- ಕಣಗಿಲೆಯ ಫಿರ್ಯಾದು - ಸೆಪ್ಟೆಂಬರ್ 10, 2021
ಗಂಗಾ ಗಯೇ ಗಂಗಾದಾಸ , ಜಮುನಾ ಗಯೇ ಜಮುನಾ ದಾಸ್, ಫಿರ್ ಭೀ ಹುವಾ ನ ಕುಛ್ ಭೀ ಖಾಲಿ…… ಖಾಲಿ…. ಎಂದು ಬಡಬಡಿಸುತ್ತಾ ಸಣಕಲು ದೇಹದ ಕುಬೇರ ನಿದ್ದೆಯಲ್ಲಿ ಗೊಣಗುತ್ತಾ ಕೈಕಾಲುಗಳನ್ನು ಒದೆಯುತ್ತಿರುವುದು ಇದೇ ಮೊದಲನೇ ಬಾರಿಯಾಗಿರಲಿಲ್ಲ. ಒಂದು ಕ್ರಿಯೆಗೆ ಪ್ರತಿಕ್ರಿಯೆಯಂತೆ ಪಕ್ಕದಲ್ಲೆ ರಗ್ಗು ಹೊದ್ದು ಮಲಗಿದ್ದ ಪುರುಷೋತ್ತಮ ತನ್ನ ಸುಖ ನಿದ್ದೆ ಭಂಗವಾಯಿತೆಂದು ಸಿಡಿಮಿಡಿಗೊಂಡು ಒದ್ದು ಝಾಡಿಸಿ, “ಮೇಲ್ಯಾ…. ಕಂಠಪೂರ್ತಿ ಕುಡಿಬೇಡಾಂತ ಎಷ್ಟು ಹೇಳಿದ್ರೂ ಕೇಳದೆ, ಇಲ್ಲಿ ನಮ್ಮ ನಿದ್ದೆ ಹಾಳ್ ಮಾಡ್ತಿದ್ದಾನೆ ನೀಚ” ಎಂದು ಒದರಾಡಿದನು. ಅಷ್ಟಕ್ಕೂ ಅವನ ಸಿಟ್ಟು ಇಳಿಯುವ ಲಕ್ಷಣಗಳು ಕಾಣಲಿಲ್ಲ.”ಇರು ನಿನ್ನ ಏನ್ ಮಾಡ್ತೇನೆ ನೋಡು . ? ಎಂದು ಎದ್ದು ಸೊಂಟದಿಂದ ಜಾರಿದ ಚಡ್ಡಿಯನ್ನು ಮೇಲೇರಿಸುತ್ತಾ ಅಡುಗೆ ಕಟ್ಟೆಯ ಮೇಲಿರುವ ಹಂಡೆಯನ್ನು ಬಗ್ಗಿಸಿ ಸಣ್ಣ ಕಳಸಿ ತುಂಬಿ ತಂದ ನೀರನ್ನು ಅವನ ಮುಖಕ್ಕೆ ರಾಚಿ, ತೊಲಗು ಈಗಿಂದೀಗಲೇ ತೊಲಗಿಲ್ಲಿಂದ ಎಂದ ಆವೇಶದಿಂದ.
ಆ ನಶೆಯಲ್ಲಿಯೂ , ‘ಇನ್ನು ಇಲ್ಲಿದ್ದರೇ ಕೇಡು ತಪ್ಪಿದ್ದಲ್ಲ’ ಎಂದು ಬಲಪೂರ್ವಕ ಎದ್ದು ನಿಯಂತ್ರಣ ತಪ್ಪಿ, “ಚಾಯಿಲಾ…ಎಲ್ಲರೂ ಕತ್ತೆಗಳೇ…ಹೃದಯವೆಂಬುವುದೇ ಇಲ್ಲ. ಇಲ್ಲಿ ನಿಯತ್ತಿಗೆ ನ್ಯಾಯವಿಲ್ಲ ಎನ್ನುವುದು ನೂರು ಪ್ರತಿಶತ ಸರಿಯೇ ಎನ್ನುತ್ತಾ ತನ್ನ ಮಾತಿನ ಹಿಂದೆಯೇ, ಹಿಂದಿ ಸಿನೆಮಾ ಹಾಡು, “ಜೀನಾ ಯಹಾ ಮರನಾ ಯಹಾ… ಇಸ್ಕೆ ಸಿವಾ ಜಾನಾ ಕಹಾ… ರಾಗದಲ್ಲಿ ಮೂಡಿ ಬಂತು. ಕೋಣೆಯಿಂದ ಹೊರಬಂದವನು ವರಾಂಡದಲ್ಲಿ ಅದೇ ಆಲಾಪನೆಯನ್ನು ಪಲ್ಲವಿ ಅನುಪಲ್ಲವಿಯಂತೆ ಮುಂದುವರಿಸಿದನು. ಬದುಕನ್ನು ಅಸಾಮಾನ್ಯವೆಂದು ಭಾವಿಸುವ ಕುಬೇರನಿಗೆ ನಶೆಯೇರಿಸುವ ಮಂತ್ರ ಒಂದು ಮಧ್ಯ ಇನ್ನೊಂದು ಹಿಂದಿ ಪದ್ಯ. ಅದರಲ್ಲೂ ಹಳೆಯ ಹಾಡುಗಳು ಅವನ ಮನದಲ್ಲಿ ಜೀವ ತುಂಬುವಂತಹದ್ದು.
ಅವನ ಆಲಾಪನೆಯನ್ನು ಕಲಕಿದಂತೆ ಏನೋ ಸದ್ದು. ಇಂಥ ಸದ್ದಿಗೆಲ್ಲಾ ಬೆಚ್ಚಿ ಬೀಳುವ ಆಸಾಮಿ ಕುಬೇರನಲ್ಲ. ಆದರೂ ಮಧ್ಯದಲ್ಲೇ ಹಾಡೊಂದನ್ನು ಬಿಟ್ಟು ಒಮ್ಮೆ ಸುತ್ತಲೂ ಕಣ್ಣಾಡಿಸಿದ. ಗಾಳಿ ಮರದೆಲೆಗಳ ಸರಸ ಬಿಟ್ಟರೆ ಇನ್ಯಾವ ಮಿಸುಕಾಟಗಳು ಗೋಚರಿಸಲಿಲ್ಲ. ಈಗ ಮಾಡಬೇಕಾದ್ದು ಒಂದೇ ಕೆಲಸ ಮುಖಕ್ಕೆ ರಾಚಿದ ನೀರನ್ನು ವೈಪರ್ ತರಹ ಬೆರಳಿನಿಂದಲೇ ಎಳೆದೆಳೆದು ಕೊಡವಿಕೊಂಡ. ಆಗಲೇ ಆ ನೀರಿಗೆ ತಣ್ಣನೆಯ ಗಾಳಿ ಸ್ಪರ್ಶಿಸಿ ಇನ್ನೂ ತಂಪಾಗಿ ಮುದ ನೀಡುತ್ತಿತ್ತು.ಥೇಟ್ ಕಾಜಲ್ ಆಕಾಶದಿಂದ ಕೆಳಗಿಳಿದು “ಚಂದರೇ ಚಂದರೆ… ಕಭಿ ತೊ ಜಮಿ ಪರ್ ಆ…. ಬೈಠೇನ್ಗೆ ಬಾತೆ ಕರೆಂಗೆ… ಅನ್ನುತ್ತಾ ಅವನ ಮೊದಲನೇ ಕ್ರಶ್ ಕಾಜಲ್ ನೇರವಾಗಿ ತನ್ನ ಕೆನ್ನೆಗೆ ಕೆನ್ನೆಯಿಟ್ಟು ಉಜ್ಜಿದಂತಾಗಿ ಮೈಯೆಲ್ಲಾ ಒಂದು ಸಂಚಲನ ಹರಡಿ ರೋಮಾಂಚನಗೊಂಡು ಎದ್ದು ಕ್ ಕ್ ಕ್ ಕಾಜಲ್….ಎನ್ನುತ್ತಾ ಹುಡುಕಾಡಲಾರಂಭಿಸಿದ. ಯಾರೂ ಕಾಣದೆ ಸೋತು ಮತ್ತೆ ಬಂದು ಅದೇ ವರಾಂಡದಲ್ಲಿ ಕೂತು ತಾನು ತೊಟ್ಟುಕೊಂಡಿರುವ ಜುಬ್ಬಾದ ಜೇಬಿನಲ್ಲಿರುವ ತಂಬಾಕು ಡಬ್ಬಿಯನ್ನು ತಡಕಾಡಿದ. ಕೈಗೆ ಸಿಕ್ಕ ಒಂದು ಪೆನ್ನು ಹಾಗೂ ಚೀಟಿಯನ್ನು ಹಾಗೆ ಬಿಟ್ಟು ಜೇಬಿನ ತ್ರಿಕೋನದ ಒಂದು ಮೂಲೆ ಸೇರಿಕೊಂಡಿರುವ ಡಬ್ಬಿಯನ್ನು ಪಡೆದು ಪಂದ್ಯ ಗೆದ್ದವರಂತೆ ತಗಡಿನ ಡಬ್ಬಿಯನ್ನು ಖುಷಿಯಿಂದ ಹೊರತೆಗೆದು ತಂಬಾಕು ಬೀಳದಂತೆ ಡಬ್ಬಿಯ ಮುಚ್ಚಳಕ್ಕೆ ಟಪ್ ಟಪ್ ಎಂದು ಬಡಿದು ನಿಧಾನವಾಗಿ ಮುಚ್ಚಳ ತೆಗೆಯಲು ಪ್ರಯತ್ನಿಸಿದ. ಅದರಲ್ಲಿ ತಂಬಾಕು ಮುಗಿದಿತ್ತು. ಅದವನಿಗೆ ಗೊತ್ತಿದ್ದೂ, ಅದೇ ರೀತಿ ಎಚ್ಚರದಿಂದ ಮುಚ್ಚಳ ತೆಗೆಯುವುದು ಚಿತ್ತಕ್ಕೆ ರೂಢಿಯಾಗಿ ಬಿಟ್ಟಿತ್ತು. ತೋರು ಬೆರಳಿನಿಂದ ಡಬ್ಬಿಯ ಅಂಚಿಗೆ ಅಂಟಿಕೊಂಡಿದ್ದ ಹುಡಿಯನ್ನು ಅಂಗೈಯಲ್ಲಿ ಬಿಗಿ ಹಿಡಿದು ಡಬ್ಬಿಯ ಹಿಂಬದಿಯ ಸುಣ್ಣವನ್ನು ಉಗುರಿನಿಂದ ಕೆರೆದು ಕೆರೆದು ಸುರುಳಿ ಮಾಡಿದ ಅಂಗೈಗೆ ತಿಕ್ಕಿ ತಿಕ್ಕಿ ಹಸನು ಮಾಡಿ ಉಫ್ ಅಂತ ಊದಿ ಮೇಲಿನ ಹುಡಿಯನ್ನು ಹಾರಿಸಿ ಮಿಕ್ಕದ್ದನ್ನು ಉಂಡೆ ಮಾಡಿ ವಸಡಿನ ಪಕ್ಕದಲ್ಲಿಟ್ಟು ತುಟಿಯನ್ನು ಬಿಗಿದು ಕೊಂಡು. ಕಿವಿಯನ್ನು ಇನ್ನೂ ಚೂಪಾಗಿಸಿ ಅನಿರೀಕ್ಷಿತ ಘಟನೆಯ ನಿರೀಕ್ಷೆಯಿಂದ ವಿಚಲಿತಗೊಂಡ ಕುಬೇರ ಗೇಟಿನತ್ತ ಹೆಜ್ಜೆಯಿಟ್ಟ. ಎಡಗೈಯಲ್ಲಿದ್ದ ಎಮರ್ಜನ್ಸಿ ಎಲ್ ಇ ಡಿ ಟಾರ್ಚಿನಿಂದ ಮೂಲೆಮೂಲೆಯನ್ನು ಕೆದಕಲಾರಂಭಿಸಿದ. ಮಧ್ಯ ಮಧ್ಯ ನಾಯಿಗಳು ಬೊಗಳುವುದ್ದನ್ನು ಬಿಟ್ಟು, ಅವನ ನಡುಗೆಗೆ ಯಾವುದೇ ಚಲನೆವಲನೆ ಇಲ್ಲದಿರುವುದ್ದನ್ನು ಕಂಡು ಸ್ವಲ್ಪ ಸಮಾಧಾನವೆನಿಸಿತು. ರುದ್ರ ಭೂಮಿಯಲ್ಲಿ ಆಚೆ ಬದಿಗೆ ಈಗಾಗಲೇ ಬೂದಿಯಾದ ದೇಹಗಳೂ ಗಾಳಿಯೊಂದಿಗೆ ಗುದ್ದಾಡಿ ಸೋತು ಮೌನವಾಗಿರುವುದು . ಕುಬೇರ ಒಮ್ಮೆ ಅತ್ತ ತಿರುಗಿ ಹೆಬ್ಬಾಗಿಲಿನತ್ತ ಬಂದು ಹೊರಗೆ ಎರಡೂ ಕಡೆ ನಿರೀಕ್ಷಣೆ ಮಾಡಿದನು. ಅಲ್ಲಿಯೂ ಏನೂ ಕಾಣದಿರಲು ಅನಾಯಾಸವಾಗಿ ತನ್ನನ್ನು ಎಬ್ಬಿಸಿ ಇಲ್ಲಿಯವರೆಗೂ ಬರುವಂತೆ ಮಾಡಿದ ಆ ಸದ್ಧಿಗೇನೇ ಬೈಯುತ್ತಾ ಹಿಂತಿರುಗಿ ಹೋಗಿ ಹೊದಿಕೆ ಎಳೆದು ನಿದ್ದೆಗೆ ಜಾರಿದ.
************
ಕುಬೇರ ಕಳೆದ ಒಂದು ವರುಷಗಳಿಂದ ಸಾಕಿವಿಹಾರ ರಸ್ತೆಯ ಮೊದಲ ತಿರುವಿನಲ್ಲಿರುವ “ಸಾಗ್ ಬಾಗ್ ರುದ್ರಭೂಮಿ”ಯಲ್ಲಿ ಸಹಾಯಕನಾಗಿ ತಾತ್ಕಾಲಿಕ ಸೇವೆ ನಿರ್ವಹಿಸುತ್ತಿದ್ದ. ಏಕಾಂಗಿ ಜೀವಿ, ಉಂಡು ತಿಂದು ತಿಂಗಳ ಕೊನೆಗೆ ಮೂರು ಮೂರುವರೆ ಸಾವಿರ ಕೈಯಲ್ಲಿ ಉಳಿದರೆ ಅವನಿಗೆ ಅದೇ ಸಮಾಧಾನ. ಆದರೆ ಅವನನ್ನು ಮೇಲಿನ ಅಧಿಕಾರಿಗಳಿಗೆ ಶಿಫಾರಸು ಮಾಡಿಸಿ ಕೆಲಸಕ್ಕೆ ಭರ್ತಿಮಾಡಿಸಿದ ಪುರುಷೋತ್ತಮನಿಗೆ ಕುಬೇರನಲ್ಲಿರುವ ಹಣವನ್ನು ಕಂಡರೆ ಒಂದು ನಮೂನೆಯ ತುರಿಕೆ.
ಪ್ರತಿ ತಿಂಗಳು ಒಂದಿಷ್ಟು ಹಣ ಬಚತ್ ಮಾಡಿ ತಾನು ಇಷ್ಟಪಟ್ಟ ಸಿಂಧೂರಿಯನ್ನು ಮದುವೆ ಮಾಡಿ ಮನೆ ಮಕ್ಕಳು ಸಂಸಾರ ನಡೆಸಬೇಕೆಂದು ಕನಸು ಕಾಣುತ್ತಿದ್ದ ಕುಬೇರನ ಲೆಕ್ಕಾಚಾರಗಳು ಪುರುಷೋತ್ತಮನ ದುರಾಸೆಗಳಲ್ಲಿ ಕರಗಿ ಮುಗುಮ್ಮಾಗಿ ತಣ್ಣಗೆ ಉಳಿದುಬಿಡುತ್ತಿದ್ದವು.
ಬೀಡಿ , ಮದ್ಯ , ಬಿರಿಯಾನಿ ಕಬಾಬು, ಹೊಸ ಹೊಸ ಬಗೆಯ ಸೆಂಟುಗಳನ್ನೂ ತರಿಸಿ ಅವನ ಕೈ ಖಾಲಿ ಮಾಡುವವರೆಗೂ ಇವನಿಗೆ ನೆಮ್ಮದಿಯಿಲ್ಲ. ಹೇಗೂ ಇಷ್ಟಕ್ಕೂ ಸರಕಾರಿ ನೌಕರಿ. ಈ ಆಸಾಮಿ ನಿವೃತ್ತಿಯಾಗಲು ನಾಲಕ್ಕು ವರ್ಷಗಳಷ್ಟೇ ಬಾಕಿ ಎಂದು ಸುಮ್ಮನಿರುತ್ತಿದ್ದ. ಈ ರೀತಿ ಹಣವೆಲ್ಲ ಶೋಕಿಯಲ್ಲಿ ಖರ್ಚಾದ ದಿನಗಳಲ್ಲಿ ಸಿಂಧೂರಿ ರಾತ್ರಿ ಕನಸಲ್ಲಿ ಬಂದು ಕಣ್ಣೀರಿಟ್ಟು ಜಗಳಾಡುತ್ತಿದ್ದಳು. ಅವಳ ಬಿಕ್ಕಳಿಗೆಗಳಿಗೆ ತನ್ನಲ್ಲಿಯೇ ತಾನು ಸಂಕಟಪಟ್ಟು ಅವಳೆದುರು ಮೊಣಕಾಲೂರಿ ಬೆರಳುಗಳನ್ನು ಬಲವಂತವಾಗಿ ಮಡಚಿ ತಲೆ ತಗ್ಗಿಸಿ “ಕ್ಷಮಿಸು ಜಾನ್ ” ಎಂದರೆ ಸಾಕು ಮೊದಲ ಮಳೆ ಹನಿಗಳನ್ನು ಇಳೆ ತನ್ನೊಳಗಿಸಿದಂತೆ ಕುಬೇರನನ್ನು ತನ್ನ ಬಾಹುಗಳಲ್ಲಿ ಅಪ್ಪಿ ಮುದ್ದಿಸಿ ಮಲಗಿಸುತ್ತಾಳೆ.
ಕುಬೇರನಿಗೆ ಸಿಂಧೂರಿಯ ಪರಿಚಯವಾದದ್ದು ಬೆಳಗಾವಿಯಲ್ಲಿ ತಾನು ಮೊದಲು ಕೆಲಸಕ್ಕಿದ ಸುಲಭ ನರ್ಸಿಂಗ್ ಹೋಮಿನಲ್ಲಿ. ಹಿಡಿ ಸಂಬಳಕ್ಕೆ ರೆಸೆಪ್ಟಿವ್ನಿಸ್ಟ್ ಆಗಿ ಕೆಲಸ ಮಾಡ್ತಿದ್ದರೂ ಅವಳಿಂದ ಇತರೆ ಕೆಲಸಗಳನ್ನೂ ಮಾಡಿಸುತ್ತಿದ್ದ ಸ್ತ್ರೀರೋಗ ತಜ್ಞನಾಗಿದ್ದ ಡಾ. ಕುಲಪತಿ. ಮನೆಗೆ ಹೋಗುವ ಸಮಯಕ್ಕೆ ಹೊಸತೇನಾದ್ರೂ ಕೆಲಸ ಕೊಟ್ಟು ಸಿಂಧೂರಿಯನ್ನು ಕಟ್ಟಿಹಾಕಿ ಬಿಡುತ್ತಿದ್ದ. ಮನೆಯಲ್ಲಿ ಹಾಸಿಗೆ ಹಿಡಿದ ಅಪ್ಪ ನಿತ್ರಾಣಗೊಂಡ ಅಮ್ಮನನ್ನು ಬಿಟ್ಟು ಬಂದಿರುವ ಮುಗ್ಧ ಜೀವಿಗೆ ಅದೆಷ್ಟು ಬೇಗ ತನ್ನ ಗೂಡು ಸೇರ್ತೆನೋ ಎಂಬ ಚಿಂತೆ. ಪ್ರವಾಹವನ್ನು ತಡೆಹಿಡಿದ ಬಂಡೆ ಕುಲಪತಿಗೆ ಮನಸ್ಸಿನಲ್ಲೆ ಶಾಪವಿಟ್ಟು ಕೆಲಸಕ್ಕೆ ತೊಡಗಿದಾಗ ಕುಬೇರ ಅವಳಿಗೆ ನೆರವಾಗುತ್ತಿದ್ದ. ಹಾಗಾಗಿ ಅವನ ಬಗೆಗಿನ ಕೃತಜ್ಞತೆ ಹಾಗೂ ಇವನಿಗೆ ಅವಳ ಬಗೆಗಿನ ಅನುಕಂಪ ಪ್ರೀತಿಯಲ್ಲಿ ಪರಿವರ್ತನೆಗೊಂಡಿತ್ತು. ಒಲವಿನ ನೆರಳಿರುವ ಆ ಜಾಗ ಇಬ್ಬರಿಗೂ ಸ್ವರ್ಗದಂತೆ ಕಾಣಿಸಿತು. ಬೆಳಿಗ್ಗೆ ಲವಲವಿಕೆಯಿಂದ ಬರುವ ಸಿಂಧೂರಿಯ ಮುಖ ಸಂಜೆಯಾಗುತ್ತಿದ್ದಂತೆ ಕುಬೇರನಿಂದ ಹತ್ತು ಹನ್ನೆರಡು ತಾಸು ದೂರಾಗಬೇಕೆಂಬ ಬೇಸರದಿಂದ ಬಾಡಿಹೋಗುತ್ತಿತ್ತು.
ನಿರ್ದಿಷ್ಟವಾದ ಹೆಸರಿನ ಹುದ್ದೆ ಕುಬೇರನದಲ್ಲವಾದರೂ ರೋಗಿಗಳ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ಬಿಟ್ಟು ಮಿಕ್ಕೆಲ್ಲಾ ಕೆಲಸಗಳಲ್ಲಿ ಡಾ. ಕುಲಪತಿನಿಗೆ ಬೇತಾಳನಂತೆ ಸಾತ್ಕೊಡುತ್ತಿದ್ದನು. ನರ್ಸಿಂಗ್ ಹೋಮಿನ ಕಿಟಕಿಗಳಿಗೆ ಬಿಳಿ ಪರದೆಗಳಿಗಿಂತಲೂ ದಟ್ಟ ಕಪ್ಪು ಪರದೆಗಳಿದ್ದು ಅಲ್ಲಿ ಹೆರಿಗೆಗಿಂತಲೂ ಗರ್ಭಪಾತ ಪ್ರಕರಣಗಳೇ ಹೆಚ್ಚಾಗಿ ನಡೆಯುತ್ತಿದ್ದವು. ಆಸುಪಾಸಿನ ಜನ ದೂರುಕೊಟ್ಟಾಗ ತಪಾಸಣೆಗೆ ಬಂದ ಅಧಿಕಾರಿಗಳನ್ನು ಚೆನ್ನಾಗಿ ಉಪಚರಿಸಿ ಕೈಬೀಸಿ ಮಾಡಿ ಬಾಯಿ ತೆರೆಯದಂತೆ ಖುಷಿಪಡಿಸಿ ವಾಪಾಸ್ ಕಳಿಸಿಕೊಡುವಲ್ಲಿ ಕುಬೇರ ನಿಸ್ಸೀಮನಾಗಿದ್ದನು. ಹರೆಯದ ಪ್ರೀತಿಗೆ ಬಿಡುಗಡೆಯ ಕಾಣ್ಕೆ ಕೊಡುವ ದಿವ್ಯತೆಯ ಕೆಲಸವೆಂದು ಎಂದು ಭಾವಿಸುತ್ತಿದ್ದ. ಅವನ ಶ್ರದ್ಧೆಗೆ ಸರಿಯಾದ ಪ್ರತಿಫಲವೂ ಅವನಿಗೆ ಸಿಗುತ್ತಿತ್ತು.
ಬದುಕು ಒಬ್ಬಟ್ಟಿನ ತರಹ ನಡೆಯುತ್ತಿರುವಾಗಲೇ ತುಪ್ಪದಂತೆ ಸಿಂಧೂರಿ ಬಂದಳು. ಬಾಡಿಗೆ ಮನೆ ಮಾಡಬೇಕು. ಮದುವೆ ಆಗಬೇಕು, ಮದುವೆಯ ಬಳಿಕ ಸಿಂಧೂರಿಯ ಅಪ್ಪ ಅಮ್ಮಂದಿರನ್ನೂ ತಮ್ಮ ಜೊತೆಗೆ ಉಳಿಸುವುದಾಗಿ ಸ್ವಲ್ಪ ದೊಡ್ಡ ಮನೆಯನ್ನೇ ನೋಡಬೇಕೆಂದು ಹೇಳಿಕೊಂಡಿದ್ದ.
ಮದುವೆಯಾದ ಮೊದಲ ವರುಷವೇ ಒಂದು ಮಗು ಆ ಬಳಿಕ ಮೂರು ವರುಷದ ಅಂತರ. ಕುಬೇರ ಕಂಡ ಕನಸುಗಳು ಒಂದಾ ಎರಡಾ… ಹೀಗೆಲ್ಲ ಕನಸುಗಳನ್ನು ಪೋಣಿಸಿ ಅವಳ ಮುಡಿಗಿಟ್ಟು ಅವಳ ನಾಚಿಕೆಯನ್ನು ಹೀರಿ ಕುಡಿಯುತ್ತಿದ್ದ.
ಮೊದ ಮೊದಲಿಗೆ ಸಿಂಧೂರಿಗೆ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಗೊತ್ತಿರಲಿಲ್ಲ. ಗೊತ್ತಾದ ದಿನವೇ ದಿಗಿಲುಗೊಂಡು , “ಕುಬ್ಬಿ … ಬೇಗ ಕೆಲಸ ಮುಗಿಸ್ಕೊ. ಸಂಜೆ ಒಟ್ಟಿಗೆ ಹೊರೋಡೋಣ ಅಂದಿದ್ದಳು . ಆದರೆ ಅಂದು ಎರಡು ಅಬಾರ್ಷನ್ ಕೇಸ್ ಇದ್ದುದ್ದರಿಂದಾಗಿ ಭೇಟಿ ಸಾಧ್ಯವಾಗಲಿಲ್ಲ. ಮರುದಿನ ಅವಳಿಗಾಗಿ ಬಸ್ ಸ್ಟ್ಯಾಂಡಿನಲ್ಲಿ ಕಾದು ಸುದರ್ಶನ್ ಚಕ್ರ ಹೋಟೆಲಿಗೆ ಕರೆದುಕೊಂಡು ಹೋಗಿ , ಏನ್ ವಿಷಯ ಮುದ್ದು? ನನ್ನನ್ನು ಬಿಟ್ಟು ಇರೋಕಾಗೊಲ್ವಾ? ಬೇಗ ಮದುವೆ ಆಗ್ಬೇಕಾ? ಒಂದು ಕೆಲ್ಸ ಮಾಡು , ನೀನೇ ಡೇಟ್ ಫಿಕ್ಸ್ ಮಾಡಿ ತಿಳಿಸು ನಾನು ರೆಡಿ ಎಂದ ತಮಾಷೆಯಿಂದ.
ಯಾವುದೋ ನಿಗೂಢ ಭಯದ ಛಾಯೆ ಅವಳ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ನೇರವಾಗಿ ವಿಷಯಕ್ಕೆ ಬಂದವಳಂತೆ “ದೇವರು ಕೊಟ್ಟ ಮಕ್ಕಳವು ಕುಭಿ. ತಪ್ಮಾಡ್ತಿದ್ದೀಯ.ಅವುಗಳನ್ನು ಹುಟ್ಟೋ ಮೊದಲೇ ಕತ್ತು ಹಿಸುಕುವ ಹೀನಾಯ ಕೆಲಸ ಮಾಡ್ತಿದ್ದೀಯ. ಬಿಟ್ಟು ಬಿಡೋ ಈ ಕೆಲಸವನ್ನು “ ಎಂದು ಗೋಗರೆದಳು.
“ಅಯ್ಯೋ ಅಮ್ಮಣ್ಣಿ … ನಾನೇನು ತಪ್ಮಾಡಿದೆ ?. ಆ ಹೆಣ್ಮಕ್ಕಳು ಪ್ರೀತಿ ಗೀತಿಯಲ್ಲಿ ಮುಂದುವರಿದು ದೇಹದ ದಾಹ ತೀರಿಸಿಕೊಂಡು, ಕೊನೆಗೆ ನಂಬಿಕೆನೂ ಕಳೆದು ಆಸಕ್ತಿನೂ ಕಳೆದುಕೊಂಡು ಒಬ್ಬರಿಂದೊಬ್ಬರು ದೂರಾಗ್ತಾರೆ. ಆಗಲೇ ಅವರ ಹೊಟ್ಟೆಯಲ್ಲಿ ಪ್ರೀತಿಸಿದ ತಪ್ಪಿಗೆ ಮೊಳಕೆಯೊಡದ ಬೀಜವೊಂದಿರುತ್ತದೆ ನೋಡು. ಅದು ಕೇವಲ ಒಂದು ಮಾಂಸದ ಮುದ್ದೆ. ಅವರಿಗದು ಬೇಡವಾಗಿರುತ್ತದೆ. ನಮ್ಮ ಬಳಿ ಬಂದಿರುತ್ತಾರೆ. ಇನ್ನೂಭೂಮಿಗೆ ಬಾರದಿರುವ ಜೀವಕ್ಕಿಂತ ಇದ್ದ ಜೀವವನ್ನು ಉಳಿಸುವ ಘನ ಕಾರ್ಯವನ್ನೇ ಮಾಡ್ತಿದ್ದೀವಿ. ಶರೀರಕ್ಕೆ ಬೇಡವಾಗಿರುವ ಗಡ್ಡೆಗಳನ್ನೂ ಶಸ್ತ್ರಚಿಕಿತ್ಸೆ ಮಾಡಿದಷ್ಟೇ ಸುಲಭ ಆಲ್ವಾ ಇದು “? ಎಂದು ಹಗುರವಾಗಿ ತನ್ನ ಹಾಗೂ ತನ್ನ ವೃತ್ತಿಯ ಬಗ್ಗೆ ಸಮರ್ಥನೆ ಮಾಡುತ್ತಾ , ಇದ್ರಲ್ಲಿ ತಪ್ಪೇನಿದೆ ಹೇಳು? ಒಂದು ರೀತಿಯಲ್ಲಿ ಅವರೂ ಖುಷ್ ನಾವೂ ಖುಷ್ . ಎಂದು ಮುಗುಳು ನಗುತ್ತಾ ಎರಡೂ ಕೈಗಳಿಂದ ಅವಳ ಕೆನ್ನೆಯನ್ನು ನಯವಾಗಿ ಚಿವುಟಿದನು .
ನಾಲ್ಕು ದಿನಗಳಿಂದ ಸಿಂಧೂರಿ ಕೆಲ್ಸಕ್ಕೆ ಬಂದಿರಲಿಲ್ಲ. ಫೋನ್ ಮಾಡಿದ್ರೆ ಸ್ವಿಚ್ ಆಫ್ . ವಾಟ್ಸ್ ಆಪ್ ಬ್ಲಾಕ್ ಮಾಡಿ ಎಲ್ಲಾ ರೀತಿಯಿಂದ ಸಂಪರ್ಕಗಳನ್ನು ಕಡಿದು ಹಾಕಿದ್ದಳು . “ಈ ಹೆಣ್ಮಕ್ಕಳ ಮನಸ್ಥಿತಿಯನ್ನು ಬ್ರಹ್ಮನಿಂದಲೂ ಓದೋಕಾಗಲ್ಲ! ಒಮ್ಮೆ ಒಂದು ರೀತಿಯಾದ್ರೆ ಇನ್ನೊಮ್ಮೆ ಇನ್ನೊಂದು, ಎಲ್ಲಿ ಸಾಯ್ಲಿಕ್ಕೆ ಹೋಗಿದ್ದಾಳೆ ಒಂದೂ ಗೊತ್ತಿಲ್ಲ. ಕಡೇಪಕ್ಷ ಹೇಳಿ ಹೋಗಿರ್ತಿದ್ರೆ ನನ್ನಷ್ಟಕ್ಕೆ ನಾನು ಇರ್ತಿದ್ದೆ ಎಂದು ತಳಮಳಗೊಂಡ ಕುಬೇರ ನೇರವಾಗಿ ಸಿಂಧೂರಿಯ ಮನೆಗೆ ಹೋಗಿದ್ದ.
ಮನೆಗೆ ಬೀಗ ಇತ್ತು. ಅಕ್ಕ ಪಕ್ಕದವರಿಗೂ ಸಂಬಂಧಿಕರ ಬಳಿ ಹೋಗಿ ಬರ್ತೇವೆ ಎಂದು ಹೋಗಿದ್ದಷ್ಟೇ ಸುದ್ದಿ. ಆ ಬಳಿಕ ಎರಡು ಮೂರು ಬಾರಿ ಅವಳ ಮನೆಯತ್ತ ಹೋದಾಗಲೂ ಬಾಗಿಲು ಹಳೆ ಸುದ್ದಿಯನ್ನೇ ಬಿತ್ತರಿಸಿತ್ತು.
“ಇದೆಂಥ ಹೆಣ್ಣಪ್ಪ ನನ್ನ ಕೆಲಸದ ಬಗ್ಗೆ ತಕರಾರಿದ್ದರೆ ಹೇಳಬೇಕಿತ್ತಲ್ಲಾ? ಹುಡುಗಿ, ನಿನಗಾಗಿ ನಾನು ಈ ಕೆಲಸವೇನು ನನ್ನ ಉಸಿರನ್ನೂ ಬಿಟ್ಟು ಬಿಡಲು ತಯಾರು. ಒಮ್ಮೆ ಬಂದು ಬಿಡು ಸಿಂಧೂರಿ ಎಂದು ಗೋಗರೆಯುತ್ತಾ ಕೂತವನಿಗೆ ಸಮಯದ ಲಕ್ಷ್ಯವೇ ಇಲ್ಲದಾಯಿತು. ಯಾವ ಕೆಲಸದ ಕಾರಣದಿಂದಾಗಿ ಸಿಂಧೂರಿ ತನ್ನಿಂದ ದೂರಾದಳೋ , ಬರಬರುತ್ತಾ ಆ ಕೆಲಸದ ಬಗ್ಗೆ ತಾತ್ಸಾರವುಂಟಾಯಿತು . ಅಲ್ಲಿಯ ರಹಸ್ಯಗಳ ಅಡಿಯಲ್ಲಿ ಹೂತ ಫೈಲುಗಳ ರಾಶಿಗಳು ಒದ್ದೆಯಾಗಿ ಒಂಥರಾ ಹಾಲಿನ ಒಗರು ವಾಸನೆ ಅವನ ಮನಸ್ಸಿನಲ್ಲಿ ಅಡರಿದಂತಾಗಿ ಆ ಜಾಗಕ್ಕೆ ಹೋಗುವುದೂ ಬೇಡವೆನ್ನುವಷ್ಟು ರೇಜಿಗೆ ಹುಟ್ಟಿತು .
ಕೆಲಸದಲ್ಲಿ ನಿರ್ಲಕ್ಷತನವನ್ನು ಕಂಡು ಸಿಡಿಮಿಡಿಗೊಂಡ ಡಾ. ಕುಲಪತಿ ಬೈದು ಒಂದೆರಡು ಬಾರಿ ಎಚ್ಚರಿಕೆ ನೀಡಿದ್ದರು. ಸಿಂಧೂರಿಯ ಮೇಲಿಟ್ಟಿರುವ ಅನಿರ್ವಚನೀಯ ಪ್ರೀತಿಯಿಂದಾಗಲಿ ಅವಳ ನೆನಪಿನಲ್ಲಿ ಮನಸ್ಸಿನ ನಿಯಂತ್ರಣ ಕಳಕೊಂಡು ಕುಬೇರ ಖಿನ್ನತೆಗೆ ಒಳಗಾಗಿದ್ದ. ಇತ್ತೀಚೆಗೆ ಸ್ನಾನ ಊಟ ತಿಂಡಿ ಎಲ್ಲವನ್ನು ಮರೆತು ಕೂತಲ್ಲಿಯೇ ಕೂತಿರುವುದು. ಒಂದು ಮುಂಜಾವಿನಲ್ಲಿ ಇದ್ದಕ್ಕಿದ್ದಂತೆ ಊರು ಬಿಟ್ಟು ಅಲೆದಾಡುತ್ತಾ ಲೋಕಮಾನ್ಯ ಟಿಳಕ್ ಎಕ್ಸ್ಪ್ರೆಸ್ ಹತ್ತಿ ಬೋಗಿ ಖಾಲಿಯಾದ ಬಳಿಕ ಇನ್ನು ಮುಂದೆ ಹೋಗಲಾರದು ಎಂದು ಇಳಿದು ಬಂದವನು ಹೊರಗಡೆ ಸಿಕ್ಕ ಬಸ್ ಹತ್ತಿದ. ಸಾಕಿನಾಕದಲ್ಲಿ ಇಳಿದು ಅಲ್ಲೇ ಸುತ್ತಾಡಿಕೊಂಡಿದ್ದ.
ಗಣೇಶ ಚಹಾದಂಗಡಿಯಲ್ಲಿ ಚಹಾ, ಖಾರಿ ತಿನ್ನುತ್ತಿರುವ ಯಾವುದೋ ಜನ್ಮದ ಬಾಂಧ್ಯವದಂತೆ ಪುರುಷೋತ್ತಮನ ಪರಿಚಯವಾಯಿತು. ಇವನ ಕಹಾನಿ ಕೇಳಿ ತನ್ನ ಕಪ್ಪು ಬಿಳಿ ನೆನಪುಗಳು ರಂಗಾದವು. ತಾನೂ ಊರು ಬಿಟ್ಟು ಬಂದವನು ಮುಂಬಾ ಆಯಿಯ ಎದೆಯಲ್ಲಿ ತುಂಬಾ ಕರುಣೆಯಿದೆ. “ಬಿವೂ ನಾಕೋ ಮೀ ತುಜಾ ಸಾತ್ ಆಹೆ ( ಹೆದರ್ಬೇಡಾ ನಾನು ನಿನ್ನ ಜೊತೆಗಿದ್ದೇನೆ ) ಎಂದು ಭರವಸೆಯ ಆಶ್ರಯ ನೀಡಿದ್ದೇನೋ ಸರಿ, ಆದರೆ ಈಗ ಅದರ ಎರಡು ಪಟ್ಟು ವಸೂಲಿ ಮಾಡೋದರಲ್ಲಿಯೂ ಹಿಂಜರಿಯದ ಆಸಾಮಿ ಅವನಾಗಿದ್ದನು . ಕುಬೇರ ಏನಾದರೂ ತಗಾದೆ ಎತ್ತಿದರೆ, ಯಾಕೋ ಸರಕಾರಿ ನೌಕರಿ ಕಹಿ ಅನಿಸ್ತಿದೆಯಾ ? ನಾನು ಮನಸ್ಸು ಮಾಡಿದ್ರೆ ಇಲ್ಲೇ ಶಾಶ್ವತವಾಗಿ ಉಳಿಯಬಹುದು . ವಿಚಾರ ಮಾಡಿನೋಡು ಎಂದು ಬಾಯಿ ಮುಚ್ಚಿಸಿದ.
************
ಗಡದ್ದಾಗಿ ಮಲಗಿದ್ದ ಕುಬೇರನಿಗೆ ರಾತ್ರಿ ಬಿದ್ದ ಒದೆ ಪುನರಾವರ್ತನೆ ಗೊಳ್ಳುತ್ತಿದೆ ಎನ್ನುವ ಅನುಭವವಾದರೂ , ಇದು ನಿಜವಲ್ಲ ಬರೀ ಕನಸು ಎಂದೆನಿಸಿ ಮಗ್ಗಲು ಬದಲಾಯಿಸಲು , ಪುರುಸೋತ್ತಮ, “ಅರ್ರೆ ಗಾಡ್ವಾ ( ಅಯ್ಯೋ ಕತ್ತೆ) ಎದ್ದೇಳ್ತಿಯಾ ಇಲ್ಲಾ ಬಿಸಿ ನೀರು ತರ್ಲಾ?” ಎಂದು ಒರಟಾಗಿ ಗದರಿಸಿದಾಗ ಸ್ವಪ್ನಲೋಕದಿಂದ ಹೊರಬಂದ ಕುಬೇರ.
ಉದಾಸೀನ ಹಾಗೂ ಸಿಟ್ಟಿನಿಂದ, ಏನು? ಎನ್ನಲು, ಉತ್ತರದ ಬದಲಿಗೆ ಮೈಮೇಲೆ ಆವೇಶ ಬಂದವನಂತೆ ನಡಿ … ನಡಿ … ಎಂದು ಅವನ ರಟ್ಟೆ ಹಿಡಿದೆಳೆಯಲಾರಂಭಿಸಿದ
ಈಗ ನಾನೇನು ಮಾಡಿದೆ?
ನೀನು ಸುಮ್ನೆ ಬಾ ಅಂದೆನಲ್ಲ ಎಂದು ಅವನನ್ನು ಬಿರಬಿರನೆ ಗೇಟಿನ ಪಕ್ಕಕ್ಕೆ ಕರೆದೊಯ್ದನು.
ಸಾಗಬಾಗ್ ರುದ್ರಭೂಮಿಯ ಗೇಟಿನ ಬದಿಯಲ್ಲಿಯೇ ಸಾವು ಕೂಡ ಅದರ ಮೌನದಷ್ಟೇ ನಿಗೂಢವಾಗಿ ಕಿರಿದಾಗಿ ಸರಿದು ಹೋಗುವಂತೆ ಮುಗುಮ್ಮಾಗಿ ; ಒಳಗೆ ಹೊರಗೆ ಬಂದು ಹೋಗುವ ಉಸಿರಾಟಗಳ ಲೆಕ್ಕಚಾರಗಳನ್ನು ನಿಷ್ಠೆಯಿಂದ ಮಾಡುತ್ತಿರುವ ಕಣಗಿಲೆ ಹೂವಿನ ಗಿಡದ ಗುಂಡಿಯಲ್ಲಿ ಸಿಕ್ಕಿಕೊಂಡಿರುವ ಅಜ್ಞಾತ ಗಂಟು ಯಾವುದೋ ಮಕ್ಕಳ ಕೈಜಾರಿ ಬಿದ್ದಿರುವ ಗೊಂಬೆಯೋ ಎಂದರೆ ನಂಬಲಸಾಧ್ಯ.
ನಿನ್ನೆವರೆಗೂ ತಾಯಿಯ ರಕ್ತ ಹಂಚಿ ಬೆಚ್ಚಗಿದ್ದ ಎಳೆಜೀವ ಇನ್ನೂ ಎರಡು ತಿಂಗಳವರೆಗಾದರೂ ತಾಯಿಯ ಮೊಲೆಹಾಲನ್ನೇ ನಂಬಿ ಬದುಕಬೇಕಾದ ಜೊನ್ನವಕ್ಕಿ ತರಹ ಆ ಮಗುವಿನ ಚಹರೆ. ರೂಪರೇಷೆಗಳನ್ನು ಪಡೆದ ಅನಾಮಿಕ ಚಹರೆಯನ್ನು ಕಂಡು ಕುಬೇರ ಹೃದಯ ದಿಗ್ಗೆಂದಿತು . ಅಮ್ಮನ ಮೆದುವಾದ ಸೀರೆಯ ತುಂಡಿನಲ್ಲಿ ಸುತ್ತಿಕೊಂಡಿರುವ ನವಜಾತ ಶಿಶುವನ್ನು ಮೆಲ್ಲಗೆ ಎತ್ತಿ ತನ್ನ ಎದೆಯ ಹತ್ತಿರಕ್ಕೆ ತಂದ. ತದೇಕ ಚಿತ್ತದಿಂದ ಅದನ್ನೇ ನೋಡಿದ.
ವಿಳಾಸವಿಲ್ಲದ ಆ ಮಗು ಮುಖ, ಮೂಗು, ಕೂದಲುಗಳ ಅಚ್ಚಿನಿಂದ ತನ್ನ ಪೋಷಕರ ವಿಳಾಸದ ನಕ್ಷೆಯನ್ನು ಸ್ಪಷ್ಟವಾಗಿ ಬರೆದಿದ್ದರೂ, ಅವರ ಮನೆ ಬಾಗಿಲು ಈ ಪುಟ್ಟ ಜೀವಕ್ಕಾಗಿ ಶಾಶ್ವತವಾಗಿ ಮುಚ್ಚಿಕೊಂಡಿತ್ತು. ಮನೆಯ ಬಾಗಿಲನ್ನು ಮುಚ್ಚಿದರೂ ಈ ವಿಶಾಲ ಜಗದ ಮೂಲೆಯಲ್ಲಿ ಬದುಕಬಹುದಿತ್ತು.
**********
ತನ್ನ ವೈಯಕ್ತಿಕ ಬದುಕಿನ ಜಂಜಾಟದಲ್ಲಿ ಸೋತು ಸುಣ್ಣವಾಗಿದ್ದ ಕುಬೇರನಿಗೆ ಈ ಪರಿಸ್ಥಿತಿಯಲ್ಲಿ ಸ್ಮಶಾನ ವೈರಾಗ್ಯ ಮೂಡಿ ಬದುಕನ್ನು ನಿರ್ವಿಣ್ಣ ಗೊಳಿಸಿದಂತಾಯಿತು. ಬದುಕು ಎಷ್ಟೊಂದು ಕ್ಷಣಿಕ ಮತ್ತು ಅನೂಹ್ಯ. ವ್ಯಕ್ತಿಯಿಂದ ವ್ಯಕ್ತಿಗೆ ಸಾವು ಬದುಕಿನ ಅಂತರವೂ ಭಿನ್ನವಾಗಿದೆ. ಸಾವೆಂಬ ಸತ್ಯದ ಮುಂದೆ ಬದುಕಿನ ನಿಜ ದರ್ಶನ ಸಾಧಿಸುವ ಸಣ್ಣ ಅವಕಾಶವೂ ಈ ಹಸುಳೆಗಳಿಗಿಲ್ವಲ್ಲಾ? ಕೊನೆಗೆ ಈ ಮಕ್ಕಳು ಮಾಡಿದಂತಹ ತಪ್ಪಾದರೂ ಏನು? ನಾಳೆ ಸಾಯುವ ನಾನು ಈ ಸಾವನ್ನು ಬಂಡವಾಳವನ್ನಾಗಿಸಿ ಬದುಕಲು ಹಪಹಪಿಸುತ್ತಿದ್ದೇನಲ್ಲ ! ಇಂತಹ ಬದುಕಿಗೆ ಧಿಕ್ಕಾರ. ನಿಂತಲ್ಲಿಯೇ ಕುಸಿದು ಬಿದ್ದ ಕುಬೇರ.
ಅವನ ಕೈಗಳು ಗಡ ಗಡ ನಡುಗಲಾರಂಭಿಸಿತು. ಸೀರೆಯ ತುಂಡಿನಿಂದ ಮಗುವನ್ನು ಹೊರತೆಗೆದು ಮಗುವಿನ ಒಂದೊಂದೇ ಅಂಗಗಳನ್ನು ಪರೀಕ್ಷಿಸುವಂತೆ ನೋಡಿದ. ಕಣ್ಣು, ಮೂಗು ಬಾಯಿ, ಮುಷ್ಠಿ ಮುಚ್ಚಿಕೊಂಡಿರುವ ಬೆರಳುಗಳನ್ನು ತನ್ನ ಬೆರಳುಗಳಿಂದ ತೆರೆಯಲು ನೋಡಿದ. ಬಿಳುಚಿಕೊಂಡ ಪಾದಗಳಲ್ಲಿ ಅಲ್ಲಲ್ಲಿ ಇನ್ನೂ ಗುಲಾಬಿ ಬಣ್ಣಗಳು ಮಾಸಿರಲಿಲ್ಲ ಆತ ಯಾಂತ್ರಿಕವಾಗಿ ಅಂಗೈಯಿಂದ ಉಜ್ಜಿ ಉಜ್ಜಿ ಪ್ರಾಣ ತುಂಬಲು ಯತ್ನಿಸಿದ. ಸಿಂಧೂರಿಯೂ ಭುಜಕ್ಕೆ ಆನಿಸಿ ಅವನ ಕಣ್ಣುಗಳನ್ನೇ ಆಳವಾಗಿ ನೋಡಿದಂತೆ ಭಾಸವಾಯಿತು.
ಸುಲಭ ನರ್ಸಿಂಗ್ ಹೋಮಿನಲ್ಲಿ ಇಂತಹ ಅದೆಷ್ಟು ಎಳೆಜೀವಿಗಳನ್ನು ನಿರ್ಭಾವುಕತನದಿಂದ ಅವರವರ ಪೋಷಕರ ಕೈಗೆ ಕೊಟ್ಟು ,”ಚಾಯ್ ಪಾನಿ ಸಾಹಬ್ ” ಎಂದು ಅವರು ಕೊಡುವ ಜುಜುಬಿ ಹಣಕ್ಕಾಗಿ ಕೈಯೊಡ್ಡುತ್ತಿದ್ದೆ.
ಇದೀಗ ಹಿಂದಿನ ರಾಜಿ ಮಾಡಲಾಗದ ತಪ್ಪುಗಳೆಲ್ಲಾ ನ್ಯಾಯ ಕೇಳುವಂತೆ ಅವನ ಸುತ್ತ ಸುಳಿಯಲಾರಂಭಿಸಿದವು . ದುಃಖ , ನೋವು , ಹಿಂಸೆ , ತಾಪ ಪಶ್ಚಾತಾಪಗಳೆಲ್ಲಾ ಒಂದಾಗಿ ಅಶ್ರುತರ್ಪಣವಾಗ ತೊಡಗಿದವು .
ಪುರುಷೋತ್ತಮ , “ಅದೆಂಥಾ ಭಾವುಕಜೀವಿಯಪ್ಪಾ ನೀನು! ಹೀಗೆಲ್ಲಾ ಅಳುತ್ತಾ ಕೂತರೆ ಆಗಲಿಕ್ಕಿಲ್ಲ ಏಳು ಎದ್ದೇಳು“. ಮೊದಲು ಪೊಲೀಸರಿಗೆ ದೂರುಕೊಟ್ಟು ಬಾ. ಅವರು ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಕೊಡ್ತಾರೆ. ಅದನ್ನು ತಗೊಂಡು ಬಾ. ಆ ಬಳಿಕ ಮುಂದಿನ ಕೆಲಸ ಎಂದು ಪ್ರಯತ್ನಪೂರಕವಾಗಿ ಕುಬೇರನನ್ನು ದುಃಖದ ಲೋಕದಿಂದ ಹೊರಗೆಳೆದು ತಂದ.
ಅದೇ ಕೊನೆ ಆ ಬಳಿಕ ರಾತ್ರಿ ಹನ್ನೆರಡು ನಂತರ ನಿರ್ದಾಕ್ಷಿಣ್ಯವಾಗಿ ಗೇಟ್ ಬಂದ್!!!
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ