ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ತಾನು ಹರಕನ್ನುಟ್ಟು ಹೊಸದು ನಮಗೆ ಉಡಿಸಿದವನು ಅಪ್ಪ
ತಾನು ಅರೆಹೊಟ್ಟೆ ತಿಂದು ನಮ್ಮೊಡಲ ತುಂಬಿಸಿದವನು ಅಪ್ಪ

ಕಾಸು ಬಿಚ್ಚದ, ತಾನು ಸುಖಿಸದ, ಪರರಿಗೂ ನೀಡದವ ಎನಿಸಿದ್ದುಂಟು
ಮಿತವ್ಯಯ ಉಳಿತಾಯಗಳ ಬಾಳಿನ ಪಾಠ ಕಲಿಸಿದವನು ಅಪ್ಪ

ಬದುಕ ಸೋಸುವಾಗ ಏನೆಲ್ಲ ಜಳ ತಟ್ಟಿತೋ ಅರಿಯಗೊಡಲಿಲ್ಲ
ತಾನು ಬಿಸಿಲಲಿ ಬೆಂದು ನಮಗೆ ನೆರಳಾಗಿ ಸಲಹಿದವನು ಅಪ್ಪ

‘ಉಪಕಾರಿಯಾಗು,ಉಪದ್ರವ ನೀಡದಿರು’ ಇವನಿತ್ತ ಮಂತ್ರ
ಅದರಂತೆ ಬದುಕಿ ಮುಸ್ಸಂಜೆಯಲಿ ನಿಶ್ಶಬ್ದ ಸರಿದವನು ಅಪ್ಪ

‘ತಣ್ಣೀರನ್ನೂ ತಣಿಸಿ ಕುಡಿ’-ಎಷ್ಟು ಸಲ ಹೇಳಿದ್ದನೋ ಇವನು
ಸಹನೆ-ಸೈರಣೆಯೇ ಬಾಳ ಪಥವಾಗಿ ಚರಿಸಿದವನು ಅಪ್ಪ

ವಿವೇಕ ತೋರಿದ ದಾರಿಯ ಬಿಡದೆ ನಡೆದವನು ‘ಜಂಗಮ’
ಕಲ್ಲು ಸಕ್ಕರೆಯಾಗಿ ಎಲ್ಲರೊಳಗೊಂದಾಗಿ
ಬದುಕಿದವನು ಅಪ್ಪ