ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ: ಆರ್ಟೆಮ್ ಪೋದ್ರೆಜ್

ಕೇಳು ಕತೆಯಾ, ಮಗುವೇ!

ಸುಪ್ರೀತಾ ಶಾಸ್ತ್ರೀ
ಇತ್ತೀಚಿನ ಬರಹಗಳು: ಸುಪ್ರೀತಾ ಶಾಸ್ತ್ರೀ (ಎಲ್ಲವನ್ನು ಓದಿ)

ಕಥೆಯೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಎಲ್ಲರಿಗೂ ಒಂದೊಂದು ತರಹದ ಕಥೆ ಕೇಳುವ ಆಸೆ. ನಾವು ಚಿಕ್ಕವರಿದ್ದಾಗ ಅಪ್ಪ, ಅಮ್ಮ, ಅಜ್ಜಿ, ತಾತ ಅಷ್ಟೇ ಏಕೆ ಮನೆಗೆ ಬಂದ ನೆಂಟರನೆಲ್ಲಾ ಪೀಡಿಸುತ್ತಿದ್ದೆವು ಕಥೆ ಹೇಳಲಿ ಎಂದು. ಮಲಗುವಾಗ ಕಥೆ ಕೇಳುವುದು ನಿತ್ಯಕರ್ಮವಾಗಿತ್ತು. ದಿನ ೪೦-೬೦ ನಿಮಿಷ ಪವರ್ ಕಟ್ ಇದ್ದ ಸಮಯವೂ ಎಷ್ಟೋ ಬಾರಿ ಕಥೆ-ಹಾಡುಗಳಿಗೆ ಮೀಸಲಾಗಿತ್ತು. ಹೀಗೆ ಕೇಳಿದ ಎಷ್ಟೊಂದು ಕಥೆಗಳು ನೆನಪಿನಲ್ಲಿ ಚಿರವಾಗಿಯೇ ಉಳಿದಿವೆ ಎಂದರೆ ತಪ್ಪಾಗಲಾರದು. ವಿಕ್ರಮ ಬೇತಾಳ, ಚಿಂಟು ಕಥೆಗಳು, ಅಕ್ಬರ ಬೀರ್ಬಲ್, ಅಲಾವುದ್ದೀನ್, ಫೇರಿ ಕಥೆಗಳು, ತೆನಾಲಿ ರಾಮನ ಕಥೆಗಳು, ರಾಜಕುಮಾರಿಯ ಕಥೆಗಳು, ಮಹಾಭಾರತದ ಚಿಕ್ಕ ಚಿಕ್ಕ ಕಥೆಗಳು, ರಾಮನ ವನವಾಸದ ಕಥೆ, ಪ್ರಾಣಿ- ಪಕ್ಷಿಗಳ ಕಥೆ, ಈಸೋಪನ ನೀತಿ ಕಥೆಗಳು, ದೆವ್ವದ ಕಥೆ, ಜಾನಪದ ಕಥೆಗಳು, ಪುಣ್ಯಕೋಟಿ, ಜಂಭದ ಅಜ್ಜಿ, ಹೀಗೆ ನೂರಾರು ಕಥೆಗಳು ನಮ್ಮ ಮನಸ್ಸನ್ನು ಆಕ್ರಮಿಸಿಕೊಂಡಿವೆ. ಮನೆಗೆ ಬರುತ್ತಿದ್ದ ಬಾಲಮಂಗಳ, ತುಂತುರು, ಶನಿವಾರ/ ಭಾನುವಾರ ದಿನ ಪತ್ರಿಕೆಯಲ್ಲಿ ಬರುತ್ತಿದ್ದ ಮಕ್ಕಳ ಕಥೆಗಾಗಿ ಹಪಹಪಿಸುತ್ತಿದ್ದೆವು. ತಾತ ಹೇಳುತ್ತಿದ್ದ ಪುಣ್ಯಕೋಟಿಯ ಕಥೆ ಅವರ ನೆನಪು ತರಿಸುತ್ತದೆ. ಅಪ್ಪ ಹೇಳುವ ಭೀಮ-ಭಕಾಸುರ, ಮಹಾಭಾರತದ ಕಿರುಕಥೆಗಳು ಈಗಲೂ ನನ್ನ ನೆಚ್ಚಿನ ಕಥೆಗಳಾಗಿವೆ. ಜೀವನದ ಭಾಗವೇ ಆಗಿ ಹೋಗಿದ್ದ ಕಥೆಗಳು ಕಾಲಕ್ರಮೇಣ ತನ್ನತನವನ್ನು ಬದಲಿಸುತ್ತಿವೆ. ಹಾಗೆಯೇ ಎಷ್ಟೊಂದು ಕಡೆ ನಿಂತು ಹೋಗಿವೆ ಎಂದರೆ ತಪ್ಪಾಗಲಾರದು.

ಕಥೆ ಎಂದರೆ ಸುಮ್ಮನೆ ಪ್ರಬಂಧವಲ್ಲ; ಹೇಳುವವರಿಗೂ, ಕೇಳುವವರಿಗೂ ಆಸಕ್ತಿ ಇದ್ದಾಗಲೇ ಕಥೆ ತಲೆಗೆ ಹೊಕ್ಕುವುದು. ಪಾಶ್ಚಾತ್ಯ ದೇಶಗಳಲ್ಲಿಯೂ ಮಕ್ಕಳಿಗೆ ಕಥೆಗೆಂದು ೨೦ ನಿಮಿಷ ಮೀಸಲಿಡುತ್ತಾರೆ. ಕಥೆಯ ಪುಸ್ತಕ ತೋರಿಸುತ್ತಾ, ಧ್ವನಿಯನ್ನು ಕಥೆಯ ಪಾತ್ರಕ್ಕೆ ತಕ್ಕಂತೆ ಮಾಡುತ್ತಾ, ಕೈಯಲ್ಲಿ ಅಭಿನಯಿಸುತ್ತಾ ಮಾಡಿದರೆ ಎಂತಹ ಮಕ್ಕಳೂ ಇನ್ನು ಕಥೆ ಹೇಳಿ ಎಂದು ಒತ್ತಾಯಿಸುತ್ತಾರೆ. ಇನ್ನು ಅಮೇರಿಕಾದ ಗ್ರಂಥಾಲಯಗಳಲ್ಲಿ ವಯಸ್ಸಿಗೆ ಅನುಗುಣವಾಗಿ ಮಕ್ಕಳಿಗೆ ಕಥಾಶ್ರವಣ ಕಾರ್ಯಕ್ರಮ ಪ್ರತಿವಾರವೂ ಜರಗುತ್ತದೆ! ಇದಿಷ್ಟು ನಮ್ಮ ಕಥೆಯಾದರೆ, ನಾವು ನಮ್ಮ ಮಕ್ಕಳಿಗೆ ಎಷ್ಟು ಕಥೆ ಹೇಳುತ್ತೇವೆ ಎನ್ನುವುದು ಮುಂದಿನ ಕಥೆ! ಕೆಲಸದ ಒತ್ತಡ, ಸಮಯದ ಅಭಾವ, ಟಿವಿ, ಮೊಬೈಲ್ ಪರಿಣಾಮದಿಂದ ಕಥೆ ಹೇಳುವ ಅಭ್ಯಾಸ ಕಣ್ಮರೆಯಾಗುತ್ತಿದೆ. ಇನ್ನು ಕೆಲವರು ಮಕ್ಕಳು ಕೇಳಿದಾಗ ಕಾರ್ಟೂನ್ ಅಥವಾ ಇನ್ನ್ಯಾವುದೋ ರೀತಿಯ ಕಥೆಯನ್ನು ಟಿವಿ, ಮೊಬೈಲ್ನಲ್ಲಿ ಹಾಕಿ ಕೊಡುತ್ತಾರೆ. ಸ್ವಲ್ಪ ಹೊತ್ತು ನೋಡಿ ಬೇಸರಿಸಿ, ಪದಗಳ ಅರ್ಥ ತಿಳಿಯದೆ ಕಥೆಗಿಂತ ಮ್ಯೂಸಿಕ್ ಜೊತೆ ಬರುವ ರೈಮ್ಸ್ (ಪದ್ಯ ) ಪರವಾಗಿಲ್ಲವೆಂದು ಕಥೆಯ ಬಗ್ಗೆ ನಿರಾಸಕ್ತಿ ತೋರುತ್ತಾರೆ.

ಚಿತ್ರ ಕೃಪೆ: ಆರ್ಟೆಮ್ ಪೋದ್ರೆಜ್

ಏಕೆ ಕಥೆ ಹೇಳಬೇಕು?
ದಕ್ಷಿಣಭಾರತದ ಮಹಿಲಾರೋಪ್ಯ ಪ್ರದೇಶದಲ್ಲಿ ಇದ್ದ ಅಮರಶಕ್ತಿ ಎಂಬ ರಾಜನ ಮೂವರ ಮಕ್ಕಳು ದಡ್ಡರಾಗಿರುತ್ತಾರೆ. ಏನಾದರೂ ಮಾಡಿ ಇವರಿಗೆ ಪ್ರಾಪಂಚಿಕ ಜ್ಞಾನ ಬರಿಸಬೇಕೆಂದು ರಾಜನು ಯೋಚಿಸಿ, ವಿಷ್ಣುಶರ್ಮಾನೆಂಬ ವಿದ್ವಾಂಸನೊಡನೆ ತನ್ನ ನಿಲುವನ್ನು ಹೇಳಿ ಅವರ ಬಳಿಯೇ ಮಕ್ಕಳನ್ನು ಬಿಡುತ್ತಾನೆ. ಆಗ ರಚನೆಯಾದ ಗ್ರಂಥವೇ ಪಂಚತಂತ್ರ! ಹೆಸರೇ ಹೇಳುವಂತೆ ಪಂಚ ತಂತ್ರಗಳಿಂದ ಪಂಚತಂತ್ರ ಕಥಾ ಮಾಲಿಕೆಯು ರೂಪುಗೊಂಡಿತು.
ಅವುಗಳೆಂದರೆ :

೧.ಮಿತ್ರಭೇದ – ಯಾರೊಂದಿಗೆ ಮೈತ್ರಿ ಬೆಳೆಸಬಾರದು.
೨.ಮಿತ್ರಪ್ರಾಪ್ತಿ – ಯಾರೊಂದಿಗೆ ಗೆಳೆತನ ಮಾಡಿಕೊಳ್ಳಬೇಕು.
೩.ಕಾಕೋಲುಕೀಯಮ್ – ಕಾಗೆ ಮತ್ತು ಗೂಬೆಯ ವೈರತ್ವದ ಕಥೆ. ೪.ಲಬ್ಧಪ್ರಣಾಶನಮ್ – ಸಿಕ್ಕಿದ ಧನದ ನಾಶ ಹೇಗಾಗುತ್ತದೆ.
೫.ಅಪರೀಕ್ಷಿತಕಾರಕಮ್ – ಸಮಗ್ರ ವಿಚಾರ ಮಾಡದೆ ನಡೆಸಿದ ಕಾರ್ಯದ ಪರಿಣಾಮವೇನಾಗುತ್ತದೆ.

ಹೀಗೆ ಕಥೆ ಕೇಳಿ ೬ ತಿಂಗಳ ಒಳಗೆ ಶತ ಮೂರ್ಖರಾಗಿದ್ದ ಮಕ್ಕಳು ಸಾಮಾನ್ಯಜ್ಞಾನ ಪಡೆಯುತ್ತಾರೆ, ವ್ಯವಹಾರ ಕುಶಲರಾಗುತ್ತಾರೆ. ರಾಜನಿಗೆ ಇದನ್ನು ನೋಡಿ ಅತೀ ಆನಂದವಾಯಿತು. ವಿಷ್ಣುಶರ್ಮಾ ರಾಜಪುತ್ರರಿಗೆ ಜ್ಞಾನ ನೀಡುವುದಲ್ಲದೆ, ಪಶು-ಪಕ್ಷಿಗಳ ಮಾಧ್ಯಮದಿಂದ ಆ ಜ್ಞಾನವನ್ನು ಯಾವಾಗ, ಎಲ್ಲಿ ಮತ್ತು ಹೇಗೆ ಉಪಯೋಗಿಸಬೇಕೆಂಬುವುದನ್ನೂ ಕಲಿಸಿದ್ದನು ಎಂಬುದು ಇತಿಹಾಸ.

೨೦೦೦ ವರ್ಷದ ಹಳೆಯ ಕಥೆಗಳು ಈಗಲೂ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ ಎಂದರೆ ಎಂತಹ ನೀತಿ ಕಥೆಗಳಿವು ಎಂದು ನೀವೇ ಊಹಿಸಿ. ಮುಂದುವರಿದ ಈ ಕಾಲದಲ್ಲಿಯೂ ಏಕೆ ಕಥೆ ಹೇಳಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

೧.ಕಲ್ಪನಾ ಶಕ್ತಿ ಹಾಗೂ ಕ್ರೀಯಾಶೀಲತೆಯನ್ನು ಹೆಚ್ಚಿಸುತ್ತದೆ.
೨.ಭಾಷಾಜ್ಞಾನ ಅಭಿವೃದ್ಧಿಯಾಗುತ್ತದೆ
೩.ನೀತಿ ಕಥೆಗಳನ್ನು ಚಿಕ್ಕ ವಯಸ್ಸಿನಲ್ಲಿ ಹೇಳುವುದರಿಂದ ಹಲವು ಸದ್ಗುಣಗಳನ್ನು ಕಳಿಸಬಹುದು. ಉದಾಹರಣೆಗೆ ಕಳ್ಳತನ, ಕಪಟತನ ಮಾಡದಿರಲು, ಸಹಾಯ , ಕನಿಕರ ಮುಂತಾದ ಗುಣಗಳನ್ನು ವೃದ್ಧಿಸಿಕೊಳ್ಳಲು ಸಹಾಯ ಮಾಡುತ್ತದೆ.
೪.ಚಿಂತನಾ ಶಕ್ತಿ, ನೆನಪಿನ ಶಕ್ತಿ ಜಾಸ್ತಿಯಾಗುತ್ತದೆ.
೫.ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡಬಹುದು.
೬.ಮಕ್ಕಳ ಜೊತೆಗಿನ ಬಾಂಧವ್ಯ ಹೆಚ್ಚಿಸುತ್ತದೆ.
೭.ಕಥೆ ಮುಂದೆ ಪುಸ್ತಕವನ್ನು ಓದಲು ಸಹಕರಿಸುತ್ತದೆ.

ಚಿತ್ರ ಕೃಪೆ: ಆಂಡ್ರಿಯಾ ಪಿಯಾಕ್ವುದಿಯೋ

ಕಥೆಗಳಿಗೆ ನಿರ್ದಿಷ್ಟ ಸಮಯವೆಂದಿರುವುದಿಲ್ಲ. ಗಾಂಭೀರ್ಯದಿಂದ ಕುಳಿತು ಕೇಳಲೇಬೇಕಂತಿಲ್ಲ. ಊಟ ಮಾಡುವಾಗಲೋ, ಪ್ರಯಾಣಿಸುತ್ತಿರುವಾಗಲೋ, ಬಿಡುವಿದ್ದಾಗ ಕಥೆ ಹೇಳಬಹುದು. ಎಲ್ಲೋ ಹೋದ ಪ್ರವಾಸದ ತುಣುಕುಗಳು, ಬಾಲ್ಯದ ನೆನಪಿನ ಬುತ್ತಿಗಳು, ತಮಾಷೆಯ ವಿಷಯಗಳನ್ನು ಕಥೆಯಷ್ಟೇ ಸ್ವಾರಸ್ಯವಾಗಿ ಹೇಳಬಹುದು. ಕಥೆಗಳು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತದೆ ಎಂಬುವುದಂತೂ ಸತ್ಯ. ಕಥೆಗಳು ಮಕ್ಕಳನ್ನು ಮಾನಸಿಕವಾಗಿ ಸಬಲರಾಗಲು, ನೋವನ್ನು ಸಹಿಸಲು, ಧೈರ್ಯದಿಂದ ಮುನ್ನುಗ್ಗಲು ಸಹಾಯ ಮಾಡುತ್ತದೆ. ಮಕ್ಕಳಲ್ಲಿ ಮೌಲ್ಯಗಳನ್ನು ಪರಿಚಯಿಸಲು ಉತ್ತಮ ವಿಧಾನವಾಗಿದೆ. ಕಥೆಗಳ ಮೂಲಕ ವ್ಯಾವಹಾರಿಕ ಜ್ಞಾನ ಹೆಚ್ಚಿಸಲು, ಇತಿಹಾಸ, ಸಂಸ್ಕೃತಿ ಪರಂಪರೆ, ವಿಜ್ಞಾನದ ಅರಿವು ಮೂಡಿಸಲು ಕಥೆ ಬೇಕೇ ಬೇಕು. ೨-೩ ತಿಂಗಳು ಬಿಡದೇ ೨-೭ ವರ್ಷದ ಮಕ್ಕಳಿಗೆ ಕಥೆ ಹೇಳಿದರೆ ಪರಿಣಾಮವನ್ನು ನೀವೇ ಗುರುತಿಸಬಹುದು. ಬೇಡದ ಅವರಿವರ ಮನೆಯ ಕಥೆ,ಅದೇ ಗೋಳಿನ ಧಾರಾವಾಹಿಯ ಕಥೆ, ಎಲ್ಲವನ್ನೂ ಬಿಟ್ಟು ನಮ್ಮ ಜೀವನವನ್ನೇ ಕಥೆಯಾಗಲು ಪ್ರಯತ್ನ ಪಡೋಣ. ಇನ್ನೇಕೆ ತಡ ಮಕ್ಕಳಿಗೆ ಕಥೆ ಹೇಳಲು ಈ ದಿನದಿಂದಲೇ ಪ್ರಾರಂಭಿಸೋಣ!