- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಸರಕಾರದ ವತಿಯಿಂದ ನಡೆಸಿಕೊಟ್ಟ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಮುಕ್ತಾಯವಾಗಿತ್ತು. ಆ ಇಡೀ ಕಾರ್ಯಕ್ರಮದಲ್ಲಿ ಅದನ್ನು ನಿರೂಪಿಸಿದ ನಿರೂಪಕರ ಪಾತ್ರ ಅಷ್ಟೇನೂ ಮಹತ್ವದ್ದಿರಲಿಲ್ಲ. ಆದರೂ ಸರಕಾರೀ ಕಾರ್ಯಕ್ರಮದ ರಿವಾಜಿನ ಪ್ರಕಾರ ಸರಕಾರದ ಇಲಾಖೆಯಿಂದ ಬಂದ ಅಧಿಕಾರಿಗಳು ನಿರೂಪಕರನ್ನು ವೇದಿಕೆಗೆ ಕರೆದು ಅವರ ಬಗ್ಗೆ ಮೆಚ್ಚುಗೆಯ ನಾಲ್ಕು ಮಾತುಗಳನ್ನಾಡಿ ಅವರಿಗೆ ಮಾಲೆ ಹಾಕಿ, ಶಾಲು ಹೊದೆಸಿ, ಅವರ ಕೈಗೆ ತಾವು ಕಲಾವಿದರಿಗೆಲ್ಲ ಕೊಟ್ಟ ಜ್ಞಾಪಿಕೆಯನ್ನಿತ್ತು ಗೌರವಿಸಿದರು. ಆ ಕೆಲಸವನ್ನು ನಿಭಾಯಿಸಿದವರಿಗೆ ಈ ಹುದ್ದೆಯ ಬಗ್ಗೆ ಯಾಕೆ ಇಷ್ಟು ಮೋಹ, ಆಕರ್ಷಣೆ ಅಂತ ನನಗರ್ಥವಾದದ್ದೂ ಆಗ. ಇಂಥ ಸನ್ನಿವೇಶಗಳಲ್ಲಿ ನನ್ನ ಕಿಡಿಗೇಡಿ ಮೆದುಳು ವಿಷಯದ ಆಳವನ್ನು ಕೆದಕಲು ಹವಣಿಸಿ ಕಾರ್ಯದಲ್ಲಿ ತೊಡಗುತ್ತದೆ. ಹಾಗೆ ನಿರೂಪಕರ ಪಾತ್ರದ ಬಗ್ಗೆ, ಆ ಪಾತ್ರ ಎಂದಿನಿಂದ ಇಷ್ಟು ಪ್ರಾಮುಖ್ಯ ಪಡೆಯಿತು ಎನ್ನುವುದರ ಬಗ್ಗೆ ಸ್ವಲ್ಪ ಕಸರತ್ತು ಮಾಡಲಾರಂಭಿಸಿದಾಗ ಸ್ಫುರಿಸಿದ ಕೆಲ ಅನಿಸಿಕೆಗಳೇ ಈ ಅಂಕಣದ ತಿರುಳು.
ಒಂದು ಅಲ್ಲಗಳೆತ. ನಾನಿಲ್ಲಿ ಬರೀ ಕಾರ್ಯಕ್ರಮಗಳ ನಿರೂಪಕರ ಬಗ್ಗೆ ಮಾತ್ರ ಚರ್ಚಿಸಿದ್ದೇನೆ. ಇನ್ನಿತರ ನಿರೂಪಕ ಪಾತ್ರದ ಕಜಿನ್ ಗಳಾದ ಡಿಜೆ, ವಿಜೆ, ಟಿವಿ ನಿರೂಪಕರು ಇವರುಗಳನ್ನು ಬಗ್ಗೆ ಈ ಅಂಕಣದಲ್ಲಿ ಸೇರಿಸಿಲ್ಲ. ಯಾಕೆ ಅಂದರೆ ಇವರುಗಳಿರುವ ಸನ್ನಿವೇಶಗಳೇ ಬೇರೇ.
ಒಂದು ಮೂವತ್ತು ವಷಗಳ ಕೆಳಗೆ ಸಭೆ ಸಮಾರಂಭಗಳಲ್ಲಿ ನಿರೂಪಕರು ಎಂಬ ಒಬ್ಬ ಜನ ನಮಗೆ ಕಾಣುತ್ತಿರಲಿಲ್ಲ. ಸಭೆಯ ಅಧ್ಯಕ್ಷರೇ ಸಭೆಯನ್ನು ನಡೆಸಿಕೊಡುತ್ತಾ ಮುಂದೆ ಯಾರು ಮಾತಾಡುತ್ತಾರೆ ಎಂದು ಹೇಳುತ್ತಾ ಕೊನೆಯಲ್ಲಿ ತಮ್ಮ ಮಾತನ್ನು ಹೇಳಿ ಮುಗಿಸುತ್ತಿದ್ದರು. ಮತ್ತೆ ಈ “ನಿರೂಪಕ” ನ ಅಗತ್ಯ ಯಾವಾಗ ಬಂತು ಎಂದು ಪರಾಂಬರಿಸಿದಾಗ ನನಗೆ ಹೊಳೆದದ್ದು ಹೀಗೆ. ಸಭೆಗಳಿಗೆ ಅಧ್ಯಕ್ಷರಾಗಿ ದೊಡ್ಡವರನ್ನು ಕರೆದಾಗ ಸಭಾ ಮರ್ಯಾದೆಯ ಪ್ರಕಾರ ಅವರು ನಡೆಸಿಕೊಡಬೇಕಾದರೂ ಅವರ ದೊಡ್ಡಸ್ತಿಕೆ ಅಡ್ಡ ಬರಲು ಶುರುವಾಯಿತು ಅಂತ ಅನಿಸತ್ತೆ. ಅವರು ತಮ್ಮನ್ನು ಕರೆದವರಲ್ಲಿ ಇದರ ಬಗ್ಗೆ ಹೇಳಿರಬೇಕು. “ನೋಡಿ ನಾನು ಅವರನ್ನು ಮಾತಾಡಿ ಇವರನ್ನು ಮಾತಾಡಿ ಎಂದು ಹೇಳಲು ಕಷ್ಟವಾಗುತ್ತದೆ. ಯಾರಾದರೂ ನಿಮ್ಮಲ್ಲೇ ಸ್ವಲ್ಪ ಚೆನ್ನಾಗಿ ಮಾತನಾಡುವವರನ್ನು ಹುಡುಕಿ ಅವರಿಗೆ ಈ ಜವಾಬ್ದಾರಿ ಕೊಡಿ” ಎಂದಿರಬೇಕು. ಹಾಗೆ ಪ್ರಾರಂಭವಾಗಿರಬಹುದು ಈ ನಿರೂಪಕರ ಹುದ್ದೆ. ಮುಂದಿನ ದಿನಗಳಲ್ಲಿ ಅದೊಂದು ಅವಿಭಾಜ್ಯ ಅಂಗವಾಗಿ ಹೋಗಿತಲ್ಲದೇ ಅದರ ವ್ಯಾಪ್ತಿ ಮುಂದುವರೆದು ಮದುವೆಗಳಲ್ಲಿ , ಪಾರ್ಟಿಗಳಲ್ಲಿ ಸಹ ಹರಡಿತು. ಈ ಹುದ್ದೆಯನ್ನು ನಿಭಾಯಿಸಲು ಜನ ಮುಂದೆ ಬರಲು ಪ್ರಾರಂಭಿಸಿದರು. ಮತ್ತೆ ಸಮರ್ಥವಾಗಿ ನಿಭಾಯಿಸುವರಿಗೆ ಹೆಸರು ಬಂದು ಅವರನ್ನು ಮತ್ತಿತರ ಸಮಾರಂಭಗಳಿಗೆ ಕರೆಸಲು ಶುರುವಾಯಿತು. ಮುಂದೆ ಅದರ ಮೇಲೆ ಬದುಕು ಕಟ್ಟಲೂ ಶುರುವಾಯಿತು. ಈಗ ನಿರೂಪಕನೆಂಬುವವನು ಸಭೆಗಳಲ್ಲಿ ತುಂಬಾ ಮುಖ್ಯ ಪಾತ್ರನಾಗಿರುತ್ತಾನೆ.
ನಿರೂಪಕನ ಮೊದಲ ಕೆಲಸ ಸಭೆಯ ಬಗ್ಗೆ ಮತ್ತು ಅದರಲ್ಲಿ ನಡೆಯುವ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು. ಮುಂದೆ ಆ ಸಭೆಯಲ್ಲಿಯ ವೇದಿಕೆಯ ಮೇಲೆ ಕೂರುವವರು ಯಾರು ಎಂದು ಅರಿಯುವುದು. ಕಾರ್ಯಕ್ರಮ ಪ್ರಾರಂಭದ ವೇಳೆ, ಕಾರ್ಯಕ್ರಮದಲ್ಲಿರುವ ವಿವಿಧ ಅಂಶಗಳು, ಭಾಷಣಗಳಿಗೆ ಸಭಾ ನಿರ್ವಾಹಕರು ನಿಗದಿಪಡಿಸಿದ ಅವಧಿ, ಕಾರ್ಯಕ್ರಮ ಮುಂದುವರೆದಂತೆ ವೇದಿಕೆಗೆ ಆಗಮಿಸತಕ್ಕ ಇತರರು, ಅತಿಥಿಗಳಿಗೆ ಹೂಗುಚ್ಛ ನೀಡುವವರು ಯಾರು, ಮಾಲಾರ್ಪಣೆ ಮಾಡುವವರು ಯಾರು ಇತ್ಯಾದಿ ವಿಷಯಗಳನ್ನ ಮುಂಚಿತವಾಗಿ ನಿರ್ವಾಹಕರಿಂದ ಕೇಳಿ ತಿಳಿದುಕೊಂಡು ತನ್ನ ಮನಸ್ಸಿನಲ್ಲೆ ಕಾರ್ಯಕ್ರಮವನ್ನು ತಾನು ಹೇಗೆ ನಿರೂಪಿಸಬೇಕು ಎಂಬ ರೂಪುರೇಶೆಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ತಯಾರು ಮಾಡಿಕೊಳ್ಳಬೇಕು. ಕೆಲ ಮುಖ್ಯ ಕಾರ್ಯಕ್ರಮಗಳಲ್ಲಿ ಕೊನೆ ನಿಮಿಷದ ಮಾರ್ಪಾಡುಗಳಿರುತ್ತವೆ. ಅವುಗಳನ್ನು ನೋಡಿಟ್ಟುಕೊಳ್ಳುವುದು ಮತ್ತು ಅನುಸರಿಸುವುದು ತುಂಬಾ ಮುಖ್ಯ. ಮತ್ತೆ ತನ್ನ ಸೃಜನಾತ್ಮಕ ಮತ್ತು ರಚನಾತ್ಮಕ ಕೌಶಲವನ್ನು ಹೇಗೆ ಪ್ರದರ್ಶಿಸಬೇಕು ಎಂದು ನಿರ್ಧರಿಸಬೇಕು. ಒಂದು ಮಾತು ಎಂದೂ ನೆನಪಿನಲ್ಲಿಡತಕ್ಕದ್ದು ಏನೆಂದರೆ ತಾನು ಸಭೆಗಿಂತ ಎತ್ತರವಲ್ಲ ಎಂಬುದು. ಕೆಲವರಿಗೆ ಅದೊಂದು ತಮಗೆ ಸಿಕ್ಕ ಸುಂದರ ಅವಕಾಶ ಎಂದು ಭಾವಿಸಿ ತಾವೇ ತಾವಾಗಿ ವರ್ತಿಸುತ್ತಾ ಸಭೆಯನ್ನೇ ಅಲ್ಲಗಳೆಯುವಂತೆ ಮಾಡಿ ಅಭಾಸು ಪಾಲಾಗುತ್ತಾರೆ. ತಾವು ನೆನಪಿಡಬೇಕಾದ್ದು ತಾವು ಸಭೆಯ ಕಾರ್ಯಕ್ರಮದ ನಿರೂಪಕರು ಮಾತ್ರ ಎನ್ನುವುದು.
ಸಭೆಯ ನಿರ್ವಾಹಕರು ಸಹ ನಿರೂಪಕರನ್ನು ಆರಿಸುವಾಗ ಸದರಿ ಕಾರ್ಯಕ್ರಮದ ನಿರೂಪಣೆಗೆ ತಕ್ಕವರು ಹೌದಾ ಅಲ್ಲವಾ ಎನ್ನುವ ಅಂಶ ಪರಿಗಣನೆಗೆ ತೊಗೊಂಡು ಆಯ್ಕೆ ಮಾಡಬೇಕು. ಉದಾಹರಣೆಗೆ ಸಾಹಿತ್ಯ ಕಾರ್ಯಕ್ರಮವಿದ್ದಾಗ ಗಂಧವೇ ಇಲ್ಲದವರನ್ನು ಆರಿಸಿದರೆ ಕಾರ್ಯಕ್ರಮ ಕಳೆಗಟ್ಟುವುದಿಲ್ಲ. ಹಾಗಂತ ಹೇಳಿ ಎಲ್ಲೆಲ್ಲಿಯದೋ ತುಣುಕುಗಳನ್ನು ಆರಿಸಿ ಹೇಳುತ್ತ ಕಾರ್ಯಕ್ರಮದಲ್ಲಿ ತನ್ನದೇ ಪಾಂಡಿತ್ಯವನ್ನು ಪ್ರದರ್ಶಿಸುವವರು ನಿರ್ವಾಹಕರಿಗೆ ಕಿರಿಕಿರಿಯಾಗುತ್ತಾರೆ. ಭಾಷಣಗಳ ನಡುವೆ ಅಥವಾ ಒಂದೊಂದು ಅಂಶದ ನಡುವೆ ತಾವು ಮಾತಾಡುವಾಗ ಮಾತಾಡಿದವರ ಭಾಷಣದಲ್ಲಿಯ ಕೆಲ ಮುಖ್ಯತುಣುಕುಗಳನ್ನು ಆರಿಸಿ ತಾವು ಅದಕ್ಕೆ ಪೂರಕವಾದ ಅಥವಾ ತಿಳಿ ಹಾಸ್ಯದ ಕಮೆಂಟ್ ಗಳನ್ನು ಮಾಡಬೇಕೇ ವಿನಾ ತನಗಿರುವ ಜ್ಞಾನ ಪ್ರದರ್ಶನ ಮಾಡುತ್ತಾ “ ನಾನೊಮ್ಮೆ ನಿರೂಪಿಸುವಾಗ ಹೀಗಾಯಿತು, ಹಾಗಾಯಿತು “ ಎನ್ನುತ್ತ ತನ್ನದೇ ಪ್ರತಿಭೆಯನ್ನು ತೋರಬಾರದು. ಹೆಸರಾಂತ ವ್ಯಕ್ತಿಗಳ ಹೇಳಿಕೆಗಳನ್ನು ಉದ್ಧರಿಸುವಾಗ ಜಾಗೃತೆಯಿಂದ ಅವರು ಹೇಳಿದಂತೆ ಹೇಳಬೇಕೇ ವಿನಹ ಅವುಗಳಿಗೆ ತನ್ನ ಭಾಷ್ಯ ಸೇರಿಸಬಾರದು. ಹಾಸ್ಯ ಚಟಾಕಿಗೆ ಸಹ ಅಷ್ಟೇ. ಎಲ್ಲೆ ಮೀರಬಾರದು. ಸಾಧ್ಯವಾದಷ್ಟು ಶುದ್ಧ ಭಾಷೆ ಉಪಯೋಗಿಸಿ ನಿರೂಪಿಸಿದರೆ ಬಂದವರ ಮನ ತಣಿಯುತ್ತದೆ.
ಕೆಲ ಸರಕಾರೀ ಕಾರ್ಯಕ್ರಮಗಳು ಒಂದು ನಿರ್ದಿಷ್ಟ ರೀತಿಯಲ್ಲೇ ನಡೆಯಬೇಕೆನ್ನುವ ನಿಬಂಧನೆ ಇರುತ್ತದೆ. ಹಾಗಾಗಿ ಅದರ ನಿರ್ವಾಹಕರು ನಿರೂಪಕರು ಯಾರು ಎಂದು ತಿಳಿದುಕೊಂಡು ಇವುಗಳನ್ನು ನಿರೂಪಕರಿಗೆ ಹೇಳಿ ಅದೇ ಥರ ನಡೆಸಲು ಹೇಳುತ್ತಾರೆ. ಆಗ ನಿರೂಪಕರ ಸ್ವಾತಂತ್ರ್ಯ ಕಮ್ಮಿಯಾಗುತ್ತದೆ. ಹಾಗಂತ ಅದನ್ನು ಮೀರಿ ವರ್ತಿಸುತ್ತ ಅವರಿಗೆ ಕಿರಿಕಿರಿ ಉಂಟು ಮಾಡಿದರೆ ಸರಿಯಲ್ಲ. ಮತ್ತೆ ವೇದಿಕೆಯ ಮೇಲೆ ಕೂತಿದ್ದ ಅಧಿಕಾರಿಗಳ ಹುದ್ದೆಯ ತಾರತಮ್ಯ ತಿಳಿದುಕೊಂಡು ಅದರಂತೆ ನಡೆದುಕೊಳ್ಳುವುದು ನಿರೂಪಕರ ಕರ್ತವ್ಯ.
ಪಕ್ಕದಲ್ಲಿ ನಿಂತು ನೋಡುವವರಿಗೆ ನಿರೂಪಕರ ಕೆಲಸ ತುಂಬಾ ರಂಗು ರಂಗಾಗಿ ಮತ್ತು ಮಜಾ ಮಾಡಿದ ಹಾಗೆ ಅನಿಸುತ್ತದೆ. ಅದೂ ಕೊನೆಯಲ್ಲಿ ಮೇಲೆ ಹೇಳಿದ ಹಾಗೆ ಶಾಲು ಹೊದಿಸಿ ಧನ್ಯವಾದ ಹೇಳಿದಾಗ. ಆದರೆ ಸರಿಯಾಗಿ ನಿಭಾಯಿಸಲು ಹೋದಾಗ ಅದೊಂದು ಭಾರೀ ಜವಾಬ್ದಾರಿಯ ಕೆಲಸ ಅಂತ ಗೊತ್ತಾಗುತ್ತದೆ. ಕಾರ್ಯಕ್ರಮ ನಡೆಯುವಾಗ ಅವನು ಅದರ ಸಂಪೂರ್ಣ ಆನಂದ ಪಡೆಯಲಾಗುವುದಿಲ್ಲ. ಮುಂದಿನ ಅಂಶವೇನು ಅದಕ್ಕೆ ತಾನೇನು ಮಾಡಬೇಕು, ಅದರ ಬಗ್ಗೆ ಹೇಗೆ ಮಾತಾಡಬೇಕು, ಯಾವ ಮಾತುಗಳು ಸಭಿಕರಿಗೆ ರುಚಿಸುತ್ತವೆ ಎಂಬ ವಿಷಯಗಳು ಅವನ ತಲೆಯಲ್ಲಿ ಸುಳಿದಾಡುತ್ತಿರುತ್ತವೆ. ಮತ್ತೆ ಸಂಗೀತ ಅಥವಾ ನೃತ್ಯ ಕಾರ್ಯಕ್ರಮಗಳಿದ್ದಲ್ಲಿ ಭಾಗವಹಿಸುವವರಿಗೆ “ ನೋಡಿ ಇದು ನಿಮ್ಮ ಕೊನೆಯ ಐಟಮ್ ಆಯ್ತಾ “ ಎನ್ನುವ ಕಹಿ ವಾರ್ತೆಯನ್ನು ಹೇಳುವ ಹೊಣೆ ನಿರೂಪಕನದೇ. ಇನ್ನೂ ಕೆಲವು ಕಡೆ ಅತಿಥಿಗಳಿಗೆ ಕೊಡಬೇಕಾದ ಹೂಗುಚ್ಛ, ಹೂಮಾಲೆ, ಜ್ಞಾಪಿಕೆಗಳು, ಶಾಲುಗಳು ಇವೆಲ್ಲವುಗಳನ್ನೂ ಹೊಂದಿಸಿ ಇಟ್ಟುಕೊಂಡು ಅವುಗಳನ್ನು ಕೊಡುವಾಗ ಸರಿಯಾದ ವ್ಯಕ್ತಿಗೆ ಅವು ತಲುಪುವ ಹಾಗೆ ಮಾಡುವುದು ಸಹ ಇವರ ತಲೆಗೆ ಬೀಳುತ್ತದೆ. ಆಗ ಎರಡೆರಡು ಕೆಲಸಗಳನ್ನು ನಿಭಾಯಿಸಬೇಕಾದೀತು. ಮತ್ತೆ ಕೆಲವು ಕಡೆ ಇಬ್ಬರ ನಡುವೆ ಜಗಳವಾಗಿದ್ದು ನಿರೂಪಕರ ಹತ್ತಿರ ಬಂದು ತಮ್ಮತಮ್ಮ ಬೇಡಿಕೆಗಳಂತೆ ಸಭೆಯನ್ನು ನಡೆಸಬೇಕೆಂದು ಬೆದರಿಸುವುದೂ ನಡೆಯುತ್ತದೆ. ಆಗ ನಿರೂಪಕನ ಪರಿಸ್ಥಿತಿ ಕತ್ತರಿಯಲ್ಲಿ ಸಿಕ್ಕ ಹಾಗಾಗುತ್ತದೆ. ಈ ತರದ ಸನ್ನಿವೇಶಗಳು ಕಮ್ಮಿ ಎಂತಿದ್ದರೂ ಇಲ್ಲವೆಂದು ಹೇಳಲಾಗುವುದಿಲ್ಲ.
ಮತ್ತೆ ಕೆಲ ಸನ್ನಿವೇಶಗಳಲ್ಲಿ ಅತಿಥಿಗಳು ಬರುವಾಗ ತುಂಬಾ ತಡವಾದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ನಿರ್ವಾಹಕರು ನಿರೂಪಕರ ಕಡೆಗೆ ನೋಡುತ್ತಾರೆ. ಆಗಾಗ ಸಭಿಕರಲ್ಲಿ ತನ್ನ ಕಳಕಳೆಯ ವಿನಂತಿ ಹೇಳುತ್ತಾ
ಅತಿಥಿಗಳು ಬರುವುದು ಯಾಕೆ ತಡವಾಗುತ್ತಿದೆ, ಇನ್ನೇನು ಈಗ ಬಂದು ಬಿಡುತ್ತಾರೆ ಎನ್ನುವ ಬ್ರೇಕಿಂಗ್ ನ್ಯೂಸ್ ಬುಲೆಟಿನ್ ಬಿಡುಗಡೆಗೊಳಿಸುತ್ತಾ ಸಭಿಕರನ್ನು ಸಮಾಧಾನ ಮಾಡುವ ಹೊಣೆಗಾರಿಕೆ ನಿರೂಪಕನಾಗಿರುತ್ತದೆ.
ಆಗ ನಿರ್ವಾಹಕರು ತಡವಾದ ಆ ಸಮಯದಲ್ಲಿ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರೆಸಿದಲ್ಲಿ ನಿರೂಪಕ ಬಚಾವಾಗುತ್ತಾನೆ.
ಹಾಗಂತ ಹೇಳಿ ನಿರೂಪಕರ ಪಾತ್ರ ಅಷ್ಟು ಕಷ್ಟತರವಾದದ್ದೂ ಅಲ್ಲ. ಯಾವುದಕ್ಕೂ ತನಗೆ ಕೊಟ್ಟಂಥ ಪಾತ್ರವನ್ನು ತಿಳಿದುಕೊಂಡು ಅದರ ವ್ಯಾಪ್ತಿಯೊಳಗೆ ತನ್ನ ಕರ್ತವ್ಯ ಪೂರೈಸಿದರೆ ಆ ಪಾತ್ರಕ್ಕೆ ತಕ್ಕ ನ್ಯಾಯ ಮಾಡಿದ ಹಾಗಾಗುತ್ತದೆ. ಇದೊಂದು ಕಬಡ್ಡಿಯ ಆಟ ಇದ್ದ ಹಾಗೆ. ಹಿಂದೆ ದಾಟಬಾರದಾದ ಗೆರೆ, ಇಕ್ಕೆಲಗಳಿಗೂ ಅಂಥದೇ ಗೆರೆಗಳು, ಮುಂದೆ ಹೋದರಂತೂ ಎದುರಾಳಿಗಳ ದಾಳಿ. ಈ ಇಷ್ಟರ ಚೌಕಟ್ಟಿನಲ್ಲೇ ಆಡಿ ಗೆಲ್ಲುವ ಮನೋ ಬಲ ಬೇಕು. ಇದೂ ಹಾಗೇ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ