ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಡಕಲು ಬಿಂಬಗಳು

ಉಮೇಶ ದೇಸಾಯಿ
ಇತ್ತೀಚಿನ ಬರಹಗಳು: ಉಮೇಶ ದೇಸಾಯಿ (ಎಲ್ಲವನ್ನು ಓದಿ)

ಅವನು:

“ಇವು ನಿನ್ನ ಬ್ಯಾಗಿನಲ್ಲಿ ಸಿಕ್ಕವಂತ. ಮಂದಾ ತೋರಿಸಿದಳು. ಇದೊಂದು ನೋಡೋದು ಬಾಕಿ ಇತ್ತು.ಏನು ಇದು ಹುಚ್ಚಾಟ..ಲಗ್ನ ಮಾಡಕೋ ಅಂದರ ನಖರಾ ಮಾಡತಿ. ಇಂತಹ ಭಾನಗಡಿ ಮಾಡಲಿಕ್ಕೆ ಲಗ್ನ ಬ್ಯಾಡಂತಿ ನೀನು…” ಸಿಟ್ಟು ತುಂಬಿಬಂದಿತ್ತು ಅದು ಮಾತಿನಲ್ಲೂ ವ್ಯಕ್ತವಾಗಿತ್ತು. ಎದುರಿದ್ದವಳು ಕಂಪಿಸಿದಳೇ ಅಥವಾ ಅದು ನನ್ನ ಭ್ರಮೆಯೇ?

“ಅಪ್ಪ ಹಿಂಗ ಇನ್ನೊಬ್ಬರ ಖಾಸಗಿ ಜೀವನದಾಗ ದಖಲು ಮಾಡೋದು ಸರಿ ಅಲ್ಲ. ಹಾಂ ಒಂದು ಮಾತು..ಒಂದು ವ್ಯಾಳ್ಯಾ ನೀ ಅವಾಗ ಇವನ್ನ ಉಪಯೋಗ ಮಾಡಿದ್ದ ಆದರ ಅವ್ವ ಇನ್ನೂ ಜೀವಂತ ಇರತಿದ್ದಳು ನಮ್ಮ ಜೋಡಿ…” ಅವಳ ಮಾತು ಕಪಾಳಕ್ಕ ಹೊಡದಂಗಿತ್ತು.

“ನೀ ಸಾಚಾ ಅನ್ನುವಂಗ ಪೋಸ ಕೊಡಬೇಡ..ನೀ ಮೊದಲು ನಿನ್ನ ಬಿಂಬ ನೋಡಿಕೋ ಕನ್ನಡಿಯೊಳಗ ಆಮ್ಯಾಲ ಮಾತಾಡು…ಗಾಜಿನ ಮನಿಯೊಳಗ ಇರಾವರು ಹೊರಗಿನವರಿಗೆ ಕಲ್ಲ ಒಗೀಬಾರದಂತ…” ಮಾತು ಚುಚ್ಚಿತು. ಇದು ಮೊದಲ ಸಲವೇನಲ್ಲ;ಸುಮ್ಮನಿದ್ದೆ.

“ನಾ ಬರತೇನಿ ನನ್ನ ಕ್ಯಾಬ ಬಂದದ. ಸಂಜೀಮುಂದ ಚರ್ಚಾ ಮುಂದುವರೆಸೋಣಂತ” ಅಂತ ಹೇಳಿ ಹೋದವಳ ನೋಡುತ್ತಲೇ ಇದ್ದೆ. ಕೈಲಿ ಹಿಡಿದ ಕಾಂಡೋಮುಗಳು ಹಿಡಿತ ತಪ್ಪಿ ಕೆಳಗ ಬಿದ್ದವು. ಎಂಥಾ ನಿರ್ಲಜ್ಜ ಮಾತು ಅಕಿವು. ಎದರುರಿನವ ಹಡದ ಅಪ್ಪ ಜೀವನದ ಎಲ್ಲ ಸುಖ ಬಾಚಿ ಕೊಟ್ಟಾಂವ ಅನ್ನುವ ಗ್ಯಾನ ಇಲ್ಲ. ಬೇಕೂಂತಲೇ ಚುಚ್ಚಿ ಮಾತಾಡಿದಳು. ಏನ ಮಾತಾಡಿದರ ನಾ ಸುಮ್ಮನಾಗತೇನಿ ಅನ್ನೂದು ಅಕಿಗೆ ಗೊತ್ತದ. ಅದರ ಫಾಯದಾ ಪೂರ್ತಿ ತಗೋತಾಳ.

ಯಾಕೋ ಮನಸ್ಸು ವಿಚಲಿತ ಆತು. ಬಾಗಲಾ ಹಾಕಿದೆ. ರೂಮು ಸೇರಿ ಅಲ್ಮೆರಾ ತೆಗೆದೆ. ಅನಸೂಯಾಳ ಫೋಟೋ ಕೈಗೆತ್ತಿಕೊಂಡೆ. ಎಷ್ಟು ಛಂದ ಇದ್ದಳು..ಬಿಟ್ಟು ಹೋಗಿ ಆಗಲೇ ಇಪ್ಪತ್ತು ಚಿಲ್ಲರಾ ವರ್ಷ . ಈ ಫೋಟೋ ಸಹ ಎಷ್ಟು ಛಂದ. ಎಲ್ಲಾರೂ ಬೈಯಾವರ ಹೆಂಡತಿಯ ಮಗ್ಗಲ ಒಂದ ರಾತ್ರಿನೂ ತಪ್ಪಿಸಿಕೊಳ್ಳದಾವ ಅಂತ. ಅದು ಖರೇನ ಇತ್ತು. ಆ ರಾತ್ರಿಗಳು ಅವುಗಳ ಅಮಲು ಹೆಂಗ ಮರೀಲಿಕ್ಕೆ ಸಾಧ್ಯ ಅದ. “ ನಾಕ ದಿನದ ರಜಾ ನಿಮಗ..” ಅಂತ ಸಣ್ಣಗ ಅಕಿ ಹೇಳತಿದ್ದಳು. ನಾ ಹೇಳತಿದ್ದೆ ಭಿಡೆ ಬಿಟ್ಟು..”ಬ್ಯಾರೆ ಪ್ರಯೋಗ ಮಾಡಲು ಈ ದಿನಾ ಇರತಾವ ನೀ ಸುಮ್ಮನಿರು..” ಅಕಿ ಮುಖದಾಗ ಬ್ಯಾಸರ ಇರತಿತ್ತೇನೋ ಗೊತ್ತಿಲ್ಲ. ಆದರ ಆ ರಾತ್ರಿನೂ ಸಹಕಾರ ನೀಡತಿದ್ದಳು. ಮೊದಲು ಹುಟ್ಟಿದ್ದು ಹೆಣ್ಣು; ಪ್ರೀತಿ ಕಮಿಯಾಗಲಿಲ್ಲ. ಕುಲದೀಪಕನ್ನ ಕೊಡು ಅಂತ ಕಾಡಿದೆ. ಯಾಕೋ ಒಂದ ಹಡದಮ್ಯಾಲ ಬಹಳ ಮೆತ್ತಗಾಗಿದ್ದಳು. ಎರಡ ಮೂರ ಸಲಾನೂ ಗರ್ಭ ಕಟ್ಟಲಿಲ್ಲ ಗಟ್ಟಿಯಾಗಿ. ಧಾರವಾಡ ಅಕಿ ತವರ ಮನಿ. ತಾವರಗೇರಿ ಡಾಕ್ಟರರು ನನ್ನ ಎದುರ ಕೂಡಿಸಿಕೊಂಡು ಹೇಳಿದರು “ದೇಸಾಯರ ಭಾಳ ಜ್ವಾಕಿ. ಮತ್ತೊಮ್ಮೆ ಅನಸೂಯಾ ಬಸರಾದರ ಅಕಿ ಜೀವಕ್ಕ ಧೋಕಾ ಅದ“ ಆದರ ಕಾಮದ ಹುಚ್ಚು ಕುದುರೆಯ ಕೆನೆತದ ಆರ್ಭಟ. ಯಾರು ತಡಕೋಬೇಕು. ಅನಸೂಯಾ ಡೆಲಿವರಿ ಟೈಮಿನ್ಯಾಗ ಗೋಣ ಚಲ್ಲಿದಳು. ಮಗಳಿಗೆ ಅವಾಗ ಐದುವರ್ಷ. ಅತ್ತಿಮನಿಯವರು ಅಂದರು ನನ್ನ ದೈಹಿಕ ಸುಖನ ನನಗ ಹೆಚ್ಚ ಆತು ಅಂತ. ಆದರ ಅವ್ವನೂ ಅದಕ ಹುಂಗುಟ್ಟಿದಳು. ಹಂಗ ನೋಡಿದರ ಅವ್ವಗ ನನ್ನ ಈ ಅವತಾರ ಸೇರತಿರಲಿಲ್ಲ. ಪುಸ್ತಕದ ಒಳಗ ಸುರತಿ ಇಟ್ಟಕೊಂಡು ಓದತಿದ್ದೆ ಕಾಲೇಜು ಟೈಮಿನ್ಯಾಗ. ನಾಗುಂದಿಗಿ ಮ್ಯಾಲ ಇಟ್ಟ ಸುರತಿಯ ಕಟ್ಟು ಅವ್ವಗ ಗೊತ್ತಾಗಿ ರಂಪ ಮಾಡಿದಳು ಅನ್ನೂಕಿಂತಾ ಮಗಾ ಹಾಳಾದ ಅಂತ ಹೆದರಿದಳು. ಡಿಗ್ರಿ ಕೊನಿವರ್ಷ ಅದು. ಅಪ್ಪ ಸರಕಾರಿ ನೌಕರಿಯೊಳಗ ಇದ್ದಾಗನ ತೀರಕೊಂಡ. ಅನುಕಂಪ ಆಧಾರಿತ ನೌಕರಿ ಸಿಕ್ತು. ನಾ ಪೂರಾ ಹಾಳಾಗತೇನಿ ಅನ್ನುವ ಆತಂಕದಾಗ ಲಗೂನ ಮದುವಿ ಮಾಡಬೇಕು ಅನ್ನುವ ಹುರುಪು. ಮೊದಲ ಕನ್ಯಾ ಅಂತ ನೋಡಿದ್ದು ಅನಸೂಯಾ. ಈ ಚೆಲುವಿಗ ಮದುವಿಯಾಗೋದು ಅಂತ ಠರಾಯಿಸಿದ್ದೆ.

ಹುಡುಗಿ ನೋಡಲಿಕ್ಕೆ ಛಂದ ಅಕಿ ಸಂಗದಾಗ ಮಗಾ ತನ್ನ ಎಲ್ಲಾ ಹುಚ್ಚಾಟ ಮರೀತಾನ ಅನ್ನುವ ಹವಣಿಕಿ ಅವ್ವಳದು. ಅದು ಖರೇನೂ ಆಗಿತ್ತು. ಅನಸೂಯಳೊಡನೆ ಕಳೆದ ರಾತ್ರಿಗಳ ಅಮಲು ಆ ಬಗೆಯದು. ಹೆಸರಿಗೆ ಗುಮಾಸ್ತ ಅದೂ ಸೇಲ್ಸಟ್ಯಾಕ್ಸ ವಿಭಾಗ ಬ್ಯಾಡ ಅಂದರೂ ಗಿಂಬಳದ ಹಣ ಬಂದ ಬಂದ ಬೀಳತಿತ್ತು. ಸರ್ವಜ್ಞನ ವಚನದ ಅಮಲ ಬಜಾವಣಿ ಆಗಿತ್ತು ನನ್ನ ಜೀವನದಾಗ. ಮೊದಲಿಂದು ಹೆಣ್ಣಾದರೇನಾತು ಎರಡನೇದು ಗಂಡಾಗಲಿ ಇದು ಅತ್ತಿ ಮನಿಯವರದು ಹಂಗ ಅವ್ವನ ಆಶಾನೂ ಇತ್ತು. ಆದರ ಅನಸೂಯಾ ಗಟ್ಟಿ ಅಲ್ಲ. ಬಹಳ ನಾಜೂಕು. ಒಂದೆರಡು ತಿಂಗಳ ಸಂಭ್ರಮ ಅಷ್ಟ ಭ್ರೂಣ ಕಟ್ಟಿಕೊತಿರಲಿಲ್ಲ. ಅವ್ವ ಹೇಳಾಕಿ ರಾತ್ರಿ ಪಥ್ಯ ಮಾಡು ಅಂತ. ಸಂಭ್ರಮಿಸಲಿರುವ ರಾತ್ರಿಗಳನ್ನು ಉಪವಾಸ ಮಾಡಿ ಕಳದರ ಹೆಂಗ ಇದು ನನ್ನ ವಾದ. ಗೊತ್ತಿಲ್ಲ ನಂಗ ಅನಸೂಯಾಳ ಚೆಲುವು ಆ ಪರಿ ಮೋಡಿ ಮಾಡಿತ್ತು. ಎಲ್ಲಾರೂ ಅಂದು ತೋರಿಸಿದರು ಅಕಿ ತೀರಿಕೊಂಡಾಗ. ಮಗಳು ಐದು ವರ್ಷದಾಕಿ ಇನ್ನೊಂದು ಮದುವಿ ಮಾಡಕೋ ಅಂತ..ಆದರ ಅನಸೂಯಾಳ ಜಗಾ ಬ್ಯಾರೆಯವರು ತುಂಬಬಹುದು ಅಂತ ನನಗ ಎಂದೂ ಅನಸಲಿಲ್ಲ. ಇರುವಷ್ಟು ದಿನ ನನಗ ಹಂಗ ಮಗಳಿಗೆ ಅಡಿಗಿ ಮಾಡಿ ಹಾಕಿದಳು. ಅಕಿಯ ಕೊರತಿ ನನ್ನ ಅತ್ತಿ ತುಂಬಿದಳು ಸ್ವಲ್ಪ ದಿನಾ. ಬೆಂಗಳೂರಿಗೆ ಪ್ರಮೋಷನ್‌ ಮ್ಯಾಲೆ ವರ್ಗ ಆಗಿತ್ತು. ಮಗಳು ತಮ್ಮ ಕಡೇನ ಇರಲಿ ಅನ್ನುವ ಅತ್ತಿಮನಿಯವರ ಹಟಕ್ಕ ಸೊಪ್ಪು ಹಾಕದ ಅಕಿನ್ನ ಕರಕೊಂಡು ಬೆಂಗಳೂರು ಗಾಡಿ ಹತ್ತಿದೆ. ಮೊದಮೊದಲು ಭಾಡಿಗಿ ಮನಿ, ಆಫೀಸಿನ ಪ್ಯೂನ ತುಕ್ಕೋಜಿ ಹಂಗ ಅವನ ಹೆಂಡತಿ ಮಂದಾ ಕಾಳಜಿ ಮಾಡಿದರು. ಮಂದಾ ಮಗಳ ಹೊಟ್ಟಿನೆತ್ತಿ ನೋಡಕೊಂಡಳು. ಮಗಳು ಸಹ ಹೊಸ ಸಾಲಿ ,ಬೆಂಗಳೂರಿನ ಜೀವನಕ್ಕ ಒಗ್ಗಿಕೊಂಡಳು, ವರ್ಷದ ಎರಡು ರಜೆ ಧಾರವಾಡದ ಅಜ್ಜಿಮನಿಯೊಳಗ ಕಳದು ಹೋಗತಿದ್ದವು.

ಶಾಣ್ಯಾ ಹುಡುಗಿ. ಡಾಕ್ಟರಿಕಿ ಮಾಡು ಅಂದೆ. ಆದರ ಅಕಿ ಕಂಪ್ಯೂಟರ ಸೈನ್ಸ ತಗೊಂಡು ಇಂಜಿನೀಯರ ಆದಳು. ಕೊನೆಯ ಸೆಮಿಸ್ಟರನಲ್ಲಿರುವಾಗಲೇ ಎರಡು ಮೂರು ಕಂಪನಿಯ ಆಫರ್‌ ಬಂದಿದ್ದವು. ಹ್ಞಾಂ ಮೇಲ್ನೋಟಕ್ಕ ಒಂದ ಮನಿಯೊಳಗ ಇರಾವರು ನಾವು. ಆದರ ಮನಸ್ಸು ಒಂದ ಇರಲಿಲ್ಲ. ಹಿಂಗ ಮಾಡು ಅಂತ ನಾ ಅಂದರ ಹಂಗ ಮಾಡಾಕಿ ಅಕಿ. ಕೆಂಪುತೋಳಿನ ತುಂಬ ಡ್ರಾಗನ ಟ್ಯಾಟೂ ಹಾಕೊಂಡಾಳ..ಬ್ಯಾಡ ಅಂದರೂ. ನನ್ನ ಬಗ್ಗೆ ಇಲ್ಲದ ಮಾತು ಅಕಿ ತಲಿಯೊಳಗ ಅನಸೂಯಳ ತವರುಮನಿಯವರು ತುಂಬ್ಯಾರ ಇದು ನನ್ನ ವಾದ. ಹಿಂಗಂತ ಹೇಳಿದಾಗ ಅಂಗೈ ಹುಣ್ಣಿಗೆ ಕನ್ನಡಿ ಯಾಕ ಇದು ಅಕಿ ವಾದ. ಛಲೋ ಪಗಾರ , ಒಳ್ಳೆಯ ಕಂಪನಿ ಕೆಲಸ ಅದೆಲ್ಲಾ ಸರಿ. ಆದರ ತನ್ನ ಅಂತಸ್ತು, ನನ್ನ ಸ್ಥಾನಮಾನ ಯಾವುದೂ ಲೆಕ್ಕ ಇರಲಿಲ್ಲ ಅಕಿಗೆ. ನನ್ನ ಕ್ಲಬ್ಬಿನ ಮೆಂಬರ ಆಗು ಅಂದೆ. ನಾನು ಎಷ್ಟು ಗೌರವ ಆದರ ಕೊಡತಾರ ಮೆಂಬರುಗಳು. ಇಕಿಗೂ ಮೆಂಬರ ಆಗು ಅಂದೆ. ಸಾರಾಸಗಟ ತಿರಸ್ಕಾರ ಮಾಡಿದ್ದಳು. ಅದೇನೋ ಸಾಹಿತ್ಯ ಅಂತ ತಲಿಗಿ ಹಾಕೊಂಡಿದ್ದಳು. ಹೈಸ್ಕೂಲು ಓದುವಾಗಲೇ ಕವಿತಾ ಬರೀತಿದ್ದಳು .”ಇದೆಲ್ಲ ಹೊಟ್ಟಿ ತುಂಬಿಸೋ ಹವ್ಯಾಸ ಅಲ್ಲ “ಅಂತ ಅಂದಾಗ ಮೂಗು ಮುರಿತಿದ್ದಳು.

ಕವಿತಾ ಕಥಿ ಬರಕೊಂಡು ಸುಮ್ಮನಿದ್ದರ ನಂಗೇನು ತೊಂದರಿ ಇರಲಿಲ್ಲ. ಸರಕಾರದ ವಿರುದ್ದ, ಅದರ ನಿಲುವುಗಳ ವಿರುದ್ಧ ಹೋರಾಡುವ ಸಂಘಟನೆ ಸೇರಿದಳು. ಶನಿವಾರ ರವಿವಾರ ಬಂತಂದರ ಸಾಕು ಆ ಸಂಘಟನೆಯವರ ಜೊತೆ ಸೇರಿಕೊಂಡು ಅಲ್ಲಲ್ಲಿ ಪ್ರತಿಭಟನಾ ಮಾಡೂದು ,ಮೋರ್ಚಾ ತೆಗೆಯೋದು ಬಂಡಾಯ ಸಾಹಿತ್ಯ ನಂದು ಅಂತ ಹೇಳಕೊಂಡು ತಿರುಗೋದು . ನಾ ಸರಕಾರಿ ಅಧಿಕಾರಿ ಇಂತಹ ಯಾವುದೇ ಕೆಲಸಕ್ಕ ಬೆಂಬಲ ಕೊಡತಿರಲಿಲ್ಲ. ಹಲವು ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ತೇಲಿಬರುವ ಇಕಿ ಫೋಟೋ, ಪೋಸ್ಟ ತೋರಸತಿದ್ದರು. ಇಡೀ ಸರಕಾರಿ ವ್ಯವಸ್ಥಾ ಬದಲಾಯಿಸಬೇಕು, ಕ್ರಾಂತಿ ಆಗಬೇಕು ಅನ್ನೋ ನಿಲುವು ಕಮ್ಯುನಿಸಂನದು. ಇಕಿ ಬರದ ಕವಿತಾ ಎಲ್ಲ ಅದ ನಿಲುವು ಹೇಳುವವ ಆಗಿದ್ದವು. ಸುಖದ ಸುಪ್ಪತ್ತಿಗಿಯಲ್ಲಿ ಬೆಳೆದಾಕಿಗೆ ಇವು ಶೋಭಿಸುದಿಲ್ಲ.. ಬರೇ ಅದ ಆಗಿರಲಿಲ್ಲ. ವಾರದ ಐದುದಿನ ಕಂಪನಿಯ ತನ್ನ ಪೊಸಿಶನ್‌ ತಕ್ಕಂಗ ದಿರಿಸು ಹಾಕಿಕೊತಿದ್ದಳು. ವೀಕೆಂಡ ಬಂದರ ಸಾಕು ಹರಿದ ಜೀನ್ಸ, ದೊಗಳೆ ಜುಬ್ಬ ಅಥವಾ ಸಾದಾ ಸೀದಾ ದಿರಿಸು ಹೀಗೆ. ಅನಸೂಯಾಳ ಒಡವೆ ಬಂಗಾರ ಸಾಕಷ್ಟಿದ್ದವು. ಆದರ ಇಕಿ ಒಂದು ಸಲಾನೂ ಅವುಗಳ ಕಡಿ ನೋಡತಿರಲಿಲ್ಲ.ಅಂತಹ ಯಾವ ಶೌಕಿನೂ ನಂಗಿಲ್ಲಇದು ಅವಳ ವಾದ.

ಮದುವಿ ಪ್ರಸ್ತಾಪ ಅನೇಕ ಬರತಿದ್ದವು. ಅಮೇರಿಕಾದಲ್ಲಿ ಕೆಲಸಕ್ಕಿರುವವರ ಪ್ರಪೋಸಲ್‌ ಆರಿಸಿ ಇಕಿಗೆ ತೋರಿಸಿದೆ. ಮದುವಿಯಾಗಿ ಅಮೇರಿಕಕ್ಕ ಹೋದರ ಎಲ್ಲಾ ಅಮಲೂ ತಲಿಯಿಂದ ಹೋಗತದ ಅನಿಸಿತ್ತು.“ಅಪ್ಪ ಮೊದಲ ಹೇಳತೇನಿ ನೀ ನನ್ನ ಮದುವಿ ಬಗ್ಗೆ ತಲಿಕೆಡಿಸಿಕೊಬ್ಯಾಡ. ಮ್ಯಾರೇಜ ವಿಲ್‌ ಹ್ಯಾಪನ್‌ ಆನ ಮೈ ಟರ್ಮ್ಸ. ನನಗ ಬೇಕು ಅನಿಸಿದಾಗ ಹೇಳತೇನಿ. ಈಗ ಗಡಿಬಿಡಿ ಇಲ್ಲ..ಮಾಡುವ ಕೆಲಸ ಬಹಳ ಅವ ಇನ್ನೂ..”

“ಅಂದರ ಹೆಂಗ ನನಗೂ ವಯಸ್ಸಾದವು. ಒಳ್ಳೆ ಪ್ರಪೋಸಲ್‌ ಇವು ಬೇಕಾದರ ಹುಡುಗನ್ನ ಮೀಟ ಮಾಡು ಮಾತಾಡು ನೀ ಒಪ್ಪತಿ ಅನ್ನುವ ಖಾತರಿ ಅದ ನಂಗ “ ಪುಸಲಾಯಿಸಿದ್ದೆ. ನನ್ನ ಜುಲ್ಮಿಗೆ ಎಂಬಂತೆ ಒಂದೆರಡು ಹುಡುಗರನ್ನ ಕಾಫಿ ಡೇದಲ್ಲಿ ಭೆಟ್ಟಿಯಾಗಿದ್ದಳು. ನನ್ನ ಖುಷಿ ಬಹಳ ದಿನ ಇರಲಿಲ್ಲ. ವರನ ಮನೆಯವರು ಫೋನಮಾಡಿ ಝಾಡಿಸಿದರು. “ ನಿಮ್ಮ ಮಗಳ ವಿಚಾರಸರಣಿ ಒಂದ ನಮೂನಿ ನಕ್ಸಲರದು ನಮಗ ಸೂಟ ಆಗೋದಿಲ್ಲ “ ಅಂತ. ಇಕಿಗೆ ಯಾಕ ಹಿಂಗ ಅಂತ ಕೇಳಿದೆ.

“ಅಪ್ಪ ನನ್ನ ವಿಚಾರ, ನಿಲುವುಗಳೂ ಮುಖ್ಯ ಅವ. ಅವಕ್ಕ ಹೊಂದುವಂಗ ಹುಡುಗ ಇರಬೇಕು. ಜಸ್ಟ ಮದುವಿ ಸಲುವಾಗಿ ನಾ ನನ್ನ ನಿಲುವುಗಳ ಬಲಿ ಹಾಕುವುದಿಲ್ಲ.. ಅದಕ್ಕ ಮೊದಲ ಹೇಳಿದ್ದೆ ಮದುವಿ ಆಗೋದು ಎಲ್ಲ ಸರಿ ಇದ್ದಾಗ ಮಾತ್ರ.. ಇನ್ನ ಮುಂದ ನೀ ತಲಿಕೆಡಿಸಿಕೊಳ್ಳುವುದಿಲ್ಲ ಅನ್ನುವ ಖಾತ್ರಿ ಅದ ನಂಗ..” ಅವಳು ಬರೆಯುವ ಕವಿತೆಗಳಿಗಿಂತ ಅವಳ ಮಾತು ಖಾರದವು.

ನಾ ಏನೂ ಸಾಚಾ ಅಲ್ಲ. ಹೌದು ಮಾಡುವ ಕೆಲಸ ಅಂತಹದ್ದು. ಬ್ಯಾಡ ಅನ್ನುವಂಗ ಇಲ್ಲ ದುಡ್ಡಿನ ಸುರಿಮಳಿ. ಯೌವ್ವನದ ಶಕ್ತಿ ಕಳದು ಹೋಗಬಾರದು ಈ ಕಾಳಜಿ ಬ್ಯಾರೆ. ಎಸ್ಕಾರ್ಟ ಏಜೆನ್ಸಿಯವರು ಅಭಿರುಚಿಗೆ ತಕ್ಕಂಗ ಹೊಂದಿಸಿಕೊಡತಿದ್ದರು. ಅಗದಿ ಕಾಲೇಜು ಕಲಿಯುವ ಹುಡುಗಿಯರು. ವರ್ಷಕ್ಕೊಮ್ಮೆ ಬ್ಯಾಂಕಾಕ ಪ್ರವಾಸ ಬ್ಯಾರೆ. ಇದೆಲ್ಲ ಮಗಳಿಗೆ ಗೊತ್ತಾಗಬಾರದು ಅಂತ ರಗಡ ಖಟಿಪಿಟಿ ಮಾಡತಿದ್ದೆ. ಅಕಿ ಮೂಗು ಶಾರ್ಪ ವಾಸನಿ ಬಡೀತಿತ್ತು. ಮಾತಿನ್ಯಾಗ ಹಂಗಸತಿದ್ದಳು.

ಸಂಜಿ ಯಥಾಪ್ರಕಾರ ಗ್ಲಾಸಿಗೆ ಸ್ಕಾಚ್ ಹಾಕೊಂಡು ಕುಡೀತ ಕೂತಿದ್ದೆ. ಇಕಿ ಬಂದ ಶಬ್ದ ಆತು. ಹಿನ್ನೆಲೆಯಾಗಿ ತೇಲಿ ಬರುವ ಗಜಲಿನ ದನಿ ”ಆಯಿನಾ ಮುಝಸೆ ಮೇರಿ ಪೆಹಲಿ ಸಿ ಸೂರತ ಮಾಂಗೆ..”

“ನಂಗೂ ಒಂದು ಪೆಗ್‌ ತಯಾರ ಮಾಡು..ಫ್ರೆಶ್‌ ಆಗಿ ಬರತೇನಿ “ ಬೇಡಿಕೆಗಿಂತ ಆರ್ಡರ್‌ ಮಾಡಿದಂಗಿತ್ತು ಧ್ವನಿ.

ಅವಳು :

ಇದೇನು ಮೊದಲ ಸಲ ಅಲ್ಲ ಅವನ ಜೊತೆ ಕುಡಿಯೋದು. ಬೇಕೂಂತ ಅನಿಸಿದಾಗ ಜೋಡಿ ಹೋಗಿ ಕೂಡತಿದ್ದೆ. ಅವಂದೇನೂ ತಕರಾರಿರಲಿಲ್ಲ. ಆದರ ಇವತ್ತು ಮುಂಜಾನೆ ಅವ ಅಂದ ಮಾತು ನನ್ನ ಖಾಸಗಿತನದಾಗ ಅವನ ಅತಿಕ್ರಮಣ ಬ್ಯಾಸರ ತರಿಸಿದ್ದವು. ಕೆಲಸದಾಗೂ ಗಮನ ಇರಲಿಲ್ಲ. ದಿನಕ್ಕಿಂತ ಎರಡು ಸಿಗರೇಟು ಜಾಸ್ತಿ ಸೇದಿದ್ದೆ. ಅವ ಪೆಗ್‌ ತಯಾರಿಸಿದ್ದ ನನಗ ಹೆಂಗ ಸೇರತದೋ ಹಂಗ. ಒಂದೆರಡು ಸಿಪ್‌ ಕುಡಿದಾದ ಮ್ಯಾಲೆ ಮಾತಾಡಿದೆ. ಮುಂಜಾನೆಯಿಂದಲೂ ಕಾಡತಿದ್ದ ಸಂಗತಿ ಕಾರಿಕೊಂಡೆ.

“ಅಂದರ ಅಪ್ಪ ನಾನು. ಇದು ತಪ್ಪು ಅಂತ ಹೇಳುವ ಯಾವ ಅಧಿಕಾರನೂ ಇಲ್ಲೇನು ನಂಗ..”

“ಇದು ಹಿಂಗದ ನೋಡು ಮೊದಲಿಂದಲೂ ನಾವಿಬ್ಬರೂ ಬ್ಯಾರೆ ಬ್ಯಾರೆ ದಾರಿ ತುಳದಾವರು. ನಂಗ ನೀ ದೋಷಿ ಅನಸತದ ಹಂಗ ನಿಂಗೂ ನಾ ದೋಷಿ ಅಂತ. ಇರಲಿ..ಒಂದ ಮಾತು ಇನ್ನ ಮುಂದರೆ ನನ್ನ ಖಾಸಗಿ ವಿಷಯದಾಗ ತಲಿ ಹಾಕಬ್ಯಾಡ. ಅಪ್ಪ ಅನ್ನೋದು ಮಮಕಾರದ ವಿಷಯ ಅಧಿಕಾರದ್ದು ಅಲ್ಲ…”

ಅಲ್ಲಿ ಕೂಡುವ ಮನಸ್ಸಾಗಲಿಲ್ಲ. ಎದ್ದೆ. ಮಂದಾಮಾವುಶಿ ಮಾಡಿದ ಅಡಿಗೆ ರುಚಿಕರವಾಗಿತ್ತು. ಅವ ಊಟ ಮಾಡೋದು ತಡ ಇದು ಗೊತ್ತಿದ್ದ ಸಂಗತಿ. ಮಂದಾಮಾವುಶಿ ಎಷ್ಟ ದಿನದಿಂದ ಅಡಿಗಿ ಮಾಡಿ ಬಡಸಕೋತ ಬಂದಾಳ. ರೂಮಿನ್ಯಾಗ ಇಟ್ಟಿದ್ದೆ ಅಕಿ ಕಣ್ಣಿಗೆ ಬೀಳತದ ಅಂತ ಗೊತ್ತಿತ್ತು. ಅಕಿ ಅಪ್ಪಗ ತೋರಸಲಿ ಅಂತನ ಇಟ್ಟಿದ್ದೆ. ರಂಪ ಆತು ಒಂದನಮೂನಿ ನಾಟಕದಂಗ ಮುಂಜಾನೆಯ ವಾದಗಳು. ಬಹಳ ದಿನ ಆಗಿತ್ತು ಅವನೊಡನೆ ಜಗಳ ಆಡದೆ.

ಊಟ ಮುಗಿಸಿ ರೂಮ ಸೇರಿ ಲ್ಯಾಪಟಾಪ ತೆಗೆದೆ. ಅಂದಿನ ಮೇಲಗಳಿಗ ಉತ್ತರಿಸಿ , ನಾ ಮೊನ್ನೆ ಬರೆದ ಕವಿತಾಕ್ಕ ಬಂದ ಕಾಮೆಂಟು ನೋಡಿದೆ..ಅದಾರೋ ಹುಡುಗ ಇನಬಾಕ್ಸಿಗೆ ಬಂದು ಫೋನ ನಂಬರ ಕೇಳಿದ್ದ. ಅವಗ ಬ್ಲಾಕ್‌ ಮಾಡಿ ನಮ್ಮ ಗುಂಪಿನ ವಾಟ್ಸಪ ತೆಗೆದೆ. ಒಂದೆರಡು ಹೊಸ ಕವಿತೆಗಳು ವಿಷಯ ಅದೇ ರಕ್ತ, ಕಾಮ, ಕ್ರಾಂತಿ . ಒಮ್ಮೊಮ್ಮೆ ಅನಸತದ ಈ ಬಂಡಾಯದ ಕತಿ, ಕವಿತೆಗಳಿಂದ ಖರೇನ ಏನರ ಬದಲಾಗೇದ ಏನು ಅಂತ. ಈ ಪ್ರಶ್ನಿ ಫಕೀರಪ್ಪಗ ಕೇಳಿದಾಗ ಅವ ವಿಚಲಿತ ಆಗಿದ್ದ. “ಕ್ರಾಂತಿ ಮ್ಯಾಲ ವಿಶ್ವಾಸ ಇಟ್ಟಾವರು ಮಾತ್ರ ಈ ದಾರಿ ತುಳಿಯಬೇಕು. ಒಂದಿಲ್ಲ ಒಂದಿನ ಸೂರ್ಯ ಹುಟ್ಟತಾನ”

“ಕವಿ ಅಥವಾ ಕತೆಗಾರ ಯಾವಾಗಲೂ ವ್ಯವಸ್ಥಾ ಬಗ್ಗೆ ಪ್ರಶ್ನಿ ಮಾಡಬೇಕು ಅದನ್ನ ವಿರೋಧಿಸಿ ಬರೀಬೇಕು ಅದು ಮಾತ್ರ ಕಥಿ ಉಳದೆಲ್ಲವು ಬೂಟಾಟಿಕೆ” ಫಕೀರಪ್ಪ ಮಾತಾಡುವಾಗ ಕೇಳಕೋತ ಇರಬೇಕು ಅನಸತದ. ಅವ ನಡಸುವ ಸಂಘಟನಾಕ್ಕ ನಾ ಡೊನೇಶನ ಕೊಡತಿದ್ದೆ. ಅಪ್ಪನ ಕ್ಲಬ್ಬಿಗೆ ಕೊಟ್ಟರ ೮೦ಜಿ ಒಳಗ ರಿಯಾಯಿತಿ ಸಿಗತಿತ್ತು ಖರೆ. ಆದರ ಮತ್ತ ಅವಗ ಸಲಾಮ ಹೊಡೀಬೇಕಲ್ಲ. ಅದು ಬ್ಯಾಡ ಅನಿಸಿತ್ತು.

ಸಣ್ಣಾಕಿದ್ದಾಗ ಸೂಟಿಯೊಳಗ ಅಜ್ಜಿಮನಿಗೆ ಹೋಗುವ ರೂಢಿ. ಅಂಗಳದಾಗ ಕೂಡಿಸಿಕೊಂಡು ತಲಿಗೆ ಎಣ್ಣಿ ಹಚ್ಚುತ್ತ ಅಜ್ಜಿ ಹೇಳಾಕಿ…”ನಿಮ್ಮಪ್ಪನ ವಾಂಛಾದಿಂದ ನನ್ನ ಮಗಳನ್ನ ಕಳಕೊಂಡೆ. ಡಾಕ್ಟರು ಖಂಡತುಂಡವಾಗಿ ಹೇಳಿದ್ದರು ದೇಸಾಯರ ಇನ್ನ ಮುಂದ ಬಸರಾದರ ಅಕಿ ಜೀವಕ್ಕ ಧೋಖಾ ಅದ ಅಂತ. ಆದರ ಹೊಲಸು ಆಶಾ ನಿಮ್ಮಪ್ಪಗ”

ಅಜ್ಜಿದು ಬರೇ ಛಾಡದ ಮಾತು ಅಲ್ಲ. ಅಪ್ಪ ಇದ್ದಿದ್ದು ಹಂಗ. ಐದುವರ್ಷ ಅಂತ ನನಗ; ಅಂಗಳದಾಗ ಅವ್ವಗ ಮಲಗಿಸಿದ್ದರು. ಹೊಸಾ ಸೀರಿ , ತಲಿಗೆ ಮಾಲಿ, ಅರಿಷಿಣ ಕುಂಕುಮ. ನಮಸ್ಕಾರ ಮಾಡು ಅಂತ ಮಾಮಾ ಕೈ ಹಿಡದು ಕರಕೊಂಡು ಹೋಗಿದ್ದ. ಅಂಗಳದ ಮೂಲಿಯೊಳಗ ಅಪ್ಪ ನಿಂತಿದ್ದ. ಆ ಕ್ಷಣಕ್ಕ ಇವ ಕೆಟ್ಟಾಂವ, ಕೊಲೆಗಾರ ಅಂತ ಅನಿಸಿರಲಿಲ್ಲ. ಮರುಮದುವಿ ಆಗುವ ಎಲ್ಲ ಅವಕಾಶ ಅವನಿಗಿದ್ದವು. ಯಾಕೋ ಅವ ಮನಸ್ಸು ಮಾಡಿರಲಿಲ್ಲ. ನನಗನಸತದ ಅವ್ವಳ ಸಾವು ಅವನೊಳಗ ಒಂದು ಅಪರಾಧಿ ಭಾವ ಕಾಯಂ ಆಗಿ ಮೂಡಿಸಿತ್ತೋ ಏನೋ..ಹಂಗಂತ ಅವ ಬ್ರಹ್ಮಚರ್ಯ ಏನು ಪಾಲಸಲಿಲ್ಲ. ನಾ ಮದುವ್ಯಾಗಿ ಅಮೇರಿಕಾಕ್ಕ ಹೋಗಲಿ ಇದು ಅವನ ಆಶಯ. ಅವ ತಂದ ಪ್ರಸ್ತಾಪ ನಾ ತಿರಸ್ಕಾರ ಮಾಡತಿದ್ದೆ. ಒಂದನಮೂನಿ ಖುಶಿ ಅನಸತಿತ್ತು.

ಅವತ್ತು ಕೌನ್ಸಿಲರ ಹೇಳಿದಂಗ ನನಗ ಅವನ ಮ್ಯಾಲಿನ ದ್ವೇಷದ ಭಾವನಾ ವಿಪರೀತ ಅದ. ತಿದ್ದಿಕೋ ಅಂತ ಉಪದೇಶ ಮಾಡಿದ್ದಳು. ಹೋಗಿ ಬಂದಾದ ಮೇಲೆ ವಿಚಾರಮಾಡಿದೆ. ನಮ್ಮ ದುಡ್ಡು ಕೊಟ್ಟು ಅದೇನೋ ಉಪದೇಶ ಕೇಳಿಸಿಕೊಂಡು ಸಮಾಧಾನದ ಭ್ರಮೆಯಲ್ಲಿ ಇರೋದು ಸರೀನೆ..ಅಂತ. ಇಂತಹ ದ್ವಂದ್ವದ ಸನ್ನಿವೇಶದಲ್ಲಿಯೇ ಫಕೀರಪ್ಪ ಆತ್ಮೀಯ ಅನಸತಿದ್ದ.

“ಅಸಲು ಈ ಮದವಿ ಅನ್ನೋದು ಒಂದು ಬೂಜ್ವಾ ಸಂಗತಿ. ಅದ ಪರಮ ಸತ್ಯ ಅಂತ ತಿಳದು ಒದ್ದಾಡೂ ಮಂದಿ ನೋಡಿ ನಗುಬರತದ. ಯಾಕ ಮನಷಾ ಬಂಧನಕ್ಕ ಒಳಗಾಗತಾನ ಅದೂ ತಾನ ಇಷ್ಟಾಪಟ್ಟು..” ಕ್ರಿಯೆ ಮುಗಿದಾದ ಮೇಲೆ ಸಿಗರೇಟು ಹಚ್ಚುತ್ತ ಫಕೀರಪ್ಪ ಹೇಳತಿದ್ದ. ಅರ್ಧತಾಸಿನ ಮೊದಲು ನಮ್ಮಿಬ್ಬರ ದೇಹದ ತುಂಬ ಹರದಾಡಿದ ಹಸಿವಿ ಎಲ್ಲ ಶಮನವಾಗಿ ಬೆತ್ತಲೆಯನ್ನು ಚಾದರದೊಳಗ ಮುಚ್ಚಿಕೊಂಡು ಕೇಳುತ್ತಿದ್ದೆ.. ಹಂಗಂತ ಫಕೀರಪ್ಪನ ಎಲ್ಲ ಮಾತುಗಳಿಗೆ ನಾ ದಾಸಳಾಗಿದ್ದೆ ಅಂತಲ್ಲ ಆದರೂ ಅವನ ಮಾತು ಕೇಳಲು ಖುಷಿ. ನನ್ನ ಸುತ್ತ ಜಾದೂಬಲಿ ಹೆಣದಿದ್ದ.

ಆದರ ಭ್ರಮಾನಿರಸನ ಆಗಲಿಕ್ಕೆ ಬಹಳ ಹೊತ್ತು ಆಗಲಿಲ್ಲ. ಬಹುಶಃ ಅವಗ ನಾ ಬ್ಯಾಸರಾಗಿದ್ದೆ..ಬ್ಯಾರೆಯಾಕಿಯ ಜೋಡಿ ಇದ್ದಾನ ಅಂತ ಮಾತು ಕೇಳಿಬಂದವು. ಬಹಳ ವಿಚಾರ ಮಾಡಿದೆ. ಅವನ ಹೇಳುವಂಗ ಬಂಧನ ಇರಬಾರದು ಖರೆ ಅನಸತು. ನಮ್ಮ ಸಂಘಟನಾದಾಗಿನ ಹೊಸಾ ಹುಡುಗ ಕಣ್ಣಿಗೆ ಬಿದ್ದ. ಕುಪ್ಪಳ್ಳಿಯೊಳಗ ಸಮಾರಂಭ ಇತ್ತು. ಸಂಜಿಮುಂದ ದಿಬ್ಬ ಏರಿ ಕುಳತು ಹಾಡುವ ಹುಡುಗ ಕಾಡಿದ. ಬೇಕು ಅನಿಸಿತ್ತು ಅವಗ ಪುಸಲಾಯಿಸಿ ಕರಕೊಂಡು ಹೋಗಿದ್ದೆ. ವಾಪಸ ಬಂದಾಗ ಇಡೀ ಕ್ಯಾಂಪ ತುಂಬ ಗುಸುಗುಸು. ಫಕೀರಪ್ಪ ಸಿಟ್ಟಿಗೆದ್ದಿದ್ದ. ಆ ಹುಡುಗನ ಇದಕ್ಕ ಕಾರಣ ಅಂತ ಅವನ ವಾದ. ಆ ಹುಡುಗ ಅಳಕೋತ ನಿಂತಾಗ ನಾನ ಮುಂದಹೋಗಿ ಅಲ್ಲಗಳೆದೆ. ಇದು ಫಕೀರಪ್ಪಗ ಶಾಕ್‌ ಆತು. ಚೀರಾಡಿದ. ನಾ ಶಾಂತವಾಗಿ ಹೇಳಿದೆ; ಅವ ಹೇಳತಿದ್ದ ಸಮಾನತೆಯ ಪಾಠ ನೆನಪಿಸಿದೆ. ಅವ ದಂಗಾದ.

ಇದು ನಡೆದು ಎರಡು ತಿಂಗಳು. ನಾ ಫೋನ ಮಾಡಿದಾಗ ಅವ ಉತ್ತರ ಕೊಡುತ್ತಿರಲಿಲ್ಲ. ನನಗ ಅವಾಯ್ಡ ಮಾಡತಾನ ಅಂತ ಗೊತ್ತಾಗಿ ನಾನೂ ಸುಮ್ಮನಾದೆ. ನನ್ನ ಬಗ್ಗೆ ಬೇರೆಯವರ ಮುಂದ ಆಡಿಕೋತಾನ ಅಂತಾನೂ ತಿಳೀತು. ಅವನ ಲೆವೆಲ್‌ ಅಷ್ಟ ಅಂತ ತಿಳದೆ. ಈ ಗಂಡಸೂರದು ಒಂದು ವಿಚಿತ್ರ ಫಿಲಾಸಫಿ. ಹೆಣ್ಣು ಯಾವಾಗಲೂ ತಮಗ ಅಡಿಯಾಳಾಗಿ ಇರಬೇಕು ಅದರೊಳಗ ಈ ಬಲ ಅಥವಾ ಎಡ ಪಂಥದ ಫರಕಿಲ್ಲ. ಎಲ್ಲಾರೂ ಅವರ. ಈಗೀಗ ಸಂಘಟನಾದ ಕೆಲಸದಲ್ಲಿ ಸಹ ಆಸಕ್ತಿ ಇಲ್ಲ.

ಅಪ್ಪ ಹೇಳಿದಂಗ ಯಾವುದರೆ ಹುಡುಗನ್ನ ಒಪ್ಪಿಕೊಂಡು ಅಮೆರಿಕಾ ಸೇರಿಬಿಡಲೇ; ಏನೂ ತಿಳಿಯದ ಸ್ಥಿತಿ.

ಈ ಬದುಕಿನ ಕನ್ನಡಿ ಒಡದು ಹೋದಾಗ ಮೂಡುವ ಬಿಂಬಗಳು ಸಹ ಒಡಕಲಾಗಿರುತ್ತವೆ.