ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಾಜಿನಾಚೀಚೆ

ಚಂಪೋ

ಸಮಯವ ಕೊಲ್ಲುತ್ತ ಕುಳಿತಿದ್ದೆ,
ಇತ್ತ ತಲೆ ರಣರಂಗದಂತಾಗಿತ್ತು, ಅತ್ತ
ಗಾಜಿನ ಮನೆಯ ಶಾಖವೇರುತ್ತಿತ್ತು
ಒಮ್ಮೆ ಆಚೆ ಕಣ್ಣಾಡಿಸಿದೆ ರಣ ಬಿಸಿಲು, ಅಬ್ಬ!!

ಹಾಕಿಸಿದಾಗಿನಿಂದಲೂ ತೊಳೆತ ಕಾಣದೇ
ಮಳೆ ಬಿಸಿಲು ಗಾಳಿಗೆ ತನ್ನ ಮೈಯೊಡ್ಡಿ
ತನ್ನದೇ ಠೀವಿಯಲ್ಲಿ ಸೇನಾನಿಯಂತೆ ನಿಂತಿದೆ
ಗಾಜಿನ ಹೊರಮನೆ, ಬಾಲ್ಕನಿ!!

ಹನಿಗಳು ಒಣಗಿ ತಮ್ಮದೇ ಛಾಪು ಬಿಟ್ಟಿವೆ
ಅದೋ ಅಲ್ಲಿಯದು ತುಂಬ ಹಳೆಯದು
ಇಲ್ಲಿ ಕೆಳಗಿನದು ಇತ್ತೀಚೆಗೆ ಬಿಡದೆ ಜಡಿದ
ಗುಡುಗು ಸಿಡಿಲಿನ ಅಬ್ಬರದ ಮಳೆಯದು

ಪ್ರತಿಬಾರಿ ನೋಡುವಾಗ ಪರಿಚಿತ ದೃಶ್ಯ
ಅವೇ ಕಲೆಗಳು ಅವೇ ಗೀಚು ನೋಟಗಳು
ತೊಳೆಯಲೇಬೇಕು ಅಂತ ಇಂದಿಗೆ
ಸರಾಸರಿ ಎರಡು ಬೇಸಿಗೆ ಮುಗಿಯಿತು ನೋಡಿ

ಕರೋನಾ ಕಾಲ ಮನೆಯಲ್ಲೇ ಕುಳ್ಳಿರಿಸಿದಾಗ
ಈಗಲಾದರೂ ತೊಳೆಯೋಣ ಎನ್ನುವಂಬೋಣ!!
ಅದೇಕೋ ಇರುವ ಕಲೆಗಳ ಅಳಿಸುವ ಮನಸಾಗಲಿಲ್ಲ
ಆದರೆ, ಮನೆಯಜಮಾನಿಯ ಸ್ವಚ್ಛತಾ ಆಂದೋಲನ

ತೊಳೆಯದಿದ್ದಕ್ಕೆ ಮುಖ ಊದಿಸಿದ ನನ್ನವಳು
ನಾನೋ ಹಳತಕ್ಕೇ ಒಗ್ಗಿಹೋದ ಪಾಪದವ
ಕೊನೆಗೂ ಗೆಲ್ಲುವುದು ಯಾರಂತ ನಾನೇಳಬೇಕೆ?
ಒಂದು ಮುಂಜಾವು ನಿರ್ಧಾರ ಮಾಡಿಯೇಬಿಟ್ಟೆ

ಚರಚರನೆ ನೀರು ಸಿಂಪಡಿಸಿ ಗ್ಲಾಸ್ ಕ್ಲೀನರ್ ಬಳಸಿ
ಕೈಯಿಂದ ತಿಕ್ಕಿ ಹಳೆಯ ಕಲೆಗಳನ್ನೆಲ್ಲ ತೊಳೆಯುವಾಗ
ಅದೇನೋ ವಿಚಿತ್ರ ಭಾವ, ಎನೋ ಕಳೆದುಕೊಂಡಂತೆ
ಸಹಾಯಕಿಯಾಗಿ ಸೇರಿದ ಮಗಳ ನಿಲ್ಲದ ಚಟಪಟ!!

ಕೊನೆಗೂ ಮೊದಲ ಗ್ಲಾಸು ಮಿಂಚಿಂಗ್! ವಾಹ್
ಕೊನೆಯ ಗ್ಲಾಸು ಮುಗಿವಾಗ ಬೆವರು ಬಾಯಿಗೆ
ಉಸ್ಸಪ್ಪಾ ಎಂದು ಕುರ್ಚಿಗೊರಗಿ ಕಣ್ಣು ಮುಚ್ಚಿದ್ದೆ
ಒಂದು ಕ್ಷಣ ಭಯವಾಗಿದ್ದು ಕಣ್ಣುತೆರೆದಾಗ

ಅದೇನಂತೀರಿ, ಹೊರಗಿನ ದೃಶ್ಯ ನೋಡುವಹಾಗಿತ್ತು
ಬಾನು ನನ್ನ ನಡುವೆ ಗ್ಲಾಸ್ ಇಲ್ಲವೆನ್ನುವಂತಿತ್ತು
ಏ ಇವಳೇ ಬಂದು ನೋಡು ಎಂದು ಕೂಗಿದೆ
ಬಂದವಳೇ ಅಯ್ಯೋ ಇದೇನು ಗ್ಲಾಸ್ ಇಲ್ದಂಗಿದೆ!!

ಮನದಲ್ಲಿ ಖುಷಿ ಒಂದುಕಡೆ, ಸಖತ್ತಾಗಿ ಸ್ವಚ್ಛವಾದ
ಗ್ಲಾಸ್ ಹೊರಮನೆ ಏನೋ ಹೊಸತಾದ ಅನುಭವ
ನಿಟ್ಟುಸಿರಿಟ್ಟು ನಿದ್ದೆಗೆ ಶರಣಾದ ನನಗೆ ತಿವಿದು
ಎಬ್ಬಿಸಿದ ನನ್ನವಳ ಉಗುರಿನ ಬಗ್ಗೆ ಮತ್ತೆ ಹೇಳುವೆ

ಅನಿಸಿದ್ದಿಷ್ಟೇ ಪಾರದರ್ಶಕತೆ, ಸುಂದರ ನೋಟದ ಜತೆ
ನಮ್ಮದೆಲ್ಲ ಹೊರಗೆ ಕಾಣೋ ಭಯವನ್ನೂ ಉಣಿಸತ್ತೆ, ಪರವಾಗಿಲ್ಲ ಮನ ಮನೆಯ ಕೊಳಕನ್ನೆಲ್ಲ ತೊಳಿರಿ
ನಿಮ್ಮ ನೋಟ ಸುಂದರಮಯವಾಗಿಸಿ, ಆನಂದಿಸಿ