ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಸಹನೆ,ಅಭರವಸೆಯ ಸ್ವಾತಂತ್ರ್ಯ

ಪ್ರೊ.ಸಿದ್ದು ಯಾಪಲಪರವಿ

ಭಾರತ ದೇಶಕ್ಕೆ ಬಹು ದೊಡ್ಡ ಇತಿಹಾಸವಿದೆ ಅಷ್ಟೇ ಬರಡು ವರ್ತಮಾನವೂ ಇದೆ.

ಜಗತ್ತಿನಲ್ಲಿ ಇರುವ‌ ಸಾಧು-ಸಂತರ,ದಾರ್ಶನಿಕರ,ಮಹಾಕವಿಗಳ ಏಕೈಕ ತವರು ನಮ್ಮ ದೇಶ.

ಜಗತ್ತಿಗೆ ಏನೆಲ್ಲಾ ಕೊಟ್ಟು ನಾವು ಭಿಕಾರಿಗಳಾಗಿದ್ದೇವೆ.

ವೇದ,ಉಪನಿಷತ್ತು,ಜೈನ, ಬುದ್ಧ,ಮತ್ತು ಬಸವಾದಿ ಶರಣರ ಮೌಲ್ಯಗಳು ಗ್ರಂಥ ಸೇರಿಕೊಂಡಿವೆ.

ಜನರ ಬದುಕಿನ ಅವಿಭಾಜ್ಯ ಅಂಗವಾಗಬೇಕಿದ್ದ ಯೋಗ-ಧ್ಯಾನದ ಆಚರಣೆಗಳು ಪ್ರದರ್ಶನದ ತುಣುಕಾಗಿ ಅಣಕಿಸುತ್ತವೆ.

ನಮ್ಮ ಇತಿಹಾಸದುದ್ದಕ್ಕೂ ಈ ದೇಶದ ಮೇಲೆ ಬರೀ ದಾಳಿಗಳೇ. ಮೊಗಲರು,ಆಂಗ್ಲರು ಹೇರಿ ಹೋದ ಸಂಸ್ಕೃತಿಯಿಂದ ಬರೀ ಗೊಂದಲಗಳೇ.

ನಮ್ಮತನ ಮತ್ತು ನಮ್ಮ ಅಸ್ಮಿತೆ ಏನು ? ಎಂಬ ಪ್ರಶ್ನೆ ಸದಾ ಕಾಡುತ್ತದೆ.

ಜಾತಿ,ಧರ್ಮ ಮನುಷ್ಯರ ಮನಸ್ಸುಗಳ ಬೆಸೆಯಲು ವಿಫಲಗೊಂಡಿವೆ.

ಎಲ್ಲಾ ಧರ್ಮಗಳು ಕಟ್ಟುವ ಸಂದೇಶ ಕೊಟ್ಟರೆ ನಾವು ಒಡೆಯುತ್ತ ಸಾಗಿದ್ದೇವೆ.

ಹಣ,ಅಧಿಕಾರ,ಭ್ರಷ್ಟಾಚಾರ ಮತ್ತು ವಿವಿಧ ಮಾಫಿಯಾಗಳು ನಮಗೆ ಅರಿವಿಲ್ಲದಂತೆ ಆವರಿಸಿಕೊಂಡಿವೆ.

ಈ ವಿಷವರ್ತುಲದಿಂದ ನಾವು ಹೊರ ಬರಬೇಕಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ರಾಜಕೀಯ ವ್ಯವಸ್ಥೆ ಹಸನಾಗಬೇಕು.

ರಾಜಕಾರಣ ಯುದ್ಧವಾಗಬಾರದು, ಜನಸೇವೆಯಾಗಬೇಕು. ಅಂದಾಗ ಮಾತ್ರ ದೇಶ ಕಟ್ಟಲು ಸಾಧ್ಯ.

ಧರ್ಮ, ಅಧರ್ಮಗಳ ಕುರುಕ್ಷೇತ್ರದ ಕತೆ ಕೇಳಿ ಬೆಳೆದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಣರಂಗ ಮಾಡಿಕೊಂಡು ಯುದ್ಧ ಮಾಡುತ್ತ ವಿನಾಶದ ಹಾದಿ ಹಿಡಿದಿದ್ದೇವೆ.

ತಿಳಿ ಹೇಳಿ ಜನರನ್ನು ಉದ್ಧಾರ ಮಾಡಬೇಕಿದ್ದ ಧಾರ್ಮಿಕ ಶ್ರದ್ಧಾ ಭಕ್ತಿ ಕೇಂದ್ರಗಳು ಕೂಡ ನೈತಿಕ ಮೌಲ್ಯ ಕಳೆದುಕೊಂಡು ಐಷಾರಾಮಿ ತಾಣಗಳಾಗಿವೆ.

ಬೇಲಿಯೇ ಎದ್ದು ಹೊಲ ಮೇಯುವಂತೆ, ತಾಯಿಯ ಹಾಲು ನಂಜಾಗಿ ಕೊಲ್ಲುವ ಸಂಕೀರ್ಣ ಹೊತ್ತಿನಲ್ಲಿ ನಾವಿದ್ದೇವೆ.

ಸ್ವತಂತ್ರ ದೇಶಕ್ಕೆ ಈಗ ಎಪ್ಪತ್ತನಾಲ್ಕರ ಪ್ರಾಯ. ಇಷ್ಟೊತ್ತಿಗೆ ಸಮೃದ್ಧವಾಗಿ ಬೆಳೆಯಬೇಕಾಗಿತ್ತು.

‘ಆದರೆ ಯಾರು ಹೊಣೆ? ನಾವೇ ಮತದಾರರು.’

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಮಾರಿಕೊಂಡು ಯಾರು ಬೇಕಾದರೂ ದೇಶ ಆಳಲಿ ನಮಗೇನು? ಎಂಬ ಅಸಡ್ಡೆ ತೋರಿದ ಪ್ರತಿಫಲ ಅನುಭವಿಸುತ್ತಿದ್ದೇವೆ.

ಮಹಾತ್ಮ ಗಾಂಧೀಜಿಯವರ ಭಾವನಾತ್ಮಕ ಹೋರಾಟದ ಪ್ರತಿಫಲದಿಂದ ದೇಶ ಒಗ್ಗಟ್ಟಾಯಿತು. ಸ್ವಾತಂತ್ರ್ಯ ಸಿಕ್ಕಾಗ ಇನ್ನೂ ಒಗ್ಗಟ್ಟು ಪ್ರದರ್ಶನ ಆಗಬೇಕಾಗಿತ್ತು.

ಧರ್ಮ, ಜಾತಿ ಮತ್ತು ಅಧಿಕಾರ ದಾಹ ಹಾಳು ಮಾಡಿ ಹೋಳಾಗಿಸಿತು.

ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಮುಂದೆ ಅನೇಕ ಸವಾಲುಗಳಿದ್ದವು. ಹೊಸದನ್ನು ಕಟ್ಟಬೇಕಾಗಿತ್ತು, ಅದರ ಜೊತೆಗೆ ಅವರದೇ ಆದ ವೈಯಕ್ತಿಕ ಸಿದ್ಧಾಂತಗಳು ಸೇರಿಕೊಂಡು ಒಗ್ಗಟ್ಟು ಸಾಧ್ಯವಾಗಲಿಲ್ಲ.

ಹಾಗಂತ ನೆಹರು ಏನೂ ಮಾಡಲೇ ಇಲ್ಲ ಎಂದು ಅರ್ಥವಲ್ಲ ಅವರ ಒಡನಾಡಿಗಳು ಪ್ರಮುಖ ಹೊಸ ವ್ಯವಸ್ಥೆಯನ್ನು ರೂಪಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಪರಿಪೂರ್ಣ ಸಂವಿಧಾನ ಕೊಟ್ಟರು. ದೇಶವನ್ನು ದೈಹಿಕವಾಗಿ ಒಗ್ಗೂಡಿಸಲು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಶಕ್ತಿ ಮೀರಿ ಶ್ರಮಿಸಿದರು.

ಆದರೆ ಗಾಂಧಿ ಮಾರ್ಗದಲ್ಲಿ ನಡೆಯುವ ಸಾಮರ್ಥ್ಯ ಕುಂಠಿತಗೊಂಡಿತು.

ಜಗತ್ತಿನ ಉಳಿದ ಸ್ವತಂತ್ರ ರಾಷ್ಟ್ರಗಳಲ್ಲಿ ಇರುವ ಏಕತೆ,ದೇಶಾಭಿಮಾನ, ಉಕ್ಕಿ ಹರಿಯಲಿಲ್ಲ.

ಯುರೋಪ್,ಅಮೆರಿಕಾ, ಚೈನಾ ಮತ್ತು ಜಪಾನ್ ರಾಷ್ಟ್ರಗಳ ದೇಶ ಪ್ರೇಮ ಹುಟ್ಟು ಹಾಕಲು ವ್ಯವಸ್ಥೆ ಅವಕಾಶ ಕಲ್ಪಿಸಲೇ ಇಲ್ಲ.

ನಾವು ಬರೀ ಬಾಯಿ ಮಾತಿನ ಬಡಾಯಿಗಳಾಗಿ ಒಳಗೆ ಟೊಳ್ಳಾಗಿ ಆಷಾಢಭೂತಿಗಳಾದೆವು. ಹಿಪೊಕ್ರೆಟಿಕ್ ಮನೋಧರ್ಮ ನಮ್ಮ ಬಂಡವಾಳವಾಯಿತು.

ಸುಳ್ಳುಗಳನ್ನು ನಂಬಿದಂತೆ ನಟಿಸುವುದು ಜಾಯಮಾನವಾಯಿತು.

ಪ್ರಕೃತಿ ಮೇಲಿನ ನಿರಂತರ ಅನಾಚಾರವನ್ನು ತಡೆಯುವ ಶಕ್ತಿಯನ್ನು ಕಳೆದುಕೊಂಡು ಬಿಟ್ಟೆವು.

ಪ್ರಕೃತಿ, ಪರಿಸರ,ಕೃಷಿ ನಮ್ಮ ದೇಶದ ಮೂಲ ಬಂಡವಾಳ ಎಂಬುದನ್ನು ಮರೆತು ಸಾಗಿದೆವು.

ಯಾರೋ ಬಿಟ್ಟು ಹೋದ ಶಿಕ್ಷಣ ಪದ್ಧತಿಯನ್ನು ಆಚರಿಸುತ್ತ ಸಾಗಿದೆವು.

ಕೃಷಿ ಸಂಸ್ಕೃತಿಗೆ ಹೊಂದದ ನೀತಿಗಳನ್ನು ಪದವಿ ಎಂದು ಸಂಭ್ರಮಿಸಿದೆವು.

ಮುಖ್ಯವಾಗಿ “ಶಿಕ್ಷಣ-ಆರೋಗ್ಯ-ಕೃಷಿ” ಯೋಜನೆಗಳಿಗೆ ಕೊಡಬೇಕಾದ ಮಹತ್ವ ಕೊಡಲಿಲ್ಲ.

ಅತ್ಯಂತ ಪ್ರಾಮಾಣಿಕ ನಾಯಕ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಮಾತ್ರ ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಕೂಗಿದರು.

ಉಳಿದವರು ಅದನ್ನು ಮರೆತು ಮುಂದೆ ಸಾಗಿದರು.

ರವೀಂದ್ರನಾಥ ಟಾಗೋರ್ ಅವರ ರಾಷ್ಟ್ರ ಗೀತೆಯನ್ನು ಭಾವನಾತ್ಮಕ ಐಕ್ಯತೆಯ ಪ್ರತಿರೂಪವಾಗಿ ಹಾಡುವ ಏಕತೆಯನ್ನು ಪಡೆದುಕೊಂಡಿಲ್ಲ.

ನಮ್ಮ ಧ್ವನಿ ಇನ್ನೂ ಗಟ್ಟಿಯಾಗಬೇಕು.

ಭಾವನಾತ್ಮಕವಾಗಿ ಒಗ್ಗೂಡಿಸುವ ಇಚ್ಛಾಶಕ್ತಿ ಇರುವ ಸಮರ್ಥ ನಾಯಕನ ಹುಟುಕಾಟದ ಭರವಸೆಯಲ್ಲಿ ಕಾಲ ಕಳೆಯುತ್ತಿದ್ದೇವೆ.

ಈಗ ಅಪ್ಪಳಿಸಿದ ಕೋವಿಡ್ ಬಹುದೊಡ್ಡ ಪಾಠ ಕಲಿಸಿದೆ.

ಆರೋಗ್ಯ ಮತ್ತು ಪರಿಸರದ ಮಹತ್ವ ಅರ್ಥ ಮಾಡಿಸಿದೆ.

ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ಎದುರಿಸಿದ ಮೊಟ್ಟಮೊದಲ ಪೈಶಾಚಿಕ ದಾಳಿ ಇದಾಗಿದೆ.

ಇಡೀ ಜಗತ್ತಿನ ಅರ್ಥ ವ್ಯವಸ್ಥೆ ಕುಸಿದು ಹಳ್ಳ ಹಿಡಿದಿದೆ.

ಆ ಕೊಚ್ಚಿಯಲ್ಲಿ ನಾವೂ ತೇಲಾಡುತ್ತಿದ್ದೇವೆ.

ಈಗ ಅನ್ನ ಮತ್ತು ಆರೋಗ್ಯದ ಅರಿವು ಜಾಗೃತವಾಗಿದೆ ಆದರೆ ಇದು ಶಾಶ್ವತವಾಗಿ ಮನದಲ್ಲಿ ನೆಲೆಗೊಳ್ಳಬೇಕು ಅಂದಾಗ ಮಾತ್ರ ಭವಿಷ್ಯ ಇದೆ. ಇಲ್ಲದಿದ್ದರೆ ಪ್ರಕೃತಿ ಸರ್ವ ನಾಶ ಮಾಡುತ್ತದೆ.

ನಮ್ಮ ವ್ಯವಸ್ಥೆಯಲ್ಲಿ ಕನಿಷ್ಠ ಮೂರು ಕ್ಷೇತ್ರದಲ್ಲಿ ಬ್ರಷ್ಟತೆ ನಿಲ್ಲಲೇಬೇಕು.

ಶಿಕ್ಷಣ-ಆರೋಗ್ಯ-ಕೃಷಿ ‘ ನೀತಿಗಳಿಂದ ಮಾತ್ರ ದೇಶ ಕಟ್ಟಬಹುದು.

‘ಸಂಪೂರ್ಣ ಭ್ರಷ್ಟಾಚಾರ ತೊಲಗಲಿ ಅಂದಾಗ ಮಾತ್ರ ದೇಶ ಉದ್ಧಾರ ಸಾಧ್ಯ’ ಎಂಬ ಕನಸು ಕಾಣುವಷ್ಟು ‘ಸಿನಿಕ, ಮೂರ್ಖ’ ನಾನಲ್ಲ.

ಕೇವಲ ಮೇಲೆ ವಿವರಿಸಿದ ಮೂರೇ ಮೂರು ಕ್ಷೇತ್ರದಲ್ಲಿ ಪ್ರಾಮಾಣಿಕತೆ ಉಳಿದರೆ ದೇಶವನ್ನು ಸಮರ್ಥವಾಗಿ ಕಟ್ಟಲು ಸಂಪೂರ್ಣ ಭರವಸೆ ಪಡೆಯುತ್ತೇವೆ.

ಹೊಸ ಶಿಕ್ಷಣ ನೀತಿ ಅಷ್ಟೇ ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳಲಿ.

ಯೋಜನೆಗಳು, ಯೋಚನೆಗಳು ಸದಾ ಸುಂದರವಾಗಿರುತ್ತವೆ.

ಆದರೆ ಜಾರಿಗೊಳಿಸುವ ವ್ಯಕ್ತಿ ಮತ್ತು ವ್ಯವಸ್ಥೆ?

ಅದಕ್ಕೆ ಕಾಲವೇ ಉತ್ತರಿಸಬೇಕು.

ಆರೋಗ್ಯ ಕ್ಷೇತ್ರದಲ್ಲಿ ಅದ್ಭುತ ವೈದ್ಯರಿದ್ದಾರೆ ಆದರೆ ಔಷಧೀಯ ಮಾಫಿಯಾ ಇಡೀ ಜಗತ್ತನ್ನು ಆವರಿಸಿದೆ.

ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳು ಮಾಫಿಯಾ ಮುಕ್ತವಾಗಬೇಕು.

ಬನ್ನಿ ಭಾವನಾತ್ಮಕ ಐಕ್ಯತೆಯ ಭರವಸೆಯ ಕನಸು ಕಾಣುತ್ತ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸೋಣ.