- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಬಿರುಗಾಳಿ ಬೀಸಿದರೂ
ಆರದಂಥ ದೀಪ
ಉರಿಯಲೇ ಬೇಕು
ತಾನಳಿದರೂ ಕತ್ತಲನು
ದೂರವಾಗಿಸಲು
ಬೆಳಗಲೇ ಬೇಕು
ಒಂದೊಂದು ನಾಡಿ
ಮಿಡಿತವನಾಲಿಸಿ ತಾಳ ತಪ್ಪದಂತೆ
ನೋಡಲೇ ಬೇಕು
ಲಯವಾಗುತಿರುವ ಉಸಿರುಗಳ
ತಡಕಾಡಿ ಹುಡುಕಿ
ಮೇಲಕೆ ತರಲೇ ಬೇಕು
ಲಯ ತಪ್ಪಿದ ಉಸಿರುಗಳಲಿ
ಶಕ್ತಿಯನೂದಿ ಜೀವನದ ಮಾಲೆ
ಮತ್ತೆ ಪೋಣಿಸಲೇ ಬೇಕು
ನೊಂದ ಬೆಂದ ಹೃದಯಗಳ
ತಳಮಳವ ಶಾಂತಿಸಲು
ಒಲವಿನ ತೊರೆಯು ಹರಿಸಲೇಬೇಕು
ಜುಳು ಜುಳು ಧಾರೆ ಸುರಿದು
ಕಮರಿ ಬಾಡಿದ ಮೇಲೆ
ಅರಳುವದೆ ಬಾಳು?
ಗಳಿಗೆ ಗಳಿಗೆಗಳ
ಕಾಳಿನ ಸುಗ್ಗಿ ಮಾಡಿ
ಕುಗ್ಗಿದ ಜೀವನದ ಗಾತ್ರವ ಹಿಗ್ಗಿಸಲೇಬೇಕು !
** *** **
ಕೊರೋನಾ ರೋಗದಿಂದ ಬಳಲುತ್ತಿದ್ದವರ ಪ್ರಾಣಗಳನ್ನು ಉಳಿಸಲು ತಮ್ಮ ಪ್ರಾಣಗಳನ್ನೇ ಪಣವಾಗಿಟ್ಟು ಸೇವೆಗೈದ ಡಾಕ್ಟರುಗಳು, ನರ್ಸ್ ಗಳು ಆಶಾ ಕಾರ್ಯಕರ್ತರು, ಇನ್ನೂ ಅನೇಕ ಆರೋಗ್ಯಕರ್ಮಿಗಳ ಬಗ್ಗೆ ಸ್ಮರಿಸಿಕೊಂಡಾಗ ಹಾಗೂ ಅವರ ತ್ಯಾಗ- ಬಲಿದಾನಗಳ ಕುರಿತು ಆಲೋಚಿಸಿದಾಗ ಕಣ್ಣುಗಳು ತೇವಗೊಂಡು ಮೇಲಿನ ಸಾಲುಗಳು ನಭೋಮಾನಸದಿಂದ ಇಳಿದವು.
ಕೊರೋನಾ ಜೊತೆ ಸಮರದಲ್ಲಿ ಸುಮಾರು ೭೩೦ ಡಾಕ್ಟರುಗಳು ( ವೈದ್ಯರು) ಇತ್ತೀಚಿನ ೨ನೇ ಅಲೆಯ ಹಾವಳಿಯಲ್ಲಿ ಹತರಾದರೆಂದು ಐ. ಎಮ್. ಎ. ವರದಿ ಮಾಡಿದೆ. ಎಷ್ಟೋ ನರ್ಸ್ ಗಳು, ಆರೋಗ್ಯಕರ್ಮಿಗಳು ಈ ಸಮರದಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ (೨೦೦ ಕ್ಕೂ ಮೇಲೆ). ಅಂಕಿ ಸಂಖ್ಯೆಗಳು ಇಲ್ಲಿ ಅಮುಖ್ಯ; ಒಂದೊಂದು ಜೀವವೂ ಬೆಲೆಬಾಳುವಂಥದು. ಅವರನ್ನು ಕಳೆದುಕೊಂಡ ಪರಿವಾರದ ಜನರ ನೋವನ್ನು ಮರೆಸಲು ಸಾಧ್ಯವೇ? ಕೋಟಿ ಕೈಗಳಿಂದಲೂ ಅವರ ಕಂಬನಿಗಳನ್ನು ಒರೆಸಲು ಸಾಧ್ಯವಾಗದ ಮಾತು. ಅವರ ತ್ಯಾಗ-ಬಲಿದಾನಗಳ ಬಗ್ಗೆ ಹಗುರವಾಗಿ, ಲಘುವಾಗಿ ಮಾತನಾಡುವದು ಸರಿಯಲ್ಲ.
ಅಂತರ್ ರಾಷ್ಟೀಯ ದಾದಿಯರ ( ನರ್ಸ್ – ಸಿಸ್ಟರ್ ಗಳ) ದಿನಾಚರಣೆ ಪ್ರತಿ ವರ್ಷ ಮೇ ೧೨ ರಂದು ( ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನ) ಆಚರಿಸಲಾಗುತ್ತದೆ. ಕಳೆದ ಮೇ ೧೨ ರಂದು ನಮ್ಮ ಗುಂಪಿನ ಸದಸ್ಯರು ದಾದಿಯರು ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸುತ್ತ ತಮ್ಮ ಭಾವನೆಗಳನ್ನು ಕವನಗಳ ಮೂಲಕ ವ್ಯಕ್ತಪಡಿಸಿದರು.
ದೀಪ ಹೊತ್ತ ಮಹಿಳೆ
( ದ್ ಲೇಡಿ ವಿತ್ ದ್ ಲ್ಯಾಂಪ್)
ಎಂದೇ ಪ್ರಸಿದ್ಧರಾದ ಫ್ಲಾರೆನ್ಸ್ ನೈಟಿಂಗೇಲ್ ಅವರು ಜನಿಸಿದ್ದು ಫ್ಲಾರೆನ್ಸ್, ಇಟಲಿಯಲ್ಲಿ. ಅವರು ಸ್ಥಿತಿವಂತರ ಮನೆಯಲ್ಲಿ ಹುಟ್ಟಿದ್ದರೂ ಅವರು ತಮ್ಮ ಕುಟುಂಬದವರ ಮಾತನ್ನು ಕಡೆಗಣಿಸಿ ಅವರ ಇಚ್ಛೆಯ ವಿರುದ್ಧ ನರ್ಸ್ ಸೇವೆಯನ್ನು ತಮ್ಮ ಬಾಳಿನ ದೀಕ್ಷೆಯಾಗಿ ಆಯ್ಕೆ ಮಾಡಿಕೊಂಡರು. ಈ ನಿರ್ಣಯ ಅವರನ್ನು ತಮ್ಮ ಮನೆಯವರಿಂದ ದೂರ ಮಾಡಿತು. ಆಸ್ಪತ್ರೆಯ ಶುಚಿತ್ವ ಹಾಗೂ ಶುಭ್ರತೆಯ ಕ್ಷೇತ್ರಗಳ ಬಗ್ಗೆ ಬಹಳಷ್ಟು ಶ್ರಮಿಸಿ ಅದಕ್ಕಾಗಿ ಮಾನದಂಡಗಳನ್ನು ಹಾಕಿ ಕೊಡಲು ಅವರು ಕಾರಕರಾಗಿದ್ದಾರೆ. ಕ್ರೀಮಿಯಾ ಯುದ್ಧದಲ್ಲಿ ಗಾಯಾಳು ಸೈನಿಕರ ಶುಶ್ರೂಷೆಯನ್ನು ಶ್ರದ್ಧೆಯಿಂದ ಮಾಡಿ ರೋಗಿಗಳನ್ನು ಪ್ರೀತಿಯಿಂದ ಆರೈಕೆ ಮಾಡಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಮಾಡಿ
“ ದಾದಿ” ಕಾರ್ಯಕ್ಕೆ ಒಂದು ಹೊಸ ಗೌರವವನ್ನು ತಂದುಕೊಟ್ಟ ಖ್ಯಾತಿ ನೈಟಿಂಗೇಲ್ ಅವರಿಗೆ ಸಲ್ಲುತ್ತದೆ.
ಒಳ್ಳೆಯ ಬರಹಗಾರರಾಗಿದ್ದ ನೈಟಿಂಗೇಲ್ ಅವರು ಜನಸಾಮಾನ್ಯರಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಗಳ ಬಗ್ಗೆ ಜಾಗೃತಿ ಮೂಡಿಸಲು ಬಹಳಷ್ಟು ಪುಸ್ತಕಗಳನ್ನು ರಚಿಸಿದ್ದಾರೆ. ನರ್ಸಿಂಗ್ ಕ್ಷೇತ್ರದ ರೂವಾರಿಯಾದ ನೈಟಿಂಗೇಲ್, ಈ ಪಾತ್ರವನ್ನು ನಿರ್ವಹಿಸುವ ನಿಟ್ಟಿನಲ್ಲಿ,
೧೮೬೦ ರಲ್ಲಿ, ವೃತ್ತಿಪರವಾಗಿ, ಲಂಡನ್ ನಗರದ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ನರ‍್ಸಿಂಗ್ ಶಾಲೆಯನ್ನು ಸ್ಥಾಪಿಸಿದರು. ಜಗತ್ತಿನ ಪ್ರಪ್ರಥಮ ನರ‍್ಸಿಂಗ್ ಶಾಲೆಯಾಗಿ ರೂಪುಗೊಂಡ ಈ ಸಂಸ್ಥೆ ಈಗ ಕಿಂಗ್ಸ್ ಕಾಲೇಜ್ ಲಂಡನ್ ನ ಅವಿಭಾಜ್ಯ ಅಂಗ.
ನರ‍್ಸಿಂಗ್ ಕ್ಷೇತ್ರದಲ್ಲಿ ಮಾಡಿದ ಅವರ ಅಗ್ರಗಾಮಿ ಸೇವೆಯನ್ನು ಗುರ್ತಿಸಿ
ಅವರ ಹೆಸರಿನಲ್ಲಿ ಎಲ್ಲ ನರ್ಸ್ ಗಳು ತಮ್ಮ ತರಬೇತಿ ಮುಗಿಸಿ ದಾದಿಯ ವೃತ್ತಿಗೆ ಕಾಲಿಡುವ ಮುನ್ನ
“ ನೈಟಿಂಗೇಲ್ ಶಪಥ( ನೈಟಿಂಗೇಲ್ ಪ್ಲೆಡ್ಜ್) ಸ್ವೀಕರಿಸುತ್ತಾರೆ.
( ಇದು ಡಾಕ್ಟರ್ ಗಳು ತಮ್ಮ ವಿದ್ಯಾಭ್ಯಾಸ ಮುಗಿದ ಮೇಲೆ ವೈದ್ಯಕೀಯ ವೃತ್ತಿಯನ್ನು ಆರಂಭಿಸುವ ಮುನ್ನ ಹಿಪ್ಪೊಕ್ರಾಟಿಸ್ ಓತ್ ತೆಗೆದುಕೊಂಡಂತೆ) .
ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪದಕವನ್ನು ಪ್ರತಿ ವರ್ಷ ಈ ಕ್ಷೇತ್ರದಲ್ಲಿ ಸಲ್ಲಿಸಿದ ಅಪೂರ್ವ ಸೇವೆಯನ್ನು ಸಲ್ಲಿಸಿದ ದಾದಿಯನ್ನು ( ನರ್ಸ್- ಸಿಸ್ಟರ್) ನ್ನು ಗುರ್ತಿಸಿ, ಈ ವಿಶ್ವ ಮಟ್ಟದ ಗೌರವವನ್ನು ಅವರಿಗೆ ನೀಡಲಾಗುತ್ತದೆ. ಇಂದಿಗೂ ಅದೇ ಪರಂಪರೆಯಲ್ಲಿ ಸಾಗಿ ಬರುತ್ತಿದ್ದ ಈ ಕ್ಷೇತ್ರದಲ್ಲಿ ಅಸಂಖ್ಯಾತ್ ಸಿಸ್ಟರ್ಸ್ ( ನರ್ಸ್ ವೃತ್ತಿಯಲ್ಲಿ ತೊಡಗಿಕೊಂಡಿರುವವರನ್ನು ಅವರು ತೋರುವ ಮಮತೆಯ ದ್ಯೋತಕವಾಗಿ ಈ ಹೆಸರಿನಿಂದ ಅವರನ್ನು ಸಂಬೋಧಿಸುವ ವಾಡಿಕೆ ಮೊದಲಿನಿಂದಲೂ ಬಂದಿದೆ) ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಮನೆಯವರೂ ಮಾಡಲು ಹಿಂಜರಿಯುವ ಕೆಲಸ-ಕಾರ್ಯಗಳನ್ನು ಅವರು ಹಿಂದೆ ಮುಂದೆ ನೋಡದೆ, ಹೇಸದೆ ರೋಗಿಗಳ ಶುಶ್ರೂಷೆ ಮಾಡುವದನ್ನು ನೋಡಿದಾಗ ಶ್ವೇತ ಪೋಷಾಕುಗಳನ್ನು ಧರಿಸಿದ ಅವರಲ್ಲಿ ನಾವು ಕಾಣುವದು ಅಷ್ಟೇ ಪರಿಶುಭ್ರವಾದ ಮನವನ್ನು. ಎಂತಹ ನಿರಾಶಾದಾಯಕ ವಾತಾವರಣದಲ್ಲಿಯೂ ನಮ್ಮಲ್ಲಿ ಆಶೆಯ ಕಿರಣವನ್ನು ಬೆಳಗುವ ದೇವತೆಗಳಂತೆ ಅವರು ಕಾಣುತ್ತಾರೆ.
ಇತ್ತೀಚೆಗೆ ಕೊರೋನಾದ ಎರಡನೆಯ ಅಲೆ ಆಕ್ರಮಿಸಿ ಬಹಳ ಜನರು ಬಳಲಿ ತತ್ತರಿಸುತ್ತಿರುವಾಗ ವೈದ್ಯಕೀಯ ವ್ಯವಸ್ಥೆಯ ಮೇಲೆ ಬಹಳ ಒತ್ತಡ ಬಿದ್ದದ್ದು ನಮಗೆಲ್ಲ ತಿಳಿದ ವಿಷಯವೇ. ಅಂತಹ ದುರ್ಗಮ ಪರಿಸ್ಥಿತಿಯಲ್ಲೂ ಡಾಕ್ಟರುಗಳು, ಸಿಸ್ಟರ್ಸ್ ಮತ್ತು ಇತರ ಆರೋಗ್ಯಕರ್ಮಿಗಳು ತೋರಿದ ಸಂಯಮ, ಶ್ರದ್ಧೆ ಅಭೂತಪೂರ್ವವಾದದ್ದು. ತಮ್ಮ ಮನೆ, ಮಕ್ಕಳು ಎಲ್ಲವನ್ನೂ ಮರೆತು ತಮ್ಮ ನ್ನು ತಾವು ಅಪಾಯಕ್ಕೆ ಒಡ್ಡಿಕೊಂಡು ಗೈದ ಸೇವೆ ಅಮೋಘವಾದದ್ದು. ತಮ್ಮ ಮನೆಯವರಿಗೆ ಸಾಂಕ್ರಾಮಿಕ ರೋಗವು ಸೋಂಕುವ ಸಾಧ್ಯತೆಗಳನ್ನು ತಡೆಯಲು ಅವರು ತಮ್ಮ ಹಗಲು- ರಾತ್ರಿಗಳನ್ನು ಆಸ್ಪತ್ರೆಗಳಲ್ಲಿಯೇ ಕಳೆದದ್ದು ಉಂಟು. ನಾನು ಈಗಾಗಲೇ ಹೇಳಿದಂತೆ, ಎಷ್ಟೋ ವೈದ್ಯರು, ನರ್ಸ್ ಗಳು, ಆರೋಗ್ಯ ಕರ್ಮಿಗಳು ಕೊರೋನಾ ರೋಗಿಗಳ ಶುಶ್ರೂಷೆ ಮಾಡುತ್ತಾ ತಮ್ಮ ಪ್ರಾಣಗಳನ್ನೇ ಕಳೆದುಕೊಂಡದ್ದಿದೆ. ಅವರಿಗೆ ನಮ್ಮ ಸಹಸ್ರಾರು ನಮನಗಳು.
ಇಂತಹ ಅಪಾರ ಸೇವೆಯನ್ನು ಸಲ್ಲಿಸುತ್ತಿರುವ ಇವರ ಮನೆಗಳಲ್ಲಿ ದುಃಖದ ಸಂಗತಿಗಳು ಇಲ್ಲವೆಂದೇನಿಲ್ಲ. ಅಥವಾ, ಅವರ ಮನೆಗಳಲ್ಲಿ ಆಘಾತಕರವಾದ ಘಟನೆಗಳೂ ಸಂಭವಿಸಿದ್ದಿರಲೂ ಬಹುದು. ಆದರೆ, ಅದ್ಯಾವುದೂ ಅವರನ್ನು ಧೃತಿಗೆಡಿಸಲಿಲ್ಲ. ಅಷ್ಟೇ ಅಲ್ಲ, ಅಂತಹ ಆಘಾತಕರವಾದ, ದುಃಖದಾಯಕವಾದ ವೈಯಕ್ತಿಕ ವಿಷಯಗಳಿಂದ ಅವರ ಮನಗಳು ಮರಗಟ್ಟಲಿಲ್ಲ, ಬಾಳಿನ ಬಗ್ಗೆ ಜಿಗುಪ್ಸೆ ತಾಳುವಂತೆ ಮಾಡಿ ತಾವು ಬದುಕಿಸಲು ಹೆಣಗುತ್ತಿರುವ ರೋಗಿಗಳ ಜೀವಗಳ ಬಗ್ಗೆ ಲಘುವಾದ ಭಾವನೆಯನ್ನು ತಾಳುವಂತೆ ಮಾಡಲಿಲ್ಲ; ರೋಗಿಗಳ ಸಂರಕ್ಷಣೆಯೇ ತಮ್ಮ ಮೂಲ ಉದ್ದೇಶವೆಂದು ಅರಿತ ಅವರ ಏಕಾಗ್ರತೆಯನ್ನು ಕದಡಿ ಅವರನ್ನು ಅನ್ಯ ಮನಸ್ಕರಾಗುವಂತೆ ಮಾಡಲು ವಿಫಲವಾದವು, ಅವರು ವೈಯಕ್ತಿಕ ನೆಲೆಯಲ್ಲಿ ಅನುಭವಿಸಿದ ದುಗುಡ –ದುಮ್ಮಾನಗಳು.
“ ಇನ್ನು ನನ್ನನ್ನು ಯಾವ ದುಃಖದ ವಾರ್ತೆಯೂ ಅಲ್ಲಾಡಿಸಲು ಶಕ್ಯವಿಲ್ಲಾ, ನಾನು ಜೀವನದಲ್ಲಿ ಪಡಬಾರದ ಪಾಡುಗಳನ್ನು ಪಟ್ಟಿದ್ದೇನೆ, ಯಾವುದೂ ನನ್ನ ಮನವನ್ನು ಕಲುಕಲಾರವು”
ಎಂದು ಅನ್ನುತ್ತಿದ್ದರು ನನ್ನ ಮಿತ್ರರೊಬ್ಬರು. ಅವರ ಈ ಮಾತು ಅತೀವ ವೇದನೆಯಿಂದ ಹುಟ್ಟಿದ್ದು ಎಂದು ನಾನು ಬಲ್ಲೆ, ಅವರ ಮನವು ಮರಗಟ್ಟಿ ಈ ಮಾತು ಹೊಮ್ಮಿದ್ದಲ್ಲಾ ಎಂಬುದು ನನಗೆ ಗೊತ್ತಿರುವ ಸಂಗತಿ.
ಮನುಷ್ಯನ ಸಂವೇದನೆ ಎಂದಿಗೂ ಕಲ್ಲಾಗುವದಿಲ್ಲ. ಕಲ್ಲಾದಂತೆ ಭಾಸವಾದರೂ ಅದರಲ್ಲಿ ಮತ್ತೆ ದಯೆ, ಮಮತೆ ಚಿಗುರಿ ಮಾರ್ದವಗೊಳ್ಳುವದು. ಮಾನವನ ಮನವೆಂದರೆ ಅದು ಅನುಕಂಪ, ದಯೆ ಹಾಗೂ ಒಲವಿನ ಆಗರ. ಎಂದಿಗೂ ಬರಿದಾಗದ ಪ್ರೇಮದ ಅಕ್ಷಯ ಪಾತ್ರೆ. ಈ ಭಾವನೆಯೇ ನಮ್ಮಲ್ಲಿಯ ಮಾನವನನ್ನು ಜೀವಂತವಾಗಿರಿಸುವದು.
ಅಗಾಧವಾದ ಒಲವಿನ ಸ್ರೋತದ ಧಾರೆ ನಿರಂತರವಾಗಿ ವೈದ್ಯರು, ನರ್ಸ್ ಗಳು ಹಾಗೂ ಆರೋಗ್ಯ ಕರ್ಮಿಗಳಲ್ಲಿ ಅವ್ಯಾಹತವಾಗಿ ಹರಿಯುವದರಿಂದಲೇ ಅವರು ತದೇಕ ಚಿತ್ತರಾಗಿ ಪ್ರತಿಯೊಬ್ಬರ ಜೀವ ಅಮೂಲ್ಯವೆಂದು ಪರಿಗಣಿಸಿ ಅದನ್ನು ಉಳಿಸಲು ಮಾಡುವ ಪ್ರಯತ್ನಗಳಲ್ಲಿ ಯಾವುದೇ ರೀತಿಯ ಅಸಡ್ಡೆ ಸಂಭವಿಸದಂತೆ ಎಚ್ಚರ ವಹಿಸುವರು. ಎಲ್ಲರೂ ಮರ್ತ್ಯರು, ಸಾವು ಯಾರಿಗೂ ತಪ್ಪಿದ್ದಲ್ಲ ಎಂಬ ತರ್ಕ ಅವರ ಮನಗಳಲ್ಲಿ ಮನೆ ಮಾಡಲು ಬಿಡುವದಿಲ್ಲ.
ಭಗವಾನ್ ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿದಂತೆ, ತಮ್ಮ ವೈದ್ಯ ಧರ್ಮವನ್ನು ಚಾಚೂ ತಪ್ಪದೆ ನಿರ್ವಹಿಸಿ ರೋಗಿಗಳ ಪ್ರಾಣಗಳನ್ನು ಉಳಿಸುವದೇ ಅವರ ಪರಮೋಚ್ಚ ಗುರಿ ಎಂದು ಭಾವಿಸಿ ಸೇವೆಯಲ್ಲಿ ನಿರತರಾಗಿರುವ ಅವರ ಕೈಂಕರ್ಯಕ್ಕೆ ಯಾವುದೂ ಸಾಟಿಯಲ್ಲ. ರೋಗಿಯ ವಯಸ್ಸು ಎಷ್ಟೇ ಇರಲಿ, ರೋಗಿಯ ಪರಿಸ್ಥಿತಿ ಎನೇ ಇರಲಿ, ರೋಗಿ ಸಾವಿನ ದವಡೆಯಲ್ಲಿ ಸಿಕ್ಕಿರಲಿ, ಅವರು ರೋಗಿಯ ಪ್ರಾಣವನ್ನು ಉಳಿಸುವ ತಮ್ಮ ಪ್ರಯತ್ನಗಳನ್ನು ಅಳ್ಳಕೆ ( ನಿಸ್ಸಾರ) ಮಾಡುವದಿಲ್ಲ; ಯಾವ ಗಳಿಗೆಯಲ್ಲೂ ಸೋತು ಕೈಚೆಲ್ಲುವದಿಲ್ಲ, ರೋಗಿಗಳ ಪ್ರಾಣಗಳನ್ನು ಉಳಿಸುವ ಅವರ ಯತ್ನ ಎಡೆಬಿಡದೆ ಸಾಗುತ್ತಲೇ ಇರುತ್ತದೆ.
ಡಾಕ್ಟರ್‌ಗಳಲ್ಲಿ, ನರ್ಸ್ ಗಳಲ್ಲಿ ಇರುವ ಒಲವಿನ ಈ ಅಖಂಡವಾದ ದೀಪದಿಂದಲೇ ಮತ್ತೆ ಬಾಳಿಗೆ ಜೀವನದ ಕಿಡಿ ದೊರೆಯುವದಲ್ಲವೆ!
ಕೊರೋನಾ ಮಹಾಮಾರಿಯನ್ನು ಪರಿಣಾಮಕಾರಿಯಾಗಿ ಎದುರಿಸಲು, ಅದರ ಜೊತೆ ಸಮರದಲ್ಲಿ ವಿಜಯ ಸಾಧಿಸಲು, ವೈದ್ಯರು, ವಿಜ್ಞಾನಿಗಳು ನಿರಂತರವಾಗಿ ಶ್ರಮಿಸಿ ಲಸಿಕೆಯನ್ನು ಅತಿ ಕ್ಷಿಪ್ರ ಸಮಯದಲ್ಲಿ ಕಂಡುಕೊಂಡದ್ದು ಅತಿ ದೊಡ್ಡ ಸಾಧನೆ. ಈ ಸಾಧನೆಯ ಲಾಭ ಎಲ್ಲರೂ ಪಡೆಯುವಂತಾಗಿ ಮಾನವ ಕುಲಕ್ಕೆ ಅಭಿಶಾಪವಾದ ಕೊರೋನಾ ನಿರ್ಮೂಲವಾಗಬೇಕಾದರೆ ಈ ಲಸಿಕೆಯನ್ನು ನಿಸ್ಸಂಕೋಚವಾಗಿ ಎಲ್ಲರೂ ತೆಗೆದುಕೊಳ್ಳಲು ಮುಂದೆ ಬರುವ ಅವಶ್ಯಕತೆ ಇದೆ.
ನಮ್ಮ ಜನರಲ್ಲಿ, ಅದರಲ್ಲೂ ವಿಶೇಷವಾಗಿ ಹಳ್ಳಿ ಜನರಲ್ಲಿ ಲಸಿಕೆಯ ಕುರಿತಾಗಿ ಭಯವಿದೆ, ಒಂದು ರೀತಿಯ ದಿಗಿಲಿದೆ, ಸಂಶಯವಿದೆ, ಅಪನಂಬಿಕೆಯಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿಯ ಅಪಪ್ರಚಾರದಿಂದ, ತಪ್ಪು ಮಾಹಿತಿಗಳಿಂದ ಕೂಡಿದ ವದಂತಿಗಳಿಂದ ಹರಡಿದ ವಿದ್ಯಮಾನ. ಮುಖ್ಯವಾಗಿ ಈ ರೀತಿಯಾಗಿ ಜನರನ್ನು ತಪ್ಪು ದಾರಿಗೆ ಎಳೆಯುವದು ಜನರಿಗೆ ಮತ್ತು ಇಡೀ ಸಮುದಾಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಈ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗದವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಅಗತ್ಯ ಎಷ್ಟಾದರೂ ಇದೆ.
ಲಸಿಕೆಯನ್ನು ಕೊಡಲು ಹೋದ ಆರೋಗ್ಯ ಕರ್ಮಿಗಳ ವಿರುದ್ಧ ಜನರು ವರ್ತಿಸುವದನ್ನು ನೋಡುತ್ತಿದ್ದರೆ, ಜನರಲ್ಲಿ ಇದರ ಬಗ್ಗೆ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸುವ ಕಾಯಕ ಬೆಟ್ಟದಷ್ಟು ಬೃಹತ್ ಆಗಿದೆ. ಮೊದಲು, ಈ ಅಡೆತಡೆಗಳನ್ನು ದಾಟಿ ಲಸಿಕೆಯನ್ನು ತೆಗೆದುಕೊಳ್ಳಲು ಜನರ ಮನವೊಲಿಸುವ ಕಾರ್ಯ ಬೆಟ್ಟ ಅಗೆದಷ್ಟೇ ಕಷ್ಟ. ಆದರೂ ಇದನ್ನೆಲ್ಲ ಸಾಧ್ಯವಾಗಿಸಿ ಕೊರೋನಾ ಸಮರದಲ್ಲಿ ವಿಜಯವನ್ನು ಸಾಧಿಸಬೇಕಾದ ತುರ್ತು ಇಂದಿನ ಸಂದರ್ಭದಲ್ಲಿ ಇರುವುದನ್ನು ಬೇರೆ ಹೇಳಬೇಕಾಗಿಲ್ಲ.
ಆಗಲೇ, ಕೊರೋನ ಹಾವಳಿಯಿಂದಾಗಿ ಮಾನವ ಸಂಬಂಧಗಳಲ್ಲಿ ಎಂದೂ ಕೇಳರಿಯದ ಪಲ್ಲಟಗಳಾಗಿ ಇವುಗಳನ್ನು ಆದಷ್ಟು ಬೇಗ ತಿದ್ದಿ ಜನರು ಮತ್ತೆ ಹತ್ತಿರ ಬರಲು ಮಾನಸಿಕವಾಗಿ ಸಿದ್ಧ ಮಾಡಿ, ಸಾಮಾಜಿಕ ಸೌಹಾರ್ದ -ಪ್ರೀತಿ ನೆಲೆಸವಂತಾಗಲಿ ಎಂಬ ಹೆಬ್ಬಯಕೆ ಎಲ್ಲರಲ್ಲಿ ಇದೆ. ಇದು ಆದಷ್ಟು ಬೇಗನೆ ಈಡೇರಲಿ ಎಂಬುದೇ ನಮ್ಮೆಲ್ಲರ ಆಶಯ.
ಈ ನಿಟ್ಟಿನಲ್ಲಿ, ಲಸಿಕೆ ಔಷಧ- ಉಪಚಾರಗಳ ಪಾತ್ರ ಒಂದು ಕೈಯಾದರೆ, ಜೀವನ ಶೈಲಿಯಲ್ಲಿ ಸುಧಾರಣೆ, ದಿನ ನಿತ್ಯದ ನಮ್ಮ ಜೀವನದಲ್ಲಿ
“ ಯೋಗ” ವನ್ನು ಅಳವಡಿಸಿಕೊಂಡು ನಮ್ಮ ಸರ್ವತೋಮುಖ ಬೆಳವಣಿಗೆಗೆ, ಆರೋಗ್ಯಕ್ಕೆ ಚಾಲನೆ ನೀಡುವ ಅಗತ್ಯವಿದೆ.
ಇಂದು ಅಂತರ್ ರಾಷ್ಟೀಯ ಯೋಗದ ದಿನಾಚರಣೆಯನ್ನು ಇಡೀ ವಿಶ್ವ ಆಚರಿಸುತ್ತಿದೆ. ಪ್ರಾಚೀನ ಯೊಗ ಶಾಸ್ತ್ರವನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ ನಮ್ಮ ಭಾರತ.
“ ಯುಜ್” ಅಂದರೆ ಮೇಳವಿಕೆ, ಸಮನ್ವಯ. ಇಂತಹ ಅಪೂರ್ವವಾದ ಶಾಸ್ತ್ರವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ, ಇದರ ಸಮನ್ವಯ ನಾವೆಲ್ಲರೂ ಮಾಡಿಕೊಂಡು ಆರೋಗ್ಯಕರವಾದ ಬಾಳಿನ ಪಥದಲ್ಲಿ ಮುನ್ನಡೆಯೋಣ ಎಂಬ ಧೃಡ ಸಂಕಲ್ಪದೊಂದಿಗೆ..
ವಂದನೆಗಳು..
ಹೆಚ್ಚಿನ ಬರಹಗಳಿಗಾಗಿ
ಒಲವೆ ನಮ್ಮ ಬದುಕು – ೩೩
ಒಲವೆ ನಮ್ಮ ಬದುಕು-೩೨
ಒಲವೆ ನಮ್ಮ ಬದುಕು – ೩೦