ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇದೊಂದು ಪ್ರೇಮ ಕಥೆ – ಇದರಲ್ಲೇನೂ ಹೊಸತನವಿಲ್ಲ

ರಾಜೇಂದ್ರ ಬಿ. ಶೆಟ್ಟಿ
ಇತ್ತೀಚಿನ ಬರಹಗಳು: ರಾಜೇಂದ್ರ ಬಿ. ಶೆಟ್ಟಿ (ಎಲ್ಲವನ್ನು ಓದಿ)

ಹಿಂದೆ ನಾನೊಂದು ಕತೆ ಓದಿದ್ದರ ನೆನಪು, “ನಿಜವಾದ ಪ್ರೇಮಿ, ತನ್ನ ಪ್ರೇಮಿಯನ್ನು ಮದುವೆಯಾಗದೆಯೇ ಪ್ರೀತಿಸಬಲ್ಲ.” ಆಗ ನಾನೂ ಅದನ್ನೇ ನಿಜವೆಂದೇ ನಂಬಿದ್ದೆ. ಎಷ್ಟೊಂದು ಬಾಲಿಶ ವಿಚಾರ ! ಆಗ ಪ್ರೇಮ ಎಂದರೇನು ಎದು ಗೊತ್ತಿರಲಿಲ್ಲ. ಹುಡುಗಿಯರನ್ನು ಕಂಡಾಗ ಉಂಟಾಗುವ ಆಕರ್ಷಣೆಯೇ ಪ್ರೀತಿಯೆಂದು ನಂಬಿದ್ದೆ. ಆದರೆ ಈಗ…….

ರಾಜೇಂದ್ರ ಶೆಟ್ಟಿ ಅವರ ‘ಇದೊಂದು ಪ್ರೇಮ ಕಥೆ’ ಇಂದ ಆಯ್ದದ್ದು…

ತೆರೆಗಳು ಒಂದರ ಹಿಂದೊಂದರಂತೆ ದಡಕ್ಕೆ ಅಪ್ಪಳಿಸುತ್ತವೆ, ಅದರೊಂದಿಗೆ ಉಕ್ಕಿ ಬರುತ್ತಿರುವ ಬಿಳಿ ನೊರೆಗಳು, ಅವುಗಳನ್ನು ನೋಡಿ ಆನಂದಿಸುವ ಯುವ ಪ್ರಣಯಿಗಳು, ತೆರೆಗಳನ್ನು ಕಂಡು ಕುಣಿಯುವ ಹುಡುಗರು, ಅವರನ್ನು ದಡಕ್ಕೆ ಎಳೆಯುವ ತಾಯಂದಿರು, ಮುಳುಗುತ್ತಿರುವ ಸೂರ್ಯ, ಸಂಜೆಯನ್ನು ಅಪ್ಪಿಕೊಂಡು ಬರುತ್ತಿರುವ ಕತ್ತಲು, ಅದರೊಂದಿಗೆ ಒಂದು ಕಲ್ಪನೆಃ ದೋಣಿ…., ಎರಡು ವ್ಯಕ್ತಿಗಳು – ಗಂಡು ಮತ್ತು ಹೆಣ್ಣು…., ಬಿರುಗಾಳಿ……, ದೊಣಿ ಮುಳುಗುತ್ತದೆ….., ಅದರೊಡನೆ ಕತ್ತಲು. ನಾನು ಕತ್ತಲಿನ ಕಪ್ಪನ್ನು ಮೆಚ್ಚುತ್ತೇನೆ. ಕತ್ತಲಲ್ಲಿ ತನ್ನನ್ನು ತಾನು ಅಡಗಿಸಿಕೊಳ್ಳಬಹುದು. ನೋವನ್ನು ನುಂಗುತ್ತೇನೆ, ಆ ನೋವಿನಲ್ಲೇ ತೃಪ್ತಿ ಕಾಣುತ್ತೇನೆ.
‘ಸಾರಿ ಭಾವ, ನನಗೆ ನಿಮ್ಮೊಡನೆ ಬಾಳ್ವೆ ನಡೆಸಲು ಸಾಧ್ಯವಿಲ್ಲ ಅನಿಸುತ್ತದೆ.’ ಎಷ್ಟೊಂದು ಸುಲಭವಾಗಿ ಆಕೆ ಹೇಳಿದ್ದಳು ! ನಾನೂ ಸಹ ಏನೂ ಆಗದವನಂತೆ ಮುಂದೊಂದು ಘಂಟೆ ಆಕೆಯ ಮನೆಯಲ್ಲೇ ಕಳೆದಿದ್ದೆ. ಒಡೆದ ಹೃದಯದಿಂದ ಅಲ್ಲಿಂದ ಹೊರ ಬಂದಿದ್ದೆ. ನಾನೆಷ್ಟು ಸುಲಭವಾಗಿ ಏನೂ ಆಗದವನ ನಾಟಕ ಆಡಿದ್ದೆ, ಆದರೆ ನನಗಾದ ಅಘಾತ…….
ರಾತ್ರಿ ನಿದ್ದೆ ಇಲ್ಲದೆ ಕಳೆದಿದ್ದೆ. ಮರುದಿನ ಆಫೀಸಿನಿಂದ ಮೈ ಸರಿಯಿಲ್ಲವೆಂದು ಹೊರ ಬಂದಿದ್ದೆ. ನಂತರ ಎಷ್ಟು ದಿನ ಕಳೆದವೋ?
ಹಿಂದೆ ನಾನೊಂದು ಕತೆ ಓದಿದ್ದರ ನೆನಪು, “ನಿಜವಾದ ಪ್ರೇಮಿ, ತನ್ನ ಪ್ರೇಮಿಯನ್ನು ಮದುವೆಯಾಗದೆಯೇ ಪ್ರೀತಿಸಬಲ್ಲ.” ಆಗ ನಾನೂ ಅದನ್ನೇ ನಿಜವೆಂದೇ ನಂಬಿದ್ದೆ. ಎಷ್ಟೊಂದು ಬಾಲಿಶ ವಿಚಾರ ! ಆಗ ಪ್ರೇಮ ಎಂದರೇನು ಎದು ಗೊತ್ತಿರಲಿಲ್ಲ. ಹುಡುಗಿಯರನ್ನು ಕಂಡಾಗ ಉಂಟಾಗುವ ಆಕರ್ಷಣೆಯೇ ಪ್ರೀತಿಯೆಂದು ನಂಬಿದ್ದೆ. ಆದರೆ ಈಗ…….
ನಡೆಯುವುದೆಲ್ಲಿ? ಕತ್ತಲೆಯ ಕಪ್ಪು ನನ್ನನ್ನು ಕರೆಯುತ್ತದೆ. ನಾನೂ ಈ ಕತ್ತಲಲ್ಲಿ ಕರಗಿ ಒಂದಾಗಬೇಕೆನಿಸುತ್ತದೆ. ನಡೆದು ಸುಸ್ತಾದಾಗ ಒಂದೆಡೆ ಕುಳಿತುಕೊಳ್ಳುತ್ತೇನೆ. ಮುಖಕ್ಕೆ ಕೈ ಹಚ್ಚಿದಾಗ ಗಡ್ಡ ಚುಚ್ಚುತ್ತದೆ. ನೆನಪು ಹಿಂದೆ ಓಡುತ್ತದೆ, “ನಿಮ್ಮ ಮುಖ ಗಡ್ಡ ಇಲ್ಲದಿದ್ದರೇನೆ ಚಂದ ಕಾಣುವುದು.” ಅಂದಿದ್ದಳು ಆಕೆ, ನಾನೊಮ್ಮೆ ಗಡ್ಡ ಬಿಟ್ಟಾಗ. ಮರು ದಿನ ಗಡ್ಡ ಬೋಳಿಸಿ ಆಕೆಯ ಬಳಿ ಹೋದಾಗ,” Now you look like an immature, irresponsible idiot, ನಿಮಗೆ ಗಡ್ಡವೇ ಚಂದ.” ಎಂದು ಜೋರಾಗಿ ನಕ್ಕಿದ್ದಳು. ಈ ನೆನಪಿನೊಂದಿಗೆ ನನಗೆ ಅರಿವಿಲ್ಲದೆಯೇ ನಗು ಬರುತ್ತದೆ.

ಮಾವನ ಮಗಳು ಮುಂಬಾಯಿನಿಂದ ಊರಿಗ ಬಂದಾಗ ನನಗೆ ಹದಿನೈದು ವರ್ಷ, ಆಕೆಗೆ ನಾಲ್ಕು. ಆಕೆಯನ್ನು ನನ್ನ ಹೆಂಡತಿ ಎಂದು ಅತ್ತೆ ಅಂದಿದ್ದಾಗ, ನಾನು ನಾಚಿ ನೀರಾಗಿದ್ದೆ. ಕೆಲದಿನ ಆಕೆಯೊಡನೆ ಆಡುವುದನ್ನು, ಮಾತನಾಡುವುದನ್ನು ತಪ್ಪಿಸುತ್ತಿದ್ದೆ. ಕ್ರಮೇಣ ಆ ಮಗುವಿಗೆ ಈ ಭಾವನೇ ಅಚ್ಚುಮೆಚ್ಚಿನವನಾಗಿದ್ದ. ಆಕೆಗೆ ಕಾಗೆ – ಗುಬ್ಬಚಿಯರ ಕಥೆಯನ್ನೋ ಗೋವಿನ ಹಾಡನ್ನೋ ಒಂದೆರಡು ಒಗಟುಗಳನ್ನೋ ಹೇಳಿ ಮನರಂಜಿಸುತ್ತಿದ್ದೆ. ಮುಂದೆ ಕಾಲೇಜು ವಿದ್ಯಾಭ್ಯಾಸ ಮುಗಿಸಿ ನಾನು ಕೆಲಸದ ಬೇಟೆಯಲ್ಲಿ ಮುಂಬಾಯಿಗೆ ಬಂದಾಗ ಆಕೆಗೆ ಹನ್ನೊಂದು ವರ್ಷ. ಮುಂಬೈನಲ್ಲಿ ಬೇರೆ ಸಂಬಂಧಿಕರು ಇರದೆ ನಾನು ಅವರಲ್ಲೇ ಇರುತ್ತೇನೆ. ಮುಂದೆ ಕೆಲಸವೂ ಸಿಗುತ್ತದೆ.

ಸಾಯಂಕಾಲ ನನಗೆ ಆಕೆಯ ಕಂಪೆನಿ, ಆಕೆಗೆ ನನ್ನದು. ಆಕೆ ಕಲಿಯುವುದರಲ್ಲಿ ಜಾಣೆ, ಆಕೆಗೆ ಕಲಿಸುವುದೆಂದರೆ ನನಗೆ ಸಂತಸ. ಮನೆಯಲ್ಲಿ ಅತ್ತೆ, ಮಾವ ನನ್ನನ್ನು ಯಾವಾಗಲೂ ಹೊಗಳುವುದೇ – ತುಂಬಾ ಜಾಣ, ಬುಧ್ಧಿವಂತ, ನಿಗರ್ವಿ, ಕೆಟ್ಟ ಅಭ್ಯಾಸವಿಲ್ಲದ ಒಳ್ಳೆಯ ಹುಡುಗ, ಏನೇನೋ. ಮೊದಲಿನಿಂದಲೂ ಅವರಿಗೆ ನನ್ನಲ್ಲಿ ಅತೀವ ಮಮತೆ, ಅದು ಈಗ ಅಧಿಕ ಗೊಂಡಿತು. ನನಗೆ ಆಕೆಯಲ್ಲಿ ಅಕ್ಕರೆ, ತುಂಬಾ ಸ್ಮಾರ್ಟ್ ಎಂದು. ಆಕೆಯಲ್ಲಿನ ಅದಮ್ಯ ಚೆತನ ನನ್ನನ್ನು ಹುರುಪುಗೊಳಿಸುತ್ತಿತ್ತು.

ಒಮ್ಮೆ ಅತ್ತೆ ತಮಾಶೆಗೆ ಅಂದಿದ್ದರು, “ಆಕೆಯನ್ನು ನಿನಗೆ ಮದುವೆ ಮಾಡುವ.” “ಹೋ…,ಹೋ….,” ನಾನು ಜೋರಾಗಿ ನಕ್ಕಿದ್ದೆ. “ಯಾಕೆ, ನನಗೆ ಆಡಲೋ?” ಇನ್ನೊಮ್ಮೆ ಅತ್ತೆ ಅದನ್ನೇ ಅಂದಾಗ, ನಾನು “ನನಗೆ ತುಂಬಾ ವರದಕ್ಷಿಣೆ ಬೇಕು.” ಅಂದಿದ್ದೆ ತಮಾಶೆಗೆ. “ನಾನು ವರದಕ್ಷಿಣೆ ತೆಗೆದುಕೊಳ್ಳುವವರನ್ನು ಮದುವೆ ಆಗಲಾರೆ.” ಅಂದಿದ್ದಳು ಆ ತುಂಟಿ.

“ಮತ್ತೆ ನಿನ್ನನ್ನು ಸಾಕುವುದು ಹೇಗೆ?”

“ಹೆಂಡತಿಯನ್ನು ಸಾಕಲಾಗದವ ಮದುವೆ ಆಗಬಾರದು.” ಆಕೆಯ ಚುರುಕು ಉತ್ತರ.


ವರ್ಷ ಕಳೆದಂತೆಲ್ಲಾ ನಾನು ಅಲ್ಲಿ ಇರುವುದು ಸರಿಯಲ್ಲ ಅನಿಸಿತ್ತು. ನನ್ನ ಆಫೀಸಿನ ಹತ್ತಿರದ ಮನೆಯೊಂದರಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇರತೊಡಗಿದೆ. ನಂತರವೂ ನನ್ನ ಸಂಬಳದಲ್ಲಿ ಖರ್ಚು ಕಳೆದೋ, ಅಪ್ಪನ ಸಾಲದ ಕಂತು ತೀರಿಸಿಯೋ ಒಂದೆರೆಡು ನೂರು ರೂಪಾಯಿ ಉಳಿಸುತ್ತಿದ್ದೆ.

ನಡೆಯುತ್ತಾ ನನ್ನ ದಿನ ನಿತ್ಯದ ಹೋಟೇಲಿನ ಬಳಿ ಬಂದೆ. ಪರಿಚಿತ ಹೋಟೆಲ್ ಮಾಲಿಕ,

“ದಾನಿ ಮಾರಾಯ್ರೆ, ಉಶ್ಶಾರಿಜ್ಜಾ?” ಎಂದು ಕೇಳಿಯಾನು ಎನ್ನುವ ಹೆದರಿಕೆಯಿಂದ ಅಲ್ಲಿಂದಲೇ ಹಿಂದೆ ನಡೆಯುತ್ತೇನೆ.
ಅಮ್ಮನಿಗೆ ಸೌಖ್ಯವಿಲ್ಲವೆಂದು ಊರಿಗೆ ಹೋಗಿ ಸ್ವಲ್ಪ ಕೂಡಿಟ್ಟ ಹಣವನ್ನು ಖರ್ಚು ಮಾಡಿದೆ. ಮುಂಬಾಯಿಗೆ ಹಿಂದೆ ಹೊರಟಾಗ, ಅಮ್ಮ ಅಂದಿದ್ದರು, “ಮಗಾ, ನಿನಗೆ ಪ್ರಾಯ ಆಯಿತು. ಇನ್ನು ನೀನು ಮದುವೆ ಆಗಬೇಕು.”
“ಅಮ್ಮಾ, ನಾನು ನನ್ನ ಕಾಲ ಮೇಲೆ ಸರಿಯಾಗಿ ನಿಲ್ಲುವ ವರೆಗೆ ಮದುವೆ ಆಗಲಾರೆ.”
“ನಿನಗೆಷ್ಟು ಪ್ರಾಯವೆಂದು ಗೊತ್ತಲ್ಲವೆ?”
“ನನ್ನ ಹಿಂದಿನವರು ಮಾಡಿದ ತಪ್ಪನ್ನು ನಾನು ಸಹ ಮಾಡಲಾರೆ. ನೋಡೀಗ, ಅಪ್ಪ ಮಾಡಿದ ಸಾಲವನ್ನು ತೀರಿಸಲು ನಾನು ಮೊನ್ನೆ ಮೊನ್ನೆಯವರೆಗೆ ದುಡಿಯಬೇಕಾಯಿತು. ನನ್ನ ತಪ್ಪಿನಿಂದ ನನ್ನ ಮಕ್ಕಳು ಕಷ್ಟ ಅನುಭವಿಸಬಾರದು. ನಾನು ಸ್ವಲ್ಪ ಹಣ ಕೂಡಿಡದೆ ಮದುವೆ ಆಗಲಾರೆ. ಇನ್ನೂ ನಾಲ್ಕೈದು ವರ್ಷ ಮದುವೆ ಮಾಡಿಕೊಳ್ಳಲಾರೆ.”
“ಮುದುಕ ಆದಮೇಲೆ ಮದುವೆ ಆಗು. ಆವಾಗ ಮಕ್ಕಳು ನಿನ್ನನ್ನು ಹೊಗಳುತ್ತಾರೆ.”
ಆ ನಗ್ನ ಸತ್ಯದ ಎದುರು ನಾನು ಮೂಕನಾಗಿದ್ದೆ.

ರೂಂ ತಲುಪುತ್ತಲೇ ಬೀಗ ತೆಗೆದು ಒಳ ಹೋಗುತ್ತೇನೆ. ಏನು ಮಾಡುವುದೆಂದು ತೋಚದೆ, ಯಾವುದೋ ಪುಸ್ತಕ ಓದುವ ತೆಗೆದು ಓದಲು ಪ್ರಯತ್ನಿಸುತ್ತೇನೆ.
ಕಳೆದ ವರ್ಷ ಒಂದು ದಿನ ಮಾವ ಅಂದಿದ್ದರು, “ ನಮ್ಮ ಹುಡುಗಿಗೆ ಒಂದು ವರ ಇದೆ. ಆತನಿಗೆ ಒಂದು ವರ್ಕ್ ಶಾಪ್ ಇದೆ. ವರದಕ್ಷಿಣೆ ಬೇಡ ಅಂದಿದ್ದಾನೆ. ನಾಡದು ರವಿವಾರ ಹುಡುಗಿ ನೋಡಲು ಬರುತ್ತಾರೆ.” ನಾನು ಮಾತನಾಡುವುದಿಲ್ಲ. ಬರೇ ಅವರ ಮುಖ ನೋಡುತ್ತೇನೆ. ಯಾಂತ್ರಿಕವಾಗಿ ಹೇಳಿದ್ದ ಅವರು ಬೇಕೆಂದೇ ಬೇರೆ ಕಡೆ ನೋಡುತ್ತಾರೆ. ನನಗೆ ಅವರ ಭಾವನೆ ಅರ್ಥವಾಗುವುದಿಲ್ಲ.
ರಾತ್ರಿ ನಿದ್ದೆ ಇಲ್ಲದೆ ಕಳೆಯುತ್ತೇನೆ. ನನಗೇಕೆ ಈ ಹೊಟ್ಟೆ ಕಿಚ್ಚು ಅಂದುಕೊಳ್ಳುತ್ತೇನೆ. ನಾನೇಕೆ ಸಪ್ಪಗಾದೆ ಎಂದು ವಿಮರ್ಶೆ ಮಾಡಿಕೊಳ್ಳುತ್ತೇನೆ. ಆಕೆ ನಗು ನಗುತ್ತಾ ಗಂಡನೋಡನೆ ಬಂದು ನನ್ನ ಕಾಲು ಹಿಡಿಯುವುದನ್ನು ಕಲ್ಪಿಸಿಕೊಳ್ಳುತ್ತೇನೆ. ಸಾಧ್ಯವಿಲ್ಲ, ಆಕೆ ಬೇರೆಯವರ ಕೈ ಹಿಡಿಯಲಾರಳು. ಆಕೆ ನನ್ನವಳಾಗಬೇಕು.
ಅತ್ತೆ, ಮಾವ ಎಂತಹ ಮೋಸಗಾರರು, ಇಷ್ಟು ದಿನ ತಮಾಶೆಗೆ ಅಂದಂತೆ,
“ನಿನ್ನ ಹೆಂಡತಿ…ನಿನ್ನ ಹೆಂಡತಿ…” ಅಂದರು. ಒಳ್ಳೆಯ ವರ ಸಿಕ್ಕಾಗ ನನ್ನನ್ನು ಮರೆತರು.
ಅವರದೂ ತಪ್ಪಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಮಗಳು ಒಳ್ಳೆಯ ಕಡೆ ಸೇರಬೇಕೆಂಬ ಆಶೆ. ಆಕೆಯನ್ನು ನೋಡಲು ಬರುವವ ಒಳ್ಳೆಯ ಹಣವಂತನಿರಬಹುದು. ಆದರೆ ಗುಣ? ಇಲ್ಲ….ಇಲ್ಲ…, ಆಕೆ ಬೇರೆಯವರ ಹೆಂಡತಿ ಆಗಲಾರಳು. ನಾನು ಆಕೆಯನ್ನು ಮದುವೆ ಆಗಲೇ ಬೇಕು. ಆಕೆ ನನ್ನ ಹೆಂಡತಿಯಾಗಬೇಕು. ಆ ಉತ್ಸಾಹದ ಚಿಲುಮೆ ನನ್ನವಳಾದರೆ ನಾನು ಏನನ್ನೂ ಸಾಧಿಸಿಯೇನು.
ಆಕೆ ನನ್ನನ್ನು ಪ್ರೀತಿಸುತ್ತಿರಬಹುದೆ? ಇತ್ತೀಚೆಗೆ ಅತ್ತೆ ನಮ್ಮಿಬ್ಬರ ಮದುವೆಯ ಪ್ರಸ್ತಾಪ ಎತ್ತಿದಾಗ ಆಕೆ,” ಇಶ್ಶೀ…, ನೀವು ಏನು ಮಾತನಾಡುತ್ತೀರಿ?” ಎಂದಿದ್ದಳಲ್ಲವೆ. ಆಕೆ ನನ್ನನ್ನು ಯಾವ ಭಾವನೆಯಿಂದ ನೋಡುತ್ತಿದ್ದಾಳೋ? ಆದರೆ ನಾನು?
ಎಷ್ಟೊಂದು ಭಾರಿ ಆಕೆಯನ್ನು ನಾನು ನನ್ನ ಸಂಗಾತಿಯನ್ನಾಗಿ ಕಲ್ಪಿಸಿಕೊಂಡಿಲ್ಲ? ನನಗೆ ತಿಳಿಯದಂತೆಯೇ ಆಕೆಯನ್ನು ನನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡಿಲ್ಲವೆ? ಆದರೆ ಖಂಡಿತವಾಗಿಯೂ ಹೇಳುತ್ತೇನೆ, ನಾನೆಂದೂ ಆಕೆಯನ್ನು ಕಾಮುಕ ದೃಷ್ಟಿಯಿಂದ ಕಂಡಿಲ್ಲ, ಯೋಚಿಸಿಲ್ಲ.
ನಾನೀಗ ಏನು ಮಾಡಬೇಕು? ನಾನೆಂತಹ ಮೂರ್ಖ, ಒಮ್ಮೆಯಾದರೂ ಆಕೆಯೊಡನೆ ನನ್ನನ್ನು ಮದುವೆ ಆಗುತ್ತೀಯಾ ಎಂದು ಕೇಳಿದ್ದುಂಟೆ?
ಈ ಮದುವೆಯನ್ನು ನಾನು ತಪ್ಪಿಸಲೇ ಬೇಕು. ಆಕೆಯ ಅಭಿಪ್ರಾಯ ಕೇಳಬೇಕು. ಈ ಸಮಯದಲ್ಲಿ ನಾನು ನಾಯಕನ ಪಾತ್ರ ವಹಿಸಬೇಕು.
ರವಿವಾರ ಬರುತ್ತದೆ. ನಾನು ಮಾವನ ಮನೆಗೆ ಹೋಗುತ್ತೇನೆ. ಅತ್ತೆ, ಮಾವ ಸಾಯಂಕಾಲದ ಸಿದ್ದತೆಯ ಗಡಿಬಿಡಿಯಲ್ಲಿದ್ದಾರೆ. ನಾನು ಸಮಯ ಸಾಧಿಸಿ ಆಕೆಯನ್ನು ಪಕ್ಕದ ಕೋಣೆಗೆ ಕರೆದುಕೊಂಡು ಹೋಗುತ್ತೇನೆ. ಎದೆ ಡವ ಡವ ಬಡಿದುಕೊಳ್ಳುತ್ತದೆ – ಹೃದಯದ ಬಡಿತ ನನಗೇನೆ ಕೇಳುತ್ತದೆ.
“ನಿನ್ನೊಡನೆ ಒಂದು ಮಾತು ಕೇಳಲಿಕ್ಕಿತ್ತು”
“ಕೇಳಿ” ಆಕೆ ನಗುತ್ತಾಳೆ. ನಾನು ಆ ನಗುವಿನಲ್ಲಿ ಏನೋ ಅರ್ಥ ಕಾಣುತ್ತೇನೆ. ಏನೆಂದು ಅರಿವಾಗುವುದಿಲ್ಲ. ತೃಪ್ತಿಯೆ? ನಿರೀಕ್ಷೆಯೇ?
“ನಿನಗೆ ನಾನು ಏನು ಕೇಳುತ್ತೇನೆಂದು ಗೊತ್ತಿದೆಯೇ?”
“ಇಲ್ಲ”
“ನಿನಗೆ ಗೊತ್ತಾಗಿರಬೇಕು, ನಿನ್ನ ನಗುವಿನಲ್ಲಿ ನಾನು ಆ ಅರ್ಥ ಕಾಣುತ್ತಿದ್ದೇನೆ. ಸುತ್ತು ಮಾತು ಬೇಡ. ಯಾವಾಗಲೂ ಅತ್ತೆ ಮಾವ ನಮ್ಮ ಮದುವೆಯ ಬಗ್ಗೆ ಮಾತನಾಡುತ್ತಾರೆ. ಆ ಬಗೆಗೆ ನಿನ್ನ ಅಭಿಪ್ರಾಯವೇನು?”
“ನಾನು ಆ ಬಗ್ಗೆ ಯೋಚಿಸಿಲ್ಲ. ನಾನು ನಿಮಗೆ ಯೋಗ್ಯಳೆ?”
“ದೊಡ್ಡ ಮಾತು ಆಡಬೇಡ. ನನ್ನನ್ನು ಮದುವೆ ಆಗುತ್ತೀಯ? ನನಗೆ ನೀನು ಈಗಲೇ ಉತ್ತರ ಕೊಡಬೇಕಾಗಿಲ್ಲ. ನಿನ್ನ ಉತ್ತರಕ್ಕಾಗಿ ನಾನು ಕಾಯಬಲ್ಲೆ”
“ನನಗೆ ಯೋಚಿಸಲು ಒಂದೆರಡು ದಿನ ಕೊಡುತ್ತೀರಾ?”
“ಖಂಡಿತವಾಗಿಯೂ, ನಾನು ನಿನಗೆ ಸ್ವರ್ಗ ಸುಖ ಕೊಡುತ್ತೇನೆಂದು ಹೇಳಲಾರೆ, ಆದರೆ ನಿನ್ನನ್ನು ಸಂತೋಷವಾಗಿ ಇಡಬಲ್ಲೆ”
“ನಾನೇನೂ ಸುಖದ ಸುಪ್ಪತ್ತಿಗೆಯಲ್ಲಿ ಮಲಗುವ ಕನಸ್ಸು ಕಾಣುತ್ತಿಲ್ಲ.”
“ನೀನು ಸುಂದರಿಯೆಂದು ನಿನ್ನನ್ನು ನಾನು ಮೆಚ್ಚಿರುವುದಲ್ಲ. ಯಾಕೆ ಮೆಚ್ಚುತ್ತೇನೆಂದು ನಿಖರವಾಗಿ ಹೇಳಲಾರೆ. ನಿನ್ನನ್ನು ಬಿಟ್ಟು ನಾನಿರಲಾರೆ ಅನಿಸುತ್ತದೆ. ಆದರೂ ನಮ್ಮಿಬ್ಬರ ಮಧ್ಯ ಒಂದೆರಡು ತೊಡಕುಗಳಿವೆ. ನಾವು ಸಂಬಂಧಿಕರು. ಸಂಬಂಧಿಕರ ಒಳಗೆ ಮದುವೆ ಒಳ್ಳೆಯದಲ್ಲ ಅನ್ನುತ್ತಾರೆ. ಇನ್ನೊಂದು ತೊಂದರೆಃ ನನಗೂ ನಿನಗೂ ಇರುವ ವಯಸ್ಸಿನ ಅಂತರ”
“ವಯಸ್ಸಿನ ಬಗೆಗೆ ನನಗೆ ಬೇಸರವಿಲ್ಲ. ಒಂದು ಪ್ರಶ್ನೆ, ನಿಮಗೆ ಬೇರೆ proposal ಬರುತ್ತಿರಬೇಕು, ಅದರೊಂದಿಗೆ ಕೈ ತುಂಬಾ ಹಣವೂ ಸಿಗಬಹುದು.”
“ಒಂದೆರಡು proposal ಇವೆ. ಅದರೊಂದಿಗೆ ಹಣವೂ ಬರುತ್ತದೆ. ಅವರೆಲ್ಲಾ ನನ್ನನ್ನು ಒಬ್ಬ ಮನುಷ್ಯನಾಗಿ ನೋಡುತ್ತಿಲ್ಲ. ನನ್ನ ಡಿಗ್ರಿ, ನನ್ನ ಸಂಪಾದನೆ, ನಾನು ಏನಾಗಿದ್ದೇನೆ ಎಂದು ನೋಡುತ್ತಾರೆ. ಆದರೆ, ನಿನ್ನ ತಂದೆ ತಾಯಿಗಳು ನನ್ನನ್ನು ಒಬ್ಬ ಮನುಷ್ಯನನ್ನಾಗಿ ಕಂಡರು. ಅಂದ ಹಾಗೆ ನಿನಗೂ ಬೇರೆ proposal ಇರಬೇಕಲ್ಲವೆ?”
“ಹೌದು, ಇವತ್ತು ಒಬ್ಬರು ನನ್ನನ್ನು ನೋಡಲು ಬರುತ್ತಾರೆ. ಶಿಷ್ಟಾಚಾರಕ್ಕೆ ತಲೆ ಬಾಗುತ್ತೇನೆ.”
“ಇಲ್ಲ, ಆತ ನನಗಿಂತ ಉತ್ತಮ ಅನಿಸಿದರೆ ಆತನನ್ನು ನೀನು ಒಪ್ಪು.” ಅಂದಿದ್ದೆ ಅರ್ಧ ಮನಸ್ಸಿನಿಂದ.
“ನನಗೇಕೋ ಮನಸ್ಸಿಲ್ಲ.” ಅಂದಾಗ ಆಕೆಯ ಮನೋಭಾವ ಅರ್ಥವಾಗಿತ್ತು – ಆದರೂ ಒಂದು ಹೆದರಿಕೆ, ಎಲ್ಲಾದರೂ ಆಕೆ ಆತನನ್ನು ಮೆಚ್ಚಿದರೆ ಎಂದು.
ಬೇಕೆಂದೇ ಸಾಯಂಕಾಲ ಅಲ್ಲಿಂದ ತಪ್ಪಿಸಿಕೊಂಡಿದ್ದೆ, ಪ್ರಾಯಶಃ ಹೊಟ್ಟೆಕಿಚ್ಚಿನಿಂದ.
ಆಕೆಯನ್ನು ಮದುವೆಯಾಗುವುದಾಗಿ ನಾನು ಅಮ್ಮನಿಗೆ ಪತ್ರ ಬರೆದಿದ್ದೆ. ಅಮ್ಮನ ಉತ್ತರ ಅನಿರೀಕ್ಷಿತವಾಗಿತ್ತು. ‘ನಿನ್ನನ್ನು ಸಾಕಿ ದೊಡ್ಡದು ಮಾಡಲು, ಕಷ್ಟಪಟ್ಟು ದುಡಿದು ಕಲಿಸಲು ನಿನಗೆ ತಾಯಿ ಬೇಕಾದಳು, ಆದರೆ ಮದುವೆ ಆಗಲು, ಅಥವಾ ಅದರ ಬಗ್ಗೆ ಒಂದು ಮಾತು ಕೇಳಲು ನಿನಗೆ ತಾಯಿ ಬೇಡವಾದಳು. ನಿನಗೆ ತಾಯಿ ಇದ್ದಾಳೆಯೇ? ಆಕೆ ನಿನ್ನ ಪಾಲಿಗೆ ಸತ್ತು ಹೋಗಿದ್ದಾಳೆ…’ ಏನೇನೋ ಗೀಚಿದ್ದಳು. ಊರಲ್ಲಿ ಅತ್ತು ರಂಪ ಮಾಡಿದ್ದಾಳೆಂದೂ ತಿಳಿಯಿತು.
ತಾಯಿಗೆ ನನ್ನ ಭಾವನೆಗಳನ್ನು ಹೇಗೆ ತಿಳಿಸುವುದೆಂದೇ ತಿಳಿಯಲಿಲ್ಲ. ಒಂದು ಹೆಣ್ಣಿನೊಡನೆ ಜೀವನ ನಡೆಸ ಬೇಕಾದವನು ನಾನು. ನನಗೆ ಸರಿ ಕಂಡ ಹುಡುಗಿಯೊಡನೆ ನಾನು ಮದುವೆ ಆಗಬಾರದೆ? ಏನೂ ಪರಿಚಯ ಇಲ್ಲದಂತಹ ಹುಡುಗಿಯನ್ನು ಮದುವೆ ಆಗುವದಕ್ಕಿಂತ, ಚೆನ್ನಾಗಿ ಗೊತ್ತಿರುವ ಹುಡುಗಿಯನ್ನು ಮದುವೆ ಆಗಬಾರದೆ? ಏನೇನೋ ಹೆಂಗಸರ ಮಾತು ಕೇಳಿ ನನ್ನ ಸುಖಕ್ಕೆ ಅಡ್ಡ ಬರುತ್ತಾಳಲ್ಲಾ. ತಾಯಿ ಯಾವಾಗಲೂ ತನ್ನ ಮಕ್ಕಳ ಸುಖಕ್ಕೆ ಹಾರೈಸುತ್ತಾಳೆ, ಆದರೆ ನನ್ನ ತಾಯಿ….
ಆಕೆಯದೂ ತಪ್ಪಿಲ್ಲ. ಆಕೆ ಬೆಳೆದು ಬಂದ ಪರಿಸರವೇ ಅಂತಹದು. ಆಕೆಯನ್ನು ಗೆಲ್ಲಬೇಕು, ನಾನು ಸೋಲಬಾರದು. ತಾಯಿಗೆ ಪತ್ರ ಬರೆಯುವುದನ್ನೇ ಬಿಟ್ಟೆ. ಕೊನೆಗೆ ತಾಯಿಯಿಂದ ಪತ್ರ ಬಂತು, ‘ನೀನು ಯಾರನ್ನಾದರೂ ಮದುವೆಯಾಗು. ಆಕೆಯೊಡನೆ ಜೀವನ ನಡೆಸುವವನು ನೀನು. ಸುಖ – ದುಃಖ ಅನುಭವಿಸುವವನು ನೀನು. ಆದರೆ, ನೀನು ನನಗೆ ಪತ್ರ ಬರೆಯುವುದನ್ನು ನಿಲ್ಲಿಸಬೇಡ. ನಿನಗೆ ತಾಯಿ ಬೇಡವಾದರೂ ನನಗೆ ಮಗ ಬೇಕು…….’
ನಾನು ನಿಜವಾಗಿಯೂ ಆಕೆಯನ್ನು ಪ್ರೀತಿಸುತ್ತಿದ್ದೇನೆಯೇ? ನಮ್ಮಿಬ್ಬರದು ಬರೇ ಆಕರ್ಷಣೆಯೇ? ಬರೇ ಆಕರ್ಷಣೆ ಆಗಿದ್ದರೆ, ನಾನೇಕೆ ಈ ರೀತಿ ನಿದ್ದೆ ಇಲ್ಲದೆ ದಿನಗಳನ್ನು ಕಳೆದೆ? ಇಲ್ಲ, ಖಂಡಿತವಾಗಿಯೂ ನಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ. ಆದರೆ ಆಕೆ?
ಬಾಲ್ಯ ಕಳೆದು ಯೌವನಕ್ಕೆ ಕಾಲಿರಿಸುವಾಗ, ಮನುಷ್ಯ ತನ್ನ ಸಂಗದಲ್ಲಿರುವ ಮತ್ತೊಂದು ಅಂಗದವರನ್ನು ತನಗೆ ತಿಳಿಯದಂತೆಯೇ ಪ್ರೀತಿಸುತ್ತಾನೆ. ಹಾಗಾಗಿ ಕೆಲವೊಮ್ಮೆ ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರನ್ನು ಪ್ರೀತಿಸುವುದುಂಟು. ನಮ್ಮಿಬ್ಬರದೂ ಹಾಗೆಯೇ ಆಗಿರಬಹುದೆ? ಆಕೆ ಯೌವನಕ್ಕೆ ಕಾಲಿಡುವಾಗ, ನಾನು ಆಕೆಯ ಬಳಿ ಇದ್ದೆ. ಅತ್ತೆ ಮಾವ ನನ್ನನ್ನು ಹೊಗಳುತ್ತಿದ್ದರು. ಆಕೆಗೆ ಶಾಲೆಯಲ್ಲಿ ಕಂಡು ಬಂದ ಚಿಕ್ಕ ಸಮಸ್ಯೆಯೂ ಬೃಹದಾಕಾರವಾಗಿ ಕಂಡು ಬಂದರೂ, ನನಗೆ ಬಾಲಿಶ. ಹಾಗಾಗಿ ಆಕೆಗೆ ನಾನೊಂದು ಅದ್ಭುತ ವ್ಯಕ್ತಿಯಾಗಿ ಕಂಡು ಬಂದಿರಬಹುದು.
ಅಥವಾ, ಆಕೆಗೆ ನಾನು ಮೋಸ ಮಾಡಿದೆನೆ? ಆಕೆಯ ಜೀವನದ ಒಂದು ಮುಖ್ಯ ಘಟ್ಟದಲ್ಲಿ ಮೂಗು ತೂರಿಸಿ ಆಕೆಗೆ ನಾನು ಮೋಸ ಮಾಡಿದೆನೆ?
ಇತ್ತೀಚೆಗೆ ಆಕೆಗೆ ಸೌಖ್ಯವಿಲ್ಲದಾಗ ನನ್ನ ಮನಸ್ಥಿತಿಯಾದರೂ ಎಂತಹದು? ನಾನೆಷ್ಟು ಹೆದರಿದ್ದೆ, ಆಕೆಯ ಬಾಡಿದ ಮುಖ ಕಂಡು ಎಷ್ಟೊಂದು ನೋವುಂಡಿದ್ದೆ. ಆವಾಗ ನನ್ನ ಆಲೋಚನೆಗಳಿಗೆ ಹಿಡಿತವಿರಲಿಲ್ಲ. ಎಷ್ಟೊಂದು ಕೆಟ್ಟ ಕಲ್ಪನೆಗಳು.
ಆಕೆ ಸತ್ತರೆ…? ನಡುಗಿದ್ದೆ. ಆಕೆ ಇಲ್ಲದೆ ನಾನು ಖಂಡಿತವಾಗಿಯೂ ಬಾಳಲಾರೆ. ಇಲ್ಲಿಂದ ಬಹು ದೂರ ಓಡಿ ಹೋಗಬೇಕು, ಹಿಮಾಲಯಕ್ಕೆ. ಸನ್ಯಾಸಿ ಆಗಬೇಕು. ಹಾಗೆ ಮಾಡಿದರೆ ಆಕೆ ನನಗೆ ಸಿಗುತ್ತಾಳೆಯೆ? ಇಲ್ಲ, ಇಲ್ಲ…., ಆಕೆಯೊಡನೆ ನಾನೂ ಸಾಯಬೇಕು. ನಮ್ಮಿಬ್ಬರ ಆತ್ಮಗಳು ಒಂದಾಗಬೇಕು. ಒಂದು ವೇಳೆ ಆತ್ಮಗಳು ಒಂದಾಗದಿದ್ದರೆ? ನಾನು ಸತ್ತು ಏನನ್ನು ಸಾಧಿಸಿದಂತಾಗುತ್ತದೆ. ಇಲ್ಲ, ನಾನು ಸಾಯಕೂಡದು. ಆಕೆಯ ಹೆಸರಲ್ಲಿ ಶಾಲೆಗಳಿಗೆ ಹಣ ಕೊಡಬೇಕು, ಆಕೆಯ ಹೆಸರಲ್ಲಿ ಸ್ಕಾಲರ್ ಶಿಪ್ ಕೊಡಬೇಕು, ಆಕೆಯ ಹೆಸರು ಅಮರ ಗೊಳಿಸಬೇಕು. ಇಲ್ಲ…ಇಲ್ಲ…, ಆಕೆ ಸಾಯಲೇ ಕೂಡದು. ದೇವರೇ, ಆಕೆಯನ್ನು ಉಳಿಸು.
ಮುಂದೆ ಆಕೆ ಉಶ್ಶಾರಾದಾಗ, ನನಗೇ ನನ್ನ ಭಾವುಕತನದ ಬಗೆಗೆ ನಗು ಬಂದಿತ್ತು. ನನ್ನ ತಾಯಿ ಅಸೌಖ್ಯವಿದ್ದಾಗ ಸಹ ನಾನು ಇಷ್ಟೊಂದು ತಳಮಳಗೊಂಡಿರಲಿಲ್ಲ. ಹಣ್ಣೆಲೆ ಉದರಲೇ ಬೇಕು ಅಂದುಕೊಂಡಿದ್ದೆ. ಎಂತಹ ವ್ಯತ್ಯಾಸ ! ಗಂಡು ಹೆಣ್ಣಿನ ಸ್ನೆಹ ಇಷ್ಟು ಬಲವಾದುದೆ? ಆಕೆಯೂ ನನ್ನನ್ನು ಇಷ್ಟೊಂದು ಬಲವಾಗಿ ಪ್ರೀತಿಸುತ್ತಿರಬಹುದೆ?
ಒಮ್ಮೆ ಆಕೆಯೊಡನೆ ನನ್ನ ಭಾವನೆಗಳನೆಲ್ಲಾ ಹೇಳಿ, “ ನೀನು ಸರಿಯಾಗಿ ಆಲೋಚಿಸು. ಆದರೆ ನನ್ನ ಸ್ವಾರ್ಥ ನಿನ್ನನ್ನು ಕಳೆದುಕೊಳ್ಳಕೂಡದು ಎಂದು ಹೇಳುತ್ತಿದೆ.” ಎಂದಿದ್ದೆ.
ಮುಂದಿನ ವಾರ ಆಕೆಯನ್ನು ಭೇಟಿಯಾದಾಗ, ಆಕೆ ಮಾತಿನ ಮಧ್ಯ, “ ಭಾವ, ನಾನು ತುಂಬಾ ಆಲೋಚನೆ ಮಾಡಿದ್ದೇನೆ. ನೀವು ಹೇಳಿದಂತೆ, ಒಂದು ಘಟ್ಟದಲ್ಲಿ, ನೀವು ನನ್ನ ಬಳಿ ಇದ್ದು ನನ್ನ ದೃಷ್ಟಿಯಲ್ಲಿ ಒಬ್ಬ ಸೂಪೆರ್ ಮ್ಯಾನ್ ಆಗಿ ಕಂಡಿರಿ. ಆ ಬಾಲಿಶ ಅಭಿಪ್ರಾಯವೇ ಬಲಿತು ನಾನು ನಿಮ್ಮನ್ನು ಪ್ರೀತಿಸುತ್ತಿದ್ದಿರಬೇಕು. ನನಗೂ ನಿಮಗೂ ಇರುವ ಹನ್ನೊಂದು ವರ್ಷಗಳ ಅಂತರ ತುಂಬಾ ಹೆಚ್ಚಾಯಿತೋ ಏನೋ. ನಮ್ಮಿಬ್ಬರ ಆಲೋಚನೆಗಳಲ್ಲಿ ತುಂಬಾ ಅಂತರವಿದೆ. ನನಗೇಕೋ ಹೆದರಿಕೆ ಆಗುತ್ತಿದೆ. ಸಾರಿ ಭಾವ . ನನಗೆ ನಿಮ್ಮೊಡನೆ ಬಾಳ್ವೆ ನಡೆಸಲು ಸಾಧ್ಯವಿಲ್ಲ ಅನಿಸುತ್ತದೆ.” ನಿರ್ವಿಕಾರವಾಗಿ ಹೇಳುತ್ತಾಳೆ. ನಾನೂ ಏನೂ ಆಗದವನಂತೆ ಅಲ್ಲಿ ಮುಂದೊಂದು ಘಂಟೆ ಕಳೆದು ಮನೆಗೆ ಹಿಂತಿರುಗಿದ್ದೆ, ಭಾರವಾದ ಹೃದಯದಿಂದ. ಮುಂದೆ ನಾನೇನು ಮಾಡಿದೆ ಎಂದು ನನಗೆ ಗೊತ್ತಿಲ್ಲ.


ಬೆಳಿಗ್ಗೆ ಎದ್ದು, ಆಲಸ್ಯದಿಂದ ಮುಖ ತೊಳೆಯುವಾಗ ಮನೆ ಮುಂದೆ ಟ್ಯಾಕ್ಷಿ ನಿಂತ ಸದ್ದು ಕೇಳಿಸುತ್ತದೆ. ಯಾರೋ ಬಾಗಿಲು ತಟ್ಟುತ್ತಾರೆ. ಬಾಗಿಲು ತೆರೆದಾಗ ಮಾವ ಕಾಣಿಸುತ್ತಾರೆ.

“ಎಲ್ಲಿ ಹೋಗಿದ್ದೆ ಮಾರಾಯಾ? ಎರಡು ಮೂರು ದಿನದಿಂದ ನಿನ್ನನ್ನು ಹುಡುಕಿ ಹುಡುಕಿ ಸೋತು ಹೋದೆ, ಮನೆಗೆ ಬಾ.” ಅನ್ನುತ್ತಾರೆ.

“ಆಫೀಸಿಗೆ ಹೋಗದೆ ತುಂಬಾ ದಿನಗಳಾದವು. ಇವತ್ತಾದರೂ ಹೋಗುತ್ತೇನೆ.”

“ಸುಮ್ಮನೆ ತರಲೆ ಮಾಡದೆ ನನ್ನೊಡನೆ ಬಾ. ಇವತ್ತು ರವಿವಾರ. ಯಾವ ಆಫೀಸಿಗೆ ಹೋಗುತ್ತಿ?” ಅವರು ರವಿವಾರ ಅಂದಾಗಲೇ ತಿಳಿದದ್ದು, ಆರು ದಿನಗಳಿಂದ ನಾನು ಆಫೀಸಿಗೆ ಹೋಗದೆ ಇದ್ದದ್ದು. ಅವರ ಮಾತಿಗೆ ಪ್ರತಿ ಹೇಳದೆ ಹೊರಡುತ್ತೇನೆ. ತಲೆ ಬಾಚಲು ಪ್ರಯತ್ನಿಸುತ್ತೇನೆ, ಸಾಧ್ಯವಾಗುವುದಿಲ್ಲ. “ತಲೆ ಬಾಚಿ ಎಷ್ಟು ದಿನ ಆಯಿತೋ? ನಿನಗೇನು ದಾಡಿ ಆಗಿದೆ? ಹೀಗೇಕೆ ಸೊರಗಿದ್ದಿ? ಹೋಗಿ ಸ್ನಾನ ಮಾಡಿಕೊಂಡು ಬಾ.” ಅನ್ನುತ್ತಾರೆ ಮಾವ.

ಮಾವನೊಂದಿಗೆ ಅವರ ಮನೆಗೆ ಬರುತ್ತೇನೆ. ಅತ್ತೆ ನಕ್ಕಂತೆ ಮಾಡಿ ಅಡಿಗೆ ಮನೆಯ ಒಳಗೆ ಹೋಗುತ್ತಾರೆ. ಮಾವ ಪೇಪರ್ ಬಿಡಿಸುತ್ತಾರೆ. ಆಕೆ ಕಾಣುವುದಿಲ್ಲ. ಆಕೆ ಎಲ್ಲಿ ಹೋದರೂ ನನಗೇನು ಅಂದುಕೊಳ್ಳುತ್ತೇನೆ. ಆದರೂ ಮನಸ್ಸು ತಡೆಯಲಾರದೆ ಒಳ ಕೋಣೆಗೆ ಹೋಗುತ್ತೇನೆ.

ಆಕೆ ಮಂಚದ ಮೇಲೆ ಮಲಗಿದ್ದಾಳೆ. ತಲೆ ಕೂದಲು ಕೆದರಿದೆ. ಮುಖ ಬಾಡಿದೆ. ನಾನು ಒಳ ಬಂದ ಸದ್ದಿಗೆ ಆಕೆ ಕಣ್ಣು ತೆರೆಯುತ್ತಾಳೆ. ನನ್ನನ್ನು ಕಂಡು ಒಂದು ಕ್ಷೀಣ ನಗು. ಆಕೆಯ ಸ್ಥಿತಿ ಕಂಡ ನನಗೆ ಜೀವ ಹಾರಿಹೋದ ಅನುಭವ. ಆಕೆಯ ಬಳಿ ಹೋಗುತ್ತೇನೆ.

ಆಕೆ,” I am sorry ಭಾವ, ನಾನು ಮದುವೆ ಆಗುವದಿದ್ದರೆ ನಿಮ್ಮನ್ನೆ, ನಿಮ್ಮನ್ನು ಬಿಟ್ಟು ನಾನಿರಲಾರೆ” ಅಂದಾಗ, ನಾನು ಅಲ್ಲಿ ಯಾರು ಇದ್ದಾರೆ, ಯಾರು ಇಲ್ಲ ಎಂದು ನೋಡದೆ, ನನ್ನ ಗಡ್ಡದ ಪರಿವೂ ಇಲ್ಲದೆ, ಮೊದಲ ಬಾರಿಗೆ, ಹೌದು ಮೊದಲ ಬಾರಿಗೆ ಆಕೆಯ ಕೆಂದುಟಿಗಳಿಗೆ ಮುತ್ತಿಡುತ್ತೇನೆ.

🌹🌹🌹

*
ಜುಲಾಯಿ ೧೯೮೨ ರ ಮುಂಬಾಯಿನ ಮೊಗವೀರದಲ್ಲಿ ಪ್ರಕಟಿತ.
ಎಸ್ಸಾರ್ಜೆ ಇಂದ್ರಬಿ. ಎಂಬ ಕಾವ್ಯನಾಮ ದಿಂದ.
೨೧.೧೨.೧೯೮೧

*