ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಸ್.ಪಿ.ಬಿ ಮತ್ತು ಗದುಗಿನ ಗವಾಯಿಗಳು

ಪ್ರೊ.ಸಿದ್ದು ಯಾಪಲಪರವಿ

ಎಸ್.ಪಿ.ಬಿ. ಅವರಿಗೆ ಬಹು ದೊಡ್ಡ ವಿಶಾದ ಸದಾ ಕಾಡುತ್ತಿತ್ತು. ಅವರು ಮೂಲತಃ ತೆಲುಗಿನವರಾದರೂ ಕನ್ನಡ ಅವರ ಆಪ್ತ ಭಾಷೆಯಾಗಿತ್ತು.ಅತೀ ಹೆಚ್ಚು ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದು ಇತಿಹಾಸ. ಹೀಗಿರುವಾಗ ಅವರಿಗೆ ಇತರ ಎಲ್ಲ ಭಾಷೆಗಳ ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದವು. ಆದರೆ ಕನ್ನಡ ಹಾಡಿಗೆ ದೊರಕಿರಲಿಲ್ಲ. ಆ ಕೊರಗನ್ನು ಆತ್ಮೀಯರ ಮುಂದೆ ಸದಾ ತೋಡಿಕೊಳ್ಳುತ್ತಿದ್ದರು. ಅದು ಅವರ ಬದುಕಿನ ಮಹತ್ವದ ಸವಾಲಾಗಿ ಕೊರೆಯುತ್ತಲೇ ಇತ್ತು.

ಆ ಕಾಲ ಕೂಡಿ ಬಂದದ್ದು ಗದುಗಿನ ಪುಟ್ಟರಾಜ ಗವಾಯಿಗಳ ನೆಲದ ಮಹಿಮೆಯಿಂದ ಎಂಬುದು ಐತಿಹಾಸಿಕವಾಗಿ ದಾಖಲಾರ್ಹ ಸಂಗತಿ.

ಚಿಂದೋಡಿ ಬಂಗಾರೇಶ್ ಅವರು ನಿರ್ದೇಶಿಸಿದ ಪಂಚಾಕ್ಷರ ಗವಾಯಿಗಳು ಸಿನೆಮಾ ಸಂಗೀತ ಪ್ರಧಾನವಾದದ್ದು ಅದಕ್ಕೆ ಹಿಂದೂಸ್ತಾನಿ ಸಂಗೀತ ಪರಿಣತಿ ಇದ್ದವರು ನಿರ್ದೇಶಕರಾಗಬೇಕಿತ್ತು. ಆದರೆ ಆಗ ಹಂಸಲೇಖ ಅವರದು ದೊಡ್ಡ ಹೆಸರು ಅದಕ್ಕೆ ಅವರೇ ಸಂಗೀತ ನಿರ್ದೇಶಕರಾದರು.

ಹಂಸಲೇಖ ಪಂಡಿತ ಪುಟ್ಟರಾಜ ಗವಾಯಿಗಳ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಾ ಹೀಗೆ ಹೇಳುತ್ತಾರೆ,
“ಅಜ್ಜಾ ಅವರೇ ನನಗೆ ಹಿಂದೂಸ್ತಾನಿ ಸಂಗೀತ ಜ್ಞಾನ ಅಷ್ಟಾಗಿ ಇಲ್ಲ ನಾನು ಇದನ್ನು ಮಾಡಲಾರೆ.”

ಆಗ ಪುಟ್ಟರಾಜ ಗವಾಯಿಗಳು, “ಅಯ್ಯೋ ಹುಚ್ಚಪ್ಪ ಹೆದರಬ್ಯಾಡ ಆ ಪಂಚಾಕ್ಷರ ಗವಾಯಿಗಳು ಎಲ್ಲಾ ನಡೆಸಿಕೊಡ್ತಾರೋ” ಎಂದು ಆಶೀರ್ವಾದ ಮಾಡಿದರಂತೆ.

ಮುಂದೆ ಎಸ್.ಪಿ.ಬಿ. ಅವರನ್ನು ಹಾಡಲು ಕೇಳಿದಾಗ ಆರು ತಿಂಗಳಾದರೂ ಹಾಡಲು ನಿರಾಕರಿಸಿದರಂತೆ. ಕಾರಣ ಪಂಚಾಕ್ಷರಿ ಗವಾಯಿಗಳವರ ಹಿಂದೂಸ್ತಾನಿ ಗಾಯನದ ಆಳದ ಭೀತಿ. ಕೊನೆಗೆ ದುಂಬಾಲು ಬಿದ್ದ ಮೇಲೆ ಒಬ್ಬರೇ ಇಡೀ ದಿನ ಸ್ಟುಡಿಯೋ ಹೊಕ್ಕು ತಾಯಿಯ ಸ್ಮರಣೆ ಮಾಡುತ್ತ ಹಾಡಿದರಂತೆ.
ಅದಕ್ಕೂ ಮೊದಲು ಪ್ರತಿದಿನ ಪಂಚಾಕ್ಷರಿ ಅಜ್ಜಾ ಅವರನ್ನು ಧ್ಯಾನಿಸಿ ಪ್ರ್ಯಾಕ್ಟೀಸ್ ಮಾಡುತ್ತಿದ್ದರಂತೆ.

ಕೊನೆಗೂ ವೀರೇಶ್ವರ ಪುಣ್ಯಾಶ್ರಮದ ಕೃಪೆ ಇಬ್ಬರಿಗೂ ಲಭಿಸಿದ್ದು ಕನ್ನಡ ಸಂಗೀತ ಲೋಕದ ಪವಾಡವೇ ಸರಿ!

ಮುಂದೆ ಕನ್ನಡದ ಹಾಡುಗಾರಿಕೆಗೆ ರಾಷ್ಟ್ರೀಯ ಪ್ರಶಸ್ತಿ ಗವಾಯಿಗಳ ಹಾಡಿಗೆ ಲಭಿಸಿದಾಗ ಎಸ್.ಪಿ.ಬಿ. ಭಾವಪರವಶರಾಗಿ ಅತ್ತು ಬಿಟ್ಟರಂತೆ.

ಇಡೀ ಘಟನೆಯನ್ನು ಗಮನಿಸಿದಾಗ ಸಂಗೀತ ಕೂಡ ಬಹುದೊಡ್ಡ ಧ್ಯಾನಸ್ಥ ಅನುಭವ ಮತ್ತು ದೈವೀ ಲೀಲೆ ಎಂಬುದು ಸಾಬೀತಾಗುತ್ತದೆ.

ಈ ಹಿನ್ನೆಲೆಯಲ್ಲಿ ಗದುಗು ಮತ್ತು ಗವಾಯಿಗಳ ಬಗ್ಗೆ ಎಸ್.ಪಿ.ಬಿ. ಅವರಿಗೆ ಅಪಾರ ಗೌರವ ಹೊಂದಿದ್ದು ಗದುಗಿನ ಹೆಮ್ಮೆ, ಅಭಿಮಾನ. ಇದಕ್ಕೆ ಕಾರಣರಾದ ಹಂಸಲೇಖ ಅವರ ಸಮರ್ಪಣೆ ಅನುಕರಣೀಯ. ಗದುಗಿನ ಎಲ್ಲಾ ಸಂಗೀತ ಪ್ರೇಮಿಗಳ ಪರವಾಗಿ ಎಸ್.ಪಿ.ಬಿ. ಅವರಿಗೆ ಸಾವಿರದ ಶರಣು.