಾಯಿ ಮಗು ಆ ಹಳ್ಳಿಯನ್ನು ಪ್ರವೇಶಿಸುತ್ತಾರೆ. ಇಡೀ ಊರು ಆಗ ‘ಲೆಂಟ್’ ಉಪವಾಸದ ತಯಾರಿಯಲ್ಲಿರುತ್ತದೆ. ರೋಮನ್ ಕ್ಯಾಥೋಲಿಕ್ ಪದ್ಧತಿಯನ್ನು ಅನುಸರಿಸುವವರು ಈಸ್ಟರ್ಗೆ ಆರೂವರೆ ವಾರದ ಮುಂಚೆ ಉಪವಾಸ ಶುರು ಮಾಡಿ(ರವಿವಾರಗಳನ್ನು ಹೊರತುಪಡಿಸಿ) ಹಾಗೂ ಅದರಲ್ಲೇ ಕೆಲವರು, ಐಶಾರಾಮಿ ಜೀವನದಿಂದ ಸರಳ ಜೀವನ ಶುರು ಮಾಡಿ , ೪೦ ದಿನಗಳ ಕಾಲ ಇದನ್ನು ಆಚರಿಸುತ್ತಾರೆ. ಅಂಥ ಒಂದು ಕಾಲಮಾನದಲ್ಲಿ ಊರಿಗೆ ಬರುವ ಈ ತಾಯಿ ಮಗು ಈ ಊರಿನಲ್ಲಿ ಚಾಕೊಲೇಟ್ ಅಂಗಡಿಯನ್ನು ತೆರೆಯುವ ಮೂಲಕ ಊರಿನ ಮುಖ್ಯಸ್ಥನ ಕೋಪಕ್ಕೆ ಕಾರಣರಾಗುತ್ತಾರೆ. ಮೊದಮೊದಲಿಗೆ ಊರಲ್ಲಿ ವಿರೋಧವಿದ್ದರೂ ನಿಧಾನಕ್ಕೆ ಎಲ್ಲರೂ ಈ ಚಾಕೊಲೇಟ್ ಅಂಗಡಿಗೆ ಬರುವುದಕ್ಕೆ ಶುರು ಮಾಡುತ್ತಾರೆ. ಕಟ್ಟಳೆಯ ಬದುಕಲ್ಲಿ ಈ ಚಾಕೋಲೇಟಿನ ಘಮ, ರುಚಿ ಅವರಿಗೆ ಹೊಸ ವಾತಾವರಣವನ್ನು ಕಟ್ಟಿಕೊಡುತ್ತದೆ. ನಿಧಾನಕ್ಕೆ ಆ ತಾಯಿ ಊರಿನ ಹಲವರ ಬದುಕಿನ ಗುಟ್ಟುಗಳಿಗೆ ಕಿವಿಯಾಗುತ್ತಾಳೆ. ಊರಿನ ಪ್ರೇಮ ಕತೆಗಳಿಗೆ ಚಾಕೊಲೇಟಿನ ಉಡುಗೊರೆ ಕೊಡುತ್ತಾಳೆ. ಯಾವ ವ್ಯಕ್ತಿಯನ್ನಾದರೂ ನೋಡಿದ ತಕ್ಷಣ ಅವರಿಗೆ ಇಂಥದ್ದೇ ಚಾಕೊಲೇಟ್ ಇಷ್ಟವಾಗಬಹುದು ಅನ್ನುವುದನ್ನು ಹೇಳುವಷ್ಟು ಮನುಷ್ಯನನ್ನು ಅರ್ಥೈಸಿಕೊಳ್ಳುವ ಗುಣ ಹೊಂದಿರುವಂಥವಳಾಗುತ್ತಾಳೆ. ಅವಳ ಮಗಳಿಗೆ ಒಂದು ಕಾಲ್ಪನಿಕ ಕುಂಟು ಕಾಲಿನ ಕಾಂಗರೂವಿನೊಂದಿಗೆ ಸ್ನೇಹ, ಈ ಕಾಂಗರೂ ಕೂಡಾ ಇಲ್ಲಿ ಕತೆಯಲ್ಲಿ ಮುಖ್ಯ ಪಾತ್ರವೇ!
ಒಂದು ದಿನ ಆ ಊರಿಗೆ ಕಡಲಿನಲ್ಲೇ ಜೀವನದ ಬಹುಪಾಲು ಕಳೆಯುವ ತಂಡವೊಂದು ಬರುತ್ತದೆ ( ಕಡಲ್ಗಳ್ಳರು ಅನ್ನಲೂಬಹುದು! ). ಕಡಲ್ಗಳ್ಳರ ಬಗ್ಗೆ ತೀವ್ರ ಆಸಕ್ತಿಯಿದ್ದ ಮಗಳು ಅಮ್ಮನ ಜೊತೆಗೂಡಿ ಅವರನ್ನು ನೋಡಲು ಹೋದಾಗ, ಅಲ್ಲಿನವ ಕೇಳುತ್ತಾನೆ, “ನೀವು ಕ್ಯಾಥೋಲಿಕ್ ಏಯ್ಡ್ ಸೊಸೈಟಿ, ಫ್ರೆಂಚ್ ಫ್ಯಾಮಿಲಿ ಲೀಗ್, ಕಮ್ಯುನಿಸ್ಟ್ ವರ್ಕರ್ಸ್, ಇವುಗಳಲ್ಲಿ ಯಾವ ಸಿದ್ಧಾಂತವನ್ನು ಮಾರಲು ಬಂದಿದ್ದೀರಿ?”. ಅದಕ್ಕೆ ಆ ಪುಟ್ಟ ಹುಡುಗಿ ಕೊಡುವ ಉತ್ತರ “ಚಾಕೊಲೇಟ್”. ಒಂದು ನಾಗರಿಕ ಸಮಾಜ ಯಾವತ್ತೂ ಊರೂರು ಅಲೆಯುತ್ತ ಇರಬಾರದು, ಒಂದು ಊರಲ್ಲಿ ನೆಲೆ ನಿಂತು ಮನೆ, ಸಂಸಾರ ಮಾಡಿಕೊಳ್ಳಬೇಕು ಅನ್ನುವುದು ಆ ಊರಿನ ಧರ್ಮದ ಚೌಕಟ್ಟಿನ ನಂಬಿಕೆ. ಅದಕ್ಕಾಗಿ ಈ ಕಡಲುವಾಸಿಗಳು ಪಾಪಿಗಳು ಅಂತಲೂ, ಅವರನ್ನು ಊರೊಳಗೆ ಬಿಟ್ಟುಕೊಳ್ಳಬಾರದು ಅಂತಲೂ ಅಲ್ಲಿನ ಸ್ಥಳೀಯರ ಒಕ್ಕೊರಲ ಧ್ವನಿ. ಹಾಗಾಗಿ ಆ ಕಡಲವಾಸಿಗಳು ನದಿಯ ದಡದಲ್ಲೇ ಬೀಡು ಬಿಡುತ್ತಾರೆ. ಈ ತಾಯಿ ಮಗಳು ಇಬ್ಬರೂ ಚರ್ಚಿಗೆ ಹೋಗದವರು, ಅವರಿಗೆ ಧರ್ಮದ ಯಾವ ಚೌಕಟ್ಟೂ ಇಲ್ಲದ ಕಾರಣ ಅವರು ಈ ಕಡಲು ವಾಸಿಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಾರೆ ಹಾಗೂ ಊರಿನ ಹಲವರೊಂದಿಗೆ ದ್ವೇಷವನ್ನೂ. ಒಂದು ಕಡೆ ‘ಲೆಂಟ್’ ಉಪವಾಸದ ಸಮಯದಲ್ಲಿ ಲಾಲಸೆ ಹುಟ್ಟಿಸುವ ಚಾಕೊಲೇಟಿನ ಅಂಗಡಿ ತೆರೆದಿದ್ದಕ್ಕೆ ದ್ವೇಷವಾದರೆ, ಇನ್ನೊಂದೆಡೆ ಪಾಪಿಗಳಾದ ಕಡಲವಾಸಿಗಳೊಂದಿಗಿನ ಸ್ನೇಹ ಮಾಡಿಕೊಂಡಿದ್ದಕ್ಕಾಗಿ ದ್ವೇಷ, ಇವೆರಡನ್ನೂ ಆ ತಾಯಿ ಮಗಳು ಹೇಗೆ ನಿಭಾಯಿಸುತ್ತಾರೆ ಅನ್ನುವುದೇ ಮುಂದಿನ ಇಡೀ ಕತೆ.
ಒಂದು ಬಹುಮುಖ್ಯ ಪ್ರಶ್ನೆಯೊಂದನ್ನು ಈ ಸಿನೆಮಾ ಎತ್ತಿಕೊಳ್ಳುತ್ತದೆ; “ನಾವು ಎಲ್ಲಿಗಾದರೂ ಸೇರಲೇಬೇಕೇ?” ಎಂದು. ಇದು ಕೇವಲ ಒಂದು ಜಾಗದ ಕುರಿತಾಗಿ ಕೇಳಿದ ಪ್ರಶ್ನೆಯಂತೂ ಅಲ್ಲ. ನಾವು ಯಾವುದಾದರೂ ಊರು, ಜನಾಂಗ, ಮತ, ಪಂಥ, ಸಿದ್ಧಾಂತ, ನಂಬಿಕೆ, ಆಚರಣೆ, ಕಟ್ಟುಪಾಡು ಇತ್ಯಾದಿಗಳಿಗೆ ಸೇರಲೇಬೇಕೇ ಅಂತ ಕೇಳುವುದೇ ಇದರ ಒಳದನಿ ಅಂತ ಖಂಡಿತಾ ಊಹಿಸಬಹುದು. ಉತ್ತರದ ಗಾಳಿ ಬೀಸಿದ ದಿಕ್ಕಿನತ್ತ ಸಂಸಾರ ತೆಗೆದುಕೊಂಡು ಅಲ್ಲಿ ಸಿಗುವ ಊರುಗಳಲ್ಲಿ ಕೋಕೋ ಬೀಜದ ಚಾಕೊಲೇಟನ್ನು ಮಾರಾಟ ಮಾಡುತ್ತಾ, ಅದರಲ್ಲಿನ ಔಷಧೀಯ ಗುಣಗಳನ್ನು ಊರಿಗೆ ವಿತರಿಸುತ್ತಾ ಊರೂರು ಸುತ್ತುವುದು ಮಾಯಾ ಸಂಸ್ಕೃತಿಯ ಜನಾಂಗದ ಪದ್ಧತಿಯಾಗಿತ್ತು. ಯಾವ ಊರಿನಲ್ಲೂ ನೆಲೆ ನಿಲ್ಲದೇ, ಅವರು ಹೀಗೆ ಊರೂರು ಅಲೆಯುತ್ತಿದ್ದರು. ಜೊತೆಗೆ ಬಣ್ಣಗಳ ಕುರಿತಾಗಿ ಕೂಡಾ ಅವರಿಗೆ ವಿಶೇಷ ಒಲವಿತ್ತು. ಈ ಸಿನೆಮಾದ ಶುರುವಿನಲ್ಲಿ ಅವರು ಕೆಂಪು ಬಣ್ಣದ ಬಟ್ಟೆ ಹೊದ್ದು ಬರುತ್ತಾರೆ. ಈ ಕೆಂಪು ಬಣ್ಣ ಮಾಯಾ ಸಂಸ್ಕೃತಿಯಲ್ಲಿ ಬದಲಾವಣೆಯ ಪ್ರಾರಂಭದ ಸಂಕೇತವಾಗಿತ್ತು. ಈಗಲೂ ಅಲ್ಲಲ್ಲಿ ಇಂಥದ್ದೇ ಒಂದು ಜನಾಂಗ ಇದೆ, ‘ಹಿಪ್ಪಿ’ ಅಂತ ಕರೆಯುತ್ತಾರೆ. ಆದರೆ ಈ ಗುಂಪುಗಳು ಇಂದು ನಡೆಸುವ ಕೃತ್ಯಗಳು ಬೇರೆಯದೇ, ಅದು ಬಿಡಿ! ಇದರ ಜೊತೆಗೆ ಈ ಚಿತ್ರದಲ್ಲಿ ಮುಖ್ಯವಾಗಿ ಸಿಗುವುದು ಆಸ್ತಿಕತೆ ಹಾಗೂ ನಾಸ್ತಿಕತೆಯ ನಡುವಿನ ಸಂಘರ್ಷ. ಒಂದನ್ನು ಹೊಗಳಬೇಕಾದರೆ ನಮಗೆ ಇನ್ನೊಂದನ್ನು ತೆಗಳಲೇಬೇಕೇ? ಒಂದರ ಧನಾತ್ಮಕ ಗುಣಗಳನ್ನು ಹೇಳುವಾಗ ಇನ್ನೊಂದರ ಗುಣಾತ್ಮಕ ಗುಣಗಳನ್ನು ಹೇಳಲೇಬೇಕೇ? ಯಾರನ್ನೂ ಬಯ್ಯದೆಯೇ ನಮ್ಮ ಸಿದ್ಧಾಂತವನ್ನು ಮುಂದಿಡುವುದಕ್ಕೆ ಸಾಧ್ಯವೇ ಆಗುವುದಿಲ್ಲವಾ? ಇಂಥ ಕೆಲವು ಸೂಕ್ಷ್ಮ ಪ್ರಜ್ಞೆಗಳ ಉತ್ತರವೆಂಬಂತೆ ಈ ಸಿನೆಮಾ ಇದೆ.
ಒಂದು ವೇಳೆ ಧರ್ಮದ ಚೌಕಟ್ಟು ಮನುಷ್ಯನ ನೋವುಗಳನ್ನು ಶಮನ ಮಾಡದೇ ಹೋದಲ್ಲಿ, ಮನುಷ್ಯನಾಗಿ ಐಹಿಕ ಬದುಕನ್ನು ಸರಿಯಾಗಿ ಅನುಭವಿಸದೇ, ಆ ಕಡೆ ಅರೆಮನಸ್ಸಿನಿಂದಲೋ, ಭಯದಿಂದಲೋ ಧಾರ್ಮಿಕ ಆಚರಣೆಗಳನ್ನು ಆಚರಿಸಿದರೆ, ಆ ಆಚರಣೆಗಳು ಕೇವಲ ಸಾಂಕೇತಿಕವಾಗುತ್ತವೆಯೇ ಹೊರತೂ ಅವು ನಿಜವಾಗಿಯೂ ತೃಪ್ತಿಕರ ಬದುಕಿನ ಗುರುತುಗಳಾಗಲಾರವು ಅನ್ನುವುದನ್ನೂ ಈ ಚಿತ್ರ ಹೇಳುತ್ತದೆ. ಮತ್ತೆ ಮತ್ತೆ ಜಗತ್ತಿನ ಎಲ್ಲಾ ಧರ್ಮಗಳೂ ಒತ್ತಿ ಒತ್ತಿ ಹೇಳುವುದು ಕಾರುಣ್ಯ, ಮಮತೆ, ವಾತ್ಸಲ್ಯದ ಕುರಿತಾಗಿಯೇ. ಇಲ್ಲಿ ಈ ನಾಸ್ತಿಕ ತಾಯಿಯೂ ಅನುಸರಿಸುವುದು ವಾತ್ಸಲ್ಯದ ಹಾದಿಯನ್ನೇ. ಹಾಗಿದ್ದರೆ ಅದನ್ನು ಪಾಲಿಸುವುದಕ್ಕೆ ಧರ್ಮದ ಚೌಕಟ್ಟೇ ಬೇಕೇ, ಅದು ಮನುಷ್ಯನ ಮೂಲಭೂತ ಗುಣವಾಗಬೇಕಲ್ಲವಾ ಅಂತಲೂ ಈ ಚಿತ್ರ ಪ್ರಶ್ನಿಸುತ್ತದೆ. ಇಲ್ಲಿ ನಮ್ಮ ಕನ್ನಡದ ಕತೆಗಾರರಾದ ಶ್ರೀ ಯಶವಂತ ಚಿತ್ತಾಲರ ಒಂದು ಮಾತು ನೆನಪಾಗುತ್ತದೆ; “ನಾವು ಮನುಷ್ಯರಾಗಿ ಹುಟ್ಟಿಲ್ಲ; ಮನುಷ್ಯರಾಗಲು ಹುಟ್ಟಿದ್ದೇವೆ“.
ಕಲಾ ಪ್ರಕಾರ ಎನ್ನುವುದು ಬಹುಶಃ ಹೀಗೆಯೇ ಇರಬೇಕು, ಯಾವುದು ಸರಿ ಯಾವುದು ತಪ್ಪು ಅನ್ನುವುದಕ್ಕಿಂತ ‘ಇವು ಹೀಗಿವೆ’ ಅಂತ ಬಿಚ್ಚಿಟ್ಟರೆ ಸಾಕು. ಈ ‘ಚಾಕೊಲೇಟ್’ ನಿಧಾನಕ್ಕೆ ಕರಗುತ್ತಾ ಕರಗುತ್ತಾ, ಬದುಕಿನ ರುಚಿಯನ್ನ ನಾಲಿಗೆಯ ಮೇಲೆ ಉಳಿಸುತ್ತದೆ, ಮತ್ತೆ ಮತ್ತೆ ಹದವಾಗಿ ಚಪ್ಪರಿಸುವಂತೆ…
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..