- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಸಾಹಿತ್ಯದ ಹರಿವು ಬಾಯಿ ಮಾತಿನಿಂದ ಹಿಡಿದು, ಬರವಣಿಗೆ, ಮುದ್ರಣ, ಪುಸ್ತಕ ವಿತರಣ, ಪುಸ್ತಕ ಭಂಡಾರಗಳಲ್ಲಿ ದಾಸ್ತಾನು ಹೀಗೆ ಅನೇಕ ವಿಧಗಳಾಗಿ ನಮಗೆ ಕಂಡಿದೆ. ಬಾಯಿಮಾತಿನಿಂದ ಹರಡಿದ ಸಾಹಿತ್ಯ ದಾಖಲೆಗೊಳ್ಳದೆ ಅನೇಕ ವಚನಗಳು, ಪದಗಳು ಮತ್ತು ಕೃತಿಗಳು ನಮಗೆ ಅಲಭ್ಯವಾಗಿವೆ. ಬರವಣಿಗೆ ಆರಂಭವಾದ ಮೇಲೆ ಈ ಅಡಚಣೆ ಸ್ವಲ್ಪ ಮಟ್ಟಿಗೆ ತಹಬಂದಿಗೆ ಬಂದಿತು. ತಾಳೆಗರಿಗಳ ಮೇಲೆ ಬರೆಯಲ್ಪಟ್ಟ ಮಹಾನ್ ಕೃತಿಗಳು ಮನುಕುಲಕ್ಕೆ ಓದಲು, ತಿಳಿಯಲು ಸಿಕ್ಕವು. ಆದರೆ ತೊಂದರೆ ಸಂಪೂರ್ಣವಾಗಿ ನೀಗಲಿಲ್ಲ. ಗರಿಗಳು ತುಂಬಾ ದಿನಗಳು ನಿಲ್ಲಲಾರದೆ ಹೋಗಿ, ಗೆದ್ದಲು, ಅಗ್ನಿ, ನೆರೆಗಳ ಹಾವಳಿಯಲ್ಲಿ ನಶಿಸಿ ಹೋಗುತ್ತಿದ್ದವು. ಮುದ್ರಣಾ ಸವಲತ್ತು ಬಂದ ಮೇಲೆ ಮುದ್ರಿಸಲ್ಪಟ್ಟ ಪುಸ್ತಕಗಳು ತುಂಬಾ ಸಮಯದವರೆಗೆ ಉಳಿದು ಸಾಹಿತ್ಯ ಹರಡಲು ನೆರವಾದವು. ಇಲ್ಲೂ ಅಗ್ನಿ ಮತ್ತು ನೆರೆ ಮುಂತಾದ ಹಾವಳಿಯ ಹೆದರಿಕೆ ಇದ್ದರೂ ಮರುಮುದ್ರಣದ ಅನುಕೂಲವಿರುತ್ತಿದ್ದರಿಂದ ಒಂದು ಥರದ ನೆಮ್ಮದಿ ನೆಲೆಸಿತು.
ಅಂತರ್ಜಾಲದ ಉಗಮವಾಗಿದ್ದು ಅದರ ವಾಣಿಜ್ಯ ವ್ಯವಹಾರಗಳ ಉಪಯೋಗದ ಜೊತೆಗೆ ಸಾಹಿತ್ಯವೂ ಈ ಮಾಧ್ಯಮವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಆರಂಭಿಸಿತು. ಈ ಮಾಧ್ಯಮಕ್ಕೆ ಮತ್ತೊಂದು ಆಕರ್ಷಣೆ ಇತ್ತು. ಉಚಿತ. ಹಾಗಾಗಿ ಇದರ ಉಪಯೋಗ ಅನೇಕ ಪಟ್ಟುಗಳು ವೃದ್ಧಿಗೊಂಡಿತು. ಸ್ಥಳೀಯ ಭಾಷೆಗಳ ತಂತ್ರಾಂಶಗಳ ಆವಿಷ್ಕಾರದ ನಂತರ ಈ ಭಾಷೆಗಳಲ್ಲಿ ಸಹ ಗಣಕಗಳ ಮೇಲೆ ಬರವಣಿಗೆ ಶುರುವಾಗಿ ಅದು ಮಿಂಚಿನ ವೇಗದಲ್ಲಿ ತಲುಪಲು ನೆರವಾಗಿ ಸಾಹಿತ್ಯ ಅನೇಕ ಆಯಾಮದವರಿಗೆ ವೇಗವಾಗಿ ತಲುಪಿ, ಅದರ ಬಗ್ಗೆ ನಿರ್ಧಾರಗಳನ್ನು ತಗೆದುಕೊಳ್ಳಲು ಸುಲಭವಾದದ್ದಷ್ಟೇ ಅಲ್ಲದೆ ಒಂದು ಕ್ರಾಂತಿ ಬಂದ ಹಾಗಾಯಿತು. ಸರಕಾರ ಸಹ ತನ್ನದೇ ಆದ ನೆರವು ನೀಡಿ, ತಂತ್ರಾಂಶ ಬಳಸಲು ತನ್ನ ಬೆಂಬಲ ಸೂಚಿಸಿತು. ಅನೇಕ ಜನ ಬರಹಗಾರರು ಇವುಗಳನ್ನು ಕಲಿತು, ಅಳವಡಿಸಿಕೊಂಡು, ಮತ್ತೆ ಮತ್ತೆ ಬರೆದು ತಿದ್ದುವ ಕಸರತ್ತನ್ನು ಕಮ್ಮಿ ಮಾಡಿಕೊಂಡರು. ಬರೆದ ಮೂಲಪ್ರತಿಯನ್ನು ತಲುಪಿಸಲು ಅಂಚೆಯವರ ವಿಳಂಬಕ್ಕೆ ಅಥವಾ ಕಾಣೆಯಾಗುವ ಕಷ್ಟಕ್ಕೆ ನೊಂದಿದ್ದ ತಮ್ಮ ಬರಹಗಳ ಕ್ಷೇಮವಾಗಿ ತಲುಪುತ್ತಿರುವುದು ಮತ್ತು ಅದು ತಮಗೆ ತಿಳಿಯುತ್ತಿರುವುದು ಕಂಡು ನಿಟ್ಟುಸಿರೆಳೆದರು. ಹಳೆಯ ಪುಸ್ತಕಗಳನ್ನು ಡಿಜಿಟಲೈಸ್ ಮಾಡಿ ಮುಂದಿನ ತಲೆಮಾರುಗಳಿಗೆ ಒದಗಿಸುವ ಅವಕಾಶ ಸಹ ಬಂದು, ಇದರಿಂದ ಅನೇಕ ಹಳೆಯ ಪುಸ್ತಕಗಳನ್ನು ಜೋಪಾನ ಮಾಡಲು ಸಾಧ್ಯವಾಗಿದೆ. ಈ ಮಾಧ್ಯಮಕ್ಕೆ ಅಂಟಿ ಬಂದ ಅದರದ್ದೇ ಲೋಪದೋಷಗಳಿದ್ದರೂ ಅಂತರ್ಜಾಲ ತನ್ನದೇ ಒಂದು ಸ್ಥಾನ ಪಡೆದುಕೊಂಡಿತು. ಆದರೆ ಅಂತರ್ಜಾಲಕ್ಕೊಂದು ಸಾಮಾಜಿಕ ಜಾಲತಾಣದ ಬಿರುದು ಸಿಕ್ಕಿರಲಿಲ್ಲ. ಗಣಕ ಯಂತ್ರದಲ್ಲಿ ಮಾತ್ರ ಉಪಯೋಗಿಸಬಹುದಾದ ಈ ಅಂತರ್ಜಾಲದ ಉಪಯೋಗವನ್ನು ಒಂದು ತಲೆಮಾರಿನ ಜನರು ಅದರ ಶಿಕ್ಷಣವಿಲ್ಲದೇ ಪಡೆಯಲಾರದಾದರು.
ಆಗ ಬಂದಿತ್ತು ಮುಖಪುಸ್ತಕವೆನ್ನುವ ಒಂದು ಪ್ರಭಂಜನ. ಕಾಲಿಟ್ಟಾಗ ಪ್ರಭಂಜನವೆನಿಸಿಕೊಂಡಿತೋ ಇಲ್ಲವೋ ಆಗಲಿ ಅದಕ್ಕೆ ನಮ್ಮ ಭಾರತೀಯರು ಮುಗಿಬಿದ್ದದ್ದು ನೋಡಿದರೆ ಅದೊಂದು ಪಥಾನ್ವೇಷಕವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಮಾರ್ಕ್ ಜುಕರ್ ಬರ್ಗ್ ಅವರ ಕೂಸಾದ ಈ ಸಾಮಾಜಿಕ ಮಾಧ್ಯಮ ೨೦೦೬ ರಲ್ಲಿ ಬೆಳಕಿಗೆ ಬಂತು. ಬೇಕಾದ ಮಾಹಿತಿಯನ್ನು ಒದಗಿಸುವ ಮೂಲಕ ಯಾರು ಬೇಕಾದರೂ ಖಾತೆಯನ್ನು ತೆರೆಯಬಹುದು. ನಿಮ್ಮ ಖಾತೆ ತೆರೆಯುವುದೆಂದರೆ ಅವರಲ್ಲಿಯ ಒಂದು ಗೋಡೆ ನಿಮ್ಮದಾಗುತ್ತದೆ. ಅದರ ಮೇಲೆ ನೀವು ನಿಮ್ಮ ನೆಚ್ಚಿನ ಅಂಶಗಳನ್ನು ಬರೆಯಬಹುದು, ಹಂಚಿಕೊಳ್ಳಬಹುದು, ಚಿತ್ರಗಳನ್ನು ಹಾಕಬಹುದು ಮುಂತಾದವೆಲ್ಲ ಇವೆ. ಇದು ಮುಂದುವರೆದು ಗುಂಪುಗಳಾಗುವ ಪರಿಯೂ ಬಂತು. ಸಮ ಮನಸ್ಕರ ಅಥವಾ ಕುಟುಂಬದ ಅಥವಾ ಸ್ನೇಹಿತರ ಗುಂಪುಗಳು ಸಹ ಮಾಡಿಕೊಂಡು ಒಂದೇ ಸಂದೇಶ ಅಥವಾ ಚಿತ್ರವನ್ನು ಒಮ್ಮೆ ಹಾಕಿದರೆ ಎಲ್ಲರಿಗೂ ತಲುಪುವ ಸವಲತ್ತನ್ನು ಮುಖಪುಸ್ತಕ ಒದಗಿಸಿಕೊಟ್ಟಿತು. ಈಗ ಪ್ರಪಂಚದಲ್ಲಿ ಮುಖ ಪುಸ್ತಕದ ಖಾತೆ ಹೊಂದಿದವರು ೨.೭ ಬಿಲಿಯನ್ ಇದ್ದಾರಂತೆ. ಅದರಲ್ಲಿ ಭಾರತೀಯರ ಸಂಖ್ಯೆ ೧.೬೯ ಬಿಲಿಯನ್. ಇಷ್ಟೆಲ್ಲ ಸವಲತ್ತುಗಳನ್ನ ಒದಗಿಸಿದ ಮುಖ ಪುಸ್ತಕ ಸಾಹಿತ್ಯಕ್ಕೆ ಯಾವ ರೀತಿ ಸಹಾಯವಾಯಿತು ಎನ್ನುವುದನ್ನು ನೋಡೋಣ.
ನಮ್ಮಲ್ಲಿ ತುಂಬಾ ಬರಹಗಾರರಿದ್ದಾರೆ. ಅನಿಸಿದ್ದನ್ನು ಬರವಣಿಗೆಯಲ್ಲಿಟ್ಟು ಪತ್ರಿಕೆಗಳಿಗೆ ಕಳಿಸಿಕೊಟ್ಟು, ಅವರ ಪ್ರಕಟಣೆಗಾಗಿ ಹಾದಿ ಕಾದು ನಿರಾಶೆ ಹೊಂದಿದವರೇ ಬಹಳ. ಮತ್ತೆ ಪತ್ರಿಕೆಗಳು ಸಹ ಬರಹಗಾರರ ದಾಳಿಗೆ ತತ್ತರಿಸಿದ್ದು, ಮುಂಚಿನ ಥರ ಬಂದ ಬರಹಗಳಿಗೆ ಸೂಕ್ತ ಉತ್ತರ ಅಥವಾ ನಿರಾಕರಣೆಯ ಸಂದೇಶ ಕಳಿಸುವ ಸ್ಥಿತಿಯಲ್ಲಿಲ್ಲದಾಗಿದ್ದಾವೆ. ಹಾಗಾಗಿ ತಮ್ಮ ಬರಹ ಅಥವಾ ಕವನ ಬೆಳಕು ಕಾಣದಾದಾಗ ಬೇಸತ್ತು ಬರಹವನ್ನೇ ಬಿಟ್ಟಿದ್ದಾರೆ ತುಂಬಾ ಜನ ಉದಯೋನ್ಮುಖ ಬರಹಗಾರರು. ಅಂಥವರಿಗೆ ಮುಖ ಪುಸ್ತಕ ಒಂದು ದಿವ್ಯ ವೇದಿಕೆ. ತಮ್ಮ ಲೇಖನ ಅಥವಾ ಕವನ ಇಡೀ ಆ ಭಾಷೆಯ ಓದುಗರಿಗೆ ತಲುಪದಿದ್ದರೂ, ತನ್ನ ಕೆಲ ದೋಸ್ತುಗಳಿಗಾದರೂ ತಲುಪಿ ಅವರ ಗಮನಕ್ಕೆ ತರುವಲ್ಲಿ ಮುಖ ಪುಸ್ತಕ ತುಂಬಾ ಸಹಾಯವಾಯಿತು. ಇದರಿಂದ ಅನೇಕ ಕಿರು ಸಾಹಿತಿಗಳಿಗೆ ಒಂದು ಥರ ಸಂತೃಪ್ತಿ ಒದಗಿಸುವಲ್ಲಿ ಮುಖಪುಸ್ತಕ ತನ್ನದೇ ಆದ ಪಾತ್ರವನ್ನು ವಹಿಸುತ್ತದೆ ಎಂದು ಹೇಳವುದರಲ್ಲ ತಪ್ಪೇನಿಲ್ಲ. ಅದಷ್ಟೇ ಅಲ್ಲದೇ ಪುಸ್ತಕಗಳ ಬಿಡುಗಡೆ, ಅವುಗಳ ಬಗ್ಗೆ ವಿಮರ್ಶೆ, ದೊರಕುವ ಸ್ಥಳಗಳ ಬಗ್ಗೆ ಮಾಹಿತಿ ಇವೆಲ್ಲವು ಮುಖಪುಸ್ತಕದಲ್ಲಿ ಸಿಗುವ ಹಾಗೆ ಮಾಡಬಹುದಾದ ಕಾರಣ ಅವು ಸಾಹಿತ್ಯಾಸಕ್ತರಿಗೆ ಉಪಯುಕ್ತವಾಗುತ್ತಿವೆ. ಮುಖ ಪುಸ್ತಕದಲ್ಲಿ ಕಂಡು ಬರುವ ಲೈಕ್ ಗಳ ಬಗ್ಗೆ ತುಂಬಾ ಜೋಕುಗಳು ಸಹ ಹುಟ್ಟಿಕೊಂಡಿವೆ.
ಮುಖಪುಸ್ತಕವನ್ನು ಪರಿಚಿಯಿಸಿದವರೇ ಇದರ ಮಿತಿಗಳನ್ನು ಸಹ ಅಧ್ಯಯನ ಮಾಡಿ ಇದರ ಮತ್ತೊಂದು ಸಂಸ್ಕರಿಸಿದ ಮಾಧ್ಯಮವನ್ನು ನೆಟ್ಟಿಗರಿಗೆ ಪರಿಚಯ ಮಾಡಿದರು. ಇದು ಪರಸ್ಪರ ವಿಚಾರ ವಿನಿಮಯಕ್ಕೆ ಮಾತ್ರ ಬಳಸ ಬಹುದಾಗಿರುವ ವಾಟ್ಸಪ್ ಸಾಮಾಜಿಕ ಜಾಲ ತಾಣ. ಮುಖ ಪುಸ್ತಕದ ಗೋಡೆಯಲ್ಲಿ ಮಾಹಿತಿ ಹಾಕಿದರೆ ಅದು ಖಾತಾದಾರನ ಎಲ್ಲ ಸ್ನೇಹಿತರಿಗೂ ಬೇಡವೆಂದರೂ ತಲುಪುತ್ತದೆ. ಹಾಗೆ ಬೇಕಾದವರ ಗುಂಪಿಗೆ ಮಾತ್ರ ತಲುಪಬೇಕಾದರೆ ಆ ಸ್ನೇಹಿತರಲ್ಲೇ ವಿಷಯದ ವಿಂಗಡನೆ ಮಾಡಿ ಮತ್ತೊಂದು ಗುಂಪುಮಾಡಬೇಕು. ಇವೆಲ್ಲವನ್ನು ಮನಗಂಡ ತಯಾರಕರು ವಾಟ್ಸಪ್ ಪರಿಚಯಿಸುತ್ತ ಅದರಲ್ಲಿ ಪರಸ್ಪರ ಮಾತ್ರ ವಿಚಾರ ವಿನಿಮಯಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ವೈಯಕ್ತಿಕ ಮಾತುಕತೆಗಾಗಿ ಇದನ್ನು ಬಳಸುವುದು ಆರಂಭವಾಯಿತು. ಈ ವಾಟ್ಸಪ್ ಅನ್ನು ಮೊಬೈಲ್ ನಂಬರಿಗೆ ಆಧಾರವಾಗಿ ಅಳವಡಿಸುವುದರಿಂದ ಬರೀ ಸಂದೇಶಗಳನ್ನಷ್ಟೇ ಕಳಹಿಸುವುದಲ್ಲದೆ, ಎಲ್ಲಿಂದ ಬೇಕಾದರೂ ಮತ್ತೊಬ್ಬರಿಗೆ ಕರೆ ಮಾಡುವ ಸೌಲಭ್ಯ ಸಹ ಸಿಕ್ಕಿತು. ಇವೆಲ್ಲವುಗಳಿಗೂ ತುರಾಯಿ ಎಂದರೆ ಇದು ಸಹ ಉಚಿತ. ಹಾಗಾಗಿ ಈಗ ವಾಟ್ಸಪ್ ಬಳಕೆದಾರರು ( ಯಾರಿಲ್ಲ ಹೇಳಿ ) ಪ್ರಪಂಚದ ಯಾವ ಮೂಲೆಯಿಂದಾದರೂ ಕರೆ ಮಾಡಿ ಮಾತಾಡಬಹುದಾಗಿದೆ.
ಇವು ವಾಟ್ಸಪ್ ನ ಪ್ರಯೋಜನಗಳಾದರೆ ಅದು ಸಾಹಿತ್ಯಕ್ಕೆ ಯಾವ ವಿಧವಾಗಿ ಉಪಯೋಗಕರವಾಗಿದೆ ಎನ್ನುವ ಅಂಶವನ್ನು ನೋಡೋಣ. ಪುಸ್ತಕದ ಗಾತ್ರ ಎಷ್ಟೇ ಇರಲಿ ಅದು ವಾಟ್ಸಪ್ ನ ಮೂಲಕ ಮತ್ತೊಬ್ಬರಿಗೆ ಕಳಿಸಬಹುದು. ತಮ್ಮ ಕವನಗಳನ್ನು ತಮಗೆ ಬೇಕಾದ ಮತ್ತೊಬ್ಬರಿಗೆ ಕಳಿಸಿ, ಓದಿಸಿ ಅವರಿಂದ ಅಭಿಪ್ರಾಯ ಪಡೆಯಬಹುದು. ಯಾವುದಾದರೂ ಕರಡನ್ನು ಬೇಕಾದವರಿಗೆ ಕಳಿಸಿ ಅದರ ಪರಿಷ್ಕಾರಗೊಂಡಿರುವ ಆವೃತ್ತಿಯನ್ನು ಪಡೆದು ಸರಿಪಡಿಸಬಹುದು. ಪುಸ್ತಕ ಮುದ್ರಣ, ಜಾಹಿರಾತು ಮುದ್ರಣ ಮುಂತಾದವುಗಳಲ್ಲಿ ವಾಟ್ಸಪ್ ತುಂಬಾ ಉಪಯೋಗವಾಗುತ್ತಿದೆ. ಚಿತ್ರಗಳನ್ನು ಕಳಿಸಲು ತುಂಬಾ ಅನುಕೂಲ ಮಾಧ್ಯಮ. ಆದರೆ ಮುದ್ರಣದಾರರು ಚಿತ್ರಗಳನ್ನು ಇದರಲ್ಲಿ ಕಳಿಸುವುದು ಬೇಡವೆನ್ನುತ್ತಾರೆ. ಆ ಮಾತು ಬಿಡಿ. ಕೆಲ ಉತ್ಸಾಹೀ ಸಂಚಾಲಕ ಸಾಹಿತಿಗಳು ತಮ್ಮ ಸಾಹಿತೀ ಮಿತ್ರರ ಸಹಾಯ ಸಹಕಾರ ತೆಗೆದುಕೊಂಡು ಸರಪಳಿ ಕಾದಂಬರಿಗಳನ್ನು ವಾಟ್ಸಪ್ಪಿನಲ್ಲಿ ಬರೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದ ಸಾಹಿತ್ಯ ಕೃತಿ ಎಲ್ಲರ ಬರಹದ ಶೈಲಿಗಳ ತಿರುಳನ್ನು ಒಳಗೊಂಡು ಹೊರಬರುವುದಲ್ಲದೆ ಬೇಗನೆ ಸಹ ಮುಗಿಯಬಲ್ಲದಾಗಿದೆ. ವಾಟ್ಸಪ್ ನ ಮೂಲಕ ಮೂಲ ಕತೆ, ಕವನಗಳ ಅನುವಾದ ನಡೆದು ಅದು ಅನೇಕ ಸಾಹಿತೀ ಮಿತ್ರರಲ್ಲಿ ಹರೆದಾಡುತ್ತ ವಿನಿಮಯವಾಗುತ್ತಿವೆ. ಸಾಹಿತಿಗಳಿಗೆ ಈಗ ಮೊಬೈಲು ಬರೀ ಸಂಪರ್ಕಕ್ಕಷ್ಟೇ ಅಲ್ಲದೆ ಅದು ತಾವು ಜೊತೆಗೆ ಕೊಂಡೊಯ್ಯುತ್ತಿರುವ ಸಾಹಿತ್ಯದ ಭಂಡಾರವಾಗಿದೆ. ಈಗ ವಾಟ್ಸಪ್ ಜನ ಜೀವನದಲ್ಲಿ ಎಷ್ಟ ಹಾಸು ಹೊಕ್ಕಾಗಿದೆ ಎಂದರೆ ಅದರ ಬಗ್ಗೆ ಹರಿದಾಡುವ ಜೋಕ್ ಗಳಿಗೆ ಸಹ ಇತಿ ಮಿತಿ ಇಲ್ಲದಾಗಿದೆ.
ಇನ್ನೂ ಇನ್ಸ್ಟಾಗ್ರಾಮ್, ಟ್ವಿಟ್ಟರ್ ಮುಂತಾದ ಜಾಲತಾಣಗಳಿವೆ. ಇನ್ಸ್ಟಾಗ್ರಾಮ್ ಬರೀ ಚಿತ್ರಗಳಿಗೆ ಮಾತ್ರ ಪರಿಮಿತವಾಗಿದೆ. ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವವರಿಗೆ ಇದು ತುಂಬಾ ಸಹಕಾರಿ. ಟ್ವಿಟ್ಟರ್ ಖಾತೆ ಸಾಮಾನ್ಯ ಜನರಲ್ಲಿ ಅಷ್ಟು ಪ್ರಚಲಿತವಾಗಿಲ್ಲ. ಟ್ವಿಟ್ಟರ್ ಬಗ್ಗೆ ಬರುವ ಕಾಮೆಂಟ್ ಗಳು ನೋಡಿದರ ಅದಕ್ಕಿರುವ ಹ್ಯಾಂಡಲ್ ಬರೀ ದೂರುವುದಕ್ಕೇ ಅಥವಾ ಬಯ್ಯುವುದಕ್ಕೆ ಅಂತ ಆದ ಹಾಗೆ ಕಾಣುತ್ತದೆ.
ಎಲ್ಲ ಮಾಧ್ಯಮಗಳ ಹಾಗೆ ಈ ಜಾಲ ತಾಣಗಳಿಗೆ ಸಹ ಕೆಲ ಸೋಂಕುಗಳಿವೆ. ಒಳಿತು ಮಾತ್ರವಲ್ಲದೆ ಕೆಡಕು ಸಹ ಪಕ್ಕದಲ್ಲೇ ಇದ್ದು ಅವುಗಳ ಮಿತಿಯನ್ನು ತೋರಿಸಿಕೊಡುತ್ತದೆ. ಈ ಎರಡು ತಾಣಗಳ ಬಗ್ಗೆ ಇರುವ ಪ್ರಮುಖ ದೂರು ಎಂದರೆ ಮಾಹಿತಿ ಕಳವು. ಕಳವು ಎನ್ನುವುದಕ್ಕಿಂತ ಇದರಲ್ಲಿದ್ದ ವೈಯಕ್ತಿಕ ಮಾಹಿತಿಯನ್ನು ಸಂಸ್ಥೆಯೇ ಬೇರೊಬ್ಬರಿಗೆ ಸಾಗ ಹಾಕುತ್ತಿದೆ ಎನ್ನುವುದು. ಅದರಲ್ಲೂ ಮುಖಪುಸ್ತಕದಲ್ಲಿ ಈ ದೂರು ಇನ್ನೂ ಮಹತ್ವದ್ದಾಗಿದೆ. ಕೆಲ ದೇಶಗಳಲ್ಲಿ ಅಸ್ಮಿತೆಯ ಕಳವು ತುಂಬಾ ಆಗಿದ್ದು ಅನೇಕರು ಮುಖ ಪುಸ್ತಕವನ್ನು ತೊರೆಯುತ್ತಿದ್ದಾರೆ.
ಮತ್ತೊಂದು ಅಂಶವೆಂದರೆ ಹರಡುತ್ತಿರುವ ಸುಳ್ಳು ಸುದ್ದಿಗಳು, ದ್ವೇಷ ಹುಟ್ಟಿಸುವ ಭಾಷಣಗಳು. ರಾಜಕೀಯವಾಗಿ ಪ್ರಕ್ಷುಬ್ದ ವಾತಾವರಣವಿರುವಾಗ ಈ ಜಾಲ ತಾಣಗಳಲ್ಲಿ ಕ್ಷಿಪ್ರವಾಗಿ ಹರಡಲು ಸುಲಭವಾದ ಅನೇಕ ಸುಳ್ಳು ಸುದ್ದಿಗಳು ಸಮಾಜದ ಶಾಂತಿಯನ್ನು ಕದಡುತ್ತವೆ ಮತ್ತು ದಂಗೆಗಳಿಗೆ ದಾರಿ ಮಾಡುತ್ತವೆ. ಯಾವುದೋ ಹಳೆಯ ಸುದ್ದಿಯನ್ನು ಮತ್ತೆ ಮತ್ತೆ ಹರಡಿಸಿ ಪ್ರಕೋಪಕ್ಕೆ ಒಯ್ಯುವ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಸಾಹಿತ್ಯದ ವಿಷಯಕ್ಕೆ ಬಂದರೆ ಕೃತಿಗಳು ಮತ್ತು ಕವನಗಳ ಬಗ್ಗೆ ನಿರ್ದಾಕ್ಷಿಣ್ಯ ವಿಮರ್ಶೆಗಳು ಹೆಚ್ಚಾಗಿವೆ. ಮುಖತಃ ಹೇಳಲು ಸಂಕೋಚವಾಗುವ ವಿಮರ್ಶೆಗಳು ಇವುಗಳ ಮೂಲಕ ಸರಾಗ ಬರೆದವರಿಗೆ ಮುಟ್ಟುತ್ತಿವೆ. ಇದರಿಂದ ಸಹೃದಯ ಮತ್ತು ಸೌಜನ್ಯಯುಕ್ತ ಪರಿಸರ ಕೆಡುತ್ತಿದೆ.
ಮತ್ತೆ ಇವುಗಳ ಬಳಕೆಯಿಂದ ಈ ತಾಣಗಳಿಗೆ ಅಭ್ಯಾಸವಾಗಿ ಹೋಗಿ ಕುಡಿತ, ಮಾದಕದ್ರವ್ಯಗಳ ರೀತಿ ಇದರ ಚಟವನ್ನು ಸಹ ಬೆಳೆಸಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ತಾಣಗಳಲ್ಲಿ ಸಿಗುವ ಲೈಕ್ ಗಳು ಅಥವಾ ಮೆಚ್ಚುಗೆಗಳಿಗೆ ಮಾರುಹೋಗಿ, ಅವುಗಳು ತಾವು ಎಣಿಸಿದ ಪ್ರಮಾಣದಲ್ಲಿ ಸಿಗದಿದ್ದಲ್ಲಿ ಮಾನಸಿಕವಾಗಿ ಅಸ್ವಸ್ಥವಾಗುವ ಅನೇಕ ವರದಿಗಳು ಗೊತ್ತಾಗುತ್ತಿವೆ. ಮತ್ತೆ ತಮ್ಮ ತಮ್ಮ ಫೋನಿನಲ್ಲಿಯ ಜಾಲತಾಣಗಳಲ್ಲಿ ವ್ಯಸ್ತವಾಗಿ ಹೋಗಿ ಮನೆ ಕೆಲಸ, ಕಚೇರಿಯ ಕೆಲಸಗಳನ್ನು ನಿರ್ಲಕ್ಷಮಾಡುತ್ತಿರುವ ಕೆಟ್ಟ ಅಭ್ಯಾಸ ಸಹ ಬೆಳೆದಿರುವುದು ಕಂಡು ಬಂದಿದೆ. ಅದರ ಜೊತೆಗೆ ವ್ಯಕ್ತಿಗಳ ಮಧ್ಯೆ ಇರಬೇಕಾದ ಸಂಪರ್ಕವೇ ಕಡಿದುಹೋಗುತ್ತಿದೆ. ಯಾವುದಾದರೂ ಒಂದು ಸಮಾವೇಶ ಅಥವಾ ಸಂಭ್ರಮಗಳಲ್ಲಿ ನೆರೆದ ಜನರು ಅವರವರ ನಡುವೆ ಮಾತುಕತೆಯೇ ಇಲ್ಲದೆ ಎಲ್ಲರು ತಮ್ಮ ತಮ್ಮ ಫೋನಗಳ ತೆರೆಗಳ ಮೇಲೆ ಕಣ್ಣ ದಿಟ್ಟಿಸಿರುತ್ತಿರುವುದು ಕಂಡು ಬರುತ್ತದೆ. ಇದರಿಂದ ಒಂದು ಆರೋಗ್ಯಕರ ಸಮಾಜ ಇಂದು ಕಾಣುತ್ತಿಲ್ಲ. ಎಲ್ಲಿಂದಲೋ ಬರುವ ಸಂದೇಶಗಳ ಮೇಲೆ ದೃಷ್ಟಿ ನೆಟ್ಟಿದ್ದು, ಮೂಗಿನಡಿಯಲ್ಲಿದ್ದ ಇರುವ ಮನುಷ್ಯನ ಕಷ್ಟಕ್ಕೆ ನೆರವಾಗದಂತಾಗಿದ್ದಾನೆ ಇಂದಿನ ಸಾಧಾರಣ ಮನುಷ್ಯ.
ಮತ್ತೆ ತನ್ನ ಜಾಲತಾಣದಲ್ಲಿ ಹರಿದಾಡುವ ಸಂದೇಶಗಳಲ್ಲಿರುವ ಸಾರಾಂಶದ ಬಗ್ಗೆ ಮುಖಪುಸ್ತಕ ತನ್ನ ಜವಾಬ್ದಾರಿಯನ್ನು ಕೈ ತೊಳೆದುಕೊಂಡಿದೆ. ಹಾಗಾಗಿ ಯಾವುದೇ ರೀತಿಯ ಅಡೆ ತಡೆ ಇಲ್ಲದೆ ಎಂಥದ್ದಾದರೂ ಸಂದೇಶ ಯಾರಿಗಾದರೂ ಹಾಕಬಹುದಾಗಿದೆ. ಇದರಿಂದ ಸಮಾಜದಲ್ಲಿ ಹಿಂಸೆ ಜಾಸ್ತಿಯಾಗಿದೆ ಎಂದು ವಿಶೇಷಜ್ಞರ ಅಭಿಪ್ರಾಯವಾಗಿದೆ.
ಅಂತೂ ಇಂತೂ ನಮ್ಮ ದೈನಂದಿನ ಜೀವನದಲ್ಲಿ ಒಂದು ಭಾಗವಾಗಿ ಹೋದ ಈ ಜಾಲತಾಣಗಳನ್ನು ಬಳಸಿಕೊಂಡವನು ಭಾಗ್ಯವಂತ ಎನ್ನಬಹುದು. ನಮ್ಮ ಕೈಗೆ ಸಿಕ್ಕ ಮಾಧ್ಯಮವನ್ನು ನಾವೆಲ್ಲ ವಿಜ್ಞತೆಯಿಂದ ಬಳಸಿಕೊಂಡು ಅದರ ಉಪಯೋಗವನ್ನಾದರೂ ಪಡೆಯಬಹುದು ಅಥವಾ ಸಮಾಜದ ಸ್ವಾಸ್ಥ್ಯವನ್ನಾದರೂ ಕೆಡಿಸಬಹುದು. ಬೆಂಕಿ ಕಡ್ಡಿಯಿಂದ ದೀಪವನ್ನಾದರೂ ಬೆಳಗಬಹುದು ಅಥವಾ ಮನೆಗೆ ಬೆಂಕಿ ಸಹ ಹಚ್ಚಬಹುದಲ್ಲವೇ ? ಇವುಗಳ ಮಿತಿಯನ್ನರಿತು ಉಪಯೋಗಿಸುತ್ತ ಪ್ರಯೋಜನವನ್ನು ಪಡೆಯುವುದು ನಮ್ಮ ನಾಗರಿಕ ಪ್ರಜ್ಞೆಯ ಸಾಕ್ಷಿಯಾಗುತ್ತದೆ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ