- ನೂರು ನೂರು ತರಹ - ಏಪ್ರಿಲ್ 13, 2021
- ಅಜಿತ್ ಹರೀಶಿ - ಜೂನ್ 28, 2020
- ಮತ್ತೆ ಮಳೆ.. - ಜೂನ್ 6, 2020
ಪುಟ್ಟನ ಹೆಜ್ಜೆ ಕಾಣೋದಿಲ್ಲಾ
ಕಥಾಸಂಕಲನ
ಯಶವಂತ ಚಿತ್ತಾಲ
ಪ್ರಿಸಮ್ ಬುಕ್ಸ್
ಹೋದಾ ಪುಟ್ಟಾ ಬಂದಾ ಪುಟ್ಟಾ, ಪುಟ್ಟನ ಹೆಜ್ಜೆ ಕಾಣೋದಿಲ್ಲಾ ಎಂಬುದು ಒಂದು ಜನಪ್ರಿಯ ಒಗಟು.ಚಿತ್ತಾಲರು ಇದರ ದ್ವಿತೀಯಾರ್ಧವನ್ನು ತಮ್ಮ ಕಥೆಯೊಂದರ ಶೀರ್ಷಿಕೆಯಾಗಿಸಿದ್ದಾರೆ.ಮುಂಬೈನಿಂದ ಊರಿಗೆ ಹೋಗುವ ನಿರೂಪಕ ಅಲ್ಲಿ ಎದುರಿಸುವ ಸಂದರ್ಭದ ಒಂದು ಕಥೆಯಿದು. ಆ ಊರಿನ ನಾಗವೇಣಿ ಎಂಬ ಹುಡುಗಿಯು ಮುಂಬೈಗೆ ಓಡಿಹೋಗಿದ್ದಾಳೆ ಎಂಬ ಊಹೆಯ ಸುತ್ತ ನಡೆಯುವ ಕತೆಯಿದೆ. ಒಂದು ಹಳ್ಳಿಯ ಮನಸ್ಥಿತಿ ಮತ್ತು ವ್ಯಕ್ತಿಗಳ ನಡುವಳಿಕೆಗಳ ಕುರಿತಾದ ಕಥನವಿದು.
ತುಸು ತಡೆದು ಪ್ರಯತ್ನಿಸಿರಿ – ಇದು ತಾನು ಬರೆದ ೬೫ನೆಯ ಕಥೆಯೆಂದು ಚಿತ್ತಾಲರು ಹೇಳಿದ್ದಾರೆ. ಟ್ರೈ ಆಫ್ಟರ್ ಸಮ್ ಟೈಂ ಎಂದು ಫೋನಿನ ಆನ್ಸರಿಂಗ್ ಮಶೀನ್ ಹೇಳುವುದು ಇಲ್ಲಿ ಇನ್ನೇನನ್ನೋ ಹೊಳೆಯಿಸುತ್ತದೆ. ಸುನೀಲ ಪ್ರೀತಿಸಿದ ಹುಡುಗಿಯ ಹೆಸರು ಲಲಿತಾ. ಇಲ್ಲಿ ದೇವಕಿ ಮಾವಶಿಯ ಪಾತ್ರ ಎಲ್ಲವನ್ನೂ ಬಿಡಿಸಿ ಇಡುತ್ತ ಹೋಗುತ್ತದೆ. ಅಂತಿಮವಾಗಿ ಸುನೀಲ ತೆಗೆದುಕೊಂಡ ನಿರ್ಧಾರ ಸರಿಯೆನಿಸುತ್ತದೆ.
ಯಾರ ಕಥೆ ಯಾರು ಹೇಳಿದ್ದು – ಸಣ್ಣಪ್ಪ ನಾಯ್ಕನ ಸಾವಿನ ಕತೆಯಿದು. ಚಾದುಕಾನಿನ ಸುಬ್ರಾಯ ‘ ಸಣ್ಣಪ್ಪನ ಗುಟ್ಟು ರಟ್ಟಾಯಿತು’ ಎಂದು ಹೇಳುತ್ತಾ, ಕತೆಯು ತೆರೆದುಕೊಳ್ಳುವ ರೀತಿ ಅಧ್ಯಯನ ಯೋಗ್ಯವಾಗಿದೆ.
ನಮ್ಮೆಲ್ಲರ ಸುಂದರಿ – ಶಂಕರರಾಯರ ಒಬ್ಬಳೇ ಮಗಳು ಸುಂದರಿ ಒಂದು ದಿನ ನಸುಕಿನಲ್ಲೇ ಅದೃಶ್ಯಳಾಗಿ ಎಲ್ಲರಿಗೂ ಪ್ರಶ್ನೆಯಾಗಿ ಕಾಡುವಳು. ಎಲ್ಲರೂ ಅವರಿಗೆ ಬೇಕಾದ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಈ ಕತೆ ಚಾರಿತ್ರ್ಯ ಹರಣದ ಬಗ್ಗೆ ಬೆಳಕು ಚೆಲ್ಲುತ್ತದೆ.
ಈಗ ನನ್ನನ್ನೇ ತೆಗೆದುಕೋ – ಈ ಶೀರ್ಷಿಕೆಯನ್ನು ಓದುವಾಗ ಗಂಗಾವತಿ ಪ್ರಾಣೇಶ ಅವರ ಜೋಕು ನೆನಪಾಗುತ್ತದೆ.ಶ್ರೀಧರ ಮತ್ತು ಪದ್ಮಾವತಿಯರ ಮನೆಗೆ ಬರುವ ರಾಮಚಂದ್ರ ಎಂಬ ನಿಗೂಢ ಮನುಷ್ಯನ ಕತೆಯಿದು. ಅಪಘಾತದಲ್ಲಿ ತೀವ್ರ ರಕ್ತಸ್ರಾವದಿಂದ ಸಾವು ಬದುಕಿನ ಮಧ್ಯೆ ಹೋರಾಡುವ ರಾಮಚಂದ್ರನಿಗೆ ನೀಡುವ ರಕ್ತದಿಂದ ಎಚ್.ಐ.ವಿ ಸೋಂಕು ತಗುಲುತ್ತದೆ. ಹಾಗೆ ತನ್ನದಲ್ಲದ ತಪ್ಪಿನಿಂದ ತೊಳಲಾಡುವ ವ್ಯಕ್ತಿಯ ಚಿತ್ರಣ ಕಾಡುತ್ತದೆ.
ಕಾಮಾಕ್ಷಿ ಮಾಡಲೆಳಸಿದ ಅತಿ ದಿಟ್ಟ ಕೆಲಸ – ವರದಕ್ಷಿಣೆಯ ಪಿಡುಗಿನ ಕುರಿತು ಕಾಮಾಕ್ಷಿ ತೆಗೆದುಕೊಳ್ಳುವ ದಿಟ್ಟ ಹೆಜ್ಜೆಯ ಕಥೆಯಿದು. ಗಂಡನ ಕಡೆಯವರು, ಹೆಣ್ಣು ಮತ್ತು ಅವಳ ಪೋಷಕರ ಕೋನಗಳನ್ನು ತುಂಬಾ ಮನೋಜ್ಞವಾಗಿ ಚಿತ್ತಾಲರು ಇಲ್ಲಿ ಚಿತ್ರಿಸಿದ್ದಾರೆ.
ಕುಂಟನ್ಮನೆ ಬೀರ – ನನಗೆ ಪ್ರಿಯವಾದ ಮತ್ತು ವಿಭಿನ್ನವಾದ ಕಥೆ. ಹಳ್ಳಿಗಳಲ್ಲಿ ಅಡ್ಡಹೆಸರು ಮತ್ತು ಮನೆ ಹೆಸರನ್ನು ಹಿಡಿದು ಕರೆಯುವುದು ವಾಡಿಕೆ. ಆದರೆ ಕುಂಟನ್ಮನೆ ಎಂಬುದು ಅಂಗವೈಕಲ್ಯದ ಸೂಚನೆ. ಅದಕ್ಕೆ ಬೀರ ಎಂಬ ಹುಡುಗ ತನ್ನ ಮನೆತನದ ಹಿರಿಯ ಯೋಧನಾಗಿದ್ದ, ಆಗ ಕಾಲು ಕಳೆದುಕೊಂಡಿದ್ದರಿಂದ ಬಂದ ಹೆಸರಿದು ಎಂದು ನಂಬತೊಡುಗುತ್ತಾನೆ. ಅದು ಅವನಿಗೆ ನೆಮ್ಮದಿ ಕೊಡುತ್ತದೆ. ಒಂದು ದಿನ ಅವನು ನಾಪತ್ತೆಯಾಗುತ್ತಾನೆ. ಇದಕ್ಕೆ ಕೆಂಪಿ ಎಂಬ ಯುವತಿ ಹೇಗೆ ಕಾರಣ ಎಂದು ಕತೆ ಹೇಳುತ್ತದೆ. ಬೀರನು ಯೋಧನಾಗದಿದ್ದರೂ, ಮುಂದೆ ಅಗ್ನಿಶಾಮಕ ದಳದ ಸಿಬ್ಬಂದಿಯಾಗಿ ನೆಮ್ಮದಿ ಕಂಡು ಮುಂದೊಮ್ಮೆ ಊರಿಗೆ ಬರುತ್ತಾನೆ. ಆಗ ತನಗೆ ಇಷ್ಟವಾದರೂ ಕೆಂಪಿಯನ್ನು ಮದುವೆಯಾಗದಿರಲು ಬೀರನು ಕೊಡುವ ಕಾರಣವು – ಚಿತ್ತಾಲರ ಕಥನ ಕೌಶಲ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
ಉತ್ತಮ ಕಥೆಗಳಿಗಾಗಿ ಒಮ್ಮೆ ಓದಲೇಬೇಕಾದ ಪುಸ್ತಕವಿದು.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ