ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಣ್ವಾಶ್ರಮದ ಜಂಬೂಫಲ – ಕೃಷ್ಣನ ವ್ಯವಸ್ಥಾಪನ ತಂತ್ರ

ಕೆ.ಜನಾರ್ದನ ತುಂಗ
ಇತ್ತೀಚಿನ ಬರಹಗಳು: ಕೆ.ಜನಾರ್ದನ ತುಂಗ (ಎಲ್ಲವನ್ನು ಓದಿ)

ಇತ್ತೀಚೆಗೆ ಓದಿದ ಲೇಖನವೊಂದು ನನ್ನಲ್ಲಿದ್ದ ಹಳೆಯ ಅನುಮಾನವೊಂದನ್ನು ಬಡಿದೆಬ್ಬಿಸಿತು. ಕಣ್ವಾಶ್ರಮದ ಜಂಬೂಫಲದ ಪ್ರಸಂಗವದು. ಕಣ್ವರು ತಪಸ್ಸು ಮುಗಿಸಿ ಕಣ್ಣು ತೆರೆಯುವುದರೊಳಗೆ ಪಾಂಡವರೈವರು ಮತ್ತು ದ್ರೌಪದಿಗೆ ಕೃಷ್ಣ ನಿಮ್ಮನುಕೂಲಧರ್ಮಂಗಳನು ಬೇಗದಿ ಹೇಳಿ ಆಗ ಫಲವು ತನ್ನ ಠಾವನ್ನಡರುವುದು ಎಂದು ಹೇಳುತ್ತಾನೆ.

ಅಂತೆಯೇ ಪಾಂಡವರೈವರು ತಾವು ಅನುಸರಿಸುವ ಜೀವನಧರ್ಮವನ್ನು ಪ್ರಕಟಪಡಿಸುತ್ತಾರೆ. ಫಲವು ಹಂತಹಂತವಾಗಿ ಮೇಲೇರುತ್ತದೆ.

ಈಗ ದ್ರೌಪದಿಯ ಸರದಿ. ಆಕೆ,

ಸುಂದರಂ ಪುರುಷಂ ದ್ರಷ್ಟ್ವಾ
ಪಿತರಂ ಭ್ರಾತರಂ ಸುತಂ|
ಯೋನಿರ್ದ್ರವತಿ ನಾರೀಣಾಂ
ಸತ್ಯಂ ಬ್ರೂಮೀಹ ಕೇಶವ||

ಸುಂದರ ಪುರುಷರನ್ನು ಅವರು ತಂದೆ‌, ಸಹೋದರ,‌ ಸುತರ ಸ್ಥಾನದಲಿದ್ದರೂ ಯೋನಿರ್ದ್ರವಣವಾಗುತ್ತದೆ, ಇದು ಸಹಜ ಹಾಗೂ ಸತ್ಯ ಎನ್ನುತ್ತಾಳೆ. ಫಲವು ಒಂದಿನಿತೂ‌ ಕದಲುವುದಿಲ್ಲ. ಕಾರಣ, ದ್ರೌಪದಿ‌ ಸುಳ್ಳು ಹೇಳಿದಳೆ? ಖಂಡಿತ ಇಲ್ಲ. ಆಕೆ ತನ್ನ ಜೀವನದಲ್ಲಿ ಒಮ್ಮೆ‌ ನಡೆದುಹೋದ ಘಟನೆಯನ್ನು ಮರೆತಿಲ್ಲ. ಅದನ್ನು ನೇರವಾಗಿ ಹೇಳುವ ಬದಲು ಅದು ನಾರಿಯರ ಸಹಜ ಗುಣವೆಂಬಂತೆ ಪರೋಕ್ಷವಾಗಿ ಸೂಚಿಸುತ್ತಾಳೆ.

ಆ ಘಟನೆ ಯಾವುದು? ಸ್ವಯಂವರವೆಂಬ ನಾಟಕದ ಸಂದರ್ಭದಲ್ಲಿ ಅಣ್ಣ ದೃಷ್ಟದ್ಯುಮ್ನ ದ್ರೌಪದಿಯನ್ನು ಮಹಾಮಹೀಶ್ವರರ ನಡುವೆ ಕರೆತಂದು ಅವರವರನಿವರಿವರೆಂದು ವಿವರಿಸಿ ಅವರಂತರಂಗವನಂಗವಟ್ಟದ ಬಳಕೆಯನು ಬಹಿರಂಗದಲಿ ನೀನರಿಯೆನುತ ಪರಿಚಯಿಸುತ್ತಾನೆ. ಹೀಗೆ ಎಲ್ಲರನ್ನೂ ತೋರಿಸುತ್ತ ಕರ್ಣನ ಹತ್ತಿರ ಬಂದಾಗ

ಭೂತಳದ ರವಿಯಂತೆ ಹೊಳೆಹೊಳೆ
ವಾತ ಕರ್ಣನು ತನುಜರೀತಂ
ಗೀತಗಳು ವೃಷಸೇನನಗ್ಗದ ಚಿತ್ರಸೇನಕರು
ಈತನಾಹನೆ ನೋಡೆನಲು ಭಾ
ವಾತಿಶಯ ಸಂಬಂಧ ಭಾವದೊ
ಳೀತನನು ನೋಡಿದಳು ತಿರುಹಿದಳಬಲೆ ಲೋಚನವ

ಭೂಮಿಯ ಮೇಲಿನ ಸೂರ್ಯನಿವನು, ಈತನೇ ಕರ್ಣ ಎಂಬ ವರ್ಣನೆ ಕೇಳಿ ಮುಂದೆ ಸಾಗಿದವಳೂ ತಿರುಗಿ ಭಾವಾತಿಶಯದಿಂದ ನೋಡುತ್ತಾಳೆ. ಆಗ ಏನಾಗುತ್ತದೆ?

ಉಕ್ಕಿದಾ ಕಿವಿವೇಟ ಕಣ್ ಬೇ
ಟಕ್ಕೆ ತಂದುದು ಕಂಗಳೀಕೆಯ
ಮುಕ್ಕುಳಿಸಿ ಮೈ ಸೋಂಕಿನಲಿ ಲಟಕಟಿಸಿದುದು ಹೃದಯ
..

ಕಿವಿಯಿಂದ ಕೇಳಿದ ಕರ್ಣನ ರೂಪ, ಬಲುಹುಗಳು ಕಣ್ಣ ನೋಟಕ್ಕೆ ಎದುರಾಗಿ ಅವನನ್ನು ಹಾದು ಹೋದಾಗ ಉಂಟಾದ ಮೈ ಸೋಂಕಿನಿಂದ ಅವಳಿಗೆ ಭಾವಾತಿಶಯ ಉಕ್ಕಿಬಂದು ಹೃದಯ ಲಟಕಟಿಸಿತು.

ಆಗ

ಸಿಕ್ಕಿತಳಲಿಗೆ ಸೋತು ಸೊಕ್ಕಿನ
ಚುಕ್ಕಿಯೋ ಚಾಪಳವೋ ಸಿದ್ದಿಯೊ
ಅಕ್ಕಜವೊ ತಾನೆನುತ ಚಿಂತಿಸಿತಾ ನೃಪವ್ರಾತ

ನೃಪಸಂದೋಹವು ಅಳಲಿಗೆ ಸಿಕ್ಕಿ ಸೋತಿತು. ಈ‌ ದ್ರೌಪದಿಯು ಮೈಮರೆಸುವ ತಾರೆಯೋ (ಮಾಯೆಯೋ), ಅಥವ ಕರ್ಣನನ್ನು ನೋಡಲು ಆಕೆಯ ಮನಸ್ಸಿನ‌ ಚಪಲತೆ ಕಾರಣವೋ, ಕರ್ಣ ದ್ರೌಪದಿಯ ಮನಗೆದ್ದನೋ, ಅಥವ ನಮಗೆ ಇದರಿಂದ ಅಸೂಯೆ (ಅಕ್ಕಜ) ಉಂಟಾಗಿದೆಯೋ ಎಂದು ಚಿಂತಿಸತೊಡಗಿತು.

ದ್ರೌಪದಿಗೆ ಆಗಿದ್ದುದು ಒಂದರೆಕ್ಷಣದ ಭಾವಾತಿಶಯ. ಇಲ್ಲದಿದ್ದರೆ, ದ್ರುಪದ ಸಕಲ ಧರಣೀರಾಯರನು ಮನ್ನಿಸದೆ ಮರಳಿದಳಾಯತಾಕ್ಷಿ ಮಹಾಸ್ವಯಂವರದಲಿ ಎಂದು ಹೇಳುತ್ತಿರಲಿಲ್ಲ. ದ್ರೌಪದಿ ಕರ್ಣನನ್ನು ಪತಿಯಾಗಿ ಆಯ್ದುಕೊಳ್ಳಲಿಲ್ಲ.

ಹೀಗಾಗಿ ಆ ಭಾವಾತಿಶಯ ಅಂದೇ ಮರೆಯಾಯಿತು. ಮುಂದೆ ದುಃಶಾಸನ ಅವಳ ಮುಂದಲೆಯನ್ನು ಹಿಡಿದು ತುಂಬಿದ ಸಭೆಗೆ ಎಳೆತಂದಾಗ ಧರ್ಮಗತಿಯನು ತಿಳಿದು ಹೇಳಲಿ ಎಂದು ಆಗ್ರಹಿಸಿದಾಗ ಕರ್ಣ,

ಚಪಳೆ ಫಡ ಹೋಗಿವಳು ಹಲಬರ
ನುಪಚರಿಸುವುದನರಿಯಲಾದುದು
ದ್ರುಪದ‌ನಂದನೆ ನಡೆ ವಿಳಾಸಿನಿಯರ ವಿಧಾನದಲಿ
ಕೃಪಣನೇ‌ ಕುರುರಾಯ ನಿನಗಿ
ನ್ನಪದೆಸೆಯ ಹೊಲೆ ಹೋಯ್ತು ರಾಯನ
ವಿಪುಳ ವಿಭವವನನುಭವಿಸು ನಡೆಯೆಂದನಾ ಕರ್ಣ

ಎನ್ನುತ್ತಾನೆ. ತನ್ನನ್ನು ಸೂಳೆ ಎಂದು ಕರೆದ ಕರ್ಣನ ಮೇಲೆ‌ ವ್ಯಾಮೋಹವಿರುವುದು ಸಾಧ್ಯವೆ?

ಹಾಗಿದ್ದರೂ ದ್ರೌಪದಿ ತನ್ನ ಅನುಕೂಲ ಧರ್ಮವನ್ನು ಪರೋಕ್ಷವಾಗಿ ಹೇಳಲು ಕಾರಣ ಸ್ತ್ರೀ ಸಹಜವಾದ ಸಿಗ್ಗು. ಆಗ ಅಲ್ಲಿರುವುದು ಪತಿಗಳೈವರು ಮಾತ್ರವಲ್ಲ,‌ಕುಲಪುರೋಹಿತರಾದ ಧೌಮ್ಯರೂ ಇದ್ದಾರೆ, ಕೃಷ್ಣನೂ ಇದ್ದಾನೆ. ಈ‌ ಪ್ರಸಂಗವೇ ಒಂದು ಯಜ್ಞ. ತಮ್ಮತಮ್ಮ ಅನುಕೂಲಧರ್ಮಗಳನ್ನು ನೆನೆದು ಅದನ್ನು ಬಲಗೊಳಿಸಿಕೊಂಡು ಮುಂದಿನ ಮಹಾಭಾರತಕ್ಕೆ ಇದೂ ಒಂದು ಪೂರ್ವತಯಾರಿ! ಕೃಷ್ಣೆ ತನ್ನ ಮನಸ್ಸಿನಲ್ಲಿ ಇಂದು ಪರಪುರುಷರಿಲ್ಲ ಎಂಬುದನ್ನು ಬಹಿರಂಗವಾಗಿ ಸಾರಬೇಕಾಗಿತ್ತು. ಅದು ಕೃಷ್ಣನ ತಂತ್ರವೂ ಹೌದು.‌

ಧರ್ಮರಾಯ ತನ್ನ ಧರ್ಮಪ್ರಿಯತೆ, ಭೀಮ ತನ್ನ ಅಭಿಮಾನ ಪ್ರಿಯತೆ, ಅರ್ಜುನ ತನ್ನ ರಣೋತ್ಸಾಹ, ನಕುಲ ತನ್ನ ಆಶಯ, ಸಹದೇವ ತನ್ನ ಬಂಧುಗಳು ಯಾರೆಂದು ಬಹಿರಂಗವಾಗಿ ಹೇಳಬೇಕಿತ್ತು. ಮುಂದಿನ‌ ಮಹಾಭಾರತಕ್ಕೆ ಮೊತ್ತ ಮೊದಲ ತಂಡದ ರಚನೆ ಇಲ್ಲಿ ಸಂಭವಿಸಿದೆ. ಇಲ್ಲಿ ಇಬ್ಬರು ತಾಯಂದಿರ ಮಕ್ಕಳು‌, ಐವರಿಗೆ ಮಡದಿಯಾದ ಬೇರೊಂದು ಮನೆಯಿಂದ ಬಂದ ಹೆಣ್ಣು ಈ ಪುಟ್ಟ ತಂಡದ ಭಾಗವಾಗಿದ್ದಾರೆ. ಇವರೆಲ್ಲರೂ ತಮ್ಮ ಮನದಿಂಗಿತವನ್ನು ಬಹಿರಂಗವಾಗಿ ಸಾರಿ ಒಂದು‌ ಅಭೇದ್ಯ ತಂಡವಾಗಬೇಕಿತ್ತು.

ಇಲ್ಲಿನ‌ ಸಂದೇಶ ಸ್ಪಷ್ಟವಾಗಿದೆ. ಧರ್ಮರಾಯನು ಆತ್ಮವತ್ ಸರ್ವಭೂತಾನಿ ಎಂದು ಮಾದ್ರೀಸುತರಿಗೆ ಭರವಸೆ ನೀಡುತ್ತಾನೆ. ಮಾತೃವತ್ ಪರದಾರಾಣಿ ಎಂದು ಭೀಮ ಅರ್ಜುನರಿಗೆ ಭರವಸೆ ನೀಡುತ್ತಾನೆ. (ಅವರಿಬ್ಬರಿಗೂ ದ್ರೌಪದಿಯಲ್ಲದೆ ಬೇರೆ ಪತ್ನಿಯರಿದ್ದರು. ಹಿರಿತನದ ವರಸೆಯಿಂದ ಅವರ ಮೇಲೆ ಅಧಿಕಾರವನ್ನು ಸ್ಥಾಪಿಸುವುದಿಲ್ಲ ಎಂಬ ಭರವಸೆ) ಕೃಷ್ಣನಿಗೆ ಭೀಮಾರ್ಜುನರನ್ನೂ ಪರೀಕ್ಷಿಸಬೇಕಿತ್ತು. ಧರ್ಮರಾಯನಿಗೆ ದ್ರೌಪದಿಯ ಮಾನಕ್ಕಿಂತ ತನ್ನ ಧರ್ಮ ಮುಖ್ಯವಾಗಿತ್ತು. ಐದು ಗ್ರಾಮಗಳೇ ಸಾಕು, ಯುದ್ಧ ಬೇಡ ಎಂದವನು, ಅವನು. ಅರ್ಜುನ ಅಣ್ಣನ ಮಾತು ಕೇಳುವವನು. ದ್ರೌಪದಿಯ ಶಪಥ ಪೂರ್ಣವಾಗಬೇಕಾದರೆ ಯುದ್ಧ ನಡೆಯಲೇ ಬೇಕು. ಅದಕ್ಕಾಗಿ ಭೀಮನಿಗೆ ಅವನ ಧರ್ಮವನ್ನು ನೆನಪಿಸುತ್ತಾನೆ. ಜೀವವನ್ನು ತೊರೆದಾದರೂ ಮಾನರಕ್ಷಣೆ ಮಾಡುತ್ತೇನೆ ಎಂದು ಅವನಿಂದ ಹೇಳಿಸುತ್ತಾನೆ.

ಭೀಮ ಭಾವಜೀವಿ. ಅವನಿಂದ ಒಂದು ಯುದ್ಧದ ಸೇನಾಧಿಪತ್ಯ ವಹಿಸಿಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ಅರ್ಜುನನ ಹತ್ತಿರ ತಾನು ರಣೋತ್ಸವನು ಅಂದರೆ ಹೇಗೆ ಬ್ರಾಹ್ಮಣರು ಆಮಂತ್ರಣವನ್ನು, ಹಸುಗಳು ಹುಲ್ಲನ್ನು, ಹೆಂಡತಿಯು ಗಂಡನನ್ನು, ನೋಡಿ ಉತ್ಸಾಹಿತರಾಗುತ್ತಾರೋ, ಅವುಗಳನ್ನು‌ ನಿರಾಕರಿಸುವುದಿಲ್ಲವೋ ಅದೇ ರೀತಿ ನಾನು ಯುದ್ಧವನ್ನು ನಿರಾಕರಿಸುವುದಿಲ್ಲ‌,‌ಯುದ್ಧದ ಮಾತು ಕೇಳಿಯೇ ಉತ್ಸಾಹಿತನಾಗುತ್ತೇನೆ ಎಂದು ಹೇಳಿಸುತ್ತಾನೆ.

ಮಾದ್ರೀತನಯರು ಮಲತಾಯಿಯ ಮಕ್ಕಳು. ಕೃಷ್ಣನು ಕರ್ಣನನ್ನು ಭೇದಿಸಿದಂತೆ ಅವರನ್ನು ಶತ್ರುಗಳು ಭೇದಿಸುವ ಸಾಧ್ಯತೆಗಳಿವೆ. ಹೀಗಾಗಿ ಅವರ ನಿಷ್ಠೆಯನ್ನೂ ಪರೀಕ್ಷೆ ಮಾಡುತ್ತಾನೆ, ಕೃಷ್ಣ.

ದ್ರೌಪದಿಯು ಸ್ವಯಂವರಕ್ಕೆ ನೆರೆದ ರಾಜಸಭೆಯಲ್ಲಿ ಕರ್ಣನನ್ನು ಹಿಂದಿರುಗಿ‌ ನೋಡಿದ್ದು ಮತ್ತು ಅವಳಲ್ಲಿ ಉಂಟಾದ ಭಾವಾತಿಶಯವನ್ನು ಅದೇ ಸಭೆಯಲ್ಲಿ ಕುಳಿತಿದ್ದ ಕೃಷ್ಣ ಗಮನಿಸಿದ್ದ. ಇಂದು ಕರ್ಣ ವಿರೋಧಿ ಪಾಳಯದಲ್ಲಿದ್ದಾನೆ. ಹೀಗಾಗಿ ಅವಳನ್ನೂ‌ ಪರೀಕ್ಷಿಸುವುದು ಅನಿವಾರ್ಯವಾಯಿತು. ಆದರೆ ಆಕೆ ಅಡ್ಡಗೋಡೆಯ ಮೇಲೆ‌ ದೀಪವಿಟ್ಟಂತೆ ಮಾತನಾಡಿದಳು. ಅವಳ‌ ಮನಸ್ಸಿನಲ್ಲಿ‌ ಇರುವುದೇನೆಂದು‌ ಯಾರಿಗೂ ತಿಳಿಯದಾಯಿತು. ಆಗ ಕೃಷ್ಣ ವಂಚಿಸದೆ ನಿಶ್ಚಯವ ಹೇಳು ಎನ್ನುತ್ತಾನೆ. ಇದಕ್ಕೆ ಉತ್ತರವಾಗಿ ದ್ರೌಪದಿಯು

ಪಂಚ ಮೇ‌ ಪತಯಸ್ಸಂತಿ
ಷಷ್ಠಸ್ತು ಮಮ ರೋಚತೇ
ಪುರುಷಾಣಾಮಭಾವೇನ
ಸರ್ವನಾರ್ಯಾಃ ಪತಿವ್ರತಾಃ

ಪತಿಗಳೀಶ್ವರನಾಜ್ಞೆಯಿಂದವೆ
ಯತಿಶಯದಲೈವರು ಮನಸ್ಸಿನ
ಮತದಲಾರಾಗಿಹುದು ಬೇರೊಂದಿಲ್ಲ ಚಿತ್ತದಲಿ
ಪೃಥಿವಿಯಲಿ ಪರಪುರುಷರನು ದು
ರ್ಮತಿಯೊಳೊಡಬಡುವವಳು ಸತಿಯೇ
ಸತತ ಕರುಣಾಕರಯೆನಲು ಫಲ ಠಾವನಡರಿದುದು

ನಾನು ಯೋಚಿಸಿದ್ದು, ನನ್ನ ಮನಸ್ಸಿನಲ್ಲಿರುವುದು ಇಷ್ಟೇ, ನಾನು ಐವರು ಪತಿಗಳನ್ನು ವರಿಸಲು ಈಶ್ವರನಾಜ್ಞೆ ಕಾರಣ. ಮದುವೆ ಎನ್ನುವುದು ದೈವ ಬಯಸಿದಂತೆಯೇ ಆಗುವುದು. ಆದರೆ ಮನಸ್ಸಿನಲ್ಲಿ ಒಬ್ಬರನ್ನು ಇಷ್ಟ ಪಟ್ಟಿದ್ದಾದರೆ ಅವರೂ ಮನದ ಮತದಲ್ಲಿ ಪತಿಯೇ ಆಗುತ್ತಾರೆ. ಆದರೆ ಈಗ ಅವನು ನನ್ನ ಮನದಲ್ಲಿಲ್ಲ. ಏಕೆಂದರೆ ಈ ಭೂಮಿಯಲ್ಲಿ ಪರಪುರುಷನನ್ನು ಕೆಟ್ಟ ಉದ್ದೇಶದಿಂದ ಸೇರುವವಳು, ಅವನನ್ನು ಒಪ್ಪಿಕೊಳ್ಳುವವಳು ಎಂದಿಗೂ ಸತಿಯಾಗುವುದು, ಪತಿವ್ರತೆಯಾಗುವುದು ಸಾಧ್ಯವಿಲ್ಲ. ಎಂದು ಸ್ಪಷ್ಟ ಪಡಿಸುತ್ತಾಳೆ. ಆಗ ಫಲ ಮೇಲೆ‌ ಹೋಗಿ ತೊಟ್ಟಿನೊಂದಿಗೆ ಸೇರಿಕೊಳ್ಳುತ್ತದೆ.

ಕೃಷ್ಣನಿಗೆ ಇಂಥದೊಂದು ಪರೀಕ್ಷೆ ಬೇಕೆನ್ನಿಸಿತು. ಇಲ್ಲಿ ಫಲ ಎಂದರೆ ಹಸ್ತಿನಾವತಿಯ ರಾಜ್ಯ. ಇದನ್ನು ಪಡೆಯಬೇಕಾದರೆ ಆರೂ ಜನರು ಒಟ್ಟಿಗಿರಬೇಕು. ಪಾರದರ್ಶಕವಾಗಿರಬೇಕು. ಅವರೆಲ್ಲ ಈಗ ಅರಣ್ಯವಾಸದಲ್ಲಿದ್ದಾರೆ. ರಾಜಭೋಗವನ್ನು ಕಳೆದುಕೊಂಡು ಕಂದಮೂಲಗಳನ್ನು ತಿಂದು ಬದುಕುವ ಸ್ಥಿತಿ ಬಂದಿದೆ. ಹೀಗಾಗಿ ಬುದ್ಧಿ ಚಂಚಲವಾಗುವುದು ಸಹಜ. ಸ್ವಾರ್ಥ ಮುಂದಾಗುವುದೂ ನಿರೀಕ್ಷಿತ. ಹೀಗಾಗಿ ಈ ಸಂದರ್ಭ ಸೃಷ್ಟಿಯಾಯಿತು.

ಈ ಸಂದರ್ಭವನ್ನು ಆಟಕ್ಕಿಳಿಯುವ ಮೊದಲು ಆಟಗಾರರು ಮೈದಾನದಲ್ಲಿ ಪರಸ್ಪರ ಭುಜದ ಮೇಲೆ ಕೈ ಹಾಕಿ ಬಾವಿಯನ್ನು ಮಾಡಿ ತಲೆತಗ್ಗಿಸಿ ಅಂದಿನ ಆಟದ ಬಗ್ಗೆ ಸಮಾಲೋಚನೆ ಮಾಡುವ ಪರಿಗೆ ಹೋಲಿಸಬಹುದು.

ಸಾವಿರ ಚಾಣಕ್ಯನಿಗಿಂತ ಮೇಲು, ಒಬ್ಬ ಕೃಷ್ಣ. ಆತ ಮಹಾನ್ ತಂತ್ರಗಾರ. ಅವನ ಒಂದೊಂದು ನಡೆಯೂ ಅಧ್ಯಯನ ಯೋಗ್ಯವೇ.