- ಕವಿಗಳು ಕಂಡ ಸಂಭ್ರಮದ ಯುಗಾದಿ. - ಏಪ್ರಿಲ್ 9, 2024
- ವಿಜಯದಶಮಿ ರೈತರ “ಬನ್ನಿ ಹಬ್ಬ” - ಅಕ್ಟೋಬರ್ 24, 2023
- ಮುನ್ನಡೆಯುವ ಹಕ್ಕು ಮಹಿಳೆಯರಿಗೂ ಇದೆ - ಮಾರ್ಚ್ 8, 2023
ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ|
ಎಲ್ಲರಿಗೂ ಗೌರಿ ಹಬ್ಬದ ಶುಭಾಶಯಗಳು.
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ ||
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ ಹರಿ ದಿನಗಳಿಗೆ ವಿಶಿಷ್ಟವಾದ ಸ್ಥಾನವಿದೆ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದ್ದು ಸಮಾಜವನ್ನು ಒಗ್ಗೂಡಿಸುವಲ್ಲಿ ಜನತೆಗೆ ಶಾಂತಿ ಸಮಾಧಾನಗಳ ನೀಡುವಲ್ಲಿ ತಮ್ಮದೇ ಆದ ಕೊಡುಗೆಯನ್ನೂ ನೀಡುತ್ತಿದೆ. ಇಂಥ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬವು ಪ್ರಮುಖ ಸ್ಥಾನ ಪಡೆದಿದೆ. ಶ್ರಾವಣ ಮಾಸ ಉರುಳಿ ಭಾದ್ರಪದ ಮಾಸ ಆಗಮನಿಸುತ್ತಿದ್ದಂತೆ ಗೌರಿ ಗಣೇಶನ ಆಗಮನ. ಆದರ್ಶದ ಪ್ರತೀಕ ಸ್ವರ್ಣ ಗೌರಿ ಹಬ್ಬ.
ಗೌರಿಹಬ್ಬ ಸ್ತ್ರೀಯರಿಗೆ ಮಂಗಳವನ್ನುಂಟು ಮಾಡುವ ಅತ್ಯಂತ ಮಹತ್ವದ ಸಡಗರದ ಹಬ್ಬ.ಈ ಹಬ್ಬದ ಸಂಭ್ರಮಾಚರಣೆಗೆ ಜನ ಕಾಯುತ್ತಿರುತ್ತಾರೆ. ಈ ಹಬ್ಬಕ್ಕೆ ತಿಂಗಳಾನುಗಟ್ಟಲೆಯಿಂ ಬಗ್ಗೆದಲೆ ಸಿದ್ಧತೆ. ತಾಯಿ ಗೌರಿ ದೇವಿಗೆ ಎಲ್ಲವೂ ಹದಿನಾರರರ ವಿಶೇಷ. 16 ಗಂಟಿನ ದಾರ, 16ಎಳೆಯ ಹತ್ತಿಯ ಹಾರ, ಅರಿಶಿನ ಕುಂಕುಮ ಪೊಟ್ಟಣಗಳು, ಸ್ವರ್ಣಗೌರಿಗೆ ಮರದ ಬಾಗಿನ ಕೊಡುವುದೇ ಒಂದು ಸಂಭ್ರಮ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ 16 ಜೊತೆ ಮರದ ಬಾಗಿನ ಸಿದ್ಧತೆ. ಹಸಿರು ಬಳೆಗಳು ನೇವೇದ್ಯಕ್ಕೆ ಹದಿನಾರು ಬಗೆಯ ತಿಂಡಿಗಳ ಇವುಗಳ ವಿಶೇಷ. ಸಂಬಂಧ ಬೆಸೆಯುವ ಹಬ್ಬ. ಈ ಹಬ್ಬ ಸಂಬಂಧಗಳನ್ನು ಬೆಸೆಯುವ ಹಬ್ಬ. ಹೆಣ್ಣುಮಕ್ಕಳಿಗೆ ಸಡಗರದ, ಮನಸ್ಸುಗಳನ್ನು ಮುದಗೊಳಿಸುವ ಹಬ್ಬ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಗಂಡನ ಮನೆಯಿಂದ ಒಂದು ತಿಂಗಳ ಕಾಲ ತೌರಿಗೆ ಬರುವ ಅನುಮತಿಯನ್ನು ನೀಡುವ ಮಾಸ. ಹುಟ್ಟಿದ ಮನೆಗೂ ಹಾಗೂ ಕೊಟ್ಟ ಮನೆಗೂ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಬ್ಬ ಶತಮಾನಗಳಿಂದ ಹಿಂದೂ ಸಂಸ್ಕೃತಿಯಲ್ಲಿ ಆಚರಣೆಯಲ್ಲಿದೆ.
ಗೌರಿ ಆಗಮನ
ಗೌರಿ ಎಂಬ ಹೆಸರಿನಲ್ಲಿ ಹಲವು ಪೂಜೆ ಗಳಿವೆ. ಮಂಗಳ ಗೌರಿ, ಸೌಭಾಗ್ಯ ಗೌರಿ, ತ್ರಿಲೋಚನ ಗೌರಿ, ಗಜಗೌರಿ, ಲಾವಣ್ಯ ಗೌರಿ, ಸಂಪತ್ ಗೌರಿ, ಉಮಾಮಹೇಶ್ವರಿ ವ್ರತ ಮುಂತಾಗಿ ಆಚರಣೆಯಲ್ಲಿಯದ್ದರೂ, ಇದೆಲ್ಲಕ್ಕಿಂತಲೂ ಹಿಂದೂಧರ್ಮದವರಲ್ಲಿ ಸ್ವರ್ಣಗೌರಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಮಣ್ಣಿನ ಮಗಳೆಂದು ಗುರುತಿಸಲ್ಪಡುವನು ಈ ಗೌರಿ ವಿಶೇಷವಾಗಿ ಸ್ತ್ರೀಯರಿಗೆ ಮಹತ್ವದ ಹಬ್ಬದ ದಿನ. ಪರಶಿವನ ಮಡದಿ ಪಾರ್ವತಿ ದೇವಿ ಅಥವಾ ಗೌರಿ ತವರು ಮನೆಗೆ ಬರುವ ಸಂಭ್ರಮ.
ಲೋಕಮಾತೆ ಪಾರ್ವತಿ.
ಪರಮೇಶ್ವರನ ಪತ್ನಿಯೂ, ಲೋಕಮಾತೆಯೂ ಆದ ಪಾರ್ವತಿ ದೇವಿಯೇ ಸ್ವರ್ಣಗೌರಿ. ಈಕೆ ಷಣ್ಮುಖ ಮತ್ತು ಗಣೇಶನ ತಾಯಿಯ ಹೌದು. ಹಿಮವಂತ ರಾಜನ ಮಗಳಾದ ಪಾರ್ವತಿ ದೇವಿಯು ಶಿವನನ್ನು ಮದುವೆಯಾಗಬೇಕೆಂದು ಮರಳಿಂದ ಲಿಂಗ ಮಾಡಿ ಭಕ್ತಿಯಿಂದ ಪೂಜಿಸಿದಳು. ಶಿವನು ಒಲಿದು ಮದುವೆಯಾಯಿತು. ಶಿವ ಪತ್ನಿಯಾಗಿ ಪಾರ್ವತಿ ಲೋಕಮಾತೆ ಆದಳು. ಇವರ ಮಂಗಳ ವಿವಾಹ ಭಾದ್ರಪದ ಶುದ್ಧ ತದಿಗೆ ದಿನ ಜರಗಿತು. ಆದುದರಿಂದ ಈ ಶುಭದಿನದಂದು ಸ್ವರ್ಣಗೌರಿ ವ್ರತವು ಆಚರಣೆಗೆ ಬಂದಿತು.
ಸಂಹಾರ ಕಾರ್ಯ.
ಗೌರಿ ಎಂಬುದು ಪರಮೇಶ್ವರನ ಧರ್ಮ ಪತ್ನಿಯಾದ ಪಾರ್ವತಿಗೆ ಇರುವ ಪರ್ಯಾಯ ಹೆಸರು. ಸೃಷ್ಟಿ, ಸ್ಥಿತಿ ಮತ್ತು ಲಯಗಳ ನಮ್ಮ ಒಟ್ಟು ಜೀವನವನ್ನು ಆವರಿಸುವ ಪ್ರಮುಖ ತತ್ವಗಳು. ಲಯ ತತ್ವದ ಒಡೆಯನೇ ಶಿವ. ಆತನ ಅರ್ಧಂಗಿಯೇ ಪಾರ್ವತಿ. ಶಕ್ತಿ ಸ್ವರೂಪಿಣಿಯಾಗಿರುವ ಪಾರ್ವತಿಯು ಸಂಹಾರ ಕಾರ್ಯವನ್ನು ಮಾಡುತ್ತಾಳೆ. ಆಗ ಅವಳು ಕಪ್ಪು ಬಣ್ಣದ ‘ಕಾಳಿ’ಯಾಗಿರುತ್ತಾಳೆ. ಉಗ್ರ ಸ್ವರೂಪಿಯಾಗಿರುತ್ತಾಳೆ. ಆದರೆ ಸೌಭಾಗ್ಯ, ಸಂಪತ್ತುಗಳನ್ನು ಅನುಗ್ರಹಿಸುವಾಗ ಅವಳು ‘ಗೌರಿ’ ಸೌಮ್ಯ ಸ್ವರೂಪಿಣಿಯಾಗಿರುತ್ತಾಳೆ. ಗೌರಿ ಎಂದರೆ ಸಂಪಿಗೆ ಅಥವಾ ಬಿಳುಪಿನ ವರ್ಣದವರು ಎಂದರ್ಥ.
ಹದಿನಾರು ಹೆಸರು.
ಗೌರಿಗೆ ಹದಿನಾರು ಹೆಸರುಗಳಿವೆ. ಅವುಗಳೇ ಗೌರಿ, ಸ್ವರ್ಣಗೌರಿ, ಮಹಾಗೌರಿ, ಕಾತ್ಯಾಯಿನಿ, ಕೌಮಾರ್ಯೆ, ಭದ್ರಾ, ವಿಷ್ಣು ಸೋದರಿ, ಮಂಗಳದೇವತಾ, ಖುರಾಕೇಂದು,ವದಾನ , ಚಂದ್ರಶೇಖರ ಪ್ರಿಯಾ, ವಿಶ್ವೇಶ್ವರ ಪತ್ನೀ, ದ್ರಾಕ್ಷಾಯಿಣಿ ಕೃಷ್ಣವೇಣಿ, ಭವಾನಿ, ಲೋಲಲೋಚನಾ, ಮತ್ತು ಮೇನಕಾತ್ಮಜಾ. ಪಾರ್ವತಿ ,ಉಮಾ,ದುರ್ಗಿ, ಅಪರ್ಣ, ಅಂಬಿಕ ಹೆಸರುಗಳು ಇವೆ. ಹಾಗೆ ಆಕೆ ಶಿವನ ಪತ್ನಿ ನಾರಾಯಣನ ತಂಗಿ ಗಣೇಶನ ಎಂಬುದಾಗಿ ನಂಬಲಾಗಿದೆ.
ಪರಪ್ರಕೃತಿ ರೂಪ
ಗೌರಿದೇವಿಗೂ ಹದಿನಾರು ಸಂಖ್ಯೆಗೂ ಸಂಬಂಧವಿರುತ್ತದೆ. ಹೇಗೆಂದರೆ ಗೌರಿದೇವಿಯ ಅಂಗ ಪೂಜೆಯನ್ನು ಪಾದ, ಜಂಘ, ಜಾನುನಿ, ಉರು, ಕಟಿ,ಗುಲ್ಫ,ನಾಭಿ, ಉದರ, ಸ್ತನ, ಭುಜ, ಕಂಠ,ಓಷ್ಠ,ನಾಸಿಕ, ನೇತ್ರ, ಕರ್ಣ, ಶಿರ ಎಂಬ ಹದಿನಾರು ಸ್ಥಾನಗಳಲ್ಲಿ ನೆರವೇರಿಸುತ್ತಾರೆ. ಪೂಜೆಯ ಪುಷ್ಪ ಮತ್ತು ಪತ್ರಗಳ ಸಂಖ್ಯೆಗಳೂ ಹದಿನಾರು. ದೂರ ಗ್ರಂಥಿಗಳು ಹದಿನಾರು. ಗೌರಿ ವ್ರತದ ಫಲಕ್ಕೆ ಬೇಕಾಗುವ ವರ್ಷಗಳು ಹದಿನಾರು. ಉದ್ಯಾಪನ ಯಜ್ಞದ ಋತ್ವಿಕ್ಕುಗಳು ಹದಿನಾರು. ವಾಯನ ದಾನವನ್ನು ಹದಿನಾರು ಮಂದಿಗೆ ಕೊಡಲಾಗುವುದು. ಪೂಜಿಸಲ್ಪಡುವ ದಂಪತಿಗಳು ಹದಿನಾರು. ಕರುಣಾಮಯಿಯಾದ ಗೌರಿ ದೇವಿಯು ಶೋಡಶಕಾಲಾ ಪರಿಪೂರ್ಣ ಗಳು. ಆಕೆ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಿದರೆ, ಪ್ರಾಕೃತವಾದ ನಮ್ಮ ಜಡ ಪ್ರಕೃತಿಯ ಹದಿನಾರು ಕಲೆಗಳೂ ಕೂಡ ಪರಿಶುದ್ಧವಾಗಿ ಪರ ಪ್ರಕೃತಿ ರೂಪವನ್ನು ತಾಳುತ್ತವೆ ಎಂಬುದಾಗಿ
ನಂಬಲಾಗಿದೆ.
ಒಳ್ಳೆಯ ಪತಿಗಾಗಿ ಪೂಜೆ.
ಒಳ್ಳೆಯ ಪತಿಯನ್ನು ಪಡೆಯಲು, ದಾಂಪತ್ಯ ಸುದೀರ್ಘ ಅವಧಿ ಶಾಶ್ವತವಾಗಿಲು ಗೌರಿಯನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸುತ್ತಾರೆ. ಗೋಪಿಕಾ ಸ್ತ್ರೀಯರು ಮತ್ತು ರುಕ್ಮಿಣಿಯು ಶ್ರೀಕೃಷ್ಣನನ್ನು ಪತಿಯಾಗಿ ಪಡೆಯಲು ಗೌರಿಯನ್ನು ಪೂಜಿಸಿದ್ದರೆಂದು ಪುರಾಣಗಳಲ್ಲಿ ಉಲ್ಲೇಖಸಿವೆ. ಹಾಗೇ ಈ ವ್ರತವನ್ನು ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಆಚರಿಸಿರುವನು, ದ್ವಾಪರಯುಗದಲ್ಲಿ ಧರ್ಮರಾಯನು ಆಚರಿಸುವನು. ಈಗಲೂ ಕೂಡ ವಿವಾಹದ ಕಾರ್ಯಕ್ರಮದಲ್ಲಿ ಗೌರಿ ಪೂಜೆಯನ್ನು ಮಾಡುವ ಒಂದು ಪದ್ಧತಿ ಇದೆ. ತಾಳಿಯ ಭಾಗ್ಯಕ್ಕೆ ಈ ಪೂಜೆ ತುಂಬಾ ಶ್ರೇಷ್ಠವಾದದ್ದು ಎಂಬುದಾಗಿ ನಂಬಲಾಗಿದೆ.
ಹೆಣ್ಣು ಮಕ್ಕಳಿಗೆ ಆದರ್ಶ.
ಇಂತಹ ಗೌರಿ ನಮ್ಮ ಹೆಣ್ಣುಮಕ್ಕಳಿಗೆ, ಗೃಹಿಣಿಯರಿಗೂ ಆದರ್ಶಳಾಗಿ ವರ್ಷಕ್ಕೊಮ್ಮೆ ಭಾದ್ರಪದದಲ್ಲಿ ಎಲ್ಲಾ ಮನೆಗಳಲ್ಲಿಯೂ ಆವಾಹನೆಯಾಗುತ್ತಿದ್ದಾಳೆ. ಇವಳ ಗುಣಗಳನ್ನು ಹೆಣ್ಣುಮಕ್ಕಳು ತಮ್ಮೊಡನೆ ಅಳವಡಿಸಿಕೊಂಡು ಜೀವನ ನಡೆಸಿದ್ದಲ್ಲಿ ಅದು ಸಾರ್ಥಕ ಬದುಕೆನಿಸುತ್ತದೆ.
——————————————————————ಶ್ರೀಮತಿ ರಾಜೇಶ್ವರಿ ವಿಶ್ವನಾಥ್.
ವಿಜಯನಗರ, ಹಾಸನ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ