- ಕನ್ನಡ ನಾಟ್ಕ ಇನ್ ತೆಲುಗು ದೇಶಂ ..! - ನವೆಂಬರ್ 22, 2023
- ಕನ್ನಡ ನಾಟ್ಯ ರಂಗ - ನವೆಂಬರ್ 21, 2023
- ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು - ನವೆಂಬರ್ 1, 2023
2021 ರ ಆಗಷ್ಟ್ 15 ರ ರಾತ್ರಿ…
ಜಗತ್ತಿನ ಅತಿ ಮುಖ್ಯ ಪ್ರಜಾ ಪ್ರಭುತ್ವದ ಉಜ್ವಲ ಉದಾಹರಣೆಯಾದ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ನಡೆದು ಧ್ವಜದಕಂಬದ ಹೂಗಳು ಇನ್ನೂ ಬಾಡಿರಲಿಲ್ಲ. ನಮ್ಮ ನೆರೆಯ ಮಿತ್ರ ರಾಷ್ಟ್ರ ಅಫ್ಘಾನಿಸ್ತಾನ ದಿಂದ ಅತ್ಯಂತ ದುರ್ದೈವದ ಸುದ್ದಿಗಳು ಬರತೊಡಗಿವೆ. ಈ ಲೇಖನ ಬರೆಯುವ ಹೊತ್ತಲ್ಲಿ ಅದಾಗಲೇ, ತಾಲಿಬಾನ್ ಅಫ್ಘನಿಸ್ತಾನ್ ಎಲ್ಲಾ ಭಾಗವನ್ನೂ ಆಕ್ರಮಿಸಿ ಇದೀಗ ರಾಜಧಾನಿ ಕಾಬೂಲನ್ನು ಹೆಚ್ಚು ಕಮ್ಮಿ ಕಬಳಿಸಿ ನಿಂತಿದೆ. ಪ್ರಸ್ತುತ ಸರಕಾರ ತಕ್ಷಣ ತನಗೆ ಅಧಿಕಾರ ಹಸ್ತಾಂತರಿಸಿ ನಿರ್ಗಮಿಸುವದನ್ನು ಎದುರು ನೋಡುತ್ತಿದೆ. 15 ರ ರಾತ್ರಿಯ ಹೊತ್ತಿಗೆ ಅಫ್ಘಾನಿಸ್ತಾನದ ಪ್ರೆಸಿಡೆಂಟ್ ಅಶ್ರಫ್ ಘನಿ ತನ್ನ ಕುಟುಂಬದೊಂದಿಗೆ ಉಜ್ಬೆಕಿಸ್ತಾನಕ್ಕೆ ತುರ್ತು ವಿಮಾನದಲ್ಲಿ ದೇಶ ತೊರೆದಾಗಿದೆ.. ವಿವಿಧ ದೇಶಗಳ ರಾಯಭಾರ ಕಚೇರಿಯ ಸಿಬ್ಬಂದಿಗಳೂ ಸೇರಿದಂತೆ ಅಲ್ಲಿನ ವಿದೇಶಿಗರು ತಮ್ಮ ಸುರಕ್ಷೆಗಾಗಿ ದೇಶ ಬಿಟ್ಟಿದ್ದಾರೆ. ಈಗಾಗಲೆ ಏರ್ ಇಂಡಿಯಾ ಕೂಡ 126 ಪ್ರಯಾಣಿಕರನ್ನು ಹೊತ್ತ ವಿಮಾನವನ್ನು ದೆಹಲಿಗೆ ತಂದಿಳಿಸಿದೆ. ತಾಲಿಬಾನ್ ಅಫ್ಘಾನಿಸ್ತಾನದ ಅಧ್ಯಕ್ಷರ ಭವನವನ್ನು ಕೂಡ ತನ್ನ ಹತೋಟಿಗೆ ತೆಗೆದುಕೊಂಡ ಸುದ್ದಿ ಈಗಷ್ಟೆ ಬರುತ್ತಿದೆ. ಈ ನಡುವೆ, ಗಡಿಯೊಳಗಿನ ಭದ್ರತೆಯ ನೆಲೆಗಳೆಲ್ಲ ತಾಲಿಬಾನ್ ನಿಯಂತ್ರಿಸುತ್ತಿದ್ದಂತೆ ಅತ್ತ ಪಾಕಿಸ್ತಾನ ಅಫ್ಘನ್ ಜೊತೆಗಿನ ಗಡಿ ತೊರ್ಖಮ್ ಅನ್ನು ಪೂರ್ತಿಯಾಗಿ ಮುಚ್ಚಿದೆ.
ಕೋಡ್ ರೆಡ್
ಕಾಬೂಲಿನಲ್ಲೀಗ ಕೋಡ್ ರೆಡ್ ನಂತಹ ಪರಿಸ್ಠಿತಿ. ಬ್ಯಾಂಕುಗಳಲ್ಲಿ ತಮ್ಮ ಹಣವನ್ನು ತೆಗೆಯಲು, ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟು ಕೊಳ್ಳಲು ಮೇಲಾಟ.. ಉದ್ವಿಗ್ನ ವಾತಾವರಣ. ಜನರಿಂದಲೇ ಲೂಟಿಯಾಗುವ ಸ್ಥಿತಿ ಯಾವುದೇ ಕ್ಷಣದಲ್ಲೂ ಉಂಟಾಗಬಹುದಾದ ಭಯ. ಏರ್ ಪೋರ್ಟ್ ನಲ್ಲಂತೂ ನೂಕು ನುಗ್ಗಲು. ಉಸಿರು ಗಟ್ಟುವ ಜನ ಸಂದಣಿ, ಬೇಗೆಯಲ್ಲಿ ಯುವಕರು ಕೂಡ ತತ್ತರಿಸಿ ಹೋಗಿರುವ ವರದಿ ಬಂದಿದೆ. ಕೈಲಿ ಬೋರ್ಡಿಂಗ್ ಪಾಸ್ ಇದ್ದರೂ ಸೆಕ್ಯುರಿಟಿ ಗೇಟ್ ನಲ್ಲಿ ತಪಾಸಣೆಯ ವಿಳಂಬದಿಂದಾಗಿ ಕಾಬೂಲ್ ತೊರೆದು ಬದುಕಿಕೊಳ್ಳುವ ಆಶಯದ ಫ್ಫ್ಲೈಟ್ ಕೂಡ ಹಲವರಿಗೆ ಮಿಸ್ ಆಗಿದೆ. ಇಸ್ತಾಂಬುಲ್ ಹಾಗೂ ದುಬೈಯ ಒಬ್ಬರ ಒನ್ ವೇ ಟಿಕೆಟ್ ದರ ಲಕ್ಷ ದಾಟಿದೆಯಂತೆ (ರೂಪಾಯಿಗಳಲ್ಲಿ).
ಇನ್ನೂ ಜನ ಸಾಮಾನ್ಯರ ಪಾಡು ಯಾರಿಗೂ ಬೇಡ. ಈಗಾಗಲೆ ಅಫ್ಘನಿಸ್ತಾನ ದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನರು ಬೀದಿಗೆ ಬಂದಿದ್ದಾರೆ. ಆಹಾರ, ಔಷಧಿ, ಆಶ್ರಯಗಳಿಗೆ ಯಾವುದೇ ಗ್ಯಾರಂಟಿ ಇಲ್ಲ. ಮಾನವ ಹಕ್ಕುಗಳ ಸ್ವಯಂ ಸೇವಕರೂ ಕೂಡ ದೇಶ ಬಿಡಬೇಕಾಗಿ ಬಂದಿರುವುದರಿಂದ ನೆರವು ಮರಿಚೀಕೆ.
ಕಾಬೂಲಿನಲ್ಲಂತೂ ಭಯ, ಗೊಂದಲಗಳದೇ ಸಾಮ್ರಾಜ್ಯ.. ಗುಂಡಿನ ಸದ್ದು, ಅಲ್ಲಲ್ಲಿ ಹೊತ್ತಿ ಉರಿಯುವ ಬೆಂಕಿ ಕಿಡಿಯ ದೃಶ್ಯ ದಿಕ್ಕು ತೋಚದೇ ಮನೆಯಲ್ಲಿಯೆ ಅಡಗಿ ಕುಳಿತ ಭಯ ಮಿಶ್ರಿತ ಕಣ್ಣುಗಳ ಜನ.
ಅಮೇರಿಕದ ಮಹಾ ಸೋಲು.?
ಕಳೆದ ಇಪ್ಪತ್ತು ವರ್ಷಗಳಷ್ಟು ದೀರ್ಘ ಕಾಲದ, ವಿದೇಶೀ ನೆಲದಲ್ಲಿ ಹೀಗೆ ಕೊನೆಯಾದೀತು ಎಂದು ಯಾರು ಉಹಿಸಿಯಾರು..?. ಇದೇ ಬರುವ ಸೆಪ್ಟೆಂಬರ್ 11 ರ ಹೊತ್ತಿಗೆ ಅಮೇರಿಕದ ಸೈನ್ಯವನ್ನು ಪೂರ್ತಿಯಾಗಿ ಹಿಂಪಡೆಯುವ ನಿರ್ಧಾರ ಪ್ರಕಟಿಸಿದ್ದ ಅಮೆರಿಕದ ಅಧ್ಯಕ್ಷ ಬೈಡೆನ್ ನನ್ನ ಟೀಕಾಕಾರರಿಗೆ ಉತ್ತರಿಸುತ್ತಾ, ‘ಇನ್ನೂ ಎಷ್ಟು ದಿನ ಹೀಗೆ ವಿದೇಶಿ ನೆಲದಲ್ಲಿ ಅಮೇರಿಕ ಸೈನಿಕರು ವೃಥಾ ಜೀವ ತೆರಬೇಕು… ಇನ್ನೆಷ್ಟು ಅಮೇರಿಕನ್ನರ ಸೋದರಿ, ತಾಯಂದಿರು ತ್ಯಾಗ ಮಾಡಬೇಕು…’ ಎನ್ನುತ್ತಾ ತನ್ನ ನಿರ್ಧಾರವನ್ನು ಅಚಲಗೊಳಿಸಿದ್ದರು.
ಅಫ್ಘನಿಸ್ತಾನ್ ದಿಂದ ಅಮೆರಿಕ ಎಂಟು ಹತ್ತು ಸಾವಿರ ಸೈನಿಕ ತುಕಡಿಗಳನ್ನು ವಾಪಸ್ ಕರೆಸಿಕೊಳ್ಳಲು ಇದು ಸಕಾಲವಲ್ಲ ಎಂದು ಎಚ್ಚರಿಸಿದ ಕೆಲ ಸಲಹಾಕಾರರ ಮಾತನ್ನು ಅಧ್ಯಕ್ಷ ಬೈಡೆನ್ ತಲೆಗೆ ಹಾಕಿಕೊಂಡಿರಲಿಲ್ಲ. ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮಯದ ಕೆಲ ವರ್ಷ ಗಳಲ್ಲಿ ತಾಲಿಬಾನ್ ಹೆಚ್ಚು ಶಕ್ತಿಯುತ ವಾಗಿ ಬೆಳೆದಿದ್ದು, ಟ್ರಂಪ್ ಆಡಳಿತ, ಅಫ್ಘನ್ ಸರಕಾರವನ್ನು ಹೊರಗಿಟ್ಟು , ತಾಲಿಬಾನ್ ನ ಜೊತೆಗೆ ಸಂಧಾನ ಆರಂಭಿಸಿದ್ದು ಅಮೆರಿಕದ ಸೈನ್ಯವನ್ನು ಹಿಂಪಡೆಯುವ ಬಗ್ಗೆ ಪ್ರಯತ್ನ ಆರಂಭಿಸಿದ್ದು ಇತ್ಯಾದಿಗಳತ್ತ ಬೊಟ್ಟು ಮಾಡಿ ತೋರಿಸುತ್ತಾರೆ ಬೈಡೆನ್.ಹಾಗೆ ನೋಡಿದರೆ ಅಮೆರಿಕಕ್ಕೆ ಕೂಡ ಬೇರೆ ಅವಕಾಶ ಇತ್ತೇ.. ಅನಿರ್ದಿಷ್ಟ ಅವಧಿಗೆ ತನ್ನ ಸೈನಿಕರನ್ನು ಬಿಟ್ಟು ಇನ್ನೊಂದು ದೇಶ ಕಾಯುವ ದರ್ದು ಏನಿತ್ತು ಅಂತ ಕೂಡ ಕೇಳಬಹುದಾದ ಸ್ಥಿತಿ ನಿರ್ಮಾಣವಾಗಿದ್ದು ಸಹಜ.
ಕೇವಲ ಯುದ್ಧ ಮುಖೇನ ಯಾವ ಪರಿಹಾರವೂ ಆಗದೆಂಬುದು, ತಾಲಿಬಾನ್ ಜೊತೆಗೆ ಸಂಧಾನ ಆರಂಭಿಸಿದ್ದು ಹಾಗೂ ಅಫ್ಘನ್ ಸರಕಾರದ ಸೈನ್ಯ ದೇಶವನ್ನ ರಕ್ಷಿಸುವಲ್ಲಿ ವಿಫಲವಾಗುತ್ತಿರುವುದೂ ಇವೆಲ್ಲ ಕಾರಣಗಳಿಂದ ತಾಲಿಬಾನ್ ಪ್ರಾಬಲ್ಯ ಹೆಚ್ಚುವುದು, ಮತ್ತೆ ಮುಂಚೂಣಿಗೆ ಬರುವುದು ಖಚಿತವಾಗಿತ್ತು. ಆದರೆ, ಯಾವುದೇ ಹೆಚ್ಚಿನ ಶ್ರಮ, ಕ್ರಮ ವಿಲ್ಲದೇ,ನಿರೀಕ್ಷಿಸದ ವೇಗದಲ್ಲಿ ಇದೀಗ ತಾಲಿಬಾನ್ ಪೂರ್ತಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ.
9/11 ಅಟ್ಯಾಕ್
2001 ರಲ್ಲಿ ಅಮೆರಿಕದ ತನ್ನ ಮೇಲಿನ ಆಕ್ರಮಣಕ್ಕೆ ಉತ್ತರವಾಗಿ, ಸುಸಜ್ಜಿತ ಪಡೆಗಳನ್ನು ಅಫ್ಘನಿಸ್ತಾನದಲ್ಲಿ ಮುನ್ನುಗ್ಗಿಸಿ, ಅಲ್ ಖೈದಾ ಭಯೋತ್ಪಾದಕರನ್ನು ಸದೆ ಬಡೆಯುವ ಕೆಲಸವನ್ನು ಆರಂಭಿಸಿತು. ಆರಂಭದಲ್ಲಿ ಇದು ಯಶಸ್ವಿಗೊಂಡು, ತಾಲಿಬಾನ್ ಹಿಮ್ಮೆಟ್ಟಿ ಅಫ್ಘಾನಿಸ್ತಾನದಲ್ಲಿ ಪ್ರಜಾ ತಾಂತ್ರಿಕ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಶಾಲೆ, ಆಸ್ಪತ್ರೆ, ಮಾಧ್ಯಮ, ಆಡಳಿತ ವ್ಯವಸ್ಥೆ ಹೀಗೆ ಎಲ್ಲವೂ ಹುಟ್ಟಿಕೊಂಡಿದ್ದವು. ಶಾಲಾ ಕಾಲೇಜಿನಲ್ಲಿ ಹೆಣ್ಣು ಮಕ್ಕಳೂ ಕೂಡ ಕಲಿಯುವ ವ್ಯವಸ್ಥೆ ಅವಕಾಶ ಕಲ್ಪಿಸಲಾಗಿತ್ತು. ಯು.ಎಸ್. ಹಾಗೂ ನ್ಯಾಟೋ ಪಡೆಗಳು ಸ್ಥಳೀಯ ಸೈನಿಕರೊಂದಿಗೆ ಸೇರಿ ದೇಶವನ್ನು ತಾಲಿಬಾನಿನ ಕಪಿ ಮುಷ್ಟಿಯಿಂದ ಸತತವಾಗಿ ದೂರ ಇರಿಸುವಲ್ಲಿ ಸಫಲರಾಗಿದ್ದರು. 2001 ರಲ್ಲೇ ಅಫ್ಘಾನಿಸ್ತಾನದ ಆಲ್ ಖೈದಾ ಆತಂಕಿಗಳು ಅಫ್ಘಾನಿನಿಂದ ನೆರೆಯ ಪಾಕಿಸ್ತಾನಕ್ಕೆ ತಲೆ ಮರೆಸಿಕೊಂಡು ಹೋಗಿದ್ದರು.
ಇನ್ನೂ 2011 ಮೇ ಹೊತ್ತಿಗೆ ಒಸಾಮ ಬಿನ್ ಲಾಡೆನ್ ಎಂಬ ಕುಖ್ಯಾತ ಭಯೋತ್ಪಾದಕ ಮುಖಂಡನನ್ನು ಅಮೆರಿಕದ ಪಡೆಗಳು ಪಾಕಿಸ್ತಾನದ ಅಬೋಟ್ಟಾಬಾದ್ ನಲ್ಲಿ ಕೊಂದಿದ್ದೂ ಎಲ್ಲರಿಗೂ ತಿಳಿದ ವಿಷಯವೇ.
ಅದಾದ ಮೇಲೆ, ಅಫ್ಘಾನಿಸ್ತಾನದಿಂದ ವಾಪಸಾಗುವ ಬಗ್ಗೆ ಒಬಾಮಾ ಕೂಡ ಹೇಳಿಕೆ ಕೊಟ್ಟರೂ, ಅದು ಅಷ್ಟು ಸುಲಭವಾಗಿರಲಿಲ್ಲ. ಇತ್ತಿಚೆಗೆ ಟ್ರಂಪ್ ಆಡಳಿತ ಅಮೆರಿಕ ತಾಲಿಬಾನ್ ಜೊತೆ ಮಾತಾಡಿ, ಅಶ್ರಫ್ ಘನಿ ಸರಕಾರದ ಜೊತೆ ಜೊತೆಗೆ ಅಧಿಕಾರ ಹಂಚಿಕೊಳ್ಳುವ ನಿಟ್ಟಿನಲ್ಲಿ ಸಂಧಾನದ ನಡೆಸುವ ಪ್ರಯತ್ನ ಆರಂಭಿಸಿತ್ತು. ಅಂತೆಯೆ ಬೈಡೆನ್ ಕೂಡ ಅದನ್ನು ಮುಂದುವರೆಸಿ ಸೆಪ್ಟೆಂಬರ್ 11 ರ ವರೆಗೆ ಸೇನೆಯನ್ನು ಪೂರ್ತಿ ಹಿಂಪಡೆವ ಬಗ್ಗೆ ಮಾತಾಡಿದರೂ, ನಾಲ್ಕೈದು ವಾರಗಳ ಮುಂಚೆಯೆ ತಾಲಿಬಾನ್ ಆಗಲೇ ಅಫ್ಘಾನ್ ಅನ್ನು ಕಬಳಿಸಿ ಕೂತಿದೆ. ಪ್ರಸ್ತುತ ಸರಕಾರ ಪೂರ್ತಿಯಾಗಿ ಕುಸಿದಿದೆ. ಇದೀಗ ಅಮೇರಿಕದ 20 ವರ್ಷಗಳ ಶ್ರಮ, ಬಲಿದಾನ,ಖರ್ಚು ಎಲ್ಲವೂ ಕೆಲ ತಿಂಗಳಲ್ಲೇ ಮಣ್ಣು ಪಾಲಾಗಿವೆ. ಅಷ್ಟು ವರ್ಷದಿಂದ ತರಬೇತಿ ನೀಡಿ ಬೆಳೆಸಿದ್ದ ಅಫ್ಘನ್ ಸೈನ್ಯ, ಸೂಕ್ತ ನಾಯಕತ್ವದ ಕೊರತೆಯಿಂದ, ದೇಶ ರಕ್ಷಿಸಿ ಕೊಳ್ಳಲಾಗದೇ ತಾಲಿಬಾನ್ ಮುಂದೆ ಸಂಪೂರ್ಣ ಶರಣಾಗಿದ್ದು ವಿಷಾದಕರ.
ಅಶ್ರಫ್ ಘನಿ ಸರಕಾರದ ಆಡಳಿತ ಕೂಡ ಭ್ರಷ್ಟಾಚಾರ, ಅನಾವಸ್ಥೆ ಗಳಿಂದ ತುಂಬಿ ಕೂಡಿದ್ದರೂ, ಮುಖ್ಯವಾಗಿ ಇದ್ದ ಪ್ರಜೆಗಳ ಸ್ವಾತಂತ್ರ್ಯಕ್ಕೆ ಇದೀಗ ತಾಲಿಬಾನಿಗಳಿಂದ ಧಕ್ಕೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳು ಹೊರಗೆ ಹೋಗದೆ, ಬೆರೆತು ಆಡದೇ ಮರೆಯಲ್ಲೇ ಉಳಿವ ಅಂಧಕಾರ ಯುಗದ ಆರಂಭ ಅಫ್ಘನಿಸ್ತಾನ್ ದಲ್ಲಿ ಆಗಿರುವುದು ಖೇದದ ಸಂಗತಿ. ಬೈಡೆನ್ ಇವೆಲ್ಲವನ್ನೂ ತಡೆಯಬಹುದ್ದಿದ್ದರೂ ಮನಸ್ಸು ಮಾಡಲಿಲ್ಲ ಎಂಬುದು ಅನೇಕರ ಅಂಬೋಣ .
ಒಟ್ಟಿನಲ್ಲಿ, ಇಪ್ಪತ್ತು ವರ್ಷಗಳ ಬಳಿಕ ಅದೇ ಹಿಂದಿನ ದುಸ್ಥಿತಿಗೆ ಅಫ್ಘನ್ ದೇಶವನ್ನು ತಳ್ಳುವ ಮೂಲಕ ಹಾಗೂ ತಾಲಿಬಾನ್ ರಾಜಾರೋಷವಾಗಿ ಗೆಲ್ಲುವುದರ ಮೂಲಕ, ಅಮೆರಿಕಕ್ಕೆ ಅಷ್ಟೇ ಅಲ್ಲ ಇಡೀ ವಿಶ್ವದ ಜವಾಬ್ದಾರಿಯುತ ರಾಷ್ಟ್ರಗಳಿಗೆ ಉಂಟಾದ ದೊಡ್ಡ ಐತಿಹಾಸಿಕ ಹಿನ್ನಡೆ ಇದಾಗಿದೆ ಎನ್ನಬಹುದು.
ಇದೀಗ, ಈಸ್ಟೋನಿಯ, ನಾರ್ವೆ ದೇಶಗಳು UN ಸೆಕ್ಯುರಿಟಿ ಕೌನ್ಸಿಲ್ ಮೀಟಿಂಗ್ ಕರೆಯಲು ಮನವಿ ಮಾಡಿದ್ದಾರೆ. ಇತ್ತ ಅಫ್ಘನಿಸ್ತಾನದಿಂದ ವಲಸೆ ಬರಬಹುದಾದ ನಿರಾಶ್ರಿತರ ಮಹಾಪೂರವನ್ನು ತಡೆಯುವ ಬಗ್ಗೆ ಯುರೋಪಿನ ಅನೇಕ ರಾಷ್ತ್ರಗಳು ಚಿಂತಿಸಲು ಆರಂಭಿಸಿವೆ.
ಮುಂಬರುವ ದಿನಗಳು ಕರಾಳ
ಕಚೇರಿಗಳಲ್ಲಿ ಕೆಲಸ ಮಾಡುವವರು ತಾಲಿಬಾನ್ ಭಯದಿಂದ ಅಡಗಿಕೊಂಡಿರುವುದರಿಂದ, ವಿದ್ಯುತ್ ಸೇರಿದಂತೆ ಎಲ್ಲ ಅವಶ್ಯಕ ಸೇವೆಗಳು ಕುಂಠಿತಗೊಂಡಿವೆ. ತಾಲಿಬಾನ್ ಸರಕಾರೀ ಕೆಲಸಗಾರರ ಮೇಲೆ ಜಿಹಾದ ಘೋಷಿಸಿ ಶಿಕ್ಷಿಸುವ ಭಯ ಇದೆ. ಅಂತರಿಕ ಪ್ರಜಾ ಕಲಹ ಕೂಡ ಭುಗಿಲೇಳುವ ಸಾಧ್ಯತೆಯೊಂದಿಗೆ, ಪ್ರಜಾಪ್ರಭುತ್ವದಿಂದ ನಳನಳಿಸಬೇಕಾಗಿದ್ದ ದೇಶ ಈಗ ತಾಲಿಬಾನಿ ಧರ್ಮದ ದಳ್ಳುರಿಯಲ್ಲಿ ಬೇಯುವ ದುಸ್ಥಿತಿ ಯಲ್ಲಿದೆ.
ಪ್ರಜಾಪ್ರಭುತ್ವವಾದೀ ಅಫ್ಘಾನಿಸ್ತಾನಕ್ಕೆ ಬಹು ಕಾಲದ ಸ್ನೇಹಶೀಲ ದೇಶವಾದ ಭಾರತ ಅನೇಕ ವಿಧಗಳಲ್ಲಿ, ಕ್ಷೇತ್ರಗಳಲ್ಲಿ ಗಣನೀಯ ನೆರವು, ಸಹಕಾರ ನೀಡುತ್ತಾ ಬಂದಿತ್ತು. ಇದೀಗ ತಾಲಿಬಾನ್ ಆಕ್ರಮಿತ ಅಫ್ಘನ್ ಭಾರತದ ಪಾಲಿಗೆ ರಾಜತಾಂತ್ರಿಕ ಹಿನ್ನಡೆಯೇ ಆಗಿದ್ದು, ಮುಂದಿನ ಬೆಳವಣಿಗೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸಿ ಮುಂದಿನ ನಡೆಯನ್ನು ನಿರ್ಧರಿಸುವುದು ಒಳಿತು. ಒಂದು ವೇಳೆ ತಾಲಿಬಾನಿ ಸರಕಾರವೇ ಅಲ್ಲಿ ಸ್ಥಿರಗೊಂಡರೆ, ಎಲ್ಲ ದೇಶಗಳಂತೆ ಭಾರತಕ್ಕೆ ಕೂಡ ಅದರೊಂದಿಗೆ ರಾಜತಾಂತ್ರಿಕ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ಬರಬಹುದು. ಅಷ್ಟೇ ಅಲ್ಲದೆ ಇದರ ಪರಿಣಾಮ ಪಾಕಿಸ್ತಾನ ಹಾಗೂ ಕಾಶ್ಮೀರದ ವಿಷಯದಲ್ಲಿ ಕೂಡ ಯಾವ ರೀತಿಯ ಬೆಳವಣಿಗೆಗಳು ನಡೆಯಬಹುದು ಎಂಬುದು ಕೂಡ ಮಹತ್ವದ ವಿಚಾರ.
ಏನೇ ಆದರೂ, ಇವತ್ತಿನ 5ಜಿ ಯುಗದಲ್ಲಿ, ನಮ್ಮ ನೆರೆಯ ದೇಶ ಪ್ರಜಾಪ್ರಭುತ್ವನ್ನು ಕಳೆದುಕೊಂಡು, ಅಭಿವೃದ್ಧಿಯಿಂದ ವಂಚಿತಗೊಂಡು ಅಂಧಕಾರಕ್ಕೆ ಮರಳಲಿರುವುದು, ಮಾನವ ಹಕ್ಕುಗಳ ಜ್ವಲಂತ ಉಲ್ಲಂಘನೆಗಳು ಸರ್ವೇ ಸಾಮಾನ್ಯ್ರವಾಗಿರುವುದು ಅತೀವ ಖೇದಕರ ಸಂಗತಿಯಾಗಿದೆ.
ಬಾಲ್ಟಿಕ್ ಸಾಗರದ ಒಂದು ಹಡಗಿನಲ್ಲಿ ನಾನು ಭಾರತೀಯ ಎಂದು ತಿಳಿದು ಸಂಭ್ರಮದಿಂದ ನನ್ನೊಡನೆ ಹಿಂದಿಯಲ್ಲಿ ಮಾತಾಡಲು ಯತ್ನಿಸಿದ ಯುರೋಪಿನಲ್ಲಿ ಉನ್ನತ ವ್ಯಾಸಂಗಕ್ಕೆ ಬಂದಿದ್ದ ಒಬ್ಬ ಅಫ್ಘನ್ ಹುಡುಗನ ಸಂಭ್ರಮದ ಮುಖ ಇವತ್ತಿಗೂ ನೆನಪಿದೆ. ಭಾರತೀಯರನ್ನು ಕಂಡರೆ ಅತ್ಯಂತ ಇಷ್ಟಪಡುವ ಅಫ್ಘನ್ನರ ಭವಿಷ್ಯ ಒಂದು ದಿನ ಬದಲಾಗಲಿ ಎಂದು ಆಶಿಸುತ್ತಾ,ಇಂಥ ತಾಲಿಬಾನಿ ಮನಸ್ಥಿತಿ ನಮ್ಮ ದೇಶದ ಯಾವ ಮೂಲಭೂತವಾದಿಗಳಿಗೂ ಬರದಿರಲಿ ಎಂದು ಕೂಡ ಆಶಿಸುತ್ತ, ಕಾಬೂಲಿನಿಂದ ಬರುವ ಮುಂದಿನ ಸುದ್ದಿಗಾಗಿ ಕಳವಳದಿಂದ ಎದುರು ನೋಡುತ್ತಿದ್ದೇನೆ.
ಜೊತೆಗೆ ಮೂಲತಃ ಅಫ್ಘಾನಿಸ್ತಾನದ ಕವಿ ರೂಮಿಯ ಅ ಮೂಮೆಂಟ್ ಆಫ್ ಹ್ಯಾಪ್ಪಿನೆಸ್ ಎನ್ನುವ ಕವಿತೆಯನ್ನು ಮನಸಾರೆ ಹಾಡುವ ಸ್ಥಿತಿ ಅಲ್ಲಿ ನಿರ್ಮಾಣ ಆಗಲಿ ಎಂಬ ಆಶಯವೂ ಇದೆ.
A Moment Of Happiness
A moment of happiness,
you and I sitting on the verandah,
apparently two, but one in soul, you and I.
We feel the flowing water of life here,
you and I, with the garden’s beauty
and the birds singing.
The stars will be watching us,
and we will show them
what it is to be a thin crescent moon.
You and I unselfed, will be together,
indifferent to idle speculation, you and I.
The parrots of heaven will be cracking sugar
as we laugh together, you and I.
In one form upon this earth,
and in another form in a timeless sweet land.
-Jalal al-Din Rumi was born on September 30, 1207 in Balkh (Afghanistan).
ಇಡೀ ವಿಶ್ವ ಇದೊಂದು ಘಟನೆಯಾಗಿ ತೆಗೆದು ಕೊಳ್ಳದೆ ಒಂದು ದೊಡ್ಡ ಪಾಠವಾಗಿ ತೆಗೆದುಕೊಳ್ಳಬೇಕು. ಧರ್ಮ ಮತ್ತು ದೇಶ, ಆಡಳಿತ, ನ್ಯಾಯ, ಸ್ವಾತಂತ್ಯ, ಹಕ್ಕು, ಸಹನೀಯತೆ ಇತ್ಯಾದಿಗಳ ಹೊರಗಿಟ್ಟ ನಾಗರಿಕತೆ ಎಂಥ ಅನಾಹುತ ತಂದೊಡ್ಡ ಬಲ್ಲುದು ಎಂಬುದಕ್ಕೆ ಈ ಐತಿಹಾಸಿಕ ಬಿಕ್ಕಟ್ಟು ಅತಿ ದೊಡ್ಡ ಉದಾಹರಣೆ.. ಅಲ್ಲದೆ ಸುರಕ್ಷಾ ಕ್ಷೇತ್ರ,ಒಂದು ದೇಶದ ಸೈನ್ಯ, ಅದರ ಮನೋಬಲದ ಪಾತ್ರ ಇತ್ಯಾದಿ ಗಳು ಚರ್ಚಿಸಬೇಕಾದ ವಿಷಯ..ಅಮೆರಿಕದ ಈ ವೈಫಲ್ಯ ಅಷ್ಟು ಸುಲಭವಾಗಿ ಒರೆಸಲು ಆಗುವುದಿಲ್ಲ. ಎಲ್ಲ ರಾಷ್ಟ್ರಗಳು ಒಂದಾಗಿ ದನಿ ಎತ್ತಬೇಕು. ಆಫ್ಘನ್ನರ ವಿಶೇಷ ವಾಗಿ ಮಹಿಳೆ, ಮಕ್ಕಳ ಸುರಕ್ಷೆ, ಮಾನವ ಹಕ್ಕುಗಳ ಬಗ್ಗೆ ವಿಶೇಷ ಗಮನ ಹರಿಸಬೇಕು.
ಕೊನೆಯದಾಗಿ..
ಹೆಚ್ಚಿನ ಬರಹಗಳಿಗಾಗಿ
ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ
ಚಿಂತಾಮಣಿ ಕೊಡ್ಲೆಕೆರೆ ಹೊಸ ಕಥಾ ಸಂಕಲನ
ಹಿಂದಿ ಹೇರಿಕೆ ಸರಿಯೇ?