ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : https://kn.wikipedia.org/wiki/%E0%B2%AA%E0%B3%81._%E0%B2%A4%E0%B2%BF._%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%BE%E0%B2%9A%E0%B2%BE%E0%B2%B0%E0%B3%8D

ಪು.ತಿ.ನ.ರಿಗೆ ನುಡಿ ನಮನ

ಸುಪ್ರೀತಾ ಶಾಸ್ತ್ರೀ
ಇತ್ತೀಚಿನ ಬರಹಗಳು: ಸುಪ್ರೀತಾ ಶಾಸ್ತ್ರೀ (ಎಲ್ಲವನ್ನು ಓದಿ)

ತೇಜಸ್ಸಿನ ಮುಖ, ಹಣೆಯಲ್ಲಿ ಕೆಂಪು ನಾಮ, ತಲೆಗೆ ಟೋಪಿ , ನೋಡಿದರೆ ಎಂಥವರಿಗೂ ಗೌರವ ಮೂಡುತ್ತಿದ್ದ , ನವ್ಯ ಕವಿಗಳಾದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ೧೯೦೫ ಮಾರ್ಚ್ ೧೭ ರಂದು ಮೇಲುಕೋಟೆಯಲ್ಲಿ ಜನಿಸಿದರು. ಇವರ ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ. ಮಾತೃಭಾಷೆ ತಮಿಳು. ಕಲಿತಿದ್ದು ಸಂಸ್ಕೃತ, ಫ್ರೆಂಚ್, ಇಂಗ್ಲೀಷ್. ಬಹುಶಃ ಕನ್ನಡ ನೆಲದಲ್ಲಿ ಹುಟ್ಟಿದ ಪರಿಣಾಮವೋ ಏನೋ ಕನ್ನಡವೆಂದರೆ ಅಚ್ಚುಮೆಚ್ಚು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿಯೇ ಪಡೆದರು.

ಚಿತ್ರ ಕೃಪೆ : https://vijaykarnataka.com/lavalavk/weekly-magazine/literary/article-on-poetry/articleshow/69176426.cms

ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದರು. ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದ ಪುತಿನ ಅವರು, ಶಾಸನ ಸಭಾ ಕಚೇರಿಯಲ್ಲಿ ಸಂಪಾದಕರಾಗಿ ನಿವೃತ್ತರಾದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕಾಗಿ ಮತ್ತು ಇಂಗ್ಲಿಷ್-ಕನ್ನಡ ನಿಘಂಟುವಿನ ಸಂಪಾದಕರಾಗಿ ಸೇವೆಸಲ್ಲಿಸಿದರು. ವಿಮರ್ಶಕರು, ನಾಟಕಕಾರರು, ಸಂಶೋಧಕರು ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಕಲ್ಪನಾ ಸೌಂದರ್ಯ ಕೌಶಲವನ್ನು ಮೆರೆಸಿ, ಸತ್ವಪೂರ್ಣ ಸಾಹಿತ್ಯದ ರಸದೌತಣವನ್ನು ಕನ್ನಡಿಗರಿಗೆ ನೀಡಿದರು. ಪುತಿನ ಅವರ ಕಾವ್ಯಗಳಿಗೆ ಮೇಲುಕೋಟೆ, ಮೈಸೂರು, ಹಾಗೂ ಬೆಂಗಳೂರಿನ ಮಲ್ಲೇಶ್ವರಂ ಪರಿಸರಗಳು ಸ್ಫೂರ್ತಿ ನೀಡಿದವು. ಮೇಲುಕೋಟೆಯ ಬೆಟ್ಟ, ತೊರೆ, ಕಣಿವೆ, ಕಾಡು, ಗುಡಿಗಳು ಪುತಿನ ಅವರ ಕಾವ್ಯದ ವಸ್ತುಗಳಾಗಿವೆ. ಮೇಲುಕೋಟೆಯ ಆಧ್ಯಾತ್ಮಿಕ ಪರಿಸರವು ಪುತಿನ ಅವರ ಸಾಹಿತ್ಯ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆಯೆಂದು ಅವರೇ ತಿಳಿಸುತ್ತಾರೆ.

ಪು.ತಿ.ನ. ಸಮಗ್ರ ಸಾಹಿತ್ಯಕ್ಕೆ ಹೆಸರಾಗಿದ್ದಾರೆ. ‘ನನ್ನ ನಾಯಿ’ ಕವನ ಪುತಿನ ಅವರ ಮೊದಲ ಕವನ. ಈ ಕವನಕ್ಕೆ ದೊರೆತ ಪ್ರತಿಕ್ರಿಯೆಯಿಂದ ಸ್ಫೂರ್ತಿಗೊಂಡು ಹಲವಾರು ಕವನಗಳನ್ನು ಬರೆದರು. ಅದರ ಫಲವೆಂಬಂತೆ ಅವರ ಮೊದಲ ಕವನ ‘ಹಣತೆ’ ೧೯೩೩ರಲ್ಲಿ ಪ್ರಕಟವಾಯಿತು. ನಂತರದ ದಿನಗಳಲ್ಲಿ ಹನ್ನೊಂದು ಕವನ ಸಂಕಲನಗಳನ್ನು, ಹದಿನಾರು ಗೀತ ರೂಪಕಗಳನ್ನು, ಹತ್ತು ಗದ್ಯಚಿತ್ರಗಳನ್ನು ಜೊತೆಗೆ ಕಾವ್ಯಮೀಮಾಂಸೆಯ ಕೃತಿಗಳನ್ನು ರಚಿಸಿದರು. ಹಣತೆ, ವಿಕಟಕವಿವಿಜಯ, ಹಂಸದಮಯ೦ತಿ, ಗೋಕುಲ, ಶಾರದ ಯಾಮಿನಿ, ಗಣೇಶ ದರ್ಶನ, ರಸ ಸರಸ್ವತಿ, ಮಲೆ ದೇಗುಲ, ಹೃದಯ ವಿಹಾರಿ, ಇರುಳು ಮೆರುಗು, ಹಳೆಯ ಬೇರು ಹೊಸ ಚಿಗುರು, ಎಂಬತ್ತರ ನಲುಗು, ರಥಸಪ್ತಮಿ, ನಿರೀಕ್ಷ, ಹಣತೆಯ ಹಾಡು ಇನ್ನೂ ಮುಂತಾದವು. ಪು.ತಿ.ನ. ಗೀತನಾಟಕಕಾರರೂ ಆಗಿದ್ದರು . ಗೋಕುಲ ನಿರ್ಗಮನ, ಕವಿ, ಅಹಲ್ಯೆ, ವಿಜಯ, ಶಬರಿ, ಹಂಸದಮಯಂತಿ, ಹರಿಣಾಭಿಸರಣ, ದೀಪಲಕ್ಷ್ಮಿ, ಕುಚೇಲ ಕೃಷ್ಣ, ದೋಣಿಯ ಬಿನದ, ಇವುಗಳು ಪು. ತಿ . ನ ರ ಪ್ರಸಿದ್ಧ ನಾಟಕಗಳಾಗಿವೆ. ಭೀತಿ ಮೀಮಾಂಸೆ, ಧೇನುಕೋಪಾಖ್ಯಾನ, ರಾಮಾಚಾರಿಯ ನೆನಪು, ಮಸಾಲೆದೋಸೆ, ಜಾನ್ಹವಿಗೆ ಜೋಡಿ ದೀವಿಗೆ ಇವರ ಪ್ರಸಿದ್ಧ ಪ್ರಬಂಧ ಸಂಕಲನಗಳು.

ಕವಿ ಪುತಿನ ಅವರು ಶಾಸ್ತ್ರೀಯ ಸಂಗೀತದ ವಾಗ್ಗೇಯಕಾರರೂ ಆಗಿದ್ದರು. ಸಂಗೀತಕ್ಕೆ ಪು.ತಿ.ನ.ರವರು ಹಲವು ಹೊಸ ರಾಗಗಳನ್ನು ಕಂಡುಹಿಡಿಯುವುದರ ಮೂಲಕ ಕೊಡುಗೆ ಸಲ್ಲಿಸಿದ್ದಾರೆ. ವಾಸಂತಿ ಮಾಧವಿಯಲ್ಲಿ, ವಸಂತ ಕಾಲದ ವೈಭವವನ್ನು ವರ್ಣನೆ ಮನೆಮಾತಾಗಿದೆ. ಪು . ತಿ . ನ ರು ಒಮ್ಮೆ ಆಕಾಶವಾಣಿಯ ಸಂದರ್ಶನದಲ್ಲಿ ಹೀಗೆನ್ನುತ್ತಾರೆ . “ನನಗೆ ಓಲಗ ಅಂದರೆ ತುಂಬಾ ಇಷ್ಟ. ಅದು ಬಿಟ್ಟರೆ ವೀಣೆ. ಎರಡೇ ಇಷ್ಟವಾದದ್ದು. ವೀಣೆ ಯಾತಕ್ಕೆಇಷ್ಟ ಅಂತಾ ಹೇಳಿದ್ರೆ ನಮ್ಮ ದೇವಸ್ಥಾನದ ಆವರಣದಲ್ಲಿ ಅವರು ಸಣ್ಣದಾಗಿ ನುಡಿಸಿದರೂ ಕೂಡ ಆ ಸುಶ್ರಾವ್ಯವಾದ ನಾದ ಕೇಳಿದ್ರೆ ಮನಸ್ಸಿಗೆ ತುಂಬಾ ಅಪ್ಯಾಯಮಾನವಾಗಿರ್ತಿತ್ತು. ಬೇರೆ ಒಂದು ಲೋಕವನ್ನೇ ಸೃಷ್ಟಿಸುವಂತಾಗುತ್ತಿತ್ತು. ಆ ಸ್ತೋತ್ರ ಪಾಠಗಳನ್ನು ರಾಗವಾಗಿ ಹೇಳ್ತಾ ಇದ್ರಲ್ಲ ಇದು ಮತ್ತು ಜಾತ್ರೆ, ಉತ್ಸವದ ಸಮಯದಲ್ಲಿ ಬರುತ್ತಿದ್ದಂತಹ ವಿದ್ವಾಂಸರು ಮತ್ತೆ ಪಲ್ಲವೋತ್ಸವದ ಸಮಯದಲ್ಲಿ ಬರುತ್ತಿದ್ದಂತಹ ವಿದ್ವಾಂಸರು ಮತ್ತೆ ಪಲ್ಲವೋತ್ಸವದ ಕಾಲದಲ್ಲಿ ಮೈಸೂರು ಕಡೆಯಿಂದ ವಾಸುದೇವಾಚಾರ್ಯರು, ಬಿಡಾರಂ ಕೃಷ್ಣಪ್ಪನವರು, ವೀಣೆ ಶೇಷಣ್ಣನವರು ಇವರೆಲ್ಲ ನಮ್ಮ ಮನೆಯ ಎದುರು ಮನೆಯಲ್ಲೇ ಬಿಡಾರ ಮಾಡ್ತಾ ಇದ್ರು.” ಇವೆಲ್ಲವೂ ನನ್ನ ಮನಸ್ಸಿನಲ್ಲಿ ಬೇರೂರಿದೆ. ಇದೇ ಬರೆಯಲು ಸ್ಫೂರ್ತಿ ಎಂದಿದ್ದರು.

ಚಿತ್ರ ಕೃಪೆ : https://kn.wikipedia.org/wiki/%E0%B2%AA%E0%B3%81.%E0%B2%A4%E0%B2%BF.%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%BE%E0%B2%9A%E0%B2%BE%E0%B2%B0%E0%B3%8D

ಪ್ರಶಸ್ತಿ , ಪುರಸ್ಕಾರಗಳ ಕುರಿತಾಗಿ ಹೇಳುವುದಾದರೆ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮೈಸೂರ ವಿ.ವಿ. ಡಾಕ್ಟರೇಟ್, ಪದ್ಮಶ್ರೀ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಡಿ.ಲಿಟ್, ೧೯೮೧ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಹೀಗೆ ನೂರಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ. ೧೯೯೬ರಲ್ಲಿ ತಮ್ಮ ೯೩ ನೇ ವಯಸ್ಸಿನಲ್ಲಿ ವಿಧಿವಶರಾದರು. ಸಮಸ್ತ ಕನ್ನಡ ನೆಲ ಜಲಕ್ಕೆ ಇವರ ಕೊಡುಗೆ ಸ್ಮರಣೀಯ . ಅವರ ಮನೆ ಸ್ಮಾರಕವಾಗಿ, ಸರ್ಕಾರದ ಅಧಿಕಾರಕ್ಕೆ ಸೇರಿತು.