- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಅಂಕಣ ಆರಂಭಿಸುವುದಕ್ಕೂ ಮುನ್ನ…
ಸಿನೆಮಾ ಮತ್ತು ಪುಸ್ತಕ ತೀರಾ ಖಾಸಗಿಯಾದವು. ಯಾಕಾಗಿ ಯಾವುದು ಯಾರಿಗೆ ಇಷ್ಟವಾಗಬಲ್ಲದು ಅನ್ನುವುದು ಒಂಥರದ ಒಗಟು. ಜಾಗತಿಕ ಮಾಪನಗಳನಿಟ್ಟುಕೊಂಡು ಒಂದಷ್ಟು ವರ್ಗೀಕರಿಸಿದರೂ, ಕೊನೆಗೆ ನಮಗೆ ಆಪ್ತವಾದದ್ದು ನಮ್ಮೊಳಗೇ ಬೆಚ್ಚಗೆ ಉಳಿದುಹೋಗುತ್ತದೆ. ಒಂದು ಸಿನೆಮಾ ಒಂದೊಳ್ಳೆ ಪುಸ್ತಕದ ಥರ ಕಾಣಬಹುದು, ಹಾಗೇ ಒಂದು ಪುಸ್ತಕ ಒಂದೊಳ್ಳೆ ಸಿನೆಮಾದ ಥರ ಆವರಿಸಿಕೊಳ್ಳಬಹುದು. ಜಗತ್ತಿನ ಅನೇಕ ಶ್ರೇಷ್ಠ ಸಿನೆಮಾಗಳು ಕಾದಂಬರಿ ಆಧಾರಿತ ಸಿನೆಮಾಗಳಾಗಿವೆ. ಇನ್ನು ಕೆಲವಷ್ಟು ಬದುಕಿನಿಂದಲೇ ನೇರವಾಗಿ ಅದ್ದಿ ತೆಗೆದ ರೀಲಿನ ಚಲನೆಗಳಾಗಿವೆ. ಬದುಕಿನ ಪ್ರತೀ ಕ್ಷಣ ನೆರಳಂತೆ ಸಿನೆಮಾ ನಮ್ಮನ್ನು ಹಿಂಬಾಲಿಸುತ್ತದೆ. ಎಲ್ಲೋ ಯಾವತ್ತೋ ನೋಡಿದ ಸಿನೆಮಾ ಇನ್ನ್ಯಾವತ್ತೋ ನಮ್ಮನ್ನು ಕಾಡಬಹುದು. ಇನ್ನ್ಯಾರನ್ನೋ ನೋಡಿ ಮತ್ತೆ ನೆನಪಾಗಬಹುದು. ಅದೆಷ್ಟೋ ಮಹತ್ತರ ಬದಲಾವಣೆಗೆ ಸಿನೆಮಾವೇ ಕಾರಣವೂ ಆಗಬಹುದು. ನಮ್ಮ ನೆಲದಲ್ಲೇ, ಸಿನೆಮಾ ನೋಡಿ ಮನೆಗೆ ಮರಳಿ ಬಂದವರಿದ್ದಾರೆ, ನಗರ ಬದುಕನ್ನು ತಳ್ಳಿಹಾಕಿ ನೇಗಿಲು ಹಿಡಿದವರಿದ್ದಾರೆ. ಇದ್ದಕ್ಕಿದ್ದಂತೆ ಎಲ್ಲವನ್ನೂ ಬಿಟ್ಟು ಹಿಮಾಲಯಕ್ಕೆ ಹೋದವರಿದ್ದಾರೆ. ಬೇರೆ ಬೇರೆ ದೇಶ ಸಂಸ್ಕೃತಿಗಳ ಆಸ್ವಾದಿಸುತ್ತೇನೆ ಅಂತ ಪ್ರವಾಸಿ ಬದುಕನ್ನೇ ನೆಚ್ಚಿಕೊಂಡವರಿದ್ದಾರೆ. ಸಿನೆಮಾವೇ ನೇರ ಹೊಣೆ ಅಂತಲ್ಲದಿದ್ದರೂ, ಎಲ್ಲೋ ಒಂದು ದೃಶ್ಯ, ಒಂದು ಹಾಡು, ಒಂದು ಮಾತು ಒಂದು ಸಣ್ಣ ತುಡಿತವನ್ನು ಹುಟ್ಟುಹಾಕಿರಬಹುದಾದ ಸಾಧ್ಯತೆಗಳೇ ಹೆಚ್ಚಿವೆ. ಇವು ಒಂದು ಕಡೆಯಾದರೆ, ಇನ್ನು ಜಗತ್ತಿನ ಅದೆಷ್ಟೋ ಮಹತ್ವದ ವಿದ್ಯಮಾನಗಳಿಗೆ ಸಿನೆಮಾ ಧ್ವನಿಯಾಗಿದೆ, ಪ್ರತಿಭಟಿಸಿದೆ, ಸಂತೈಸಿದೆ. ಈ ಅಂಕಣದಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ನನ್ನನ್ನು ಕಾಡಿದ ಸಿನಿಮಾಗಳ ಕುರಿತಾಗಿ ಇಷ್ಟೇ ಇಷ್ಟು ಹೇಳಲಿದ್ದೇನೆ. ಇದು ವಿಮರ್ಶೆ ಖಂಡಿತಾ ಅಲ್ಲ, ಜೊತೆಗೆ ಹೀಗೆ ಮಾಡುತ್ತಿರುವವರಲ್ಲಿ ನಾನು ಮೊದಲಿಗನೂ ಅಲ್ಲ, ಕೊನೆಯವನೂ ಅಲ್ಲ. ನಾನು ಈ ಹೊತ್ತಿನ ನಿಮಿತ್ತ ಮಾತ್ರ.. !
ಶ್ರೀ ತಲಗೇರಿ
*******
ಅಸ್ತಿತ್ವದ ಹೋರಾಟ ‘ದಿ ಓಲ್ಡ್ ಮ್ಯಾನ್ & ದಿ ಸೀ’
ಆಹಾರ ಸರಪಳಿಯಲ್ಲಿ ಒಂದು ಇನ್ನೊಂದನ್ನು ತಿನ್ನುತ್ತಲೇ, ಜೀವ ವರ್ಗದ ಅನುಪಾತದ ಹೊಂದಾಣಿಕೆಯನ್ನು ಕಾಪಾಡಿಕೊಂಡು ಬರುತ್ತಿರುವುದು ಇಂದು ನಿನ್ನೆಯ ಸಂಗತಿಯಲ್ಲ. ಉಳಿದ ಎಲ್ಲಾ ಪ್ರಾಣಿಗಳಿಗಿಂತ ಬೌದ್ಧಿಕವಾಗಿ ಔನ್ನತ್ಯ ಸಾಧಿಸಿದವನು ಮನುಷ್ಯ ಅಂತ ಮನುಷ್ಯನೇ ಹೇಳಿಕೊಂಡಿರುವಾಗಲೂ, ನಡೆವಳಿಕೆಗಳು ಮಾತ್ರ ಒಮ್ಮೊಮ್ಮೆ ತದ್ವಿರುದ್ಧವಾಗಿರುತ್ತವೆ. ಬಹುತೇಕ ಎಲ್ಲಾ ಪ್ರಾಣಿಗಳೂ ಹಸಿವಾದಾಗ ಮಾತ್ರ ತಿಂದರೆ, ಮನುಷ್ಯ ಬೇಜಾರಾದಾಗ, ಮೋಜಿಗಾಗಿ, ವಿನೋದಕ್ಕಾಗಿ, ಖಾಲಿ ಕೂತಾಗ, ರುಚಿಗೆ ಹದ ತಪ್ಪಿ, ಬಯಕೆ ಹೆಚ್ಚಾಗಿ ಇತ್ಯಾದಿ ಇತ್ಯಾದಿ ಕಾರಣಗಳಿಗೆ ತಿನ್ನುತ್ತಲೇ ಇರುತ್ತಾನೆ. ಹೀಗೆ ಮನುಷ್ಯನ ಹಸಿವನ್ನು ನೀಗಿಸಲು ಮನುಷ್ಯನೇ ಹಲವು ಉದ್ಯೋಗಗಳನ್ನು ತನಗೆ ತಾನೇ ಹುಟ್ಟುಹಾಕಿಕೊಂಡಿದ್ದಾನೆ. ಒಂದರ್ಥದಲ್ಲಿ ಮನುಷ್ಯನ ಹಸಿವನ್ನು ಮನುಷ್ಯನೇ ನೀಗುವ ಕೆಲಸ ಇದು. ಇಲ್ಲಿ ಪೂರೈಕೆ ಮತ್ತು ಬೇಡಿಕೆ ಎರಡೂ ಮನುಷ್ಯನದೇ. ಆಹಾರ ಮಾತ್ರ ಬೇರೆ ಬೇರೆ! ಇಂಥದ್ದೇ ಒಂದು ಉದ್ಯೋಗವನ್ನು ನೆಚ್ಚಿಕೊಂಡು ಕಡಲ ಹಾಡಿಗೆ ದನಿಗೂಡಿಸುವವನು ಬೆಸ್ತ. ಪೂರ್ವದಲ್ಲಿ ಚಿತ್ರ ಬಿಡಿಸಲು ಚಿಕ್ಕ ಮಕ್ಕಳಂತೆ ಬಣ್ಣಗಳನ್ನು ಸೂರ್ಯ ಚೆಲ್ಲುತ್ತಿರುವ ಸಮಯದಲ್ಲೇ ತನ್ನ ನಿದ್ರೆಗೆ ವಿದಾಯ ಹೇಳಿ, ಮನೆಯಿಂದ ಹೊರಬಿದ್ದು ಉಸುಕಿನ ಮೇಲೆ ಕಡಲ ಉಪ್ಪುನೀರಿನ ಹವೆಗೆ ಮೈಚೆಲ್ಲಿ ಕೂತಿರುವ ತನ್ನ ದೋಣಿಯನ್ನು ನೀರಿಗಿಳಿಸಿ ತಾನೂ ಹೊರಡುತ್ತಾನೆ ಬೆಸ್ತ. ಇಂದು ಈ ದಿಕ್ಕು ನಿನ್ನೆ ಆ ದಿಕ್ಕು, ಹೀಗೆ ದಿಕ್ಕುಗಳ ದಾರಿ ಹಿಡಿದು ಹೊರಡುವವನ ಬಲೆಗೆ, ಗಾಳಕ್ಕೆ ಸಿಗಬಹುದಾದ ಮೀನುಗಳು ಮರುದಿನ ಮಸಾಲೆ ಹಚ್ಚಿಸಿಕೊಂಡೋ, ಇಲ್ಲಾ ಸಾಂಬಾರಿಗೆ ಹೋಳುಗಳಾಗಿಯೋ ಇನ್ನೊಬ್ಬನ ಹಸಿವಿಗೆ ತೇಗು ಬರಿಸುತ್ತವೆ. ಇಂಥದ್ದೊಂದು ಬೆಸ್ತನ ಕಥಾನಕವನ್ನೇ ಆಧಾರವಾಗಿಟ್ಟುಕೊಂಡಿರುವ ಸಿನೆಮಾ ‘ದಿ ಓಲ್ಡ್ ಮ್ಯಾನ್ & ದಿ ಸೀ’
ಅಂತಿಮವಾಗಿ ಗೆಲುವಿನ ಹಣೆಪಟ್ಟಿ ಸಿಗದಿದ್ದಲ್ಲಿ ನಮ್ಮೆಲ್ಲರ ಪ್ರಯತ್ನವೂ ವ್ಯರ್ಥ ಅನ್ನುವ ಮನೋಭಾವ ಸದಾ ನಮ್ಮೆಲ್ಲರಲ್ಲೂ ಇದ್ದು ಗೆಲುವಿಗಾಗಿ ಹಪಹಪಿಸುವ ಹಾಗೆ ಅದು ನಮ್ಮನ್ನು ನೋಡಿಕೊಳ್ಳುತ್ತದೆ. ಒಂದರ್ಥದಲ್ಲಿ ಅದು ಎಚ್ಚರಿಕೆಯ ಗುರುತೂ ಆಗಬಹುದಾದರೂ, ಸೋಲನ್ನು ಸ್ವೀಕರಿಸಲಾರದೇ ಇರಬಹುದಾದ ಅಸಹಜ ವಾತಾವರಣ ನಮ್ಮೆಲ್ಲರದ್ದು. ಅದರಲ್ಲೂ ಈ ಹೊತ್ತಿಗೆ ಎಲ್ಲವೂ ಎಲ್ಲರೂ ಬೆಳಕಿನ ವೇಗವನ್ನೇ ಮೀರಬೇಕು ಅನ್ನುವಷ್ಟು ಧಾವಂತದಲ್ಲಿರುವಾಗ ಗೆಲುವಿಗೂ ಅಂಥದ್ದೇ ಒಂದು ವೇಗ ಬೇಕು ಅನ್ನುವುದು ಸಹಜ ಆಶಯವೇ. ಗೆಲುವಿನ ವ್ಯಾಖ್ಯಾನವಾದರೂ ಎಂಥದ್ದು ಅಂತ ಯೋಚಿಸಲಿಕ್ಕೆ ಹೋದರೆ ಪುಟ್ಟ ಪುಟ್ಟ ಮೈಲಿಗಲ್ಲುಗಳೇ ನಮ್ಮ ಪಯಣದ ಅಂತಿಮವೇನೋ ಅನ್ನುವಷ್ಟು ಬದಲಾಗಿದ್ದೇವೆ. ಇಂಥ ಸೋಲುಗೆಲುವಿನ ತೂಕದ ಕತೆಯನ್ನು ಹೇಳಹೊರಟಿರುವ ಸಿನೆಮಾ ‘ದಿ ಓಲ್ಡ್ ಮ್ಯಾನ್ & ದಿ ಸೀ’. ಇದು ಎಲ್ಲರಿಂದ ದೂರಾಗಿ ಕಡಲಿನಲ್ಲಿ ಒಬ್ಬನೇ ಒಬ್ಬ ಬೆಸ್ತ ಪ್ರತಿಕೂಲ ವಾತಾವರಣದ ವಿರುದ್ಧ ಹೋರಾಡುವ ಕತೆ. ಒಂದೆಡೆ ಬಡತನ, ಇನ್ನೊಂದೆಡೆ ಸುಕ್ಕುಸುಕ್ಕು ಚರ್ಮ. ಆ ಪ್ರದೇಶದಲ್ಲೇ ಅತ್ಯಂತ ಶ್ರೇಷ್ಠ ಮೀನುಗಾರ ಎನಿಸಿಕೊಂಡವರಲ್ಲಿ ಇವನೂ ಒಬ್ಬ. ಆದರೆ ಕಳೆದ ೮೪ ದಿನಗಳಿಂದ ಒಂದೇ ಒಂದು ಮೀನೂ ಸಿಗದೇ ಪ್ರತಿ ದಿನ ಖಾಲಿ ಕೈಯಲ್ಲಿ ಮರಳುತ್ತಿದ್ದ. ಹೊಸ ಹೊಸ ಮೀನುಗಾರರು, ಹೊಸ ಜನಾಂಗ ಇವನನ್ನು ನೋಡಿ ಗೇಲಿಮಾಡುತ್ತಿರುವಾಗ ಈತ ಮಾತ್ರ ನಾಳೆ ಸಿಕ್ಕೇ ಸಿಗುತ್ತದೆ ಅನ್ನುವ ಭರವಸೆ ಇಟ್ಟುಕೊಂಡೇ ಪ್ರತಿದಿನ ಮೀನು ಹಿಡಿಯಲು ಹೋಗುತ್ತಿದ್ದ. ಅವನಿಗೆ ಇದ್ದ ಒಂದೇ ಒಂದು ಸಂಬಂಧವೆಂದರೆ ಒಬ್ಬ ಪುಟ್ಟ ಹುಡುಗ. ಅವನು ಅವನಿಗೆ ನೇರವಾಗಿ ಯಾವ ಸಂಬಂಧಿಕನೂ ಅಲ್ಲ, ಆದರೆ ಆ ಹುಡುಗನಿಗೆ ಇವನನ್ನು ಕಂಡರೆ ತಾತನ ಆಪ್ತತೆ. ಮೀನುಗಳ ಕುರಿತಾಗಿ, ಆ ತಾತನ ಹರೆಯದ ದಿನಗಳ ಕುರಿತಾಗಿ, ಬೇಸ್ ಬಾಲ್ ಪ್ರೀತಿಯ ಕುರಿತಾಗಿ ಪದೇ ಪದೇ ಅವರಿಬ್ಬರೂ ಮಾತಾಡಿಕೊಳ್ಳುತ್ತಿದ್ದರು. ತಾತನಲ್ಲಿ ಅಪಾರ ನಂಬಿಕೆ ಈ ಹುಡುಗನಿಗೆ. ಊರೆಲ್ಲಾ ಈ ಮುದುಕನನ್ನು ಗೇಲಿ ಮಾಡಿದರೆ ಈ ಹುಡುಗ ಮಾತ್ರ ಭಕ್ತನಂತೆ ಉಪಚರಿಸುತ್ತಿದ್ದ. ಹೀಗಿರುವಾಗ ೮೫ನೇ ದಿನವೂ ಬೆಳಿಗ್ಗೆಯೇ ಎದ್ದು ಆ ತಾತ ಮತ್ತೆ ಮೀನು ಹಿಡಿಯಲು ಹೊರಡುತ್ತಾನೆ. ಆದರೆ ಆವತ್ತಿನ ದಿನ ತಾತನ ಬದುಕಲ್ಲಿ ಒಂದು ಮಹತ್ವದ ದಿನವಾಗಿ ಬದಲಾಗುತ್ತದೆ.
ಉಳಿದ ಎಲ್ಲಾ ಮೀನುಗಾರರಿಂದ ದೂರವಾಗಿ ಹೊರಟವನಿಗೆ ಸುಮಾರು ಹೊತ್ತಿನ ಮೇಲೆ ಮೀನೊಂದು ಸಿಗುತ್ತದೆ. ಒಂದು ಮೀನಿನ ಜೊತೆ ಮನುಷ್ಯ ಹೋರಾಡುವಂಥದ್ದು ಏನಿರುತ್ತದೆ? ಈ ಹೋರಾಟದ ಫಲಿತಾಂಶ ಏನು? ಸಮುದ್ರ ಅಂದ ಮೇಲೆ ಬರೀ ಒಂದೇ ಮೀನಿರುತ್ತದಾ? ಇಲ್ಲ, ಹಾಗಾದರೆ ಆ ತಾತ ಹೋರಾಡುವುದಾದರೂ ಯಾರ ಜೊತೆ? ಯಾತಕ್ಕಾಗಿ ಆ ಹೋರಾಟ? ಕೂಗಳೆತೆಗೆ ಬಿಡಿ,ಕಣ್ಣಳತೆಗೂ ಬೇರೆ ಯಾವ ದೋಣಿಯೂ ಕಾಣದೇ ಇರುವ ಸಮುದ್ರದ ಭಾಗದಲ್ಲಿ ಕಡಲು, ಮೀನು, ದೋಣಿ,ಮುದುಕ ಇವರ ಮಧ್ಯ ಒಂದು ಮೈನವಿರೇಳಿಸುವ ಕತೆ ಹುಟ್ಟಿಕೊಳ್ಳುವುದಾದರೂ ಹೇಗೆ ಮತ್ತು ಯಾಕೆ? ಸೋಲೆಂದರೆ ಯಾವುದು,ಗೆಲುವೆಂದರೆ ಏನು? ಇತ್ಯಾದಿ ಪ್ರಶ್ನೆಗಳಿಗೆ ಸಿನೆಮಾ ಉತ್ತರಿಸುತ್ತದೆ.
ಇಡೀ ಮನುಕುಲದ ಮೂಲಸತ್ವ ಅಡಗಿರುವುದು ಕರುಣರಸದಲ್ಲಿ ಅಂತ ನಮ್ಮ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ನಮಗೆ ಹೇಳುತ್ತದೆ. ಕೊಲ್ಲುವವನು ತನ್ನ ಎದುರಾಳಿಯನ್ನು ನಡೆಸಿಕೊಳ್ಳುವ ರೀತಿಯಲ್ಲೂ ಒಂದು ಘನತೆಯಿರುತ್ತದೆ. ಹಾಗೇ ಸಾಯುವವನಿಗೂ ಅವನದ್ದೇ ಆದ ಒಂದು ಘನತೆಯಿರುತ್ತದೆ. ಕೆಲವು ಅನಿವಾರ್ಯ ಕಾರಣಗಳಿಗಾಗಿ ಈ ಹೋರಾಟ ಅಗತ್ಯವಾದಾಗ ಕೊಲ್ಲುವವನ ಮನಃಸ್ಥಿತಿ ಹಾಗೂ ಸಾಯುವವನ ಮನಃಸ್ಥಿತಿ ಹೇಗಿರಬೇಕು ಅಥವಾ ಹೇಗಿರಬಹುದು ಅನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ನಮ್ಮ ಮಹಾಕಾವ್ಯಗಳು ಹೇಳಿವೆ. ಈ ಸಿನೆಮಾ ಕೂಡಾ ಈ ತತ್ವವನ್ನು ಪ್ರತಿಪಾದಿಸುತ್ತದೆ. ಬೆಸ್ತನಿಗೆ ಮೀನುಗಾರಿಕೆ ಅನಿವಾರ್ಯ, ಮೀನನ್ನು ಸಾಯಿಸುವುದು ಅವನ ಮೋಜಲ್ಲ, ಅದು ವೃತ್ತಿಧರ್ಮ. ಹೀಗಿರುವಾಗ ಪಾಪ ಪುಣ್ಯಗಳ ವಿಶ್ಲೇಷಣೆಯಲ್ಲಿ ಬೆಸ್ತನದ್ದು ಪಾಪವೇ ಪುಣ್ಯವೇ? ಬಾಲ್ಯದಲ್ಲಿ ನಾವು ಕೆಲವರಾದರೂ ಈ ಮಾತನ್ನು ಕೇಳಿರುತ್ತೇವೆ, “ಕೊಂದ ಪಾಪ ತಿಂದು ಪರಿಹಾರ” ಅಂತ. ಈ ಎಲ್ಲವುಗಳ ಸಂಕಟದ ಮಧ್ಯ ಒಂದು ಕಡೆ ಆ ಬೆಸ್ತ ಆ ಮೀನಿನ ಹತ್ತಿರ ನೀನು ನನ್ನ ಸಹೋದರ ಅಂತಲೂ ಹೇಳುವಾಗ ಆ ಮೀನುಗಾರನಿಗೆ ಆ ಮೀನಿನೊಂದಿಗೆ ಅಂಥ ನಿಕಟ ಬಾಂಧವ್ಯ ಬೆಳೆಯುವುದಾದರೂ ಹೇಗೆ ಅನ್ನುವ ಪ್ರಶ್ನೆಗೆ ಉತ್ತರ ಕೂಡಾ ಸಿನೆಮಾದಲ್ಲಿದೆ. ಸಮುದ್ರದುದ್ದಕ್ಕೂ ಆ ಪುಟ್ಟ ಹುಡುಗನ ಅನುಪಸ್ಥಿತಿಯನ್ನು ನೆನೆಯುವ ತಾತ, ಇಲ್ಲಿ ತಾತನ ಕುರಿತಾಗಿ ಕಾಳಜಿ ತೋರುವ ಒಬ್ಬನೇ ಒಬ್ಬ ನರಜೀವಿ ಈ ಹುಡುಗ ಇವರಿಬ್ಬರ ನಡುವಣ ಆ ಹೇಳಿಕೊಳ್ಳದ ಬಂಧ ಮತ್ತೆ ಮನುಷ್ಯ ಸಂಬಂಧಗಳ ನಡುವಿನ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ.
ದಿ ಓಲ್ಡ್ ಮ್ಯಾನ್ & ದಿ ಸೀ ಅನ್ನೋ ಈ ಸಿನೆಮಾಕ್ಕೆ ಅದೇ ಹೆಸರಿನ ಕಾದಂಬರಿಯೇ ಮೂಲ. ಅರ್ನೆಸ್ಟ್ ಹೆಮಿಂಗ್ವೇ ( Ernest Hemingway) ಬರೆದ ಈ ಕಾದಂಬರಿಗೆ ೧೯೫೩ರಲ್ಲಿ ಪುಲಿಟ್ಜೆರ್ ಪ್ರಶಸ್ತಿ ಹಾಗೂ ೧೯೫೪ರಲ್ಲಿ ನೋಬೆಲ್ ಪಾರಿತೋಷಕ ಕೂಡಾ ಲಭಿಸಿದೆ. ಈ ಕಾದಂಬರಿಯನ್ನು ಆಧರಿಸಿ ಎರಡು ಮೂರು ಸಿನೆಮಾಗಳು ಇದೇ ಹೆಸರಿನಲ್ಲಿ ಬಂದಿವೆ ಅನಿಸುತ್ತದೆ. ೧೯೫೮ರಲ್ಲಿ, ೧೯೯೦ರಲ್ಲಿ ಹಾಗೂ ೧೯೯೯ರಲ್ಲಿ ಕೂಡಾ ಈ ಕಾದಂಬರಿ ಸಿನೆಮಾ ಆಗಿ ತಯಾರಾಗಿದೆ. ೧೯೫೮ರಲ್ಲಿ ಜಾಹ್ನ್ ಸ್ಟರ್ಜಸ್ ( John Sturges) ಅವರು ನಿರ್ದೇಶಿಸಿದ ಚಿತ್ರಕ್ಕೆ ೧೯೫೯ರ ಅಕ್ಯಾಡೆಮಿ ಉತ್ತಮ ಸಂಗೀತ ಪ್ರಶಸ್ತಿ ಕೂಡಾ ಲಭಿಸಿದೆ. ನಾನಿಲ್ಲಿ ಪರಿಗಣಿಸಿರುವುದು ಜಡ್ ಟೈಲರ್ ( Jud Tylor ) ಅವರು ೧೯೯೦ರಲ್ಲಿ ನಿರ್ದೇಶಿಸಿದ ಸಿನೆಮಾ. ಕಾದಂಬರಿಯನ್ನು ಗಮನದಲ್ಲಿಟ್ಟುಕೊಂಡು ಸಿನೆಮಾವನ್ನು ಪರಿಗಣಿಸಿದರೆ, ಇಲ್ಲಿ ಸಿನೆಮಾ ಆಗುವಲ್ಲಿ ಚೂರು ಸೋತಿದೆ ಅನ್ನಬಹುದು ಅಥವಾ ಮಿನಿ ಸೀರೀಸ್ ( Mini Series ) ಅಡಿಯಲ್ಲಿ ತಯಾರಾದ ಚಿತ್ರವಾದ್ದರಿಂದ ಕೂಡಾ ಹೀಗೆ ಇರಬಹುದು. ಕಾದಂಬರಿಯಲ್ಲಿ ಪಾತ್ರಗಳನ್ನು ನಿಧಾನವಾಗಿ ಕಟ್ಟಿಕೊಡುತ್ತಾ ಹೋಗುತ್ತಾರೆ ಲೇಖಕರು. ಕಾದಂಬರಿಯಲ್ಲಿ ಬರುವ ಸೂಕ್ಷ್ಮ ವಿವರಗಳನ್ನು ತೆರೆಯ ಮೇಲೆ ತರುವಾಗ ಕೈಬಿಡಲಾಗಿದೆ; ಹಾಗಾಗಿ ಸಿನೆಮಾ ಕಾದಂಬರಿಯಷ್ಟು ಪರಿಣಾಮಕಾರಿ ಆಗಿಲ್ಲ ಅನ್ನಬಹುದು. ಕಾದಂಬರಿಯಲ್ಲಿ ಮನುಷ್ಯ ಜಗತ್ತು, ಸಮುದ್ರ ಪ್ರಪಂಚ, ತಣ್ಣನೆಯ ಕ್ರೌರ್ಯದ ಜೊತೆಗೇ ತಳುಕು ಹಾಕಿಕೊಂಡಿರುವ ಮಾನವೀಯತೆ ಹಾಗೂ ಅಸ್ತಿತ್ವದ ಹೋರಾಟ ಇವೆಲ್ಲವುಗಳ ಮುಖಾಮುಖಿಯನ್ನು ಕುಸುರಿಯ ಹಾಗೆ ಇಡಲಾಗಿದೆ. ಇಡೀ ಸಿನೆಮಾ ಮತ್ತು ಕಾದಂಬರಿಯ ಮುಖ್ಯ ನೆಲೆಯಿರುವುದು “a man can be destroyed, but not defeated” ಅನ್ನುವ ಮಾತಿನಲ್ಲಿ.
Jud Tylor and Hemingway
ಒಂದು ಅಪ್ರತಿಮ ಹೋರಾಟ, ಬದುಕಿನ ಕುರಿತಾದ ಬತ್ತದ ಭರವಸೆ, ಸೋಲಿಗೆ ಮತ್ತು ಗೆಲುವಿಗೆ ಹೊಸ ವ್ಯಾಖ್ಯಾನ, ಒಂಟಿತನದಲ್ಲಿ ಮನುಷ್ಯ ಹೇಗೆ ಗಟ್ಟಿಯಾಗಬಲ್ಲ, ದೇಹದ ವಯಸ್ಸಿಗೂ ಮನಸ್ಸಿನ ಚೈತನ್ಯಕ್ಕೂ ಸಂಬಂಧವಿದೆಯಾ ಇತ್ಯಾದಿಗಳ ಜೊತೆಜೊತೆಗೆ ರಕ್ತಸಂಬಂಧಗಳಾಚೆ ಮನುಷ್ಯ ಹೇಗೆ ಮಾನವೀಯ ಬಾಂಧವ್ಯಗಳನ್ನು ಕಟ್ಟಿಕೊಳ್ಳುತ್ತಾನೆ, ಹಂಚಿಕೊಳ್ಳುತ್ತಾನೆ ಅನ್ನುವುದಕ್ಕೆ ಉತ್ತಮ ಉದಾಹರಣೆ ಈ ಚಿತ್ರ ಹಾಗೂ ಕಾದಂಬರಿ. ಲೈಫ್ ಆಫ್ ಪೈ ( Life of Pi ) ಚಿತ್ರ ನೆನಪಾದರೆ ಅದಕ್ಕೆ ಕಡಲು, ಅಲ್ಲಿನ ಪ್ರಯಾಣ ಹಾಗೂ ಒಂಟಿತನಕ್ಕೆ ಮದ್ದೆಂಬಂತೆ ಹುಟ್ಟಿಕೊಳ್ಳುವ ಸಂಬಂಧಗಳು ಮಾತ್ರ ಕಾರಣ!
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..