ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೊಡಚಾದ್ರಿಯಲ್ಲೊಂದು ಸುತ್ತು…

ರಘುಚಂದ್ರ ಮಧುರೆ
ಇತ್ತೀಚಿನ ಬರಹಗಳು: ರಘುಚಂದ್ರ ಮಧುರೆ (ಎಲ್ಲವನ್ನು ಓದಿ)

ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ​, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ​. ಅದು ನಮ್ಮ ಪ್ರಕೃತಿ, ಬದುಕು, ಜನ​, ಸಂಸ್ಕೃತಿಯ ಕತೆ. ಅದು ನೆಲದ ಕತೆ. ಅಂಥ ಹಲವು ಅನುಭವಗಳನ್ನು ದಾಟಿಸಬಲ್ಲ ಅಂಕಣ ಮಾಲಿಕೆ ‘ಟೂರ್ ಡೈರೀಸ್’ನ ನಾಲ್ಕನೇ ಸಂಚಿಕೆ ನಿಮ್ಮ ಮುಂದೆ…

ಮುಂಚೆಯೇ ಜೀಪಿನ ವ್ಯವಸ್ಥೆ ಆಗಿದ್ದರಿಂದ ಬೆಳಿಗ್ಗೆ ೬-೩೦ಕ್ಕೆ ಜೀಪಿನವರು ಬರುತ್ತಾರೆಂದು ಎಲ್ಲರಿಗೂ ತಿಳಿಸಿಯಾಗಿತ್ತು. ಕೊಡಚಾದ್ರಿಯ ತೊಪ್ಪಲಿನ ಕೆಳಗೆ ಹೋಂ ಸ್ಟೇ ಅಲ್ಲಿಯೇ ವಾಸ್ತವ್ಯ. ಸುತ್ತ ಕಗ್ಗತ್ತಲು. ದಟ್ಟ ಕಾನನ. ರಾತ್ರಿ ಊಟವಾದ ನಂತರ ಕ್ಯಾಂಪ್ ಫೈರ್ ಹಾಕಿಕೊಡುವುದಾಗಿ ಹೋಂ ಸ್ಟೇದವರು ಮೊದಲೇ ತಿಳಿಸಿದ್ದರು. ಎರಡು ದಿನಗಳಿಂದ ಸುರಿದ ಮಳೆಗೆ ಚಳಿ ಹೆಚ್ಚಾಗಿ ತುಂತುರು ಮಂಜಿನ ಹನಿಗಳು ಬೀಳುತ್ತಿದ್ದರೆ, ಅಂತಹ ಚಳಿಗೂ ಹೆದರದ ಲೈಟಿನ ಕಂಬಗಳು ಮಾತ್ರ ಎದೆಯೊಡ್ಡಿ ನಿಂತಿದ್ದವು. ಎಲ್ಲರೂ ಟ್ರಿಪ್ ಮಾಡಿದ್ದರಿಂದ ಬೇಡವೆಂದರೂ ಕಣ್ಗಳು ನಿದ್ರೆಗೆ ಆಹ್ವಾನಿಸುತ್ತಿದ್ದರಿಂದ ರೂಮಿನೊಳಗೆ ಹೆಜ್ಜೆ ಹಾಕಿದಾಗ ಜಿಗಣಿಗಳು ಸ್ವಾಗತ ಕೋರಿದ ರೀತಿಯಂತೂ ಅದ್ಭುತ​.

ಬೆಳಿಗ್ಗೆ ೬-೩೦ ರ ಆಸು ಪಾಸು ಇರಬಹುದು, ಜೀಪಿನವರು ಬಂದು ಹಾರ್ನ್ ಹಾಕಿ ಎಚ್ಚರಿಸುತ್ತಿದ್ದರೆ ಪ್ರಯಾಣ ಮಾಡಿ ಸುಸ್ತು, ಮೈ ಕೈ ನೋವು ಮಾಡಿ ಕೊಂಡಿದ್ದರಿಂದ ನಿಧಾನವಾಗಿ ರೆಡಿಯಾಗಿ ಬಂದು ಎಲ್ಲರೂ ಜೀಪು ಹತ್ತಿದರು. ಹೋಂ ಸ್ಟೇ ಯವರು ಮೇಲೆ ಏನೂ ಸಿಗಲ್ಲವೆಂದು ನಸುಕಿನಲೆದ್ದು ಉಪಹಾರ ಪ್ಯಾಕ್ ಮಾಡಿ ಜೀಪಿನಲ್ಲಿಟ್ಟಿದ್ದರು. ಕೊಡಚಾದ್ರಿ ಭೂರಮೆಯ ಸ್ವರ್ಗ ಎಂದು ಕೇಳಿದ್ದರಿಂದ ಆ ಪ್ರಕೃತಿ ಸೊಬಗನ್ನು ಅನುಭವಿಸಬೇಕೆಂದು ಎಲ್ಲರೂ ತುದಿಗಾಲಲ್ಲಿ ಕೂತಿದ್ದರು. ಜೀಪಿಗೆ ಡೀಸಲ್ ತುಂಬಿಸುವಾಗ ಡ್ರೈವರ್ ಮೇಲೆ ಜಿಗಣಿಗಳಿವೆ ವಿಕ್ಸ್ ತಗೊಂಡು ಕೈ ಕಾಲುಗಳಿಗೆ ಹಚ್ಚಿಕೊಳ್ಳಬೇಕೆಂದು ಹೇಳಿದರು, ಮೇಲೆ ಹತ್ತಿದ ಮೇಲೆ ಹಚ್ಚಿಕೊಂಡು ಎಲ್ಲರೂ ಘಮಗುಟ್ಟಿದ್ದೇ ಘಮಗುಟ್ಟಿದ್ದು..( ಅದು ನಂತರ) ಜೀಪು ನಿಧಾನವಾಗಿ ಚೆಕ್ ಪೋಸ್ಟ್ ಬಳಿ ಬಂದು ನಿಂತಾಗ ಗಾಡಿ ಎಲ್ಲಾ ಪರಿಶೀಲಿಸಿ ಗಾಡಿಯಲ್ಲಿ ನಾವುಗಳು ಏನೇನು ತಗೊಂಡಿದ್ದೆವೋ ಅವೆಲ್ಲವನ್ನು ಲಿಸ್ಟ್ ಮಾಡಿ ಹಣ ಡೆಪೋಸಿಟ್ ಮಾಡಿಸಿಕೊಳ್ಳುತ್ತಾರೆ. ನಾವು ಮೇಲಿಂದ ಕೆಳಗಿಳಿದಾಗ ನಾವು ತೆಗೆದುಕೊಂಡು ಹೋಗಿದ್ದ ಕವರ್, ವಾಟರ್ ಬಾಟಲ್ ಏನನ್ನೂ ಮೇಲೆ ಎಲ್ಲೆಂದರಲ್ಲಿ ಬಿಸಾಡೋ ಹಾಗಿಲ್ಲ. ಅವುಗಳನ್ನೆಲ್ಲ ತಂದು ತೋರಿಸಿದ ಮೇಲೆ ಹಣ ವಾಪಸ್ಸು ಕೊಡುತ್ತಾರೆ . ಹೀಗಿರುವುದಕ್ಕೇ ಮೇಲೆ ಎಲ್ಲೂ ಗಲೀಜು, ಕಸ ಇಲ್ಲದಂತೆ ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದಾರೆ ಎನಿಸಿತು. ಎರಡು ದಿನಗಳಿಂದ ಸುರಿದಿದ್ದ ಮಳೆಗೆ ಮೇಲೆ ಹತ್ತುವ ರಸ್ತೆಯ ಕೆಸರು ಗುಂಡಿ, ಚೆಕ್ ಪೋಸ್ಟ್ ಬಳಿ ನಿಂತಿದ್ದ ಎಲ್ಲಾ ಜೀಪಿನವರು ಮೇಲೆ ಹತ್ತಿಸುವ ಬಗ್ಗೆ ಚರ್ಚಿಸಿ ಒಗ್ಗಟ್ಟಿನ ಮಂತ್ರ ಜಪಿಸಿ ನಮಗೆ ಬಿಗಿಯಾಗಿ ಹಿಡಿದುಕೊಳ್ಳಲು ತಿಳಿಸಿ ಪಯಣ ಆರಂಭಿಸಿದರು.

ಪಯಣದ ಆರಂಭದ ಸ್ವಲ್ಪ ದೂರದಲ್ಲಿಯೇ ಕೆಸರಲ್ಲಿ ಜೀಪೊಂದು ಸಿಕ್ಕಿಕೊಂಡಾಗ ಉಳಿದ ಜೀಪಿನವರೆಲ್ಲ ಇಳಿದು ಗುಂಡಿಗೆ ಕಲ್ಲುಗಳನ್ನು ಹಾಕಿ ತಳ್ಳಿ ನೂಕಿ ಮೇಲೆ ಹತ್ತಿಸಿದಾಗ ಕುಡಿದವರಂತೆ ವಾಲಾಡುತ್ತಾ ಹತ್ತುವ ಜೀಪುಗಳು ಒಮ್ಮೊಮ್ಮೆ ಬಿದ್ದು ಬಿಡುತ್ತವೇನೋ ಎಂಬಂತೆ ಮೇಲೆ ಹತ್ತುತ್ತವೆ. ಒಳಗಡೆ ಇರುವವರಿಗೆ ಮಾತ್ರ ಪುಕು ಪುಕು. ಕೊಡಚಾದ್ರಿ ಹತ್ತುವುದೆಂದಾಗ ಲಾಡು ಬಂದು ಬಾಯಿಗೆ ಬಿತ್ತು ಎಂದುಕೊಂಡವರಿಗೀಗ ಜೀವ ಬಾಯಿಗೆ ಬಂದ ಅನುಭವ. ಏನೋ ಭಯ, ಆತಂಕ, ದುಗುಡ (ಎಲ್ಲಾ ಒಂದೇ ಸಾರಿ ), ಒಂಥರಾ ಸಂಭ್ರಮ. ಮೇಲಕ್ಕೆ ಹೋದಂತೆಲ್ಲ ದೊಡ್ಡ ದೊಡ್ಡ ಬಂಡೆ ಸಾಲುಗಳ ನಡುವೆ ಕಿರಿದಾದ ರಸ್ತೆಯ ನಡುವೆಯೇ ಎದುರಿಗೆ ಬರುವ ಜೀಪುಗಳು ಆ ಕಿರು ರಸ್ತೆಯಲ್ಲಿಯೇ ಜಾಗ ಮಾಡಿಕೊಡುವ ಪರಿ ವಿಶಿಷ್ಟ. ಸುತ್ತಲೂ ಗುಡ್ಡದ ಸಾಲುಗಳ ನಡುವೆ ನೆಲಕ್ಕಂಟಿದ ಕೆಮ್ಮಣ್ಣು, ಕಾಣದ ಊರಿಂದ ಬಂದು ಝುಳು ಝುಳು ಹರಿವ ನೀರಿನ ಸದ್ದು, ತಂಪುಗಾಳಿ ಬೆಟ್ಟಕ್ಕಂಟಿಕೊಂಡ ಹಸಿರು, ಕಿರ್ ಕಿರ್ ಎನ್ನುವ ಕ್ರಿಮಿಗಳ ಶಬ್ದ, ಅಲ್ಲೊಂದು ಇಲ್ಲೊಂದು ಹಕ್ಕಿಗಳ ಕಲರವ, ವಿವಿಧ ಸಸ್ಯ ಸಂಕುಲದ ಜೊತೆಗೆ ಜೀಪಿನ ಸದ್ದು ಗದ್ದಲದ ನಡುವೆ ಜೀಪಿನಲ್ಲಿದ್ದವರ ಮೌನದ ಮೆರವಣಿಗೆ. ಅದೊಂದು ಅಪರೂಪದ ಪರಿಸ್ಥಿತಿ; ಅನುಭವಿಸಬೇಕಷ್ಟೇ. ಅಂತೂ ಇಂತೂ ಮೇಲೆ ಹತ್ತಿದ ಜೀಪು ದೇವಸ್ಥಾನದ ಬಳಿ ನಿಲ್ಲಿಸಿದಾಗ ಎಲ್ಲರ ಮೊಗದಲ್ಲಿ ಮಂದಹಾಸ. ಕೊಡಚಾದ್ರಿ ಮೇಲೆ ತಲುಪುವುದೆಂದರೆ ಅದೊಂದು ಸವಾಲೇ ಸರಿ. ಅಲ್ಲಿಂದ ಮೇಲೆ ಚಾರಣ. ಕಲ್ಲು ಬಂಡೆಗಳ ನಡುವೆ ಹತ್ತುತ್ತ ಸಾಗಿದಾಗ ಏದುಸಿರು ಬಿಡುತ್ತ ಕೆಲವರು ಕೂತು ದಣಿವಾರಿಸಿಕೊಂಡು ಮೇಲೆ ಹತ್ತಿದ್ದರು. ದೂರದಿಂದಲೇ ಕಾಣುತ್ತಿದ್ದ ಶುಭ್ರ ಮುಗಿಲು, ಹಸಿರು ತೊಟ್ಟ ಭೂರಮೆ, ನಮ್ಮನ್ನು ಅಪ್ಪಿಕೊಂಡು ಮುಂದೆ ಸಾಗುವ ಮೋಡದ ಸಾಲುಗಳು, ತುಂತುರು ಮಂಜಿನ ಹನಿಗಳು, ಚುಮು ಚುಮು ಚಳಿ, ಶಾಂತತೆ, ವ್ಹಾವ್.. ಎಷ್ಟು ವರ್ಣಿಸಿದರೂ ಸಾಲದು. ಗಂಧದ ಗುಡಿಯಲ್ಲಿ ಅಣ್ಣಾವ್ರು ಹಾಡಿದ

“ಹಸಿರಿನ ಬನ ಸಿರಿಗೆ ಒಲಿದು!,
ಸೌಂದರ್ಯ ಸರಸ್ವತಿ ಧರೆಗಿಳಿದು!!”

ಹಾಡು ನೆನಪಾಗಿದ್ದಂತೂ ಸುಳ್ಳಲ್ಲ. ಅದೊಂದು ಅನನ್ಯ ಅನುಭವ. ಆಮೇಲೆ ಶುರು, ಪ್ರಕೃತಿ ಸೊಬಗು ಸವಿದದ್ದಕ್ಕಿಂತ ಹೆಚ್ಚು ಪೋಟೋ, ಸೆಲ್ಪಿ, ರೀಲ್ಸ್ ಹೀಗೆ.. ನಿಜಕ್ಕೂ ಅದೊಂದು ಅವಿಸ್ಮರಣೀಯ ಪಯಣ. ಕಣ್ಗಳಿಗಂತೂ ಹಬ್ಬ. ಹೀಗೆ ಮುಗಿಸಿಕೊಂಡು ಕೂರುತ್ತಾ, ಕುಂಟುತ್ತಾ ಜೀಪು ಕೆಳಗಿಳಿದಾಗ ‘ಬದುಕಿದೆಯಾ ಬಡ ಜೀವವೇ’ ಎಂದೆನಿಸಿದರೂ ಮನಸ್ಸು ನಿರಾಳ. ಅಲ್ಲೇ ಒಂದು ಹೋಟೆಲ್ನಲ್ಲಿ ಟೀ ಕುಡಿದು ಪಯಣ ಮುಂದೆ ಬೆಳೆಸುವಾಗ ಕಣ್ಗಳು ಮತ್ತೊಮ್ಮೆ ಕೊಡಚಾದ್ರಿಯ ಬೆಟ್ಟದ ತುದಿಗೆ ಕಣ್ಣಾಯಿಸಿ ನಸುನಕ್ಕು, ಏದುಸಿರು ಬಿಟ್ಟರೆ ಮನಸಿಗೊಂದು ಬೆಚ್ಚನೆಯ ಭಾವ.

ಗೆಳೆಯರ ಗುಂಪಿದ್ದರೆ ಈಗಲೇ ಪ್ಲಾನ್ ಮಾಡಿ ಹೊರಡಿ, ಇದು ಸರಿಯಾದ ಸಮಯ.
ಹೋಗ್ಬನ್ನಿ.. ಆದರೆ, ಚಾರಣ ಹುಷಾರು.

(ಬೆಟ್ಟದ ಮೇಲ್ಗಡೆ ಒಂಚೂರು ಕಸ ಇಲ್ಲದಂತೆ ಕಾಪಾಡಿಕೊಂಡು ಬಂದಿರುವ ಅರಣ್ಯ ಇಲಾಖೆಯವರಿಗೆ, ಏಕಾಗ್ರತೆಯಿಂದ ಕರೆದುಕೊಂಡು ಹೋಗುವ ಜೀಪು ಡ್ರೈವರ್ ಗಳಿಗೆ, ಪ್ರಕೃತಿ ಸೌಂದರ್ಯಕ್ಕೆ ಒಂದು ದೊಡ್ಡ ಸಲಾಂ)