ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಜ಼ಲ್ -ಧ್ಯಾನ ಮಾಡಿದಂತಲ್ಲ...
ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಸುಮ್ಮನೆ ಮೌನವಾಗಿದ್ದರೆ ಧ್ಯಾನ ಮಾಡಿದಂತಲ್ಲ
ಕಣ್ಣುಗಳನ್ನು ಮುಚ್ಚಿಯೇ ಇದ್ದರೆ ಧ್ಯಾನ ಮಾಡಿದಂತಲ್ಲ

ಈ ಮಳೆಯೆಂಬುದು ಎಂಥ ಯಕ್ಷಿಣಿ ಗೆಳೆಯ
ಬಿಚ್ಚಿ ಎಲ್ಲ ನೆನೆಯದಿದ್ದರೆ ಧ್ಯಾನ ಮಾಡಿದಂತಲ್ಲ

ಹರುಷಗಳೆಲ್ಲ ಎಲ್ಲಿಗೆ ಗುಳೆ ಹೋದವು ಈಗ
ಕಿವಿ ತೆರೆದು ಆಲಿಸದಿದ್ದರೆ ಧ್ಯಾನ ಮಾಡಿದಂತಲ್ಲ

ಅವಳ ಮುಖದಲ್ಲಿ ಮಡುವಾದ ದುಗುಡವಿತ್ತು
ಕಂಬನಿಯ ತೊಡೆಯದಿದ್ದರೆ ಧ್ಯಾನ
ಮಾಡಿದಂತಲ್ಲ

ಹೂವು ದುಂಬಿ ಚಿಟ್ಟೆಗಳಲ್ಲಿ ಸೆಳೆಯುತ್ತದೆ ಲೋಕ
ಬಣ್ಣಗಳ ಭಾವಿಸದಿದ್ದರೆ ಧ್ಯಾನ ಮಾಡಿದಂತಲ್ಲ

ಕೂರುವಲ್ಲಿ ನಿಂತು, ಎದ್ದು, ಗೊತ್ತಿದೆ ‘ಜಂಗಮ’ನಿಗೆ
ನಿಂತವನು ನಡೆಯದಿದ್ದರೆ ಧ್ಯಾನ ಮಾಡಿದಂತಲ್ಲ