- ‘ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು’ – ಜೀವನಯಾನದ ಸಮೀಕರಣ - ಸೆಪ್ಟೆಂಬರ್ 11, 2020
ಕನ್ನಡ ಕಾವ್ಯಲೋಕದಲ್ಲಿ ತಮ್ಮ ವಿಭಿನ್ನ ಕಾವ್ಯಾತ್ಮಕ ಪ್ರಯೋಗಗಳಿಂದ ಗುರುತಿಸಲ್ಪಟ್ಟವರು ಕೆ. ವಿ. ತಿರುಮಲೇಶ್. ಕವಿಯಷ್ಟೇ ಅಲ್ಲದೆ ಅವರ ಪ್ರಯೋಗಗಳು ಕಥೆ, ನಾಟಕ, ಅನುವಾದ ಇತ್ಯಾದಿ ಪ್ರಭೇದಗಳಿಗೂ ವಿಸ್ತರಿಸಿಕೊಂಡಿವೆ. ಅವರೊಬ್ಬ ಭಾಷಾಶಾಸ್ತ್ರಜ್ಞರೂ ಆಗಿರುವ ಕಾರಣ ಅವರ ಪ್ರಯೋಗಗಳನ್ನು ಭಾಷಿಕ ದೃಷ್ಟಿಯಿಂದಲೂ ಪರಿಶೀಲಿಸಬಹುದಾಗಿದೆ. ಅದೇನೇ ಇರಲಿ, ಮುಖ್ಯವಾಗಿ ಅವರು ಗುರುತಿಸಲ್ಪಟ್ಟಿದ್ದು ಕವಿಯೆಂದೇ. ಅವರ `ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು’ ಕವಿತೆಯ ಬಗ್ಗೆ ಪುಟ್ಟ ಟಿಪ್ಪಣಿಯನ್ನು ದಾಖಲಿಸಲು ಸಂತೋಷವಾಗುತ್ತದೆ.
ಜೀವನಯಾನದಲ್ಲಿ ಎಲ್ಲರೂ ಒಂದೇ ದಾರಿಯಲ್ಲಿ ಅಥವಾ ಒಂದೇ ಬಗೆಯ ದಾರಿಗಳಲ್ಲಿ ಸಾಗಲಾಗದು. ಕೆಲವರದು ಹೆದ್ದಾರಿ, ಕೆಲವರದು ಕಾಲುದಾರಿ, ಕೆಲವರದು ಅಡ್ಡದಾರಿ – ಹೀಗೆ ನಾನಾ ಥರದ ದಾರಿಗಳು. ಬದುಕಿನ ದಾರಿಗಳು, ರೀತಿಗಳು, ಮನುಷ್ಯನ ಯೋಚನೆಗಳು, ಭಾವನೆಗಳು, ಪ್ರತಿಕ್ರಿಯೆಗಳು ಎಲ್ಲವೂ ಬಹುತೇಕ ವಿಭಿನ್ನವೇ. ಅಂಥದೇ ಒಂದು ಬಗೆಯ ದಾರ್ಶನಿಕ ದೃಷ್ಟಿಕೋನವನ್ನೇ ಈ ಕವಿತೆಯಲ್ಲೂ ಕಾಣಬಹುದು.
ಕವಿತೆಯ ಆರಂಭದಲ್ಲಿ – ಕತ್ತರಿಸಿದ ಹಣ್ಣನ್ನು ಮತ್ತೆ ಸೇರಿಸಲಾಗದು ಎಂಬುದು ಸಾಮಾನ್ಯ ಸಂಗತಿ ಎನ್ನುವ ಕವಿ ಮುಂದುವರಿದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು ಹೇಗೆ ಎಂಬುದನ್ನಷ್ಟೆ ನೋಡೋಣ' ಎನ್ನುತ್ತಾರೆ. ತರಬೇಕಾದುದು ಕಳಿತ ಹಣ್ಣನ್ನು ಎನ್ನಲು ಮರೆಯದ ಕವಿ,
ಹೇಗೇ ಇರಿಸಿದರೂ ಅದು ದುಂಡಗೇ ಕುಳಿತುಕೊಳ್ಳುತ್ತದೆ’ ಎಂಬುದನ್ನೂ ತಿಳಿಸುತ್ತಾರೆ. ಮುಂದಿನ ಈ ಸಾಲುಗಳೇ ಕವಿತೆಯ ಕೇಂದ್ರಬಿಂದು ಎನಿಸುತ್ತದೆ.
`ಅದನ್ನು ಮೇಲಿಂದ ಕೆಳಕ್ಕೆ ಅಥವಾ ಕೆಳಗಿನಿಂದ
ಮೇಲಕ್ಕೆ ಅಥವಾ ಎಡದಿಂದ ಬಲಕ್ಕೆ ಅಥವಾ
ಬಲದಿಂದ ಎಡಕ್ಕೆ ಅಥವಾ – ನಿಜಕ್ಕೂ ಹೇಳುವುದಾದರೆ
ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದಕ್ಕೆ ಅಸಂಖ್ಯ
ರೀತಿಗಳಿವೆ…’
ವಿಶೇಷವಾಗಿ ಇಷ್ಟೊಂದು ಸಾಧ್ಯತೆಗಳು ಗಾತ್ರದಲ್ಲಿ ಹಿರಿದಾದ ಕಲ್ಲಂಗಡಿ ಅಥವಾ ಅಂಥ ಗಾತ್ರದ ಹಣ್ಣುಗಳಿಗಷ್ಟೇ ಸಾಧ್ಯ ಎಂಬುದನ್ನೂ ನಾವು ಗಮನಿಸಬೇಕು. ಏಕೆಂದರೆ ಸಣ್ಣ ಗಾತ್ರದ ಹಣ್ಣುಗಳಿಗೆ ಈ ಅಸಂಖ್ಯ ಎನ್ನಬಹುದಾದ ಸಾಧ್ಯತೆಗಳು ಇಲ್ಲ ಎನ್ನಬಹುದೇನೋ. ಮುಂದೆ ತಮ್ಮ ಅಫಘಾನಿ ಮಿತ್ರ ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದರತ್ತ ಕವಿ ನಮ್ಮ ಗಮನ ಸೆಳೆಯುತ್ತಾರೆ.
`ನನ್ನ ಅಫಘಾನೀ ಮಿತ್ರನೊಬ್ಬ
ಮಧ್ಯದಿಂದ ಅಡ್ಡಕ್ಕೆ ಕತ್ತರಿಸಿ ಒಳಗಿನ ತಿರುಳನ್ನು
ಚೂರಿಯಿಂದ ಹೆರೆದು ತೆಗೆಯುತ್ತಿದ್ದ.’
ಬಹುಶಃ ಈ ಮಿತ್ರನ ಹೊಸ ಮಾದರಿಯ ಕತ್ತರಿಸುವಿಕೆಯೇ ಕವಿತೆಯ ಸೃಷ್ಟಿಗೆ ಸೂರ್ತಿಯಾಗಿರಲೂಬಹುದು. ಹಣ್ಣನ್ನು ಕತ್ತರಿಸಿದ ಬಳಿಕ ಅದನ್ನು ತಿನ್ನುವುದರಲ್ಲಿರುವ ಬಗೆಬಗೆಯ ರೀತಿಗಳನ್ನೂ ಮುಂದಿನ ಸಾಲುಗಳು ಕಟ್ಟಿಕೊಡುತ್ತವೆ.
`ಕೆಲವರು ನೀಟಾಗಿ ಕತ್ತರಿಸಿ
ಹೋಳುಗಳನ್ನು ಕಚ್ಚಿ ತಿನ್ನುತ್ತಾರೆ, ಕೆಲವರು ತಿನ್ನುವ ಮೊದಲು
ಬೀಜಗಳನ್ನು ತೆಗೆಯುತ್ತಾರೆ, ಇನ್ನು ಕೆಲವರು
ತಿನ್ನುವಾಗ ಉಗಿಯುತ್ತಾರೆ. ನಿಜಕ್ಕೂ ಹೇಳುವುದಾದರೆ
ಒಂದು ಕಲ್ಲಂಗಡಿ ಹಣ್ಣನ್ನು ತಿನ್ನುವುದಕ್ಕೆ ಅನೇಕ
ವಿಧಾನಗಳಿವೆ…’
ನಾವು ಬದುಕನ್ನು ಅನುಭವಿಸುವ, ಆಸ್ವಾದಿಸುವ ಅಥವಾ ಹೇಗೋ ಕಾಲ ಕಳೆಯುವ ಬಗೆಗಳೂ ಹೀಗೆಯೇ ಎನಿಸುತ್ತದೆ. ಕವಿತೆಯ ಕೊನೆಯಲ್ಲಿ ಕವಿ ಹೇಳುತ್ತಾರೆ;
`ಒಂದು ಕಲ್ಲಂಗಡಿ ಹಣ್ಣನ್ನು ತಿನ್ನುವುದಕ್ಕೆ ಅನೇಕ
ವಿಧಾನಗಳಿವೆ. ಎಲ್ಲಕ್ಕಿಂತ ಮುಖ್ಯವೆಂದರೆ –
ಅಥವಾ ನಾನೇಕೆ ಹೇಳಲಿ ಅದನ್ನು?’
ಹಣ್ಣನ್ನು ಕತ್ತರಿಸಿ ತಿನ್ನುವುದಕ್ಕೆ ಇಷ್ಟೊಂದು ವಿಧಾನಗಳಿರುವಾಗಲೂ, ಎಲ್ಲಕ್ಕಿಂತ ಮುಖ್ಯವಾದುದೊಂದು ವಿಧಾನದ ಬಗ್ಗೆ ಕಂಡುಕೊಂಡಿರುವ ಕವಿ, ನಾನೇಕೆ ಹೇಳಲಿ ಅದನ್ನು?' ಎಂದುಬಿಡುತ್ತಾರೆ. ಅವರವರು
ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು’ ಅಥವಾ `ಜೀವನವನ್ನು ನಡೆಸುವುದು’ ಅಥವಾ ಏನೇ ಮಾಡುವುದಾದರೂ ಅವರವರಿಗೆ ಮುಖ್ಯವಾದುದನ್ನೇ ಮಾಡುತ್ತಾರಷ್ಟೇ. ಬೇರೆಯವರಿಗೆ ಅಮುಖ್ಯವಾದುದು ಕೂಡ ನಮಗೆ ಬಹು ಮುಖ್ಯವೆನಿಸಬಹುದು. ಹೀಗಾಗಿ ಯಾವುದರ ಬಗೆಗೂ – ಇದು ಬಹು ಮುಖ್ಯವಾದುದು ಎಂದು ನಾವು ತೀರ್ಪು ಕೊಡುವ ಸಾಧ್ಯತೆಯನ್ನು ಕವಿತೆ ತಡೆಯುತ್ತದೆ. ಇದೇ ಬಹುಶಃ ಕವಿತೆಯ ಯಶಸ್ಸು ಕೂಡ ಎನಿಸುತ್ತದೆ.
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ