- ಕಾಂಚನ ಸೀತ - ಮಾರ್ಚ್ 10, 2022
ತನ್ನ ಜೀವನದ ಬೆಳಗಿನಲ್ಲಿ ನಾಲ್ಕು ಕಾಲಿನಲ್ಲಿ ನಡೆಯುವ ಮನುಷ್ಯ ಸಂಜೆ ಮೂರುಕಾಲಿನವನಾಗುತ್ತಾನೆ. ನಾಲ್ಕರಿಂದ ಮೂರುಕಾಲಿನವರೆಗಿನ ಈ ಪ್ರಯಾಣದಲ್ಲಿ ಅವನ ಬದುಕಿನಲ್ಲಾಗುವ ಬೆಳಾವಣಿಗೆಗಳು, ಸ್ಥಿತ್ಯಂತರಗಳು ಅವನನ್ನು ಹಲವು ರೀತಿಯಲ್ಲಿ ಬದಲಾಯಿಸುತ್ತವೆ. ಬಾಲ್ಯದ ಎಳವೆಯಲ್ಲಿ ಕನಸಿದ್ದಂತೆ ಜೀವನ ಖಂಡಿತಾ ಇರುವುದಿಲ್ಲ. ಪ್ರಾಮುಖ್ಯತೆಗಳು, ಪ್ರಮುಖರು ಬದಲಾಗುತ್ತಾರೆ. ಬದುಕಿನ ಹೋರಾಟದಲ್ಲಿ ಮುಳುಗಿ ಹೋಗುವ ಅವನಿಗೆ, ಬಾಲ್ಯದ ಕನಸಿನ ಲೋಕ, ಆಣೆ ಪ್ರಮಾಣಗಳು ಸುಪ್ತ ಮನಸ್ಸಿನಲ್ಲಿ ಹುದುಗಿ ಹೋಗಿರುತ್ತವೆ. ಇಹದ ಮೋಹದ ಮುಸುಕು ಸರಿದಮೇಲೆ, ಥಟ್ಟನೆ ಸುಪ್ತ ಬಯಕೆ ಕನಸುಗಳು ಮುನ್ನೆಲೆಗೆ ಬಂದು ತಾಂಡವವಾಡಿ, ತಣ್ಣಗೆ ಹರಿಯುತ್ತಿದ್ದ ಬದುಕಿನಲ್ಲಿ ರಾಡಿ ಎಬ್ಬಿಸಿ ಹೋಗುತ್ತವೆ.
ಅಂತಹುದೇ ರಾಡಿ, ೬೦೦ ರೂಗಳನ್ನು ಕೆನಡಾದಲ್ಲಿ ಪಾವತಿಸಿ, ಆರಾಮವಾಗಿ ಚನ್ನ ಬತೂರ ತಿನ್ನುತ್ತಿದ್ದ, “ಕಾಂಚನ ಸೀತ” ಕಾದಂಬರಿಯ ನಾಯಕ ವೆಂಕಟ ಸುಬ್ಬರಾವ್ ನ ಜೀವನದಲ್ಲಿ ಇನ್ಸಂಟ್ ಆಗಿ ಎದ್ದುಬಿಟ್ಟಿದೆ. ಅದರ ಪೂರ್ವಾಪರವನ್ನು ವಿವರಿಸುವ ಕೃಷ್ಣಮೂರ್ತಿ ಚಂದರ್ ರ ಪ್ರಯತ್ನವೇ, ಕಾಂಚನಸೀತ ಕಾದಂಬರಿ. ಇಂಜಿನಿಯರಿಂಗ್ ಅನ್ನು ಭಾರತದಲ್ಲಿ ಮುಗಿಸಿ, ಕನಸುಗಳ ಬೆಂಬತ್ತಿ ಅಮೆರಿಕೆ ಸೇರುವ ವೆಂಕಟಸುಬ್ಬರಾಯರಿಗೆ, ಜೀವನ ಅದಾಗಲೇ ಕೇಳಿದ್ದೆಲ್ಲವನ್ನೂ ನೀಡಿ ಅತ್ಯಂತ ತೃಪ್ತವಾಗಿಸಿದೆ. ನಿವೃತ್ತ ಜೀವನವನ್ನು ತನ್ನಿಚ್ಛೆಯ ಕಾರ್ಯಭಾರದೊಂದಿಗೆ ಕಳೆಯುತ್ತಿರುವ ವೆಂಕಟಸುಬ್ಬರಾಯರಿಗೆ, ಚಿಂತಿಸಲು ಏನೂ ಇಲ್ಲದ ಹೊತ್ತಿನಲ್ಲಿ, ಧುತ್ತೆಂದು ತಮ್ಮ ಬಾಲ್ಯ ಸಖಿ ʻಕಾಂಚೀʼ, ಕಾಂಚನಳ ನೆನಪಾಗಿ ಬಿಡುತ್ತದೆ. ಅದರೊಂದಿಗೇ, ಚಾಮರಾಜನಗರದಲ್ಲಿ ಕಳೆದ ಬಾಲ್ಯದ ದಿನಗಳು, ಕಾಂಚನಳೊಂದಿಗಿನ ಸಖ್ಯ, ಸ್ನೇಹ, ಆತ್ಮೀಯತೆ,ವಾಪಾಸು ಬರುತ್ತೇನೆಂದು ಆಕೆಗೆ ಮಾಡಿದ ಪ್ರಮಾಣ ಎಲ್ಲವೂ ನೆನಪಿಗೆ ಬಂದು, ಇಷ್ಟು ದಿನದ ವಿಸ್ಮೃತಿ ಆತನಲ್ಲಿ ಪಾಪಪ್ರಜ್ಞೆ ಹುಟ್ಟಿಸಿ, ಮರುದಿನವೇ ಮೈಸೂರಿಗೆ ಹೊರಟು, ಆಕೆಯನ್ನು ಹುಡುಕಲು, ಪ್ರಮಾಣ ನಿಜವಾಗಿಸಲು ಅನುವಾಗುತ್ತಾನೆ. ಇಲ್ಲಿಂದ ಹುಡುಕಾಟ ಪ್ರಾರಂಭವಾಗುತ್ತದೆ. ಟ್ರೈನಿನಲ್ಲಿ ಜೊತೆಯಾಗುವ ನಂಜನಗೂಡಿನ ʻಸತ್ಯʼನ ಹೆಸರಿನ ಮನುಷ್ಯ, ನಾಯಕನಿಗೆ ಸತ್ಯದ ಹುಡುಕಾಟದಲ್ಲಿ ನೆರವಾಗುವುದು ಕಾಕತಾಳೀಯ. ಹುಡುಕಾಟದ ಜೊತೆಜೊತೆಗೇ ವೆಂಕಟ ಸುಬ್ಬುವಿನ ಜೀವನದ ಪುಟಗಳೂ ತೆರೆದುಕೊಳ್ಳುತ್ತಾ ಕಾಲ ಹಿಂದೆ-ಮುಂದೆ ಚಲಿಸುತ್ತಾ ಭೂತ ವರ್ತಮಾನದ ದರ್ಶನ ಮಾಡಿಸುತ್ತಾ ಸಾಗುತ್ತದೆ.
ಕಾಂಚನ ನಾಯಕನಿಗೆ ಸಿಕ್ಕರೂ ಅವಳ ಜೀವನದಲ್ಲಿ ಇಲ್ಲದ ಸಂದಿಗ್ಧ ಮೂಡಿಸುವುದು ಬೇಡ ಎಂದು ನಾಯಕ ಹಿಂತಿರುಗಿ ಬಿಡುವಲ್ಲಿ ಕಾದಂಬರಿ ಮುಗಿಯುತ್ತದೆ. ಮನುಷ್ಯನ ಜೀವನದ ನಿರಂತರ ಅತೃಪ್ತಿ, ಇರದುದರೆಡೆಗೆ ತುಡಿವ ಹಂಬಲ, ಅನುಕೂಲಕ್ಕನುಗುಣವಾಗಿ ಮರೆವ-ನೆನಪಿಟ್ಟುಕೊಳ್ಳುವ ಮನುಷ್ಯ ಗುಣ, ಕ್ಷಣಮಾತ್ರದಲ್ಲಿ ಆಗುವ ಜ್ಞಾನೋದಯದ ಸೌಂದರ್ಯವನ್ನು ಈ ಕಾದಂಬರಿ ಒಟ್ಟೊಟ್ಟಿಗೆ ನಮ್ಮ ಅರಿವಿಗೆ ತರುವುದು ಕಾದಂಬರಿಯ ವಿಶೇಷ. ಕಾದಂಬರಿ ಪ್ರಾರಂಭವಾಗುವುದು ಝಗಮಗಿಸುವ ವಿದೇಶೀ ನಾಡಿನಲ್ಲಿ. ಅಲ್ಲಿಂದ ನಾಗರೀಕ ಪ್ರಪಂಚದ ಹಿಮ್ಮುಖ ಪಯಣ ಶುರುವಾಗಿ, ಬೆಂಗಳೂರು, ಮೈಸೂರು, ನಂಜನಗೂಡು, ಚಾಮರಾಜನಗರ, ಬಳಿಗಿರಂಗನ ಬೆಟ್ಟ ಕೊನೆಗೆ ಸಂಪಿಗೆ ಮರ ಇರುವ ಶುದ್ಧ ಕಾಡಿನಲ್ಲಿ ವೆಂಕಟಸುಬ್ಬರಾವ್ ರ ಪಯಣ-ಹುಡುಕಾಟ ಬಂದು ನಿಲ್ಲುತ್ತದೆ. ಮನುಷ್ಯನ ಜೀವನದ ಗತಿ, ದಿನಕಳೆದಂತೆ ಐಹಿಕ ಪ್ರಪಂಚದಿಂದ ವಿಮುಖವಾಗುವ ಪರಿಯನ್ನು ಸೂಕ್ಷ್ಮವಾಗಿ ಈ ಪಯಣದ ಮೂಲಕ ಹೇಳಿರುವುದು ಜಾಣಶೈಲಿ.
ವೆಂಕಟಸುಬ್ಬರಾವ್ ಮತ್ತು ಕಾಂಚನ ನಡುವಿನ ಸಂಬಂಧ ಬಾಲ್ಯಕಾಲದಲ್ಲಿ ಶುರುವಾಗಿ ಅಲ್ಲಿಯೇ ಪರ್ಯಾವಸನಗೊಂಡದ್ದು. ಮೈಸೂರಿಗೆ ಸ್ಥಳಾಂತರವಾದ ನಂತರ ತನ್ನ ಜೀವನದ ಜಂಟಾಟದಲ್ಲಿ ಮುಳುಗಿದ ವೆಂಕಟಸುಬ್ಬರಾವ್ ನ ಸುಪ್ತಮನಸ್ಸಿಗೆ ಸೇರಿಹೋದ ಕಾಂಚನಾಳ ನೆನಪಾಗುವುದು, ಜೀವನ ಸಂಧ್ಯೆಯಲ್ಲಿ.ಸುಲಲಿತವಾಗಿ ಕಳೆದ ಜೀವನ ಯಾವಾಗಲಾದರೂ ಸಹಜ ಅಂತ್ಯ ಕಾಣಬಹುದಾದ ಪರಾಕಾಷ್ಠೆಯಲ್ಲಿ. ಜೀವವುಳಿಸಿದ ಆಪ್ತೆ ಕಾಂಚನ ಹಿನ್ನೆಲೆಗೆ ಸರಿದು ಐಹಿಕದಲ್ಲಿ ಮುಳುಗಿ ಹೋಗುವ ವೆಂಕಟಸುಬ್ಬರಾವ್ ನ ನಡೆ ಸಮರ್ಥನೀಯವಲ್ಲದಿದ್ದರೂ ತರ್ಕಕ್ಕೆ ನಿಲುಕುವಂಥದ್ದು. ಕಾಂಚನಾಳೂ ತನ್ನದೇ ಜೀವನದಲ್ಲಿ ಬೆರೆತುಹೋದವಳು. ಇಬ್ಬರೂ ಪರಸ್ಪರರ ಬಗ್ಗೆ ಇದ್ದ ಭಾವನೆಗಳನ್ನು ಹಂಚಿಕೊಂಡವರಲ್ಲ. ಕಾಂಚನ ತನ್ನ ʻಸುಬ್ಬುʼವಿಗಾಗಿ ಕಾಯ್ದದ್ದೂ ಇಲ್ಲ. ಆದರೂ ಇಬ್ಬರಲ್ಲೂ ಆ ಸ್ನೇಹದ ಆರ್ದ್ರತೆ ಆತ್ಮದ ಜೊತೆ ಬೆರೆತು ಹೋಗಿರುವುದು ನಮಗೆ ವೇದ್ಯವಾಗುತ್ತದೆ. ನಿಜ ಪ್ರೀತಿಗೆ ಇಹದ ಬಂಧನಗಳ ಹಂಗಿಲ್ಲ, ಅವಕಶ್ಯಕತೆಯಿಲ್ಲ. ಅದು ದೈಹಿಕ ದೂರಗಳನ್ನು ಮೀರಿ ಶಾಶ್ವತವೆನಿಸುವಂಥದ್ದು ಎಂಬುದನ್ನು ವೆಂಕಟಸುಬ್ಬರಾಯರ ವರ್ತನೆ ಹೇಳುತ್ತದೆ.
ಇಹದ ವ್ಯಾಪಾರ ಮುಗಿಸುವ ಮುಂಚೆ, ಎಸಗಿದ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಮನುಷ್ಯನ ತುಡಿತ ವೆಂಕಟಸುಬ್ಬರಾವ್ ನ ಹುಡುಕಾಟ. ಬಾಲ್ಯವೆಂಬ ಬೆಚ್ಚಗಿನ ಮೂಸೆಯಲ್ಲಿ ಆಗಿಹೋದ ಒಂದು ಸುಮಧುರ ಅಧ್ಯಾಯ ವೆಂಕಟಸುಬ್ಬರಾವ್ ನ ಇಳಿಹೊತ್ತಿನಲ್ಲಿ ನೆನಪಾಗಿ, ಆ ಸುಂದರಾನುಭವಕ್ಕೆ ಅನ್ಯಾಯವೆಸಗಂತೆ ಆತ ಹುಡುಕಾಟಕ್ಕಿಳಿಯುವುದು ಪ್ರೀತಿಯ ಮಾಯೆಯ ಶಕ್ತಿ. ಕಾಂಚನ ಮದುವೆಯಾಗಿ ಪರರಾಜ್ಯ ಸೇರಿದ್ದು ಅವಳ ಮೊದಲ ವನವಾಸವಾದರೆ, ಪತಿಯ ನಿಧನದ ನಂತರ, ಪಕೃತಿಯ ಮಡಿಲಲ್ಲಿ ಧ್ಯಾನಸ್ಥ ಜೀವನ ನಡೆಸುತ್ತಿರುವುದು ಸೀತೆಯ ರೀತಿಯ ಎರಡನೆಯ ವನವಾಸವೆನ್ನುವ ಸೂಚನೆ ಲೇಖಕರು ನೀಡಿದ್ದಾರೆ. ರಾಮನಿಗೆ ಸೀತೆ ಹೇಗೆ ಎರಡನೆಯ ಬಾರಿಗೆ ಸಿಗದೆ, ಭೂಮಿತಾಯಿಯ ಮಡಿಲು ಸೇರಿ ಹೋಗುತ್ತಾಳೋ, ಹಾಗೆಯೇ ಇಲ್ಲಿ ಕಾಂಚನ ಸುಬ್ಬುವಿಗೆ ಸಿಗಲಾರದಷ್ಟರಮಟ್ಟಿಗೆ ಪ್ರಕೃತಿಯಲ್ಲಿ ಸೇರಿಹೋಗಿದ್ದಾಳೆ, ಸುಬ್ಬುವೇ ಹಿಂದೆ ಸರಿಯುವ ಮಟ್ಟಿಗೆ.
ಕಾದಂಬರಿ ಓದುಗರಲ್ಲಿ ಒಂದು ಸುಂದರ ಅನುಭೂತಿ ಮೂಡಿಸಿ, ತಮ್ಮ ತಮ್ಮ ಅಪೂರ್ಣ ಪ್ರೇಮದ ನೆನಪುತರಿಸುವುದು ಒಂದು ಮುಖವಾದರೆ, ಐಹಿಕದಲ್ಲಿ, ಆಯ್ಕೆ-ಆದ್ಯತೆಗಳು ಲೌಕಿಕದ ಕಟ್ಟಿಗೆ ಬಿದ್ದು ಬದಲಾದರೂ, ಹೃದಯಾಂತರಾಳದಲ್ಲಿ ಅವುಗಳು ಹೇಗೆ ತಮ್ಮ ಸಾಮ್ರಾಜ್ಯ ಸ್ಥಾಪಿಸಿಕೊಂಡು ವಿರಾಜಮಾನವಾಗಿ ಇದ್ದೇ ಇರುತ್ತವೆ ಎಂಬ ಸೂಚನೆಯ ಸುಂದರ ನಿರೂಪಣೆ ಕೃಷ್ಣಮೂರ್ತಿ ಚಂದರ್ ರ “ಕಾಂಚನ ಸೀತ”.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ