- ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ - ಅಕ್ಟೋಬರ್ 20, 2024
- ಆದಿಯೂ… ನೆಟ್ನ ಪಾಠವೂ - ಆಗಸ್ಟ್ 11, 2021
- ಕಾವ್ಯ ಮತ್ತು ಕಾವ್ಯಾನುಸಂಧಾನ - ಜುಲೈ 16, 2021
ಕನ್ನಡದಲ್ಲಿ ಶಿಶು ಗೀತೆಗಳನ್ನು ರಚಿಸುವವರ ದೊಡ್ಡ ಪರಂಪರೆಯೇ ಇದೆ. ಶಿಶುಗೀತೆಯ ಬೇರುಗಳನ್ನು ಜನಪದ ಸಾಹಿತ್ಯದಲ್ಲಿ ಗಮನಿಸಬಹುದು. ಜನಪದ ಸಾಹಿತ್ಯದಲ್ಲಿ ಮಗು ಬೆಳೆದು ಬಾಲಕನಾಗುವ ವರೆಗಿನ ಬೆಳವಣಿಗೆಯ ವಿವಿಧ ಹಂತಗಳಿಗೆ ಸೂಕ್ತವೆನಿಸುವ ಮಕ್ಕಳ ಹಾಡುಗಳಿವೆ. ನಂತರದ ಕಾಲಘಟ್ಟದಲ್ಲಿ ಪಂಜೆ ಮಂಗೇಶರಾಯರು, ಕುವೆಂಪು, ಕಾರಂತರಿಂದ ಮೊದಲ್ಗೊಂಡು ಹಿರಿ-ಕಿರಿಯ ಅನೇಕ ಸಾಹಿತಿಗಳು ಅಗಾಧ ಪ್ರಮಾಣದ ಮಕ್ಕಳ ಕವನಗಳನ್ನು ರಚಿಸಿದ್ದಾರೆ. ಇಂದಿಗೂ ಯಾವುದೇ ಪತ್ರಿಕೆಯ ಪುರವಣಿ ವಿಭಾಗವನ್ನು ಗಮನಿಸಿದರೆ ಒಂದೆರಡಾದರೂ ಮಕ್ಕಳ ಕವಿತೆಗಳು ಕಣ್ಣಿಗೆ ಬೀಳುತ್ತವೆ.
ಆದರೆ ಇಂದು ಪ್ರಕಟವಾಗುತ್ತಿರುವ ಶಿಶುಗೀತೆಗಳು ಪತ್ರಿಕೆಗಳಿಗೆ ಸೀಮಿತವಾಗಿವೆ, ಮಕ್ಕಳನ್ನು ತಲುಪುತ್ತಿಲ್ಲ. ಇಂಗ್ಲಿಷ್ ವ್ಯಾಮೋಹ ಮತ್ತು ಎರಡು ವರ್ಷದಷ್ಟು ಎಳೆಯ ಮಕ್ಕಳನ್ನೂ ಬಾಲವಾಡಿಗೆ ಸೇರಿಸುವ ಪ್ರವೃತ್ತಿ ಇದಕ್ಕೆ ಕಾರಣ. ಇಂದಿನ ಪೋಷಕರಿಗೆ ತಮಗೆ ಗೊತ್ತಿರುವ ಒಂದೆರಡು ಗೀತೆಗಳನ್ನೂ ಮಕ್ಕಳೆದುರು ಹಾಡಿ ರಂಜಿಸುವಷ್ಟು ವ್ಯವಧಾನವಿಲ್ಲ. “ಜನನಿ ತಾನೆ ಮೊದಲ ಗುರುವು” ಎಂಬ ಪದವಿಯನ್ನು ತಾಯಂದಿರು ತಾವಾಗಿಯೇ ತೊರೆದಿದ್ದಾರೆಯೋ ಎನ್ನಿಸುತ್ತದೆ. ಮಕ್ಕಳು ಶಾಲೆಗೆ ಹೋಗತೊಡಗಿದ ಮೇಲಂತೂ ಅಲ್ಲಿನ ರೆಜಿಮೆಂಟೆಡ್ ಶಿಕ್ಷಣ ಕ್ರಮದಿಂದ ತಮ್ಮ ಪರಿಸರಕ್ಕೆ ಅನುಗುಣವಾಗಿರುವ ಗೀತೆಗಳ ಬದಲು ಇಡೀ ರಾಜ್ಯಕ್ಕೆ ಅನ್ವಯಿಸುವ ಸಿದ್ಧ ಪಠ್ಯಕ್ರಮದ ಗೀತೆಗಳನ್ನು ಶುಷ್ಕವಾಗಿ ಕಂಠಪಾಠ ಮಾಡುತ್ತವೆ. ಶಾಲೆಗಳಲ್ಲಿ ಇಂದು ಕಲಿಸಲಾಗುತ್ತಿರುವ ಶಿಶುಗೀತೆಗಳು ಪುಟ್ಟ ಮಕ್ಕಳ ಕಲ್ಪನಾ ಪ್ರಪಂಚವನ್ನು ವಿಸ್ತರಿಸಲು ಹಾಗೂ ಅವರಲ್ಲಿನ ಸೃಜನಶೀಲತೆಯನ್ನು ಪೋಷಿಸಲು ಸಮರ್ಥವಾಗುತ್ತಿಲ್ಲ.
ಹಾಗಾದರೆ ನಮ್ಮ ಮಕ್ಕಳಿಗೆ ಎಂತಹ ಕವಿತೆಗಳು ಬೇಕು? ಮೊದಲನೆಯದಾಗಿ, ಕವಿತೆಗಳು ಮಕ್ಕಳು ಬೆಳೆಯುತ್ತಿರುವ ಪರಿಸರದ ಭಾಷೆಯಲ್ಲಿರಬೇಕು. ತಮ್ಮ ಸುತ್ತಮುತ್ತ ಕಾಣುವ ಪ್ರತಿಯೊಂದು ಚಲನಶೀಲ ವಸ್ತುವೂ ಮಕ್ಕಳಲ್ಲಿ ಬೆರಗನ್ನು ಮೂಡಿಸುತ್ತದೆ. ಇನ್ನು ಚಲನೆಯ ಜೊತೆಗೆ ಸಂವಹನವನ್ನೂ ಮಾಡುವ ಪ್ರಾಣಿಗಳಂತೂ ಮಕ್ಕಳಿಗೆ ಅಚ್ಚು ಮೆಚ್ಚು. ನೋಡುವ, ತಿನ್ನುವ, ಮುಟ್ಟುವ ಪ್ರತಿಯೊಂದು ವಿಷಯದಲ್ಲಿಯೂ ಮಕ್ಕಳಿಗೆ ಕುತೂಹಲ. ಅಮ್ಮ ತರಕಾರಿ ಹೆಚ್ಚುವಾಗ ದುಂಡಗಿನ ಕುಂಬಳಕಾಯಿಯನ್ನು ತೋರಿಸಿ ಅದನ್ನು ಪಂಪ್ಕಿನ್ ಎಂದು ಪರಿಚಯಿಸುವ ಬದಲು ಕುಂಬಳ ಕಾಯಿ ಎಂದು ಹೇಳುತ್ತ ಅಪ್ಪನ ಹೊಟ್ಟೆಗೋ ಇನ್ನಾವುದಕ್ಕೋ ಹೋಲಿಸಿ ಒಂದು ಚಿಕ್ಕ ಗೀತೆಯನ್ನು ಹಾಡಿದರೆ ಮಗುವಿನ ಮುಖದಲ್ಲಿ ನಗು ಮೂಡುವುದು ನಿಶ್ಚಿತ. ಆಡುತ್ತ ಹಾಡುತ್ತ ಪರಿಸರದ ಜೊತೆಯಲ್ಲಿಯೇ ಬೆಳೆಯಬೇಕಾದ ಎಳೆಯ ಮಕ್ಕಳನ್ನು ತರಗತಿಗಳಲ್ಲಿ ಕೂಡಿಹಾಕಿ ಹಂಪ್ಟಿ ಡಂಪ್ಟಿ ಎಂದು ಹಾಡು ಹೇಳಿಕೊಟ್ಟರೆ ಶಿಕ್ಷಕರ ಹಾವಭಾವ ಅವುಗಳಲ್ಲಿ ನಗು ಹುಟ್ಟಿಸಬಹುದೇ ಹೊರತು ಹಾಡಿನಲ್ಲಿ ಅಂತರ್ಗತವಾಗಿರುವ ಭಾವದ ಚಲನಶೀಲತೆ ಮಕ್ಕಳ ಮನಸ್ಸಿನಲ್ಲಿ ಮೂಡುವುದೇ ಇಲ್ಲ. ಆನೆಯನ್ನೇ ನೋಡದ ಮಕ್ಕಳಿಗೆ ಆನೆಯ ಬಗ್ಗೆ ಹಾಡು ಹೇಳುವ ಬದಲು ತಮ್ಮ ಕಣ್ಣೆದುರಿಗೆ ಇರುವ ನಾಯಿ, ಬೆಕ್ಕು, ಕೋಳಿ, ಕಾಗೆಗಳ ಹಾಡುಗಳನ್ನು ಹೇಳಿಕೊಟ್ಟರೆ ಮಕ್ಕಳ ಕಲ್ಪನಾಲೋಕ ವಿಸ್ತರಿಸುತ್ತದೆ. ಇಂದಿಗೂ ಪತ್ರಿಕೆಗಳಲ್ಲಿ ಹಳೆಯ ಧಾಟಿಯ ಶಿಶುಗೀತೆಗಳೇ ಪ್ರಕಟವಾಗುತ್ತಿವೆ. ಆದರೆ ನಮ್ಮ ಮಕ್ಕಳು ಬಹಳ ಮುಂದೆ ಸಾಗಿದ್ದಾರೆ. ಒಂದು ವರ್ಷದ ಮಗುವಿಗೆ ನಕ್ಷತ್ರ, ಚಂದ್ರ, ಗುಬ್ಬಚ್ಚಿ, ಹಸುಗಳನ್ನು ತೋರಿಸಿ ಉಣ್ಣಿಸುವ ಕಾಲವಿದಲ್ಲ. ಮಕ್ಕಳ ಕೈಗೊಂದು ಮೊಬೈಲು ಕೊಟ್ಟು ಅದರಲ್ಲಿ ಬರುವ ಚಿತ್ರಗಳನ್ನು ತೋರಿಸುತ್ತ ತುತ್ತು ತಿನ್ನಿಸುವ ತಾಯಂದಿರನ್ನು ಎಲ್ಲೆಲ್ಲಿಯೂ ನೋಡಬಹುದು. ಒಂದೆರಡು ವರ್ಷಗಳ ಮಕ್ಕಳು ಮೊಬೈಲಿನ ಎಲ್ಲ ಅಪ್ಲಿಕೇಶನ್ನುಗಳನ್ನು ಲೀಲಾಜಾಲವಾಗಿ ಬಳಸುವುದನ್ನು ಗಮನಿಸಬಹುದು.
ಪ್ರಕೃತಿಯನ್ನು ಅನುಕರಿಸಿ ರಚಿಸಿದ ಹಾಡುಗಳು ಮೂರು ನಾಲ್ಕು ವರ್ಷಗಳ ವರೆಗಿನ ಮಕ್ಕಳಿಗೆ ಇಷ್ಟವಾಗಬಹುದು. ನಂತರ ಅವುಗಳಿಗೆ ಹೊಸರೀತಿಯ ಹಾಡುಗಳು ಬೇಕಾಗುತ್ತವೆ. ಮಕ್ಕಳಲ್ಲಿ ಬೆಳವಣಿಗೆಯ ವೇಗ ಹೆಚ್ಚು. ಮಕ್ಕಳ ಪ್ರಬುದ್ಧತೆಯ ಬೆಳವಣಿಗೆಗೆ ಹೊಂದುವ ಹಾಡುಗಳನ್ನು ಒದಗಿಸಬೇಕಾಗುತ್ತದೆ. ಬೇರೆಯರ ಬಾಯಿಯಿಂದ ಕೇಳಿಸಿಕೊಂಡು ಆನಂದಿಸುವ ಶಿಶುಗಳಿಂದ ಹಿಡಿದು ತಾವೇ ಹಾಡುಗಳನ್ನು ಓದಿ ಅರ್ಥಮಾಡಿಕೊಳ್ಳುವ ವಯೋಮಾನದ ವರೆಗಿನ ಮಕ್ಕಳಿಗೆ ಸೂಕ್ತವಾದ ಹಾಡುಗಳನ್ನು ರಚಿಸಲು ಕವಿಗೆ ಸೂಕ್ಷ್ಮತೆಯಿರಬೇಕು. ಜೊತೆಗೆ ಮಗುವಿನ ಮನಸ್ಸಿನ ಪ್ರತ್ಯಕ್ಷ ಅನುಭವವಿರಬೇಕು. ಮಕ್ಕಳ ಕವಿತೆಗಳ ಒಂದು ಸಂಕಲನವನ್ನು ಪ್ರಕಟಿಸುವಾಗ ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ಅವರ ಮನಸ್ಸನ್ನು ಹಿಡಿದಿಡಬಲ್ಲ, ಮಕ್ಕಳ ಕಲ್ಪನಾ ಲೋಕವನ್ನು ವಿಸ್ತರಿಸಬಲ್ಲ ಹಾಗೂ ಅವರ ಸೃಜನಶೀಲತೆಯನ್ನು ಉದ್ದೀಪಿಸಬಲ್ಲ ಕವಿತೆಗಳನ್ನು ಸಂಕಲನದಲ್ಲಿ ಸೇರಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ರವೀಂದ್ರ ರವರು ಬರೆದ “ಆದಿಯೂ… ನೆಟ್ನ ಪಾಠವೂ” ಮಕ್ಕಳ ಕವಿತೆಗಳ ಸಂಕಲನವನ್ನು ಗಮನಿಸಬಹುದು. ಇದೊಂದು ಉತ್ತಮ ಪ್ರಯೋಗ. ಲಯ, ಪ್ರಾಸಗಳ ಜೊತೆಗೆ ಕಾಲಕಾಲಕ್ಕೆ ಮಕ್ಕಳ ಮನೋವಿಕಾಸಕ್ಕೆ ಅಗತ್ಯವಿರುವ ವಸ್ತುಗಳನ್ನೊಳಗೊಂಡ ಕವಿತೆಗಳು ಈ ಸಂಕಲನದಲ್ಲಿವೆ.
ಕೋಮಲವಲ್ಲಿಯೆಂಬ ಚದುರ ಬಿಲ್ಲಿ, ಜೋಯಿಯೆಂಬ ನಾಯಿ, ಬ್ಯಾ ಬ್ಯಾ ಬೋಡು ಕುರಿ, ಮುಂತಾದ ಮಕ್ಕಳ ಅನುಭವಕ್ಕೆ ನಿಲುಕುವ ಕವಿತೆಗಳು ಪುಟ್ಟ ಮಕ್ಕಳಿಗೆ ಆಪ್ತವಾಗುತ್ತವೆ. ವಿವಿಧ ಪ್ರಾಣಿ ಪಕ್ಷಿಗಳು, ಆಟೋಟಗಳು, ತಿಂಡಿ ತಿನಿಸುಗಳು ಪುಟ್ಟ ಮಕ್ಕಳನ್ನು ಖಂಡಿತವಾಗಿಯೂ ಸೆಳೆಯುತ್ತವೆ. ಸ್ವಲ್ಪ ಬೆಳೆದ ಮಕ್ಕಳಿಗೆ ಇಷ್ಟವಾಗಬಲ್ಲ ಆದಿಯು ಅನೇಕ ಕವನಗಳಲ್ಲಿ ಹಲವು ಅವತಾರಗಳಲ್ಲಿ ವಿಜೃಂಭಿಸಿದ್ದಾನೆ. ಮಕ್ಕಳು ಎದುರು ನೋಡುವ ದಸರಾ, ಜನ್ಮಾಷ್ಟಮಿ ಮತ್ತು ದೀಪಾವಳಿ ಉತ್ಸವಗಳು ಇಲ್ಲಿವೆ. ಕತೆಯೊಂದನ್ನು ನೇರವಾಗಿ ಹೇಳುವ ಗೋವಿನ ಹಾಡನ್ನು ಅದು ಹೇಳದ ಆದರೆ ಸೂಚಿಸುವ ವಿಷಯಗಳ ಕಡೆ ಗಮನ ಹರಿಸುವಂತೆ “ಅರ್ಬುತನ ಹಾಡು” ಎಂದು ಹೊಸ ಕವಚದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಮೂಲ ಗೋವಿನ ಹಾಡಿನ ಜೊತೆಗೆ ಅರ್ಬುತನ ಹಾಡನ್ನು ಓದುವ ಮಕ್ಕಳು ವಿಮರ್ಶಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ನಿಶ್ಚಿತ.
ಮಕ್ಕಳಿಗೆ ಆದರ್ಶಗಳು ಬೇಕು. ಗಾಂಧಿ ಮತ್ತು ವಿವೇಕಾನಂದರು ಎಲ್ಲ ಕಾಲಕ್ಕೂ ಸಲ್ಲುವ ಆದರ್ಶ ವ್ಯಕ್ತಿಗಳು. ಅವರ ಕುರಿತಾದ ಕವನಗಳ ಜೊತೆಗೆ ರಾಷ್ಟ್ರಭಕ್ತಿಯನ್ನು ಪ್ರೇರಿಸುವ, ವಿವಿಧತೆಯಲ್ಲಿ ಏಕತೆಯನ್ನು ದರ್ಶಿಸುವ, ವಿಶಾಲ ದೃಷ್ಟಿಕೋನವನ್ನು ಬೆಳೆಸುವ “ಬಂದರು ಸ್ಕೌಟ್ ಮಕ್ಕಳು” “ಭಾರತವೆಂಬ ಚಿನ್ನದ ಹಕ್ಕಿ” ಮತ್ತು “ಓ ಭಾರತಿ” ಕವನಗಳು ಈ ಸಂಕಲನದಲ್ಲಿವೆ. ಪುರಾಣದ ಕಥೆಗಳು ಮತ್ತು ಪಂಚತಂತ್ರದ ಕಥೆಗಳನ್ನು ತಮ್ಮದೇ ಧಾಟಿಯಲ್ಲಿ ಮತ್ತೆ ಹಾಡಿದ್ದಾರೆ, ಕವಿ. ರವೀಂದ್ರರು ಬರೆದ ಪುಸ್ತಕದಲ್ಲಿ ಕನ್ನಡದ ಕಳಕಳಿ ಇಲ್ಲದಿದ್ದರೆ ಹೇಗೆ? “ತಾಯಿಗೊಂದು ಹಾಡು”, “ನಾಡ ಧ್ವಜ” ಮತ್ತು “ಕನ್ನಡ ತಾಯಿಗೆ ನಮನ” ಕವನಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.
ಕವಿಯ ಎರಡು ಸಾಲಿನ ಮತ್ತು ಮೂರು ಸಾಲಿನ ಪದ್ಯಗಳು ಇತರ ಪದ್ಯಗಳಿಗಿಂತ ತಮ್ಮ ಸರಳತೆ, ಲಯ ಮತ್ತು ಪ್ರಾಸಗಳಿಗಾಗಿ ಇಷ್ಟವಾಗುತ್ತವೆ. ಇಷ್ಟಿದ್ದೂ “ಇಲಿಯ ಪಲ್ಟಿ” ಒಂದು ಸುಂದರ ಕವನ. “ಬೆಕ್ಕು ಸಾಕುವ ಪಾಷಾಣವಿಕ್ಕುವ ಬಡಿಗೆಲಿ ಬಡಿಯುವ” ಕ್ರೌರ್ಯ ಇಷ್ಟವಾಗದ ಪುಟ್ಟಿಯು “ಘಮಘಮ ವಡೆಯ ಕೊಕ್ಕಿಗೆ ಸಿಕ್ಕಿ ಪಂಜರವಿಕ್ಕಿ” ಇಲಿಯನ್ನು ಹಿಡಿದು ಚೀಲದಲ್ಲಿ ತುಂಬಿ ದೂರದಿ ಬಿಟ್ಟು ತನ್ನ ಸುಕೋಮಲ ಹೃದಯವನ್ನು ಪ್ರದರ್ಶಿಸುತ್ತಾಳೆ. “ಬಲು ಚಂದ ತಂಗ್ಯವ್ವ ಬಲು ಚಂದ” ಇಷ್ಟವಾಗುವ ಇನ್ನೊಂದು ಕವನ. ಶ್ರೀಮತಿ ಟಿ ಎಸ್ ಶ್ರವಣಕುಮಾರಿಯವರು ಬರೆದ ಸುಂದರ ಲಘುಪ್ರಬಂಧವೊಂದರ ಸಾರಾಂಶವನ್ನು ಪದ್ಯದ ರೂಪದಲ್ಲಿ ಸಂಗ್ರಹಿಸಿದಂತಿದೆ.
ನಾನು ಅತ್ಯಂತ ಮೆಚ್ಚಿಕೊಂಡ ಇನ್ನೊಂದು ಕವನ “ಯಾಕಳುತಾ ಕುಂತಿ”. ಕಾಶ್ಮೀರದ ಸಿಯಾಚಿನ್ ಪ್ರದೇಶದಿಂದ ಹುತಾತ್ಮನಾಗಿ ಹಿಂದಿರುಗಿದ ತಂದೆಯ ಅಂತ್ಯಸಂಸ್ಕಾರದ ವಿವರಗಳನ್ನು ಮಗುವಿನ ಮುಗ್ಧಪ್ರಶ್ನೆಗಳ ಮೂಲಕ ಬಿಚ್ಚಿಡುತ್ತ ಒಂದು ಹೃದಯ ವಿದ್ರಾವಕ ಸನ್ನಿವೇಶವನ್ನು ಕಟ್ಟಿಕೊಡುವ “ಯಾಕಳುತಾ ಕುಂತಿ” ಒಂದು ಉತ್ತಮ ಕವನ. ಇಲ್ಲಿ ಮುಗ್ಧತೆಯನ್ನು ಮೆರೆಯುವ ಕವಿಯ ಲೇಖನಿ ಪ್ರೌಢ ಕವನಗಳನ್ನು ಬರೆಯುವಾಗ ಆಕ್ರೋಶಭರಿತವಾಗುವುದನ್ನು ನಾವು ನೋಡಿದ್ದೇವೆ. ಬಾಲ್ಯದ ಮುಗ್ಧತೆಯೇ ಮುಂದೆ ಆಕ್ರೋಶವಾಗಿ ಪರಿವರ್ತಿತವಾಗುವ ಬಗೆಯನ್ನು ರವೀಂದ್ರರಲ್ಲಿ ನಾವು ಗಮನಿಸಬಹುದು.
ಸಂಕಲನದ ಪ್ರತಿಯೊಂದು ಪದ್ಯವೂ ಉತ್ತಮ ರೇಖಾ ಚಿತ್ರಗಳ ಮೆರುಗು ಪಡೆದುಕೊಂಡಿದೆ. ಮಕ್ಕಳು ರೇಖಾ ಚಿತ್ರಗಳ ಮೂಲಕ ಪದ್ಯಗಳ ಅಂತರಂಗವನ್ನು ಸುಲಭವಾಗಿ ಗ್ರಹಿಸುತ್ತಾರೆ.
ಮಕ್ಕಳ ಕವಿತೆಗಳಲ್ಲಿ “ಹೆಣ್ತಿ ಬಯ್ದರೂ..” ಎಂಬ ರೀತಿಯ ಪ್ರಯೋಗ ಬೇಡವಿತ್ತೇನೋ. “ಅಮ್ಮನ ಹುಟ್ಟಿದ ಹಬ್ಬ” ಕವನವನ್ನು ಮಕ್ಕಳ ಕವನ ಎನ್ನಬಹುದೇ ಎಂದು ನನಗೆ ಸಂದೇಹವಿದೆ. ಭಾಷೆಯ ಪ್ರಯೋಗದ ದೃಷ್ಟಿಯಿಂದ ಕೆಲವು ಕವನಗಳನ್ನು ಪರಿಷ್ಕರಿಸಿ ಇನ್ನೂ ಸರಳಗೊಳಿಸಿ ಬರೆಯಬಹುದಿತ್ತೇನೋ ಎಂದು ನನಗನ್ನಿಸುತ್ತದೆ.
ವೇದಿಕೆಯ ಕೆಲವು ಸದಸ್ಯರು ಈ ಸಂಕಲನದ ಹಾಡುಗಳನ್ನು ಹಾಡಿ ತೋರಿಸುವ ಮೂಲಕ ಕವನಗಳ ಗೇಯ ಗುಣವನ್ನು ಸಾಬೀತುಪಡಿಸಿದ್ದಾರೆ. ಹಾಡುವ ಕವನಗಳ ಜೊತೆಗೆ ಬೆಳವಣಿಗೆಯ ಮುಂದಿನ ಹಂತದಲ್ಲಿರುವ ಮಕ್ಕಳಿಗೆ ಓದುವ ಕವನಗಳೂ ಈ ಸಂಕಲನದಲ್ಲಿವೆ. ಸುಂದರವಾದ ರಕ್ಷಾಪುಟ, ಉಬ್ಬು ಅಕ್ಷರಗಳ ವಿನ್ಯಾಸ ಮನಸೆಳೆಯುತ್ತವೆ. ಕವನಗಳ ಅಕ್ಷರಗಳು ಸಾಕಷ್ಟು ದೊಡ್ಡವಾಗಿದ್ದು ಸುಂದರವಾಗಿ ಮುದ್ರಿತವಾಗಿವೆ. ಶ್ರೀ ಬಿ ಎಸ್ ಚಂದ್ರಶೇಖರ್, ಶ್ರೀ ಕೆ ಎನ್ ಮಹಾಬಲ, ಶ್ರೀಮತಿ ರತ್ನಾ ಮೂರ್ತಿ ಮತ್ತು ಶ್ರೀಮತಿ ಶ್ರವಣಕುಮಾರಿಯವರ ಮಾತುಗಳು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ಮುನ್ನುಡಿಯನ್ನು ಸ್ವತಃ ರವೀಂದ್ರರವರೇ ಬರೆದಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಒಂದು ಸಂಗ್ರಹಯೋಗ್ಯ ಮಕ್ಕಳ ಕವನ ಸಂಕಲನ “ಆದಿಯೂ… ನೆಟ್ನ ಪಾಠವೂ”
ಈ ಪುಸ್ತಕದ ಪ್ರತಿಗಳಿಗಾಗಿ ಶ್ರೀ ಬೆಂ ಶ್ರೀ ರವೀಂದ್ರ ಅವರನ್ನು ದೂರವಾಣಿ 9448994199 ಸಂಪರ್ಕಿಸಬಹುದು.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ