- ಒಡಕಲು ಬಿಂಬಗಳು - ಡಿಸಂಬರ್ 31, 2022
- ಮಂಥನ - ಮೇ 28, 2022
- ದಕ್ಕಿದಷ್ಟು ಒಲಿಯಿತು - ನವೆಂಬರ್ 20, 2021
ಎಲ್ಲಾ ಶುರು ಆಗಿದ್ದು ಮಧ್ಯಾಹ್ನ ಬಂದ ಫೋನಿಂದ. ಅದ ಇನ್ನೂ ಮೀಟಿಂಗ ಮುಗಸಿ ಹಂಗ ಕಂಪನಿ ಕ್ಯಾಂಟಿನನಾಗ ಮಸ್ತ ಪೈಕಿ ಊಟ ಹೊಡದು ನಾಳಿನ ವೀಕೆಂಡ ಬಗ್ಗೆ ವಿಚಾರ ಮಾಡತಿದ್ದೆ.
“ಹಲೋ ನಾನು ನಿಖಿಲ ಮಾತಾಡುದು..ಮೇಘಾನ ಬಾಬಾ, ಹೆಂಗಿದ್ದಿ…?“
ಅವರ ದನಿ ಕೇಳಿದಾಗ ಮೊದಲು ಹೊಳೆದಿದ್ದು ಅದರಲ್ಲಡಗಿದ ಉತ್ಸಾಹ. ಭಾಳ ಖುಶಿಯಾಗ ಇದ್ದವರಂಗ ಇತ್ತು ಆ ದನಿ. ನಾ ವಿಶ್ ಮಾಡಿ ಹಂಗ ಅಂತ ಹೇಳಿದೆ.
“ಓಕೆ ಯು ಆರ್ ರೈಟ್ ನಾ ಖುಶಿಯಾಗಿದ್ದೇನಿ ಅನ್ನೋದು ಖರೆ ಅದ. ಆ ಖುಶಿಯೊಳಗ ನೀನೂ ಶಾಮೀಲಾಗಬೇಕು ಇದು ನನ್ನ ಹಂಬಲ ಅದ. ಹೇಳು ಸಂಜಿನ್ಯಾಗ ಸಿಗತಿಯೇನು?”
ನಾ ಒಮ್ಮೆಲೆ ಒಪಿಕೊಳ್ಳಿಕ್ಕೆ ತಯಾರಿರಲಿಲ್ಲ. ಅಕಸ್ಮಾತ ಮೋನಿ ಏನರ ಪ್ಲಾನ ಮಾಡಿರಬಹುದು ನಾ ವಿಚಾರ ಮಾಡುವುದಾಗಿ ಹೇಳಿದೆ.
“ಏನಿಲ್ಲ ನಿನ್ನ ತಾಯಿಮಾಡಿದ ಭಾಜಿ ಭಾಕರಿ ನೆನಪಾತು ಅವತ್ತು ನಿಮ್ಮ ಕಾಕುಮನಿಯೋಳಗ ಬಂದಾಗ ಎಣಿಸಿ ಆರು ತಿಂದಿದ್ದೆ ನೋಡು. ನೀನೂ ಕರದರ ನಾ ಏನೂ ಬರೂದಿಲ್ಲ ಅನ್ನೂದಿಲ್ಲ ಮತ್ತ..“
“ಇಲ್ಲ ಹಂಗೇನಿಲ್ಲ ಆದ್ರ ಅವ್ವ ಈಗ ಧಾರವಾಡಕ್ಕ ಹೋಗ್ಯಾಳ ಸೋ ಸಾರಿ ಆದ್ರ ನಿಮಗ ಭಕ್ಕರಿನ ತಿನ್ನೂದಿದ್ರ ಬೇಕಾದ್ರ ಹೊಟೇಲಿಗೆ ಹೋಗೋಣು. ನಿಮಗ ಬ್ಯುಗಲರಾಕ್ ಗೊತ್ತದ ಅಲ್ಲ ಅದರ ಬಾಜೂನ ಛಲೋ ಹೊಟೆಲ ಅದ. ರೊಟ್ಟಿ ಊಟ ಫೇಮಸ ಅದ ಅಲ್ಲಿದು..ನಿಮಗ ಅವಡಿ ವಸ್ತು ಸಂಗೀತನೂ ಇರತದ..“
“ವಾ ಖೂಪಛಾನ ಆತು ನಾ ಬರತೇನಿ ಜೋಡಿ ನಿನಗ ಸರಪರೈಸ ಅಂತ ಹೊಸಾ ಹೆಂಡತಿನ ಕರಕೊಂಡು ಬರತೇನಿ..“
“ಅಂದ್ರ ನನಗ ತಿಳೀಲಿಲ್ಲ..ಚಾಷ್ಟಿಮಾಡತೀರಿ ಹೌದಲ್ಲೋ..“
“ಇಲ್ಲ ನಾ ನನ್ನ ಸೆಕೆಂಡ ಹನಿಮೂನಿಗೆ ಬಂದೇನಿ ಅವನಿ ಅದ ನನ್ನ ಹೊಸಾ ಹೆಂಡತಿಗೆ ಬೆಂಗಳೂರು ಭಾಳ ಸೇರತದ ಅದಕ ಇಲ್ಲಿ ಬಂದೆ..ಸೋ ಸಂಜಿನ್ಯಾಗ ಬಾ ನಿನ್ನ ಮಿಸ್ಟರನೂ ಕರಕೊಂಡು ಬಾ ಭೆಟ್ಟಿಆಗತದ..”
ಅವರ ದನಿಯಲ್ಲಿ ಯಾವ ಕುಹಕವೂ ಇರಲಿಲ್ಲ. ನಿಖಿಲ ವಾಗ್ಲೆ ಇನ್ನೊಂದು ಮದಿವಿ ಆಗ್ಯಾರ ಅದು ಹೆಂಡತಿ ಸತ್ತು ಆರುತಿಂಗಳಿನೊಳಗ. ಇದು ವಿಚಿತ್ರ ಅನಸತು. ಅವತ್ತು ಪುಣೆಗೆ ಹೋದಾಗ ಇದೇ ಮನುಷ್ಯ ಮುಂದ ಬರೀ ಶೂನ್ಯ ಅದ ರಜನಿ ಇಲ್ಲದ ನಾ ಹೆಂಗ ಬದುಕಿರಲಿ ಅಂತ ಗೋಳಾಡಿದ್ದ. ಮೇಘಾನ ತಾಯಿ ಕ್ಯಾನ್ಸರ ಆಗಿ ತೀರಿಕೊಂಡಿದ್ರು. ಅವರನ ಉಳಸಿಕೊಳ್ಳಲಿಕ್ಕೆ ನಿಖಿಲ ಬಹಳ ಹೋರಾಡಿದ್ರು. ಒಂದು ಸಲ ಬಂದು ಹೋಗಿ ಮತ್ತ ತಿರುಗಿ ವಕ್ಕರಿಸಿತ್ತು ಮಾರಿ. ಬ್ರೆಸ್ಟ ಕ್ಯಾನ್ಸರ ಇತ್ತವರಿಗೆ. ಮೇಘಾ ಚೂರುಚೂರಾಗಿದ್ದಳು. ನನ್ನ ಅಪ್ಪಿಕೊಂಡು ಜೋರಾಗಿ ಅತ್ತು ಬಿಟ್ಟಿದ್ದಳು. ನನಗ ತಿಳದಂಗ ನಾ ಸಮಾಧಾನದ ಮಾತು ಹೇಳಿದ್ದೆ. ನಿಖಿಲರಿಗೆ ಸಮಾಧಾನ ಹೇಳುವಷ್ಟು
ದೊಡ್ಡಾಕಿ ಅಲದಿದ್ರೂ ಒಂದು ನಾಕು ಮಾತಾಡಿದ್ದೆ.ಅಳುವಿನ ನಡುವೆ ಅವರು ಅಂದಿದ್ರು.
“ಹೌದು ನೀ ಅನ್ನೋದು ಖರೆ, ಶೋ ಮಸ್ಟ ಗೋ ಆನ ಆದ್ರ ಅಕಿ ನನ್ನ ಜೋಡಿ ಇಪ್ಪತ್ತು ವರ್ಷಬಾಳುವೆ ಮಾಡಿದಳು. ನನ್ನೆಲ್ಲ ಸುಖದುಖದೊಳಗ ಪಾಲುದಾರಿದ್ದಳು. ಹಿಂಗ ಅಕಿ ಹೋಗಿದ್ರಿಂದ ಶೂನ್ಯ ಆವರಿಸೇದ ಅದು ತುಂಬೂದು ಭಾಳ ದುಸ್ತರ ಅದ.“
——*-*-*——
ರಾತ್ರಿ ಒಮ್ಮೆಲೆ ಎಚ್ಚರಾತು. ಅಂದು ಸಂಜೆ ನಡದ ಘಟನಾ ಎಲ್ಲಾ ನೆನಪಾತು. ಕಾರು ನಿಲ್ಲಿಸಿ ಹಾದಿ ನೋಡತಿದ್ದೆ. ಕೈಯಾಗ ಬುಕೆ ಇತ್ತು. ಎಷ್ಠ ಇದ್ರೂ ಒಂಥರಾ ಮುಜುಗರ ಇತ್ತು. ಹಿಂಗ ಮದಿವಿ ಆಗಿರೋದು ಸರಿ ಏನು ಅನ್ನುವ ಪ್ರಶ್ನಿ ಮೋನಿಗೂ ಕೇಳಿದ್ದೆ. ಅವ ಸಮಾಧಾನದ ಮಾತು ಹೇಳಿದ್ದ ಅವಗೂ ಮೇಘಾನ ಪರಿಚಯ ಇತ್ತು ಮತ್ತು ಅಕಿ ತಾಯಿ ತೀರಿಕೊಂಡಾಗ ನನ್ನ ಜೋಡಿ ಪುಣೆಗೂ ಬಂದಿದ್ದ.ಅವಗೂ ಇದು ವಿಚಿತ್ರ ಅನಿಸಿತ್ತು ಆದರ ಅವಾ ಅಂದಿದ್ದ “ಅವರವರ ಅನುಕೂಲ ಅನಾನುಕೂಲ ಅದ ಇದು. ನಾವು ಹೊರಗಿನವರು ಹೆಂಗ ಹೇಳೋದು ನೀ ಹೋಗಿ ಬಾ ನಂಗ ಕಾಲ್ ಅದ ರಾತ್ರಿ ತಡಾ ಆಗಬಹುದು..” ದೊಡ್ಡಗಣಪತಿಗೆ ಹೋಗಿದ್ರು ಅಂತ ಕಾಣತದ ಅವರ ಹಣಿಮ್ಯಾಲ ಕುಂಕಮ ಇತ್ತು. ಜೋಡಿ ಇದ್ದ ಹೆಂಗಸಿಗೆ ನೋಡಿದೆ. ಮೇಕಪ್ ಇರಲಿಲ್ಲ..ಐವ್ವತ್ತರ ಸುಮಾರಿನ ಹೆಂಗಸು ಸಡಿಲವಾದ ನೀಲಿ ಚೂಡಿಹಾಕೊಂಡಿದ್ದರು. ಗೋದಿ ಬಣ್ಣ ಮೊಳದುದ್ದ ಮಲ್ಲಿಗಿ ಹಾಕೊಂಡಿದ್ದರು. ನಿಖಿಲ ಪರಿಚಯಿಸಿದಾಗ ಆತ್ಮೀಯವಾಗಿ ಹಿಂದಿಯಲ್ಲಿ ಮಾತಾಡಿದರು ನಾ ಮರಾಠಿಯಲ್ಲಿ ಮಾತಾಡಿದ್ದು ನೋಡಿ ಖುಶಿ ಆದರು. ಬುಕೆ ಕೊಟ್ಟು ಅಭಿನಂದಿಸಿದೆ.
ಊಟ ಸೊಗಸಾಗಿ ಮಾಡಿದವರೆಂದರೆ ನಿಖಿಲ ಒಬ್ಬರೇ. ಅವನಿ ಒಂದು ಭಕ್ಕರಿಸಹ ಪೂರ್ತಿ ತಿನಲಿಲ್ಲ. ಯಾಕೋ ಪದೇಪದೇ ಅದ ನೆನಪಾಗತಿತ್ತು. ಹೆಂಡತಿಸಾವಿನಿಂದ ಕಂಗಾಲಾಗಿ ಕೂತ ಆ ಮನಿಶಾ ಎಲ್ಲಿ ಉತ್ಸಾಹದ ಬುಗ್ಗೆಯಾದ ಈ ನಿಖಿಲ ಎಲ್ಲಿ ಇಬ್ಬರಲ್ಲೂ ಬಹಳ ಫರಕಿತ್ತು. ಅವನಿ ಬಾಳಲ್ಲಿ ಬಂದಮೇಲೆ ತಮ್ಮಲ್ಲಾದ ಬದಲಾವಣೆಯ ಬಗ್ಗೆ ಹೇಳುತ್ತಿದ್ದರು..ನನಗ ಅದೆಲ್ಲ ನಾಟಕೀಯ ಅನಸತಿತ್ತು ಯಾವಾಗ ಎದ್ದು ಹೋದೇನು ಅನ್ನೋ ಚಡಪಡಿಕೆ ಶುರು ಆತು. ಎರಡನೇ ಮದುವಿ ಹನಿಮೂನ ಎಲ್ಲಾ ಯಾಕ ಅಂತ ಇವರಂದಾಗ ರಜನಿ ಹೆಂಗ ಕನವಿನ್ಸ ಮಾಡಿದಳು ಹೆಂಗ ಅಕಿಯಿಂದ ದಿನಮಾನ ಬದಲಾಗ್ಯಾವ ಹೆಂಗ ಅವನಿ ಇಲ್ಲಿ ಮಸಾಲೆ ದೋಸೆ, ಫಿಲ್ಟರ ಕಾಫಿಗೆ ಫಿದಾ ಆಗ್ಯಾಳ ಮಾತಿನ ತುಂಬ ಬರೆ ಅವನಿ ತುಂಬಿಕೊಂಡಿದ್ದಳು. ಈಗ ಆರು ತಿಂಗಳ ಹಿಂದೆ ಮೊದಲನೇ ಹೆಂಡತಿಯ ಸೇವೆಯೇ ಗುರಿ ಅನ್ನುತ್ತಿದ್ದ ಇದೇ ಮನುಷ್ಯ ಹಿಂಗ ಬದಲಾಗತಾನ ಅನ್ನೊದು ಅಷ್ಟು ಸಹಜವಾಗಿ ಒಳಗ ಇಳಿಯುವುದಲ್ಲ. ಎಲ್ಲಕ್ಕೂ ಮಿಗಿಲಾಗಿ ದಿಗಿಲಾದದ್ದು ಅಂದರ ಮೇಘಾ ಈ ಎರಡನೇ ಮದುವೆ ಬಗ್ಗೆ ಪ್ರಸ್ತಾಪಿಸದೇ ಇದ್ದುದು. ಒಂದೆರಡ ಸಲ ಚಾಟ್ ನಲ್ಲಿ ಸಿಕ್ಕಿದ್ದಳು..ಫೇಸಬುಕ್ಕಿನಲ್ಲೂ ಕೂಡ ಈ ಬಗ್ಗೆ ಹೇಳಿರಲಿಲ್ಲ.ಬಹುಷಃ ತಂದೆ ಇಟ್ಟ ಈ ಹೆಜ್ಜೆಯಿಂದ ತೀರ ಮುಜುಗರಕ್ಕೆ ಒಳಗಾಗಿದ್ದಾಳೋ ಹೆಂಗ, ಹಂಗ ನೋಡಿದ್ರ ಇದುವರೆಗೂ ಏನನ್ನೂ ಮುಚ್ಚಿಡದಾಕಿ ಈಗ ಯಾಕ ಹಿಂಗ ಮಾಡಿದಳು..
ಅಕಿ ಮತ್ತು ನನ್ನ ಗೆಳೆತನ ಕೂಡಿದ್ದು ಬೆಳಗಾವಿಯೊಳಗ ಅಕಿ ಎಂಬಿಏ ಮಾಡಲಿಕ್ಕೆ ಬಂದಾಗ. ನಾನೂ ಕಾಕಾನ ಮನಿಯಾಗ ಇದ್ದು ಎಂಬಿಏಗೆ ಸೇರಿದ್ದೆ. ಜೋಡಿ ಕಲಿಯುವಾಗ ಅಸೈನಮೆಂಟು, ಸೆಮಿನಾರು ಹಿಂಗ ಹತ್ತಿರವಾದೆವು. ಅವಳ ತಾಯಿಗೆ ಅದಾಗಲೇ ಕ್ಯಾನ್ಸರ ಬಂದಿತ್ತು. ಬ್ರೆಸ್ಟ ಕ್ಯಾನ್ಸರು..ಒಂದು ಮೊಲೆಯನ್ನೇ ತೆಗೆದಿದ್ದರಂತೆ. ನಾ ಕಾಕುನ ಕಡೆ ಇದ್ದೆ, ಅಕಿ ಮನಿಯೊಳಗ ಮೇಘಾ ಆತ್ಮೀಯ ಅತಿಥಿಯಾದಳು. ಕಾಕಾ ಕಾಕು ಈ ಪುಣೆರಿ ಹುಡುಗಿಗೆ ಬಹಳ ಹಚಕೊಂಡರು. ಅವರ ತಂದೆ ತಾಯಿ ಬೆಳಗಾವಿಗೆ ಬಂದಾಗ ಭೇಟಿಯಾಗತಿದ್ರು. ಒಂದು ಸಲ ಅವ್ವ ಬಂದಿದ್ದಳು ಅವಾಗ ಕಾಕುನ ಮನಿಯೊಳಗ ನಿಖಿಲ, ಮೇಘಾನ ತಾಯಿ ರಜನಿ ಊಟಕ್ಕ ಬಂದಿದ್ರು. ಅವ್ವ ಮಾಡಿದ ಭಕ್ಕರಿ ಚಪ್ಪರಿಸಿ ತಿಂದು ಅವ್ವಗ “ಅನ್ನಪೂರ್ಣ” ಅಂತ ಹರಸಿ ಹೋಗಿದ್ದರು. ಮೇಘಾ ದಿನಾ ಸಂಜಿಮುಂದ ತನ್ನ ಆಯಿಗೆ ಫೋನ ಮಾಡತಿದ್ದಳು. ಆರೋಗ್ಯದ ಕಾಳಜಿ ವಹಿಸುವಂತೆ ತನಗೆ ತಿಳಿದ ರೀತಿಯಲ್ಲಿ ಹೇಳುತ್ತಿದ್ದಳು.
ಮಾತಾಡತ ಮಾತಾಡತ ಎಮೋಶನಲ್ ಆಗತಿದ್ದಳು..ಅಳತಿದ್ದಳು. ನನಗೂ ಅಕಿ ಬಗ್ಗೆ ಕನಿಕರ ಇತ್ತು. ಇಂತಹಾ ಪರಿಸ್ಥಿತಿಯಲ್ಲೂ ಓದುವ ಛಲ ಅವಳಿಗೆ. ಅವಳ ಗುರಿ ನಿಚ್ಚಳವಾಗಿತ್ತು. ನನಗೂ ಅವಳ ನಡಾವಳಿ ಪ್ರೇರಕ ಅನಿಸಿತ್ತು. ಕೋರ್ಸು ಮುಗದು ಕ್ಯಾಂಪಸ ಇಂಟರವ್ಯೂದಲ್ಲಿ ಅಕಿ ಸಿಲೆಕ್ಟ ಆಗಿದ್ದಳು, ಪುಣೆ ಅವಳಿಗೆ ಬೇಕಾಗಿತ್ತು. ಅದೇ ಊರಲ್ಲಿ ಎಚ್ಎಸ್ಬಿಸಿಯಲ್ಲಿ ಅವಳು ಸಿಲೆಕ್ಟ ಆಗಿದ್ದಳು. ನಾನು ಸಿಲೆಕ್ಟ ಆಗಿದ್ದೆ ಬೆಂಗಳೂರಿನ ಒಂದು ಐಟಿ ಕಂಪನಿಗೆ. ಹೋಗುವ ದಿನ ಅಪ್ಪಿಕೊಂಡು ಅತ್ತಬಿಟ್ಟಿದ್ದಳು. ನಾವು ಬೇರೆ ಬೇರೆಯಾದರೂ ಮೇಲಗಳಿಂದ, ಫೋನಕಾಲುಗಳಿಂದ ಹಾಗೂ ಫೇಸಬುಕ್ಕಿನಿಂದ ನಿರಂತರ ಸಂಪರ್ಕದಲ್ಲಿದ್ದೆವು. ಅವಳ ಮದುವೆ, ಅವಳು ‘ಪರಿ’ಗೆ ಜನ್ಮ ನೀಡಿದ್ದು ಅವಳು ಖರೀದಿಸಿದ ಹೊಸ ಫ್ಲಾಟಿನ ವಾಸ್ತು ಹಾಗೆಯೇ ಅವಳ ತಾಯಿ ತೀರಿಕೊಂಡಾಗ ಹೀಗೆ ಅವಳ ಎಲ್ಲ ಸುಖದುಃಖಗಳಿಗೆ ನಾ ಸಾಕ್ಷಿಯಾಗಿದ್ದೆ. ನಾ ಮೋನಿಯನ್ನು ಮದುವೆಯಾದಾಗ ಬಂದಿದ್ದಳು.”ಲಕ್ಕಿ ಗರ್ಲ.” ಅಂತ ಗುದ್ದಿ ಹೋಗಿದ್ದಳು. ಎಲ್ಲಾ ರೀತಿಯಿಂದ ಹತ್ತಿರ ಇದ್ದಾಕಿ ಈ ವಿಷಯ ಯಾಕ ಮುಚ್ಚಿಟ್ಟಳು ಇದು ಕೊರೀತಿತ್ತು.
——*-*-*——
ಮೇಘಾ ಒಂದೆರಡು ಸಲ ಸಿಕ್ಕಿದ್ದಳು. ಬೇರೆ ಎಲ್ಲ ವಿಷಯ ಸಲೀಸಾಗಿ ಮಾತಾಡಿದಾಕಿ ಯಾಕೋ ಅಕಿ ಬಾಬಾನ ಎರಡನೇ ಮದವಿ ಸುದ್ದಿ ಬಂದಾಗ ಸುಮ್ಮನಾದಳು. ಒಂದೆರಡು ಸಲ ಹಿಂಗಾದ ಮೇಲೆ ನಾನೂ ಕೆದಕುವುದು ಬಿಟ್ಟೆ. ಆದರ ಮುಂದ ಅಚಾನಕ ಆಗಿ ಪುಣೆಗೆ ಹೋಗುವ ಪ್ರಸಂಗ ಬಂತು. ಮಾವುಶಿಯ ಮಗನ ಲಗ್ನ ಒಂದೆರಡು ದಿನ ರಜೆ ಹಾಕಿದರೆ ಐದು ದಿನ ಒಟ್ಟು ಸೂಟಿಯಗುವುದಿತ್ತು. ಮೋನಿ ಬರುವುದಿಲ್ಲ ಎಂದು ಕೈ ಎತ್ತಿದ. ನಾನೇ ವಿಮಾನವೇರಿ ಪುಣೆಯಲ್ಲಿಳಿದೆ. ಮದುವೆಯ ಗಡಿಬಿಡಿಯ ನಡುವೆ ಮೇಘಾಗೆ ನಾನು ಬಂದ ವಿಷಯ ತಿಳಿಸಿದೆ ಹುಡುಗಿಗೆ ಖುಶಿಯಾಗಿತ್ತು ವೀಕೆಂಡ್ ಇಬ್ಬರೂ ಹಳೆದಿನಗಳ ಪುನರಾವರ್ತನೆ ಮಾಡುವುದು ಅಂತ ನಿರ್ಧಾರವಯಿತು. ಸೂಚಿಸಿದಂತೆ ನಾ ಶುಕ್ರವಾರ
ಸಂಜೆ ಅವಳ ಫ್ಲಾಟಿಗೆ ಹೋದೆ. ಅಕಿ ಇನ್ನೂ ಬಂದಿರಲಿಲ್ಲ. ಅಕಿ ಗಂಡ ಲಂಡನ್ ಗೆ ಹೋಗಿದ್ದ..ಪರಿಗೆ ತಂದ ಚಾಕಲೇಟ ಕೊಟ್ಟು ಮೇಘಾಳ ಅತ್ತೆ ಮಾಡಿಕೊಟ್ಟ ಚಹಾ ಕುಡಿಯುತ್ತಿದ್ದೆ. ಅವರೂ ಒಂದು ಕಪ್ ಹಿಡದು ಎದುರು ಕೂತಗೊಂಡರು.
“ಏನು ಹೊಸಾ ಜೋಡಪ ಭೇಟಿಯಾತೇನು ಬೆಂಗಳೂರಾಗ..” ಅವರ ದನಿಯಲ್ಲಿ ವ್ಯಂಗ್ಯ ಇರಲಿಲ್ಲ. ಏನು ಮಾತಾಡುವುದು ತಿಳಿಯದೆ ತಲೆ ಆಡಿಸಿದೆ.
” ಹುಂ ಒಂಥರಾ ಇಕಿ ಬಾಬಾನ ಕಾಳಜಿ ತಪ್ಪತು. ಮುಪ್ಪಿನಕಾಲದಾಗ ಸಾಥಿದಾರಿದ್ರ ಎಲ್ಲ ಸುರಳೀತ ಅನಸತದ..“
” ಆದ್ರ ಅವರು ಹೆಂಗ ಒಪ್ಪಿಕೊಂಡರು ಅಷ್ಟು ಹಚಕೊಂಡಿದ್ರು ಆಯಿ ತೀರಿಕೊಂಡಾಗ ಕುಸದುಹೋಗಿದ್ದರು ಈಗ ಒಮ್ಮೆಲೆ ಈ ಬದಲಾವಣಿ ನನಗ ಅರ್ಥಆಗಲಿಲ್ಲ..“
ದನಿಯಲ್ಲಿ ಸಾಧ್ಯವಿದ್ದಷ್ಟು ಕಮ್ಮಿ ವ್ಯಂಗ್ಯ ತೋರಿಸಿದ್ದೆ.
” ಇಲ್ಲ ನೋಡು ಅವಶ್ಯಕತಾ ಎಲ್ಲ ಮಾಡಸತದ ಅದರ ಮುಂದ ಯಾರದೂ ಆಟ ನಡಿಯೂದಿಲ್ಲ.ಈಗ ಎಲ್ಲಾ ಸಹಜ ಆಗೇದ ಅಲ್ಲ ಅದು ಮುಖ್ಯ..“
” ಆದ್ರ ಕಾಕು, ಅವಶ್ಯಕತಾ ಅದ ಅಂತೇಳಿ ಅವರು ಹಿಂಗ ಮಾಡೂದ..ಆಯಿ ಸತ್ತು ಆರು ತಿಂಗಳೂ ಆಗಿಲ್ಲ.. ಅಂಥಾದ್ದೇನಾಗಿತ್ತು ಅವರಿಗೆ ಅದೂ ಮೇಘಾಹೆಂಗ ಸುಮ್ಮನಿದ್ಲು ಅಕಿಗೆ ಅವರು ಮದುವಿ ಆಗತೇನಿ ಅಂತ ಹೇಳಿದಾಗ ಅಕಿಗೆ ಹೆಂಗಾಗಿರಬ್ಯಾಡ..“
” ಇಲ್ಲ ಇದರಾಗ ಅಕಿ ಬಾಬಾಂದು ಏನೂ ತಪ್ಪಿರಲಿಲ್ಲ. ನಾ ಆಗಲೇ ಹೇಳಿದೆನಲ್ಲ ಅವಶ್ಯಕತಾದ ಮುಂದ ಮನಿಶಾಂದು ಏನೂ ನಡ್ಯೂದಿಲ್ಲ..”
ಬಾಗಿಲ ಬೆಲ್ ಸಪ್ಪಳಾತು. ಮೇಘಾ ಬಂದಳು. ಜೋರಾಗಿ ಅಪಕೊಂಡಳು. ಪರಿಗೆ ಮುದ್ದುಮಾಡಿ ಬಂದು ಕೂತಳು.
” ನೋಡು ಇಲ್ಲಿ ಮಾತಾಡೂದು ಸರಿ ಅಲ್ಲ..ಹೊರಗ ಹೋಗೋಣು..ನಾ ಫ್ರೆಶ ಆಗಿ ಬರತೇನಿ. ಬಹಳ ಮಾತಾಡೂದದ ನಿನ್ನ ಜೋಡಿ..” ಎದ್ದು ಹೋದವಳನ್ನೇ ನೋಡಿದೆ.
ಅವಳ ಸ್ವಭಾವದಲ್ಲಿ ಏನೂ ಬದಲಾಗಿರಲಿಲ್ಲ.
——*-*-*——
ಕೆಫೆಡೆಯ ಮೂಲೆಯಲ್ಲಿ ಎದಿರು ಕುಳಿತವಳನ್ನೇ ನೋಡುತ್ತಿದ್ದೆ..ಏನೋ ಇದೆ ಇಲ್ಲವಾದರೆ ಯಾಕೆ ಮಾತಾಡೋಣ ಅಂತ ಹೇಳತಿದ್ಲು.. ” ಹೇಳಲೇ ಸುಮ್ಮನ ಯಾಕ ಕೂತಿ ಅವೇನು ಪ್ರಶ್ನಾ ಅವ ಒಗೀಯಲ್ಲ…” ಅವಳ ದನಿಯಲ್ಲಿ ಒತ್ತಾಯವಿತ್ತು. ” ನಾ ಏನ ಕೇಳಬೇಕಂತ ಮಾಡೇನಿ ಅದು ನಿಂಗ ಈಗಾಗಲೇ ಗೊತ್ತದ..ಸೋ ಯು ಬಿಗಿನ್…” ನಾನು ಅವಳ ಉತ್ತರಕ್ಕೆ ಕಾದು ಕೂತೆ.
” ಹುಂ..ಎಲ್ಲಾ ವಿಚಿತ್ರ ಅನಸತದ. ಆಯಿ ಇರುವಾಗ ಮುಂದ ಇಂಥಾದಿನಾ ಬರತದ ಅನ್ನೋದು ಖಾತರಿ ಇರಲಿಲ್ಲ..ಎಲ್ಲಾ ಹೆಂಗ ಸುರಳೀತ ನಡದಿತ್ತು. ನಿಂಗ ಗೊತ್ತದ ಆಯಿಗೆ ಮೊದಲನೇ ಸಲ ಆಪರೇಶನ್ ಮಾಡಿದ್ರು. ಒಂಥರಾ ಸಾವಿನ ಬಾಗಿಲಾ ಬಡದು ವಾಪಸ್ ಬಂದಿದ್ದಳು.ಬಾಬಾನೂ ಭಾಳ ತ್ರಾಸ ಮಾಡಕೊಂಡಿದ್ದರು. ಆದ್ರ ಅಕಿ ಸೇವಾ ಮಾಡಿದರು. ಅಕಿ ಹೋದಮೇಲೆ ವಿಹ್ವಲ ಆಗಿಹೋದರು. ನಮ್ಮನಿಯೊಳಗ ಇರತಿದ್ದರು. ಯಾರ ಜೋಡಿ ಮಾತಿಲ್ಲ ಏನಿಲ್ಲ ನಂಗ ಬಾಬಾಂದು ಕಾಳಜಿ ಆತು..“
ಅಕಿ ದನಿಯಲ್ಲಿ ಆತಂಕವಿತ್ತು.
” ಆದರ ಒಂದು ರಾತ್ರಿ ವಿಚಿತ್ರ ಆತು. ನಾ ನಡುವ ಎದ್ದಿದ್ದೆ. ಬಾಬಾ ಮಲಗುವ ಜಾಗಾದಾಗ ಇರಲಿಲ್ಲ. ಬಾಗಿಲ ಲಾಕ್ ಹಾಕಿದ್ದಿತ್ತು.ರೂಮಿನಿಂದ ಏನೋ ಶಬ್ದ..ಹೋಗಿ ನೋಡಿದೆ ಬಾಬಾ ಸಿಸ್ಟಮ್ ಮುಂದಿದ್ರು ಅದರೊಳಗ ಪಾರ್ನ ನೋಡತಿದ್ರು. ನಂಗ ಶಾಕ್ ಆತು. ಮರುದಿನ ಅನಿಲ್ಗ ಹೇಳಿದೆ. ಅವಗೂ ಬಬಾನ ಈ ನಡತೆ ವಿಚಿತ್ರ ಅನಿಸತು.ಹೆಂಗ ಕೇಳೋದು ಇದ ಗೊಂದಲದಾಗ ನಾವಿದ್ವಿ. ನನಗ ಬಾಬಾನ ಮ್ಯಾಲೆ ಸಿಟ್ಟು ಬಂದಿತ್ತು. ತಲಿಯೊಳಗ ನೂರಾ ಎಂಟು ವಿಚಾರ…ಪರಿ ಬಾಬಾಗ ಹಚಿಕೊಂಡಾಳ ಒಬ್ಬಾಕಿನ ಅವರ ಜೊತಿ ಇರತಾಳ ಬ್ಯಾಡ ಅಂದ್ರೂ ಕೆಟ್ಟ ವಿಚಾರ ಬರತಿದ್ದವು. ನನ್ನ ಅತ್ತಿ ಶಾಣ್ಯಾಕಿ..ಏನೋ ಅದ ಅನಿಸೇದ. ನಂಗ ಕೇಳಿದರು. ನಂಗ ತಡಿಲಿಕ್ಕೆ ಆಗಲಿಲ್ಲ. ಎಲ್ಲಾ ಹೇಳಿದೆ. ಅವರು ಕೌನ್ಸೆಲರ್ ಅಂತ ಕೆಲಸ ಮಾಡಿದ್ರು. ತೀರ ಶಾಂತವಾಗಿ ಹೇಳಿದರು. ಬಾಬಾನ ಜೋಡಿ ಅವರು ಮಾತಾಡತಾರ ಅನ್ನೂದು ಕೇಳಿ ಸಮಾಧಾನ ಆತು. “
ಕೆಫೆಚಿನೋ ಹೀರುತ್ತಿದ್ದವಳನ್ನೇ ಗಮನಿಸಿದೆ. ಈ ಆರು ತಿಂಗಳಲ್ಲಿ ಏನೆಲ್ಲ ಅನುಭವಿಸಿಯಾಗಿದೆ ಈ ಹುಡುಗಿ. ಜೀವನ ಹೆಂಗ ಒಮ್ಮೆಲೆ ಬದಲಾಗತದ ಅಲ್ಲ.
” ಅಂದ್ರ ನಿನ್ನ ಅತ್ತಿ ಮುತುವರ್ಜಿ ತಗೊಂಡರೇನು..ಆದರ ಮೇಘಾ ನೀ ನಿನ್ನ ಬಾಬಾಗ ಹಿಂಗ ಒಮ್ಮಿಂದೊಮ್ಮೆಲೆ ಹೆಂಗ ವಿಲನ್ ಮಾಡಿದಿ ಅಂದ್ರ ಪರಿ ಮತ್ತು ಅವರ ಒಡನಾಟದಾಗೂ ಯಾಕ ಸಂಶಯ ಬಂತು..“
” ಹುಂ ನಿಂಗ ಹಂಗ ಅನಿಸೋದು ಸಹಜ ಆದ್ರ ಅವತ್ತ ಬಾಬಾ ಆ ಹೊಲಸು ನೋಡತಿದ್ದರಲ್ಲ ಯಾಕೋ ಪರಿಗೆ ಅವರ ಜೋಡಿ ಬಿಢಲೇ ಹೆದರಿಕಿ ಆತು..“
” ಆದ್ರ ಅವರು ನಿನ್ನ ಬಾಬಾ ನಿಂಗ ಯಾಕ ಹಿಂಗ ಒಮ್ಮೆಲೆ ಸಂಶಯ ಬಂತು ತಿಳೀಲಿಲ್ಲ..“
” ಅವರು ಬಾಬಾ ಖರೆ ಆಯಿ ಸಲುವಾಗಿ ತ್ರಾಸ ಮಾಡಕೊಂಡ್ರು ಎಲ್ಲ ಖರೆ..ಆದ್ರ ನೀನ ವಿಚಾರ ಮಾಡು ನಾ ಕೆಲಸ ಬಿಟ್ಟು ಸದಾ ಕಾಯಕೋತ ಕೂಡಲಿಕ್ಕೆ ಆಗೂದಿಲ್ಲ. ಮ್ಯಾಲಾಗಿ ಪೇಪರಿನ್ಯಾಗ ಟಿವಿಯೊಳಗ ಸದಾ ಓದತಿರತೇವಿ. ನನಗ ಯಾಕೋ ಆ ಹೆದರಿಕಿ ಹೋಗಲೇ ಇಲ್ಲ. ನನ್ನ ಅತ್ತಿ ಬಾಬಾನ ಜೋಡಿ ಏನ ಮಾತಾಡಿದರು ಗೊತ್ತಿಲ್ಲ. ಅವರ ಸೂಚನಾ ಕೊಟ್ರು. ಅವನಿ ವಿಚ್ಛೇದನಾ ಪಡದಾಕಿ. ಬಾಬಾ ಮೊದಲ ಒಪ್ಪಲಿಲ್ಲ. ನಾನು ಅನಿಲ ಮಾತಾಡಿದ್ವಿ. ಒಪ್ಪಿಸಿದಿವಿ.ಈಗ ನೋಡು ಎಲ್ಲಾ ಸುರಳೀತ ಆಗೆದ..“
ಅಕಿ ದನಿಯೊಳಗ ನಿರಾಳತೆ ಇತ್ತು ತನ್ನ ಅಂತರಂಗ ಎಲ್ಲಾ ಹೇಳಿಕೊಂಡ ಸಮಾಧಾನವಿತ್ತು. ಆದ್ರ ನಂಗ ತಳಮಳ ಇನ್ನೂ ಇತ್ತು. ಅಕಿ ಅತ್ತಿ ಹೇಳಿದ ಮಾತು ನೆನಪಾತು. ಅವಶ್ಯಕತಾ ಎಲ್ಲಾ ಮಾಡಸತದ ಅದರ ಮುಂದ ಯಾರದೂ ಏನೂ ನಡೆಯೂದಿಲ್ಲ. ಮೇಘಾ ಸ್ವತಃ ತನ್ನ ಹಡದ ತಂದಿ ಮೇಲೆಯೇ ವಿಶ್ವಾಸ ಇಡಲಿಲ್ಲ.ಅವರ ಅಂದಿನ ರಾತ್ರಿಯ ಪಾರ್ನ ವೀಕ್ಷಣೆ ಹೀಗೆಲ್ಲ ಅವಳ ತಲೆಯಲ್ಲಿ ಗೊಂದಲ ಎಬ್ಬಿಸೇದ. ಅಕಿ ಬಾಬಾಗೂ ಸಾಥಿ ಬೇಕಾಗಿತ್ತು. ಅವರಿಗೂ ಅವಶ್ಯಕತಾ ಇತ್ತು. ಅಂದ್ರ ಅವಶ್ಯಕತಾ ಮುಂದ ಸಂಬಂಧಗಳು ಎಷ್ಟು ಅಲ್ಪ. ಅವರವರ ಅವಶ್ಯಕತಾ ಅವರವರಿಗೆ ಮುಖ್ಯ..ಅದರ ಸಲುವಾಗಿನ ಇದೆಲ್ಲ ಹೋರಾಟ.
——-@-@-@——-
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ