ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕಿನ ಎಲ್ಲ ಓದುಗರಿಗೂ ಗ್ಲೋಬಲ್ ರನ್ ದಿನ ( Global Run Day - ಜೂನ್ ೩) ಯ ಶುಭಾಶಯಗಳು.. ಈ ಸತ್ಯ ಘಟನೆ ಆಧಾರಿತ ಲೇಖನ...ನಿಮಗಾಗಿ..
ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಸುಮಾರು ೩ ಕಿಲೋ ಮೀಟರ್ ಸಾಗುತ್ತಿದ್ದಂತೆ  ಇದೊಂದು ವ್ಯರ್ಥ ಸಾಧನೆ ಆಗುವ ಎಲ್ಲ ಲಕ್ಷಣಗಳು ಕಂಡುಬರತೊಡಗಿದವು. ಹಿಮ್ಮೊಡ, ಕಾಲುಗಳ ಸ್ನಾಯುಗಳು,ನರವ್ಯೂಹ ಚಳುವಳಿ ಹೂಡುವಂತೆ  ಗೋಚರಿಸಿದವು.. ಇಲ್ಲ, ಇನ್ನೂ ಆಗದು, ಇರುವ ಎಲ್ಲ ತ್ರಾಣಗಳು ಖರ್ಚಾದವೇನೋ ಎಂಬಂತೆ  ಭಾಸವಾಗಿದ್ದು ನಿಜ.

ಹೌದು, ಆ ದಿನ ನಾನು ಇದ್ದದ್ದು ಜಗತ್ತಿನ ಅತಿ ದೊಡ್ಡ ಕ್ರಾಸ್ ಕಂಟ್ರೀ ಮ್ಯಾರಥಾನ್ ನಡೆಯುವ ಸ್ವೀಡನ್ ನ ಲಿಡಿಂಗೋ ಎಂಬ ಗುಡ್ಡಬೆಟ್ಟ ಕಾಡಿನ ನಡುವೆ. ಬೆಟ್ಟಗುಡ್ಡಗಳ ಈ ದುರ್ಗಮ ದಾರಿಯಲ್ಲಿ ೧೫ ಕಿ ಮೀ ಓಡುವುದು ಅಂದರೆ ಸಾಮಾನ್ಯ ರೋಡ ನಲ್ಲಿ ೨೧ ಕಿಮೀ ರನ್ ಮಾಡಿದಂತೆ. ಇದು ಅರ್ಧ ಮಾರಥಾನ್ ಗೆ ಸಮ. ಸುಮಾರು ಎರಡು ಸಾವಿರ ಓಟಗಾರರ ಹುರುಪು, ಹದಿನಾಲ್ಕು ಡಿಗ್ರಿಯ ತಂಪು , ಹಸಿರು ಹುಲ್ಲುಗಾವಲು,ಶುದ್ಧ ತಂಗಾಳಿ, ನೇರ ಉದ್ದನೆಯ ಸ್ಪುರದ್ರೂಪಿ ಮರಗಳು, ಒದ್ದೆ ತರಗೆಲೆಗಳ ದಾರಿ…ಹೌದು ಶುರುವಾತು ಚೆನ್ನಾಗಿಯೇ ಇತ್ತು.

ಇನ್ನೂ ೪ ಕಿಮೀ ಮುಗಿಯಿತು ಅನ್ನುವಷ್ಟರಲ್ಲಿ ದೇಹ ಇದು ಸುಲಭ ಸಾಧ್ಯವಲ್ಲ ಎಂಬುದನ್ನು ಮತ್ತೆ ಹೇಳಿತು. ಇದು ಬೇಕಿತ್ತೆ? ನಾನು ಬಯಸುತ್ತಿರುವುದಾದರೂ ಏನು.? ಮ್ಯಾರಥಾನ್ ಮುಗಿದು ಪದಕ ಪಡೆದು ಸೆಲ್ಫಿ ತೆಗೆದು ಫೇಸ್ ಬುಕ್ ನಲ್ಲಿ ಲೈಕು ಗಿಟ್ಟಿಸುವ ಗುರಿಯೇ? ಇಲ್ಲವೇ ನನ್ನ ಓರಗೆಯವರ ಕಣ್ಣು ಕುಕ್ಕುವ ಮಾರಥಾನ್ ಟಿ ಶರ್ಟ್ ಆಸೆಯೇ ಅಥವಾ ಈ ಓಟದ ಈವೆಂಟ್ ನ ಸುತ್ತ ಕೇಳಿದ ದಂತ ಕಥೆಗಳೇ? ಈ ಹಿಂದೆ ಒಂದು ಕಿ.ಮೀ ಕೂಡ ರನ್ ಮಾಡಿದ ನಿರಂತರ ಅಭ್ಯಾಸವೇ ಇರಲಿಲ್ಲ ಅನ್ನುವ ಅಳುಕು ಬೇರೆ..

ಶರ್ಟ್ ಗೆ ಅಂಟಿಸಿದ ಎಲೆಕ್ಟ್ರಾನಿಕ್ ಚಿಪ್ ಕರಾರುವಕ್ಕಾಗಿ ಓಟದ ದಾರಿ, ಕ್ರಮಿಸಿದ ಸಮಯ ಎಲ್ಲವನ್ನು ಲೆಕ್ಕ ಹಾಕುತ್ತಿತ್ತು. ಹಾಕಿ ಕೊಟ್ಟ ದಾರಿಯಲ್ಲೇ ಸಾಗಬೇಕಿತ್ತು.

ಆರು ಕಿಲೋ ಮೀಟರ್ ಹೊತ್ತಿಗೆ ಕಾಲುಗಳು ಮತ್ತೆ ಮುಷ್ಕರ ಹೂಡುವ ಸೂಚನೆಗಳನ್ನು ನೀಡಿದವು…… ಓಡುತ್ತಲೇ ಇರುವುದು ಸಹಜವಾದ ಸ್ಥಿತಿ, ಚಿಂತೆ ಬೇಡ ಎಂದು ನಂಬಿಸುವ ಪ್ರಯತ್ನ ಮಾಡಿದೆ. ಇದು ನನ್ನನ್ನು ಇನ್ನೆರಡು ಕಿ.ಮೀ. ವರೆಗೆ ಕೊಂಡೊಯ್ಯಿತು… ಈ ಮಧ್ಯೆ ಸತತ ಓಡುವ ಫಾರೆಸ್ಟ್ ಗಂಪ್ ನೆನಪಾದ..ಟಾಮ್ ಹ್ಯಾಂಕ್ಸ್ ನ ಮುಖ.. ಸ್ವಲ್ಪ ಸ್ಪೂರ್ತಿಯ ಇಂಜೆಕ್ಷನ್ ಚುಚ್ಚುವ ಯತ್ನ ಮಾಡಿದೆ.

ಯಾಕೋ ವೇಗ ಕಮ್ಮಿಯಾಯ್ತು ಅನ್ನಿಸಿದ್ದಲ್ಲದೇ , ಹೆಚ್ಚು ಕಮ್ಮಿ ನಡೆಯುವ ಸ್ಪೀಡ್ ಗೆ ತಗ್ಗಿತು..ಹಿಂದೆ ಇದ್ದ ಎರಡು ಸಾವಿರದಷ್ಟು ಜನ ಕಾಣಲಿಲ್ಲ , ಆದರೆ ಓಟಗಾರರ ಗುಂಪು ಇನ್ನೂ ಇತ್ತು . ನನ್ನ ಮುಂದೆ ಹತ್ತಾರು ಎಪ್ಪತ್ತರ ಮೇಲಿನ ಹಿರಿಯರು ಅದರಲ್ಲೂ ವೃದ್ಧೆಯರು ನನ್ನ ದಾಟಿ ಮುಂದುವರೆದಿದ್ದು ಇನ್ನಷ್ಟು ಬಲ ತುಂಬಿದ್ದು ನಿಜ..

ಎತ್ತರ ಉಬ್ಬು ತಗ್ಗುಗಳು ವೇಗವನ್ನು ಹೆಚ್ಚಿಸಲು ಬಿಡಲಿಲ್ಲ. ದಾರಿಯ ಮೈಲಿಗಲ್ಲು ಕಂಡುಬರದೇ ಜತೆಯಲ್ಲಿ ಓಡುವವರಿಗೆ ಕೇಳುವ ಪ್ರಯತ್ನ ಮಾಡಿದೆ.ಕೊನೆಗೂ ಎಂಟು ಎಂಬ ಸಂಖ್ಯೆ ತೋರಿತು. ಇಲ್ಲೀವರೆಗೆ ಬರೀ ಎಂಟಾ.. ತಿಣುಕಿ ತಿಣುಕಿ ಬಂದವನಿಗೆ ಅಯ್ಯೋ ಹೆಚ್ಚು ಕಮ್ಮಿ ಬಂದಷ್ಟೇ ದೂರ ಇನ್ನೂ ಇದೆಯಾ.. ಒಹ್ ಗಾಡ್. ಈಗ ಏನು ಮಾಡಲಿ. ಹೆಂಡತಿ, ಮಗನ ನೆನಪಾಯ್ತು. ಫಿನಿಷ್ ಲೈನ್ ನಲ್ಲಿ ಕಾಯುತ್ತಿರಬೇಕು.. ಅವರಿಗೇನು ಗೊತ್ತು ನನ್ನ ಪಾಡು.. !

ಬೆಟ್ಟ ಗುಡ್ಡಗಳು ಸ್ವಲ್ಪ ಕಳೆದು ಕೆಲ ಹೊಲಗಳು ಕಾಣಿಸಿದವು.. ದಾರಿ ಇಕ್ಕೆಲಗಳಲ್ಲಿ ಕೆಲಸ ಮಾಡುತ್ತಿದ್ದ ಹ್ಯಾಟ್ ಧರಿಸಿದ ಬೊಚ್ಚು ಬಾಯಿಯ ಕೃಷಿಕ ದಂಪತಿಗಳು ತಮ್ಮ ತೋಟದ ಸಸಿಗೆ ನೀರು ಹಾಕಿದ ಕೈಗಳಿಂದಲೇ ಚಪ್ಪಾಳೆ ತಟ್ಟಿ ಎಲ್ಲ ಓಟಗಾರರಿಗೂ ಹುರಿದುಂಬಿಸಿದ್ದು ಕಂಡು ಬಂತು. ಅಂತಹ ಸ್ಥಿತಿಯಲ್ಲೂ ಥ್ಯಾಂಕ್ ಯು ಎನ್ನುವಂತೆ ಕೈ ಮಾಡಿ , ಓಟದ ವೇಗವನ್ನು ಒತ್ತಾಯವಾಗಿ ತೀವ್ರ ಗೊಳಿಸಿದೆ.. ನಿಷ್ಕಲ್ಮಶ ಹುರಿದುಂಬುವಿಕೆಗಳ ನಡುವೆ ದುರ್ಬಲನಾಗಲು ಮನಸ್ಸು ಸುತಾರಾಂ ಒಪ್ಪಲಿಲ್ಲ.

ಈಗ ದೂರದ ಮೈಲಿಗಲ್ಲು ೧೦ ಎಂದುದನ್ನು ತೋರಿಸಿತ್ತು. ಮತ್ತೆ ದುರ್ಗಮ ರಸ್ತೆ. ಏಕೋ ಎಲ್ಲ ಶಕ್ತಿಗಳೂ ಬರಿದಾದವೇನೋ ಎಂಬಂತೆ ತೋರಿದ್ದು ಒಂದೆರಕ್ಷಣ ಓಟವನ್ನು ನಿಲ್ಲಿಸಿದೆ… ಬ್ಯಾಗಲ್ಲಿದ್ದ ನೀರು ಕುಡಿದೆ.. ಮಳೆಗೆ, ಚಳಿಗೆ ಇರಲಿ ಎಂದು ತಂದ ಜಾಕೆಟ್ ಕಳಚಿ ಸೊಂಟಕ್ಕೆ ಸುತ್ತಿಕೊಂಡೆ..

ಅಲ್ಲಿಗೆ ಎಲ್ಲ ಸ್ಫೂರ್ತಿಗಳು, ನಂಬಿಕೆಗಳು ಬರಿದಾದವು ಅನ್ನಿಸಿದ್ದು ದಿಟ. ತಿಣುಕಿ ತಿಣುಕಿ ೧೦ ಕ್ಕೆ ಬಂದೆ.. ಪ್ರತಿ ಹೆಜ್ಜೆಯೂ ಭಾರ..ಈ ಬಾರಿ ಇದು ತೀವ್ರವಾದ ಹಿಂಜರಿಕೆ. ಇದು ದೇಹದ, ಈ ಜೀವದ ಬಳಲಿಕೆಯಾದ್ದರಿಂದ ಇದನ್ನು ಪರಿಹರಿಸುವ ಶಕ್ತಿ ಇರುವುದು ಒಬ್ಬರಿಂದಲೇ.. ಅದು ರಕ್ತ, ಮಾಂಸ, ಮೂಳೆಗಳನ್ನು ಹಂಚಿ,ಕಟ್ಟಿ ಬೆಳೆಸಿದ ಜನನಿ… ನನ್ನ ಕಾಯಕ್ಕೆ ಚೇತನದ ಎರವಲು ತುಂಬಲು ಬೇಡಿಕೊಂಡೆ.. ಇನ್ನೂ ನಾಲಕ್ಕು ಕಿ.ಮೀ. ಇದೆ..ಕೊನೆಯದು ಇನ್ನೂ ದುರ್ಗಮ ರಸ್ತೆ..

ಅನೇಕ ವರ್ಷಗಳ ಹಿಂದೆ ಬಾಲ್ಯದ ಆ ಎರಡು ವರ್ಷಗಳು ನೆನಪಿಗೆ ಬಂದವು.. ಅಂದು ಇಂತಹುದೇ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ಮಧ್ಯೆ ಕಟ್ಟಿಗೆ ತರಲು ನನ್ನ ಆಯಿಯ ಜತೆಗೆ ಆಗಾಗ್ಗೆ ಹೊರಡುತ್ತಿದ್ದ ಕಾಲ. ಒಣಗಿದ ಕಟ್ಟಿಗೆಗಳನ್ನು ತಂದು ಮನೆಯಲ್ಲಿ ಉಪಯೋಗಿಸುವುದು ಉದ್ದೇಶ .. ಜೇನು, ಹಾವುಗಳು ನೆನಪಿನ ಭಾಗವಾಗಿದ್ದ ದಿನಗಳು.. ಅಪರಿಚಿತ ಕಾಡುಗಳು ಅಂದು ನಮ್ಮನ್ನು ತನ್ನವರಂತೆಯೇ ಕಂಡಿದ್ದವು.

ಸಾವಿರಾರು ಕಿ.ಮೀ. ದೂರದ, ಭೂಗೋಳದ ಉತ್ತರಾರ್ಧದ ಸ್ವೀಡನ್ ನ ಲಿಡಿಂಗೋ ಕಾಡಿನ ಮತ್ತು ಇದ್ದಕ್ಕಿದ್ದಂತೆ ನೆನಪಿಗೆ ಬಂದ ಆ ಬಾಲ್ಯದ ಪಶ್ಚಿಮ ಘಟ್ಟದ ಅರಣ್ಯ- ಆ ಎರಡರದ್ದೂ ಅಸ್ತಿತ್ವ, ಅವು ಸ್ಪುರಿಸುವ ಭಾಷೆಯಲ್ಲಿ ಯಾವ ವ್ಯತ್ಯಾಸಗಳೂ ಕಾಣಲಿಲ್ಲ.. ಅದೇ ಸ್ವರ, ಹಕ್ಕಿಗಳ ಚಿಲಿಪಿಲಿಯೂ ಅದೇ… ಆಯಿಯ ನೆನಪು ಮತ್ತು ಬಾಲ್ಯದ ಕಾಡಿನ ನೆನಪು ನನ್ನ ಓಟವನ್ನೂ ಇನ್ನೂ ಜೀವಂತವಾಗಿರಿಸಿದ್ದವು.. ಆ ವೇಳೆಗೆ ಕೆಲಸ, ಕಚೇರಿ, ಬಂಧು, ಬಳಗ, ದೇಶ, ವಿದ್ಯಮಾನಗಳು ..ಊಹೂಂ ಯಾವುವೂ ಮನಸ್ಸಿನ ಹತ್ತಿರಕ್ಕೂ ಸುಳಿಯುವ ಸಾಹಸ ಮಾಡಲಿಲ್ಲ.. ಹಗುರವಾದ ಎದೆಯೊಂದಿಗೆ ತೇಲುತ್ತಾ ಓಡಿದ ಅನುಭವ .. ನನ್ನ ದೃಷ್ಟಿಯಲ್ಲಿ ನಿಜಕ್ಕೂಅವು ಒಂದು ಚಿಕ್ಕ ಚಿಕ್ಕ ತುರೀಯ ಕ್ಷಣಗಳು.. ಎಂದಿನಂತೆ ವೇಗವಾಗಿ ಓಡುತ್ತಿದ್ದ, ಕಾಡುತ್ತಿದ್ದ ಕಾಲ, ಅವತ್ತು ನಾನು ಓಡುವಾಗ ಎಲ್ಲೋ ಹಿಂದೆ ಬಿದ್ದಿದೆಯಾ ಎಂದು ಅನ್ನಿಸಿದ್ದು ಆಹ್ಲಾದಕಾರೀ ಅನುಭವ .

ಈ ಬಾರಿ ಮೈಲಿ ಗಲ್ಲು ಹನ್ನೊಂದು ತೋರಿಸಿತು.

ಇಲ್ಲಿಯವರೆಗಿನ ೨ -೩ ಹಿಂಜರಿಕೆಗಳ ಹಿಂದೆ ಒಂದು ವಿಷಯವನ್ನು ಗಮನಿಸಿದ್ದೆ. ಇದನ್ನು ನೀವೂ ಟ್ರೈ ಮಾಡಿ ನೋಡಬಹುದು . ಒಂದು ಮಟ್ಟದ ವರೆಗೆ ಸರಾಗವಾಗಿ ಓಡಿ, ಅದಾದ ಮೇಲೆ ಸಾಕು ಅಂದರೂ ನಿಲ್ಲದೆ ಓಟ ಮುಂದುವರೆಸಿ.. ಸ್ವಲ್ಪ ಕಷ್ಟದ ನಂತರ, ಆಗದು ಎಂಬ ಯಾವುದೋ ತಡೆ ಗೋಡೆ ಫಟ್ಟನೆ ಒಡೆದು ಹೋಗಿ , ಎದೆಯು ಇದ್ದಕ್ಕಿದ್ದಂತೆ ಹಗುರವಾಗಿ ಇನ್ನಷ್ಟು ದೂರ ಕ್ರಮಿಸುವದಕ್ಕೆ ಅನುವು ಮಾಡಿಕೊಡುತ್ತದೆ.. ಬದುಕು ಕೂಡ ಹಾಗೆಯೇ , ಮಾಡುವ ಕೆಲಸ ಒಂದು ಮಟ್ಟಿಗೆ ದೊಡ್ಡ ಭಾದೆಯಾಗಿ, ಕೈ ಚೆಲ್ಲುವ ಸಂದರ್ಭ ಎದುರಾದರೆ ನಿಲ್ಲದೆ ಮುಂದುವರೆಸಿ.. .ಸಾಧನೆಯ ಹಾದಿಯಲಿ ಪ್ರಗತಿ ಖಂಡಿತ.

ಮೈಲಿಗಲ್ಲು ಹನ್ನೆರಡು ತೋರಿಸಿದಾಗ, ಥ್ರೀ ಮೊರ್ ಟು ಗೋ ಅಂಥ ಯಾರೋ ಹೇಳಿದ್ದು ಕೇಳಿ ಬಂತು.. ಮಾರಥಾನ್ ನ ಸ್ವಯಂ ಸೇವಕರು ನಗುತ್ತಾ  ಹುರಿದುಂಬಿಸಿದ್ದು ಮತ್ತೆ ಕಾಲುಗಳನ್ನು ಚುರುಕು  ಮುಟ್ಟಿಸಿದವು.. .. 

ಹದಿಮೂರು, ಹದಿನಾಲ್ಕು……., ಸಂಗೀತದ ಇಖೊ ಕಾಡಲ್ಲಿ ಮಾರ್ದನಿಸ್ಸಿದ್ದು ತೆಳುವಾಗಿ ಕೇಳಿಬಂತು.. ಒಂದೆರಡು ತಿರುವು ಕಳೆಯುತ್ತಿದ್ದಂತೆ ಸಂಗೀತದ ಆರ್ಭಟ ಜೋರಾಗಿ ಕೇಳತೊಡಗಿತು… ಇದ್ದಕ್ಕಿದ್ದಂತೆ, ದೂರದಲ್ಲಿಕಂಡಿದ್ದು ಸಾವಿರ ಜನಗಳ ಫಿನಿಷ್ ಲೈನ್…ಮೇಲೆ ವೀಕ್ಷಕರ ಲಾಂಜ್ ಕಾಣಿಸಿತು.. ಈಗ ನನ್ನ ಓಟದ ಸ್ಪೀಡ್ ತಾರಕಕ್ಕೇರಿತು… ಅಯ್ಯೋ, ಓಟವೇ ಸಹಜ ಸ್ಥಿತಿ… ನಿಲ್ಲಿಸುವ ಅಸಹಜ ಸ್ಥಿತಿಗೆ ನಾನು ಹೇಗೆ ಬರಲಿ..!

ಫಿನಿಷ್ ಲೈನ್ ಬರುತ್ತಿದ್ದಂತೆ ಮೇಲೆ ಅಲ್ಲಿಯವರೆಗೆ, ತೆರೆದ ಕಣ್ಣುಗಳಲ್ಲಿ ಬರುವವರನ್ನು ದಿಟ್ಟಿಸುತ್ತಿದ್ದವರು..ಅಕ್ಕ ಪಕ್ಕ ಸಾವಿರಾರು ಪ್ರೇಕ್ಷಕರ ಕರತಾಡನ.. ನನ್ನ ಹೆಂಡತಿ, ಮಗನಿಗೆ.. ಅದೋ ನೋಡು ಅಪ್ಪ ಬಂದರು ಅಂದಿದ್ದು ಅಸ್ಪಷ್ಟವಾಗಿ ಕೇಳಿಸಿತು . ಅವರನ್ನು ಕತ್ತೆತ್ತಿ ನೋಡಿದೆ..

ಮುಂದೆ ಜಗತ್ತಿನ ಎಲ್ಲ ರಾಷ್ಟ್ರಗಳಿಂದ ಬಂದ ಮೂವತ್ತೈದು ಸಾವಿರಕ್ಕೂ ಹೆಚ್ಚು ಮಾರಥಾನ್ ಓಟಗಾರರು ಭಾಗವಹಿಸಿ ದ ಲಿಡಿಂಗೊಲೊಪ್ಪೆಟ್ ಪೂರ್ತಿಗೊಳಿಸಿದಪದಕ ಕೊರಳಿಕೆ ಹಾಕುತ್ತಿದ್ದಾಗಲೂ .. ನನ್ನ ಕಾಲುಗಳು ಇನ್ನೂ ಓಡುವ ಮೂಡಿನಲ್ಲಿದ್ದವು.. .. 15 ಕಿ.ಮೀ. ನೂರು ನಿಮಿಷಗಳಲ್ಲಿ..

ಈ ವರ್ಷವೂ ಲಿಡಿಂಗೊಲೊಪ್ಪೆಟ್ ೨೦೨೦ ಯಲ್ಲಿ ಭಾಗವಹಿಸುವ ಆಸೆ. ಮತ್ತೆ ರನ್ ಮಾಡಲು ಆರಂಭಿಸಿದೆ..ದಿನವೂ ಐದು ಕಿ.ಮೀ. ರನ್ ಮಾಡುತ್ತಿದ್ದೇನೆ..೬ ನೇ ಕಿ.ಮೀ.ಗೆ ಮತ್ತೆ, ಕಾಲುಗಳು ಸಬೂಬು ಹೇಳಲು ಆರಂಭಿಸಿವೆ. More 10Ks and ಲಿಡಿಂಗೊಲೊಪ್ಪೆಟ್ 2020 coming soon..!

ಓಡುವುದು ಒಂದು ನೈಸರ್ಗಿಕ ಪ್ರಕ್ರಿಯೆ… ಮಾನವ ಮೂಲತಃ ಒಂದು ಪ್ರಾಣಿ .. ಗಿಡ ಮರಗಳ ನಿಸರ್ಗದ ನಡುವೆ ದೂರ ದೂರ ಓಡುವ ಪ್ರಕ್ರಿಯೆ ಮೂಲಭೂತ ವಾಗಿ ಬಂದದ್ದು.. ಇದೂ ಕೂಡ ಆಧ್ಯಾತ್ಮ. ಎದೆಯ, ತಲೆಯ ಒಳಗೆ ಕಾಲದೊಂದಿಗೆ ಹೆಪ್ಪುಗಟ್ಟಿದ್ದ ಎಲ್ಲ ಭಾರಗಳೂ, ಅಳುಕುಗಳು, ಕಳವಳಗಳೂ ಕರಗಿ ಹಗುರವಾಗುತ್ತದೆ… ಮೂಲೆ ಮೂಲೆಯ ಸ್ನಾಯುಗಳಿಗೆ ಎಂದೂ ಕಾಣದ ಪ್ರಾಣವಾಯು ಸಂಚಾರವಾಗಿ, ಮಿಂಚಿನ ಹರಿವು, ಅರಿವು, ಕಸುವು ಮೂಡುತ್ತವೆ.. ಹೊಸದನ್ನು, ಮಹತ್ತರವಾದುದನ್ನು ಮಾಡುವ ಹುಮ್ಮಸ್ಸಿನ ಒರತೆ ಹರಿಸುತ್ತದೆ.. ರೋಗಗಳು ಕಾಲು ಕೀಳುತ್ತವೆ..

ಮಾರಥಾನ್ನೇ ಬೇಕು ಅಂತೇನಿಲ್ಲ ಚಿಕ್ಕದಾಗಿ, ಮೊದಲು ಕೆಲವು ಹೆಜ್ಜೆ, ಕೆಲವು ಮೀಟರ್, ಕೆಲವು ಕಿಲೋ ಮೀಟರ್ ನಿಂದ ಪ್ರಾರಂಭಿಸಿ.. ಯಾವುದಾದರೂ ಒಂದು ರನ್ನಿಂಗ್ ಆಪ್ ಬಳಸಿ… ದಿನೇ ದಿನೇ ಓಟದ ಪರಿಧಿಯನ್ನು ಪ್ರಗತಿಯನ್ನೂ ಕಂಡು ಖುಷಿ ಪಡಿ.. ಭಾರತದಲ್ಲಿ ೧೮ ರಿಂದ ೬೦ ರವೆರೆಗೆ ಎಲ್ಲರೂ ಕಡ್ಡಾಯವಾಗಿ ರನ್ ಮಾಡುವುದನ್ನು ಅಭ್ಯಾಸ ಮಾಡಿದರೆ ಎಲ್ಲರಿಗೂ ಲಾಭ.

ತನು, ಮನದ ಆರೋಗ್ಯ ಶತಸ್ಸಿದ್ಧ… ೧೦೦% ಲಾಭ ನಿಮಗೆ.. ಓಟ ..ಆರಂಭಿಸದಿರುವ ಎಲ್ಲ ಅಡೆತಡೆಗಳನ್ನು ನಿವಾರಿಸಿ… ಗಂಡು ಹೆಣ್ಣು ವಯಸ್ಸು ಎನ್ನುವ ನೆವಗಳು ಬೇಡ.. ಆರೋಗ್ಯ ಹುಮ್ಮಸ್ಸಿಗಾಗಿ, ಬಂಧಗಳನ್ನು ಕಳಚಿ ಓಡಲು ಆರಂಭಿಸಿ… ಮತ್ತೆ ನಸುಕಿನ ಎಲ್ಲ ಓದುಗರಿಗೂ ಗ್ಲೋಬಲ್ ರನ್ ಡೇ ನ ಶುಭಾಶಯಗಳು..