- ಯುದ್ಧ ಗೆದ್ದ ಬುದ್ಧ - ಮೇ 7, 2020
ಅವನ ಕ್ರೌರ್ಯ ಕೇಳಿಯೂ ‘ಆ ನನ್ನ ಕಂದನನ್ನು ನೋಡಬೇಕು’ ಎಂದ ಬುದ್ಧ.
ಅವನು ಅಂಗುಲಿಮಾಲ. ಸಿಕ್ಕ ಸಿಕ್ಕವರ ಕೈ ಬೆರಳು ಕತ್ತರಿಸಿ ತನ್ನ ಕೊರಳಿಗೆ ಮಾಲೆ ಧರಿಸುತ್ತಿದ್ದ ವಿಕೃತ.
ಅದೊಂದು ದಿನ ಗವ್ವೆನ್ನುವ ರಾತ್ರಿ. ರಾಜನೂ ಸೇರಿದಂತೆ ಮಂತ್ರಿಗಳು ಸೇನಾಪತಿಗಳು ಸಾಮಾನ್ಯರು ಅಲ್ಲಿ ನೆರೆದಿದ್ದರು. ಇಂದು ರಾತ್ರಿ ಅಂಗುಲಿಮಾಲ ಬರುವವನಿದ್ದ. ಎಲ್ಲರ ಎದೆಯಲ್ಲಿ ಆತಂಕ. ಯಾರ ಕೈ ಬೆರಳು ಅವನ ಕೊರಳಿಗೆ ಮಾಲೆಯಾದವೋ ಎಂಬ ಚಿಂತೆ. ಈ ನಿಮಿತ್ತ ಸಾಮಾನ್ಯರ ರಕ್ಷಣೆಗೆ ರಾಜನ ಸಮೇತ ದಂಡುದಾಳಿ ನೆರೆದಿತ್ತು.
ಇಂದು ಅವನು ಬಂದರೆ ಬಲಿ ಆಗಲೇ ಬೇಕು. ರಾಜನ ಆಣತಿಯಿಂದ ಸಾಮಾನ್ಯರಲ್ಲಿದ್ದ ಆತಂಕ ಒಂದೆಡೆ ದೂರಾದಂತಿದ್ದರು ಎದೆ ತಟ್ಟಿ ಹೇಳುವ ಧೈರ್ಯವಂತು ಯಾರಿಗೂ ಇಲ್ಲ. ಎಷ್ಟು ಹೊತ್ತಾಯ್ತು ಅಂಗುಲಿಮಾಲ ಬರಲೇ ಇಲ್ಲ. ಅಂಗುಲಿಮಾಲ ತನ್ನನ್ನು ಕೊಲ್ಲುವ ರಾಜನ ಸಿದ್ದತೆಗೆ ಹೆದರಿರಬಹುದು. ಹಾಗಾಗಿ ಅವನು ರಾಜ್ಯ ಬಿಟ್ಟು ತಪ್ಪಿಸಿಕೊಂಡು ಹೋಗಿರಬಹುದು.
ಅಹೋರಾತ್ರಿ. ದಟ್ಟ ಇರುಳು. ಎಂಥ ನಿಶ್ಯಬ್ಧ!
ಅಗೋ ದಟ್ಟ ಮರಗಳ ಪೊದೆಪೊದೆಗಳ ನಡುವಿಂದ ಏನೋ ಸದ್ದು. ನೆರೆದಿದ್ದ ರಾಜನ ದಂಡುದಾಳಿ ವಿಚಲಿತವಾಗಿ ಸರ್ರನೆ ತಿರುಗಿತು. ರಾಜನ ಆಣತಿ. ಯಾರೂ ಮಿಸುಕಾಡುವಂತಿಲ್ಲ. ಒಮ್ಮೆ ರಾಜನ ಎದೆಯೂ ಆತಂಕದ ತರಂಗದಲ್ಲಿ ಮುಳುಗಿತ್ತು. ದಳಪತಿ ಸೇನಾಪತಿ ಕಾಲಾಳು ಅಶ್ವದಳ ಗಜಪಡೆ ಒಂದೊಂದೆ ಹೆಜ್ಜೆಯಲಿ ಸದ್ದಿನ ಕಡೆ ಹೋಗುವ ಆಣತಿಯಾಯ್ತು.
‘ಒಬ್ಬ ಅಂಗುಲಿಮಾಲನಿಗೆ ಇಷ್ಟು ತಯಾರಿಯೆ ಇಷ್ಟು ಆತಂಕವೇ ಛೇ ಅಪಮಾನ’
ರಾಜನ ಆತ್ಮಸಾಕ್ಷಿ ಕೆಣಕಿತು.
ಸದ್ದು ಮತ್ತಷ್ಟು ಜೋರಾಯ್ತು. ಈಗ ಮುಂದೆ ಹೋಗುವವರಲ್ಲಿ ನಡುಕ. ಅಕಸ್ಮಾತ್ ಅವನ ಕೈಗೆ ಸಿಕ್ಕರೆ ಈ ಸೀಳುವ ಕತ್ತಲಲ್ಲಿ ನನ್ನ ಕೈ ಬೆರಳು ಕತ್ತರಿಸುವುವೋ ಎಂಬ ನಡುಕ. ಈಗ ಒಮ್ಮೆ ದಂಡುದಾಳಿ ರಾಜನ ಆಣತಿಯಂತೆ ನಿಂತು ಎದುರು ಬರುತ್ತಿದ್ದ ಸದ್ದನ್ನು ಆಲಿಸಿತು. ಆ ಸದ್ದು ಮತ್ತಷ್ಟು ಜೋರಾಯ್ತು. ಪೆಂಜು ದಗ್ಗನೆ ಹೊತ್ತಿದವು. ಎಲ್ಲರೂ ನಿರಾಳತೆ ಭಾವ ತೋರಗೊಂಡರು. ಆ ನಿರಾಳತೆಗೆ ಸಾಕ್ಷಿ ಬುದ್ದ. ಹಾಗೆ ನೆಲದಲ್ಲಿ ಉದುರಿದ್ದ ತರಗೆಲೆ ಮೇಲೆ ಕಾಲಿಟ್ಡು ಬರುತಿದ್ದ ಬುದ್ದನ ನಡಿಗೆಯಿಂದ ಒಣಗಿದ ತರಗೆಲೆ ಸರ್ರನೆ ಸದ್ದಿನ ಅಲೆ ಎಬ್ಬಿಸಿತ್ತು.
ಬುದ್ಧ ಎಲ್ಕರನ್ನು ದಿಟ್ಡಿಸಿದ. ದಂಡುದಾಳಿ ಸೈನ್ಯ ಆನೆ ಕುದುರೆ. ಬುದ್ದ ಕೇಳಿದ,
“ರಾಜ ಏನಿದು ಎಲ್ಲಿಗೆ ಈ ದಂಡುದಾಳಿ?”
ರಾಜ ವಿನಮ್ರವಾಗಿ
“ಅಂಗುಲಿಮಾಲನನ್ನು ಸಂಹರಿಸಲು” ಎಂದ.
“ಅಂಗುಲಿಮಾಲನೇ.. ?
ಎಂಥ ಹೆಸರು! ಅವನೇನು ಮಾಡಿದ?”
ಬುದ್ದನ ಈ ಮಾತಿಗೆ
ರಾಜ ಅಂಗುಲಿಮಾನ ಕ್ರೌರ್ಯವನ್ನು ಇಂಚಿಂಚು ಹೇಳಿದ. ಬುದ್ಧ ಮೌನನಾದ.
ಸ್ವಲ್ಲ ಹೊತ್ತಿನ ನಂತರ,
“ಒಬ್ಬನನ್ನು ಕೊಲ್ಲಲು ಇಷ್ಟು ಜನ. ಇಷ್ಡು ದಂಡು” ಬುದ್ಧನ ಮಾತಿಂದ ಅಲ್ಲಿದ್ದವರು ತರಾವರಿ ವಿವರಿಸಿದರು. ಹೆದರಿಸಿದರು ಬೆದರಿಸಿದರು ಬೆಚ್ಚಿಸಿದರು ಅತ್ತರು ಸಂಕಟ ಪಟ್ಟರು.
ಬುದ್ಧ ಒಂದು ಧೀರ್ಘ ಮೌನದ ನಂತರ ಹೇಳಿದ
“ಆ ನನ್ನ ಕಂದನನ್ನು ನೋಡಬೇಕು!”
ಎಲ್ಲರು ದಿಗ್ಭ್ರಾಂತರಾದರು. ಅವನು ನಿಮ್ಮನ್ನು ಕೊಲ್ಲುತ್ತಾನೆ. ಬೆರಳು ಕತ್ತರಿಸುತ್ತಾನೆ ಎಂದರು. ಬುದ್ದ ಅಚಲನಾಗಿದ್ದ. ಅವನನ್ನು ನೋಡಲೇ ಬೇಕೆಂದು ಹೊರಟೇ ಬಿಟ್ಟ ಆ ಸೀಳು ಕತ್ತಲಲಿ ಆ ದಡ್ಡ ಕಾಡಿನ ಜಾಡಿನಲಿ.
ಕಾಡುಮೇಡು ಅಲೆದು ಸುಸ್ತು ನೀಗಿಸಲು ಆ ಸೀಳು ಕತ್ತಲಲಿ ಒಂದು ಮರ ಒರಗಿ ಧ್ಯಾನಿಸಿದ. ನಿರಾಳವಾದ. ಗಕುಂ ಎನ್ನುವ ಕತ್ತಲು. ಎತ್ತಲೋ ಒಂದು ಕರಾಳ ಸದ್ದು. ಬುದ್ದ ಅಲುಗಲಿಲ್ಲ. ಆ ಸದ್ದು ಬುದ್ದನ ಹತ್ತಿರವೇ ಬಂತು. ಹಿಂದೆ ಮುಂದೆ ಹೀಗೆ ಹಾರಾಡಿತು. ಬಗೆ ಬಗೆಯಲಿ ಅರಚಿತು. ಬುದ್ದ ನಿಧಾನಕೆ ಕಣ್ತರೆದ. ಒಂದು ಆಕೃತಿ. ಕಣ್ಣಿಂದ ಮಿಂಚಿನ ಬೆಳಕು ಸುಳಿದಂಗಾಯ್ತು. ಒಂದು ಕ್ರೌರ್ಯದ ಮುಖ. ಅವನು ಅಂಗುಲಿಮಾಲ.
ಬುದ್ದನ ಕಣ್ಣ ಕಾಂತಿ ಅಂಗುಲಿಮಾಲನನು ಬೆಚ್ಚಿಸಿತು. ತಗ್ಗಿಸಿತು.ಕರಗಿಸಿತು.ಮಂಡಿಯೂರಿಸಿತು. ಬುದ್ದ ತನ್ನ ಧ್ಯಾನಸ್ಥಿಯಲ್ಲಿಯೇ ಬೋಧಿಸಿದ್ದ. ಎಷ್ಟು ಹಗಲು ಎಷ್ಟು ಇರುಳು? ಲೆಕ್ಕವಿಲ್ಲ.
ಎಷ್ಡು ದಿನಗಳಾದವು. ತಿಂಗಳುಗಳು ಉರುಳಿದವು. ಬುದ್ದ ಬಲಿಯಾಗಿರಬಹುದು! ನಾಡಲ್ಲಿ ಮಾತಿನ ಭರಾಟೆ. ಕೇರಿ ಕೇರಿಯಲಿ ಪಿಸುಮಾತು. ಮಾತು ಕೇಳದ ಸನ್ಯಾಸಿ ಹಠದಿಂದ ಪ್ರಾಣ ತೆತ್ತರಲ್ಲ!
ಒಂದು ದಿನ ಕೇರಿಯೊಳಗೆ ಕಾಣಿಕೊಂಡ ಬುದ್ದನ ಸುತ್ತ ಜನ ನೆರೆದರು. ದಂಡುದಾಳಿ ನೆರೆಯಿತು. ರಾಜ ಉಪಸ್ಥಿತನಾದ . ಕೇಳಿದರು.
“ಅಂಗುಮಾಲ ಸಿಕ್ಕನೆ? ಏನೂ ಮಾಡಲಿಲ್ಲವೇ? ತಪ್ಪಿಸಿಕೊಂಡು ಬಂದಿರಾ?” ಬಗೆಬಗೆ ಪ್ರಶ್ನೆ.
ಬುದ್ದ ಮೌನನಾದ. ಅವನ ಪಕ್ಕವೇ ಬೋಳು ತಲೆಯ ಶಿಷ್ಯನಿದ್ದ. ಅವನಿಗೆ “ನೀನು ಭಿಕ್ಷೆ ಎತ್ತಿ ತಾ” ಎಂದ. ಅವನು ಹೊರಟ.
ಈಗ ಬುದ್ದ ಹೇಳಿದ,
“ಅಂಗುಲಿಮಾಲ ಸತ್ತ. ನೀವು ಚಿಂತೆ ಬಿಟ್ಟು ಇರಿ” ಎಂದ. ಎಲ್ಲರಿಗೂ ಆಶ್ಚರ್ಯ. ಮರು ಪ್ರಶ್ನೆಗಳು ಎದ್ದವು. ಕೆಲವು ಅನುಮಾನಗಳು ಎದ್ದವು. ಅವೆಲ್ಲಕು ಬುದ್ದನಲ್ಲಿ ಉತ್ತರವಿತ್ತು. ಜನ, ರಾಜ, ಸೈನ್ಯ ನಿರಾಳವಾಯ್ತು.
ಊರ ಕೇರಿಯ ಕೊನೇ ಅಂಚು. ಬುದ್ದ ಒಂದು ಮರದ ಕೆಳಗೆ ತಾನು ಹೊದ್ದ ವಸ್ತ್ರ ಹಾಸಿ ಧ್ಯಾನಸ್ಥನಾದ. ಸಂಜೆ ಕತ್ತಲು. ಆ ಕತ್ತಲು ಏರುತ್ತ ಏರುತ್ತ ರಾತ್ರಿಯ ಬೆನ್ನು ತೋರಿತು. ಭಿಕ್ಷೆಗೆ ಹೋಗಿದ್ದ ಬೋಳು ತಲೆಯವನು ಬಂದು ಬುದ್ದನ ಎದುರು ದಬ್ಬನೆ ಬಿದ್ದ. ಅವನ ಮೈ ಕೈ ತಲೆ ದೇಹದ ಇಂಚಿಂಚು ರಕ್ತ ಸೋರುತ್ತಿತ್ತು. ಕಾರುತ್ತಿತ್ತು. ಬಾಯಿ ತೊದಲುತಿತ್ತು. ಮೈ ನಡುಗುತ್ತಿತ್ತು. ಬುದ್ದ ನಿಧಾನಕೆ ಕಣ್ಣು ಬಿಟ್ಡು ನೋಡಿದ. ಅವನು ಸಾವಕಾಶವಾಗಿ ತವೆದುಕೊಂಡು ಬಂದು ಬುದ್ದನ ಕಾಲಿಡಿದ. ಬುದ್ದ ಅವನ ತಲೆ ಹಿಡಿದು ತನ್ನ ತೊಡೆಯ ಮೇಲೆ ಹಾಕಿಕೊಂಡು ಕೈ ಸವರುತ್ತ,
“ಏನಾಯ್ತು ಕಂದಾ” ಎಂದ.
“ದೇವ ನಾನು ಪಾಪಿ. ನನಗೆ ಮುಕ್ತಿ ಕೊಡಿ. ನಾನು ಭಿಕ್ಷೆ ಕೇಳಲು ಹೋದೆ. ಯಾರೂ ಅನ್ನದ ಭಿಕ್ಷೆ ಕೊಡಲಿಲ್ಲ. ಎಲ್ಲರೂ ಅನುಮಾನಿಸಿದರು.ಅವಮಾನಿಸಿದರು. ಛೇಡಿಸಿದರು. ಕೆಲವರು ಅಯ್ಯೊ ಅಂದರು. ಇನ್ನು ಕೆಲವರು ನನ್ನ ದಿಟ್ಡಿಸಿ ನೋಡಿ ‘ಇವನು ಅಂಗುಲಿಮಾಲನ ತರ ಇದ್ದಾನಲ್ಲ’ ಅಂದರು.
ಅದೇ ಮಾತು ಕೇರಿಯೊಳಗೆ ದೊಡ್ಡ ಮಾತಾಯ್ತು. ಜನ ಮುತ್ತಿದರು. ನನ್ನ ಇಂಚಿಂಚು ನೋಡಿದರು. ಬಡಿದರು. ಸಿಕ್ಕಸಿಕ್ಕದರಲ್ಲಿ ಬಡಿದರು. ಆಗಲೇ ದೇವ ಅವರು ನನಗೆ ನೋವಿನ ಭಿಕ್ಷೆ ನೀಡುತ್ತಿರುವರೆಂದು” ಅಂತೇಳಿ ದುರುದುರನೆ ನೋಡಿದ.
ಬುದ್ದ ಹೇಳಿದ,
“ಅವರು ಪ್ರೀತಿಯಿಂದ ಕೊಟ್ಟ ಭಿಕ್ಷೆಯನ್ನು ಪ್ರಾಮಾಣಿಕವಾಗಿ ಈಸಿಕೊಂಡು ಬಂದಿರುವೆ.
ನೀನೀಗ ದೊಡ್ಡವ. ನೀನೀಗ ನನ್ನ ನಿಜ ಶಿಷ್ಯ ಕಂದಾ” ಅನ್ನುವಾಗ ತಣ್ಣನೆ ಗಾಳಿ ಬೀಸ ತೊಡಗಿತು.
ಆ ಕಂದನ ಕಣ್ಣುಗಳ ರೆಪ್ಪೆಗಳನು ಬುದ್ಧನ ಮೃದು ಬೆರಳುಗಳು ಸಾವಕಾಶವಾಗಿ ಮುಚ್ಚಿದವು.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ