ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೊರೊನಾ… ಕೊರೊನಾ… ಕೊರೊನಾ…

ಜಬೀವುಲ್ಲಾ ಎಂ. ಅಸದ್
ಇತ್ತೀಚಿನ ಬರಹಗಳು: ಜಬೀವುಲ್ಲಾ ಎಂ. ಅಸದ್ (ಎಲ್ಲವನ್ನು ಓದಿ)


ಚಿತ್ರ ಕಲೆ: ಜಬೀವುಲ್ಲಾ ಎಂ. ಅಸದ್

ಕಣ್ಣಿಗೆ ಕಾಣದ ನಿರ್ಜಿವ ವೈರಾಣುವೊಂದು
ಪ್ರಕೃತಿಯ ಪರವಾಗಿ ಯುದ್ಧ ಸಾರಿದೆಯಲ್ಲ
ಜೈವಿಕ ಚೇತನವಾದ ಮಾನವನ ಮೇಲೆ
ನಿರಾಕಾಯವಾಗಿ ಸುತ್ತು ಬಳಸಿದೆಯಲ್ಲ
ಈಟಿ ಎಸೆತವಿಲ್ಲ, ಬಾಣಗಳ ಸುರಿಮಳೆ ಇಲ್ಲ
ಮದ್ದುಗುಂಡು ಹಾರಿಸಲಿಲ್ಲ, ಅಣ್ವಸ್ತ್ರದ ಪ್ರಯೋಗವಿಲ್ಲ
ಮನುಷ್ಯನ ಸಾವಿನ ಭೀತಿಯನ್ನೆ ಬಂಡವಾಳವಾಗಿಸಿಕೊಂಡಿತಲ್ಲ
ಎಲ್ಲರನ್ನು ಅಸ್ಪೃಶ್ಯರನ್ನಾಗಿಸಿ
ಸಮಾನಾಂತರ ಗೆರೆ ಎಳೆದಿದೆಯಲ್ಲ
ತನ್ನನ್ನು ತಾನು ಮುಟ್ಟಿಕೊಳ್ಳದಂತೆ ಎಚ್ಚರಿಕೆ ಕೊಟ್ಟಿದೆಯಲ್ಲ!

ಜಗತ್ತಿನಧ್ಯಾಯದಲ್ಲೆ ಮೊದಲ ಬಾರಿಗೆ ಮಾಸಗಟ್ಟಲೆ ಬೀಗ ಜಡಿಸಿದೆ
ಮಂದಿರ, ಮಸೀದಿ, ಗುರುದ್ವಾರ, ಇಗರ್ಜಿಗಳೆಂಬ ಬೇಧವಿಲ್ಲದೆ
ದೇವರೆಂಬ ದೇವರುಗಳನ್ನೆಲ್ಲ ನಾಲ್ಕು ಗೋಡೆಗಳ ನಡುವೆ ಕೂಡಿ ಹಾಕಿದೆ
ಇದ್ದವರು, ಇಲ್ಲದವರೆಲ್ಲರದ್ದು ಒಂದೇ ಗೋಳು
ಯಾರೂ ಹೊರ ಹೋಗುವಂತಿಲ್ಲ
ಮನೆಗಳ ಒಳಗೆ ಕೂರಬೇಕಾಯಿತಲ್ಲ
ಕಣ್ಣಿಗೆ ನಿದಿರೆ, ಹೊಟ್ಟೆಗೆ ಊಟ ಇದ್ದಾರಾಯಿತೆಂದರೆ
ಅದಕ್ಕೂ ಕಂಟಕ ಬಂತಲ್ಲ
ಅಷ್ಟಕ್ಕೂ ಮನುಷ್ಯ ಮಾಡಿದ್ದ ಪಾಪ ಅಷ್ಟಿಷ್ಟಲ್ಲವಲ್ಲ!
ಪಕ್ಷಿ ಪ್ರಾಣಿ ಎನ್ನದೆ ಬಲೆ ಬೀಸಿ, ಗುಂಡಿಟ್ಟು ಕೊಂದೇವು
ಸಾಲು ಸಾಲು ಮರಗಳನ್ನೇ ಬೇರು ಸಮೇತ ಉರುಳಿಸಿ ಬಿಟ್ಟೆವು
ಅಡವಿಗಳನ್ನು ಬಯಲುಗಳನ್ನಾಗಿಸಿ
ಕೆರೆ, ನದಿ, ಸಮುದ್ರಗಳಷ್ಟೆ ಏಕೆ ಉಸಿರಾಡುವ ಗಾಳಿಯನ್ನು ಕಲುಷಿತಗೊಳಿಸಿ
ಹರಿವ ನೀರನ್ನು ತಡೆಹಿಡಿಸಿ ಅಣೆಕಟ್ಟುಗಳ ಹೆಸರಿನಲ್ಲಿ ನಾಡಿಗಳನ್ನೇ ಬತ್ತಿಸಿ
ಈ ಭೂಮಿ, ಆ ಬಾನು ಸಾಲದೆಂಬಂತೆ
ಚಂದ್ರ – ಮಂಗಳನ ಅಂಗಳದಲ್ಲೂ ಕಾಲಿರಿಸಿ
ಏನೋ ಸಾಧಿಸಿದ ಭ್ರಮೆಯಲ್ಲಿ
ಬದುಕಲಿರುವ ಏಕೈಕ ಧರಣಿಯನ್ನು
ನರಕವಾಗಿಸಿ
ಬೀಗುತ್ತಿರುವುದು ಸುಳ್ಳೇನು?
ಈಗ ಹೇಳುತ್ತಿದ್ದಾರೆ ಎಲ್ಲಾ….
ಕೊರೊನಾದಿಂದ ಜಗತ್ತು ನರಕವಾಗಿದೆ ಎಂದು
ಮಹಾಸುಳ್ಳರು ನಾವೆಲ್ಲಾ
ಪಾಪಾತ್ಮರು ನಾವೆಲ್ಲ!