- ವರಕವಿ - ಜನವರಿ 31, 2021
- ಚಲನಚಿತ್ರ ಶೀರ್ಷಿಕೆಗಳ ಸಿಂಹಾವಲೋಕನ : ಪುಸ್ತಕ ಪರಿಚಯ - ಡಿಸಂಬರ್ 31, 2020
- ಕೆ ಎಸ್ ನ ಅವರ ದೇವರ ಕಲ್ಪನೆ - ಆಗಸ್ಟ್ 13, 2020
ಚಲನಚಿತ್ರ ಗೀತೆಗಳನ್ನು ಕುರಿತು,ಚಲನಚಿತ್ರ ನಟರನ್ನು ಕುರಿತು ಈವರೆಗೆ ಹಲವಾರು ಸಂಶೋಧಕರು ಪ್ರೌಢಪ್ರಬಂಧ ಸಲ್ಲಿಸಿರುವ ಪೂರ್ವೇತಿಹಾಸ ಇರಬಹುದು.ಆದರೆ ಇದೇ ಮೊದಲಬಾರಿಗೆ ಎಂಬಂತೆ ಸಿನಿಮೋದಮೂರ್ತಿಯವರು ಚಲನಚಿತ್ರಗಳ ಶೀರ್ಷಿಕೆಯನ್ನೂ ಪೌಢಅಧ್ಯಯನಕ್ಕೆ ಎತ್ತಿಕೊಂಡಿರುವುದು ಸ್ವಾಗತಾರ್ಹವಾದ ಹಾಗೂ ಕುತೂಹಲಕರವಾದ ಬೆಳವಣಿಗೆಯಾಗಿದೆ.
ಲೇಖಕರು:ಸಿನಿಮೋದಮೂರ್ತಿ
ಪುಟಗಳು:೩೯೯
ಬೆಲೆ:ರೂ ೪೦೦
ಪ್ರಕಾಶಕರು:ಚಿತ್ರಪ್ರಿಯ
ಚಲನಚಿತ್ರ ಶೀರ್ಷಿಕೆಗಳ ವರ್ಗೀಕರಣ,ಶೀರ್ಷಿಕೆಗಳನ್ನು ಇಡುವಲ್ಲಿ ತಲೆದೋರುವ ಸಮಸ್ಯೆಗಳು,ಚಿತ್ರವೊಂದನ್ನು ಗೆಲ್ಲಿಸುವಲ್ಲಿ ಶೀರ್ಷಿಕೆಗಳ ಪಾತ್ರ,ಮುಂತಾದ ವಿಷಯಗಳನ್ನು ಲೇಖಕರು ತಮ್ಮ ಸವಿಸ್ತಾರವಾದ ಪ್ರಬಂಧದಲ್ಲಿ ಚರ್ಚಿಸಿರುವುದೇ ಅಲ್ಲದೆ ಹಲವಾರು ಹೊಸತನದ ಮಾರ್ಗದರ್ಶಿ ಸಲಹೆ ಸೂಚನೆಯನ್ನೂ ನೀಡಿರುವುದು ಗಮನಾರ್ಹವಾಗಿದೆ.
ಕೆಲವೊಮ್ಮೆ “ಓಹೋ!”,”ಆಹಾ””ಉಶ್ʼ,”ವಾಹ್”ಎನ್ನುವಂತಹ ಉದ್ಗಾರಗಳೇ ಚಲನಚಿತ್ರಗಳ ಶೀರ್ಷಿಕೆಗಳಾಗಿ ಪರಿವರ್ತನೆಯಾಗಿರುವುದನ್ನು ಸಂಶೋಧಕರು ಪ್ರಸ್ತಾಪಿಸಿದ್ದಾರೆ.ಜತೆಗೆ ಕನ್ನಡ, ಇಂಗ್ಲಿಷ್ ವರ್ಣಮಾಲೆಯ ಅ,A ಅಂಥ ಅಕ್ಷರಗಳು,?, ! ವ್ಯಾಕರಣ ಚಿಹ್ನೆಗಳೇ ಅಲ್ಲದೆ ×,÷ +, ಅಂಥ ಗಣಿತ ಚಿಹ್ನೆಗಳೂ ಶೀರ್ಷಿಕೆಗಳಾಗಿ ಈ ನಿಟ್ಟಿನ ಕೊರತೆಯನ್ನು ನಿವಾರಿಸುವಲ್ಲಿ ಇಂಥವು ಎಷ್ಟು ಮಹತ್ವದ್ದು ಎಂಬುದನ್ನೂ ವಿವರಿಸಿದ್ದಾರೆ.
ಮತ್ತೆ ಹಲವು ಸಂದರ್ಭಗಳಲ್ಲಿ ಹಳೆಯ ಚಲನಚಿತ್ರಗಳೇ ಹೊಸ ಚಿತ್ರಗಳಿಗೆ ಶೀರ್ಷಿಕೆಯಾಗಿ ಪುನರುಕ್ತಿಯಾಗಿರುವುದನ್ನು ಲೇಖಕರು “ನಾಗರಹಾವು”,”ಜೇನುಗೂಡು”,”ಬೇವು ಬೆಲ್ಲ” ಮುಂತಾದುವನ್ನು ಉದಾಹರಿಸಿ, ಪ್ರೇಕ್ಷಕರಲ್ಲಿ ಅಂಥವು ಎಬ್ಬಿಸಿರುವ ಗೊಂದಲವನ್ನು ಎಳೆಎಳೆಯಾಗಿ ಚಿಂತಿಸಿ ಸಂಬಂಧಪಟ್ಟವರ ಮನಸೆಳೆಯುವ ಯತ್ನ ಮಾಡಿದ್ದಾರೆ.
ಹಲವಾರು ಹಳೆಯ ಚಿತ್ರಗೀತೆಗಳ ಸಾಲುಗಳೇ ಹೊಸ ಚಿತ್ರಗಳ ಶೀರ್ಷಿಕೆಯಾಗಿರುವುದನ್ನೂ ಲೇಖಕರು ಪಟ್ಟಿ ಮಾಡದೆ ಬಿಟ್ಟಿಲ್ಲ. “ಬಾಳೊಂದು ಭಾವಗೀತೆ,”ಬಾಳೊಂದು ನಂದನ”,”ಹಾವಿನ ದ್ವೇಷ””ಕನಸಲೂ ನೀನೆ ಮನಸಲೂ ನೀನೆ” ಇನ್ನೂ ಹಲವಾರು ಚಿತ್ರಗಳ ಉದಾಹರಣೆ ನೀಡಿರುವ ಲೇಖಕರು,ಶೀರ್ಷಿಕೆಗಳ ವೈವಿಧ್ಯಕ್ಕೆ ಕೊಡುಗೆ ನೀಡಿರುವ ಇಂಥ ಉಪಾಯಕ್ಕೆ ತಮ್ಮ ಸಂತಸ,ಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡದ ಗಾದೆಗಳೂ ಅಲ್ಪ ಸ್ವಲ್ಪ ಬದಲಾವಣೆಯೊಡನೆ ಚಿತ್ರ ಶೀರ್ಷಿಕೆಗಳಾಗಿರುವ ಪ್ರಸಂಗಗಳನ್ನೂ ಲೇಖಕರು ತಮ್ಮ ಸಂಶೋಧನೆಯ ಭೂತಗನ್ನಡಿಯಲ್ಲಿ ನೋಡಿರುವುದು ಸ್ವಾರಸ್ಯಕರವಾಗಿದೆ.”ಉಂಡೂ ಹೋದ ಕೊಂಡೂ ಹೋದ”
ಎಂಬಂಥ ಗಾದೆಯು “ಪುಗಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ” ಎಂಬ ಶೀರ್ಷಿಕೆಗೆ ಪ್ರೇರಣೆಯಾಗಿರುವುದನ್ನು ಚರ್ಚಿಸಿದ್ದಾರೆ.
” ಅಮ್ಮ”,”ತಾಯಿ” ಪದ ಹೊಂದಿರುವ ಶೀರ್ಷಿಕೆಯ ೧೨೧ ಚಿತ್ರಗಳಾದರೂ ಇವೆಯೆಂದು ಲೇಖಕರು ಸಂಶೋಧಿಸಿದ್ದಾರೆ. ಹೂವು,ತರಕಾರಿ,ಹಣ್ಣು ಎಂಬ ನವಿರು ಭಾವದ ಶೀರ್ಷಿಕೆಗಳ ಜತೆ ಪ್ರತಿಜ್ಞೆ,ಕಲಹ,ಶಪಥ,ಸಮರಗಳಂಥ ರೌದ್ರಾವೇಶದ ಪದಗಳೂ ಶೀರ್ಷಿಕೆಗಳಾಗಿರುವುದನ್ನು ತಮ್ಮ ಶ್ರಮಪೂರ್ಣ ಅಧ್ಯಯನದಿಂದ ತಿಳಿಸಿಕೊಟ್ಟಿದ್ದಾರೆ.
ಅನ್ಯದೇಸಿ ಪದ,ಪದಪುಂಜ ಅಷ್ಟೇಕೆ ವಾಕ್ಯಗಳೂ ಸಹ ಸಿನಿಮಾಶೀರ್ಷಿಕೆಗಳಿಗೆ ಆಹಾರವಾಗಿರುವುದನ್ನು ಕೃತಿಕಾರರು ಸೋದಾಹರಣಪೂರ್ವಕವಾಗಿ ವಿಶ್ಲೇಷಿಸಿದ್ದಾರೆ. ಕೇರಾಫ್ ಪುಟ್ ಪಾತ್,ಮರ್ಡರ್,ಜಾನಿ ಮೇರಾ ನಾಮ್ (ಪ್ರೀತಿ ಮೇರಾ ಕಾಮ್ ಉಪಶೀರ್ಷಿಕೆ ಸಮೇತ),ಸಡನ್ ಡೆತ್,ಉಡೀಸ್,ಮಟಾಶ್( ಇವೆರಡು ಯಾವ ಭಾಷೆಯ ಪದ ಎಂದು ಇನ್ನೂ ಸಂಶೋಧನೆಯಾಗಬೇಕಿದೆ) ಇವುಗಳ ಬಗ್ಗೆ ಒಂದು ದೀರ್ಘ ಅಧ್ಯಾಯವೇ ಮೀಸಲಾಗಿದೆ.
ವ್ರತಕಥೆಗಳ ಅಧ್ಯಾಯಗಳಂತೆ ಚಲನಚಿತ್ರದ ಭಾಗ ೧,ಭಾಗ ೨ ಎಂಬ ಶೀರ್ಷಿಕೆ ಹೊಂದಿರುವ ಪ್ರವೃತ್ತಿಯ ಬಗ್ಗೆಯೂ ಸಂಶೋಧಕರು ತಮ್ಮ ಕ್ಷಕಿರಣ ಬೀರಿದ್ದಾರೆ.ಈ ತಂತ್ರದ ಉಪಯುಕ್ತತೆ ಎಷ್ಟು? ಪ್ರೇಕ್ಷಕರ ಕುತೂಹಲ ಹೆಚ್ಚಿಸಲು ಇದರಿಂದ ಸಾಧ್ಯವಾಗಿದೆಯೇ? ಎಂಬ ವಿಷಯಗಳನ್ನೂ ವಿಶ್ಲೇಷಣೆಯ ಒರೆಗಲ್ಲಿಗೆ ಈ ಕೃತಿಯಲ್ಲಿ ಒಡ್ಡಲಾಗಿದೆ.
ಚಲನಚಿತ್ರ ಶೀರ್ಷಿಕೆಗಳನ್ನು ಕುರಿತು ಮಾಹಿತಿಗಳ ಅಕ್ಷಯಭಂಡಾರವೇ ಈ ಕೃತಿಯಲ್ಲಿದೆ.೭೭ ಅನುಚ್ಛೇದಗಳ ಮೂಲಕ ತಮ್ಮ ವಾದಕ್ಕೆ ಸಮರ್ಥನೆ ನೀಡಿದ್ದಾರೆ ಸಂಶೋಧಕರು.
ಒಟ್ಟಾರೆ ಎಲ್ಲ ಸಿನಿಮಾಲೋಲರಿಗೆ ಹಾಗೂ ಸಿನಿಮಾಶೀರ್ಷಿಕೆ ಹೊಳೆಯದೆ ಹಪಹಪಿಸುವ ಚಿತ್ರನಿರ್ಮಾಪಕರಿಗೆ ದಾರಿದೀಪವಾಗಬಲ್ಲ ಇಂಥ ಸಂಶೋಧನಾ ಕೃತಿ ರಚಿಸಿದ ಲೇಖಕರು ಅಭಿನಂದನೆಗೆ ಅರ್ಹರು.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಹಾಲಾಡಿಯಲ್ಲಿ ಹಾರುವ ಓತಿ