- ಮೈಖೇಲ್ ಜಾಕ್ಸನ್ ಎಂಬ ಲೋಕ ಕಂಡ ಮಾಂತ್ರಿಕ - ಡಿಸಂಬರ್ 21, 2021
- ಪ್ರೀತಿ ಹಂಚುತ ಸಾಗು - ನವೆಂಬರ್ 24, 2021
- ನನ್ನ ಕವಿತೆಗಳಿಗೊಂದಷ್ಟು ಜಾಗ ನೀಡಿ - ನವೆಂಬರ್ 3, 2021
ಚಿತ್ರ ಹಾಗೂ ಕವಿತೆ : ಜಬೀವುಲ್ಲಾ ಎಮ್. ಅಸದ್
ಈ ಕವಿತೆ ಎಂಬುವುದಿದೆಯಲ್ಲ
ಅದು…………………..
ಹೊತ್ತಲ್ಲದ ಹೊತ್ತಿನಲ್ಲಿ
ಕತ್ತಲಲ್ಲಿ ದೀಪ ಹಚ್ಚಿಟ್ಟಂತೆ
ಮಲಗಿದವನ ಎಬ್ಬಿಸಿ ಕೂರಿಸಿ
ತನ್ನ ಜಿದ್ದಿನಲ್ಲಿ
ಚಿಂತನೆಗೆ ಹಚ್ಚಿ
ಮಂಥನದಿ ಮಥಿಸಿ
ಬದುಕಿನ ಅನುಭವದ
ಒರತೆಯಲ್ಲಿ ಮಾಗಿಸಿ
ದಶದಿಕ್ಕುಗಳ ಮೀರಿ
ದಕ್ಕಿದನ್ನೆಲ್ಲ ಹೆಕ್ಕಿ
ಮಾನಸ ಹಕ್ಕಿಯಾಗಿ
ಕಲ್ಪನೆ – ಕನವರಿಕೆಗಳ
ರೆಕ್ಕೆ ಬಿಚ್ಚಿ, ಹುರುಪು ಕೊಚ್ಚಿ
ಮೂಗಿಲ ಮೂಲವ ಅರಸಿ
ಅನಂತಕೆ ಹಾರಿ
ಹುಡುಕ ಹೊರಡುತ್ತದೆ
ಏಕಾ ಏಕಿ
ಮೌನದೊಳಗಿನ ಮಾತನು
ಮಾತಲಿ ಅವಿತ ಅರ್ಥವನು
ಅರ್ಥದೊಡಲಿನ ಹೊಳಹುಗಳನು
ಹೊಳಹುಗಳ ಕಾಣ್ಕೆಯನು
ರವಿ ಕಾಣದ್ದನ್ನು!
ಕನಸುಗಳ ಕಡಲ ಅಲೆಗಳ
ಮೇಲೆ ಹಾದು
ಭಾವಗಳ ಬಯಲಲ್ಲಿ
ಗಿರಕಿ ಹೊಡೆದು
ರೂಪಕಗಳ ಕಾನನ ಹೊಕ್ಕು
ಪ್ರತಿಮೆಗಳ ಗಹನಕೆ ಸಿಕ್ಕು
ಸಂತೆಯಲ್ಲಿದ್ದರೂ
ಏಕಾಂತದಿ ಕೂತರು
ಮೈ ಮನಸು ಎರಡನು
ತಬ್ಬಿ ಹಿಡಿವುದು
ಮಾಯೆಯಲ್ಲ, ಮೋಹವಲ್ಲ
ಅಂತರಂಗದ ಕೊಳಲ ಗಾನ
ಆತ್ಮದ ಜ್ಞಾನದ ಧ್ಯಾನ
ಎಲ್ಲವನ್ನು ಒಳಗೊಂಡಿರುವುದು
ಏನನ್ನೂ ಬಿಡಲೊಲ್ಲದು
ಇದೆ ಎಂದರೆ ಇದೆ
ಇಲ್ಲವೆಂದರೆ ಇಲ್ಲ
ಎಲ್ಲಾ ಹೇಳಲಾಗದು
ಕವಿತೆ ಎಂದರೆನೆ ಹಾಗೆ….
ಕವಿಗಲ್ಲದೆ ಅನ್ಯ
ಯಾರಿಗೂ ಒಲಿಯದು
ಬಲವಂತ ಸಲ್ಲದು!
ಎಲ್ಲೆಗಳಿಲ್ಲದ ಅದರ ಬಗೆಗೆ
ಎಷ್ಟೇ ಬರೆದು ಹೇಳಿದರೂ
ಕಡಿಮೆಯೆ ನಿಮಗೆ
ಅದೊಂದು ಕೌತುಕವೇ ಸರಿ
ಅನರ್ಘ್ಯ, ಅನನ್ಯ
ಅದರ ಪರಿ
ಕವಿತೆಯೇ ನಿನಗೊಂದು ಸಲಾಂ!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ