ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಾರಾ ಕಮಾನು – ಗಜಲ್‌ನ ಕನ್ನಡಿಯಲ್ಲಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಗಜಲ್ ಎಂದರೆ ಕಡಲು.
ಅದು ಕೇಳಿಸುವ ಉಲುಹಾಗಿ, ಬರೆದಾಗ ಅಕ್ಷರವಾಗಿ ‘ಕಾಣುವ’ ಕಡಲು ಹೌದು, ಕಾಣದ ಕಡಲೂ ಹೌದು, ಕಾಡುವ ಕಡಲೂ ಹೌದು. ಈ ಕಡಲ ಅಲೆಗಳು ಮೊರೆಮೊರೆಯುತ್ತ ನಮ್ಮ ಎದೆ ತೀರವನ್ನು ಅಪ್ಪಳಿಸುತ್ತಲೇ ಇರುತ್ತವೆ. ತೀರದಲ್ಲಿ ನಿಂತು ಕಡಲ ಚೆಲುವನ್ನು ವೀಕ್ಷಿಸುತ್ತ ಮೈ ಮರೆಯುತ್ತಿರೋ, ಅಲೆಗಳಲ್ಲಿ ಪಾದಗಳನ್ನಷ್ಟೇ ನೆನೆಸಿಕೊಳ್ಳುತ್ತ ಪುಳಕಗೊಳ್ಳುತ್ತೀರೋ, ನೀರಿಗೆ ಬಿದ್ದು ಈಜುತ್ತಿರೋ, ಆಳಕ್ಕೆ ಮುಳುಗಿ ಮುತ್ತುರತ್ನಗಳನ್ನು ಅರಸುತ್ತಿರೋ ನಿಮಗೆ ಬಿಟ್ಟಿದ್ದು. ಕಡಲಲ್ಲಿ ಅಪಾರ ಸಂಖ್ಯೆಯ ಜಲಚರಗಳಿವೆ, ಜೀವ ವೈವಿಧ್ಯವಿದೆ, ಅಮೂಲ್ಯ ಮುತ್ತು-ರತ್ನಗಳಿವೆ, ಬಡಬಾಗ್ನಿ- ಕಡಲ ಕಿಚ್ಚು- ಕೂಡ ಇದೆಯಂತೆ. ಹೌದು,ಗಜಲ್ ಎಂದರೆ ಕಡಲು.

ಇಲ್ಲಿಂದ ಮುಂದಕ್ಕೆ ಹೋಗೋಣ.
ವಿಜಯ ಪುರದ ಬಾರಾಕಮಾನಿನ ಬಗ್ಗೆ ನಾನು ಮೊದಲು ಕೇಳಿದ್ದು, ಕಂಡಿದ್ದು ಪೂಜ್ಯ ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ. ನನ್ನ ಬಳಿಯಿರುವ ಆವೃತ್ತಿಯಲ್ಲಿ ಈ ಬಾರಾಕಮಾನ್‌ನ ಚಿತ್ರ ಹಾಲು ಬಿಳಿ ಕಾಗದದಲ್ಲಿ ಮುದ್ರಿಸಲ್ಪಟ್ಟಿದೆ. ಇದರ ಉಲ್ಲೇಖ ಇರುವ ಕಗ್ಗ ಮನುಷ್ಯನ ಆಸೆ ಆಕಾಂಕ್ಷೆಗಳು ಮತ್ತು ಅವನ ವಿಫಲತೆಯ ರೂಪಕವಾಗಿ ಬಾರಾ ಕಮಾನನ್ನು ಬಳಸುತ್ತದೆ ಎಂದು ನೆನಪು. ಗೋಲಗುಂಬಜ್‌ನಿಂದ ಅನತಿದೂರದಲ್ಲಿರುವ ಈ ರಚನೆಯಲ್ಲಿ ಬೃಹದ್ಗಾತ್ರದ ಕಮಾನುಗಳು ಮಾತ್ರ ಇವೆ. ಇದು ಪೂರ್ಣಗೊಂಡರೆ ಗೋಲ್ ಗುಂಬಜ್ ನ ಮೇಲೆ ಇದರ ನೆರಳು ಬೀಳುತ್ತದೆ ಎಂಬ ಕಾರಣಕ್ಕಾಗಿ ನಿರ್ಮಾಣವನ್ನು ಇಷ್ಟಕ್ಕೇ ಕೈಬಿಡಲಾಯಿತಂತೆ. ಹಾಗೆಂದು ಓದಿದ ನೆನಪು.

ನಾನಿನ್ನೂ ಬಾರಾಕಮಾನ್ ಅನ್ನು ನೋಡಿಲ್ಲ. ಆದರೆ ಮನುಷ್ಯನ ವೈಫಲ್ಯದ ಸಂಕೇತವಾಗಿ ಅದು ನನಗೆ ಕಂಡಿದೆ; ಕಾಡಿದೆ. ಇಂಥ ಇನ್ನೊಂದು ರಚನೆ ಮೇಲುಕೋಟೆಯಲ್ಲಿರುವ ಸುಮಾರು ಹನ್ನೆರಡನೇ ಶತಮಾನದ್ದಿರಬಹುದಾದ ಅಪೂರ್ಣ ನಿರ್ಮಾಣ. ಹೊಯ್ಸಳ ಕಾಲದ ಈ ರಚನೆಯಲ್ಲಿ ಬೃಹತ್ ಮಂದಿರ ಅಥವಾ ಅರಮನೆಯ ಆರಂಭಿಕ ಹಂತ ಮಾತ್ರ ಇದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇದನ್ನು ನೋಡಿ ಖಿನ್ನತೆಯನ್ನು, ತಳಮಳವನ್ನು ಅನುಭವಿಸಿದ್ದು ನೆನಪಿನಲ್ಲಿದೆ.
ಇವೆರಡೂ ರಚನೆಗಳು ಮನುಷ್ಯನ ಸಂಕಲ್ಪ ಶಕ್ತಿಯನ್ನು ಕಾಲ ಅಥವಾ ವಿಧಿ ಸೋಲಿಸುವ, ಅಣಕಿಸುವ ರೂಪಕವಾಗಿ ನಿಂತಿವೆ, ಎಂದು ನನ್ನ ಭಾವನೆ.

Ozymandias' Percy Shelley -

ಶೆಲ್ಲಿಯ ‘ಒಜಿಮ್ಯಾಂಡಿಯಸ್’ ಸಾನೆಟ್ ಒಂದು ಅಪರೂಪದ ಕವಿತೆ. ಮರಳುಗಾಡಿನಲ್ಲಿ ಇರುವ ಬೃಹತ್ ಭಗ್ನ ಶಿಲ್ಪ ಒಂದರ ಬಗ್ಗೆ ಅದು ಹೇಳುತ್ತದೆ. ಒಜಿಮ್ಯಾಂಡಿಯಸ್ ಎಂಬ ಒಬ್ಬ ದೊರೆ ತನ್ನ ಬೃಹತ್ ಶಿಲ್ಪವನ್ನು ಕೆತ್ತಿಸಿ ಬುಡದಲ್ಲಿ ಬರೆಸಿದ ಮಾತುಗಳು- ‘ನಾನು ರಾಜಾಧಿರಾಜ, ಒಜಿಮ್ಯಾಂಡಿಯಸ್. ನನ್ನ ಈ ವೈಭವವನ್ನು ನೋಡಿ, ಹತಾಶರಾಗಿ!’
ಈಗ ಅಲ್ಲಿ ಉಳಿದಿರುವುದು ವಿಗ್ರಹದ ರುಂಡ ಎರಡು ಮುರುಕು ಕಾಲುಗಳು ಮತ್ತು ಸುತ್ತ ಬರೀ ಮರಳುಗಾಡು. ಮನುಷ್ಯನ ಅಹಂಕಾರವನ್ನು, ಅದರ ಕ್ಷಣಭಂಗುರತೆಯನ್ನು ಕಟ್ಟಿಕೊಡುವ ಅಪೂರ್ವ ರೂಪಕವಾಗಿ ಇದು ನಮ್ಮನ್ನು ಕಾಡುತ್ತದೆ.

ಬಾರಾ ಕಮಾನನ್ನು ನಾನು ಬಳಸಿರುವ ರೀತಿ ಬೇರೆ. ಬದುಕಿನ ಹೋರಾಟ, ಅದರ ಕನಸು, ನೆನಪು, ಕಟ್ಟುವ, ಕುಸಿಯುವ, ಮರಳಿ ಕಟ್ಟುವ ಎಲ್ಲಾ ವ್ಯಾಪಾರಗಳ ಭಿತ್ತಿಯಲ್ಲಿ ಬಾರಾ ಕಮಾನು ಇದೆ. ಹಾಗೆಯೇ-
‘… ಕುಂದಿಲ್ಲವದಕೆ ಸಾಹಸ ಭಂಗದಿಂದೆ ಮುಂದಕ್ಕೆ ಸಾಗುವುದು ಮರಳಿ ಸಾಹಸದಿಂದೆ ಚಂದ ಧೀರೋದ್ಯಮವೇ ಮಂಕುತಿಮ್ಮ’
ಎಂಬ ತಿಮ್ಮ ಗುರುವಿನ ಅದಮ್ಯ ಆಶಾವಾದವನ್ನು ಕೂಡ ಇಲ್ಲಿ ಕೊನೆಯಲ್ಲಿ ತರುವ ಪ್ರಯತ್ನ ಮಾಡಿದ್ದೇನೆ.
ಈ ಗಜಲ್ ಅನ್ನು ಬರೆದ ಹೊಸದರಲ್ಲಿ ವಾಟ್ಸಾಪ್ನಲ್ಲಿ ಹಂಚಿಕೊಂಡಾಗ ಆಗ ನಮ್ಮೊಂದಿಗಿದ್ದ ಶಕ್ತ ಕವಿ ಜಿ ಕೆ ರವೀಂದ್ರಕುಮಾರ್ ಇದನ್ನು ಮೆಚ್ಚಿಕೊಂಡಿದ್ದು , ಒಂದೆರಡು ಕಡೆ ತಿದ್ದುವಿರಾ ಎಂದು ಕೇಳಿದ್ದು, ನಾನೂ ಕೊಂಚ ಮಾರ್ಪಾಡನ್ನು ಮಾಡಿದ್ದು,ಸದಾ ನೆನಪಿನಲ್ಲಿ ಉಳಿಯುವ ಸಂಗತಿ.

ಕವಿತೆ ಒಂದು ಅನುಭೂತಿ. ಕವಿಯಾಗಲಿ ಇನ್ನಾರೇ ಆಗಲಿ ಅದನ್ನುವಿವರಿಸುವಾಗ ಹೊರ ರೇಖೆಗಳನ್ನು ಸ್ವಲ್ಪ ಮಟ್ಟಿಗೆ ಸೂಚಿಸಬಹುದು ಅಷ್ಟೇ. ಮೊದಲೇ ಹೇಳಿದಂತೆ ಕಡಲನ್ನು ಎಷ್ಟು ವಿವರಿಸಿದರೆ ಕಡಲ ಅನುಭೂತಿಯನ್ನು ತಲುಪಿಸಬಹುದು?

ಅಥವಾ ಅದು ಆಗಸ.
‘ಇಲ್ಲುಂಟು ಅಗೆವ ಬುದ್ಧಿಗೆ ಅನಂತ ಅವಕಾಶ
ಹೊಳೆದದ್ದು ತಾರೆ ಉಳಿದದ್ದು ಆಕಾಶ’

ಕೆ ಎಸ್ ನ ಅವರನ್ನು ಸ್ಮರಿಸಿಕೊಳ್ಳುತ್ತ ನನ್ನ ಬರಹವನ್ನು ಮುಗಿಸುತ್ತೇನೆ.
ಈ ಗಜಲಿನ ಮುಖೋದ್ಗತ ( ಇಲ್ಲಿ ಹೇಳಲ್ಪಟ್ಟಿದ್ದು) ನಿಮ್ಮ ಹೃದ್ಗತವೂ ಆದರೆ ಅದು ಗಜಲಿನ ಸಾರ್ಥಕ್ಯ.
ಧನ್ಯವಾದ.

ಗಜ಼ಲ್

ಹರಿಗಡಿದು ಹೋದ ಚಂದದ ಕನಸುಗಳೆಲ್ಲ ಬಾರಾ ಕಮಾನಿನಂತೆ
ನಿದ್ರೆಯಿಂದ ಥಟ್ಟನೆದ್ದು ತಬ್ಬಿಬ್ಬಾದಂಥ ನೆನಪುಗಳೆಲ್ಲ ಬಾರಾ ಕಮಾನಿನಂತೆ

ಕಟ್ಟಿದಂತೆಲ್ಲ ತಿರುತಿರುಗಿ ಕುಸಿದು ಬಿದ್ದ ಮರಳುಮನೆ
ಆಟವಲ್ಲ ಅರೆಹೊರೆದು ಸಂದ ಬದುಕುಗಳೆಲ್ಲ ಬಾರಾ ಕಮಾನಿನಂತೆ

ಸರಿದು ಹೋದ ಕಾಲಕ್ಕೆ ಭಗ್ನ ಸಾಕ್ಷ್ಯಗಳೇ ಬೇಕೇನು
ಕಟ್ಟುವುದ ಅಣಕಿಸುವಂಥ ವಿಫಲತೆಗಳೆಲ್ಲ ಬಾರಾ ಕಮಾನಿನಂತೆ

ಅರಿವ ಭಾವಿಸುವ ಕಂಡು ಕಾಣಿಸುವ ಮನಸಿಗೆ ಗೊತ್ತು
ನೀನಿರದೆ ನನ್ನ ಶ್ರಮದ ಫಲಿತಗಳೆಲ್ಲ ಬಾರಾ ಕಮಾನಿನಂತೆ

ಬಿಡದೆ ಹೋರುವುದು ಮರಳಿ ಸೃಜಿಸುವುದೆ ಬಾಳು ‘ಜಂಗಮ’
ಎದೆಗುಂದಿ ಅರ್ಧಕ್ಕೆ ನಿಂತರೆ ಹೇಗೆ ಯತ್ನಗಳೆಲ್ಲ ಬಾರಾ ಕಮಾನಿನಂತೆ