- ‘ಗೊಂಬೆಯಾಟವಯ್ಯ…’ - ಅಕ್ಟೋಬರ್ 15, 2025
ಸುಗ್ಗಿಯ ಕಾಲ ಬಂತೆಂದರೆ ನಮ್ಮೂರ ಮುಂದೆ ಕೋಲೇ ಬಸವ, ದೊಂಬರಾಟ, ತೊಗಲುಗೊಂಬೆ, ಗಿಳಿರಾಮ… ಮುಂತಾದ ಹಳ್ಳಿಗಳ ಆ ಕಾಲದ ಮನೋರಂಜನಾ ಮೂಲ ಕಲಿಗಳೆಲ್ಲರೂ ಬೀಡುಬಿಟ್ಟಿರುತ್ತಿದ್ದರು. ಊರ ಮುಂದೆ ಎಂದರೆ ನಮ್ಮ ಬೀದಿಯಿಂದ ಪ್ರಮುಖ ರಸ್ತೆ ಸಂಪರ್ಕಿಸುವ ಜಾಗದಲ್ಲಿದ್ದ ಆಂಜನೇಯನ ದೇವಸ್ಥಾನದ ಎದುರು ಭಾಗ. ಅಲ್ಲಿ ಒಂದು ಪ್ರದರ್ಶನ ಕೊಟ್ಟ ನಂತರ ಅವರ ಸಣ್ಣ ಮಕ್ಕಳು, ಹೆಂಗಸರು ಮನೆಮನೆಗೆ ಬಂದು ಬೇಡಿದರೆ, ಗಂಡಸರು ರಸ್ತೆ ಪಕ್ಕದಲ್ಲಿದ್ದ ನಮ್ಮೂರನ್ನೇ ಕೇಂದ್ರವಾಗಿಸಿಕೊಂಡು ಭತ್ತ ಬಡಿದು ಒಕ್ಕಲು ಮಾಡಲು ಸಜ್ಜುಗೊಳಿಸಿದ್ದ ಕಣಗಳಿಗೆ, ಬೇರೆ ಊರುಗಳಿಗೆ ಹೋಗಿ ಬೇಡಿ ಬರುತ್ತಿದ್ದರು. ಅವರು ಟಿಕೇಟು ಇಲ್ಲದೇ ಉಚಿತ ಶೋ ಕೊಡುತ್ತಿದ್ದುದರಿಂದ ಇದನ್ನು ಬೇಡುವುದು ಎನ್ನುವುದು ಸಮಜಸವಲ್ಲವೇನೋ!. ನಮ್ಮೂರಿನ ಸುತ್ತಿನ ಇಂಟೀರಿಯರ್ ಊರುಗಳಿಗೆ ಅವರು ಹೋಗಿ ಅಡ್ವರ್ರ್ಟೈಸ್ ಮಾಡಿ ಬಂದ ನಂತರ ಅವರೆಲ್ಲಾ ಇರುವವರೆಗೂ ನಮ್ಮೂರಿನಲ್ಲಿ ಒಂದು ರೀತಿಯ ಜಾತ್ರೆಯೇ ನಡೆಯುತ್ತಿತ್ತು! ಈ ನಡುವೆ ಬಲೂನ್, ಪೀಪಿಗಳನ್ನು ಮಾರುವವರು, ಪುರಿ ಬೆಂಡು ಬತಾಸು..ಅಹಹಾ ನಮ್ಮಂಥಾ ಮಕ್ಕಳಿಗೆ ಶಾಲೆಗೆ ರಜೆಯೂ ಇದ್ದರಂತೂ ಸಂಭ್ರಮವೋ ಸಂಭ್ರಮ! ಇವರೊಂದಿಗೇ ಬರುತ್ತಿದ್ದ ರಾಟವಾಣದಲ್ಲಿ ಕೂರುವುದೆಂದರೆ ನಮಗೆ ಎಲ್ಲಿಲ್ಲದ ಖುಷಿ. ಈಗಿನ ಜೈನ್ಟ್ ವೀಲ್ ಗಳ ಪೂರ್ವಜರಾದ ಆ ತೊಟ್ಟಿಲಲ್ಲಿ ಕೂತು ಮೇಲೆ ಕೆಳಗೆ ಅಕ್ಕಪಕ್ಕ ಎಲ್ಲಾ ಕೋನಗಳಲ್ಲಿಯೂ ಸುತ್ತುವುದೇ ಚಂದ. ಇವು ಜಿರಳೆಗಳಂತೆ ಈಗಲೂ ಕೆಲವು ರಿಮೋಟ್ ಏರಿಯಾಗಳಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ! ನಾವು ಹೀಗೆಲ್ಲಾ ಮಜಾ ಮಾಡ್ತಿದ್ದುದೇನೋ ಸರಿ ಆದರೆ ಹಿರಿಯರಿಗೆ ಅದೇ ದೊಡ್ಡ ತಲೆನೋವು! ಯಾಕಾದರೂ ಇವರೆಲ್ಲಾ ಬಂದು ನಮ್ಮ ಪ್ರಾಣ ಹಿಂಡ್ತಾರೋ ಎಂದು ಕನಲಿ ಕೆಂಡವಾಗುತ್ತಿದ್ದರು. ದುಡ್ಡಿಗೆ ಪೀಡಿಸೋ ಮಕ್ಕಳ ಹಠ ಒಂದು ಕಡೆಯಾದರೆ ಹಗಲಾದರೆ ಒಬ್ಬರಾದ ನಂತರ ಒಬ್ಬರಂತೆ ಬಾಗಿಲಲ್ಲಿ ನಿಂತು, ‘ಅವ್ವಾ ಬಂದೆ’ ಎನ್ನುವವರದ್ದೇ ಫಜೀತಿ. ಎಷ್ಟು ಅಂತ ಕೊಡೋದು ಎಂದುಕೊಳ್ಳುವಂತೆಯೂ ಇಲ್ಲ. ‘ಕೊಟ್ಟಷ್ಟೂ ಭಗವಂತ ವೃದ್ಧಿಸ್ತಾನೆ,‘ ಎನ್ನುವ ನಮ್ಮ ತಂದೆಯವರ ತತ್ವ! ಬಂದವರಿಗೆಲ್ಲಾ ಮೊರದಲ್ಲಿ ಭತ್ತ ತುಂಬಿ ಸುರಿಯುವುದೇ ಕೆಲಸವಾಗುತ್ತಿತ್ತು. ನಾವು ಅಂತಲೇ ಅಲ್ಲ, ಯಾರದೇ ಕಣಗಳಿಗೆ ಹೋದಾಗಲೂ ಅಲ್ಲೂ ಮೊರದಲ್ಲಿ ತುಂಬಿ ಕೊಡುವುದೇ ನಮ್ಮೂರ ವಾಡಿಕೆಯಾಗಿತ್ತು. ಧವಸ-ಧಾನ್ಯಗಳು ತುಂಬಿರೋ ಜಾಗದಲ್ಲಿ ‘ಇಲ್ಲ’ ಎಂದರೆ ಅಸ್ತು ದೇವತೆಗಳು ಎಲ್ಲಿ ‘ಅಸ್ತು'(ಹಾಗೇ ಆಗಲಿ) ಅಂದುಬಿಡ್ತಾರೋ ಎನ್ನುವ ಭಯ!


ಹೀಗೆ ಬರುತ್ತಿದ್ದವರಲ್ಲೆಲ್ಲಾ ಗೊಂಬೆರಾಮರ ರಾಮಪ್ಪನಿಗೆ ನಮ್ಮ ಮನೆಯಲ್ಲಿ ವಿಶೇಷ ಮರ್ಯಾದೆ. ಅವರು ಬಾಗಿಲಲ್ಲಿ ನಿಲ್ಲುತ್ತಿದ್ದುದೇ ಇಲ್ಲ ನೇರ ಒಳಗೆ ಬಂದು,’ಅಯ್ನೋರಾ,’ ಎಂದು ನಮ್ಮ ತಂದೆಯ ಜೊತೆ ಮಾತನಾಡುತ್ತಾ ಕುಳಿತುಬಿಟ್ಟರೆ, ನಮ್ಮ ತಂದೆಯ ಅಪೇಕ್ಷೆಯಂತೆ ಕುಳಿತಲ್ಲಿಗೇ ಕಾಫಿ, ತಿಂಡಿ ಎಲ್ಲಾ ಸರಬರಾಜಾಗುತ್ತಿತ್ತು. ಮಧ್ಯಾಹ್ನವಾದರೆ ಊಟಕ್ಕೂ ಏಳಿಸುತ್ತಿದ್ದರು. ಹೆಚ್ಚಾಗಿ ಪೌರಾಣಿಕ ಗೊಂಬೆಯಾಟಗಳಾಡಿಸುತ್ತಿದ್ದ ರಾಮಪ್ಪ ತಂದೆಯವರ ಜೊತೆ ಆ ಪ್ರಸಂಗಗಳ ಬಗ್ಗೆ ಮಾತನಾಡಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ನಮಗೋ ಇವತ್ತು ರಾತ್ರಿ ಯಾವ ಆಟ ಆಡಿಸ್ತಾರೆ ಅನ್ನೋದೇ ಕುತೂಹಲ! ಭತ್ತ, ದುಡ್ಡು, ಬಟ್ಟೆಗಳು ಎಲ್ಲವನ್ನೂ ಕೊಟ್ಟು ಕಳಿಸುವ ಮೊದಲು ನಮಗೆ ಅಂದಿನ ಆಟ ಹೇಳುವಂತೆ ಒತ್ತಾಯ ಮಾಡುತ್ತಿದ್ದೆವು. ರಾಮಪ್ಪನಿಗೆ ಕೊಡೋ ಮರ್ಯಾದೆ ನೋಡಿ ನಮ್ಮ ಮನೆಯಾಳು ತಿಮ್ಮಪ್ಪನಿಗೆ ಎಲ್ಲಿಲ್ಲದ ಅಸಮಾಧಾನ. ಸಂಜೆ ನಮ್ಮ ಗದ್ದೆ ಹತ್ರ ಇರೋ ಸೇಂದಿ ಅಂಗಡೀಲಿ ಆತ ಮೂಗಳ ಕುಡುಕೊಂಡು ಬಿದ್ದಿರ್ತಾನೆ ಅನ್ನೋದು ಅವನ ಕಪ್ಲೇಂಟು!
ರಾಮಪ್ಪನ ಬಗ್ಗೆ ನಮಗೆ ಮಹಾನ್ ಕುತೂಹಲ. ದೊಡ್ಡ ಗಿರಿಜಾ ಮೀಸೆಯ ರಾಮಪ್ಪ ಹಣೆಗೆ ಅಗಲವಾದ ಕುಂಕುಮ ಇಟ್ಟುಕೊಂಡು, ಪೇಟ ಕಟ್ಟಿಕೊಂಡು, ಕೆಂಪು ಶಾಲು ಹೊದ್ದು, ಸದಾ ತಾಂಬೂಲದಿಂದ ವರ್ಣರಂಜಿತವಾದ ಅಗಲವಾದ ಉದ್ದುದ್ದಾನೆ ಹಲ್ಲುಗಳನ್ನು ಪ್ರದರ್ಶಿಸುತ್ತಾ ಬಂದನೆಂದರೆ ನಗುತ್ತಿದ್ದರೂ ರುಧ್ರಭೀಕರನಾಗಿ ಥೇಟ್ ಗೊಂಬೆಯಾಟದಲ್ಲಿ ಬರುವ ರಾವಣಾಸುರನಂತೆಯೇ ಕಾಣುತ್ತಿದ್ದ! ಅವನ ಹೆಸರು ರಾಮಪ್ಪ ಅಂತಿರೋದರಿಂದಲೇ ಅವನು ಆಡಿಸೋ ಗೊಂಬೆಯಾಟಕ್ಕೆ ಗೊಂಬೆರಾಮ ಅಂತಾರೆ ಅಂತಲೇ ತಿಳಿದಿದ್ದೆವು. ನಂತರವಷ್ಟೇ ಅದೇ ಆ ಕಲೆಯ ಹೆಸರು ಅಂತ ಗೊತ್ತಾಗಿದ್ದು!
ಇಬ್ಬರು ಹೆಂಡಿರು, 8-9 ಮಕ್ಕಳಿದ್ದ ರಾಮಪ್ಪನ ಕುಟುಂಬ ನಮಗೆ ತುಂಬಾ ಆಕರ್ಷಕವಾಗಿತ್ತು. ಅವರ ಮಕ್ಕಳ ರೇಂಜು ಆಗಲೇ ಮೀಸೆ ಬಂದ ಹುಡುಗರು, ಸೀರೆ ಉಡ್ತಿದ್ದ ಹುಡುಗೀರಿಂದ ಜೋಳಿಗೆ ಒಳಗೆ ಜೋಜೋ ಹಾಡಿಸಿಕೊಳ್ತಿದ್ದ ಎಳೆ ಕಂದಮ್ಮಗಳವರೆಗೂ ಇದ್ದವು! ದೊಡ್ಡ ಮಕ್ಕಳು ಜೋರು ಕಂಠದಲ್ಲಿ ಹಾಡುತ್ತಾ ಅಬ್ಬರಿಸಿ ಮಾತನಾಡುತ್ತಾ ಗೊಂಬೆ ಕುಣಿಸ್ತಾ ಇದ್ದುದೇ ಚಂದ. ಮಕ್ಕಳಂತೂ ಒಂದಕ್ಕಿಂತ ಒಂದು ಸುಂದರ. ಆ ಬಣ್ಣ, ಆ ರೂಪ ನೋಡಕ್ಕೆರಡು ಕಣ್ಣು ಸಾಲದು. ನಾನಂತೂ ಕಣ್ಣುಬಾಯಿ ಬಿಟ್ಕೊಂಡು ಅವರ ಹಾಲುಬಿಳುಪಿನ ಬಣ್ಣ ನೋಡಿ ಆನಂದಿಸುವಾಗಲೇ ಆಯಾಚಿತ್ತಾಗಿ ನನ್ನ ದೃಷ್ಟಿ ಶ್ಯಾಮಲ ವರ್ಣದ ನನ್ನ ಕೈಗಳತ್ತ ಕನಿಕರದ ನೋಟ ಹರಿಸುತ್ತಿತ್ತು!
ಸ್ಕೂಲಿಗೆ ರಜಾ ಸಿಕ್ಕರಂತೂ ಒಂದು ಗುಂಪು ಮಕ್ಕಳು ಅವರ ಡೇರೆ ಸುತ್ತಾ ಸುತ್ತುತ್ತಾ ಅವರು ಗೊಂಬೆಗಳನ್ನು ತಯಾರಿಸೋದು, ಬಣ್ಣ ಬಳಿಯೋದು, ಗೊಂಬೆಗಳಿಗೆ ಅಲಂಕಾರ ಮಾಡೋದು, ರಿಪೇರಿ ಮಾಡೋದು ಎಲ್ಲವನ್ನೂ ಗಮನಿಸುತ್ತಿದ್ದರು. ನಾವು ಹಾಗೆಲ್ಲಾ ಎಲ್ಲಿ ಅಂದ್ರೆ ಅಲ್ಲಿ ಅಲೆಯುವಂತಿರಲಿಲ್ಲ. ಆಗಾಗ ನೋಡಿದೋರು ಕೊಡ್ತಿದ್ದ ರನ್ನಿಂಗ್ ಕಾಮೆಂಟರಿಯಿಂದಲೇ ಸಂತೃಪ್ತರಾಗಬೇಕಿತ್ತು. ಗೊಂಬೇನ ಆಡಿನ ಚರ್ಮದಲ್ಲಿ ಮಾಡ್ತಾರೆ ಅಂತ ಅವರು ತಂದ ಮಾಹಿತಿ ನಮಗೆ ಸ್ವಲ್ಪ ಕಸಿವಿಸಿಯನ್ನುಂಟುಮಾಡುತ್ತಿತ್ತು. ಅದಕ್ಕೇ ಅದನ್ನ ತೊಗಲು ಗೊಂಬೆ ಆಟ ಅಂತಾರೆ ಎನ್ನುವಾಗ ನಮಗೆ ಸಮ್ಮತವಾಗದೇ ಗೊಂಬೆರಾಮನ ಆಟ ಅನ್ನೋದೇ ಚಂದ ಎಂದುಕೊಳ್ಳುತ್ತಿದ್ದೆವು. ರಾಮಯ್ಯನ ಹೆಂಡ್ತೀರು ಗುಡಾರದೊಳಗೆ ಜಗಳ ಕಾಯ್ತಾ ಇರ್ತಾರೆ ಅನ್ನೋ ಸುದ್ದಿಯಿಂದ ಅಚ್ಚರಿಯುಂಟಾಗುತ್ತಿತ್ತು. ನಾಲೆಗೆ ನೀರು ತರಕ್ಕೆ ಬಟ್ಟೆ, ಒಗೆಯಕ್ಕೆ ಒಟ್ಟಿಗೆ ಬರ್ತಿದ್ದ ಅವರು ಸದಾ ಪರಸ್ಪರ ನಗುನಗುತ್ತಾ ಮತನಾಡುತ್ತಿದ್ದುದು ನಮ್ಮ ಹಳ್ಳಿಯ ಹೆಂಗೆಳೆಯರಿಗೆ ಬಿಡಿಸಲಾಗದ ಒಗಟಾಗಿತ್ತು. ʼಸವತೀರು ಹೆಂಗೆ ಹೊಂದಿಕೊಂಡವ್ರೆ ನೋಡಿ ಕಲಿತ್ಕೋಬೇಕುʼ ಎಂದು ಕಣ್ಣುಬಾಯಿ ತಿರುಗಿಸುತ್ತಾ ಕೊಂಡಾಡುತ್ತಿದ್ದರು!
ಗೊಂಬೆ ಆಟಕ್ಕೆ ಅವರು ಸ್ಟೇಜ್ ಕಟ್ಟೋದೂ ಬಾಳ ಸಿಂಪಲ್ ಆಗಿರ್ತಿತ್ತು. ರಂಗಮಂದಿರಕ್ಕೆ ನೆಡೋದಕ್ಕೆ ನಾಲ್ಕು ಬಿದಿರು, ಮೇಲ್ಬಾಗದಲ್ಲಿ ಕಟ್ಟುವುದಕ್ಕೆ ನಾಲ್ಕು ಬಿದಿರು, ಮೇಲ್ಭಾಗ ಮತ್ತು ಗೊಂಬೆಗಳನ್ನು ತೋರಿಸುವ ಭಾಗವನ್ನು ಉಳಿದು ಮಿಕ್ಕ ಮೂರು ಕಡೆಗಳಲ್ಲಿ ಮರೆಮಾಡಲು ಬೇಕಾಗೋ ಚಾಪೆ, ತಡಿಕೆ, ಗೊಂಬೆಗಳ ಪ್ರದರ್ಶನದ ಭಾಗಕ್ಕೆ ಬೇಕಾಗುವ ಬಿಳಿಯ ಪಂಚೆ ಹಾಗೂ ಕರಿಯ ಕಂಬಳಿ ಇವಿಷ್ಟಿದ್ದರೆ ತೊಗಲು ಗೊಂಬೆಯಾಟದ ರಂಗಮಂದಿರ ಸಿದ್ದ! ದಿನಕ್ಕೊಂದರಂತೆ ರಾಮಾಯಣ , ಮಹಾಭಾರತ , ಪುರಾಣಗಳ ಕಥೆಗಳು ಮತ್ತು ಜಾನಪದ ಕಥೆಗಳ ರಸದೌತಣ ದಿನದಿನವೂ ನಡೆಯುತ್ತಿತ್ತು. ನಮಗಂತೂ ಪಾಂಡವರ ಅರ್ಜುನ ಮತ್ತು ಅವನ ಮಗ ಬಬ್ರುವಾಹನರ ನಡುವಿನ ಕಾಳಗದ ಪ್ರಸಂಗ ಬಹಳ ಇಷ್ಟವಾಗ್ತಿತ್ತು. ರಾತ್ರಿಯೆಲ್ಲಾ ಬಿಟ್ಟಕಣ್ಣು ಬಿಟ್ಟಂತೆ ಆಟನೋಡಿ ಬೆಳಗಿನ ಝಾವ ಮನೆಗೆ ಹೋಗಿ ಮಲಗಿದರೆ, ‘ಆಗಲೇ 9ಗಂಟೆ ಆಯ್ತು, ಸ್ಕೂಲಿಗೆ ಲೇಟಾಗ್ತಿದೆ ಏಳಿ,’ ಅಂತ ನಮ್ಮ ಸೋದರತ್ತೆ ಎಳೆದಾಡಿ ಎಬ್ಬಿಸಿ, ತಣ್ಣೀರಿನಲ್ಲಿ ಮುಖ ತೊಳೆದು, ಅಮ್ಮ ಸಿದ್ಧಗೊಳಿಸಿರೋ ತಿಂಡಿ ತಿನ್ನಿಸಿ ಸ್ಕೂಲಿಗೆ ಸಾಗುಹಾಕ್ತಿದ್ದರು. ‘ರಾತ್ರಿ ಎಲ್ಲಾ ನಿದ್ದೆ ಕೆಟ್ಟಿವೆ. ನಾಲೆ ಏರಿಮೇಲೆ ನಡೆದು ಹೋಗಬೇಕು,‘ ಅಂತ ಅಮ್ಮನಿಗೆ ಆತಂಕ. ನಾವೋ ಸ್ಕೂಲಲ್ಲಿ ತೂಕಡಿಸಿದ್ದೂ ತೂಕಡಿಸಿದ್ದೇ!
ಸುಗ್ಗಿಯ ಒಂದೆರಡು ತಿಂಗಳು ಭರದಲ್ಲಿ ಆಟಗಳು ನಡೆಯುತ್ತಿದ್ದವು. ನಂತರ ಅವರೆಲ್ಲಾ ಟೆಂಟ್ ಕಿತ್ತುಕೊಂಡು ಹೋಗಿ ಊರೆಲ್ಲಾ ಭಣಗುಟ್ಟಲಾರಂಭಿಸುತ್ತಿತ್ತು. ಇನ್ನು ಅವರು ಬರ್ತಿದ್ದುದು ಮುಂದಿನ ವರ್ಷವೇ.
ಹೀಗೇ ವರ್ಷಗಳು ಉರುಳಿ ನಮ್ಮ ಬಾಲ್ಯವೂ ಕಳೆದು ಓದು, ಕೆಲಸ ಅಂತ ಬೇರೆಬೇರೆ ಊರುಗಳಿಗೆ ಹೋಗಿ…… ನಮ್ಮೂರಲ್ಲೇ ಪ್ರಾರಂಭವಾದ ಹೊಸ ಶಾಲೆಗೆ ನಾನು ವರ್ಗವಾಗಿ ಬರುವಷ್ಟರಲ್ಲಿ ನಮ್ಮಣ್ಣನ ಮಕ್ಕಳು ನಮ್ಮ ಮನೆಯನ್ನು ತಮ್ಮ ಬಾಲ್ಯದಾಟಗಳ ವೈವಿದ್ಯತೆಗಳಿಂದ ತುಂಬಿ ರಂಜಿಸಲಾರಂಭಿಸಿದ್ದವು. ಈ ಮಕ್ಕಳ ಕಾಲಕ್ಕೆ ವರ್ಷಕ್ಕೊಮ್ಮೆ ಸುಗ್ಗಿ ಕಾಲದಲ್ಲಿ ಬರುತ್ತಿದ್ದ ಗೊಂಬೆರಾಮ ಮುಂತಾದವರು ಬರುವುದನ್ನೇ ಕ್ರಮೇಣ ನಿಲ್ಲಿಸಿಬಿಟ್ಟಿದ್ದರು. ಅವರಿಗೆ ಏನೇನೋ ಛಾನ್ಸ್ ಎಲ್ಲಾ ಸಿಕ್ಕಿ ವಿದೇಶಕ್ಕೂ ಹೋಗಿಬರ್ತಿದಾರೆ ಅಂತ ನಮ್ಮೂರ ಜನ ಮಾತನಾಡಿಕೊಳ್ತಿದ್ದರು.
ಗೊಂಬೆರಾಮನ ಆಟದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ನಾನು ಕೆಲವು ಮಾಹಿತಿಗಳನ್ನು ಸಂಗ್ರಹಿಸಲಾರಂಭಿಸಿದೆ. ತೊಗಲು ಗೊಂಬೆಯಾಟವು ದಕ್ಷಿಣ ಭಾರತದ ಏಳು ನೆರಳಿನ ಬೊಂಬೆಯಾಟ ಕಲೆಗಳಲ್ಲಿ ಒಂದಾಗಿದೆ. ಈ ಸಂಪ್ರದಾಯವು ಭಾರತದಿಂದ ಶ್ರೀಲಂಕಾ, ಇಂಡೋನೇಷ್ಯಾ ಮತ್ತು ಏಷ್ಯಾದ ಉಳಿದ ಭಾಗಗಳಿಗೆ ವಲಸೆ ಬಂದಿದೆ.


ಥಾಯ್ಲೆಂಡ್ ನಲ್ಲಿಯೂ ‘ರಾಮ್ ಕಿಯೆನ್’ (ರಾಮಾಯಣ) ವನ್ನು ಅನುಸರಿಸಿ ಅನೇಕ ನಾಟಕಗಳು, ತೊಗಲುಬೊಂಬೆ ಆಟಗಳನ್ನು ಆಡಿಸ್ತಾರೆ ಎಂದು ತಿಳಿಯಿತು. ಅಲ್ಲದೆ ತೊಗಲು ಗೊಂಬೆಯಾಟದ ಉತ್ತುಂಗವು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿತ್ತು. ಇದರ ನಂತರ ಬಹಮನಿ ಸಾಮ್ರಾಜ್ಯದ ಸ್ಥಾಪನೆಯ ಸಮಯದಲ್ಲಿ ಟರ್ಕಿಶ್ ಬೊಂಬೆಯಾಟದ ಒಳಹರಿವು ಸಂಭವಿಸಿ ಬೊಂಬೆಗಳ ಅಲಂಕಾರ ಮತ್ತು ಶೈಲಿಯ ಮೇಲೆ ಪ್ರಭಾವ ಬೀರಿತು. ಬಹಮನಿ ಸಾಮ್ರಾಜ್ಯದ ಅವನತಿಯ ನಂತರ ಕಲಾ ಪ್ರಕಾರದ ಪ್ರೋತ್ಸಾಹವು ಗಮನಾರ್ಹವಾಗಿ ಕುಗ್ಗಿ ಹಳ್ಳಿಗಳು ಮತ್ತು ದೇವಾಲಯಗಳಲ್ಲಿ ಪ್ರದರ್ಶನಗಳು ನಡೆಯಲಾರಂಭಿಸಿದವು ಎಂದಿತ್ತು. ಅಂಥಾ ಗೊಂಬೆಯಾಟ ಈಗ ದೇಶವಿದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ ಎಂದರೆ ಮತ್ತೊಮ್ಮೆ ಈ ಕಲೆಯು ತನ್ನ ಉಚ್ಛ್ರಾಯಸ್ಥಿತಿಯನ್ನು ತಲುಪುತ್ತಿದೆ ಎನ್ನುವುದೇ ಸಂತಸಕರವೆನಿಸಿತು.
ದಿನವೂ ಕೆಲಸಕ್ಕೆ ಹೋಗಿಬರುತ್ತಿದ್ದ ನನಗೆ ಮನೆಯಲ್ಲಿ ಒಂದು ರೀತಿಯಲ್ಲಿ ರಾಜೋಪಚಾರವೇ(ರಾಣಿ!) ನಡೆಯುತ್ತಿತ್ತು. ಸಂಜೆ ಸ್ಕೂಲಿನಿಂದ ಬಂದು ಮನೆಯಲ್ಲಿನ ಕೆಲಸಗಳನ್ನು ಮಾಡಲು ಹೊರಟರೆ, ‘ನೀನು ಯಾವ ಕೆಲಸಾನೂ ಮಾಡಬೇಡ ಕಣವ್ವ, ಮಕ್ಕಳನ್ನು ಆಟ ಆಡಿಸಿಕೊಂಡಿರು ಸಾಕು,’ ಎನ್ನುತ್ತಿದ್ದರು ಅಮ್ಮ. ಬೆಳಗಿನಿಂದಲೂ ಮಕ್ಕಳೊಂದಿಗೆ ಹೆಣಗಾಡುತ್ತಿದ್ದು ಬಿಡುಗಡೆಯಾದಂತೆನಿಸುತ್ತಿದ್ದರಿಂದಲೋ ಏನೋ ಅತ್ತಿಗೆಯದೂ ಸಂಪೂರ್ಣ ಸಹಮತವಿರುತ್ತಿತ್ತು! ವೈದ್ಯರು ಹೇಳಿದ್ದೂ ಹಾಲು-ಅನ್ನ, ರೋಗಿ ಬಯಸಿದ್ದೂ ಹಾಲು-ಅನ್ನ ಎನ್ನುವಂತೆ ನನಗೆ ಬೇಕಾಗಿದ್ದೂ ಅದೇ! ಮಕ್ಕಳೂ ನಾನು ಸ್ಕೂಲಿನಿಂದ ಬರುವುದನ್ನೇ ಕಾಯುತ್ತಿರುತ್ತಿದ್ದವು.
ಗೊಂಬೆರಾಮನ ಆಟದಿಂದ ತುಂಬಾ ಪ್ರಭಾವಿತಳಾಗಿದ್ದ ನಾನು ಸಮಯ ಸಿಕ್ಕಾಗಲೆಲ್ಲಾ ಮನೆಯಲ್ಲೇ ರಟ್ಟಿನಲ್ಲಿ ರಾಜ, ರಾಣಿ, ಕುದುರೆ, ಆನೆ, ನಾಯಿ, ಬೆಕ್ಕು, ಹುಂಜ ಮುಂತಾದ ಗೊಂಬೆಗಳನ್ನು ಮಾಡಿ ಬಿದಿರು ದಬ್ಬೆಗೆ ಜೋಡಿಸಿ ಇಟ್ಟಿರುತ್ತಿದ್ದೆ. ರಾತ್ರಿಯಾದ ತಕ್ಷಣ ಎರಡು ಅಗಲವಾದ ಜಗುಲಿಗಳಿದ್ದ ನಮ್ಮ ಹಳ್ಳಿ ಮನೆಯ ಒಂದು ಜಗುಲಿಯ ಮೇಲೆ ಎರಡು ಕಂಬಗಳಿಗೆ ಸೇರಿದಂತೆ ಪಂಚೆ ಕಟ್ಟಿ, ಪಂಚೆ ಪರದೆ ಹಿಂದೆ ಪೆಟ್ರೋಮ್ಯಾಕ್ಸ್ ದೀಪ ಇಟ್ಟು ಮನೆ ಮುಂದಿನ ಲೈಟ್ ಗಳನ್ನ ಆಫ್ ಮಾಡಿ ಸಿದ್ಧಗೊಳಿಸುವಷ್ಟರಲ್ಲಿ ಮತ್ತೊಂದು ಜಗುಲಿಯಲ್ಲಿ ಅಣ್ಣನ ಮಕ್ಕಳ ಜೊತೆಗೆ ನಮ್ಮೂರ ಮಕ್ಕಳೆಲ್ಲಾ ಜಮಾಯಿಸಿಬಿಡುತ್ತಿದ್ದರು! ಟಿವಿ, ಮೊಬೈಲ್ ಇನ್ನೂ ಬರದಿದ್ದ ಆ ಕಾಲದಲ್ಲಿ ಗೊಂಬೆಯ ನೆರಳಿನಾಟದಲ್ಲಿ ಅತಿರಂಜಿತ ಕಥೆಗಳನ್ನು ನೋಡುವುದೆಂದರೆ ಮಕ್ಕಳಿಗೆ ಖುಷಿಯೋ ಖುಷಿ. ಅವರ ಆ ಕಿರುಚಾಟ ಅಬ್ಬರಗಳಿಂದ ಒಳಗಿನ ದೇವರ ಗೂಡೆದುರು ಕುಳಿತ ಅಜ್ಜಿಗೆ ಭಜನೆಯೇ ತಬ್ಬಿಬ್ಬಾಗಿ ‘ರಾಮರಾಮ’ ಅಂತಾ ಬಯ್ಯಲು ಈಚೆಗೆ ಬಂದವರು ತಾವೂ ಪ್ರೇಕ್ಷಕರಲ್ಲಿ ಒಬ್ಬರಾಗಿ ಮಕ್ಕಳನ್ನು ದೂರ ಸರಿಸಿ ಕಂಬ ಒರಗಿಕೊಂಡು ನೆಟ್ಟ ಕಣ್ಣುಗಳಿಂದ ಗೊಂಬೆಯಾಟ ನೋಡುತ್ತಾ ಕುಳಿತುಬಿಡುತ್ತಿದ್ದರು! ಬೇಸಿಗೆ ರಜೆಯಲ್ಲೆಲ್ಲಾ ಇದೇ ಸಡಗರ. ಹಗಲೆಲ್ಲಾ ಗಿರುಗಟ್ಟಲೆ, ಗಾಳಿಪಟಗಳ ತಯಾರಿಕೆ ಮತ್ತು ಆಟಗಳಾದರೆ ರಾತ್ರಿ ಗೊಂಬೆಯಾಟ. ದಿನಕ್ಕೊಂದು ಕಥೆ. ದೇವರ ಕಥೆ, ಪ್ರಾಣಿಗಳ ಕಥೆಗಳು ಜೊತೆಜೊತೆಗೆ ಆಶು ಗೀತೆಗಳು… ಸಂಭ್ರಮವೋ ಸಂಭ್ರಮ!
ವಿವಾಹಾ ನಂತರ ನನ್ನ ನೆಲೆಯೇ ಬದಲಾಗಿ ನಮ್ಮೂರು ನಮ್ಮ ತವರೂರಾಗಷ್ಟೇ ಉಳಿಯಿತು. ಆದರೆ ನಮ್ಮದೇ ನಗರದ ನೆಲೆಯಲ್ಲಿ ಹೊರಗೆ-ಒಳಗೆ ದುಡಿಯುವ ಅನಿವಾರ್ಯತೆಯ ಯಾಂತ್ರಿಕತೆಯಲ್ಲಿ ನಮ್ಮ ಮಕ್ಕಳನ್ನು ಆಡಿಸುವುದಿರಲಿ ಅವರೊಂದಿಗೆ ಸ್ವಲ್ಪಕಾಲ ನಿರಾಳವಾಗಿರುವುದೂ ಅಸಾಧ್ಯವೆನಿಸುವಂತಾಯ್ತು! ನಮ್ಮ ಮಕ್ಕಳಿಗೆ ನನ್ನ ಕಲಾ ಸಾಮರ್ಥ್ಯದ ಅರಿವನ್ನು ಮಾಡಲಾಗಲಿಲ್ಲವಲ್ಲಾ ಎಂದು ಪರಿತಪಿಸಿದರೆ ಏನು ತಾನೆ ಪ್ರಯೋಜನ? ನಿವೃತ್ತ್ಯಾನಂದದಲ್ಲಿ ಮುಂಬರುವ ಪೀಳಿಗೆಗೆ ಗೊಂಬೆಯಾಟವನ್ನು ಪ್ರದರ್ಶಿಸಿ ಪ್ರಾಯಶ್ಚಿತ್ತ ಹೊಂದುವ ಆಶಾಭಾವನೆಯಲ್ಲಿದ್ದೇನೆ. ಆದರೆ ಹೈಟೆಕ್ ಯುಗದ ಆ ಮುದ್ದುಗಳು ಸಿದ್ಧವಿರಬೇಕಷ್ಟೆ!
ಇತ್ತೀಚೆಗೆ ‘ಐದು ದಿನಗಳ ಗೊಂಬೆಯಾಟದ ಕಾರ್ಯಾಗಾರವನ್ನು ನಡೆಸಿ ಮಕ್ಕಳು ಮತ್ತು ಪಾಲಕರು ಸೇರಿ ಒಟ್ಟು ಐವತ್ತರಿಂದ ಅರವತ್ತು ಸಂಖ್ಯೆಯ ಗುಂಪು ಗೊಂಬೆಯಾಟದಲ್ಲಿ ಮಾಸ್ಟರಿ ಪಡೆದರು’ ಎಂದು ನಮ್ಮ ಪ್ರಿಯ ಫೇಸ್ಬುಕ್ ನಲ್ಲಿ ನೋಡಿದೆ. ವಂಶಪಾರಂಪರ್ಯವಾಗಿ ಮಾತ್ರ ಮುಂದುವರಿಯುತ್ತಿದ್ದ ಹಾಗೂ ಇತ್ತೀಚೆಗೆ ಅವಸಾನದತ್ತ ಸಾಗುತ್ತಿದ್ದ ಈ ಕಲೆ ಆಸಕ್ತರೆಲ್ಲರ ಪಾಲಾಗಿ ಫಲಿಸುವಂತಾಯ್ತಲ್ಲ ಎಂದು ಖುಷಿಯೆನಿಸಿತು. ಕರ್ನಾಟಕ ಚಿತ್ರಕಲಾ ಪರಿಷತ್ತು ಈ ಕಲೆಯ ಬಗ್ಗೆ ಸಂಶೋಧನೆ ಕೈಗೊಂಡಿದ್ದು, ತೊಗಲು ಬೊಂಬೆಗಳ ಉತ್ತಮ ಸಂಗ್ರಹವನ್ನೇ ಮಾಡಿದೆ ಎನ್ನುವುದು ನಮ್ಮ ಪರಂಪರೆಯ ಪುನರುತ್ಥಾನದ ಪ್ರತೀಕ.
ಈಗ ಯೂಟ್ಯೂಬ್ ನಲ್ಲೂ ಗೊಂಬೆಯಾಟ ನೋಡಬಹುದು. ಆದರೆ ನಮ್ಮ ಬಾಲ್ಯದಲ್ಲಿ ಅರೆಕತ್ತಲಲ್ಲಿ ಕಣ್ಣುಬಾಯಿ ತೆರೆದುಕೊಂಡು ಆಟ ನೋಡುತ್ತಿದ್ದ ಆ ಮಜ ಈಗ ಸಿಗಲು ಸಾಧ್ಯವೇ? ಆದರೂ… ʼಗೊಂಬೆಯಾಟವಯ್ಯಾ ಬ್ರಹ್ಮಾಂಡವೇ ಆ ದೇವನಾಡುವ ಗೊಂಬೆಯಾಟವಯ್ಯಾ…ʼ ಎಂಬಂತೆ ನಾವೇ ಆಡಿಸುವಾತನ ಕೈಚಳಕದಲ್ಲಿನ ಗೊಂಬೆಗಳೆನ್ನುವುದನ್ನು ಮರೆಯುವಂತಿಲ್ಲವಲ್ಲ!




ಹೆಚ್ಚಿನ ಬರಹಗಳಿಗಾಗಿ
ಅಭಿಮುಖ: ಕನ್ನಡ ವಿಮರ್ಶಾ ಕ್ಷೇತ್ರದ ಆಳ-ಅಗಲಗಳ ವಿಸ್ತರಣೆ
ಸ್ನೇಹವೆಂದರೆ…
“ಹಲೋ ಟೀಚರ್” ಬಗ್ಗೆ