- ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ - ಅಕ್ಟೋಬರ್ 20, 2024
- ಆದಿಯೂ… ನೆಟ್ನ ಪಾಠವೂ - ಆಗಸ್ಟ್ 11, 2021
- ಕಾವ್ಯ ಮತ್ತು ಕಾವ್ಯಾನುಸಂಧಾನ - ಜುಲೈ 16, 2021
ಕಾವ್ಯ
******
ಬಾಹುಬಲಿ
ನೀನು ನಿಂತಿದ್ದೀ.
ಸುತ್ತಲ ಮಳೆಗೆ ಬಿಸಿಲಿಗೆ ಚಳಿಗೆ ಗಾಳಿಗೆ
ಹಕ್ಕಿಗೆ ಮೈ ಕೊಟ್ಟು
ನೀನು ‘ಮೈ ಕೊಟ್ಟ’ ಕಾರಣಕ್ಕೇ
ಗಾಳಿ-ಗಾಳಿ,ಮಳೆ-ಮಳೆ, ಹಕ್ಕಿ-ಹಕ್ಕಿ
ಬಯಲಿಗೆ ರೂಹು ಬಂದು ಆದವ ನೀನು
ಮೈ ಇದೆ ನಿನಗೆ, ಮೈಯ ಹಂಗಲ್ಲ
ಹಂಗಿನ ಮಾತು…
ನಿನ್ನ ಮಂದಸ್ಮಿತವ ಇನ್ನೂ
ಚೂರು ಹಿಗ್ಗಿಸಬಹುದು
ನಿಂತೆರಡು ಹೆಜ್ಜೆಗಳ ನೆಲ
ಬಿಡಲಾಗದಲ್ಲ, ಹಂಗನು
ಮೀರಲಾಗದಲ್ಲ ಎಂದು
ತಪಿಸಿದವ ನೀನು!
ಮತ್ತದನು ಮೀರಿ
ಬಯಲಿಗೆ ಭಾಷೆಯಾದವನು
ವೀತರಾಗ
ಆ ಕಣ್ಣುಗಳ ಎಲ್ಲಿ ನೆಟ್ಟಿದ್ದೀ
ಮಹರಾಯ!
ಲೋಕ-ಲೋಕಾಂತರಗಳ ಆಚೆ?
ಕಲ್ಪಾಂತರಗಳ ದಾಟಿ?
ಗೊತ್ತು ನಿನಗೆ, ನನಗಲ್ಲ
ಆದರೂ ಮಣ್ಣಲ್ಲಿ ಹರೆವ
ಕ್ಷುದ್ರ-ಅಭದ್ರನಿಗೂ
ನಿನ್ನ ಅಭಯದ ನೋಟ
ಕರುಣೆಯ ಕಣ್ಣು
ನೇವರಿಸುವ ಬೆಳಕು
ಹೇಗೆ ನಿಂತಿರುವಿ ಅಚಲ
ಅವಿಚಲಿತ
ಕೊಡುವುದರಲ್ಲೇ, ಬಿಟ್ಟು ಕೊಡುವುದರಲ್ಲೇ
ಪಡೆವ ಪಡುವ ಎಲ್ಲಕ್ಕೂ
ರೂಪಕವಾಗಿ.
ನಾವು *ಅಲ್ಪ* ರು, *ವಿರಾಮ* ರಲ್ಲ
ಹಗಲು-ರಾತ್ರಿ ಅದಕ್ಕೆ ಇದಕ್ಕೆ ಇನ್ನೊಂದಕ್ಕೆ
ಬಡಿದಾಡಿ ಕಚ್ಚಾಡಿ
ಇನ್ನಷ್ಟು ಕಿರಿದಾಗಿ ಕೊರಗಿ
ಕುಬ್ಜತೆಯಲ್ಲಿ ಅಳಿಯುತ್ತೇವೆ.
ನೀನು *ಪೂರ್ಣ*. ಎಲ್ಲ ಹೋರಾಟ
ಒಳತೋಟಿಗಳಿಗೆ *ವಿರಾಮ* ನಿನ್ನಲ್ಲಿ.
*ಅರಿತವ ತನ್ನನರಿತವ*
*ಅವನಷ್ಟೇ ಗೆದ್ದವ*
ಎನ್ನುತ್ತದೇನೋ ನಿನ್ನ ನಸು ಬಿರಿದ
ತುಟಿಯ ಸ್ನಿಗ್ಧ ಮೌನ
*ಕೇವಲಜ್ಞಾನಿ, ಮುಕ್ತ, ಸಿದ್ಧ*
ಇನ್ನೇನೋ ಹೆಸರು ನೀಡುತ್ತದೆ ಪರಂಪರೆ
ಹೆಸರು ಬೇಕು ಅದಕ್ಕೆ.
ಬಯಲೇ ಆದ ನಿನಗೆಲ್ಲಿ ಹೆಸರಿನ ಹಂಗು
ನಗುತ್ತಿರಬೇಕು ನೀನು
ನಿನಗೆ ಎರೆಯುವ ಉಡಿಸುವ
ಮೋಹಿಗಳ ಕಂಡು
ಮಗುವಂತೆ ಒಪ್ಪಿಸಿಕೊಂಡಿರಬೇಕು
ಅವರ ಖುಷಿಗೆ
ಎತ್ತರಕ್ಕೆ ನಿಂತವನು
ಎತ್ತರಕ್ಕೆ ಬಿತ್ತರಕ್ಕೆ ಮಾಪನವಾದವನು
ನಿನ್ನ ಕರುಣೆಯ ಬಾಹುಗಳ ಚಾಚು
ನಿನ್ನ ಪ್ರೀತಿಯಲಿ ಬಾಚು
ನಮ್ಮೆಲ್ಲ ಅಲ್ಪತೆ ಅಹಂಕಾರಗಳ
ಸ್ವಾರ್ಥದ ಸಾವಿರದ ಹುನ್ನಾರಗಳ
ತುಸುವೇ ಹಿಗ್ಗಲಿಸು,ಬಾಗಿಸು
ಮುಚ್ಚಿ ಸೆಡೆತ ಕದಗಳ
ಕರೆವಂತೆ
ನಮ್ಮೆಲ್ಲರ ಎದೆಯ ಕೂಪಗಳಿಗೆ
ನಿನ್ನ ಎದೆಯಿಂದ-
ಅನುರಾಗದೊಂದು ಕಿರಣ
ಮೂಡಲಿ ಅಲ್ಲಿ
ಪೊರೆ ಬೆಳೆದ ಒಳಗಣ್ಣುಗಳಲ್ಲಿ,
ಮಸುಕಾಗಿಯಾದರೂ-
ನಿನ್ನ *ಬಿಂಬ*
★ ಡಾ. ಗೋವಿಂದ ಹೆಗಡೆ
೨೫-೬-೨೧
******
ಕಾವ್ಯಾನುಸಂಧಾನ
*****
ನಮ್ಮೆಲ್ಲರ ಎದೆಯ ಕೂಪಗಳಿಗೆ
ನಿನ್ನ ಎದೆಯಿಂದ-
ಅನುರಾಗದೊಂದು ಕಿರಣ
ಮೂಡಲಿ ಅಲ್ಲಿ
ಪೊರೆ ಬೆಳೆದ ಒಳಗಣ್ಣುಗಳಲ್ಲಿ,
ಮಸುಕಾಗಿಯಾದರೂ-
ನಿನ್ನ ಬಿಂಬ
ಹೊರಜಗತ್ತಿಗೆ ತೆರೆದುಕೊಳ್ಳದೆ, ಸ್ಪಂದಿಸದೆ, ಹಳಸುಗಾಳಿ ಒಳಗೊಳಗೇ ಸುಳಿದು ನಮ್ಮೆಲ್ಲರ ಎದೆಯು ಕೂಪದಂತೆ ನಾರುತ್ತಿದೆ. ಬಾವಿಗೆ ಸೂರ್ಯನ ನೇರಕಿರಣಗಳು ಬಿದ್ದು ನೀರು ನಿರ್ಮಲವಾಗಲಿ. ಅದೇ ರೀತಿ ಅನುರಾಗದೊಂದು ಕಿರಣ ನಿನ್ನೆದೆಯಿಂದ ನಮ್ಮೆಲ್ಲರ ಎದೆಗೆ ತೂರಿ ಎದೆಯ ಕೂಪವೂ ನಿರ್ಮಲವಾಗಲಿ ಎಂಬ ಆಶಯ ಹೊತ್ತ ಬಾಹುಬಲಿಯನ್ನು ಕುರಿತ ಪ್ರಾರ್ಥನಾ ಕವನ, ಬಾಹುಬಲಿ
ನಮ್ಮ ಎದೆಯ ಕೂಪ ಮಲಿನವಾಗಲು ಒಳಗಣ್ಣುಗಳಲ್ಲಿ ಬೆಳೆದ ಪೊರೆಯ ಪರದೆಯೇ ಕಾರಣ. ನಿನ್ನ ಕಿರಣಗಳ ಸೋಂಕಿನಿಂದ ಈ ಪೊರೆಯು ಕಿಂಚಿತ್ತಾದರೂ ಹರಿದು ನಿನ್ನ ಬಿಂಬ ಮಸುಕಾಗಿಯಾದರೂ ಮೂಡಲಿ ಎಂಬುದು ಕವಿಯ ಆಶಯವಾಗಿದೆ.
ಈ ಬಾಹುಬಲಿಯ ಬಿಂಬವೆಂಥದು? ನಮ್ಮ ಕಣ್ಣಿನಲ್ಲಿ ಮೂಡಿರುವುದು ಸುತ್ತಲಿನ ಮಳೆಗೆ, ಬಿಸಿಲಿಗೆ, ಚಳಿಗೆ, ಗಾಳಿಗೆ ಮೈಕೊಟ್ಟು ನಿಂತ ಬಾಹುಬಲಿಯ ಬಿಂಬ. ಈ ಬಾಹುಬಲಿಗೆ ನಮಗೆ ಗೋಚರವಾಗುವಂತೆ ಮೈಯಿದೆ, ಅದರೆ ಅವನಿಗೆ ಮೈಯ ಹಂಗಿಲ್ಲ. ಆದುದರಿಂದಲೇ ಅವನು ಮಳೆಗೆ, ಬಿಸಿಲಿಗೆ, ಚಳಿಗೆ, ಗಾಳಿಗೆ ಹಕ್ಕಿಗಳಿಗೆ ತನ್ನ ಮೈಯನ್ನು ಒಪ್ಪಿಸಲು ಸಾಧ್ಯವಾಗಿರುವುದು. ಈ ಬಾಹುಬಲಿಯು ಬಯಲಿಗೆ ರೂಹು ಬಂದು ಆದವನು. ಬಯಲಿನಂತೆ ಸರ್ವವ್ಯಾಪಿಯಾದ ಅಥವ ಬಯಲೇ ಆದ ಪರಮಾತ್ಮ ಘನೀಭವಿಸಿ ರೂಪುದಳೆದು ಆದವನೀ ಬಾಹುಬಲಿ. ಒಂದು ರೀತಿಯಲ್ಲಿ ಒಳಹೊರಗು ಒಂದಾದವನು, ಬಯಲು ಆಲಯ ವಿಲಯವಾದವನು.
ಈ ದೇಹದ “ಹಂಗಿನ ಮಾತು…” ಬಂದಾಗ “ನಿಂತೆರಡು ಹೆಜ್ಜೆಗಳ ನೆಲ ಬಿಡಲಾಗದಲ್ಲ, ಹಂಗನು ಮೀರಲಾಗದಲ್ಲ” ಎಂದು ತಪಿಸಿದವ, ತಪಿಸಿ ತಪಸ್ಸು ಮಾಡಿದವ ಬಾಹುಬಲಿ! ಈ ಜಗತ್ತಿನಲ್ಲಿ ರೂಹುದಳೆದ ಮೇಲೆ ಮಣ್ಣಿನ ಹಂಗನು ಮೀರಲಾಗುವುದಿಲ್ಲ. ನೆಲದಲ್ಲಿ ತಳವೂರಿಯೇ ಬದುಕುವುದು ಇಲ್ಲಿನ ನಿಯಮ. ಆದರೂ ಅವನ “ಮಂದಸ್ಮಿತವ ಇನ್ನೂ ಚೂರು ಹಿಗ್ಗಿಸಬಹುದು” ಇಲ್ಲಿನ ಬದುಕನ್ನು ಸ್ವಪ್ರಯತ್ನದಿಂದ ಸಹನೀಯ, ಸ್ಮರಣೀಯವಾಗಿಸುವುದು ಸಾಧ್ಯ. ಈ ಮಂದಸ್ಮಿತವನು ಇನ್ನಷ್ಟು ಮೀರಿದರೆ ವೀತರಾಗನಾಗಿ, ನಾವು, ನಮ್ಮವರು, ನಮ್ಮದು ಎಂಬ ಮೋಹಗಳಿಂದ ಮುಕ್ತರಾಗಿ ಬಯಲಿಗೆ ಭಾಷೆಯಾಗುವುದು ಅಂದರೆ ದೇವರ ಮುಖವಾಣಿಯಾಗುವುದು ಸಾಧ್ಯ. ಇದು ಬಾಹುಬಲಿಯ ಕೈವಲ್ಯ ಮಾರ್ಗ.
ಎತ್ತರಕ್ಕೆ ಬೆಳೆದ ಬಾಹುಬಲಿಯ ದೃಷ್ಟಿ ಎತ್ತ ನೆಟ್ಟಿದೆ? ಲೋಕಾಂತರಗಳಲ್ಲಿಯೇ? ಕಲ್ಪಾಂತರಗಳಲ್ಲಿಯೇ? ದೇಶಕಾಲಗಳನ್ನೂ ಮೀರಿದೆಯೇ? ನನಗೆ ಗೊತ್ತಿಲ್ಲ. ಏಕೆಂದರೆ ನಾವು “ಅಲ್ಪರು, ವಿರಾಮರಲ್ಲ” (ಬಹುಶಃ ಅಲ್ಪಕ್ಕೆ ತೃಪ್ತರಾಗುವವರಲ್ಲ, ಈ ಮಣ್ಣಿನ ಸುಖ ಮತ್ತೂ ಮತ್ತೂ ಬೇಕೆನ್ನುವವರು) ನಮ್ಮ ಮಣ್ಣಿನ ಕಣ್ಣಿಗೆ ಕಾಣಿಸುವುದಿಷ್ಟಿಷ್ಟೇ. ಅದಕ್ಕಾಗಿಯೇ ನಾವು “ಹಗಲು-ರಾತ್ರಿ ಅದಕ್ಕೆ ಇದಕ್ಕೆ ಇನ್ನೊಂದಕ್ಕೆ ಬಡಿದಾಡಿ ಕಚ್ಚಾಡಿ ಇನ್ನಷ್ಟು ಕಿರಿದಾಗಿ ಕೊರಗಿ ಕುಬ್ಜತೆಯಲ್ಲಿ ಅಳಿಯುತ್ತೇವೆ.”
ಬಾಹುಬಲಿಯ ದೃಷ್ಟಿ ದೇಶ ಕಾಲಗಳನ್ನು ಮೀರಿದ್ದಾದರೂ ಭವದಲ್ಲಿಯೇ ಮುಳುಗಿರುವ ಮಣ್ಣಿಗೆ ಅಂಟಿಕೊಂಡೇ ಬದುಕಲೆಳಸುವ ಸದಾ ಭಯತ್ರಸ್ತರಾಗಿರುವ ಕ್ಷುದ್ರ ಜೀವಿಗಳ ಮೇಲೆ ಅವನ ಕರುಣೆಯ ಕಣ್ಣಿನ ಬೆಳಕು ಸಾಂತ್ವನದಿಂದ ನೇವರಿಸುತ್ತದೆ. ಅವನ ಪದತಲದಲ್ಲಿ ನಿಂತವರ ಮೇಲೊಂದು ಅಭಯದ ನೋಟವೂ ಹೊರಳುತ್ತದೆ.
ನಾವು ಅಲ್ಪ ವಿರಾಮರಾದರೆ ಬಾಹುಬಲಿ ಪೂರ್ಣವಿರಾಮ. ನಾವು ಎಲ್ಲ ಹೋರಾಟಗಳ ನಡುವೆ ಒಳತೋಟಿಗಳ ನಡುವೆ ಅಲ್ಪ ವಿರಾಮರಾದರೆ ಅಂದರೆ ಅವು ನಮ್ಮ ಒಳಹೊರಗೆ ಚಲನಶೀಲವಾಗಿದ್ದರೆ, ಹೋರಾಟಗಳು ಮತ್ತು ಒಳತೋಟಿಗಳು ಬಾಹುಬಲಿಯ ಒಳಗೆ ಪೂರ್ಣವಾಗಿ ವಿರಮಿಸುತ್ತವೆ. ಕಾರಣ, ನಾವು ಬಯಲಿನಿಂದ ಅಂದರೆ ಜಗತ್ತಿನ ನಿರ್ಮಾಣ ದ್ರವ್ಯದಿಂದ ನಮ್ಮನ್ನು ಪ್ರತ್ಯೇಕವಾಗಿಯೇ ಗುರುತಿಸಿಕೊಂಡಿದ್ದೇವೆ, ಆದರೆ ಬಾಹುಬಲಿ ತಾನೇ ಬಯಲು ಎಂದು ಅರಿತವನು. ಅವನ ಕರುಣಾಪೂರಿತ ನೋಟ, ಅವನ “ನಸು ಬಿರಿದ ತುಟಿಯ ಸ್ನಿಗ್ಧ ಮೌನ” ಆತ್ಮಜ್ಞಾನಿಯೇ ನಿಜವಾದ ಜ್ಞಾನಿ, “ತನ್ನನರಿತವನೇ ಅರಿತವ” ಎಂಬ ಸಂದೇಶವನ್ನು ನೀಡುತ್ತಿದೆಯೇನೋ ಎಂಬಂತಿದೆ.
ಬಾಹುಬಲಿಯನ್ನು ನಮ್ಮಿಂದ ಪ್ರತ್ಯೇಕವಾಗಿ ಕಾಣುವ ನಾವು ಅವನಿಗೆ “ಕೇವಲಜ್ಞಾನಿ, ಮುಕ್ತ, ಸಿದ್ಧ” ಮುಂತಾದ ಹೆಸರನ್ನು ನೀಡುತ್ತೇವೆ. ನಮಗೆ ಬಾಹುಬಲಿಯಾಗಲು ಮನಸ್ಸಿರದ ಕಾರಣಕ್ಕೆ, ಸಾಮರ್ಥ್ಯವಿರದ ಕಾರಣಕ್ಕೆ ಅವನಿಗೊಂದು ಹೆಸರು ಕೊಡುತ್ತೇವೆ, ಅವನನ್ನು ನಮ್ಮಿಂದ ಹೊರತಾದ ಉನ್ನತ ನೆಲೆಯಲ್ಲಿ ಗುರುತಿಸಲು ಹಾಗೆಂದು ಕರೆಯುತ್ತೇವೆ. ಆದರೆ ಬಾಹುಬಲಿಗೆ ಈ ಹೆಸರುಗಳ ಹಂಗಿಲ್ಲ. ಆತ ಎಲ್ಲ ಕಡೆಯೂ ತನ್ನನ್ನೇ ಕಾಣುತ್ತಾನೆ. ಗುರುತಿಸುವುದಕ್ಕೆ ಇನ್ನೊಬ್ಬನಿರದ ಮೇಲೆ ಹೆಸರಿನ ಹಂಗೇಕೆ?
ನಾವು ಅವನಿಗೆ ಮಹಾ ಮಜ್ಜನ ಮಾಡಿಸುತ್ತೇವೆ. ಅಲಂಕಾರ ಮಾಡುತ್ತೇವೆ, ನೈವೇದ್ಯವನ್ನು ಅರ್ಪಿಸುತ್ತೇವೆ. ನಮಗೆ ಇವುಗಳಲ್ಲೇ ಆಸಕ್ತಿ. ಇವು ಯಾವುವೂ ಅವನಿಗೆ ಬೇಕಾಗಿಲ್ಲದಿದ್ದರೂ ನಮ್ಮ ಖುಷಿಗಾಗಿ ಅವನು ಎಲ್ಲನ್ನೂ ಒಪ್ಪಿಸಿಕೊಳ್ಳುತ್ತಾನೆ. ನಮ್ಮ ಅಜ್ಞಾನವನ್ನು ನೋಡಿ ಅವನಿಗೆ ಒಳಗೊಳಗೆ ನಗು ಬಂದರೂ ನಮ್ಮ ಮೇಲಿನ ಕರುಣೆಯಿಂದ, ಪ್ರೇಮದಿಂದ ಎಲ್ಲವನ್ನೂ ಸಹಿಸಿಕೊಳ್ಳುತ್ತಾನೆ. ಒಂದು ಮಗು ತನ್ನ ತಂದೆ ತಾಯಿಯರ ಪ್ರೀತಿಯನ್ನು ಮುಗ್ಧತೆಯಿಂದ ಅನುಭವಿಸುವಂತೆ ಮಹಾತ್ಮರು ತಮ್ಮ ಭಕ್ತರು, ಅನುಯಾಯಿಗಳು ಮಾಡುವ ಸನ್ಮಾನಗಳನ್ನು ನಿರ್ವಿಕಾರವಾಗಿ ಸ್ವೀಕರಿಸುತ್ತಾರೆ. ಅದು ನಮ್ಮ ಸಂತೋಷಕ್ಕಾಗಿ ಮಾತ್ರ, ಏಕೆಂದರೆ, ಸಂತೋಷಂ ಜನಯೇತ್ ಪ್ರಾಜ್ಞಃ
ಬಾಹುಬಲಿಯು ಎತ್ತರ ಮತ್ತು ವಿಸ್ತಾರ ಎರಡಕ್ಕೂ ಉದಾಹರಣೆಯಾಗಿ ನಮ್ಮ ಮುಂದೆ ನಿಂತಿದ್ದಾನೆ. ಎತ್ತರಕ್ಕೆ ಮತ್ತು ವಿಸ್ತಾರಕ್ಕೆ ಬೆಳೆದವರಿಗೆ ಎಲ್ಲ ಪೂರ್ವಾಗ್ರಹಗಳನ್ನು ಮೀರಿ, ಕ್ಷುದ್ರತೆಗಳನ್ನು ಮೀರಿ ಇಡೀ ಜಗತ್ತನ್ನು ಒಂದೇ ಕುಟುಂಬದಂತೆ ಪರಿಗಣಿಸುವುದು ಸಾಧ್ಯವಾಗುತ್ತದೆ. ಮಹಾತ್ಮರ ಸಾನ್ನಿಧ್ಯದಲ್ಲಿ ನಮ್ಮ ಅಲ್ಪತೆ, ಅಹಂಕಾರ, ಸ್ವಾರ್ಥ ಎಲ್ಲವೂ ತಾತ್ಕಾಲಿಕವಾಗಿಯಾದರೂ ಮರೆಯಾಗುತ್ತವೆ. ಬಾಹುಬಲಿಯ ಎತ್ತರದ ಎದುರು ನಮ್ಮ ಕ್ಷುದ್ರತೆಗಳು ಮತ್ತು ನಮ್ಮೊಳಗೆ ಸದಾ ಹೆಡೆಯಾಡಿಸುವ ಸ್ವಾರ್ಥದ ಹುನ್ನಾರಗಳು ಅರಿವಿಗೆ ಬರುತ್ತವೆ. ಆದರೂ ಅವುಗಳನ್ನು ಮೀರುವುದು ಕಷ್ಟವಾಗುತ್ತವೆ. ಅಲ್ಪತೆ, ಅಹಂಕಾರ ಮತ್ತು ಸ್ವಾರ್ಥ ಮನೋಭಾವಗಳನ್ನು ತೊಡೆಯುವಂತೆ ಪ್ರೇರೇಪಿಸಲು ಪ್ರೇಮದಿಂದಲ್ಲದೆ ಬೇರೆ ಯಾವುದೇ ರೀತಿಯಿಂದ ಸಾಧ್ಯವಿಲ್ಲ. ಅಂತಹ ಸರ್ವಂಸಹ ಮತ್ತು ಸರ್ವಜಿತ್ ಪ್ರೇಮಮಯಿ ಬಾಹುಬಲಿ ನಮ್ಮನ್ನು ಉದ್ಧರಿಸಲಿ ಎಂಬುದು ಕವಿಯ ಪ್ರಾರ್ಥನೆ.
ಬಾಹುಬಲಿಗೆ “ಕೊಡುವುದರಲ್ಲೇ, ಬಿಟ್ಟು ಕೊಡುವುದರಲ್ಲೇ” ಆಸಕ್ತಿ. ಅವನು ಗೆದ್ದು ಪಡೆದವನು, ಪಡೆದದ್ದನ್ನು ಬಿಟ್ಟುಕೊಟ್ಟವನು. ಪಡೆವ ಪಡುವ (ಅನುಭವಿಸುವ) ಬಿಟ್ಟುಕೊಡುವ ಬಗೆಗಳಿಗೆ ಈತನೇ ಮಾದರಿ. ಎತ್ತರಕ್ಕೆ ಬೆಳೆದ ಮೇಲೆಯೂ ಅಚಲವಾಗಿ ನಿಲ್ಲಲು ಸ್ಥಿರ ಚಿತ್ತ ಬೇಕು. ಪಡೆವ ಪಡುವ ಬಿಡುವ ಮಾರ್ಗದಲ್ಲಿ ಬಾಹುಬಲಿಯ ಅವಿಚಲಿತ ಅಚಲತೆ ನಮಗೆ ಮಾದರಿಯಾಗಲಿ.
ಕವನದ ಕೊನೆಯ ಶಬ್ದ “ಬಿಂಬ”. ನಾವು ಕಾಣುತ್ತಿರುವ ಈ ಜಗತ್ತು ಪ್ರತಿಬಿಂಬ. ದೇವರ ಬಿಂಬವನ್ನು ಮಾಯಾ ಕನ್ನಡಿಯಲ್ಲಿ ನೋಡಿದಾಗ ಅವನ ಪ್ರತಿಬಿಂಬವಾಗಿ ಕಾಣುವುದು, ಈ ಜಗತ್ತು. ಬಿಡುಗಡೆಯನ್ನು ಬಯಸುವವರು ಪ್ರತಿಬಿಂಬದಲ್ಲಿ ಬಿಂಬದ ಎಲ್ಲ ಲಕ್ಷಣಗಳನ್ನೂ ಕಾಣಬೇಕು.
ಯದ್ಯದ್ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ |
ತತ್ತದೇವಾವಗಚ್ಛ ತ್ವಂ ಮಮ ತೇಜೋSಂಶ ಸಂಭವಮ್ ||
ಈ ಜಗತ್ತಿನಲ್ಲಿ ನಮ್ಮ ಗಮನ ಸೆಳೆಯುವ ಎಲ್ಲವೂ ಆ ಒಂದು ಶಕ್ತಿಯ ತೇಜಸ್ಸಿನ ಅಂಶದಿಂದ ಸಂಭವಿಸಿವೆ. ಆದುದರಿಂದ ಇಡೀ ಸೃಷ್ಟಿಯೇ ಅವನ ಪ್ರತಿಬಿಂಬವಾಗುತ್ತದೆ. ಆ ಬಿಂಬವನ್ನು ನೋಡಲೂ ಅವನ ಕೃಪೆ ಬೇಕು, ಅವನು ದಿವ್ಯದೃಷ್ಟಿ ನೀಡಬೇಕು. ಆದುದರಿಂದ,
ತುಸುವೇ ಹಿಗ್ಗಲಿಸು, ಬಾಗಿಸು
ಮುಚ್ಚಿ ಸೆಡೆತ ಕದಗಳ
ಕರೆವಂತೆ
ಆಗಲಾದರೂ ಮೂಡಲಿ ಅಲ್ಲಿ ಪೊರೆ ಬೆಳೆದ ಒಳಗಣ್ಣುಗಳಲ್ಲಿ, ಮಸುಕಾಗಿಯಾದರೂ- ನಿನ್ನ ಬಿಂಬ ಎಂದು ಕವಿ ಬಾಹುಬಲಿಯನ್ನೇ ಪ್ರಾರ್ಥಿಸುತ್ತಾರೆ.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..